ನಿನ್ನ ಪದಕಮಲದಲಿ ಮನೆಮಾಡಿರುವ ನನಗೆ
ಆ ಸ್ಥಾನ ಈ ಸ್ಥಾನ ಎಲ್ಲವಾಸ್ಥಾನ!
ಅಲ್ಲಲ್ಲಿ ಎನಲೇನು? ನೀನೆ ಅಡಿಯಿಡುವಲ್ಲಿ
ದಿವ್ಯ ಪದವಿಗಳಲ್ತೆ ಮಾನಾವಮಾನ?

ಬೆಟ್ಟಗಳನೇರುವೆಯೊ? ಕಣಿಗಳನಿಳಿಯುವೆಯೊ?
ಕೆಸರುಸುಬುಗಳೊಳಾಡಿ ವಿಹರಿಪೆಯೊ ನೀನು?
ಇಲ್ಲಿ ಸಂಚರಿಸಲ್ಲಿ ಚರಿಸದಿರೆನಲು ನನಗೆ
ನಿನ್ನ ಲೀಲೆಗೆ ಗೆರೆಯನೆಳೆವ ಹಕ್ಕೇನು?

ಎಲ್ಲಿ ನೀ ಪದವಿಡುವೆ ಅಲ್ಲೆ ಉತ್ತಮ ಪದವಿ;
ನಿನ್ನ ಪದವಲ್ಲದಾ ಪದವಿಯೊ ಹೀನ.
ನಿನ್ನಡಿಯ ಪುಡಿಯ ಬಡತನವೆ ಕಡವರ ಕಣಾ:
ನಿನ್ನಡಿಗೆ ದೂರವಿರೆ ಧನಿಕನೊ ದೀನ?