ಅದು ಸೆಪ್ಟೆಂಬರ್ ೧, ೨೦೦೯, ಸಂಜೆ ೬ ಗಂಟೆ ಸಮಯ. ಫಲ್ಗುಣಿಯಲ್ಲಿ ಸಾವಯವ ಗ್ರಾಮದ ಹೇಮಾವತಿ ಸಾವಯವ ಕೃಷಿಕರ ಸಂಘದ ಸಭೆ. ಸದಸ್ಯರೆಲ್ಲಾ ಸಭೆಯಲ್ಲಿದ್ದಾರೆ. ತಿಂಗಳ ಕೃಷಿ ಚಟುವಟಿಕೆಗಳು, ಲೆಕ್ಕಾಚಾರಗಳು, ಯೋಜನೆಗಳು, ಕ್ರಿಯಾ ಯೋಜನೆಗಳು.. ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಯಿತು.

ಇನ್ನೇನು ಸಭೆ ಬರ್ಖಾಸ್ತು ಆಗಬೇಕು ಅಷ್ಟರಲ್ಲಿ ಜಲೀಲ್ ಸಾಬ್ ‘ಈ ಬಾರಿ ನಮ್ಮ ಭತ್ತದ ಗದ್ದೆಯಲ್ಲಿ ಕಳೆ ಕಡಿಮೆಯಾಗಿದೆ’ ಅಂತ ಒಂದು ಮಾತನ್ನು ತೂರಿಬಿಟ್ಟರು. ಜಲೀಲ್ ಮಾತು ಮುಗಿಯುಷ್ಟ್ಟರಲ್ಲೇ ರೈತ ಕೋಡದಿಣ್ಣೆಯ ಗೋಡ್ವಿನ್ ‘ಹೌದು, ನಮ್ಮ ಗದ್ದೆಯಲ್ಲೂ ಕಳೆ ಕಡಿಮೆಯಾಗಿದೆ. ಒಂದು ಹಂತದ ಆಳಿನ ಕೂಲಿ ಉಳಿಯಿತು ಮಾರಾಯ್ರೆ ಎಂದರು’. ಸಮಾಪ್ತಿಯಾಗುತ್ತಿದ್ದ ಸಭೆಯಲ್ಲಿ ‘ಅಜೋಲಾ ಕುರಿತು ಚರ್ಚೆ’ ಶುರುವಾಯ್ತು.

ಅಲ್ಲಿಯವರೆವಿಗೂ ಫಲ್ಗುಣಿ ಗ್ರಾಮಸ್ಥರಿಗೆ ‘ಅಜೋಲಾ ಎಂಬ ಕಳೆ ನಿಯಂತ್ರಕ ಪಾಚಿ ಸಸ್ಯದ’ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಕೆಲವರಂತೂ ಇದನ್ನು ನೋಡಿರಲೇ ಇಲ್ಲ. ಈ ಬಗ್ಗೆ ಕೇಳೂ ಇರಲಿಲ್ಲ.

ಜಲೀಲ್ ಮತ್ತು ಗೋಡ್ವಿನ್ ಅಜೋಲಾ ಪರಿಣಾಮವನ್ನು ವಿವರಿಸುತ್ತಿದ್ದಂತೆ, ಸಭೆಯಲ್ಲಿದ್ದ ಸದಸ್ಯರೆಲ್ಲ ‘ಈ ಬಾರಿ ನಮ್ಮ ಭತ್ತದ ಗದ್ದೆಗಳಿಗೂ ಅಜೋಲಾ ಬಿಡೋಣ. ಹೇಗೂ ಈಗಷ್ಟೇ ಸಸಿ ನಾಟಿ ಮಾಡಿದ್ದೇವೆ’ ಅಂತ ಸಭೆಯ ಮುಂದೆ ಪ್ರಸ್ತಾವನೆ ಇಟ್ಟರು. ಸದಸ್ಯರ ಒಗ್ಗಟ್ಟಿನ ಈ ಯೋಜನೆಗೆ ಸಭೆ ಅಸ್ತು ಎಂದಿತು. ಸಭೆಯಲ್ಲಿದ್ದ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ ‘ಎಲ್ಲರೂ ಒಟ್ಟಾಗಿ ಒಂದೇ ದಿನ ಅಜೋಲಾವನ್ನು ಗದ್ದೆಗೆ ಬಿಟ್ಟರೆ ಹೇಗೆ. ಅದೊಂದು ಆಂದೋಲನ ರೀತಿಯಾಗುತ್ತದಲ್ಲ’ ಎಂದರು. ಹೊಸ ವಿಚಾರವಾದರೂ, ಒಗ್ಗಟ್ಟಿನ ಕೆಲಸಕ್ಕೆ ಸದಸ್ಯರೆಲ್ಲ ಒಪ್ಪಿಗೆ ನೀಡಿದರು. ಸಭೆಯಲ್ಲೇ ಅಜೋಲಾ ಆಂದೋಲನ ರೂಪುಗೊಂಡಿತು. ದಿನ, ಕಾಲ, ಸೇರುವ ಸ್ಥಳ, ಅಜೋಲಾ ಎಷ್ಟು ಬೇಕೆಂಬ ಲೆಕ್ಕಚಾರಗಳ ಚರ್ಚೆಯಾಯಿತು.

ಅಂದು ಸೆಪ್ಟೆಂಬರ್ ೪, ೨೦೦೯, ಬೆಳಿಗ್ಗೆ ೧೦ ಗಂಟೆ.

ಹೇಮಾವತಿ ಸಾವಯವ ಕೃಷಿಕರ ಸಂಘದ ಸದಸ್ಯರೆಲ್ಲಾ ಕೋಡದಿಣ್ಣೆಯ ದಿಬ್ಬದಲ್ಲಿ ನಿಂತರು. ಅದು ಫಲ್ಗುಣಿಯ ಗದ್ದೆ ಬಯಲು ಆರಂಭವಾಗುವ ಸ್ಥಳ. ಎಲ್ಲ ರೈತರ ಕೈಯಲ್ಲೂ ತನ್ನ ಮನೆಯಲ್ಲಿ ಬೆಳೆದ ಅಜೋಲಾವಿತ್ತು.

ಮೇಲ್ಭಾಗದ ಗದ್ದೆಯಿಂದ ಒಬ್ಬೊಬ್ಬರೇ ಅಜೋಲಾವನ್ನು ಗದ್ದೆಗಳಲ್ಲಿ ಬಿಡಲಾರಂಭಿಸಿದರು. ೧೦ ಗಂಟೆಗೆ ಆರಂಭವಾದ ಈ ಆಂದೋಲನ ಮಧ್ಯಾಹ್ನ ೧ ಗಂಟೆಯವರೆಗೂ ನಡೆಯಿತು. ಸುಮಾರು ೨೫ ಎಕರೆ ಗದ್ದೆಗೆ ಅಜೋಲಾವನ್ನು ಬಿಡಲಾಯಿತು. ಭತ್ತದ ಸಸಿ ನಾಟಿ ಮಾಡಿ ಒಂದು ವಾರ ಕಳೆದಿದ್ದರಿಂದ ಗದ್ದೆಯಲ್ಲಿ ಸಾಕಷ್ಟು ನೀರು ನಿಂತಿತ್ತು. ಅಜೋಲಾ ಬಿಡುತ್ತಿದ್ದಂತೆ ವೇಗವಾಗಿ ಎಲ್ಲ ಪಟ್ಟೆಗಳಲ್ಲೂ ಹರಡಿಕೊಂಡಿತು. ಸಾವಯವ ಕೃಷಿ ಬೇಡ ಎಂದು ಹೇಳುತ್ತಿದ್ದವರ ಗದ್ದೆಗಳಲ್ಲೂ ಅಜೋಲಾ ಹರಿದಾಡುತ್ತಿತ್ತು.

ಆಂದೋಲನ ಮುಗಿದು ಹತ್ತು ಹನ್ನೆರಡು ದಿನವಾಯಿತು. ಕಳೆ ಬೆಳೆದಿರುವುದನ್ನು ನೋಡಿಕೊಂಡು ಬರಲು ರೈತರೆಲ್ಲ ಗದ್ದೆಯ ಕಡೆಗೆ ಹೊರಟರು. ಅಲ್ಲೊಂದು ಅವರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಬಹುತೇಕ ಗದ್ದೆ ಬಯಲೆಲ್ಲಾ ಅಜೋಲಾ ಮಯವಾಗಿತ್ತು. ಇಪ್ಪತ್ತೈದು ಎಕರೆಗೆ ಅಜೋಲಾ ಬಿಟ್ಟಿದ್ದರೆ, ಅದು ಎಪ್ಪತ್ತೈದು ಎಕರೆಗೆ ಹರಡಿಕೊಂಡಿತ್ತು.

ಭತ್ತ ಕೊಯ್ಲಿಗೆ ಬರುವ ಹೊತ್ತಿಗೆ ಪ್ರತಿ ತೆಂಡೆಯ ಬುಡದಲ್ಲಿ ಅಜೋಲಾ ಹಸಿರು ಚಾಪೆಯಂತೆ ನೆಲವನ್ನು ಅಪ್ಪಿಕೊಂಡಿತ್ತು. ಹೀಗಾಗಿ ಗದ್ದೆಯಲ್ಲಿ ಕಳೆ ಬೆಳೆಯಲು ಅವಕಾಶವೇ ಇರಲಿಲ್ಲ. ’ಆ ವರ್ಷ ನಮಗೆ ಒಂದು ಹಂತದ ಕಳೆ ತೆಗೆಸುವ ಕೂಲಿ ಉಳಿಯಿತು’ ಎಂದರು ಜಲೀಲ್ ಸಾಬ್. ‘ಗದ್ದೆಗೆ ಅಜೋಲಾ ಬಿಟ್ಟಿದ್ದರಿಂದ ಭತ್ತದ ಇಳುವರಿಯೂ ಹೆಚ್ಚಾಯಿತು’ ಎಂದರು ಗೋಡ್ವಿನ್. ಸಾವಯವ ಕೃಷಿಯಲ್ಲೇ ಫಲ್ಗುಣಿಯ ರೈತರೆಲ್ಲ ಭತ್ತ ಬೆಳೆಯುತ್ತಿದ್ದಾರೆ. ಅವರಿಗೆ ಮೊದಲನೇ ವರ್ಷ ಇಳುವರಿ ಕೊರತೆಯಾಗಿತ್ತು. ಎರಡನೇ ವರ್ಷ ಅಜೋಲಾ ಬಿಟ್ಟಿದ್ದರು. ಹಿಂದಿನ ವರ್ಷದ ಇಳುವರಿ ಕೊರತೆಯನ್ನು ಅಜೋಲಾ ತುಂಬಿಕೊಟ್ಟಿತ್ತು.

ಈ ಯಶಸ್ಸಿನಿಂದ ಫಲ್ಗುಣಿ ರೈತರು ಖುಷಿಯಲ್ಲಿದ್ದಾರೆ. ಇವತ್ತಿಗೂ ಗದ್ದೆಗಳಲ್ಲಿ ಅಜೋಲಾ ಬೆಳೆಸುವ ಮತ್ತು ಬಳಸುವ ಪ್ರಕ್ರಿಯೆ ಮುಂದುವರಿಸಿದ್ದಾರೆ.