ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು,
ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ;
ಹೃದಯ ನಭದಜ್ಞಾನ ತಿಮಿರವನಿರದೆ ಭಂಜಿಸಿದೆ.

ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು
ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ;
ಕ್ರೆಸ್ತ ಹಿಂದೂ ಮಹಮದೀಯರೆ ಬೌದ್ಧ ಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲಿಸಿದೆ.

ಮಾಯತಿಮಿರದಿ ಮಾರ್ಗ ಕಾಣದೆ ಗೋಳಿಡುತಲಿಹರ
ಅಭಯದೀಪವ ಹಿಡಿದು ದಾರಿಯ ತೋರಿ ರಕ್ಷಿಸಿದೆ;
ಘೋರ ಸಂಸಾರಾಂಬುನಿಧಿಯೊಳು ಮುಳುಗಿ ತೇಲುವರ
ಅಮೃತನಾವೆಯ ತಂದು ವೇಲೆಯನಿರದೆ ಸೇರಿಸಿದೆ.

ಶಿರವ ನಾಕದೊಳಿರಿಸಿ ಚರಣಗಳೆರಡ ಭೂತಳದಿ
ಗುರು ಹಿಮಾಚಲದಂತೆ ನಿಂತಿಹೆ, ಶಾಂತಿಯಾಶ್ರಯನೆ,
ಹೃದಯ ನಿನ್ನದು ಮೇರೆಯಿಲ್ಲದ ರುಂದ್ರ ವಾರಿನಿಧಿ:
ಚಲಿತ ಮತಗಳ ಚಂದ್ರನಾವೆಗಳಲ್ಲಿ ತೇಲುತಿವೆ!

ಕ್ರಿಸ್ತ ಮಹುಮದ ರಾಮ ಕೃಷ್ಣ ಜೊರಾಸ್ತ ಗೌತಮರು
ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು
ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು
ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯವಾ ‘ಗಿಹವು’ !

ದಕ್ಷಿಣೇಶ್ವರ ದೇವನಿಲಯದ ಪರಮಯೋಗಿಂದ್ರ,
ಶ್ರೀ ವಿವೇಕಾನಂದ ಪೂಜಿತನಾತ್ಮ ಭಾವಿತನೆ,
ಲೋಕಜೀವರಿಗಾತ್ಮಶಕ್ತಿಯ ನೀಡಿ ಕಾಪಾಡು;
ನೆನೆವರೆಲ್ಲರ ಹೃದಯವಾಗಲಿ ನಿನ್ನನೆಲೆವೀಡು!