‘ಅಜೋಲಾ’ ಹಾಲಿನ ಇಳುವರಿ ಹೆಚ್ಚಾಗಿದ್ದಕ್ಕೆ ನಾನೇ ಸಾಕ್ಷಿ’ – ಹೀಗೆ ಕಡಕ್ ಆಗಿ ಮಾತನಾಡಿದ್ದು ಕೃಷಿಕ ಯೆಡೇಹಳ್ಳಿಯ ವೈ.ವಿ.ಸೋಮಶೇಖರ್.

ಸೋಮಶೇಖರ್ ಅಡಕೆ ಮತ್ತು ಕಾಫಿ ಬೆಳೆಗಾರರು. ಅಡಿಕೆ ನಡುವೆ ಸ್ವಲ್ಪ ವೆನಿಲ್ಲಾ ಇದೆ. ಕಾಫಿ ಇನ್ನೂ ಫಸಲು ಕೊಡದ ಬೆಳೆ. ಆದರೆ ತೋಟದ ತುಂಬಾ ಕಿತ್ತಳೆ, ಮಾವು, ಹಲಸು ಇತ್ಯಾದಿ ಮರಗಳನ್ನು ಬೆಳೆಸಿದ್ದಾರೆ. ಕಾಫಿಯನ್ನು ಸಾವಯವ ಕೃಷಿ ವಿಧಾನದಲ್ಲೇ ಬೆಳೆಯಬೇಕೆನ್ನುವುದು ಅವರ ಉದ್ದೇಶ. ಇಂಥ ಕೃಷಿ ವೈವಿಧ್ಯದ ಜೊತೆ ಸಾವಯವ ಕೃಷಿಗೆ ಪೂರಕವಾಗಿ ಎರಡು ಎಮ್ಮೆಗಳನ್ನು ಸಾಕಿಕೊಂಡಿದ್ದಾರೆ.

ಒಮ್ಮೆ ಸೋಮಶೇಖರ್ ಅವರ ಒಂದು ಎಮ್ಮೆ ರೋಗಕ್ಕೀಡಾಯಿತು. ಹಾಲಿನ ಇಳುವರಿಯೂ ಕಡಿಮೆಯಾಯಿತು. ‘ಹಾಲಿನಲ್ಲಿ ಕೊಬ್ಬಿನಂಶ ಕಡಿಮೆ ಇದೆ. ಡಿಗ್ರಿ ಬರುವುದಿಲ್ಲ’ ಎಂದು ಡೇರಿಯವರು ಪದೇ ಪದೇ ವಾಪಸ್ ಕಳುಹಿಸುತ್ತಿದ್ದರು. ಸೋಮಶೇಖರ್ ಚಿಂತೆಗೀಡಾದರು. ಇದೇ ಸಮಯದಲ್ಲಿ ಭೂಮಿ ಸಂಸ್ಥೆ ಸಾವಯವ ಗ್ರಾಮ ಯೋಜನೆಯಡಿ ‘ಅಜೋಲಾ’ ಪ್ರಚಾರ ಆರಂಭಿಸಿತ್ತು. ‘ಆಕಳುಗಳಿಗೆ ಉತ್ತಮ ಆಹಾರವಾಗುವ ಅಜೋಲಾವನ್ನು ಪಶು ಆಹಾರದ ಜೊತೆ ಬೆರೆಸಿ ಕೊಡುವಂತೆ ಫಲಾನುಭವಿಗಳಿಗೆ ಸಲಹೆ ನೀಡಿತು. ಅಜೋಲಾ ಘಟಕ ನಿರ್ಮಾಣಕ್ಕೆ ಧನ ಸಹಾಯ, ತಾಂತ್ರಿಕ ಮಾಹಿತಿ ಕುರಿತು ತರಬೇತಿ ಕೂಡ ನೀಡಿತು.

ಯೋಜನೆಯ ಫಲಾನುಭವಿಯಾಗಿದ್ದ ಸೋಮಶೇಖರ್, ಮನೆಯ ಅಂಗಳದಲ್ಲಿ ಅಜೋಲಾ ತೊಟ್ಟಿ ನಿರ್ಮಿಸಿದರು. ತೊಟ್ಟಿಯಲ್ಲಿ ಬೆಳೆದ ಅಜೋಲಾವನ್ನು ಪ್ರತಿ ನಿತ್ಯ ಪಶು ಆಹಾರದ ಜೊತೆ ಅರ್ಧ ಕೆ.ಜೆ. ತಿನ್ನಿಸಲು ಆರಂಭಿಸಿದರು. ಸುಮಾರು ಒಂದರಿಂದ ಒಂದೂವರೆ ತಿಂಗಳು ಕಳೆಯಿತು. ಎಮ್ಮೆಗೆ ಅಂಟಿಕೊಂಡಿದ್ದ ರೋಗ ವಾಸಿಯಾಗಿತ್ತು. ಅಚ್ಚರಿಯ ಸಂಗತಿ ಎಂದರೆ,  ಹಾಲಿನ ಇಳುವರಿ ಒಂದು ಹೊತ್ತಿಗೆ ಅರ್ಧ ಲೀಟರ್ ಹೆಚ್ಚಾಯಿತು !

ಆರಂಭದಲ್ಲಿ ‘ಡಿಗ್ರಿ ಬರುವುದಿಲ್ಲ’ ಎಂದು ಹಿಂದಕ್ಕೆ ಕಳುಹಿಸುತ್ತಿದ್ದ ಡೇರಿಯವರಿಗೆ ಸೋಮಶೇಖರ್ ಅವರ ಹಾಲಿನ ಇಳುವರಿ ಹಾಗೂ ಕೊಬ್ಬಿನಂಶ ಹೆಚ್ಚಳದಲ್ಲಾದ ಏರಿಕೆ ಕಂಡು ಅಚ್ಚರಿಯಾಯಿತು. ಡಿಗ್ರಿ ಬರಲು ಹಾಲಿಗೆ ಯೂರಿಯಾ, ಸಕ್ಕರೆ ಬೆರೆಸಿದ್ದಾರೆಂಬ ಅನುಮಾನದ ಮೇಲೆ ಅದನ್ನು ಪರೀಕ್ಷೆಗೆ ಒಳಪಡಿಸಿದರು. ಆ ಎಲ್ಲ ಪರೀಕ್ಷೆಗಳಲ್ಲೂ  ಅಜೋಲಾ ತಿಂದ ಎಮ್ಮೆಯ ಹಾಲು ಪಾಸ್ ಆಯಿತು. ‘ಒಂದು ಹೊತ್ತಿಗೆ ಅರ್ಧ ಕೆ.ಜಿ ಅಜೋಲಾ ಕೊಡುತ್ತಿದ್ದೆವು. ಜೊತೆಗೆ ಬೂಸಾ ಹಾಗೂ ಹಸಿರು ಮೇವನ್ನು ಕೊಟ್ಟಿದ್ದೇವೆ. ಇದಾದ ನಂತರ ಒಂದು ಹೊತ್ತಿಗೆ ಅರ್ಧ ಲೀಟರ್ ಹಾಲು ಹೆಚ್ಚಾಗಿದೆ. ಡಿಗ್ರಿ ಚೆನ್ನಾಗಿ ಬರುತ್ತಿದೆ. ಬೂಸಾ, ಹಿಂಡಿಯ ಖರ್ಚು ಕಡಿಮೆಯಾಗಿದೆ’ ಎನ್ನುತ್ತಾರೆ ಸೋಮಶೇಖರ್.