ಬುದ್ಧಿ ಮನ ಚಿತ್ತಹಂಕಾರ ನಾನಲ್ಲ;
ಕಣ್ಣು ಕಿವಿ ಮೂಗಲ್ಲ, ನಾಲಗೆಯಮಲ್ಲ;
ನಭವಲ್ಲ, ಧರೆಯಲ್ಲ, ಶಿಖಿವಾಯುವಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ಪಂಚವಾಯುಗಳಲ್ಲ, ಪ್ರಾಣ ನಾನಲ್ಲ;
ಸಪ್ತಧಾತುಗಳಲ್ಲ, ಕೋಶವೈದಲ್ಲ;
ಕರ್ಮಾಂಗ ವಿಷಯೇಂದ್ರಿಯಂಗಳಾನಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ದ್ವೇಷರಾಗಗಳಿಲ್ಲ, ಲೋಭಮೆನಗಿಲ್ಲ;
ಮೋಹ ಮದ ಮಾತ್ಸರ್ಯ ಭಾವಮೆನಗಿಲ್ಲ;
ಧರ್ಮಾರ್ಥ ಕಾಮಾದಿ ಮೋಕ್ಷ ನಾನಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ಪಾಪಪುಣ್ಯಗಳಲ್ಲ, ಸುಖದುಃಖವಲ್ಲ;
ಮಂತ್ರತೀರ್ಥಗಳಲ್ಲ, ವೇದ ಮುಖವಲ್ಲ;
ಭೋಜ್ಯ ಭೋಜನವಲ್ಲ, ಭೋಕ್ತ ನಾನಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ಜಾತಿ ಭೇದಗಳಿಲ್ಲ, ಮೃತ್ಯು ಭಯವಿಲ್ಲ;
ಜನ್ಮ ಮೃತ್ಯುಗಳಿಲ್ಲ, ತಂದೆತಾಯಿಲ್ಲ;
ಬಂಧು ಸುಖರಿಲ್ಲ, ಗುರುಶಿಷ್ಯರಾರಿಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ನಿರ್ವಿಕಲ್ಪನು ನಾ ನಿರಾಕಾರ ನಾನು!
ಸರ್ವೇಂದ್ರಿಯಾತೀತ ಸರ್ವತ್ರ ನಾನು!
ಕಾಲದೇಶಾತೀತ ವಿಶ್ವವಿಭು ನಾನು!
ಸಚ್ಚಿದಾನಂದಾತ್ಮ ಶಿವ ನಾನು ನಾನು!