ಅಜೋಲಾ ಅಂದ್ರೆ ಬಟ್ಟೆಗೆ ಹಾಕೊ ಉಜಾಲಾನಾ !  ಸಕಲೇಶಪುರ ಸಮೀಪದ ಯೆಡೇಹಳ್ಳಿಯಲ್ಲಿ ಸಾವಯವ ಗ್ರಾಮದ ರೈತರು ‘ಅಜೋಲಾ’ ಹೆಸರು ಕೇಳುತ್ತಲೇ ಹೀಗೊಂದು ಜೋಕು ಜೋಕಾಲಿಯ ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಯಿಂದಲೇ ಗೊತ್ತಾಗಿದ್ದು, ಈ ಭಾಗದ ರೈತರಿಗೆ ಅಜೋಲಾ ಎಂಬ ಮೇವು – ಗೊಬ್ಬರದ ಬೆಳೆ ಪರಿಚಯವೇ ಇಲ್ಲ ಎಂದು.

ಈ ವಿಷಯ ತಿಳಿಯುತ್ತಲೇ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಾವಯವ ಕೃಷಿ ಅನುಷ್ಠಾನದಲ್ಲಿ ಅಜೋಲಾ ಸೇರಿಸಿತು. ಕೇವಲ ಯೋಜನೆಯಲ್ಲಿ ಸೇರಿಸಿದರೆ ಪ್ರಯೋಜನವಿಲ್ಲ. ಅಜೋಲಾ ಬಳಕೆ ಕುರಿತು ರೈತರಿಗೆ ದೊಡ್ಡ ಮಟ್ಟದಲ್ಲಿ ಪರಿಚಯಿಸಬೇಕು ಎನ್ನುವ ಸಂಕಲ್ಪ ಮಾಡಿತು. ಸಂಘದ ಸಭೆಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಯಿತು. ಅಜೋಲಾಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಯೋಜನೆ ಪ್ರತಿಯೊಬ್ಬ ಫಲಾನುಭವಿಗೂ ಅಜೋಲಾ ತರಬೇತಿ ನೀಡಿ, ಮನೆ ಮುಂದೆ ಅಜೋಲಾ ಘಟಕಗಳನ್ನು ರಚಿಸಿಕೊಳ್ಳಲು ಸಂಸ್ಥೆ ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡಿತು.

ಅಜೋಲಾ ಕೃಷಿ ಮತ್ತು ಬಳಕೆ ಹೆಚ್ಚಿದಂತೆ ರೈತರು ತಮ್ಮ ಆಕಳುಗಳ ಆರೋಗ್ಯ, ಹಾಲಿನ ಇಳುವರಿ ಹೆಚ್ಚಳ, ಕೊಬ್ಬಿನ ಅಂಶ ಹೆಚ್ಚಿದ ಅಂಶವನ್ನು ಗಮನಿಸಿದರು. ಇದೇ ಸಮಯದಲ್ಲಿ ಅಜೋಲಾ ಬಿಟ್ಟ ಗದ್ದೆಗಳಲ್ಲಿ ಕಳೆ ನಿಯಂತ್ರಣವಾಯಿತು. ಆಳಿನ ಕೂಲಿ ಉಳಿಯಿತು. ರೈತರು ಖುಷಿಯಾದರು. ಆದರೂ ಕೆಲವು ರೈತರು ಅಜೊಲಾ ಬಗ್ಗೆ ಒಲವು ತೋರಲಿಲ್ಲ.

ಇದನ್ನು ಮನಗಂಡ ಸಂಸ್ಥೆ ‘ಅಜೋಲಾದ ಯಶಸ್ಸು, ರೈತರಲ್ಲಿರುವ ಮಾಹಿತಿ ಕೊರತೆ’ ಎರಡಕ್ಕೂ ಪರಿಹಾರ ನೀಡುವ ಸಲುವಾಗಿ ‘ಅಜೋಲಾ ಹಬ್ಬ’ ಮಾಡೋಣ ಎಂದು ತೀರ್ಮಾನಿಸಿತು. ಈ ಹೊಸ ಪರಿಕಲ್ಪನೆಗೆ ಸಹಾಯಕ ಕೃಷಿ ನಿರ್ದೇಶಕ ಯೋಗೇಶ್ ‘ಕ್ಷೇತ್ರೋತ್ಸವ’ ರೂಪ ಕೊಟ್ಟರು ಸಾವಯವ ಗ್ರಾಮದ ನಿಸರ್ಗ ಸಾವಯವ ಕೃಷಿ ಸಂಘ, ಸಕಲೇಶಪುರದ ಕೃಷಿ ಇಲಾಖೆ ಸಂಸ್ಥೆಯ ಜೊತೆ ಕೈ ಜೋಡಿಸಿದವು.

ಅದು ನವೆಂಬರ್ ೨೮, ೨೦೦೯.

ಬೆಳಿಗ್ಗೆ ೧೧ ಗಂಟೆಗೆ ರೈತ ವೈ.ಪಿ.ನಿಂಗರಾಜು ಗದ್ದೆಯ ಬಯಲಿಲ್ಲಿ ಸಂಘದ ಸದಸ್ಯರೆಲ್ಲ ಜಮಾಯಿಸಿದರು. ನಿಂಗರಾಜು ತಮ್ಮ ಗದ್ದೆಗೆ ಬಿಟ್ಟ ಅಜೋಲಾ ಬೇರೆಯವರ ಗದ್ದೆಗೆ ವಿಸ್ತರಿಸಿಕೊಂಡಿದ್ದನ್ನು ತೋರಿಸಿದರು. ಇಡೀ ಗದ್ದೆಯ ಬಯಲೆಲ್ಲಾ ಅಜೋಲಾಮಯವಾಗಿದ್ದನ್ನು ಕಂಡ ರೈತರು ತಮ್ಮ ಗದ್ದೆಗಳಲ್ಲೂ ಇದೇ ರೀತಿ ಅಜೋಲಾ ಬೆಳೆ ವಿಸ್ತರಣೆಗೊಂಡಿದ್ದರ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.

ಅಜೋಲಾವನ್ನು ನೀರಿಗೆ ಬಿಡುವ ಮೂಲಕ ‘ಕ್ಷೇತ್ರೋತ್ಸವ’ ಉದ್ಘಾಟನೆಗೊಂಡಿತು. ‘ಅಜೋಲಾ ಬಹು ಉಪಯೋಗಿ ಸಸ್ಯ. ಇದು ಗದ್ದೆಗೆ ಗೊಬ್ಬರವಾಗಿ, ದನಗಳಿಗೆ ಪಶು ಆಹಾರವಾಗುತ್ತದೆ. ಇನ್ನೂ ವಿಶೇಷ ಅಂದ್ರೆ ಅಜೋಲಾವನ್ನು ಮನುಷ್ಯರೂ ತಿನ್ನಬಹುದು’ ಎಂದರು ಕಾರ್ಯಕ್ರಮ ಉದ್ಘಾಟಿಸಿದ ಸಾವಯವ ಕೃಷಿ ಮಿಷನ್ ಜಿಲ್ಲಾ ಸಂಚಾಲಕರಾದ ಯಡೂರು ರಾಜು.

ಯೆಡೇಹಳ್ಳಿ ಗ್ರಾಮದ ರೈತರು ಅಜೋಲಾವನ್ನು ಕಳೆದ ಎರಡು ವರ್ಷಗಳಿಂದ ಗದ್ದೆ, ಮನೆ ಹೀಗೆ ಎಲ್ಲೆಡೆ ಬೆಳೆಯುತ್ತಿದ್ದಾರೆ. ಇದರಿಂದ ಗದ್ದೆಗಳಲ್ಲಿ ಕಳೆ ನಿಯಂತ್ರಣಗೊಂಡಿದೆ. ಬೆಳೆಗಳಿಗೆ ಸಾರಜನಕ ಲಭ್ಯವಾಗಿದೆ. ಹಾಲು ಕೊಡುವ ರಾಸುಗಳಿಗೆ ತಿನ್ನಿಸುವುದರಿಂದ ಹಾಲಿನ ಉತ್ಪಾದನೆ ಹಾಗೂ ಕೊಬ್ಬಿನಾಂಶ ಹೆಚ್ಚಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡವರು ಸಾವಯವ ಸಂಘದ ಅಧ್ಯಕ್ಷ ವೈ ಸಿ ರುದ್ರಪ್ಪ.

ಸಹಾಯಕ ಕೃಷಿ ನಿರ್ದೇಶಕ ಜಿ ಹೆಚ್ ಯೋಗೇಶ್ ಅಜೋಲಾ ಬೆಳೆ ಹಾಗೂ ಬಳಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ‘ಗದ್ದೆ ನಾಟಿ ನಂತರ ಒಂದು ಹಿಡಿ ಅಜೋಲಾವನ್ನು ಹಾಕುವುದರಿಂದ ಯೂರಿಯಾ ಬಳಕೆಯನ್ನು ನಿಲ್ಲಸಬಹುದು. ಇದರಿಂದ ಯೂರಿಯಾ ಹಾಗೂ ಕಳೆ ತೆಗೆಯುವ ಖರ್ಚು ಉಳಿತಾಯವಾಗುತ್ತದೆ. ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಶ್ರಮ ಕಡಿಮೆ ಹಾಗೂ ಸಮಯದ ಉಳಿತಾಯವಾಗುತ್ತದೆ. ಆಕಳುಗಳಿಗೆ ತಿನ್ನಿಸುವುದರಿಂದ ಹಾಲಿನ ಉತ್ಪಾದನೆ ಜಾಸ್ತಿಯಾಗುವುದರ ಜೊತೆಗೆ ಹಾಲಿನಲ್ಲಿ ಕೊಬ್ಬಿನಂಶ ಕೂಡ ಹೆಚ್ಚುತ್ತದೆ. ಇದರಲ್ಲಿ ಪ್ರೋಟೀನ್ ಇದೆ. ಕೆಲವರು ಆಹಾರವಾಗಿಯೂ ಬಳಸುತ್ತಾರೆ’ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಅಜೋಲಾ ಬೆಳೆದಿರುವ ಭತ್ತದ ಗದ್ದೆಗಳನ್ನು ಕ್ಷೇತ್ರೋತ್ಸವಕ್ಕೆ ಬಂದ ರೈತರೆಲ್ಲ ವೀಕ್ಷಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಳೆ ನಿಯಂತ್ರಕವಾಗಿ, ಉತ್ತಮ ಗೊಬ್ಬರವಾಗುವ ಈ ಅಜೋಲಾವನ್ನು ಇನ್ನು ಮುಂದೆ ಪ್ರತಿ ವರ್ಷ ಕಡ್ಡಾಯವಾಗಿ ಗದ್ದೆಯಲ್ಲಿ ಬಿಡುತ್ತೇವೆ ಎಂದು ರೈತರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಅಜೋಲಾ ಕ್ಷೇತ್ರೋತ್ಸವದ ಹೊಸ ಪರಿಕಲ್ಪನೆ ಸುತ್ತಲಿನ ಅನೇಕ ರೈತರಲ್ಲಿ ಅಜೋಲಾ ಬೆಳೆಯುವ ಮತ್ತು ಬಳಸುವುದಕ್ಕೆ ಪ್ರೇರೇಪಣೆ ನೀಡಿತು. ಯೆಡೇಹಳ್ಳಿಯ ಸಾವಯವ ಗ್ರಾಮ ನೋಡಲು ಬರುವ ಕೃಷಿಕರಿಗೆ ಈ ಊರಿನ ರೈತರು ಅಜೋಲಾ ಕುರಿತು ಸಾಕಷ್ಟು ಮಾಹಿತಿ ನೀಡುತ್ತಾರೆ. ಅಷ್ಟರ ಮಟ್ಟಿಗೆ ಕ್ಷೇತ್ರೋತ್ಸವ ಪರಿಣಾಮಬೀರಿತು.