ಪಾಲ್ಗುಣರವಿ ಕುಂಕುಮ ಛವಿ
ದಂತುರ ಹರಿದಂತದಲಿ
ದಿಙ್ನಾರಿಯ ಶುಭವಾರಿಯ
ಸಂಸೇಚನೆಯಂದದಲಿ
ಶೋಭಿಸುತಿದೆ, ರಂಜಿಸುತಿದೆ,
ಮೋಹಿಸುತಿದೆ ಕಣ್ಮನವ:
ನಿರ್ಜರ ರಸ ನಿರ್ಝರದಲಿ
ಮೀಯಿಸುತಿದೆ ಕವಿತನುವ!

ಶ್ರಮಜೀವಿಗಳಾಶ್ರಮದಾ
ನವಭವನದ ಸೃಷ್ಟಿಯಲಿ
ಕಲ್ಲೊಡೆಯುತ ಮಣ್ಣಗೆಯುತ
ಇಹರವರಾ ದೃಷ್ಟಿಯಲಿ
ಹೊಂಧೂಳಿಯ ಮುಗಿಲಾಳಿಯ
ಫಾಲ್ಗುಣದೀ ಸುರಸಂಧ್ಯೆ
ಮೆರೆದರು ತಾಂ ಮೆರೆಯದವೊಲೆ,
ರಸಶಿಶುವಿಲ್ಲದ ವಂಧ್ಯೆ!

ನವ ವಿದ್ರುಮರಜ ರಕ್ತಿಮ
ಗಗನಾಂಬುಧಿ ಪಾರದಲಿ
ಕರವಿಲ್ಲದ ದಿನಕರ ತಾಂ
ಪಶ್ಚಿಮ ದಿಗ್‌ದ್ವಾರದಲಿ
ತ್ರೈಭುವನದ ದೇವಾಲಯ
ದೇವತೆಯೊಲು ರಾಜಿಸಿರೆ
ನಾಂ ಗೈಯುವ ಗುಡಿಯಾವುದು
ಹೊಯ್‌ಕಯ್‌ ಮೇಣದಕೆ ದೂರೆ?
ಗತವಿಂದಿಗೆ ಶತಮಾನಂ
ನೀನುದಯಿಸಿ, ಗುರುದೇವ;
ಮತಿಹೀನತೆ ಮತಕಲಹಂ
ಗತಿಸುವ ಮೌಢ್ಯದ ಭಾವ!
ಬಹುದೂರದ ಬಂಗಾಳದ
ಕಲ್ಕತ್ತದಿ ನೀನಂದು
ಎಸಗಿದು ತಪಕಾಂ ಧ್ಯಾನಿಪೆ
ಮೈಸೂರಲಿ ನಿಂತಿಂದು!
ನರ ಹೃದಯದ ಬಿಸಿ ರಕ್ತದ
ಬಾಯಾರಿಕೆ ಆರಿಲ್ಲ;
ದಾರದ್ರ್ಯದ ಕರುಳಿರಿಯುವ
ಧನದಸಿಮೊನೆ ಮಾಸಿಲ್ಲ;
ಪಲ್ಗಿರಿದಿದೆ ಕ್ರೋಧದ ಮುಖ,
ನಖವೆತ್ತಿದೆ ಕಾರ್ಪಣ್ಯ;
ನರಳುತ್ತಿದೆ ಲೋಕದ ಸುಖ,
ಹೆಡೆಯೆತ್ತಿದೆ ದೌರ್ಜನ್ಯ!
ಜನ ಕಂಡರೆ ಜನ ಹೆದರಿದೆ;
ಎಲ್ಲಲ್ಲಿಯು ಸಂದೇಹ!
ಶಾಂತಿಯ ಪರದೆಯ ಹಿಂಗಡೆ
ಕ್ರಾಂತಿಯ ರಣ ಸನ್ನಾಹ!
ನರ ನೀಚತೆ ಮಾರೀಚತೆ
ದೇಶಪ್ರೇಮದ ನೆವದಿ
ದಂಷ್ಟ್ರಾಶ್ರಿತ ರಾಷ್ಟ್ರಂಗಳ
ಅಸು ಹಿಂಡುತ್ತಿದೆ ಜವದಿ!

ಹೇಳೇನದೊ ಪಶ್ಚಿಮದೆಡೆ
ರಂಜಿಪ ರಕ್ತಜ್ವಾಲೆ?
ಉನ್ಮಾದದ ರಣಮೋದದ
ಮದ್ದಿನ ಗುಂಡಿನ ಲೀಲೆ!
ಮದಮತ್ತರ ಪಾಶ್ಚಾತ್ಯರ
ಎದೆಗೊಬ್ಬಿನ ನೆಣಸೊಕ್ಕು
ಹೊತ್ತುತ್ತಿಹುದದರಿಂದಲೆ
ಧಗಿಸಿದೆ ಪಶ್ಚಿಮ ದಿಕ್ಕು!

ಸಂಪತ್ತಿದೆ; ವಿದ್ವತ್ತಿದೆ;
ಕೈಸೇರಿದ ವಿಜ್ಞಾನ.
ವಿಷಯಾಗ್ನಿಗೆ ಸಖದಾಸೆಯ
ಕಲ್ಲೆಣ್ಣೆಯ ಪಾನ!
ಭುಗಿಭುಗಿಲೆನೆ ಧಗಧಗಿಸಿದೆ
ರಣರೋಷದ ಕೆಂಗಿಚ್ಚು;
ಹಲ್ಮಸೆದಿದೆ, ಬಿಲ್ಲೆತ್ತಿದೆ,
ಸಂಗ್ರಹಗೈಯುವ ಹುಚ್ಚು!

ಕಾಲವ ದೇಶವನಳೆವರು;
ಆಕಾಶವ ತೂಗುವರು.
ಅತಿ ದೂರದ ನಕ್ಷತ್ರಕೆ
ಕ್ಷಣಮಾತ್ರದಿ ಸಾಗುವರು.
ಭುವಿಗರ್ಭಕೆ ರವಿಗರ್ಭಕೆ
ನೀಹಾರಿಕೆಗೂ ಹೊಕ್ಕು
ಸತ್ಯದ ಕರುಳನೆ ಕಿತ್ತಿದೆ
ವಿಜ್ಞಾನದ ರಣಹದ್ದಿನ
ನೆತ್ತರು ಬಸಿಯುವ ಕೊಕ್ಕು!

ನೊಣಮೀಸೆಯ ಹುಳುಹೆಜ್ಜೆಯ
ಎಣಿಸುವ ಬಿಜ್ಜೆಯ ಬಲ್ಲ;
ತನ್ನಾತ್ಮವ ತಾನರಿಯುವ
ಸಾಧನೆಯೊಂದನು ಒಲ್ಲ!
ಅನ್ವೇಷಣೆ! ಅನ್ವೇಷಣೆ!
ಸುಖಿಸಲು ಪುರಸತ್ತಿಲ್ಲ!
ತಿಳಿದೂ ತಿಳಿದೂ ತಿಳಿದೂ
ಕಡೆಗೇನೂ ಗೊತ್ತಿಲ್ಲ!

ಇಹವಿಲ್ಲದೆ ಪರವಿಲ್ಲದೆ
ತೊತ್ತಾಗಿಹ ಶೋಚ್ಯರಿಗೆ,
ನಡತೆಗೆ ಸ್ಮೃತಿ, ಚಿಂತೆಗೆ ಶ್ರುತಿ
ದೇವರೆ ಗತಿ ಪ್ರಾಚ್ಯರಿಗೆ!
ನೀನುದಿಸಿದ ಈ ದೇಶವೊ
ಕ್ಷುದ್ರದ ಛಿದ್ರದ ಬೀಡು:
ದಿವ್ಯಾತ್ಮರ ಸಂದೇಶಕೆ
ಕಾಡೊಳು ಹಾಡಿದ ಪಾಡು!

ಕವಿ ಹೃದಯದ ಓ ವೀಣೆಯೆ,
ರೋದಿಪೆ ಏತಕ್ಕಿಂತು?
ಕೊರಗುತ್ತಿಹೆ, ಮರುಗುತ್ತಿಹೆ,
ನಿಡುಸುಯ್ಯುವೆ ಏಕಿಂತು?
ಗುರುದೇವನ ಶತಮಾನದ
ಉತ್ಸವಕಿದೆ ರಸಗಾನ?
ನಿಷ್ಫಲಮೇಂ ಶತವರ್ಷದ
ಗುರುದೇವನ ಶತಮಾನ?

ಸಹ್ಯಾದ್ರಿಯ ಮಲಯಾದ್ರಿಯು
ತುಹಿನಾದ್ರಿಯು, ವಿಂಧ್ಯೆ,
ಇರುವಂತೆಯೆ ಸಾರ್ಥಕಮೀ
ಶತಮಾನದ ಸಂಧ್ಯೆ.
ಗುರುದೇವನ ಚೈತನ್ಯಕೆ
ನನ್ನುದ್ಧಾರವೆ ಸಾಕ್ಷಿ!
ನನ್ನಂತೆಯೆ ನಿಮ್ಮೆಲ್ಲರ
ಆತ್ಮೋದ್ಧಾರವು ಸಾಕ್ಷಿ!

ಮನವೆಮ್ಮದು ವಿಸ್ತರಿಸಿದೆ;
ಎದೆಗಾಗಿದೆ ಔದಾರ್ಯ.
ಕೈಗೂಡಿದೆ ಶತಮತಗತ
ಧರ್ಮಸಮನ್ವಯ ಕಾರ್ಯ.
ಪರಮಾತ್ಮನ ಅಸ್ತಿತ್ವದಿ
ರಸಪೂರ್ಣಾಸ್ತಿಕ ಬುದ್ಧಿ;
ಇಂದ್ರಿಯ ಸಂಯಮ ವಿಷಯದಿ
ಹೃಚ್ಛಕ್ತಿಯ ಪರಿಶುದ್ಧಿ!

ಯುಗಯುಗಯುಗದತಿ ಕಷ್ಟದಿ
ಜಡವನು ಜಯಿಸಿತು ಜೀವ;
ಬಹುತಪದಿಂದಾ ಜೀವಕೆ
ಬಂದುದು ಮಾನವ ಭಾವ.
ಯುಗ ಯುಗ ಬೇಕೀ ಮನುಜತೆ
ಮಾನವತನವನೆ ಮೀರಿ
ದೇವತ್ವವ ಸಂಪಾದಿಸೆ
ಸಂಯಮ ಸ್ವರ್ಗಕ್ಕೇರಿ!

ಇಳಿತಂದುದು ಈ ಭೂಮಿಗೆ
ಅವತಾರದ ಮೇಲವತಾರ!
ಆದುದ್ಧಾರಕೆ ಸಾವಿರ ಮಡಿ
ಇಹುದಾಗುವ ಉದ್ಧಾರ!
ಮೊದಲಿಲ್ಲದ ತುದಿಯಿಲ್ಲದ
ಕಾಲದ ಬಾಳೊಳು ಶತಮಾನ
ಎಂಬುದು ಬರಿ ಕಣ್ಮಿಟುಕದು!
ಅದರಿಂ ಸಲ್ಲದು ದುಮ್ಮಾನ.

ಯುಗಚಕ್ರನ ಮುನ್ನೂಂಕಲು
ಇದೆ ಗುರುದೇವನ ಶಕ್ತಿ;
ನಮಗಿಂದಿಗೆ ಬೇಕಾದುದು
ಉದ್ದಾರದ ಆಸಕ್ತಿ.
ಮತಿವಂತನೆ, ಓ ಮಾನವ,
ಕಟಿಬಂಧನಗೈ, ನಿಲ್ಲು!
ಯುಗದೊಳ್ಪಿಗೆ ಜಗದೊಳ್ಪಿಗೆ
ನಿನ್ನೊಳ್ಪನೆ ನೀಂ ಗೆಲ್ಲು!

ಅದೊ ನೋಡದೊ ಮುಳುಗುತ್ತಿದೆ
ಶತಮಾನದ ಸಂಧ್ಯೆ;
ಅದರೊಡನೆಯೆ ಮುಳುಮುಳುಗಲಿ
ಎದೆಗೇಡಿನ ಪಂದೆ!
ಮತ್ತೆರಡಿನ ಶತಮಾನಂ
ನಾಳೆಯ ಹೊತ್ತಾರೆ
ಮೂಡುತ್ತದೆ, ಹೊಸಚೇತನ
ಎತ್ತೆತ್ತಲು ತೋರೆ!

ಬಾ ಬೇಗನೆ, ರವಿದೇವನೆ,
ನವಶತಮಾನದ ದೂತ!
ಹೊಸ ಬಾಳಿಗೆ ತಳಿರಾಗಿಸು,
ನವಯುಗ ಚೈತ್ರದ ಚೇತ!
ದನಿಗೈಯಲಿ ಜಗದೆದೆಯಲಿ
ಖಗಕುಲ ನವಸಂಗೀತ!
ಹೊರಹೊಮ್ಮಲಿ ಸಂಮಥನದಿ
ಕವಿಗಾನದ ನವನೀತ!