ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ,
ರಾಮಕೃಷ್ಣರ ಭೀಮಶಿಷ್ಯನೆ, ವೀರವೇದಾಂತಿ,
ಭಾರತಾಂಬೆಯ ಧೀರಪುತ್ರನೆ, ಸಾದುಭೈರವನೆ,
ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯಜಯತು!

ಚಿದ್ ಋತಾಗ್ನಿಯ ಚಂಡಕಾಂತಿಯೆ, ಮೇರುಸನ್ಯಾಸಿ,
ಭರತಖಂಡದ ನಂದಿದಿದ್ದಲಿಗಿತ್ತೆ ತೇಜವನು;
ಬೊಮ್ಮದಂಬುಧಿಗಲೆಯನೀಯುವ ಭರದ ಬಿರುಗಾಳಿ,
ಬೂದಿಮುಚ್ಚಿದ ಭರತಭೂಮಿಯನೂದಿ ಬೆಳಗಿಸಿದೆ!

ಭರತಖಂಡದೊಳರಚುತಲೆಯುವ ಮನುಜಕುರಿಗಳಿಗೆ
ಸಿಂಹಹೃದಯವನಿತ್ತು ಗರ್ಜಿಸುವಂತೆ  ನೀ ಮಾಡಿ
ಕುರಿಯದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ,
ಸಿಂಹಹೃದಯನೆ, ಶ್ರೀ ವಿವೇಕಾನಂದ ಯೋಗೀಂದ್ರ!

ನಿಶೆಯ ಗಗನದೊಳುರಿವ ತಾರೆಯ ತೆರದಿ ರಂಜಿಸಿದೆ;
ಜಗದ ಕಂಗಳು ನೋಡಲಾರದೆ ನಿನ್ನ ತೇಜವನು
ವಿಸ್ಮಯಾಶ್ಚರ್ಯದಲಿ ನಿಂತುವು ಮೂಗುವೆರಗಾಗಿ!
ನಿನ್ನ ಮಹಿಮೆಯ ಸವಿವ ಸೆರೆಯೇ ಮುಕ್ತಿ, ವರಯೋಗಿ!

ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿ,
ಕಾರ ಮಿಂಚನು ನಗುವ ತೇಜವು ನಿನ್ನ ಮೈಕಾಂತಿ,
ಆಳವಂಬುಧಿಯಾಳ, ಮೇರೆಯೆ ನಭದ ವಿಸ್ತಾರ;
ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ!

ಬ್ರಹ್ಮವಿದ್ಯೆಯ ದಿವ್ಯದೀಪ್ತಿಯ ದೇಶದೇಶದಲಿ
ಹರಡಿ, ಅಭಯವನೀಯುತಮೃತತವ ಸುರಿದು ಪಾಲಿಸಿದೆ;
ಗಗನಕೆತ್ತಿದೆ ಭಾರತಾಂಬೆಯ ಕೀರ್ತಿಕೇತನವ;
ಓಜೆ ತುಂಬಿಹುದಾರ್ಯಮಾತೆಯ ಶ್ರೀನಿಕೇತನವ!

ನಿನ್ನ ಹೆಸರದೆ ಶಕ್ತಿಯಿಯುವ ದಿವ್ಯತರಮಂತ್ರ;
ನಿನ್ನ ಮಾರ್ಗವೆ ಮುಕ್ತಿದಾಯಕವಾದ ಚಿರಮಾರ್ಗ;
ನಮ್ಮ ಹೃದಯಕೆ ಹೃದಯ ನೀನಯ್, ಶಕ್ತಿಸಾಗರನೆ,
ಯಮನ ನುಂಗಿದ ರಾಜಯೋಗಿಯೆ, ರುದ್ರ ಸನ್ಯಾಸಿ!

ನಿನ್ನ ಧೈರ್ಯ ಸ್ಥೈರ್ಯ ದೃಢತೆಯು, ನಿನ್ನ ಪವಿಶಕ್ತಿ
ಭಾರತೀಯರಿಗಿಂದು ಬೇಕಾಗಿಹುದು, ದಿವ್ಯಾತ್ಮ!
ರುದ್ರನರ್ತನವೆಸಗು ಹೃದಯದಿ, ಬುದ್ಧಿಭೈರವನೆ;
ರುದ್ರಭೂಮಿಗಳಾಗಲೆಮ್ಮೀ ಕ್ಷುದ್ರ ಹೃದಯಗಳು!

ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ,
ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ,
ಭಾರತಾಂಬೆಯ ಧೀರಪುತ್ರನೆ, ಸಾಧುಭೈರವನೆ,
ಸ್ಥೈರ್ಯದಚಲವೆ, ಧೈಯುದಂಬುಧಿ, ಜಯತು! ಜಯಜಯತು!