ಸಾಹಿತ್ಯ-ಸಂಗೀತ ಮತ್ತು ಚಿತ್ರಕಲೆ – ಈ ಮೂರು ಕಲೆಗಳ ತ್ರಿವೇಣಿ ಸಂಗಮದ ವ್ಯಕ್ತಿತ್ವ ಪಡೆದಿದ್ದ ಪ್ರೊ.ಎ.ಯು. ಪಾಟೀಲರು ಹಿಂದುಸ್ಥಾನಿ ಸಂಗೀತದ ಒಂದು ಅಪರೂಪದ ಕಲಾ ಪ್ರತಿಭಾವಂತರು. ಜೈಪುರ ಘರಾಣಿಯ ಗಾಯಕರು.

ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಗಾಂವಿ ಎಂಬ ಹಳ್ಳಿಯಲ್ಲಿ: ೧೯೩೧ರ ಜನವರಿ ೨ ರಂದು. ಅವರ ತಂದೆ ಉಳುವಪ್ಪ ಗೌಡರು ಗ್ರಾಮದ ಪೋಲಿಸ ಪಾಟೀಲರು. ಸಂಗೀತ ಕಲೆಯ ಆರಾಧಕರು. ನಟ ಸಾಮ್ರಾಟ್‌ ಬಾಲ ಗಂಧರ್ವರ ಅಭಿಮಾನಿಗಳು. ಸಂಗೀತಾಸಕ್ತರ ಮನೆಯಲ್ಲಿ ಜನಿಸಿದ ಅಜ್ಜಣ್ಣ ಪಾಟೇಲರಿಗೆ ಶಾಲಾ ದಿನಗಳಲ್ಲಿಯೇ ಸಂಗೀತದತ್ತ ಆಸಕ್ತಿ ಬೆಳೆಯಿತು. ಹುಟ್ಟೂರಲ್ಲಿ ಪ್ರಾಥಮಿಕ, ಕಿತ್ತೂರಿನಲ್ಲಿ ಮಾಧ್ಯಮಿಕ ಹಾಗೂ ಬೆಳಗಾವಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಆಂಗ್ಲ ಭಾಷೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು. ಚಿತ್ರಕಲಾ ಶಿಕ್ಷಕರಾಗಿದ್ದ ಶ್ರೀ ಪವಾರ ಹಾಗೂ ಶ್ರೀ ಕೆ. ಬಿ. ಕುಲಕರ್ಣಿಯವರಿಂದ ಚಿತ್ರಕಲೆ ಕಲಿತು ಮುಂಬೈಯ ಜೆ.ಜೆ. ಸ್ಕೂಲ್‌ ಆಫ್‌ ಆರ್ಟ್ಸ್ ಸಂಸ್ಥೆಯಿಂದ ಡೆ.ಡಿ. ಆರ್ಟ್ಸ್ ಪದವಿ ಪಡೆದರು.

ಹೆಸರಾಂತ ಹಿಂದುಸ್ಥಾನಿ ಗಾಯಕ ಪಂ. ಮೃತ್ಯುಂಜಯ ಬುವಾ ಪುರಾಣಿಕಮಠ ಅವರಲ್ಲಿ ಗ್ವಾಲಿಯರ್ ಘರಾಣೆ ಸಂಗೀತ ತಾಲೀಮು ಪಡೆದರು. ಅಖಿಲ ಭಾರತ ಗಾಂಧರ್ವ ಮಹಾ ಮಂಡಲದಿಂದ ‘ಸಂಗೀತ ಅಲಂಕಾರ’ ಹಾಗೂ ಬರೋಡಾದ ಎಂ.ಎಸ್‌. ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಖ್ಯಾತ ಗಾಯಕ ಪಂ. ಮಲ್ಲಿಕಾರ್ಜುನ ಮನಸೂರ ಅವರ ಹಿರಿಯ ಮಗಳು ಸೌ. ಲಕ್ಷ್ಮೀದೇವಿಯನ್ನು ಮದುವೆ ಮಾಡಿಕೊಂಡು ಅಳಿಯನಾಗಿ ಜೈಪುರ ಘರಾಣೆಯ ಸಂಗೀತ ತಾಲೀಮು ಪಡೆದು ಜೈಪುರ ಘರಾಣೆಯ ಗಾಯಕರೆನಿಸಿದರು.

ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಕೆಲ ದಿನ ಇಂಗ್ಲೀಷ್‌ ಉಪನ್ಯಾಸಕರಾಗಿ ನಂತರ ಎರಡು ದಶಕಗಳ ಕಾಲ ಅದೇ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ೧೯೮೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ಅಧ್ಯಯನ ಪೀಠದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪಿ.ಹೆಚ್‌.ಡಿ. ವಿಭಾಗ ಪ್ರಾರಂಭಿಸಿ ೧೯೯೧ರಲ್ಲಿ ನಿವೃತ್ತರಾಗಿ ಕೆಲ ದಿನ ವಿಶ್ರಾಂತ ಜೀವನ ನಡೆಸಿ ಲಿಂಗೈಕ್ಯರಾದರು.

ಪ್ರೊ. ಎ.ಯು. ಪಾಟೀಲರು ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯ ಉತ್ತಮ ಬರಹಗಾರರಾಗಿದ್ದರು. ಸಂಗೀತ ಹಾಗೂ ಚಿತ್ರಕಲೆ ಕುರಿತು ಅನೇಕ ಗ್ರಂಥ ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಸಂಗೀತ ಪುಸ್ತಕವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದೆ. ಅವರ ‘ಸಂಗೀತಶಾಸ್ತ್ರ ದರ್ಪಣ’ ಗ್ರಂಥಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗ್ರಂಥ ಬಹುಮಾನ ದೊರೆತಿದೆ. ಅವರ ಅನೇಕ ಚಿತ್ರಗಳು ಬಹುಮಾನ ಪಡೆದಿವೆ. ಅವರ ಮಾರ್ಗದರ್ಶನದಲ್ಲಿ ಅನೇಕ ಸಂಶೋಧಕರು ಸಂಗೀತದಲ್ಲಿ ಪಿ.ಎಚ್‌.ಡಿ. ಪದವಿ ಪಡೆದಿದ್ದಾರೆ. ಪಾಂಡುರಂಗ ಪಾಟೀಲ, ಡಾ. ಸೀಮಾ ಪಾಟೀಲ (ಮಗಳು), ಡಾ. ಮೀರಾ ಶಿವಶಂಕರ ಗುಂಡಿ, ಪ್ರೊ. ಸರಯೂ ಸೊನ್ನಿ ಹಾಗೂ ಪ್ರೊ. ಸಿದ್ಧರಾಮಯ್ಯ ಮಠಪತಿ ಮುಂತಾದವರು ಅವರ ಶಿಷ್ಯರಲ್ಲಿ ಉಲ್ಲೇಖನೀಯರಾಗಿದ್ದಾರೆ.

ಪ್ರೊ. ಎ. ಯು. ಪಾಟೀಲ ಅವರ ಪ್ರತಿಭೆಗೆ ಅನೇಕ ಪುರಸ್ಕಾರ ಬಂದಿವೆ. ಅವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ (೧೯೯೩-೯೪) ಪ್ರಶಸ್ತಿ, ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ಲಿನ ನಾಗರಿಕ ಸನ್ಮಾನ ಉಲ್ಲೇಖನೀಯವಾಗಿವೆ.