ಪ್ರಾಚ್ಯಪಾಶ್ಚಾತ್ಯ ತತ್ತ್ವಜ್ಞಾನ ಖನಿಗಳಲಿ
ತೊಳತೊಳಲಿ ಹುಡುಕಿ ಬಹುವಜ್ರಗಳನಾಯ್ದ ನಾಂ
ಶ್ರೀಮಂತನಾಗಿರ್ದೊಡಂ, ಹೇ ಪೂರ್ಣಯೋಗೀಂದ್ರ,
ಕೊನೆಗೆ ನಿನ್ನೀ ಮೇರುಕೃತಿಯ* ದರ್ಶನ ಶಿರದ
ಮೇರುವುನ್ನತಮತಿಯ ಮಾನಸ ಸರೋವರದಿ
ಪೂರ್ಣತೃಪ್ತಿಯನೀಂಟೆ ಶಾಂತವಾದುದು ನನ್ನ
ಧೀತೃಷ್ಣೆ. ಬುದ್ಧಿ ತಣಿವನ್ನೆಗಂ ಸಿದ್ಧಿ ತಾಂ
ಸಂದಿಗ್ದಮೈಸೆ? ಮತಿಯನುಮತಿಯೆ ಸಾಧನೆಗೆ
ಅಗ್ನಿಸೋಪಾನಂ: ಆ ಜ್ಞಾನದಿಂ ಮೇಲಲ್ತೆ, ಪೇಳ್,
ದಿವ್ಯ ವಿಜ್ಞಾನ!

ಹೃದಯಕೆ ತೃಪ್ತಿಯಂ ತಂದ
ಗುರುದೇವ ಪರಮಹಂಸನ ಸಮನ್ವಯ ದೃಷ್ಟಿ,
ಮರ್ತ್ಯತತ್ತ್ವದ ಮನೋಮಯದ ರೀತಿಯೊಳಿಂದು
ತಾನಾಯ್ತು ತಾರ್ಕಿಕ ಸಮರ್ಪಕಂ, ನಿನ್ನ ಈ
ಲೋಕಲೋಕಂಗಳಂ ಲೋಕಾಂತರಂಗಳಂ
ತನ್ನ ಮುಷ್ಟಿಯೊಳಾಂತ ಪೂರ್ಣದೃಷ್ಟಿಯ ಕೃತಿಯ
ದರ್ಶನದಿ: ಬುದ್ಧಿ ತಿಮಿರಂ ಮಾಣ್ದುದಿನ್ನೆನಗೆ!
ಸಿದ್ದಿಸೂರ್ಯೋದಯಕೆ ಚೈತ್ಯಾಕ್ಷಿ ಪಕ್ಞ್ಮಂಗಳಂ
ತೆರೆದು ಗರಿಗೆದರಿರುವ ನನ್ನಾತ್ಮಪಕ್ಷೀಂದ್ರನಂ
ದಿಕ್ಕು ಕೆಡದಂತೆ ಮಿಂಚುಂಬೆರಳ ದೀಪ್ತಿಯಿಂ
ಸನ್ನೆಗೆಯ್ದಾಶೀರ್ವದಿಸು, ಓ ಗುರುವೆ, ಗುರುದೇವ
ಪರಮಮಹಂಸನ ಶಿವಾನಂದ ಚರಣಾಬ್ಜಿಕೆ!* “The Life Divine”.