ನಾ ನಂಬಿದೆ! —
ಹೇಳಿದರು ಅವರೆಲ್ಲ
ನೀನು ಬಿರಿ ದೊರೆಯೆಂದು.
ನಾ ನಂಬಿದೆ. —

ಮಿಂಚಿಹುದು ಕಣ್ಣಲ್ಲಿ,
ಗುಡುಗಿಹುದು ದನಿಯಲ್ಲಿ,
ಕಾರ್ಮುಗಿಲು ಮೈಯಲ್ಲಿ;
ನೀ ರುದ್ರನೆಂದು!
ಭಯ ಭಕ್ತಿ ಬೇಕೆಂದು!
ಕೈ ಮುಗಿಯಬೇಕೆಂದು;
ನೀ ಬಂದ ಕಾಲದಲಿ
ಕಾಲ್ಗೆರಗು ಎಂದು.

ನಾ ಕಾದು ನಿಂತಿದ್ದೆ,
ಎದೆ ನಡುಗಿ ಹೆದರಿದ್ದೆ,
ಏನಂತೊ ಎಂದು;
ನೀ ಬಂದೆ ದೂರದಲಿ
ಸುಂದರಾಕಾರದಲಿ;
ಶಾರದಾಕಾಶದಲಿ
ಬೆಳ್ಮುಗಿಲ ವೇಶದಲ್ಲಿ.
ಚಂದ್ರಿಕೆಯ ಸೌಂದರ್ಯ,
ಚೈತ್ರ ಮಾಧುರ್ಯ!
ಮಿಂಚಿಲ್ಲ, ಗುಡುಗಿಲ್ಲ,
ಕಾರ್ಮುಗಿಲು ಇಲ್ಲ,
ನೋಡಿದರೆ ದೊರೆಯಲ್ಲ!
ನೀನೆನ್ನ ನಲ್ಲ!
ಕೈಮುಗಿಯಲಿಲ್ಲ ನಾ,
ಕಾಲ್ಗೆರಗಲಿಲ್ಲ ನಾ;
ಬಿಗಿಯಪ್ಪಿ ಮುತ್ತಿಟ್ಟು
ನಾ ನಂಬಿದೆ!
ಮೈ ಮರೆತು ಮುತ್ತಿಟ್ಟು
ನಾ ನಂಬಿದೆ! -an�ag@( �S;mso-fareast-language:EN-US;mso-bidi-language:KN’>!