ತುಳಿ! ತುಳಿ! ಹತ್ತಿ ತುಳಿ!
ಮತ್ತೆ ತುಳಿ, ಒತ್ತಿ ತುಳಿ,
ಅಹಂಕಾರವಳಿಯಲಿ!
ನಾನು ಎಂಬುದೆಲ್ಲ ಉದುರಿ
ನೀನು ಮಾತ್ರ ಉಳಿಯಲಿ!

ಹಡೆಹೆಡೆಗಳನೆಡೆಬಿಡದೆಯೆ
ಕಾಳೀಯನ ತುಳಿದಂದದಿ
ಗೋವಿಂದನ ಚರಣ
ತನ್ನನಿತೂ ವಿಷ ವಮನದಿ
ನನ್ನಂತಃಕರಣ
ಮಮತಾಫಣಿ ಲಯಹೊಂದುತೆ
ಬರಲಮೃತದ ಮರಣ!

ತುಳೀ ಹತ್ತಿ! ತುಳೀ ಒತ್ತಿ!
ಅಹಂಕಾರವಳಿಯಲಿ!
ನನ್ನ ಸತ್ತದೆಲ್ಲ ಸತ್ತು
ನಿನ್ನ ಸೊತ್ತು ಉಳಿಯಲಿ!