ಅಲ್ಲಿ ಶಶಿ ಸೂರ್ಯರಿಲ್ಲ;
ಅಲ್ಲಿ ನಿಶೆ ದಿನಗಳಿಲ್ಲ;
ಆ ಮಹಾ ಶೂನ್ಯದೊಳು
ಬಿಂಬಬ್ರಹ್ಮಾಂಡಮಹ!
ತೇಲುತಿದೆ ಛಾಯೆಯಂತೆ!

ಸುಳಿಮನದ ಶೂನ್ಯದಲ್ಲಿ
ಅಚಿರಮಾದೀ ವಿಶ್ವವೂ
ಮುಳುಗುತಿದೆ ತೇಲುತಿದೆ
ಮುಳುಮುಳುಗಿ ತೇಲಿ ಸದಾ
‘ಅಹಮಸ್ಮಿ’ ಸೆಳವಿನಲ್ಲಿ!

ಮೆಲುಮೆಲನೆ ಆ ಛಾಯೆಯೂ
ಬ್ರಹ್ಮಾಂಡ ಗತಮಾಗೆ ತಾಂ
‘ನಾನಿಹೆನು’ ‘ನಾನಿಹೆನು’
ಎಂಬಾ ಪ್ರವಾಹವೊಂದೇ
ಪ್ರವಹಿವುದು ಬಿಡುವಿಲ್ಲದೆ!

ಅಹಹ! ಅದು ನಡೆಗೆಟ್ಟಿತು!
ಹೊನಲು ಮುಂಬರಿಯದಿಹುದು!
ಶೂನ್ಯ ತಾಂ ಶೂನ್ಯಗತ!
ವಾಙ್ಮನಾತೀತಮದು!
ಸಿದ್ಧನಿಗೆ ವೈದ್ಯಮಹುದು!