ಶ್ರೀರಾಮಕೃಷ್ಣ ಪರಮಹಂಸರ ಅಂತರಂಗ ಶಿಷ್ಯರೂ ದೀಕ್ಷಾಗುರುಗಳೂ ಆದ ಶ್ರೀಮತ್ ಸ್ವಾಮಿ ಶಿವಾನಂದರ ಮಹಾಸಮಾಧಿಯ ವಾರ್ತೆಯನ್ನು ಕೇಳಿ ಬರೆದದ್ದು.

ಮತ್ತೊಂದು ನಕ್ಷತ್ರ ಹುಡಿಯಾಯ್ತು ಭಾರತ ವಿ —
ಯತ್ತಳದಿ! ಜೀವನ ಮಲಯನದಿ ಕಂಪು ತಮ್ —
ಪಿತ್ತ ವಂದನದ ತರು ಮಿತುಗಿಚ್ಚಿಗೆ ಸಿಲುಕಿ
ಬೆಂದುರಿದು ಭಸ್ಮವಾಯ್ತು!
ಬಿತ್ತರದ ನವಯುಗದ ಧರ್ಮದ ಹಿಮಾಚಲದ
ನೆತ್ತಿಯಿಂದುದ್ಭವಿಸಿದಾ ಸ್ರೋತಗಳಲಿಂದು
ಮತ್ತೊಂದು ಹೆಗ್ಗಡಲಿಗಿಳಿದು ಕಣ್ಮರೆಯಾಯ್ತು
ಬಿಂದು ತಾಂ ಸಿಂಧುವಾಯ್ತು!

ಚೈತ್ರದಲ್ಲಿ ಚಿಗುರಿದೆಲೆ ಮಾಗಿಯಲಿ ಹಣ್ಣಾಗಿ
ಧಾತ್ರಿಗುರುಳುವ ತೆರದಿ, ಹೇ ಗುರುವೆ, ಮಾಯೆಯೀ
ಕ್ಷೇತ್ರದಿಂದುರುಳಿ ಕಾಲಾತೀತನಾಗಿ ನೀಂ
ಮರಣದಲಿ ಮುಕ್ತನಾದೆ.
ಹಕ್ಕಿಮರಿ ಚೆಲುವಾದ ಮೊಟ್ಟೆವನೆಯಂ ತನ್ನ
ಕೊಕ್ಕಿನಿಂ ಬಿರಿಯುತಾನಂದಿಂ ಬಾಂದಳಕೆ
ರೆಕ್ಕೆಗೆದರ್ವಂತೆ ನೀಂ ದೇಹನೀಡವನುಳಿದು
ಪರಮಾತ್ಮ ಲೀನನಾದೆ.

ಬದುಕಿ ದೂರದೊಳಿದ್ದೆ, ಸತ್ತು ಹತ್ತಿರವಾದೆ;
ಎದೆಯ ಬರುಗನಸಿಂದು ಅನುಭವಾಮೃತಮಾಯ್ತು.
ಇದುವರೆಗಿನಣುರೂಪಮಿಂದು ತಾಂ ವಿಭುವಾಯ್ತು
ಋತ ಶಿವಾನಂದಮಾಗಿ.
ನಂಬಿಹೆನು ಆತ್ಮವಚ್ಯುತವೆಂದು; ಅದರಿಂದೆ
ಕಂಬನಿಯ ಕರೆಯುವುದೆ ನಾಸ್ತಿಕತೆ! ನಿನ್ನಾತ್ಮ
ತುಂಬಿರುವುದಾಬ್ರಹ್ಮಸ್ತಂಬ ಪರ್ಯಂತಮಂ
ಸರ್ವಸ್ವತಂತ್ರಮಾಗಿ.

ದ್ವಂದ್ವಗಳ ಗೊಂದಣದಿ ಸಂಚರಿಸುವಲ್ಪಮತಿ
ಬಂಧನಾತೀತವಹ ಭವದಾಚೆಯಿರುವ ನಿ-
ರ್ದ್ವಂದ್ವದದ್ವೈತದಾ ಸಚ್ಚಿದಾನಂದಮಂ
ಇಲ್ಲಿ ತಾಂ ತಿಳಿವುದೆಂತು?
ಹುಟ್ಟದಿದೆ. ಸಾಯದಿದೆ. ಮುಟ್ಟಿಯೂ ಮುಟ್ಟದಿದೆ.
ಗುಟ್ಟು ಗುಟ್ಟೆಂಬ ನುಡಿ ಬರಿ ಮಿದುಳುಮಲ್ಲರಾ
ಪಟ್ಟಲ್ಲದಿನ್ನೇನು? ಏನು ಏನಾಗಿಹುದೊ
ಅಲ್ಲಿ? ನಾವರಿವುದೆಂತು?

ಜೀವಶಕ್ತಿಯು ತನ್ನ ಯಾತ್ರೆಯಲ್ಲಿತ್ತೀಚೆ —
ಗೀ ವಿಚಾರದ ಬುದ್ಧಿಯನ್ನೆಮಗೆ ನೀಡಿಹುದು
ಜೀವಪ್ರವಾಹ ಪೂರ್ಣವನರಿಯಲೆಂದಲ್ತು,
ಜೀವನದ ಉಪಯೋಗಕೆ.
ಖಂಡನಾಸಾಧ್ಯವಹ ಕಾಲಪ್ರವಾಹಮಂ
ಖಂಡಿಸುತೆ, ಚಲನೆಯಂ ಕೊಂದು ನಿಶ್ಚಲಗೈದು,
ಕಂಡೆನೆನೆ ಬುದ್ಧಿ, ಸತ್ಯದ ಶವವನುಂಡಂತೆ!
ಮಾರ್ಗಮಲ್ತದು ಯೋಗಕೆ.

ಕಾರ್ಯ ಕಾರಣಯುಕ್ತಿಯಿಂದಲ್ತು ಆತ್ಮವಂ —
ತರ್ಯಾಮಿಯವಿನಾಶಿಯಮೃತವೆಂದರಿತಿಹುದು:
ಸೂರ್ಯ ರಶ್ಮಿಗೆ ತರ್ಕಮಲ್ತು ಕಾಣುವ ಕಣ್ಣೆ
ಖಂಡನಾತೀತ ಸಾಕ್ಷಿ.
ಬುದ್ಧಿಯ ಸಹಾಯದಿಂ ತರ್ಕದಿಂ ಯುಕ್ತಿ ತಾಂ
ಸಿದ್ಧಾಂತಗೈದುದಂ ಮುರಿವುದೈ ಪ್ರತಿಯುಕ್ತಿ.
ಸಿದ್ಧಿಯಾಧಾರದಪರೋಕ್ಷಾನುಭೂತಿಯದು
ಅನಿಮೇಷ ಯೌಗಿಕಾಕ್ಷಿ.

ಕೊನೆಗೊಳ್ಳುವುದು ಯುಕ್ತಿಯಜ್ಞೇಯವಾದದಲಿ:
ಮನವದೆನ್ನೊಂದಂಶವದು ಪೂರ್ಣತೆಯನೆಂತು
ಮನಗಾಂಬುದದರಿಂದೆ ಮತಿಗಲ್ತು ಸಾಧನೆಗೆ
ಸಂವೇದ್ಯವಾತ್ಮ ಸಿದ್ಧಿ.

ತಿಳಿದವಗೆ ತಿಳಿಯದದು, ತಿಳಿಯದಗೆ ತಿಳಿದುಹುದು,
ತಿಳಿದರೂ ಚೆನ್ನಾಗಿ ತಿಳಿದಿಲ್ಲ, ಆದರೂ
ತಿಳಿದಿಲ್ಲವೆಂದಲ್ಲ — ಎಂದುಪನಿಷತ್ತಿನಲಿ
ಸೋಲನೊಪ್ಪಿಹುದು ಬುದ್ಧಿ!

ಎರಡೆನಲು ಮತಿಯೆದ್ದು ‘ಸುಳ್ಳು’ ಎಂದೊರಲುವುದು;
ಇರುವುದೊಂದೆನೆ ‘ಟೊಳ್ಳು’ ಎಂದೆದೆಯು ನರಳುವುದು.
ಅರಿವು ಇರುವುಗಳೆರಡು ದಡಗಳಂ ಕೊಚ್ಚುತ್ತೆ
ಜೀವನದಿ ಹರಿಯುತಿಹುದು.
ಏಕವಾಗಿರೆ ನನ್ನಿಯದು ನನ್ನ ಮತಿಯರಿತ
ಏಕತೆಯಮಲ್ಲ; ಬಹುವಾಗಿರಲು ನಾನರಿತ —
ನೇಕತೆಯುಮಲ್ಲ; ತರ್ಕವ ಮೀರಿದಾ ತತ್ತ್ವ
ತಾನೆ ತಾನಾಗಿ ‘ಇಹುದು’!

‘ತತ್ತ್ವಮಸಿ!’ ‘ತತ್ತ್ವಮಸಿ’ ನೀನಿಂದು, ಓ ಗುರುವೆ!
ತತ್ತ್ವಮೆಂತೋ ಏನೊ? ಅಂತು ನೀಂ ‘ತತ್ತ್ವಮಸಿ!’
‘ತತ್ತ್ವಮಸಿ’ ನಾನಾಗುವನ್ನೆಗಂ ನಿನ್ನಡಿಗೆ
‘ತತ್ತ್ವಮಸಿ’ ಎಂದೆರಗುವೆ.
ಭೂಮಿಯಲಿ ಚಂದ್ರನಲಿ ಸೂರ್ಯತಾರೆಗಳಲ್ಲಿ
ವ್ಯೋಮದಲಿ ಕಾಲದೇಶಂಗಳಲಿ ಸರ್ವದಲಿ
ಭೂಮಾತ್ಯ ನೀನಾಗಿ ಬ್ರಹ್ಮದೊಳಗೊಂದಾಗಿ
ದಿವ್ಯಕೃಪೆ ಬೀರುತಿರುವೆ!

ದೇವರವತಾರವೆ‌ತ್ತುವನೆಂದು ಕೆಲಮಂದಿ;
ಭಾವಕ್ಕೆ ನಿಲುಕದ ನಿರಾಕಾರನವನೆಂತು
ಸಾವ ಹುಟ್ಟುವ ಭುವನ ಸಂಸಾರಮಾಯೆಯಲಿ
ಬೀಳುವನು? — ಎಂದು ಕೆಲವರು.
ಸರ್ವಶಕ್ತನು ಅವನು ಎಂದೆನಲು,ರೂಪ ತಳೆ —
ದುರ್ವಿಗೈತರುವುದೊಂದೇನು ವೈಚಿತ್ರ್ಯವೇಂ?
ಸರ್ವಶಕ್ತಿಗೆ ಹೊರತೆ ರೂಪಧಾರಣ ಶಕ್ತಿ?
ಕುಂದೆಲ್ಲಿ? — ಎಂದಿತರರು.

ಎಂತಾದರಿರಲಿ ದಿಟ! ಮಾನವರು ನಮಗೆ ನ —
ಮ್ಮಂತೆ ಹರಿ: ದೇವತ್ವವಿಹ ನರಂ ಪ್ರತಿಮೆ ತಾಂ
ಚಿಂತೆಯಂ ಮಿರಿಹ ನಿರಾಕೃತಿಗೆ! ಇನ್ನೆಲಿ
ತೋರೀಶ್ವರಾದರ್ಶವು?
ಅದರಿಂದ ಮಾನವನು ಮಾನವನ ಪೂಜೆಯಲಿ
ಮೊದಲಿಂದೆ ತೊಡಗಿಹನು. ತಪ್ಪಿಲ್ಲವದರೊಳಗೆ.
ಅದು ಪಥವೆ ಹೊರತು ಗತಿಯಿಲ್ಲ. ಯುಕ್ತಿಯೊಳೇನು?
ಭಕ್ತಿಯಲಿದೆ ಹರ್ಷವು

ಮೀರ ಬಲ್ಲವರಾರು ಮಾಯೆ ಬೀಸಿಹ ಬಲೆಯ?
ಮೀರಿದಾತನೆ ನಮಗೆ ದೇವಗುರುವಾದಪನು!
ಮೀರದಿಹ ತಾರ್ಕಿಕನೆ, ನರಪೂಜೆಯೇನಯ್ಯ
ದೇವತ್ವದರಾಧನೆ?
‘ಹುಟ್ಟು, ಹುಟ್ಟಿಸು, ಸಾಯು!’ ಪ್ರಕೃತಿಯಿ ಆಣತಿಗೆ
ಸೃಷ್ಟಿ ತಲೆಬಾಗುತಿದೆ ಕಾಮಕ್ಕೆ ಶರಣಾಗಿ.
ಕಟ್ಟಿ ಸೊಂಟವನದನು ಮೂದಲಿಸಿ ಗೆಲ್ಲುವುದೆ
ಭೀಷಣ ತಪಸ್ಸಾಧನೆ!

ಮುಕ್ತಾತ್ಮ, ಅಂತಹ ತಪಶ್ಯಕ್ತಿ ನಿನ್ನದೈ!
ಯುಕ್ತಿಯೆಂಬುದು ಬರಿಯ ಪಾಕಶಾಸ್ತ್ರದ ಶಿಕ್ಷೆ;
ಭಕ್ತಿಯಾದರೂ ಭಕ್ಷ್ಯ! ಶಿಕ್ಷಣಂ ಭಕ್ಷಣಮೆ?
ಅಧ್ಯಯನ ಸಿದ್ಧಿಯಲ್ಲ?
ಓದಿದರೆ ಸಾಲದೈ, ಎಲ್ವೊ ಮಾತಿನಮಲ್ಲ,
ಸಾಧಂಗೈಯ ಬೇಕಯ್ಯ! ಹೆಂಡದ ಹೆಸರು
ಮಾದಕವೆ ನೂರಾರು ಮಡಿಹೇಳ್ದಡಂ? ಅಂತೆ
ಬರಿಯೋದು ಸಿದ್ಧಿಯಲ್ಲ!

ಧರ್ಮ ಪ್ರಪಂಚದಲಿ ನಾವು ಶಿಶುಗಳು ಕಣಾ!
ಮರ್ಮವನ್ನರಿತ ಗುರುಗಳಿಗೆ ಹಸುಳೆಗಳಯ್ಯ!
ಚರ್ಮಕಾರಗೆ ಸತ್ವ ಪ್ರಾಣಿಯಾತ್ಮದ ಗುಟ್ಟು
ತಿಳಿಯುವುದೆ ಹದಹಾಕಲು?
ಈ ಜಗತ್ತೊಂದದ್ಭುತ ರಹಸ್ಯಮೆಂತೆನಲು
ಈಜುವವನಿಗೆ ಹೊಳೆಯ ತಳದರಿವಿನಂದದಲಿ!
ಈಜಯ್ಯ ಸದ್ಯಕ್ಕೆ. ಬಲ್ಲವರನೋಲೈಸಿ
ತಿಳಿ ಕಾಲುಕೈ ಹಾಕಲು

ಹಾಗಾದರಜ್ಞಾನವೇ ನಮ್ಮ ಸುಜ್ಞಾನ —
ವಾಗುವುದೆ? ಕಾವ್ಯ ಕಲೆ ವಿಜ್ಞಾನತತ್ತ್ವಗಳು
ಭೋಗಗಳೆ? ವ್ಯರ್ಥ ಮಿಥ್ಯೆಗಳೇನು? ಅಲ್ತಲ್ತು;
ಎಲ್ಲ ಸೋಪಾನಶ್ರೇಣಿ!
ಬಂದಿರುವುವೆಲ್ಲ ಕದಿರುಗಳೊಂದೆ ರವಿಯಿಂದೆ;
ವಂದ್ಯವೊಂದೊಂದು ಛವಿ! ಎದೆಯ ಗವಿಗೊಮ್ಮೊಮ್ಮೆ
ಸುಂದರ ಮರೀಚಿಗಳಳೊಂದು ಬರೆ ‘ದರ್ಶನ’ಕೆ
ನಲಿಯುವುದು ಕವಿಯ ವಾಣಿ!

ಎಂತೊ ಏನೋ ಅಂತು ಪರಿಹಾರವಾಗುವುವು
ಚಿಂತೆ ತಂದೊಡ್ಡಿರುವ ಅಗಣಿತ ಸಮಸ್ಯೆಗಳು
ಅಂತವಾದಿಗಳಿಲ್ಲದತಿಮೃತ್ಯು ಲೋಕದಲಿ
ಕಲ್ಪನಾತೀತವಾಗಿ!
ಅನ್ನೆಗಂ ತೊಡಗುವೆನು ಧರ್ಮದಲಿ ಕರ್ಮದಲಿ
ನನ್ನಿಯೊಲ್ಮೆಗಳಲ್ಲಿ ಪುಣ್ಯಸೌಂದರ್ಯದಲಿ
ನನ್ನಂತೆ ಕಲೆಯನು ಉಪಾಸಿಸುವರೊಡಗೂಡಿ
ಕಲ್ಪನಾಧೀನನಾಗಿ!

ನೀಡಯ್ಯ, ಓ ಗುರುವೆ, ಋಜು ದರ್ಶನವನೆನಗೆ;
ಮೂಢತೆಯ ಮುರಿವ ಸದ್ಬುದ್ಧಿಯಂ ಧೈರ್ಯಮಂ;
ಗೂಢ ಚೈತನ್ಯಮಂ ಸವಿಯೆ ರಸದೃಷ್ಟಿಯಂ;
ಯುಕ್ತಿಯಂ ವ್ಯವಹಾರಕೆ.

ಹೃದಯ ದೌರ್ಬಲ್ಯಮಂ ಪರಿಹರಿಸಿ, ಯೋಗಮಂ
ಮಧುರ ಸಾಧನೆಗೈವ ಧೀರ ವೈರಾಗ್ಯಮಂ,
ಸುಧೆವೆರಸಿ ನೀಡಯ್ಯ ಮೃತ್ಯುಮಾಧುರ್ಯಮಂ,
ಮುಕ್ತಿಯಂ ಪರಮಾರ್ಥಕೆ!

ಏಳೇಳು, ದಿನಕರನೆ, ಪೂರ್ವದಿಗ್ದೀರ್ಘೀಕಾ
ನೀಲ ಫಾಲದಿ ದ್ವಾಕೋಕನದವಳ್ವಂತೆ,
ಕಾಳರಾತ್ರಿಗಳುರಿದು ಚಿರದಿನಂ ಬರುವಂತೆ,
ಸೌಂದರ್ಯವುಕ್ಕುವಂತೆ,
ವಿಕಸಿತ ವಸಂತದಲಿ ವನರಾಜಿ ನಲಿವಂತೆ,
ಶುಕಪಿಕ ವಿಹಂಗಮಗಳುಲಿಹಕ್ಕೆ ಕಡಲು ತಿರೆ
ತಕ್ಕತೈಯ ಕುಣಿವಂತೆ, ಜೀವನ ರಥೋತ್ಸವಂ
ಪೆರ್ಮೆಯಿಂ ಪೆರ್ಚುವಂತೆ!