ರಾಕ್ಷಸ ಕಂಸನ ಮಥುರೆಯ ಮೇಲೆ
ಘನ ಘೋರಾಂಧತೆ ಕವಿದಿತ್ತು;
ಮಿಂಚಿನ ಸಿಡಿಲಿನ ಮೋಡದ ಲೀಲೆ
ತಿರೆಯ ಮೋರೆಯನು ತಿವಿದಿತ್ತು;
ಕೆರಳಿದ ಕೇಸರಿಯಂದದಿ ಗರ್ಜಿಸಿ
ಗಾಳಿಯು ಭರದಲಿ ಬಿಸಿತ್ತು;
ಮುಗಿಲಿನ ಚಿಪ್ಪೊಡೆದಾಲಿಯ ಕಲ್ಗಳ
ಕವಣೆಯವೋಲ್ ಮಳೆ ಸೂಸಿತ್ತು!
ಘನಘೊರಾಂಧತೆ ಕವಿದಿತ್ತು;
ತಿರೆಯ ಮೋರೆಯನು ತಿವಿದಿತ್ತು;
ಗರ್ಜಿಸಿ ಗಾಳಿಯು ಬೀಸಿತ್ತು;
ಕವಣೆಯ ಕಲ್ಮಳೆ ಸೂಸಿತ್ತು;
ರಾಕ್ಷಸ ಕಂಸನ ಮಥುರೆಯ ಮೇಲೆ
ಶತ ಶತಮಾನಗಳಾಚೆಯ ದೂರದ
ದ್ವಾಪರ ಯುಗದಲ್ಲಿ!

ಹೆದರಿದ ಹಕ್ಕಿಯಮರಿ ಹುದುಗಿತ್ತು
ತಾಯಿಯ ಕೆಕ್ಕೆಯಡಿ;
ಕೊಟ್ಟಿಗೆಯಲಿ ಕರು ಮೈಗರೆದಿತ್ತು
ಹಸುವಿನ ಹೊಟ್ಟೆಯಡಿ!
ಹುಚ್ಚು ಹಿಡಿದುದನೆ ತಲೆಯಲ್ಲಾಡಿ
ತೂಗಿತು ಹೆಮ್ಮರ ಮುಡಿಗೆದರಿ;
ಕಿವಿ ಬಿರಿಯುವ ಸಿಡಿಲೆರಗಿದ ಹೊಡೆತಕೆ
ನಡುಗಿತು ಜಗ್ಗನೆ ನೆಲವದುರಿ!
ಮುಗಿಲನ ಹಾವಿನ ಮಿಂಚಿನ ನಾಲಗೆ
ನೆಕ್ಕಲು ಕತ್ತಲೆಯಂ
ಹಗಲಿಣುಕಿದವೊಲು ತೋರ್ದುದು ತೊಯ್ದಿಳೆ
ತನ್ನೆಯ ಬತ್ತಲೆಯಂ!
ಮತ್ತದೊ ಮುತ್ತಿತು ಕತ್ತಲ್ಗಾಡಿಗೆ;
ತೀವಿತು ಕುರುಡಂ ನೋಟದ ಬೀಡಿಗೆ!
ಆದರದೇನದೊ ಕತ್ತಲ್ಲಡಲಲಿ
ಓ ತೇಲುತ್ತಿದೆ ಸೊಡರಕುಡಿ?
ಹೊಳೆಯುತ್ತಿದೆ ಮಿಂಚಿನ ಹನಿಯಂದದಿ
ಇರುಳ್ವೆಣ್ ಮುಡಿಯಾ ರನ್ನಗಿಡಿ!

ರಾಕ್ಷಸ ಕಂಸನ ಕಾರಾಗಾರದಿ
ಬಂಡೆಯ ಗೋಡೆಯ ಕಾರಾಗಾರದಿ
ಕಾವಲು ಬೇಲಿಯ ಕಾರಾಗಾರದಿ
ಮಿಣುಕುತ್ತಿದೆ ಹಣತೆಯ ದೀಪ;
ದೇವಕಿ ವಸುದೇವರ ಸಿರಿವಸಿರಿಂ
ಕಂಸನ ಪಾಪದ ಕಾರ್ಗತ್ತಲೆಯಂ
ನೊಣೆಯಲು ಜನಿಸಿದೆ ಶಿಶುರೂಪ!
ತಿಂಗಳೆಂಟರೊಳೆ ಹುಟ್ಟಿದೆ ಹಸುಳೆ
ಕಂಸನ ವಂಚಿಸಲೆಂಬಂತೆ!
ಹೊರಗಡೆ ಹೊಯ್ಯುತ್ತಿದೆ ಬಿರುಗಾರ್ಮಳೆ
ಶಿಶುವನು ಸಂರಕ್ಷಿಸುವಂತೆ.
ತಂದೆತಾಯಿಯರು ಮೋಹದ ಮೂರ್ತಿಯ
ಹಣತೆ ಬೆಳಕಿನಲಿ ನೋಡಿದರು;
ನೆನೆದು ಭವಿಷ್ಯವ, ಮಗುವನು ಮುದ್ದಿಸಿ,
ರಕ್ಷಕನನು ಕೊಂಡಾಡಿದರು.

“ಪಾಪಿಗೆ ತಿಳಿದರೆ ಪೂವಡಿವಿಡಿದು
ಬೀಸುವನಯ್ಯೋ ಬಂಡೆಗೆ ಬಡೆದು!
ಏಳು ಗರ್ಭಗಳ ಸೀಳ್ದಾ ಕ್ರೂರಿ
ಕುದಿದಿಹನೆಂಟನೆಯದನೇ ಹಾರಿ!
ವಸುದೇವನೆ, ಪತಿದೇವನೆ, ಪೊರೆಯೈ;
ಬೆಳಗಾಗುವ ಮೊದಲೆಂತೋ ಪೊರೆಯೈ!”
ಮೊರೆಯಿಡುವಾ ಮಡದಿಯ ನುಡಿಗೇಳಿ,
ಕಣ್ಣೀರೊರಸಿ, ಕೆಚ್ಚನು ತಾಳಿ,
ತಾಯಿಯ ಬೆಚ್ಚನೆ ಬಟ್ಟೆಯ ಸುತ್ತಿ,
ಮೇಲೆದ್ದನು ಶಿಶುವನು ಎದೆಗೊತ್ತಿ.
ಹೊರಗಡೆ ಕತ್ತಲೆ, ಬಿರುಮಳೆ, ಗಾಳಿ:
ಕುಣಿದಳು ಇರುಳಿನ ಕಾಳಿ ಕರಾಳಿ!

ನಿದ್ರಾದೇವಿಯ ವಕ್ಷವನಪ್ಪಿ
ಕಾವಲು ಬೆಚ್ಚನೆ ಮಲಗಿತ್ತು;
ಏನಚ್ಚರಿ: ತನ್ನಷ್ಟಕೆ ತಾನೆ
ಬಾಗಿಲು ಮೆಲ್ಲನೆ ತೆರೆದತ್ತು.
ತಂದೆಯ ಮೋರೆಗೆ ಭರ್ರನೆ ಬೀಸಿತು
ತುಂತೂರ್ಗೂಡಿದ ಚಳಿಗಾಲಿ;
ಲೆಕ್ಕಿಸದೇನನು ನುಗ್ಗಿದನಾತನು
ಕಗ್ಗತ್ತಲ್ಗಬ್ಬವ ಸೀಳಿ!
ಕೆಸರಲಿ ನೀರಲಿ ಕಷ್ಟದಿ ನಡೆದು
ಯಮುನೆಯ ದಡವನು ಸೇರಿದನು;
ಮಿಂಚಿನ ಬೆಳಕಿಗೆ ಮಿಂಚುತ ಹರಿದಾ
ಕರ್ವೋನಲಿನ ನೀರ್ದಾರಿಯನು
ನೋಡಿದನೆವೆಯಿಕ್ಕದೆ: ಭಯವೇಕೆ?
ಶ್ರೀ ಕೃಷ್ಣನ ಹೊತ್ತವಗಳುಕೇಕೆ?
ನಡೆ ಮುಂದಕೆ, ಓ ವಸುದೇವ!
ಸೃಷ್ಟಿನಿಯಮಗಳ ನಿಧಿಯಾದವನಿಗೆ
ಪಂಜಭೂತಗಳ ವಿಧಿಯಾದವನಿಗೆ
ಹೊಳೆ ಮಲೆವುದೆ ಹೇಳ್, ವಸುದೇವ?
ಯಾರಿಗು ದಾರಿಯ ಬಿಡದಿಹ ಮಂದಿ
ದೊರೆಗರುಗಾಗುವರೆಂತಂತೆ
ಹನಿಹನಿಯೂ ಹಿಂಜರಿವುದು ಹೆದರಿ
ಸ್ವಾಮಿಗೆ ದಾರಿಯ ಬಿಡುವಂತೆ!
ಇಂತಾಲೋಚಿಸಿ ನಡೆದನು ಮುಂದೆ;
ಜಗದೊಡೆಯನ ಅಡಿ ಸೋಂಕುವವರೆಗೆ
ನೀರಿಳಿಸದೆ ನೆರೆಯೇರ್ದಾ ತೊರೆಗೆ
ಜುಮ್ಮೆಂದಿತು ಮೈ! ಸೋಂಕಿಗೆ ಹಿಂದೆ
ಸರಿದಳು ತರಳ ತರಂಗಿಣಿ ಯಮುನೆ!
ಸೆಡೆತಳು ಭಯಭಕ್ತಿಗೆ ರಯಗಮನೆ!
ದಾಂಟಲು ಶ್ರೀಕೃಷ್ಣನ ತಂದೆ
ತುಂಬಿತು ಹೊಳೆ ಹಿಂದೆ!

ಹೆದರದಿರಮ್ಮಾ ದೇವಕಿ, ತಾಯಿ:
ಕಂಸನ ಗಂಟಲ ಮರಿಯುವ ಬಾಯಿ,
ಪಲ್ದೆರೆದಿದೆ ಬಿದಿಬೇಂಟೆಯ ನಾಯಿ!
ನಂದಗೃಹದಿ ಕಂದನು ಸುಕ್ಷೇಮಿ;
ತ್ರಿಭುವನ ಮೋಹನ ಧರ್ಮಸ್ವಾಮಿ;
ಸಕಲಾತ್ಮರ ಪರಮಾರ್ಥಪ್ರೇಮಿ!