ಮನುಜರಲಿ ದೇವತ್ವದಾಕಾಂಕ್ಷೆಯಳಿದಿಲ್ಲ;
ಉಳಿದಿಹುದು; ದಿನದಿನಕೆ ಬೆಳೆಯುತಿದೆ; ಎಂದುದಕೆ
ಸಾಕ್ಷಿಯಿದು: ದಶದಶ ಸಹಸ್ರಜನ ಕಿಕ್ಕಿರಿದು
ನೆರೆದಿಹುದು ಬಿಸಿಲಿನಲಿ, ಮಾನವ ಮಹಾತ್ಮನಿಗೆ
ಗೌರವಾರಾಧನೆಯ ನೈವೇದ್ಯವನು ಸಲಿಸೆ!
ಇವನು ಕಲ್ಲನು ರೊಟ್ಟಿಮಾಡಿಲ್ಲ; ಹುಲ್ಲಿನಲಿ
ನಿಶಿತಾಸ್ತ್ರವನು ಮಂತ್ರದಿಂ ರಚಿಸಿ ದಾನವನ
ಕೊಂದಿಲ್ಲ; ಅರ್ಧನರ ಅರ್ಧಮೃಗ ರೂಪದಲಿ
ಕಂಭವನ್ನೊಡೆದು ಗುಡಗುಡಿಸಿ ಮೂಡಿದನಿಲ್ಲ.
ದಶಶಿರನ ಕೊಂದಿಲ್ಲ; ಚಕ್ರ್ಧರನೂ ಅಲ್ಲ.
ಅದ್ಭುತ ಪವಾಡಗಳ, ಅಘಟಿತ ವಿಚಿತ್ರಗಳ
ಗೋಜಿಗಿವನೆಂದಿಗೂ ಹೋಗುವಾತನೆ ಅಲ್ಲ!
ಮತ್ತಾವ ದೇವತ್ವದೀಕ್ಷಣೆಗೆ ನೆರೆದಿಹರ್
ಇನಿತು ಮನುವಂಶಜರ್? ನೋಡಲೆಂದೆಂಬೆಯೇನ್?
ಆನೆಯಂಬಾರಿಗಳ ರಾಜರೈಸಿರಿಯಿಲ್ಲ;
ಇವನು ಸುಂದರನಲ್ಲ; ಯುವಕನಂತೂ ಅಲ್ಲ;
ಮುದುಕನಾಗಿಹನು; ಹಲ್ಲುಗಳುದುರಿ ಬಾಯಿ ಬರಿ
ಬೋಡಗಿಹುದು. ಇವಗೆ ಚೆಂದುಟಿಯ ಚೆಲುವಿಲ್ಲ;
ಕಮಲಾಕ್ಷನಿವನಲ್ಲ. ಮತ್ತೇಕೆ? ಮೃದುಮಧುರ
ವಾಗ್ವಿಲಾಸಕೆ ಸೋತು ಎಂಬೆಯೇನ್? ಆದು ಸುಳ್ಳು!
ಇವನ ದನಿ ದೂರಕ್ಕೆ ಕೇಳಿಸದು; ಮಾತಿನಲಿ
ರಸಿಕತೆಯ ಬೆಡಗು ಬಿಂಕಗಳಿಲ್ಲ; ಓಜಸ್ಸು
ವಿನ್ಯಾಸ ವೈಖರಿಗಳಿನಿತಿಲ್ಲ; ವಿಷಯವೋ
ಬೀದಿಗುಡಿಸುವ ಜಾಡಮಾಲಿಗಳ ಕುರಿತದ್ದು!
ಹಿಮಗಿರಿಯ ಭವ್ಯ ಸೌಂದರ್ಯವನ್, ಗಗನವನೆ
ಚುಂಬಿಪ ತುಷಾರಮಯ ಗಿರಿಶಿರ ತರಂಗಗಳ
ರಮಣೀಯ ಕಮನೀಯ ಭೀಷ್ಮ ಸಂಮ್ಮೋಹವನ್
ಕುರಿತಿವನು ನುಡಿವನಲ್ಲ. ಅಥವಾ ಸಾಗರದ
ಸುಂದರ ಸುನೀಲ ಸಲಿಲದ ನೃತ್ಯ ಮಹಿಮೆಯನ್
ಮಾತಿನಲಿ ತೋರಲೆಳಸುವ ವಾಗ್ಮಿಯಿವನಲ್ಲ.
ಚೈತ್ರ ವೈಶಾಖಾದಿ ಮಾಸಗಳ, ಪುಷ್ಪಗಳ,
ಪಕ್ಷಿಗಳ, ತರುಲತಾ ಗುಲ್ಮಗಳ, ವರ್ಷಗಳ,
ಕುರಿತು ಮಂಜುಳ ಶೈಲಿಯಲಿ ವರ್ಣಿಸುವ ಸರಸ
ಕಾವ್ಯರ್ಷಿಯಿವನಲ್ಲ. ಇವನು ಹೇಳುವ ವಿಷಯ,
ಇವನ ಮೇಣ್ ಇವನ ಮಾತಿನ ತೆರದಿ, ದಿನದಿನದ
ಸರಳ ಸಾಧಾರಣದ ಬಡಹೊಟ್ಟೆ ಪಾಡಿನದು!

ಆದರೂ ದರ್ಶನಕೆ ಮುತ್ತಿಹರು ಮಾನವರು,
ಜೇನುಹಲ್ಲೆಗೆ ಜೇನುಹುಳು ಕವಿಯುವಂದದಲಿ,
ಐಸಿರಿ ಪವಾಡ ವಾಗ್ಮಿತೆಗಳನು ಲೆಕ್ಕಿಸದೆ,
ಪ್ರೇಮ ಸತ್ಯಾಹಿಂಸೆ ಸಮತೆಗಳನಾಚರಿಸಿ,
ಬೋಧಿಸುವ ಸಾಧಿಸುವ, ಜನರನೆಚ್ಚರಗೊಳಿಪ
ಸರಳ ಜೀವನದ ದೇವತ್ವದಾರಾಧನೆಗೆ!
ವೈಚಿತ್ರ್ಯವನೆ ದೇವರೆಂದೆಂಬುವಾ ಕಾಲ
ಒಂದಿತ್ತು. ಮತ್ಸ್ಯಕೂರ್ಮಾದಿ ನರಸಿಂಹರನು
ಭಯ ಭಕ್ತಿಯಿಂ ಪೂಜಿಸುವ ಕಾಲವೊಂದಿತ್ತು.
ರಾಜದರ್ಪದಲಿ, ಅಧಿಕಾರದಲಿ, ಕ್ರೌರ್ಯದಲಿ,
ಶಕ್ತಿ ಬಲ ಯುಕ್ತಿ ಸಿರಿ ಮೇಣ್ ಅಹಂಕಾರದಲಿ
ದೇವತ್ವವನು ಕಾಣುವಾ ಕಾಲವೊಂದಿತ್ತು.
ಆ ಅನಾಗರಿಕ ಮಾನವ ದೇವಭಾವಗಳ್
ಇಂದು ದೂರಾಗುತಿವೆ. ಮಾನವನ ಅಭ್ಯುದಯ
ಶ್ರೇಯಸ್ಸುಗಳಿಗಾಗಿ ನೊಂದವರ್, ಬೆಂದವರ್,
ಮನುಜರಂತೆಯೆ ಬಾಳಿ ಹೋರಾಡಿ ಸಂದವರ್,
ರಾಜ್ಯ ಭೋಗ ತ್ಯಾಗದಮಲ ವೈರಾಗಿಗಳ್,
ಮನುಜ ತನುಜರ್ ಇಂದು, ಕ್ರಿಸ್ತ ಬುದ್ದಾದಿಗಳೆ,
ಮಾನವರ ಪೂಜೆಗೌರವಗಳನು ಕೈಕೊಳ್ವ
ದೇವತೆಗಳಾಗುವಾ ಕಾಲವೈತಂದಿಹುದು.
ಋಜುದೃಷ್ಟಿ ದೊರೆಕೊಳಲ್ ಮೂರು ಯುಗಗಳ್ ಕಳೆದು
ಕಲಿಕಾಲ ಬೇಕಾಯ್ತು! ಧನ್ಯ, ಕಲಿಯುಗ, ಧನ್ಯ!