‘ಏನ್ರಿ ಸೋಮಶೇಖರ್ ಇತ್ತೀಚೆಗೆ ಅರ್ಧ ಲೀಟರ್ ಹಾಲು ಹೆಚ್ಚಾಗಿ ಹಾಕ್ತಿದ್ದೀರಿ’? ಬಾಳ್ಳುಪೇಟೆ ಹಾಲಿನ ಡೇರಿ ಕಾರ್ಯದರ್ಶಿ ಅಚ್ಚರಿಯಿಂದ ಪ್ರಶ್ನಿಸಿದರು. ಪ್ರಶ್ನೆ ಕೇಳುತ್ತಲೇ ಖುಷಿಯಾದ ಸೋಮಶೇಖರ್, ‘ನಮ್ಮ ಆಕಳಿಗೆ ಸ್ವಲ್ಪ ದಿವಸದಿಂದ ಬೂಸಾ ಜೊತೆಗೆ ಅರ್ಧ ಕೆ.ಜಿ ಅಜೋಲಾ ಕೊಡ್ತಿದ್ದೀವಿ. ಅದಕ್ಕೆ ಇರಬೇಕು. ಅರ್ಧ ಲೀಟರ್ ಹಾಲು ಹೆಚ್ಚಾಗಿರೋದು’ ಎಂದರು. ಅಲ್ಲೇ ನಿಂತಿದ್ದ ನಿಂಗರಾಜು, ‘ನಮ್ ಕೋಳಿಗಳೂ ಅಜೋಲಾ ತಿಂತಾವಯ್ಯ. ಅದನ್ನು ತಿನ್ನೋಕೆ ಶುರುಮಾಡಿದ ಮೇಲೆ ಅವುಗಳ ತೂಕ, ಬೆಳವಣಿಗೆ ಕೂಡ ಹೆಚ್ಚಾಗಿದೆ’ ಅಂತ ಸೋಮಣ್ಣನ ಮಾತಿಗೆ ತಮ್ಮ ಮಾತನ್ನು ಪೋಣಿಸಿದರು.

ಯೆಡೆಹಳ್ಳಿ ಸೋಮಶೇಖರ್, ನಿಂಗರಾಜು, ಫಲ್ಗುಣಿಯ ಮಲ್ಲೇಶಗೌಡ್ರು,

ಗೋಪಾಲ್.. ಹೀಗೆ ಈ ಎರಡು ಊರಿನ ರೈತರು ‘ಅಜೋಲಾ’ ಉಪಯೋಗ, ಪರಿಣಾಮದ ಬಗ್ಗೆ ಅಧಿಕೃತ ವಕ್ತಾರರಂತೆ ಮಾತನಾಡುತ್ತಾರೆ. ಒಬ್ಬರು ‘ಅಜೋಲಾ ತಿನ್ನಿಸಿದ್ದರಿಂದ ಆಕಳುಗಳಲ್ಲಿ ಹಾಲಿನ ಇಳುವರಿ ಹೆಚ್ಚಿದೆ’ ಎಂದರೆ ಇನ್ನು ಕೆಲವರು ‘ಅಜೋಲಾವನ್ನು ಗದ್ದೆಗೆ

ಬಿಟ್ಟಿದ್ದರಿಂದ ಕಳೆ ನಿಯಂತ್ರಣವಾಯಿತು. ಆಳುಗಳ ಕೂಲಿ ಉಳಿಯಿತು’ ಎನ್ನುತ್ತಿದ್ದಾರೆ. ಮೂರು ವರ್ಷದ ಹಿಂದೆ ಭೂಮಿ ಸಂಸ್ಥೆ ಈ ಎರಡು ಗ್ರಾಮಗಳಲ್ಲಿ ಸಾವಯವ ಗ್ರಾಮ ಯೋಜನೆ ಅನುಷ್ಠಾನಗೊಳಿಸಿದಾಗ ಅಜೋಲಾವನ್ನು ಪರಿಚಯಿಸಿತು. ಈಗ ಅಜೋಲಾ ಎನ್ನುವುದು ಈ ಗ್ರಾಮಗಳಲ್ಲಿ ಆಹಾರ, ಗೊಬ್ಬರ ಹಾಗೂ ಮನೆಯ ಮುಂದಿನ ಅಲಂಕಾರಿಕ ರಚನೆಯಾಗಿದೆ.

ಏನಿದು ಅಜೋಲಾ ?

ಅಜೋಲಾ – ನೀರಿನಲ್ಲಿ ವೇಗವಾಗಿ ಬೆಳೆಯುವ ‘ಜಲಸಸ್ಯ’. ನೀಲಿ-ಹಸಿರು ಆಲ್ಗೆ ಅಥವಾ ಪಾಚಿಯನ್ನು ಹೋಲುವ ಸಸ್ಯ. ನೋಡುವುದಕ್ಕೆ ಚಿಗುರಿದ ಎಲೆಯಂತೆ ಕಾಣುವ ಈ ಸಸ್ಯದ ಮೇಲ್ಭಾಗ ನೀರಿನ ಮೇಲೆ ಹರಡಿಕೊಂಡಿರುತ್ತದೆ. ಬೇರುಗಳು ನೀರಿನಾಳಕ್ಕೆ ಇಳಿದು ಕೆಸರಿನಲ್ಲಿ ಊರಿಕೊಳ್ಳುತ್ತವೆ. ಈ ಸಸ್ಯಮೂಲದಿಂದ ಸಂತಾನೋತ್ಪತ್ತಿ ಸುಲಭ. ಸೂಕ್ತ ಹವಾಮಾನದಲ್ಲಿ ಬೆಳೆಸಿದರೆ ಶೀಘ್ರ ಉತ್ಪಾದನೆ ಜೊತೆಗೆ ಇಳುವರಿಯೂ ಹೆಚ್ಚು.

ಅಜೋಲಾದಲ್ಲಿ ಆರು ಜಾತಿಗಳಿವೆ. ಅಜೋಲಾ ಪಿನ್ನಾಟ, ಅಜೋಲಾ

ಫಿಲಿಕ್ಯುಲೊಯಿಡಿಸ್, ಅಜೋಲಾ ಮಕೆಸಿಕಾನ, ಅಜೋಲಾ ಕರೊಲಿನಿಯಾನ, ಅಜೋಲಾ ಮೈಕ್ರೋಫಿಲ್ಲಾ, ಅಜೊಲಾ

ನಿಲೋಟಿಕಾ. ಅಜೋಲಾ ಪಿನ್ನಾಟ ಎಂಬ ಜಾತಿ ಏಷ್ಯಾ ಮತ್ತು ಫಿಲಿಪೈನ್ಸ್‌ಗಳಲ್ಲಿ ಹೆಚ್ಚಾಗಿದೆ. ಈ ಸಸ್ಯದಲ್ಲಿ ಅಧಿಕ ಪ್ರೊಟೀನ್, ವಿಟಮಿನ್, ಖನಿಜಾಂಶಗಳು ಮತ್ತು ಅಮೈನೋ ಆಮ್ಲಗಳಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ತಜ್ಞರ ಪ್ರಕಾರ ಅಜೋಲಾದಲ್ಲಿ ಶೇ ೩ ರಿಂದ ೫ರಷ್ಟು ಸಾರಜನಕ, ಶೇ ೧ ರಿಂದ ೧.೫ರಷ್ಟು ರಂಜಕ ಮತ್ತು ಶೇ ೨ ರಿಂದ ೩ರಷ್ಟು ಪೊಟಾಷಿಯಂ ಇದೆ. ಉಳಿದ ೯೩ ಭಾಗದಷ್ಟು ನೀರು ಇದೆ. ಈ ಸಸ್ಯವನ್ನು ಒಣಗಿಸಿದರೆ ಅದರಲ್ಲಿ ಶೇ. ೩೦ರಷ್ಟು ಪ್ರೊಟೀನ್ ಕೂಡ ಲಭ್ಯವಾಗುತ್ತದೆ. ಹಾಗಾಗಿ ಅಜೋಲಾ ಮೇವು ಹಾಗೂ ಗೊಬ್ಬರವಾಗಿಯೂ ಬಳಕೆಯಾಗುತ್ತದೆ.

ಎಲ್ಲಿ ಬೆಳೆಯಬಹುದು ?

ಅಜೊಲ್ಲಾವನ್ನು ‘ಇಂಥದ್ದೇ ಸ್ಥಳದಲ್ಲಿ, ಇಷ್ಟೇ ಅಳತೆಯಲ್ಲೇ ಬೆಳೆಸಬೇಕೆಂಬ’ ನಿಯಮವಿಲ್ಲ. ಅಂಗೈ ಅಗಲದ ಬಟ್ಟಲಿಂದ, ಮನೆ ಅಂಗಳ, ಮರದ ಕೆಳಗೆ, ಕೊಟ್ಟಿಗೆ ಹತ್ತಿರ, ಬಚ್ಚಲು ಹಿಂಭಾಗ, ಹಿತ್ತ್ತಿಲು.. ಹೀಗೆ ಎಲ್ಲಿ ಬೇಕಾದರೂ ಆಗಬಹುದು. ಆದರೆ ಗುಂಡಿ ತೆಗೆಯುವ ಜಾಗದಲ್ಲಿ ನೆರಳಿರಬೇಕು. ನೆರಳಿಲ್ಲದಿದ್ದರೆ ಅಜೋಲಾ ಕೆಂಪಾಗಿ, ಸತ್ತು ಹೋಗುತ್ತದೆ. ಪೋಷಕಾಂಶ ಕ್ಷೀಣಿಸುತ್ತದೆ. ಗುಂಡಿಗೆ ಹೊದಿಸಿರುವ ಪ್ಲಾಸ್ಟಿಕ್ ಬಿಸಿಲಿಗೆ ಒಣಗಿ ಒಣಗಿ ಬಹುಬೇಗ ಹರಿದುಹೋಗುತ್ತದೆ.

ಮನೆಯ ಹಿತ್ತಲಿನಲ್ಲಿ ಒಂದು ದೊಡ್ಡ ಗುಂಡಿ ತೆಗೆದು, ಅದಕ್ಕೆ ಪ್ಲಾಸ್ಟಿಕ್ ಹಾಳೆ ಹೊದ್ದಿಸಿ, ಅದರೊಳಗೆ ನೀರು ನಿಲ್ಲಿಸಿ ಬೆಳೆಸುವುದು ಸಾಮಾನ್ಯ ಕ್ರಮ. ಇದು ರೈತರಿಗೆ ಅನು ಕೂಲ ವಾದ, ಸರಳ ಹಾಗೂ ಶಾಶ್ವತ ವಿಧಾನ ಕೂಡ.

ಮಹಿಳೆಯರೂ ಮಾಡಿಕೊಳ್ಳ್ಳಬಹುದಾದ ಈ ವಿಧಾನಕ್ಕೆ ಹೊರಗಿನಿಂದ ಕೊಳ್ಳುವ ಏಕೈಕ ಪರಿಕರವೆಂದರೆ ಅದು ಪ್ಲಾಸ್ಟಿಕ್ ಮಾತ್ರ.

ದೇಶದ ವಿವಿಧೆಡೆ ಇತರೆ ವಿಧಾನಗಳಲ್ಲಿಯೂ ಅಜೋಲಾ ಬೆಳೆಸಲಾಗುತ್ತಿದೆ. ಕೆಲವು ಸಂಶೋಧನಾ ಸಂಸ್ಥೆಗಳು ಅಜೋಲಾ ಬೆಳೆಸಲೆಂದೇ ವಿಶೇಷ ಟಾರ್ಪಾಲಿನ್‌ಗಳನ್ನು ಅನುಶೋಧಿಸಿವೆ. ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ – ‘ಸ್ವಾಭಾವಿಕ ಸಂಪನ್ಮೂಲ ಅಭಿವೃದ್ಧಿ ಯೋಜನೆ’ಯಡಿ ದಪ್ಪನೆಯ ‘ಅಲ್ಟ್ರಾ ವೈಲೆಟ್ ಸ್ಟೆಬಲೈಸ್ಡ್ ಪ್ಲಾಸ್ಟಿಕ್ ಶೀಟ್’ ಅನ್ನು ಆವಿಷ್ಕರಿಸಿದೆ.

ಬೆಳೆಯುವ ವಿಧಾನ :

೧.  ನೆರಳಿರುವ ಸ್ಥಳದಲ್ಲಿ ೧೦ ಅಡಿ ಉದ್ದ, ಮುಕ್ಕಾಲು ಅಡಿ ಆಳ ಹಾಗೂ ಮೂರರಿಂದ ಮೂರೂವರೆ ಅಡಿ ಅಗಲದ ಅಳತೆಯಲ್ಲಿ ಗುಂಡಿ ತೆಗೆಯಿರಿ. (ಇದು ಮಾದರಿ ವಿಸ್ತೀರ್ಣ. ನಿಮ್ಮ ಅಗತ್ಯತೆಗೆ ತಕ್ಕಂತೆ ಅಜೋಲಾ ಘಟಕದ ವಿಸ್ತೀರ್ಣ ವಿಸ್ತರಿಸಿಕೊಳ್ಳಬಹುದು)

೨. ಗುಂಡಿಯೊಳಗಿನ ಮಣ್ಣನ್ನು ಪೂರ್ಣ ಖಾಲಿ ಮಾಡಿ. ಅದೇ ಮಣ್ಣಿನಿಂದ ಗುಂಡಿಯ ಮೇಲ್ಭಾಗದಲ್ಲಿ ಸುತ್ತ ದಿಂಡು ಕಟ್ಟಿ. ಗುಂಡಿಯ ಗೋಡೆಗೆ ಪ್ಲಾಸ್ಟಿಕ್ ಹಾಳೆ ತೊಡಿಸಿ. ಗುಂಡಿಯ ಅಳತೆಗಿಂತ ಪ್ಲಾಸ್ಟಿಕ್ ಹಾಳೆ ದೊಡ್ಡದಾಗಿರಲಿ. ಒಂದು ಸೂಚನೆ; ಪ್ಲಾಸ್ಟಿಕ್ ಹಾಳೆಯ ಸಾಂದ್ರ್ರತೆ (ಡೆನ್ಸಿಟಿ) ದಪ್ಪವಿದ್ದಷ್ಟೂ ಒಳಿತು.

೩. ಪ್ಲಾಸ್ಟಿಕ್ ಹಾಳೆ ಹೊದಿಸುವ ಮುನ್ನ ಗುಂಡಿ ತಳಭಾಗದಲ್ಲಿ ಮರದ ಬೇರುಗಳಿರುವುದನ್ನು ಖಚಿತಪಡಿಸಿಕೊಳ್ಳಿ. ಈ ಬೇರುಗಳಿದ್ದರೆ ಪ್ಲಾಸ್ಟಿಕ್ ಹರಿಯುತ್ತದೆ. ಅಂಥ ಸಮಯದಲ್ಲಿ ಬೇರು ಮುಚ್ಚುವವರೆಗೂ (ಅರ್ಧ ಅಡಿ) ಮರಳುನ್ನು ಸಮತಟ್ಟಾಗಿ ಹರಡಿ.

೪. ಗುಂಡಿಗೆ ಹಾಳೆ ಹೊದಿಸಿದ ನಂತರ ಮೇಲ್ಭಾಗದಲ್ಲಿ ಗುಂಡಿಯ ಸುತ್ತ ಕಲ್ಲುಗಳನ್ನು ಜೋಡಿಸಿ (ಚಿತ್ರ ನೋಡಿ). ಹೀಗೆ ಮಾಡುವುದರಿಂದ ಪ್ಲಾಸ್ಟಿಕ್ ಹಾಳೆ ಗಾಳಿಗೆ ಹಾರಿ ಹೋಗುವುದನ್ನು ತಪ್ಪಿಸಬಹುದು.

೫. ಗುಂಡಿಯ ಮುಕ್ಕಾಲು ಭಾಗಕ್ಕೆ ನೀರು ತುಂಬಿ. (ರಾಸಾಯನಿಕ, ಕೀಟನಾಶಕದಂತಹ ಅಪಾಯಕಾರಿ ವಸ್ತುಗಳು ಸೇರಿರದ ಯಾವುದೇ ನೀರಾದರೂ ಪರವಾಗಿಲ್ಲ).

೬. ಒಂದೇ ಭಾಗದಲ್ಲಿ ನೀರು ಸುರಿಯಬೇಡಿ. ಪ್ಲಾಸ್ಟಿಕ್ ಹರಿಯತ್ತದೆ. ಗುಂಡಿಯ ಸುತ್ತಲೂ ನೀರು ಸುರಿಯಿರಿ.

೭.  ಗುಂಡಿಯ ತಳಭಾಗದಲ್ಲಿ ಒಂದು ಇಂಚು ಫಲವತ್ತಾದ ಒಂದು ಬೊಗಸೆ ಮಣ್ಣಿನ ಹುಡಿಯನ್ನು ತೆಳ್ಳಗೆ ಹರಡಿ.

೮. ಒಂದು ಬುಟ್ಟಿ (ನಾಲ್ಕರಿಂದ ಐದು ಕೆ.ಜಿ) ಆಕಳ ಸಗಣಿಯನ್ನು (ಹಸಿಯಾದರೆ ಒಳ್ಳೆಯದು. ೨ ರಿಂದ ಮೂರು ದಿನದ್ದಾದರೂ ಪರವಾಗಿಲ್ಲ)

ನೀರಿನೊಂದಿಗೆ ಬೆರೆಸಿ ಸ್ಲರಿ (ಬಗ್ಗಡ) ಮಾಡಿಕೊಳ್ಳಿ (ಗೋಬರ್ ಗ್ಯಾಸ್ ಸ್ಲರಿಯಾಗಬಹುದು).

೯.ಒಂದು ಬೊಗಸೆ ಪರಿಶುದ್ಧವಾದ, ಆರೋಗ್ಯಪೂರ್ಣ ಅಜೋಲಾವನ್ನು ಗುಂಡಿಗೆ ಸುರಿಯಿರಿ.

೧೦. ಒಂದು ವಾರ ಅಥವಾ ಎಂಟನೇ ದಿನ ಅಜೋಲಾ ಗುಂಡಿಯತ್ತ ಕಣ್ಣಾಡಿಸಿ. ಗುಂಡಿ ತುಂಬಾ ಅಚ್ಚ ಹಸುರಿನ ಚಾಪೆಯಂತೆ ಅಜೋಲಾ ಹರಡಿಕೊಂಡಿರುತ್ತದೆ. ಹತ್ತರಿಂದ ಹನ್ನೆರಡು ದಿನಗಳ ನಂತರ ಪ್ರತಿ ದಿನ ಒಂದರಿಂದ ಎರಡು ಕೆ.ಜಿಯಷ್ಟು ಅಜೋಲಾವನ್ನು ಬೊಗಸೆಯಲ್ಲಿ ಎತ್ತಿ, ಪಾತ್ರೆಯಲ್ಲಿ ಸಂಗ್ರಹಿಸಿಕೊಂಡು ಬಳಸಿಕೊಳ್ಳಬಹುದು.

೧೧. ಅಜೋಲಾವನ್ನು ಒಂದೇ ಭಾಗದಿಂದ ತೆಗೆಯಬೇಡಿ. ಒಂದು ಸಾರಿ ಪೂರ್ವದಿಂದ ತೆಗೆದರೆ, ಮತ್ತೊಂದು ಸಾರಿ ಪಶ್ಚಿಮ, ನಂತರ ಉತ್ತರ, ದಕ್ಷಿಣ.. ಹೀಗೆ ಎಲ್ಲಾ ದಿಕ್ಕುಗಳಿಂದಲೇ ತೆಗೆಯಿರಿ.

ಬೆಳೆಯುವ ಮುನ್ನ ಗಮನಿಸಿ:

೧. ಇಳಿಜಾರು ಪ್ರದೇಶದಲ್ಲಿ ಅಜೋಲಾ ಗುಂಡಿ ತೆಗೆಯಬೇಡಿ. ಹೊರಗಿನ ನೀರು ಗುಂಡಿಯೊಳಗೆ ನುಗ್ಗಿದರೆ ಫಲಿತ ಅಜೋಲ್ಲವೆಲ್ಲಾ ‘ಮಣ್ಣುಪಾಲಾಗುತ್ತದೆ’ ಜೊತೆಗೆ ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ತುಂಬಿಕೊಳ್ಳುತ್ತದೆ. ಹಾಗಾಗಿ ಹೊರಗಡೆ ನೀರು ಒಳ ನುಗ್ಗದಂತೆ ಎಚ್ಚರ ವಹಿಸುವುದಕ್ಕಾಗಿ ಎತ್ತರ ಪ್ರದೇಶದಲ್ಲಿ ಗುಂಡಿ ತೆಗೆಯಿರಿ.

೨. ಗುಂಡಿಗೆ ಹೊದಿಸಿರುವ ಪ್ಲಾಸ್ಟಿಕ್ ಒಡೆದು/ಹರಿದು ಹೋಗದಂತೆ ನಿಗಾವಹಿಸಿ. ಒಂದು ಪಕ್ಷ ನಿಮಗೆ ಅರಿವಿಲ್ಲದಂತೆ ಪ್ಲಾಸ್ಟಿಕ್ ಹರಿದಿದ್ದರೆ, ನೀರು ಸೋರಿ ನೆಲದಲ್ಲಿ ಇಂಗುತ್ತದೆ. ಅಜೋಲಾ ಸೊರಗುತ್ತದೆ.

೩. ಅಜೋಲಾ ಬೆಳವಣಿಗೆಯನ್ನು ಗಮನಿಸುತ್ತಿರಿ. ವಾತಾವರಣದ ಏರಿಳಿತದಿಂದ ಎಲೆಗಳು ಕೆಂಪಾಗುತ್ತಿದ್ದರೆ, ಅದು ಗುಂಡಿಯಲ್ಲಿರುವ ನೀರನ್ನು ಬದಲಾಯಿಸಬೇಕು ಎಂಬ ಸೂಚನೆಯಾಗಿರುತ್ತದೆ. ನೀರು ಬದಲಾಯಿಸುವಾಗ ಹೊಸದಾಗಿ ಅಜೋಲಾ ಬೆಳೆಸುವ ವಿಧಾನಗಳನ್ನೇ (ಪ್ಲಾಸ್ಟಿಕ್ ಹಾಳೆ ಸ್ವಚ್ಛಗೊಳಿಸಿ, ಮುಕ್ಕಾಲು ಭಾಗ ನೀರು ತುಂಬಿ. ಮಣ್ಣಿನ ಹುಡಿ ಹರಡಿ. ಸಗಣಿ ಸ್ಲರಿ ತುಂಬಿ, ಬೊಗಸೆ ಅಜೋಲಾ ಬಿಡಿ) ಅನುಸರಿಸಿ.

೪.ಅಜೋಲಾ ಬೆಳೆಸುವ ವಿಧಾನ ಒಂದೇ. ಆದರೆ ಅಳತೆ, ಬಳಸುವ

ಪರಿಕರಗಳು(ಪಾತ್ರೆಗಳು) ಮಾತ್ರ ಬೇರೆ ಬೇರೆ. ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಹಾಗೂ ಸಕಲೇಶಪುರ ತಾಲ್ಲೂಕಿನ ಯೆಡೆಹಳ್ಳಿ ಗ್ರಾಮಗಳ ರೈತರು ಅಜೋಲಾವನ್ನು ಬಾಣಲೆ, ಪ್ಲಾಸ್ಟಿಕ್ ಬಕೆಟ್‌ನಂತಹ ‘ಬಳಸಿ ಬಿಸಾಡಿದ’ ವಸ್ತುಗಳಲ್ಲಿ ಬೆಳೆಸಿ ಖರ್ಚನ್ನು ಕಡಿಮೆಗೊಳಿಸುವ ಸಣ್ಣದೊಂದು ‘ಸಾಧ್ಯತೆಗೆ’ ಬೆಳಕು ಚೆಲ್ಲಿದ್ದಾರೆ.

ಅಜೋಲಾ ಉಪಯೋಗ:

ಅಜೋಲಾವನ್ನು ಜಾನುವಾರುಗಳಿಗೆ ಮೇವಾಗಿ, ಭತ್ತದ ಗದ್ದೆಯಲ್ಲಿ ಕಳೆ ನಿಯಂತ್ರಕವಾಗಿ ಮತ್ತು ಹಸಿರೆಲೆಗೊಬ್ಬರದಲ್ಲಿ ಹೆಚ್ಚುವರಿ ಪೋಷಕಾಂಶಕ್ಕಾಗಿ ಬಳಸುತ್ತಾರೆ.

ಆಕಳುಗಳಿಗೆ ಪೌಷ್ಟಿಕ ಆಹಾರವಾಗಿ ಹೆಚ್ಚಾಗಿ ಬಳಕೆಯಲ್ಲಿದೆ. ಮೃದುವಾಗಿರುವ, ಅಷ್ಟೇ ಪೌಷ್ಟಿಕವಾಗಿರುವ ಅಜೋಲಾ ಜಾನುವಾರುಗಳಿಗೆ ಬಲು ಇಷ್ಟ. ಪ್ರತಿ ನಿತ್ಯ ಅರ್ಧ ಕೆ.ಜಿ ಅಜೋಲಾವನ್ನು ಆಕಳುಗಳಿಗೆ ತಿನ್ನಿಸುವುದರಿಂದ ಹಾಲಿನ ಇಳುವರಿ ಏರಿಕೆಯಾಗುತ್ತದೆ ಎನ್ನುವುದು ಹಲವು ಸಂಶೋಧನೆ, ಅಧ್ಯಯನಗಳಿಂದ ದೃಢಪಟ್ಟಿದೆ. ಅದೇ ರೀತಿ ಹಾಲಿನಲ್ಲಿ ಕೊಬ್ಬಿನಂಶ ಹೆಚ್ಚಿರುವುದು, ಆಕಳುಗಳ ಮೈಕಟ್ಟು ಸುಧಾರಿಸಿರುವುದನ್ನು ಕೆಲವು ರೈತರು ಗಮನಿಸಿದ್ದಾರೆ. ‘ಪಶು ವೈದ್ಯ ಶಾಸ್ತ್ರದ ಪ್ರಕಾರ ಅಜೋಲಾ ಸೇವನೆಯಿಂದ ಆಕಳುಗಳಲ್ಲಿ ಹಾಲಿನ ಇಳುವರಿ ಹೆಚ್ಚಾಗುತ್ತದ, ನಿಜ. ಆದರೆ ಹಾಲಿನ ಸಾಂದ್ರತೆ ಮತ್ತು ಕೊಬ್ಬಿನಂಶ ಸುಧಾರಿಸಿರುವ ಕುರಿತು ಎಲ್ಲೂ ಪ್ರಯೋಗಗಳಾಗಿಲ್ಲ ಎನ್ನುತ್ತಾರೆ ಪಶು ವೈದ್ಯ ಡಾ.ಮುರಳಿ ಕೃಷ್ಣ.

ಹಸಿರು ಮೇವಿಗೆ ಹೋಲಿಸಿದರೆ ಅಜೋಲಾದಲ್ಲಿ ಫೆರಸ್, ಮೆಗ್ನೀಷಿಯಂ, ಕಾಪರ್‌ನಂತಹ ಖನಿಜ, ಪೋಷಕಾಂಶಗಳು ಶೇ ೩೦ರಿಂದ ೪೦ರಷ್ಟು ಹೆಚ್ಚಾಗಿರುತ್ತವೆ. ಈ ಕಾರಣದಿಂದಾಗಿಯೇ ಆಕಳುಗಳಿಗೆ ಅಜೋಲಾ ತಿನ್ನಿಸುವುದರಿಂದ ಶೇ.೧೦ರಿಂದ ೧೫ರಷ್ಟು ಖನಿಜಾಂಶಗಳು ಹಾಗೂ ಶೇ.೭ರಿಂದ ೧೦ರಷ್ಟು ಜೈವಿಕ ಕಿಣ್ವಗಳು ಮತ್ತು ಅಮೈನೋ ಆಸಿಡ್ ಹೆಚ್ಚುವರಿಯಾಗಿ ಲಭ್ಯವಾಗುತ್ತವೆ. ಇದರಿಂದಾಗಿ ಸಹಜ ವಾಗಿಯೇ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಮೂರು ವರ್ಷಗಳಿಂದ ಫಲ್ಗುಣಿಯ ಗೋಪಾಲ್ ಹಾಗೂ ಮಲ್ಲೇಶ್ ಗೌಡರು ತಮ್ಮ ಆಕಳುಗಳಿಗೆ ಅಜೋಲಾ ತಿನ್ನಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರತಿ ನಿತ್ಯ ಅರ್ಧ ಕೆ.ಜಿ ಅಜೋಲಾವನ್ನು ಪಶು ಆಹಾರದ ಜೊತೆ ಬೆರೆಸಿ ಕೊಡುತ್ತಿದ್ದಾರೆ. ಅವರ ಪ್ರಕಾರ ಅಜೋಲಾವನ್ನು ತಿನ್ನಿಸಲು ಆರಂಭಿಸಿದ ಮೇಲೆ ಒಂದು ಹೊತ್ತಿಗೆ ಅರ್ಧ ಲೀಟರ್ ಹಾಲು ಹೆಚ್ಚಾಗಿದೆ.

ಯೆಡೇಹಳ್ಳಿಯ ವೈ.ವಿ.ಸೋಮಶೇಖರ್ ಅವರು ತಮ್ಮ ಎಮ್ಮೆಗೆ ಅಜೋಲಾ ತಿನ್ನಿಸಲು ಆರಂಭಿಸಿದ ಮೇಲೆ, ಅದಕ್ಕೆ ಅಂಟುಕೊಂಡಿದ್ದ ಕಾಯಿಲೆಯೊಂದು ಗುಣವಾಯಿತು ಎನ್ನುತ್ತಾರೆ. ಅಷ್ಟೇ ಅಲ್ಲ, ಅಜೋಲಾ ಬಳಸುತ್ತಿರ ರೈತರ ಅನುಭವದ ಪ್ರಕಾರ ವಾರ್ಷಿಕವಾಗಿ ೨೦ ರಿಂದ ೨೫ರಷ್ಟು ಮೇವಿನ ಖರ್ಚು ಉಳಿದಿದೆ. ‘ಆರಂಭದಲ್ಲಿ ಹಸುಗಳು ಅಜೋಲಾ ತಿನ್ನಲು ಒಲ್ಲೆ ಎನ್ನುತ್ತವೆ. ಸ್ವಲ್ಪ ಸ್ವಲ್ಪ ಅಜೋಲಾವನ್ನು ಬೇರೆ ಆಹಾರದ ಜೊತೆ ಮಿಶ್ರ ಮಾಡಿ ಕೊಡಬೇಕು. ಅಭ್ಯಾಸವಾದರೆ ಆಕಳುಗಳು ಇಷ್ಟಪಟ್ಟು ಅಜೋಲಾ ತಿನ್ನುತ್ತವೆ’ ಎನ್ನುತ್ತಾರೆ ಫಲ್ಗುಣಿಯ ರೈತರು.

‘ಸೆಗಣಿ ನೀರಿನೊಂದಿಗೆ ಬೆಳೆಯುವುದರಿಂದ ಅಜೋಲಾ ಸ್ವಲ್ಪ ವಾಸನೆಯುಕ್ತ ವಾಗಿರುತ್ತದೆ. ಆದ್ದರಿಂದ ಗುಂಡಿಯಿಂದ ಅಜೋಲಾ ಹೊರ ತೆಗೆದ ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು (ಸೆಗಣಿ ವಾಸನೆ ಹೋಗುವವರೆಗೂ) ನಂತರ ಆಕಳುಗಳಿಗೆ ತಿನ್ನಿಸಬೇಕು’ ಎನ್ನುತ್ತಾರೆ ಪಶುವೈದ್ಯ ಡಾ.ಮುರಳಿ ಕೃಷ್ಣ.

ಅಜೋಲಾ – ಪಶು ಆಹಾರವಾಗಿ ಬಳಸಲು ಆರಂಭಿಸಿದ ನಂತರ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲಿನ ಸಂಗ್ರಹಣೆಯಲ್ಲಿ ಏರಿಕೆ ಕಂಡಿದೆ. ಸಂಘದ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಸುಬ್ರಹ್ಮಣ್ಯ ಹೇಳುವಂತೆ ‘ಸಂಘ ರೈತರಿಗೆ ಅಜೋಲಾವನ್ನು ಪಶು ಆಹಾರವಾಗಿ ಪರಿಚಯಿಸಿದ ನಂತರ ೧.೨೧ ಲಕ್ಷ ಲೀಟರ್ ಸಂಗ್ರಹವಾಗುತ್ತಿದ್ದ ಹಾಲಿನ ಪ್ರಮಾಣ ೧.೬೧ ಲಕ್ಷ ಲೀಟರ್‌ಗೆ ಏರಿದೆ.

ಕನ್ಯಾಕುಮಾರಿಯ ವಿವೇಕಾನಂದ ಆಶ್ರಮದಲ್ಲಿರುವ ‘ಅಜೋಲಾ’ ಘಟಕ ಗಳನ್ನು ನೋಡಿ, ಅದರ ಪರಿಣಾಮದಿಂದ ಉತ್ತೇಜಿತರಾದ ಸುಬ್ರಹ್ಮಣ್ಯಂ ‘ಅಜೋಲಾ’ ಬಳಕೆ ಕುರಿತು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಿದ್ದಾರೆ. ಎಲ್ಲರೂ ಮರೆತಿದ್ದ ಈ ಮೇವಿನ ಸಸ್ಯದ ಬಳಕೆ ಕುರಿತು ರೈತರ ಮನವೊಲಿಸಲು ಒಂದು ವರ್ಷ ಹರಸಾಹಸಪಟ್ಟಿದ್ದಾರೆ. ಅವರ ಅನುಭವದ ಪ್ರಕಾರ ಅಜೋಲಾ ಜಾನುವಾರುಗಳಿಗೆ ‘ಕಾಂಪ್ಲಿಮೆಂಟ್ ಮತ್ತು ಸಪ್ಲಿಮೆಂಟ್ ಆಹಾರ. ‘ಹಸಿರು ಮೇವಿನ ಕೊರತೆ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಅಜೋಲಾ ಉತ್ತಮ ಪಶು ಆಹಾರವಾಗುತ್ತದೆ’ ಎನ್ನುತ್ತಾರೆ ಅವರು. ಇಷ್ಟೆಲ್ಲ ಹೇಳುತ್ತಾ, ಸರಳ ಮತ್ತು ಸುಲಭವಾಗಿರುವ ಈ ತಂತ್ರಜ್ಞಾನವನ್ನು ಜನರಿಗೆ ತಲುಪಿಸುವಲ್ಲಿ ವಿಫಲಾಗಿರುವ ಕುರಿತು ಸುಬ್ರಹ್ಮಣ್ಯ ವಿಷಾದಿಸುತ್ತಾರೆ.

೯ ಅಡಿ ಉದ್ದ, ೬ ಅಡಿ ಅಗಲ, ಎರಡೂವರೆ ಅಡಿ ಆಳದ ಅಳತೆಯ ಎರಡು ತೊಟ್ಟಿಗಳಲ್ಲಿ(ಮೈಕ್ರೋ ಪಾಂಡ್ಸ್) ಬೆಳೆಸಿದ ಅಜೋಲಾವನ್ನು ಇತರ ಸಾಮಾನ್ಯ ಮೇವಿನೊಂದಿಗೆ ಒಂದು ಹಸುವಿಗೆ, ನಿತ್ಯ ಆಹಾರವಾಗಿ ನೀಡಿದರೆ ಹಾಲಿನ ಉತ್ಪಾದನೆಯಲ್ಲಿ ಶೇ.೩೦ರಷ್ಟು ಹೆಚ್ಚಾಗುತ್ತದೆ. ಮಾತ್ರವಲ್ಲ ಹಾಲಿನಲ್ಲಿರುವ ಪ್ರೊಟೀನ್ ಅಂಶ ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ ಸುಬ್ರಹ್ಮಣ್ಯ

ಕೋಳಿಗೂ ಉತ್ತಮ ಆಹಾರ :

ವಿವೇಕಾನಂದ ಆಶ್ರಮ- ರಾಷ್ಟ್ರೀಯ ಸ್ವಾಭಾವಿಕ ಸಂಪನ್ಮೂಲಗಳ ಅಭಿವೃದ್ಧಿ ಯೋಜನೆ ನಡೆಸಿದ ಸಂಶೋಧನೆಯ ಪ್ರಕಾರ, ಅಜೋಲಾ ಕೋಳಿಗಳಿಗೂ ಉತ್ತಮ ಆಹಾರವಾಗಿದೆ. ಅಜೋಲಾ ಆಕಳುಗಳಂತೆ ಕೋಳಿಗಳಿಗೂ ಬಲು ಇಷ್ಟವಾದ ಆಹಾರ. ಅಜೋಲಾ ಸೇವಿಸುವುದರಿಂದ ಕೋಳಿಗಳು ಶೀಘ್ರ ಬೆಳವಣಿಗೆಯಾಗುತ್ತವೆ. ಅವುಗಳ ದೇಹದ ತೂಕ ಶೇ.೧೦ರಿಂದ ೧೨ರಷ್ಟು ಹೆಚ್ಚಾಗುತ್ತದೆ (ಬೇರೆ ಕೋಳಿಗಳಿಗೆ ಹೋಲಿಸಿದಾಗ). ಅಷ್ಟೇ ಅಲ್ಲ ಕೋಳಿ ಮೊಟ್ಟೆಯೊಳಗಿನ ಹಳದಿ ಬಣ್ಣದ ವಸ್ತು ಕೂಡ ದೊಡ್ಡದಾಗುತ್ತದೆ. ಮೇಲ್ಮೈ ನಯವಾಗಿ, ಹೊಳಪಾಗಿರುತ್ತದೆ.

ಸಕಲೇಶಪುರ ತಾಲ್ಲೂಕಿನ ಯಡೇಹಳ್ಳಿಯ ರೈತ ವೈ.ಪಿ.ಲಿಂಗರಾಜು ಅವರು ಕಳೆದ ಒಂದು ವರ್ಷದಿಂದ ತಮ್ಮ ಕೋಳಿಗಳಿಗೆ ಅಜೋಲಾವನ್ನೇ ಆಹಾರವಾಗಿ ಕೊಡುತ್ತಿದ್ದಾರೆ. ‘ಗೂಡು ಬಿಟ್ಟು ಹೊರ ಬಂದರೆ ಸಾಕು, ಅಜೊಲ್ಲಾ ತೊಟ್ಟಿಯಲ್ಲಿ ಬಾಯಿ ಹಾಕಿಕೊಂಡು ನಿಂತಿರುತ್ತವೆ’ ಎಂದು ಕೋಳಿ ಮತ್ತು ಅಜೋಲಾ ನಡುವಿನ ಸಂಬಂಧ ವಿವರಿಸುತ್ತಾರೆ ಲಿಂಗರಾಜು. ಬೇರೆ ಆಹಾರದ ಜೊತೆಗೆ ಅಜೋಲಾ ಮಿಶ್ರ ಮಾಡಿ ತಿನ್ನಿಸುವುದಕ್ಕೆ ಆರಂಭಿಸಿದ ಮೇಲೆ ಕೋಳಿಯ ತೂಕದಲ್ಲಿ ಗಣನೀಯವಾಗಿ ಏರಿಕೆ ಕಂಡಿದ್ದೇವೆ ಎನ್ನುತ್ತಾರೆ.

ಅಜೋಲಾ ತೊಟ್ಟಿಗಳನ್ನು ಕೋಳಿಗೂಡಿನ ಸಮೀಪ ಮಾಡಿಟ್ಟರೆ, ಕೋಳಿಗಳಿಗೆ ಪ್ರತ್ಯೇಕ ಆಹಾರ ಕೊಡುವ ಅಗತ್ಯವೇ ಬೀಳುವುದಿಲ್ಲ. ‘ಮನೆ ಸುತ್ತಾ ಭತ್ತದ ತೌಡು, ಅಕ್ಕಿ ನುಚ್ಚು.. ಹೀಗೆ ಮನೆಯಲ್ಲಿ ಬಳಸಿ ಉಳಿದ ಧಾನ್ಯಗಳನ್ನು ಚೆಲ್ಲಿರುತ್ತೇವೆ. ಅವನ್ನೆಲ್ಲ ತಿನ್ನುತ್ತಾ, ಅಜೋಲಾ ತೊಟ್ಟಿಯ ಬಳಿ ಬಂದು ಸೊಂಪಾಗಿ ಮೇಯುತ್ತವೆ’ ಎನ್ನುವುದು ಲಿಂಗರಾಜು ಅವರ ಅಭಿಪ್ರಾಯ.

ಪಶು ವೈದ್ಯಕೀಯ ಶಾಸ್ತ್ರದ ಪ್ರಕಾರ ಅಜೋಲಾವನ್ನು ಕೋಳಿಗಳಿಗೆ ಅತಿಯಾಗಿ ತಿನ್ನಿಸುವುದರಿಂದ ಅಜೀರ್ಣವಾಗಿ, ಆಹಾರ ವಿಷವಾಗುವ ಸಾಧ್ಯತೆ ಇದೆ. ಹಾಗಾಗಿ ನಿಯಮಿತವಾಗಿ ಅಜೋಲಾ ಕೊಡುವುದು ಒಳಿತು.

ಗದ್ದೆಗಳಲ್ಲಿ ಕಳೆ ನಿಯಂತ್ರಣ :

ಭತ್ತದ ಗದ್ದೆಗಳಲ್ಲಿ ಸಸಿ ನಾಟಿ ಮಾಡಿದ ಮೇಲೆ ಅಜೋಲಾ ಬಿಡುವುದು ಸಂಪ್ರದಾಯ. ಆದರೆ ನಾಟಿಗಿಂತ ಹತ್ತು ಹದಿನೈದು ದಿನಗಳ ಮುನ್ನ ಗದ್ದೆಗಳಲ್ಲಿ ಅಜೋಲಾ ಬಿತ್ತಿದರೆ ಮಣ್ಣಿಗೆ ಪೂರಕ ‘ಪೋಷಕಾಂಶಗಳು’ ಲಭ್ಯವಾಗುತ್ತವೆ ಎನ್ನುತ್ತಾರೆ ಮಣ್ಣು ವಿಜ್ಞಾನಿಗಳು. ನಾಟಿಗೆ ಮುನ್ನ ಬಿತ್ತಿದ ಅಜೋಲಾವನ್ನು ಭೂಮಿಗೆ ಸೇರಿಸಿ ನಂತರ ಭತ್ತದ ಸಸಿಗಳನ್ನು ನಾಟಿ ಮಾಡಬೇಕು. ಎರಡು ಮೂರು ದಿನಗಳ ನಂತರ ಅದೇ ಗದ್ದೆಯಲ್ಲಿ ಮತ್ತೆ ಅಜೋಲಾ ಬಿಡಬೇಕು. ವಾರಗಳ ನಂತರ ಅಜೋಲಾ ಗದ್ದೆ ತುಂಬಾ ಚಾದರದಂತೆ ಹರಡಿಕೊಳ್ಳುತ್ತದೆ. ಸೂರ್ಯನ ಬೆಳಕು ಮಣ್ಣಿಗೆ ತಾಕದಷ್ಟು ಒತ್ತೊತ್ತಾಗಿ ಆವರಿಸಿಕೊಳ್ಳುತ್ತದೆ. ಬಿಸಿಲು ಬೆಳಕಿನ ಕೊರತೆಯಿಂದ  ಕಳೆಬೀಜಗಳು ಮೊಳೆಯುವುದಿಲ್ಲ. ಮೊಳೆತ ಬೀಜಗಳು ಅಲ್ಲೇ ಸುರುಟಿಕೊಂಡು ಹಣ್ಣಾಗಿ ಸಾಯುತ್ತವೆ. ಭತ್ತದ ಗದ್ದೆಯಲ್ಲಿ ಕಳೆ ನಿಯಂತ್ರಣವಾಗುತ್ತದೆ.

‘ಅಜೋಲಾ ಕಳೆ ನಿಯಂತ್ರಣದ ಜೊತೆಗೆ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣಗೊಳಿಸುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಿದಂತೆ ಬೆಳೆ ಇಳುವರಿಯಲ್ಲೂ ಏರಿಕೆಯಾಗುತ್ತದೆ. ಅಜೋಲಾ ಗದ್ದೆಗೆ ಬಿಡುವ ವಿಧಾನ ಭತ್ತದ ಗದ್ದೆಗಳಿಗೆ ಮೇಲುಗೊಬ್ಬರ ಕೊಡುವ ಪ್ರಮಾಣದಲ್ಲಿ ಕಡಿತಗೊಳಿಸಬಹುದು’. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ೨೦೦೮ರಲ್ಲಿ ಮೂಡಿಗೆರೆ ತಾಲ್ಲೂಕು ಫಲ್ಗುಣಿಯ ಕೃಷಿಕರಾದ ಜಲೀಲ್‌ಸಾಬ್, ಗೋಡ್ವಿನ್, ಮಲ್ಲೇಶಗೌಡರ ಭತ್ತದ ಗದ್ದೆಯಲ್ಲಿ ಅಜೋಲಾ ಬೆಳೆಸಿ, ಅದರಿಂದಾಗುವ ಪರಿಣಾಮವನ್ನು ದಾಖಲಿಸಿದೆ. ವರದಿಯಲ್ಲಿ ಕಳೆ ನಿಯಂತ್ರಣ ಗೊಂಡಿರುವುದು ಹಾಗೂ ಇದರಿಂದ ಆಳಿನ ಕೂಲಿ ಉಳಿದಿರುವುದರ ವಿಚಾರವನ್ನು ಸಂಸ್ಥೆ ದಾಖಲಿಸಿದೆ.

ಭತ್ತದ ಗದ್ದೆಯಲ್ಲಿ ಅಜೋಲಾ ಬೆಳೆಸುವ ಪದ್ಧತಿ ನಾಲ್ಕು ದಶಕಗಳಿಂದಲೂ ಚಾಲ್ತಿಯಲ್ಲಿದೆ. ಚೀನಾ, ಫಿಲಿಪೈನ್ಸ್, ಯೂರೋಪ್ ಮತ್ತಿರ ಭತ್ತ ಬೆಳೆಯುವ ರಾಷ್ಟ್ರಗಳಲ್ಲಿ ಕಳೆ ನಿಯಂತ್ರಕ್ಕಾಗಿ ಭತ್ತದ ಗದ್ದೆಯಲ್ಲಿ ಅಜೋಲಾ ಬೆಳೆಸುತ್ತಿದ್ದಾರೆ. ಸಾವಯವ ಕೃಷಿ ಅನುಸರಿಸುವವರೆಲ್ಲರೂ ಅಜೋಲಾವನ್ನು ಸಪ್ಲಿಮೆಂಟ್ (ಹೆಚ್ಚುವರಿ) ಗೊಬ್ಬರವಾಗಿ ಬಳಸುತ್ತಾರೆ.  ತಜ್ಞರ ಪ್ರಕಾರ ಅಜೋಲಾ ಕಳೆ ನಿಯಂತ್ರಿಸುವ ಜೊತೆಗೆ ಭೂಮಿಗೆ ಸಾರಜನಕವನ್ನು ಸ್ಥಿರೀಕರಿಸುತ್ತದೆ. ಒಂದು ಎಕರೆಯಲ್ಲಿ ಭತ್ತದ ಜೊತೆ ಬೆಳೆಸುವ ಅಜೋಲಾ ಎಕರೆಗೆ ೮.೫ ಟನ್ನಷ್ಟು ಇಳುವರಿ ನೀಡುತ್ತದೆ. ನಂತರ ಪ್ರತಿ ಹೆಕ್ಟೇರ್‌ನಲ್ಲಿ ೩೦ ರಿಂದ ೬೦ ಕೆಜಿಯಷ್ಟು ಸಾರಜನಕವನ್ನು ಸ್ಥಿರೀಕರಿಣವಾಗುತ್ತದೆ. (ಫಂತಿಲನಾನ್ ಯಶೋಗಾಥೆ ನೋಡಿ).

ಹಸಿರೆಲೆ ಗೊಬ್ಬರವಾಗಿ ಅಜೋಲಾ :

ಎರೆಗೊಬ್ಬರ, ಹಸಿರೆಲೆ ಗೊಬ್ಬರದ ಜೊತೆ ಹಾಗೂ ಹಲವು ನೈಸರ್ಗಿಕ ಗೊಬ್ಬರಗಳ ತಯಾರಿಕೆಯಲ್ಲಿ ಅಜೋಲಾವನ್ನು ಮಿಶ್ರಣ ವಸ್ತುವನ್ನಾಗಿ ಬಳಸುತ್ತಾರೆ. ಅಜೋಲಾ ಮಿಶ್ರಿತ ಸಾವಯವ ಗೊಬ್ಬರಗಳಲ್ಲಿ ಸಾರಜನಕದ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಅಜೋಲಾ ಮಿಶ್ರಿತ ಗೊಬ್ಬರ ಬಳಸಬಹುದು. ಹೀಗೆ ಬಳಸುವುದರಿಂದ ಬೆಳೆಗಳ ಇಳುವರಿಯಲ್ಲಿ ಏರಿಕೆಯಾಗುವುದರ ಜೊತೆಗೆ, ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎನ್ನುತ್ತಾರೆ ಬೇಸಾಯ ಶಾಸ್ತ್ರಜ್ಞ, ಪ್ರೊ.ದೇವಕುಮಾರ್.

ಅಜೋಲಾ ಘಟಕದ ತಳಭಾಗದಲ್ಲಿ ಹರಡಿರುವ ಫಲವತ್ತಾದ ಮಣ್ಣಿನ ಹಾಸಿಗೆ(ಬೆಡ್)ಯನ್ನು ಅಜೋಲಾ ಬೆಳೆದ ನಂತರ ಪರೀಕ್ಷೆಗೆ ಒಳಪಡಿಸಿದರೆ, ಆ ಮಣ್ಣಿನಲ್ಲಿ ಸಾರಜನಕ, ರಂಜಕ ಮತ್ತು ಪೊಟಾಷ್ ಅಂಶಗಳು ಎಷ್ಟೆಷ್ಟಿವೆ ಎಂಬುದು ತಿಳಿಯುತ್ತದೆ. ಒಂದು ಮಾಹಿತಿ ಪ್ರಕಾರ ಆರು ತಿಂಗಳು ಅಜೋಲಾ ಬೆಳೆಸಿದ ಘಟಕದ ತಳಭಾಗದಲ್ಲಿನ ಎರಡು ಕೆ.ಜಿ ತೂಕದ ಮಣ್ಣಿನಲ್ಲಿ ಒಂದು ಕೆ.ಜಿ ಎನ್‌ಪಿಕೆ ಪೋಷಕಾಂಶಕ್ಕೆ ಸಮನಾಗುವ ಪೋಷಕಾಂಶಗಳು ಮಿಳಿತವಾಗಿತ್ತಂತೆ.

ಅಜೋಲಾಗೆ ಹೋಲಿಕೆ: ಯಾವ ಮೇವಿನಲ್ಲಿ ಎಷ್ಟು ಪೋಷಕಾಂಶ ?

ಕ್ರಮ    ಮೇವಿನ                         ವಾರ್ಷಿಕ ಉತ್ಪಾದನೆ        ಒಣಪದಾರ್ಥ     ಪ್ರೊಟಿನ್

ಸಂಖ್ಯೆ  ಬೆಳೆಗಳು                   (ಟನ್/ಹೆಕ್ಟೇರ್)               (ಶೇಕಡಾವಾರು) (ಶೇಕಡಾವಾರು)

೧        ಹೈಬ್ರಿಡ್ ನೇಪಿಯರ್

ಹುಲ್ಲು                      ೨೫೦                       ೫೦                         ೪

೨        Lucern                         ೮೦                         ೧೬                         ೩.೨

೩        ಅಲಸಂದೆ                  ೩೫                         ೦೭                         ೧.೪

೪       ಜೋಳ                     ೪೦                         ೩.೨                         ೦.೬

೫       ಅಜೋಲಾಗೆ               ೭೩೦                       ೫೬                         ೨೦