ರೈತರ ಅನುಭವಗಳ ದಾಖಲಾತಿ

ಅಜೋಲಾ ಕುರಿತು ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಸಾಕಷ್ಟು ಅಧ್ಯಯನಗಳಾಗಿವೆ. ಸಾವಿರಾರು ಪ್ರಬಂಧಗಳು ಮಂಡನೆ ಯಾಗಿವೆ. ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಸಂಕಿರಣಗಳು ನಡೆದಿವೆ. ಈ ವಿಷಯ ಕುರಿತು ಅಂತರಜಾಲದಲ್ಲಿ ಜಾಲಾಡಿದರೆ ಲಕ್ಷಾಂತರ ಜಾಲ ತಾಣಗಳು ತೆರೆದುಕೊಳ್ಳುತ್ತವೆ. ಅಜೋಲಾ ಉಪಯೋಗ, ಕೃಷಿಯ ಕುರಿತು ಸಾಗರದಷ್ಟು ಮಾಹಿತಿ ನೀಡುತ್ತವೆ !

ಅಜೋಲಾ ಕುರಿತು ಇಷ್ಟೆಲ್ಲ ಮಾಹಿತಿಯಿದ್ದರೂ, ಅದನ್ನು ಬಳಸಬೇಕಾದ, ಉಪಯೋಗ ಪಡೆಯಬೇಕಾದ ರೈತರಿಗೆ ಮಾತ್ರ ಅವು ಸುಲಭದಲ್ಲಿ ಲಭ್ಯವಾಗುತ್ತಿಲ್ಲ. ಆಕಳುಗಳಿಗೆ ಉತ್ತಮ ಆಹಾರವಾಗುವ, ಗದ್ದೆಗಳಲ್ಲಿ ಕಳೆ ನಿಯಂತ್ರಿಸುವ, ಬೆಳೆಗಳಿಗೆ ಸಾರಜನಕ ಒದಗಿಸುವ ಈ ಜಲಸಿರಿ ಸಸ್ಯದ ಮಾಹಿತಿ ಕೇವಲ ಲೈಬ್ರರಿ, ಸಂಶೋಧನಾ ಕಪಾಟುಗಳಿಷ್ಟೇ ಸೀಮಿತವಾಗಿವೆ. ಕೆಲವು ಅನುಭವಿ ರೈತರ ಆಡು ಮಾತುಗಳಲ್ಲಿ ಉಳಿದುಕೊಂಡಿವೆ. ಪೀಳಿಗೆಯಿಂದ ಪೀಳಿಗೆಗೆ ಹರಿಯಬೇಕಾದ ಮಾಹಿತಿ ಎಲ್ಲೋ ಒಂದೆಡೆ ಹೆಪ್ಪುಗಟ್ಟಿ ನಿಂತಿದೆ.

ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ‘ಹೆಪ್ಪುಗಟ್ಟಿರುವ ಮಾಹಿತಿ’ಯನ್ನು ಹರಿಸುವ ಪ್ರಯತ್ನಕ್ಕೆ ಮುಂದಾಗಿದೆ. ತಮ್ಮ ಯೋಜನಾ ಕ್ಷೇತ್ರದಲ್ಲಿ ಕೆಲವು ರೈತರಿಗೆ ಅಜೋಲಾ ಬೆಳೆಸುವ ತರಬೇತಿ ನೀಡಿ, ಮೂರು ವರ್ಷಗಳ ಅಧ್ಯಯನ ನಡೆಸಿದೆ. ಆ ಪ್ರಕಾರ ಅಜೋಲಾ ಬಳಸಿದ ರೈತರ ಮನೆಗಳಲ್ಲಿ ಹಾಲಿನ ಇಳುವರಿ ತುಸು ಹೆಚ್ಚಾಗಿದೆ. ಗದ್ದೆಗಳಲ್ಲಿ ಕಳೆ ನಿಯಂತ್ರಣವಾಗಿದೆ. ಆಳುಗಳಿಗೆ ಕೊಡುವ ಕೂಲಿ ಉಳಿತಾಯವಾಗಿದೆ. ಕೆಲವು ರೈತರು ‘ತಮ್ಮ ಆಕಳುಗಳ ದೈಹಿಕ ಸಾಮರ್ಥ್ಯ ಹೆಚ್ಚಾಗಿದೆ’’ ಎನ್ನುತ್ತಾರೆ. ಅಂಥ ರೈತರ ಅನುಭವಗಳನ್ನು ಯಥಾವತ್ತಾಗಿ ಈ ಕೃತಿಯಲ್ಲಿ ದಾಖಲಿಸಿದ್ದೇನೆ.

ರೈತರ ಅನುಭವಗಳಿಗೆ ವಿಜ್ಞಾನದ ಬೆಳಕು ಹಿಡಿಯುವ ಪ್ರಯತ್ನವನ್ನೂ ಮಾಡಿದ್ದೇನೆ. ಆದರೂ ಕೆಲವು ಫಲಿತಾಂಶಗಳು ಹಾಗೂ ಅನುಭವಗಳು ಅಚ್ಚರಿ ಮೂಡಿಸುತ್ತವೆ. ಮಾತ್ರವಲ್ಲ, ಹಲವು ಅಧ್ಯಯನಗಳಿಗೆ ದಾರಿ ಮಾಡಿಕೊಟ್ಟಿವೆ. ಅವುಗಳನ್ನು ಬಳಸಿಕೊಂಡು ಸಂಶೋಧನೆ ನಡೆಸುವವರಿಗೆ ಮುಕ್ತ ಸ್ವಾಗತ.

ಈ ಪುಸ್ತಕದಲ್ಲಿ ‘ಗುಂಡಿ ನಿರ್ಮಾಣದಿಂದ, ಅಜೋಲಾ ಸಂಗ್ರಹಿಸಿ, ಬಳಸುವವರೆಗಿನ’ ಹಂತಗಳನ್ನು ಸರಳವಾಗಿ ವಿವರಿಸಲಾಗಿದೆ. ಕೆಲವೊಂದು ಮಾಹಿತಿ ಕ್ಲೀಷೆ ಎನ್ನಿಸಿದರೂ, ಹೊಸದಾಗಿ ಅಜೋಲಾ ಬೆಳೆಸುವವರ ದೃಷ್ಟಿಯಿಂದ ಈ ಮಾಹಿತಿಗಳು ಪ್ರಮುಖ ಎನಿಸಿವೆ.

ಅಜೋಲಾ ಕುರಿತು ದೇಶದ ವಿವಿಧೆಡೆ ಗುರುತಿಸು ವಂತಹ ಅಧ್ಯಯನಗಳಾಗಿವೆ. ಕನ್ಯಾಕುಮಾರಿಯ ವಿವೇಕಾನಂದ ಆಶ್ರಮ ತನ್ನ ಒಂದು ಯೋಜನೆಯಲ್ಲಿ ಅಜೋಲಾ ಬಳಸಿ ಯಶಸ್ವಿಯಾಗಿದೆ. ಆಶ್ರಮದ ಯೋಜನೆಯಿಂದ ಉತ್ತೇಜಿತಗೊಂಡ ಕೊಯಮತ್ತೂರಿನ ಹಾಲು ಉತ್ಪಾದಕರ ಸಹಕಾರ ಸಂಘದವರು ಅಜೋಲಾ ಬಳಸಿ, ಹಾಲಿನ ಇಳುವರಿ ಹೆಚ್ಚಿಸಿಕೊಂಡಿದ್ದಾರೆ. ಫಿಲಿಫೈನ್ಸ್‌ನ ಕೃಷಿಕ ಫಂತಿಲನಾನ್ ಭತ್ತದ ನಡುವೆ ಅಜೋಲಾ ಬೆಳೆಸಿ ಕಳೆ ನಿಯಂತ್ರಿಸಿದ್ದಾರೆ. ಬೆಂಗಳೂರಿನ ಎ‌ಎಂಇ ಫೌಂಡೇಷನ್ ಕೋಲಾರ ಜಿಲ್ಲೆಯ ಹಳ್ಳಿಯೊಂದ ರಲ್ಲಿ ಅಜೋಲಾ ಬಳಕೆ ಕುರಿತು ಅಧ್ಯಯನ ನಡೆಸಿದೆ. ಈ ಎಲ್ಲ ಮಾಹಿತಿಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ.

ಪುಸ್ತಕಕ್ಕೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ, ವಿಜ್ಞಾನಿಗಳಿಗೆ, ವೈದ್ಯರು ಹಾಗೂ ಸಂಶೋಧಕರಿಗೆ ನಾನು ಅಭಾರಿಯಾಗಿದ್ದೇನೆ. ಅಧ್ಯಯನಕ್ಕಾಗಿ ಅಜೋಲಾ ಬೆಳೆಸಿ, ಬಳಸಿದ ರೈತರಿಗೆ, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಎಲ್ಲ ಸಿಬ್ಬಂದಿಗೆ ಪುಸ್ತಕಕ್ಕೆ ನೆರವು ನೀಡಿದ ಕರ್ನಾಟಕ ಸರ್ಕಾರದ, ಕೃಷಿ ಇಲಾಖೆಗೆ ಕೃತಜ್ಞನಾಗಿದ್ದೇನೆ.