ಹಾರೈಸು ಹಾರೈಸು ಹಾರೈಸು, ಜೀವ:
ಹಾರೈಸು ನೀನಾಗುವನ್ನೆಗಂ ದೇವ!

ಹಾರೈಸಿ ಹಾರೈಸಿ ಹಾರೈಸಿ
ಅನ್ನ ತಾನದುದೈ ಪ್ರಾಣ;
ಹಾರೈಸಿ ಹಾರೈಸಿ ಹಾರೈಸಿ
ಹಾರಿದುದೊ ನೀರಧಿಯ ಮೀನ!
ಹಾರೈಸಿ ಹಾರೈಸಿ ಹಾರೈಸಿ
ಪ್ರಾಣಿಗುದಿಸಿತು ಮನೋಜ್ಞಾನ;
ಹಾರೈಸಿ ಹಾರೈಸಿ ಹಾರೈಸಿ
ಸಿದ್ಧಿಯಾಯ್ತಾತ್ಮವಿಜ್ಞಾನ!

ಹಾರೈಸಿ ಹಾರೈಸಿ ಹಾರೈಸಿ
ಹಸುರನುಸುರ್ದುವೊ ಕಲ್ಲುಮಣ್ಣು;
ಹಾರೈಸಿ ಹಾರೈಸಿ ಹಾರೈಸಿ
ಕುರುಡುಜಡಕುದಿಸಿತಯ್ ಕಣ್ಣು!
ಹಾರೈಸಿ ಹಾರೈಸಿ ಹಾರೈಸಿ
ಚಿತ್ ಉರುಳ್ದುದು ಸುತ್ತಿಸುರುಳಿ;
ಹಾರೈಸಿ ಹಾರೈಸಿ ಹಾರೈಸಿ
ಮೃತ್ ಅರಳ್ವುದೊ ಅತ್ತೆ ಮರಳಿ!