ಮೇರೆಯೆ ಇರದಾಕಾಶ ಸಮುದ್ರದಿ
ಸೂರ್ಯನ ಜ್ಯೋತಿರ್ಮೂರ್ತಿಯ ಸುತ್ತಿ
ಶಾಶ್ವತ ಮಂಗಳದಾರತಿಯೆತ್ತಿ
ತೇಲುತ್ತಿದೆ ಭೂಮಿಯ ಹಣತೆ!
ನರದೇಹವೆ ಆ ಹಣತೆಗೆ ಬತ್ತಿ;
ಆತ್ಮ ಜ್ವಾಲೆಯ ದಳ್ಳುರಿ ಹೊತ್ತಿ
ಭವ್ಯಾಕಾರದ ಜಿಹ್ವೆಯನೆತ್ತಿ
ನಾಕದ ನೀಲವ ನೆಕ್ಕುತಿದೆ!
ಮಿಥ್ಯೆಯ ದಹಿಸುತ ಮುಕ್ಕುತಿದೆ!
ಧರ್ಮದ ಕರ್ಮದ ಪ್ರೀತಿಯ ನೀತಿಯ
ಕಾವ್ಯದ ಗಾನದ ನಾನಾ ರೀತಿಯ
ತೈಲಗಳನುದಿನ ಬೀಳುತಿವೆ!
ಭೂಮಿಯ ಹಣತೆಗೆ ಬೀಳುತಿವೆ!
ದೇಹದ ಬತ್ತಿಯಿನಾತ್ಮ ಜ್ವಾಲೆಯ
ರೂಪದೊಳನುದಿನ ಬಾಳುತಿವೆ!
ಸ್ವರ್ಗದ್ವಾರಕೆ ಏಳುತಿವೆ!