ನನ್ನಾಸೆ ನಿನ್ನಿಚ್ಛೆಯಪ್ಪನ್ನೆಗಂ
ಸಲ್ಲದಿರಲಿ;
ನನ್ನ ಸಾಹಸ ನಿನ್ನದಪ್ಪನ್ನೆಗಂ
ಗೆಲ್ಲದಿರಲಿ.
ಗೆಲ್ ಅಹಂಕಾರವನೆ ಬಲಿವನ್ನೆಗಂ
ಸೋಲೆ ಬರಲಿ;
ಸುಖ ನಿನ್ನ ಮರೆವಂತೆ ಮಾಳ್ಪನ್ನೆಗಂ
ದುಃಖವಿರಲಿ.
ನನ್ನಿಷ್ಟದಿಷ್ಟ ನೀನಪ್ಪನ್ನೆಗಂ
ಕಷ್ಟಬರಲಿ;
ಲಾಭ ಗುರುಲಾಭ ನೀನಪ್ಪನ್ನೆಗಂ
ನಷ್ಟ ಬರಲಿ!