ನಿನ್ನ ಆರ್ಶಿರ್ವಾದ ಪರಿವೇಷ ಮುತ್ತಿರಲಿ
ನನ್ನನು ಸದಾ;
ನನ್ನ ಭಕ್ತಿಯ ಬಳಿ ಮಲರಾಂತು ಸುತ್ತಿರಲಿ
ನಿನ್ನನು ಸದಾ.
ನನ್ನ ಹೃದಯದ ತುಂಬಿ ನಿನ್ನಡಿಯ ಮಧುರತೆಗೆ
ಹಾರಲಿ ಸದಾ;
ನನ್ನ ಸಾಂತತೆ ನಿನ್ನನಂತತೆಯನೆಡೆಬಿಡದೆ
ಹೀರಲಿ ಸದಾ.
ನನ್ನ ವ್ಯಕ್ತಿತೆ ನಿನ್ನ ವ್ಯಕ್ತಿತ್ವಸಾಗರದಿ
ತೇಲಲಿ ಸದಾ;
ನನ್ನ ಕರ್ಮಗಳೆಲ್ಲ ನಿನ್ನ ಋತ ಮರ್ಮವನೆ
ಹೋಲಲಿ ಸದಾ.
ನನ್ನ ನ್ಯೂನತೆಯೆಲ್ಲ ನಿನ್ನ ಪೂರ್ಣತೆಗಾಗಿ
ನೋಯಲಿ ಸದಾ;
ನನ್ನ ನಶ್ವರವೆಲ್ಲ ನಿನ್ನ ನಿತ್ಯತೆಗಾಗಿ
ಸಾಯಲಿ ಸದಾ!