ಮಾತಿನ ಬೆಲೆ ಎಷ್ಟು ಅಂತ ಯಾರಾದರೂ ಕೇಳುವವರಿದ್ದರೆ, ಎಷ್ಟು ಅಂತ ಹೇಳುವವರು ಯಾರಾದರೂ ಇದ್ದರೆ ಅವರು ಅನುಭವಿಗಳು ಮಾತ್ರ. ಮಾತು ಹೇಗಿರಬೇಕು ಎಂದರೆ; ನೂರಾರು ನಿರೂಪಣೆಗಳು, ವಿವರಗಳು ಸಿಗುತ್ತವೆ. ಹೀಗೆ ಯಾರೂ ಹೇಳಬಹುದು, ಅವರವರ ಅನಿಸಿಕೆ, ಅಭಿಪ್ರಾಯಗಳಂತೆ. ಹೀಗೆ ಹೇಳಬಲ್ಲವರಲ್ಲಿ ಓದು- ಬರಹ ಕಲಿತವರ ಮಾತಿಗೂ, ಕಲಿಯದವರ ಮಾತಿಗೂ ವ್ಯತ್ಯಾಸವಂತೂ ಖಂಡಿತ ಇರುತ್ತದೆ. ಈ ವಿದ್ಯಾವಂತರ ಮಾತಿನಲ್ಲಿ ಒಂದು ನಾಜೂಕು, ಒಂದು ಊತ ಇರುತ್ತದೆ. ಅದೇ ಓದಿಯೆ ಇರದ, ‘ಕುರಿತೋದದ ಅಂತಾರಲ್ಲ’ ಅಂತಹವರ ಮಾತುಗಳಲ್ಲಿ ಇಂಥವಿರವು. ಆದರೆ, ಬದುಕಿನ ಸಹಜ ಅನುಭವಗಳ ಬಂಧುರತೆ, ಕೊರತೆ ಇಲ್ಲದೆ ತುಂಬಿರುತ್ತದೆ.

ಮಾತಿನ ಬೆಲೆಯೇನು ಎಂದದಕ್ಕೆ ನಮ್ಮ ಹಳ್ಳಿಯ ಅಜ್ಜಿಯೊಬ್ಬಳು ಥಟ್ಟನೆ ‘ಆಡಿದ ಮಾತಿನಷ್ಟೊ ಮಗಾ’ ಅಂದಳು. ಇಂಥ ಬೆಲೆಯ ಮಾತುಗಳನ್ನು ಆಡಿದವರಲ್ಲಿ ನನ್ನ ಅಜ್ಜಿ ವೆಂಕಮ್ಮ, ಭೈರಮ್ಮ, ಚಿನ್ನಮ್ಮ, ಮುನೆಕ್ಕ, ಚೌಡಮ್ಮ, ಹನುಮಕ್ಕ ಹೀಗೆ ಅನೇಕರುಂಟು. ಇವರಲ್ಲಿ ಎಲ್ಲರೂ ವಯಸ್ಸಿನಿಂದ ಅಜ್ಜಿಯರೇನಲ್ಲ. ಆದರೆ, ಅವರು ಅನುಭದಲ್ಲಿ ಅಜ್ಜಿಯರು. ಅಂಥ ಅಜ್ಜಿಯರು ಆಡಿದ ಮಾತುಗಳನ್ನು ಕೇಳಿದ ನೆನಪಿನಿಂದ ಆಯ್ದು ಹಂಚಿಕೊಳ್ಳುತ್ತಿರುವೆ. ಇಂಥ ಅಜ್ಜಿಯರು ಊರೂರುಗಳಲ್ಲೂ ಇದ್ದು, ಅಂಥವರ ನುಡಿಗಳಲ್ಲಿ ನೀವೂ ಕೇಳಿರಬಹುದಾದವು ಕೆಲವಾದರೂ ಇಲ್ಲಿ ಇದ್ದಾವು. ಈ ಮೂಲಕ ನೀವೂ ಕೇಳಿದ್ದ ಇನ್ನೂ ಹಲವು ನಿಮಗೆ ನೆನಪಾದಾವು.

* ಹಾಸಿಕೇನ ಹೂ ಮಾಡೊ
ಗಂಡನಾಗೊ ಮಗ

* ನೆಲ್ಲು ಕುಟ್ಟಿದ್ದಾಯ್ತು ಅಂದ್ರೆ,
ರಾಗಿ ಬೀಸು ಅನ್ನೋ ಅತ್ತೆ ಆಗಬಾರದಮ್ಮ

* ಬೀಸೊ ಸೊಸೇನ ಬೈಬಾರ್ದು,
ಉಳ್ಳೋ ಎತ್ನ ಹೊಡೀಬಾರ್ದು.

* ಗಂಡುಸ್ ಬತ್ತಾನ ಕಾಲು ಮಡಚೊ ಹಂಗೇ
ಹೆಂಗುಸ್ ಬತ್ತಾಳ ಕಾಲು ಮಡಚು

* ಗಂಡುಸ್ಗ್ಯಾಕ ಗೌರಿ ದುಕ್ಕ ಅನ್ನೋದ್ಯಾವ ನ್ಯಾಯ ಮಗ,
ಅವನು ಅಳೋವಾಗ ಇವಳ ಸೆರಗು ನೆನೆಯೊಲ್ವ?

* ಹೊಟ್ತುಂಬ ಉಣ್ಣೋಕಿಕ್ಕು,
ಕಣ್ತುಂಬ ನಿದ್ದೆ ಮಾಡೋಕ್ಬಿಡು

* ಹೆಂಗಸು ಸನ್ಯಾಸಿ ಆದ್ರೆ,
ಗಂಡುಸು ಸಂಸಾರಿ ಆದಾನ?

* ಹೆಂಡ್ರುಕ ಕಾಟ ಕೊಡ್ಬೇಡ
ಅವಳಕ ದೆವ್ವ ಹಿಡಿದಾತು ನೋಡ್ಕ.

* ಬ್ಯಮೆ ಒಂದಿದ್ರಾತು ಮಗ
ಒಂದಿರ್ಲಿ ಬಿಡ್ಲಿ ದಿನ ನಡದೋತದೆ. (ಬ್ಯಮೆ= ಪ್ರೀತಿ, ದಿನ= ಬದುಕು)

* ದೀಪ ಬೆಳಗಿಸೆ ಮಗಳೆ,
ಮನೆ ಉರಿಸಬೇಡ

ಸಂಸಾರದಲ್ಲಿ ಗಂಡ- ಹೆಂಡಿರು, ಅತ್ತೆ ಇವರು ಹೇಗಿರಬೇಕು ಎಂದು ಹೇಳಿರುವ ಈ ಪದಗಳಿಗೆ ಅರ್ಥ, ವಿವರಣೆಗಳು ಬೇಕೆ? ಅನಕ್ಷರಸ್ಥರ ಮಾತುಗಳು ಅಂಥವರಿಗೇ ಅರ್ಥವಾಗುವಾಗ ಓದಿಕೊಂಡವರಿಗೆ ಅರ್ಥವಾಗದಿದ್ದರೆ ಹೇಗೆ? ಇಲ್ಲಿಯ ರೂಪಕಗಳು ಬದುಕಿನ ಅನುಭವದವು. ಕವಿಸಮಯದ ರೂಪಕಗಳಲ್ಲ. ಲಕ್ಷಣ ಗ್ರಂಥಗಳ ಅಧ್ಯಯನಗಳ ನೆರವೂ ಇವುಗಳ ಅರ್ಥೈಕೆಗೆ ಬೇಕಾಗುವುದಿಲ್ಲ.

‘ಗಂಡುಸ್ಕ್ಯಾಕ ಗೌರಿ ದುಕ್ಕ ಅನ್ನೋದ್ಯಾವ ನ್ಯಾಯ ಮಗ/ ಅವನು ಅಳೋವಾಗ ಇವಳ ಸೆರಗು ನೆನೆಯೊಲ್ವ’ ಎಂಬ ಮಾತಿನಲ್ಲಿ ಗಂಡಸಿನ ದುಃಖದಲ್ಲಿ ಹೆಂಗಸು ಪಾಲುಗೊಳ್ಳುವುದನ್ನು ಮನ ಮುಟ್ಟುವಂತೆ ಹೇಳಿದ್ದಾಳೆ ಅಜ್ಜಿ! ಹೀಗೆಯೆ ‘ಹೆಂಗಸು ಸನ್ಯಾಸಿ ಆದ್ರೆ/ ಗಂಡುಸು ಸಂಸಾರಿ ಆದಾನ?’- ಹೆಣ್ಣಿನಲ್ಲಿ ನಿರಾಸಕ್ತಿ ಅಥವಾ ವೈರಾಗ್ಯ ಹುಟ್ಟಿದರೆ ಗಂಡಸು ಸಂಸಾರ ಮಾಡುದೆಲ್ಲಿಂದ ಬಂತು?

‘ಹಾಸಿಕೇನ ಹೂ ಮಾಡೊ/ ಗಂಡನಾಗೊ ಮಗ’ ಎಂಥ ಅದ್ಭುತವಾದ ಅನುಭವದ ಮಾತಿದು! ಯಾವ ಅತ್ಯುತ್ತಮ ಕಾವ್ಯದ ಸಾಲಿಗೂ ಕಡಿಮೆಯಿಲ್ಲ. ‘ಹಾಸಿಕೇನ ಹೂ ಮಾಡೊ’ ಅನ್ನುವಲ್ಲಿನ ಪ್ರತಿ ಶಬ್ದದ ಭಾವವೂ ಕೋಮಲವಾದುದು. ಹೃದಯವನ್ನು ಮೃದುವಾಗಿ ಮುಟ್ಟುವ ಭಾವನೆ ಎದೆಯನ್ನು ನೇವರಿಸುತ್ತದೆ. ಇಲ್ಲಿ ಮಾತು ಕಾವ್ಯಾನುಭವವನ್ನು ಕೊಡುತ್ತದೆ. ಜನಪದರ ನುಡಿಯಲ್ಲಿ ಮಾತು ಕಾವ್ಯವಾಗುವ ಬಗೆಗೆ ಇದಕ್ಕಿಂತ ಮಿಗಿಲಾದ ಉದಾಹರಣೆ ಬೇಕಿಲ್ಲ.

ಲೋಕಾನುಭವದ ಪದಗಳು ಸಾರ್ವಕಾಲಿಕವಾದವು. ಒಂದೊಂದೂ ಅರ್ಥ ಸಂಪದದಿಂದ ತೊನೆಯುತ್ತವೆ. ಗಮನವಿಟ್ಟು ಒಂದೆರಡು ಸಲ ಓದಿಕೊಂಡರೆ ಮರೆವಿಗೆ ಹೋಗದಂತೆ ಉಳಿಯುತ್ತವೆ. ನುಡಿ ಪದ್ಯಗಂಧಿಯಾಗಿರುವುದು ಇದಕ್ಕೆ ಕಾರಣ.

* ಹುವ್ವ ಹಿಂಡಿದರೆ
ಜೇನೆ?

* ಹೆಣ ಹೆಗಲಿಗಿಟ್ಟು
ಚಟ್ಟ ಸುಡಬೇಡ.

* ವೇಷ ಕಟ್ಟಿದ ಮೇಲೆ
ಭಾಷೆ ಮರೆತರೆ ಹೇಗೆ? (ಭಾಷೆ= ಮಾತು, ಸಂಭಾಷಣೆ)

* ಜಂಬ ಬಿಟ್ಟು
ಆಟ ಆಡು.

* ಬುಟ್ಟೀಲಿಡು ಹೂ ಹಣ್ಣು,
ಯಾರಿಗಾದ್ರು ಆಗುತ್ತೆ.

* ಬಟ್ಟೆ ಬಿಚ್ಚೊ ಮೊದ್ಲು
ಯೋಚಿಸು.

* ಮರಳು ಹಿಂಡಿ ನೀರು ತೆಗೆಯೋರಿಂದ್ಲೆ
ಬಾಳಿನರ್ಥ.

* ಬಟ್ಟೆ ಹರೀದ ಹಾಗೆ ಹಿಂಡಿ ಆರ ಹಾಕು.
ನಾಲ್ಕು ದಿನದ ಬಾಳುತ್ತೆ

* ಸಾವ ಸಾಯಿಸು,
ಮಾಡೋ ಕೆಲಸದಿಂದ.

* ಬಾಯಾರಿದವರಿಗಾಗಿ
ನೀರು ಸೇದು.

* ಕೇಡು ಮಾಡೋದು ಮಾಡಿ,
ಗೂಬೆ ಮೇಲೆ ಗೂಬೆ ಕೂರಿಸೋದ್ಯಕೆ?

* ಎಡೆ ಬೇಕನ್ನೊ ಮಾರೆಮ್ಮ
ಕಾಯೋದ್ನೂ ಮರೆಯೊಲ್ಲ.

* ಆಟಾನೂ ಆಡು
ಲೆಕ್ಕಕ್ಕೂ ಇರು.

* ಹೂಳೆತ್ತಿದ ಕೆರೇಲಿ
ಮೀನೆಲ್ಲಿ ಹಿಡೀತಿ?

* ಕರಾವಿನ ಹಸೂನೆ ಅಮ್ಮ ಅಲ್ಲ,
ಕರಾವು ನಿಂತದ್ದೂ ಅಮ್ಮಾನೆ.

* ಕರೆಯೊ ಹಸೂಗೇ ಅಲ್ಲ
ಕರೆದ ಹಸೂಗೂ ಹುಲ್ ಹಾಕು.

* ಕರೂಗೂ ಹಾಲು ಬಿಡು
ಎತ್ತಾಗ ಬೇಡ್ವ ಅದು?

* ನೇಗಿಲು ಬಿಚ್ಚಿದ್ಮೇಲೆ
ಎತ್ತಿನ ಹೆಗಲು ನೀವು.

* ಹಾಡಿಗೇನು ನೂರಾರು
ಎದೇಲಿ ಉಳಿಯುತ್ತ ನೋಡು ಒಂದಾರು.

* ಬೆತ್ತಿಂಗ್ಳುನ ಕುಡಿಯೊದಾದ್ರೆ
ಇರ್ತಾ ಇತ್ತ ಉಪವಾಸದ ಬೇನೆ? (ಬೆತ್ತಿಂಗ್ಳು= ಬೆಳದಿಂಗಳು)

* ಬೇವಿನಹಣ್ಣೇ ಬೆಲ್ಲ ಆಗೋವಾಗ
ಹಗೆತನಾನ ಮರೆಯೋಕಾಗ್ದ?

* ಅನ್ನ ಹಾಕ್ದೆ ಹೋದ್ರು ಹೋಗು
ಸತ್ಮೇಲಾದ್ರು ಬಂದು ಮಣ್ ಹಾಕು.

* ಹಸೂಗಿಂತ ಕಡೆ ಆಗ್ಬೇಡ
ಕೂಸಿಗೆ ಹಾಲು ಕುಡಿಸು

* ಜವರಾಯ್ನ ಕಾಲ್ಗೆ ಗೆಜ್ಜೆ ಕಟ್ಟೋದಾದ್ರೆ
ಅವನು ಬರೋದಾದ್ರು ತಿಳಿಯುತ್ತೆ.

* ಗೆಜ್ಜೆ ಇಲ್ದೆ ಏನ್ಕುಣೀತಿ
ತೆಗಿ.

* ಬದುಕು ಕಾಣಬೇಕಾದ್ರೆ
ಮೊದಲು ಉಳೋದು ಕಲಿ

* ಯಾಕ್ಬಂದಿ ಅನ್ಬೇಡ
ಬಂದಿದ್ದು ಸಂತೋಷ ಅನ್ನು.

* ನಿಜ ಹೇಳಿದ್ರೇನೆ ಸಾಕು,
ಸುಳ್ನಾದ್ರೆ ನಂಬಿಸಬೇಕು

* ಬೆಟ್ಟ ಹತ್ತೋದಕ್ಕಿಂತ
ಬೆಟ್ಟದಾಗಿರೋದು ಕಷ್ಟ

* ಸಂಸಾರಿ ಅಂದ್ರೆ
ಅನ್ನ ಕೊಡೋನು ಅಂತ.

* ಸಾವು ಬರೋಕೆ ಎಲ್ಲಿ ಹೋಗಿರುತ್ತೊ?
ಹಿಂದೇನೆ ಇದ್ದು ಗಬಕ್ನ ಹಿಡ್ಕಂತಾದೊ

* ಮಣ್ಣಲ್ಲಿ ಜೀವ ಇರೋದ್ರಿಂದ್ಲೆ
ಹೆಣಾನ ಮಣ್ಣಿಗೆ ಹಾಕೋದು

* ಸತ್ತೋರ ಗುಣ ತಿಳಿಯೋಕೆ
ಅವರ ಮಣ್ಣಿಗೆ ಹೋಗಿ ಬಾ.

* ಅರ್ಥಕ್ಕೆ ಹಾಡಿರಲ್ವೋ ಪೆದ್ದೆ
ಹಾಡಿಗರ್ಥ ಇರುತ್ತೆ.

* ನನ್ನಮ್ಮ ಅವಳಮ್ಮ ಹಾಡಿದ್ದ ನಾ ಹಾಡ್ದೆ
ಬರ್ಕೋತೀಯಲ್ಲ ನೀ ಹಾಡ್ದೆ.

* ಮನೆ ಮಾತು ಚಾವಡೀಗೆ ಹೋಯ್ತೋ
ನಾಲ್ಕು ಜನ ಪಂಚಾಯ್ತೀಗೆ ಬರೊ ಹಂಗಾಯ್ತೊ.

* ಮುದ್ದೆ ತಂಗಳಾದ್ರೇನು
ಹಳಸೊ ಮುಂದೆ ಉಣ್ಣಾಕಿಕ್ಕು. (ಮುಂದೆ= ಮುಂಚೆ)

* ಕನ್ನಡಿ ಮುಂದೆ ನಿಂತಾದ್ರು
ನಿಜಾನ ಹೇಳ್ಕೊ.

* ನಿಜದ ಬಾಯ್ಗೆ
ಸುಳ್ನ ಹಾಕ್ಬೇಡ

* ಏನ್ ಕೇಳ್ತಿ ಬಾರ್ತಾನ
ಎಲ್ಲ ಬಾರ್ಲು ಬಿದ್ದೋರ ಕತೆ. (ಬಾರ್ತ= ಭಾರತ, ಬಾರ್ಲು= ಬೋರಲು)

* ದನಾನ ಬಿಟ್ಟು ಮೇಸು
ಮನಸ್ನ ಕಟ್ಟಿ ಮೇಸು. (ಮನಸ್ನ= ಮನಸ್ಸನ್ನು)

* ಕೆಟ್ಟೋರ್ನೇ ನೋಡ್ತಿದ್ರೆ
ಒಳ್ಯೋರು ಕಾಣಾಕಿಲ್ಲ.

* ಜಾತ್ರೆಗ್ ಹೊಂಟೋರೆಲ್ಲ
ಜಾಗ್ಟೆ ಬಾರ್ಸೋರಲ್ಲ.

* ಬಾಯ್ಲಿ ಇಲ್ಲ ಅನ್ನೊ ಬದ್ಲು
ಕೈಲಿ ಇಲ್ಲ ಅನ್ನು.

* ದಾಸಯ್ಯ ಶಂಖ ಊದಿದ್ರೆ ಏನಾರ ಹಾಕಂತಾರೆ,
ಸಂಸಾರಿ ಊದಿದ್ರೆ ಕೆಟ್ನಲ್ಲ ಅಂತಾಡ್ಕೊತಾರೆ.

* ಹಸು ಮುಂದೆ ಕರು ಕಟ್ಟಿ
ಹಾಲು ಕರ್ಕೊಳೊ ಬುದ್ಧಿ ಬೇಡ.

* ನಾನು ಕೊಟ್ಟೆ ಅನ್ನೋಕ್ ಮುಂಚೆ
ಸೂರ್ಯನ್ನ ನೋಡು.

* ಮನಸ್ಸು ನೋವು ಹೇಳಿಕೊಂಬೋದು
ಕಣ್ಣಿಂದ್ಲೆ.

* ಮನೆ ಮುರಿಯೋಕೆ
ಗಡಾರಿ ಯಾಕೆ? (ಗಡಾರಿ= ಹಾರೆ)

* ರಾಜ ಕ್ವಾಟೆ ಕಟ್ಟಲ್ಲ
ಆಳು ಕ್ವಾಟೆ ಆಳಲ್ಲ.

* ಕಾಡಿಗೆ ನೇಗಿಲು
ಕಟ್ಬೇಡ ಕೆಡ್ತಿ.

* ಬೀಳಲ್ಲ ಅನ್ನೋದಾದ್ರೆ
ಮಾತಲ್ಲೂ ಮನೆ ಕಟ್ಟು.

* ನಗು ಇರೋವಾಗ
ಯಾಕಪ್ಪ ಕೋಪ?

* ಮಾಡು ಅಂದೋರು ಮಡಿದೋದ್ರು
ಮಾಡಿದೋರು ಉಳಕೊಂಡ್ರು.

* ತಂದೆ ನೀನು ತಾಯಿ ನೀನು ಅನ್ಬೇಡ
ತಂದೆಯಾಗು, ತಾಯಿ ಆಗು.

ಇಂಥವೆಲ್ಲ ಈಯುವವರ ಮಾತುಗಳು. ಅವರು ಆಯುವವರಲ್ಲ. ನಾವು ಕಲಿತವರೆಂಬ ಹಮ್ಮು ಬಿಟ್ಟು ಇವರ ಜೊತೆಯಲ್ಲಿ ಕುಳಿತರೆ ಸಾಕು ಅನುಭವದ ಗಣಿಯೇ ನಮಗೆ ಬಾಗಿನವಾಗಿ ಸಿಕ್ಕುತ್ತದೆ. ಇವರು ಜನರ ನಡುವಿನ ಬದುಕಿನ ವಿಶ್ವವಿದ್ಯಾಲಯದಲ್ಲಿ ಜ್ಞಾನಿಗಳಾದವರು. ಹಾಗಾಗಿಯೇ ಅವರ ಪ್ರತಿ ನುಡಿ- ನುಡಿಯೂ ಅಗಾಧ ಜೀವನಾನುಭವ ಮತ್ತು ಅನುಭಾವದ ರಸಪಾಕದ ಕಾವ್ಯವೇ.