ಆರೊ ತೆಕ್ಕನೆ ತುಡುಕಿ ಬಾಯ್ ಮುಚ್ಚಿ ಹಿಡಿದಂತೆ
ಮೌನ ಭಾರದಿ ಮಾತು ಮೂರ್ಛೆ ಹೋಗಿಹುದಿಲ್ಲಿ
ಶ್ರೀ ಗೋಮಟೇಶ್ವರನ ಭವ್ಯ ಸನ್ನಿಧಿಯಲ್ಲಿ!
ಗಾಂಭೀರ್ಯ ಗೌರವದ ಹೊನಲು ಚಿತ್ತವನೊತ್ತಿ
ತುಳುಕುತಿದೆ ಹೃದಯದಲಿ. ಮಣಿಯುತಿದೆ ದೈನ್ಯದಲಿ
ನನ್ನಾತ್ಮವಲರಿನ ಹೊರೆಗೆ ಬಳ್ಳಿ ಮಣಿವಂತೆ
ತಿರೆಯಡಿಗೆ.  ಧ್ಯಾನ ಮೂರ್ತಿಯ ಮೊಗದಿ ಕಣ್ದಿಟ್ಟಿ
ನಟ್ಟು ನಿಷ್ಪಂದವಾಗುತಿದೆ. ಮುಗಿಲನು ತಿವಿದು
ಬಾನನು ಮುಟ್ಟಿ ನಿಲುವ ಹೆಬ್ಬೆಟ್ಟದೆಡೆಯಲ್ಲಿ,
ಮುಸುಗಿ ಬಹ ಬೈಗುಮಬ್ಬಿನಲಿ, ತಾನೊಬ್ಬನೆಯೆ
ನಿಂತದರ ನೆತ್ತಿಯ ಕಡೆಗೆ ನೋಡುತಿರುವಂತೆ;
ಕಣ್ಗೆ ದಿಟ್ಟೆಯ ಹೊಟ್ಟೆ ಡೊಳ್ಳಾಗಿ ಬಿರುವುದೆನೆ
ಹಬ್ಬಿ ಹಸರಿಸಿ ಮೇರೆ ಮೀರುವಾ ಕಡಲಿನೆಡೆ
ನಿಂತೊಬ್ಬನೆಯೆ ನೋಡುವಂತೆ; ಕದ್ದಿಂಗಳಲಿ
ಕಲ್ಗತ್ತಲೆಯ ರುಂದ್ರ ರಾತ್ರಿಯಲಿ ಶತಕೋಟಿ
ಕೋಟಿ ಪ್ರಯುತ ನಿಯುತ ಸಂಖ್ಯೋಪಸಂಖ್ಯೆಯಾ
ನಕ್ಷತ್ರಸಾಂದ್ರ ವಿಸ್ತೃತ ನಭವನೇಕಾಂಗಿ
ನೋಳ್ಪಂತೆ — ಭವ್ಯತೆಯ ಭಾವದಾವೇಶದಿಂ
ರೋಮಾಂಚವಾಗುತಿಹುದೆನ್ನ ಮೈ! ಅಮೃತದಲಿ
ಮುಳುಗಿ ಮೃತವಾಗುತಿದೆ ನಾನೆಂಬ ವ್ಯಕ್ತಿಕ್ರಿಮಿ!

ದೈತ್ಯ ಕಲೆಯಿದು; ದಿವ್ಯ ದೈತ್ಯಕಲೆ! ಕಲ್ಲಿನಲಿ,
ನಿರ್ಜೀವ ಜಡತೆಯಲ್ಲಿ, ನಗೆಗೆಡೆಯ ನಗ್ನತೆಗೆ,
ಇಂಥ ಭೀಮಾಕೃತಿಗೆ, ಚಿರಜೀವಗಾಂಭೀರ್ಯ
ಭವ್ಯತಾ ಮುದ್ರೆಯನ್ನೊತ್ತಿದೀ ದಿವ್ಯಕಲೆ
ದೈತ್ಯಕಲೆ! ಎದೆಯಿದ್ದರಿಲ್ಲಿ ನಗು ನೋಡುವಂ,
ಬತ್ತಲೆಗೆ ಕಿಲಕಿಲನೆ ನಗುವ ಓ ಲಘುಹೃದಯಿ!
ಎಳ್ಳುನೀರಹುದಿಲ್ಲಿ ಹೀನಗೆಗೆ, ನೀಚತೆಗೆ;
ಬೆಳೆನೀರು ಭವ್ಯತೆಗೆ, ದಿವ್ಯತೆಗೆ. ಶಿಶುಮುಖದ
ಮುಗ್ಧತೆ, ಸಮಾಧಿಸ್ಥನಾನಂದ ಗಾಂಭೀರ್ಯ,
ವಜ್ರದ ಕಠೋರತೆ, ಕುಸುಮ ಕೋಮಲತೆ, ಮೇಣ್
ಸತ್ಯದ ರಹಸ್ಯ, ಬ್ರಹ್ಮದ ಅನಿರ್ವಚನೀಯತೆ
ಎಲ್ಲ ಮೈವೆತ್ತಿರುವುವೀ ದಿಗಂಬರ ಮಹಾ
ನಿರ್ವಾಣ ಮೂರ್ತಿಯಲಿ: ಇಲ್ಲಿ ಬಾಯಿಗೆ ಬೀಗ!
ನುಡಿಗೆ ಮೌನದ ಸಿಡಿಲು ಹೊಡೆದಂತಿರುವುದೀಗ!

ಅರ್ಹಂತ ಗುರುದೇವ, ಓ ಗೋಮಟೇಶ್ವರನೆ,
ನಗ್ನತೆಗೆ ನಾಚದಿಹೆ; ಬತ್ತಲೆಗೆ ಬೆದರದಿಹೆ.
ಹುಸಿ ನಾಗರಿಕ ವೇಷದಿಂದಲ್ಪತೆಯ ಮುಚ್ಚಿ
ಮೆರುಗು ಬೆರಗಿನ ಮೋಸಗೈಯದಿಹೆ. ಮುಚ್ಚು ಮರೆ
ತಾನೇಕೆ ಅಲ್ಪತಾ ಲವಲೇಶವಿಲ್ಲದೆಯೆ
ಸರ್ವತ್ರ ಸರ್ವದರೊಳುಂ ಭೂಮನಾಗಿರುವ
ಮಹತೋ ಮಹೀಯನಿಗೆ ನಿನಗೆ? ಗುಟ್ಟಿನ ರಟ್ಟು
ಕೇಡು ನೀಚತೆ ಹೀನತೆಯ ಹೊತ್ತಗೆಗೆ ಬೇಕು;
ಗಗನ ವಿಸ್ತಾರದೌದಾರ್ಯಕದು ಬೇಕೆ? ಸಾಕೆ?
ನಿಜ ಮಹಿಮೆ ನಗ್ನತೆಗೆ ಅಳುಕಬೇಕಾಗಿಲ್ಲ
ಬಡಕಲಿಗುಡುಗೆ ಬೇಕು, ಕಲಿಯ ಮೈಗೇತಕದು?
ಕೀಳ್ಗಳಿಗೆ ವೇಷವಿಲ್ಲದೆಯೆ ಗೌರವವಿಲ್ಲ:
ದೊರೆಯನೆಳೆತಂದು ಬಟ್ಟೆಯ ಬಿಚ್ಚಿ ಮುಡಿಗಳಚಿ
ನೋಡಿದರೆ ತಿಳಿಯುವುದು ವೇಷಕೋ ವ್ಯಕ್ತಿಗೋ
ಆರ್ಗೆ ಗೌರವವೆಂದು! ಉಡುಗೆ ತೊಡುಗೆಯೊ ಆಳೊ.
ದಿಟದರಸು ಯಾರೆಂದು! ಎನಿಬರೆಮ್ಮೊಳಗಿಹರ್
ಬತ್ತಲಾಗಿಯುಮಿಳೆಯ ಗೌರವಂಬಡೆವವರ್?
ಕಾವಿಯಿಂ ಗುರುವಾಗಿ, ಹೊನ್ನಿನಿಂ ದೊರೆಯಾಗಿ,
ರಣದುಡುಗೆ ದೆಸೆಯಿಂದೆ ರಣಧೀರನೆಂದಾಗಿ,
ಜನಿವಾರದಿಂದೆ ಬ್ರಾಹ್ಮಣನಾಗಿ, ಬೂದಿಯಿಂ
ಶಿವಭಕ್ತನಾಗಿ, ವೈಷ್ಣವನಾಗಿ ನಾಮದಿಂ
ಮೆರೆದುರಿವರೆಲ್ಲರೂ ಬಂದು ಕಲಿಯಲಿ ಇಲ್ಲಿ
ನಗ್ನತೆಯ ಮಹಿಮೆಯಂ ನಿನ್ನ ಸಾನ್ನಿಧ್ಯದಲ್ಲಿ!
ಬೋಳ್, ಕಾವಿ, ರುದ್ರಾಕ್ಷಿ, ವೈರಮುಡಿ, ಜರಿಯ ಮಡಿ,
ಕತ್ತಲೆಯ ಗರ್ಭಗುಡಿ ಮೊದಲಾದುವೆಲ್ಲವಂ
ತೊರೆದು, ಸತ್ಯದ ದಿಗಂಬರತಯೊಂದನೆ ಒಲಿದು,
ಭೂಮ್ಯಂತರಿಕ್ಷಗಳ ಸಂಧಿಸುತ ನಿಂತಿರುವ,
ಸೌಂದರ್ಯದಾಚೆಯಾ ಭವ್ಯತಾಸೀಮೆಯಲಿ
ನೆಲೆಸಿರುವ, ಓ ಎನ್ನ ನಗ್ನಗುರುದೇವ, ನಮೋ!
ನಿನ್ನ ಈ ದಿವ್ಯ ನಿರ್ಲಕ್ಷತಾ ಸ್ಥಿರತೆಯಂ,
ಭೂಮತೆಯ ಭವ್ಯತೆಯ ಬ್ರಹ್ಮಗಾಂಭೀರ್ಯಮಂ
ದಯಪಾಲಿಸೆನಗೆಂದಿಗೂ ಮಾಸದಂದದಲಿ,
ಮೇಣನವರತ ಬೆಳಗುವೋಲ್, ಶ್ರೀ ಗೋಮಟೇಶ!