ನಿನ್ನ ಪಾದಪೂಜೆಗೆಂದು
ಹೂವುಗಳನು ತಿರಿದುತಂದು
ಹಾದಿ ಬಿಳಿ ಬಿಸಿಲಿನಲಿ,
ಓ ಮಧುರ ಚಿನ್ಮಯ,
ಉದಯದಿಂದೆ ಬಿಡದೆ ಕಾದೆ,
ಕಾದೆ, ನೀನು ಬರದೆ ಹೋದೆ.
ನೋಡಿದರೆ ಬಟ್ಟೆತಿರೆ
ಶೂನ್ಯ, ಕುಟಿಲ, ಮೃಣ್ಮಯ!

ಹೊತ್ತು ಮೂಡಿ, ಬೆಳೆದು, ಮಾಗಿ,
ಕತ್ತಲಿಳಿಯೆ ಸಂಜೆಯಾಗಿ,
ನಿನ್ನ ಹಳಿದು, ನಿನಗೆ ಮುಳಿದು,
ಮರೆಯಲೆಳಸಿ ನಿನ್ನನು,
ಇತರ ಪಥಿಕ ಜನರ ಕರೆದು
ಹೂವುಗಳನು ಹರಿದು ಹರಿದು
ಕೊಡುತ ಬರಲು ಮಾಲೆ ಬರಿದು!
ನುತಿಸಿ ನಡೆದರೆನ್ನನು.

ಜನರ ನುತಿಗೆ ಹೆಮ್ಮೆವಡುತೆ
ಮನೆಯ ಕಡೆಗೆ ಅಡಿಯನಿಡುತೆ
ನಡೆಯುತಿರೆ ಕಂಡೆನಹಾ
ನಿನ್ನ ಸ್ವರ್ಣ ರಥವನು!
ಆದರಯ್ಯೊ ಮಾಲೆಯಲ್ಲಿ?
ಪೂಜೆಯೆಸೆಗೆ ಹೂಗಳೆಲ್ಲ?
ನಯನ ಧಾರೆಯಿಳಿದು ಸೋರೆ
ನೋಡಿ ನಿಂತೆ ಪಥವನು!
ಮಿಂಚನೆಸೆದು ಗುಡುಗಿ ರಥವು
ಬರಲು ನಡುಗಿತೆನ್ನ ಪಥವು.
ಕಾಣ್ಕೆಗಾಗಿ ಕಂಬನಿಯನೆ
ಹಿಡಿದೆ ಬೊಗಸೆಗೈಯಲಿ!
ತಿರಿದ ಹೂವು ಕೊನೆಗೆ ವ್ಯರ್ಥ,
ಕರೆದ ಕಣ್ಣನೀರೆ ಅರ್ಥ!
ಯುಕ್ತಿ ತುದಿಗೆ ವ್ಯರ್ಥವಾಗೆ
ಭಕ್ತಿ ಸಾರ್ಥಗೆಯ್ಯಲಿ!