ಬೆಂಗಳೂರಿನಲ್ಲಿ ವಿಶ್ವೇಶ್ವರಪುರದಲ್ಲಿ ಮನೆಯ ತಾರಸಿಯ ಮೇಲೆ ಕುಳಿತು ಭಾದ್ರಪದ ಮಾಸದ ದಿಗಂತಾಕಾಶದಲ್ಲಿ ಸಂಧ್ಯಾಶಿಲ್ಪಿ ರಚಿಸುತ್ತಿದ್ದ ಮೇಘಕಾವ್ಯಗಳನ್ನು ಅವಲೋಕಿಸುತ್ತಾ ಒಂದು ವರುಷದ ಹಿಂದೆ ಮೈಸೂರಿನಲ್ಲಿ, ದಸರಾ ಪ್ರದರ್ಶನದಲ್ಲಿ, ಶ್ರೀಯುತ ಜೆ. ಎಚ್. ಕಸಿನ್ಸ್ ಅವರು ಅಣಿಗೈದಿದ್ದ ರೊರಿಕ್ ಚಿತ್ರಶಾಲೆಯಲ್ಲಿ ನೋಡಿ ಸವಿದಿದ್ದ ನಿಕೊಲಾಸ್ ಕೊರಿಕ್ ಎಂಬ ಹಿಮಾಲಯವಾಸಿ ರಷ್ಯಾ ದೇಶದ ವರ್ಣಶಿಲ್ಪಿಯ ಭವ್ಯಚಿತ್ರ ಕಲಾಕೃತಿಗಳ ನೆನಪು ಮಲ್ಲರ್ದು ರಚಿಸಿದುದು.

ರೋರಿಕ್, ಓ ರೋರಿಕ್, ವರುಷವೊಂದರ ಹಿಂದೆ,
ಮಯಸೂರಿನಲಿ, ನಿನ್ನ ದಿವ್ಯಕಲೆಯನು ಕಂಡೆ:
ಕಂಡುದೆ ತಡಂ ಸ್ಫುರಿಸಿತೆನ್ನೆದೆಗೆ ದಿವ್ಯಾಗ್ನಿ,
ಪೂರ್ವಪರಿಚಿತ ಭವ್ಯಮಂ ತೆಕ್ಕನೆಯೆ ಮತ್ತೆ
ಸಂಧಿಸುತದರ ಗುರುತು ಹಿಡಿದಂತೆ! ನಿಚ್ಚಮಂ
ಯಾತ್ರೆಗೈದೆನ್ ಚಿತ್ರಶಾಲಾ ಪ್ರದರ್ಶನಕೆ;
ಸಮಹೃದಯನೆಂ ನಿನ್ನ ಹೃದಯ ಸಂದರ್ಶನಕೆ;
ರಸಕಲಾ ಸಂಕೇತದಾ ದಿವ್ಯದರ್ಶನಕೆ.
ದಿನಗಳೈದಂ, ಬಿಡದೆ, ರವಿಯುದಯದಿಂ ತೊಟ್ಟು
ನಡುವಗಲೊಳವನು ಬಾನ್ನೆತ್ತಿಗೇರ್ವನ್ನೆಗಂ,
ಹೇ ವರ್ಣಶಿಲ್ಪಿ, ನಿನ್ನಗ್ನಿ ಕೃತಿಗಳ ಮಧ್ಯೆ
ನಿಲ್ಲುತೆ, ತಪಂ ಗೈದೆನೆನ್ನಾತ್ಮಮುಂ ನಿನ್ನ
ನೋಂಪಿಯ ಪರಂಜ್ಯೋತಿಯಿಂ ಜ್ವಾಲೆಯಪ್ಪಂತೆ,
ಹೈಮಾಚಲೀಯಮಾ ನಿನ್ನ ಕಲೆ: ಮನ್ಮನಂ
ತಾನಾಯ್ತು ಹೈಮಾಚಲಸ್ಪರ್ಧಿ, ನಭಶ್ಚುಂಬಿ,
ರಸವಾರ್ಧಿಸಂಗಿ, ವಿಶ್ವವ್ಯಾಪಿ, ಬ್ರಹ್ಮಾಸ್ಮಿ!
ಆನಂದಮೊಳ್ಕುತೆ, ಕೃತಜ್ಞತಾ ಭಾರದಿಂ
ಮತ್ತೊಮ್ಮೆ ಋಣಿಯಾದನೈರ್ಲೆಂಡಿನಾ ಕವಿಗೆ,
ವರ್ಣಶಿಲ್ಪದ ನಿನ್ನ ರಸಸೃಷ್ಟಿಗಳನಲ್ಲಿ
ತಂದು ಮಂದಿರಗೈದ ಪುಣ್ಯಾತ್ಮನಿಗೆ.

ಆಹ,
ಏನು ಕಲೆ ನಿನ್ನದಯ್: ಮಿಶ್ವತಾ ಸಂಸ್ಪರ್ಶಿ,
ಮೇಣ್ ಬ್ರಹ್ಮದರ್ಶಿ! ಕಲ್ಪನೆ ಅಲ್ಪಮಾತ್ರದಿಂ
ಭೂಮಾನಭೂತಿಯಂ ಮಂತ್ರಿಸಿ ಮಥಿಪುದಲ್ಲಿ: —
ಬೈಗುಗೆಂಪಿನ ಮರ್ಬ್ಬಿನಂಚುಕಟ್ಟಿದ ಬಂಡೆ
ತಾನಾಯಿತದೊ ಸಮಾಧಿಸ್ಥ ಯೋಗೀಶ್ವರಂ;
ಉಷೆಯ ತಾವರೆವೆಳಗು ತುಟಿಸೋಂಕಿಸಿದ ತಳಿರ
ನೆತ್ತಿಯ ಮರಂ ಪ್ರಕೃತಿಯಾತ್ಮಕ್ಕೆ ತಾನಾಯ್ತು
ಸ್ವಾಪ್ನರೇಖಾಲಿಪಿಯ ಹಸ್ತಾಕ್ಷರಂ; — ಶಿಲಾ
ಚೇತನವೆ, ತನ್ನ ಚಿರಜಡ ನಿದ್ರೆಯನ್ನುಳಿದು,
ಫೇನರೂಪಿಂ ಫಣೆಯನೆತ್ತಿ ಭೋರ್ಗರೆವಂತೆ
ಬಂದವ್ವಳೆಸಿತಿದೊ ಜಲೋಲ್ಲಾಸ ಕಲ್ಲೋಲ
ಮಾಲೆ; — ಲೀಲಾಯಾತ್ರಿ ಲೋಲಪುಣ್ಯಾನಿಲಂ,
ಕಾಣ್, ಆಲಿಸದೊ ಅಲ್ಲಿ, ಮುಗುಳನೆಳ್ಚರಿಸುತಿದೆ
ರಸದ ಗರ್ಭದ ಗುಹ್ಯಮಂತ್ರಮಂ ಕಿವಿದೆಸೆಗೆ
ಪರ್ಚಿ ಸುಯ್ವಂತೆ; — ಕಾಣದೊ ಅಲ್ಲಿ, ಕಾರ್ಗಾಳಿ,
ಬಂಡೆ ಮಂಡೆಯ ಬೆಟ್ಟದೊಂದು ಚಂಡಿಕೆಯಂತೆ
ನಿಂದ, ತಾಳೆಯ ಮರದ ಗರಿಗರಿ ತಲೆಯನೆಳೆದು
ಜರ್ಗ್ಗುತಿದೆ, ಸೃಷ್ಟಿಕಾಳಿಯ ಕೆದಮುಡಿವಿಡೆದ
ಮೋಕ್ಷತಾಂಡವ ಮುಷ್ಟಿಯೋಲ್; — ಮೇಘಪಂಕ್ತಿಯದೋ
ನಾವರಿಯದಸ್ತಿತ್ವದಾಶ್ಚರ್ಯ ಸಂಕುಲಕೆ
ಸಂಕೇತ ಲಿಪಿಯವೊಲ್ ಪ್ರತಿಮಿಸಿದೆ, ಬಹುರೂಪಿ,
ಬಹುವರ್ಣಿ, ಬಹುಳ ಭಾವಪ್ರಚೋದಿ; ಅನಂತ
ಸಂವೇದಿ! ಓ ಇಲ್ಲಿ, ವಿಸ್ತೃತ ಸರೋವರದ
ನಿಸ್ತರಂಗಿತ ಸುಪ್ತಿ. ನೋಡಲ್ಲಿ, ದಡದಲ್ಲಿ,
ಕಂಡರಿಸಿದೊಲ್ ಗುಂಡುಗುಂಡಾಗಿ ಸಾಲ್ಗೊಂಡ
ಬಂಡೆಯ ಸುಖದ ತೃಪ್ತಿ. ಇಲ್ಲಿ ರಾತ್ರಿಯ ನಿದ್ರೆ;
ಅಲ್ಲಿ ತಿಮಿರದ ಘನಿತಶಾಂತಿ. ಕಾಣಿಲ್ಲಿ ಅದೊ,
ಪಕ್ಞಿಯಿಂಚರ ಮಂಚದುಯ್ಯಾಲೆಯಂ ತೂಗಿ
ದುಮುಕುತಿದೆ ಬೆಳ್ಳಂಗೆಡೆಯುತರ್ಬಿ!

ಮೊದಲೆಲ್ಲಿ
ಕೊನೆಯಲ್ಲಿ ನಿನ್ನ ರಚನೆಯೆ ವಿಶ್ವವಿಸ್ತರಕೆ,
ರಸಋಷಿಯೆ, ಓ ವರ್ಣಶಿಲ್ಪಿ? ಬಣ್ಣಗಳಲ್ತು,
ನಿನ್ನ ಹೃದಯದ ರಕ್ತವರ್ಣಗಳೆ ಕುಂಚಿಕೆಗೆ
ತೀರ್ಥಮೈಸಲೆ ಬರೆವ ಸಾಧನೆಗೆ! ಚಿತ್ರಗಳೊ,
ಬರಿಯ ಬರೆಪಗಳ್ತು; ಕಾಲಮಂ ದೇಶಮಂ
ಮೇಣನಂತಾಕಾಶದಾಂತರ್ಯಮಂ ಕೊರೆದು,
ಅವ್ಯಕ್ತದಂಗಂಗಳಂ ಬಣ್ಣದಿ ಪೊರಳ್ಚಿ,
ಕಡೆದ ಕನಸುಗಳಲ್ತೆ? ಧ್ಯಾನದಶರೀರತೆಗೆ
ಸಾಕಾರತೆಯನಿತ್ತು, ಮೌನಮಾಕೃತಿವೆತ್ತು,
ಕಲೆಯ ಹೆಪ್ಪಿಗೆ ಕನಸುಗಳೆ ಹೆತ್ತು, ಕಣ್ಬಡೆದು,
ರಸವೆ ಸಾಕ್ಷಾತ್ಕಾರಗೊಂಡಿರ್ಪುದೈ ನಿನ್ನ
ಈ ಪವಾಡದ ಚಿತ್ರನಾಕ್ಷತ್ರ ಶಾಲೆಯಲಿ:
ಧ್ಯಾನದಾನಂದದಲಿ ಲೀನಮೆನ್ನಾತ್ಮಮುಂ
ತಾನಿದೊ ಗಗನಚುಕ್ಕಿ!

ಓವೊ, ಸ್ಮೃತಿ ಎಂಬುದೆಯೆ
ಅಂದಿನನುಭವದೊಂದು ನೆನಪನೀಂಟುವ ಬಗೆಗೆ
ಇಂದು ವಿಸ್ಮೃತಿಯಾಯ್ತೆ! ಸಾಮಾನ್ಯದೀ ಮನೆಯ
ತಾರಸಿಯ ಮೇಲಿರ್ದು, ಭಾದ್ರಪದ ಮಾಸದೀ
ಸಂಧ್ಯಾದಿಗಂತದಾಕಾಶ ಶಿಲ್ಪಿಯ ಋಷಿಯ
ನೀಲ ಮನದಲಿ ಭವಿಸುತಿಹ ಮೇಘಕಲ್ಪನಾ
ಕ್ಷಣಿಕ ಗೋಪುರಗಳಂ, ನಂದನಾಪ್ಸರಿಯರಂ,
ಧೂಮ್ರಾದ್ರಿಯಂ, ಮುಗಿಲಕಣಿವೆಯ ಸರೋವರದ
ತಾಮ್ರಾರುಣ ಹರಿದ್ರ ಬಹುವರ್ಣರಮಣೀಯ
ಸಲಿಲಮಂ, ಮೋಡನಾಡಿನ ಕಾಡಿನೆತ್ತರದ
ಮರದ ಕೋಡಂ, ಹಿಂಗಾಲ್ಗಳೊಳ್ ನಿಮಿರ್ದೆದ್ದ
ಕಿರಣ ಧೂರ್ಜಟಿ ಕೇಸರಿಯ ಧೀರಭಂಗಿಯಂ,
ಮದ್ದಾನೆ ಸೊಂಡಿಲಂ, ಹೆಡೆಯ ಹಾವಂ, ಕಲಾಜಗದ
ಸಾಹಿತ್ಯ ಸಂಗೀತದಖಿಲ ವಿಭವಂಗಳಂ
ನೋಡುತಾತ್ಮೈಸುತಿರೆ, ಬಗೆಗೆ ಪೊತ್ತಿತೊ ನಿನ್ನ
ಅಂದಿನಾ ಚಿತ್ರಪ್ರದರ್ಶನದ ದರ್ಶನಂ,
ರೋರಿಕ್, ವಿದೇಶೀಯ ಹೇ ವರ್ಣಶಿಲ್ಪರ್ಷಿ!

ನಳನಿಲ್ಲಿ ತೊರೆದಗಲುತಿಹನು ದಮಯಂತಿಯಂ,
ನಿದ್ದೆಗೈದರ್ಧಾಂಗಿಯಂ. ಪ್ರಾಣಕಾಂತನಂ
ತನ್ನಂಕ ಪರ್ಯಂಕದೊಳಗಿಟ್ಟ ಸಾವಿತ್ರಿ
ನುಡಿಸುತಿಹಳಿದೊ ಮೃತ್ಯರೂಪಮಂ. ಸೀತೆಯಂ
ಪೊತ್ತೊಡುತಿಹುದುದೊ ದಶಗ್ರೀವ ಪುಷ್ಪಕಂ.
ಧ್ಯಾನಗೈದಿಹನದೋ ಬುದ್ಧದೇವಂ: ನೋಡು,
ಕಾಣ್ಬುದಾ ಗುರುಮುದ್ರೆ. ಅದೊ ಅಲ್ಲಿ: ಬೇಲೂರೊ?
ಹಳೆಬೀಡೊ? ಶ್ರವಣಬೆಳ್ಗೊಳ ಗೊಮಟೇಶ್ವರನೊ?
ಕಣ್ಣು ಕವಿಯಾಗುವೊಡೆ, ಕಾಣ್ಬುದನೆ ಕೇಳುವೊಡೆ,
ಆಲಿಸದೊ: ಪೊಣ್ಮುತಿಹುದಲ್ಲಿ ವೀಣಾಕ್ವಣಂ
ತಾನ ತಾನದ ಮಹಾಗಾನಮಂ! ನೋಡಲ್ಲಿ:
ವಾಸುಕಿಯ ಮಿಣಿಮಾಡಿ, ಮಂದರವ ಮಥಿಮಾಡಿ,
ದೈತ್ಯದಾನವರದೊ ಕಲಂಕುವರ್ ಸಮುದ್ರಮಂ,
ಮಲೆಗೆ ಮಲೆವಂತೆ ತೆರೆಯುರ್ಬ್ಬಿ ಮೇಲ್ವಾಯ್ವವೊಲ್!
ಕವನಗಳ್, ಬಿಳಿಕಾಗದದ ಮೇಲೆ ಬರಿಮಸಿಯ
ಬೀಳಲ್ತೆ, ಓದರಿಯದಾತಂಗೆ? ಅಂತೆ, ತಿಳಿ,
ಮುಗಿಲುಗಳ್: — ಬರಿಯ ನೀರಾವಿಗಳ್ ಜಡಮತಿಯ
ವಿಜ್ಞಾನಿಯಜ್ಞತೆಗೆ; ಗಗನಕವಿ ಕಲ್ಪನೆಯ
ಸಂಜೀವ ಭಾವಗಳ್ ಋಷಿಯ ರಸವಿಜ್ಞಾನ
ದರ್ಶನಕೆ: ಸಾಕ್ಷಿಗಳತೀತದಸ್ತಿತ್ವಕ್ಕೆ;
ಅನ್ಯಲೋಕಗಳನ್ಯ ರೀತಿಗೆ ಗವಾಕ್ಷಗಳ್;
ಭೂನಿಸರ್ಗದ ಪ್ರಾಕ್ತನಾದ್ಭುತ ಪೆಡಂಭೂತ
ಸೃಷ್ಟಿಯ ಪುನಃಸ್ಮೃತಿಯ ಬಾನ್‌ಬಗೆಯ ವಿಕೃತಿಗಳ್;
ಅಧ್ಯಾತ್ಮದರ್ಥ ಪ್ರತೀಕಗಳ್; ಆವೇಶ
ಚಿಹ್ನೆಗಳ್; ತಿರೆಗೆ ಸಗ್ಗದ ಸೆರಗುಸನ್ನೆಗಳ್;
ಆಕಾಶಪುಸ್ತಕದ ಅತ್ಯನಿರ್ವಚನೀಯ
ದೇವಭಾಷಾ ದೃಶ್ಯ ಕಾವ್ಯಗಳ್!

ಈ ಊರೊ,
ಆ ಊರೊ, ಯಾವ ಊರಾದರೇನ್? ಬಿರಿಶಿರವೊ,
ಗೃಹಶಿರವೊ, ಅಲ್ಲಲ್ಲಿ ಎಂಬುದೇನ್? ಕಣ್ಮಚ್ಚಿ
ಕಾಣೆ ಕಲಿಯಲ್, ಪರಬ್ರಹ್ಮದರ್ಶನವೀವ
ವೇದ ಮೇಣುಪನಿಷತ್ತಕ್ಕುಮೀ ಬಾನ್ಮುಗಿಲ್,
ಮೂಕ ಘೋಷಂಗೈವ ಮಂತ್ರಗಳಂತೆವೋಲ್,
ಸಿದ್ಧಗುರು ಮೌನದೋಲ್, ಶಬ್ದ ಪ್ರಮಾಣದೋಲ್!