ಇದುವರೆಗೆ ನೀನೆನ್ನ ಕೈಹಿಡಿದು ನಡೆಸಿರುವೆ,
ಇನ್ನಾದರೂ ನನ್ನ ಕೈಬಿಡದಿರು.
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು
ಎಂದಿಗೂ ಕೈಬಿಡದೆ ಸಲಹೈ, ಗುರೂ!

ವೈರಾಗ್ಯವೊಂದುಕಡೆ ತನ್ನ ಮಹಿಮೆಯ ತೋರಿ
ಕೈಚಾಚಿ ಕರೆಯುತ್ತಿದೆ;
ಸೌಂದರ್ಯವೊಂದುಕಡೆ ತನ್ನ ಮೋಹವ ಬೀರಿ
ಮೈಚಾಚಿ ಸೆಳೆಯುತ್ತಿದೆ.

ಒಂದುಕಡೆ ಸ್ವಾತಂತ್ರ್ಯ ಒಂದುಕಡೆ ಮಾಧುರ್ಯ,
ನಡುವಿಹೆನು ಬಟ್ಟೆಗೆಟ್ಟು.
ಮುಕ್ತಿಯನ್ನೊಪ್ಪಲೋ? ಮಾಯೆಯನ್ನಪ್ಪಲೋ?
ತಿಳಿದ ನೀನೆನ್ನನಟ್ಟು!

ಇದುವರೆಗೆ ನೀನೆನ್ನ ಕೈಹಿಡಿದು ನಡೆಸಿರುವೆ,
ಇನ್ನಾದರೂ ನನ್ನ ಕೈಬಿಡದಿರು,
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು
ಎಂದಿಗೂ ಕೈಬಿಡದೆ ಸಲಹೈ, ಗುರೊ!