ಪಾರ್ಸ್ಲೆ ವಿದೇಶಿ ಸೊಪ್ಪು ತರಕರಿಯಾದರೂ ನಮ್ಮಲ್ಲಿ ಹಲವಾರು ಕಡೆ ಬೆಳೆಸಿ ಬಳಸುತ್ತಾರೆ.

ಪೌಷ್ಟಿಕ ಗುಣಗಳು : ಪಾರ್ಸ್ಲೆ ಪೌಷ್ಟಿಕ ಸೊಪ್ಪು ತರಕಾರಿ. ಅದರಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ಪೋಷಕಾಂಶಗಳು

ತೇವಾಂಶ – ೮೫.೦ ಗ್ರಾಂ
ಶರ್ಕರಪಿಷ್ಟ – ೮.೫ ಗ್ರಾಂ
ಪ್ರೊಟೀನ್ – ೩.೬ ಗ್ರಾಂ
ಕೊಬ್ಬು – ೦.೬ ಗ್ರಾಂ
ಒಟ್ಟು ಖನಿಜ ಪದಾರ್ಥ – ೦.೮೪೧ ಗ್ರಾಂ
ರಂಜಕ – ೬೫ ಮಿ.ಗ್ರಾಂ
ಕ್ಯಾಲ್ಸಿಯಂ – ೨೦೫ ಮಿ.ಗ್ರಾಂ
ಕಬ್ಬಿಣ – ೬.೨ ಮಿ.ಗ್ರಾಂ
ಪೊಟ್ಯಾಷಿಯಂ – ೭೨೭ ಮಿ.ಗ್ರಾಂ
ಸೋಡಿಯಂ – ೪೫ ಮಿ.ಗ್ರಾಂ
’ಎ’ ಜೀವಸತ್ವ – ೮೫೦೦ ಐಯು
ಥಯಮಿನ್ – ೦.೧೨ ಗ್ರಾಂ
ರೈಬೋಫ್ಲೇವಿನ್ – ೨೬ ಮಿ.ಗ್ರಾಂ
ನಿಕೋಟಿನಿಕ್ ಆಮ್ಲ – ೧.೪ ಮಿ.ಗ್ರಾಂ
ಕ್ಯಾಲೊರಿಗಳು – ೪೪

 

ಔಷಧೀಯ ಗುಣಗಳು : ಪಾರ್ಸ್ಲೆ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದರಲ್ಲಿ ಮೂತ್ರವರ್ಧಕ ಗುಣಗಳಿವೆ ಹಾಗೂ ಅದರ ಸೇವನೆ ಕಣ್ಣು ನೋವಿಗೆ ಒಳ್ಳೆಯದು. ಇದರ ಬೇರಿನಿಂದ ತೆಗೆದ ಏಪಿಯಾಲ್ ತೈಲದ ಸೇವನೆ ಮೂರ್ಛೆ ರೋಗಕ್ಕೆ ಒಳ್ಳೆಯದು. ಮೂತ್ರಪಿಂಡಗಳ ತೊಂದರೆಗೆ ಇದರ ಬೇರುಗಳನ್ನು ಬಳಸಲು ನಿರ್ದೇಶಿಸುವುದುಂಟು. ಈ ಸೊಪ್ಪನ್ನು ಸತತವಾಗಿ ತಿನ್ನುತ್ತಿದ್ದಲ್ಲಿ ಕಣ್ಣುಗಳ ನೋವು ಮಾಯವಾಗುತ್ತದೆ.

ಉಗಮ ಮತ್ತು ಹಂಚಿಕೆ : ಇದರ ತವರೂರು ದಕ್ಷಿಣ ಯೂರೋಪ್, ಪ್ರಸಕ್ತವಾಗಿ ಯೂರೋಪ್, ಅಮೆರಿಕಾ, ಭಾರತ ಮುಂತಾಗಿ ಅನೇಕ ದೇಶಗಳಲ್ಲಿ ಬೆಳೆಯುತ್ತಿದ್ದಾರೆ.

ಸಸ್ಯ ವರ್ಣನೆ : ಪಾರ್ಸ್ಲೆ ಏಪಿಯೇಸೀ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಮೂಲಿಕೆ. ಇದು ದ್ವೈವಾರ್ಷಿಕ ಅಥವಾ ಅಲ್ಪಾಯುವಿನ ದ್ವೈವಾರ್ಷಿಕ ಸಸ್ಯ. ಸಸಿಗಳ ಎತ್ತರ ಹೆಚ್ಚಿಂದರೆ ೧ ಮೀಟರ್ ಅಷ್ಟೇ. ಎಲೆಗಳು ಗುಂಪಾಗಿರುತವೆ. ಎಲೆಯಂಚು ಸೀಳುಗಳಿಂದ ಕೂಡಿರುತ್ತವೆ. ಎಲೆಗಳು ಅದುಮಿದಂತಿದ್ದು ಚಪ್ಪಟೆಯಾಗಿ ಇಲ್ಲವೇ ನಿರಿಗೆ ಗಟ್ಟಿದಂತೆ ಕಾಣುವುವು. ಎಲೆಗಳ ಬಣ್ಣ ಹಸುರು. ಹೂವು ಗೊಂಚಲುಗಳಲ್ಲಿ ಬಿಡುತ್ತವೆ. ಬಿಡಿ ಹೂವು ಹಸುರು ಇಲ್ಲವೆ ಬಿಳಿ ಹಸುರು ಬಣ್ಣದ್ದಿರುತ್ತವೆ. ಬೀಜ ಜೀರಿಗೆಯಂತಿದ್ದು ಬೂದು ಕಂದು ಬಣ್ಣದ್ದಿರುತ್ತವೆ. ಪ್ರಧಾನ ಬೇರು ಸುಧಾರಣ ಬೆಳ್ಳಗಿದ್ದು ರಸವತ್ತಾಗಿರುತ್ತದೆ. ಅದು ಕೆಲವೊಂದರಲ್ಲಿ ಸಾಧಾರಣ ಗಾತ್ರದಿದ್ದರೆ ಮತ್ತೆ ಕೆಲವೊಂದರಲ್ಲಿ ದೊಡ್ಡ ಗಾತ್ರದ್ದಿರುತ್ತದೆ. ಅದು ರುಚಿಯಲ್ಲಿ ಸಿಹಿಯಾಗಿರುತ್ತದೆ.

ತಳಿ ಅಭಿವೃದ್ಧಿ : ಈ ಬೆಳೆಯಲ್ಲಿ ತಳಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ. ಇದರಲ್ಲಿ ಹಲವಾರು ತಳಿಗಳಿವೆಯಾದರೂ ವಾಣಿಜ್ಯವಾಗಿ ಕೆಲವು ಮಾತ್ರವೇ ಮುಖ್ಯವಾದುವು.

ಹವಾಗುಣ : ಇದಕ್ಕೆ ಶೈತ್ಯ ಹವಾಗುಣ ಸೂಕ್ತ. ತಂಪಾದ ಹಾಗೂ ಆರ್ದ್ರ ಹವೆಯಲ್ಲಿ ಹುಲುಸಾಗಿ ಫಲಿಸುತ್ತದೆ. ಎತ್ತರದ ಪ್ರದೇಶಗಳಲ್ಲಿ ಫಸಲಿನ ಗುಣಮಟ್ಟ ಉತ್ತಮ ದರ್ಜೆಯದಿರುತ್ತದೆ. ಉಷ್ಣತೆ ೧೬ ರಿಂದ ೧೮.೫ ಸೆ. ಸೂಕ್ತ. ದಿನದ ಬೆಳಕು ದೀರ್ಘವಿದ್ದಲ್ಲಿ ಅನುಕೂಲಕರ.

ಭೂಗುಣ : ನೀರು ಬಸಿಯುವ ಹಾಗೂ ಸಾರವತ್ತಾದ ಮಣ್ಣು ಅದರಲ್ಲಿ ಅಧಿಕ ಫಸಲು ಸಾಧ್ಯ. ಮಣ್ಣು ಹಸಿಯಾಗಿದ್ದರೆ ಫಸಲು ಉತ್ತಮ ದರ್ಜೆಯದಿರುತ್ತದೆ. ಮಣ್ಣಿನ ರಸಸಾರ ೫.೫ ರಿಂದ ೬.೫ ರಷ್ಟಿದ್ದರೆ ಉತ್ತಮ. ಸ್ವಲ್ಪ ಮಟ್ಟಿನ ಸುಣ್ಣಾಂಶವಿದ್ದರೆ ಲಾಭದಾಯಕ.

ತಳಿಗಳು :

. ಪ್ಲೇನ್ಲೀವ್ಡ್ಟೈಪ್ : ಇದರ ಎಲೆಗಳು ಸರಳವಾಗಿರುತ್ತವೆ. ಇದಕ್ಕೆ ಸಿಂಪಲ್‌ಲೀವ್ಡ್ ಅಥವಾ ಸಿಂಗಲ್ ಲೀವ್ಡ್‌ಪಾರ್ಸ್ಲೆ ಎಂಬ ಹೆಸರಿದೆ.

. ಫೈನ್ಲೀವ್ಡ್ಟೈಪ್ : ಇದರಲ್ಲಿ ಎಲೆಗಳು ಬಲು ಸೂಕ್ಷ್ಮವಾಗಿ ಒಡೆದಿರುತ್ತವೆ. ಅಂತಹ ಎಲೆಗಳು ನೋಡಲು ಬಲು ಚೆಂದ. ಈ ಬಗೆಯಲ್ಲಿನ ಇಟಾಲಿಯನ್ ತಳಿ ಬಹು  ಮುಖ್ಯವಾದುದು.

. ಡಬಲ್ಕರ್ಲ್ಡ್ ಟೈಪ್ : ಇದರಲ್ಲಿ ಎಲೆಗಳು ಒತ್ತಾಗಿರುತ್ತವೆಯಲ್ಲದೆ ಎರಡು ಪಟ್ಟು ಸೂಕ್ಷ್ಮವಾಗಿ ಒಡೆದಿರುತ್ತವೆ.

. ಮಾಸ್ಕರ್ಲ್ಡ್ ಟೈಪ್ : ಇದಕ್ಕೆ ಟ್ರಿಪಲ್‌ಕರ‍್ಲ್ಡ್ ಬಗೆ ಎಂಬ ಹೆಸರಿದೆ. ಇದರಲ್ಲಿ ಎಲೆಗಳು ಬಹಳಷ್ಟು ಒಡೆದಿದ್ದು ಗುಂಪಾಗಿರುತ್ತವೆ. ಇದರಲ್ಲಿ ಎಮೆರಾಲ್ಡ್ ಮತ್ತು ಪ್ಯಾರಾಮೌಂಟ್ ತಳಿಗಳು ಮುಖ್ಯವಾದುವು. ಈ ಬಗೆಗೆ ಸೇರಿದ ತಳಿಗಳು ಕೈತೋಟಗಳಲ್ಲಿ ಬೆಳೆಯಲು ಸೂಕ್ತವಿರುತ್ತವೆ.

. ಫರ್ನ್‌‌ಲೀವ್ಡ್ಟೈಪ್ : ಇದರಲ್ಲಿ ಎಲೆಗಳು ರೆಕ್ಕೆಯಂತಿರುತ್ತವೆ.

. ಟರ್ನಿಪ್ರೂಟೆಡ್ಟೈಪ್ : ಇದಕ್ಕೆ ಹ್ಯಾಂಬರ್ಗ್ ಪಾರ್ಸ್ಲೆ ಎಂಬ ಹೆಸರಿದೆ. ಇದರ ಬೇರುಗಳು ದುಂಡಗೆ ಟರ್ನಿಪ್ ಬೇರುಗಳಂತೆ ಕಾಣುವುವು.

. ಇಂಪೀರಿಯಲ್ಕರ್ಲ್ಡ್ ಟೈಪ್ : ಇವೆಲ್ಲವುಗಳ ಪೈಕಿ ಟ್ರಿಪಲ್‌ಕರ‍್ಲ್ಡ್ ಹಾಗೂ ಇಂಪೀರಿಯಲ್ ಕರ‍್ಲ್ಡ್ ಬಗೆಗಳು ಉತ್ತಮವಾದುವು.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ತಿಪ್ಪೆಗೊಬ್ಬರ ಮಣ್ಣಿನಲ್ಲಿ ಬೆರೆಸಿ ಬೀಜವನ್ನು ೩೦ ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತಬೇಕು. ಬಿತ್ತಿದ ೧೫-೨೦ ದಿನಗಳವರೆಗೆ ಮೊಳಕೆಗಳು ಕಾಣುವುದಿಲ್ಲ. ಬಿತ್ತುವ ಮುಂಚೆ ಅವುಗಳನ್ನು ನೀರಿನಲ್ಲಿ ನೆನೆಸಿಟ್ಟಲ್ಲಿ ಬೇಗ ಮೊಳೆಯುತ್ತವೆ. ಮಣ್ಣಿನ ಉಷ್ಣಾಂಶ ೧೧ ರಿಂದ ೨೫.೫ ಸೆ. ಇದ್ದಲ್ಲಿ ಮೊಳೆತ ನಂತರ ತೆಳುಗೊಳಿಸಬಹುದು. ಮೈದಾನ ಪ್ರದೇಶಗಳಲ್ಲಿ ಏಪ್ರಿಲ್-ನವೆಂಬರ್ ಮತ್ತು ಬೆಟ್ಟಪ್ರದೇಶಗಳಲ್ಲಿ ಮಾರ್ಚ್-ಮೇ ಬಿತ್ತನೆಗೆ ಸೂಕ್ತ ಕಾಲಗಳು. ಹೆಕ್ಟೇರಿಗೆ ೩ ರಿಂದ ೩.೫ ಕಿ.ಗ್ರಾಂ ಬೀಜ ಬೇಕಾಗುತ್ತದೆ.

ಗೊಬ್ಬರ : ಮಣ್ಣು ಸಾಕಷ್ಟು ಫಲವತ್ತಾಗಿಲ್ಲದಿದ್ದಲ್ಲಿ ಅಧಿಕ ಪ್ರಮಾಣದ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಹೆಕ್ಟೇರಿಗೆ ೨೫ ರಿಂದ ೩೦ ಟನ್ ಕೊಳೆತ ತಿಪ್ಲೆಗೊಬ್ಬರ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಈ ಬೆಳೆಗೆ ರಾಸಾಯನಿಕ ಗೊಬ್ಬರಗಳ ಬಳಕೆ ಅಷ್ಟಾಗಿ ಇಲ್ಲ.

ನೀರಾವರಿ : ಮರಳು ಮಣ್ಣಿನ ಭೂಮಿಯಲ್ಲಿ ೫-೬ ದಿನಗಳಿಗೊಮ್ಮೆ ನೀರು ಹಾಯಿಸಬೇಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆ ಹತೋಟಿ ಬಹುಮುಖ್ಯ. ಅವುಗಳನ್ನು ಪ್ರಾರಂಬದಲ್ಲಿ ಕಿತ್ತು ತೆಗೆಯುವುದು ಒಳ್ಳೆಯದು. ಸಸಿಗಳು ಸುಮಾರು ೩೦ ಸೆಂ.ಮೀ. ಎತ್ತರಕ್ಕೆ ಬೆಳೆದಾಗ ಬುಡಗಳಿಗೆ ಮಣ್ಣು ಏರಿಸಬೇಕು.

ಹೂಮೊಗ್ಗನ್ನು ಚಿವುಟುವುದು : ಹೂ ಕಾಣಿಸಿಕೊಂಡ ಕೂಡಲೇ ಅವುಗಳನ್ನು ಚಿವುಟಿ ಹಾಕಬೇಕು. ಹಾಗೆಯೇ ಬೆಳೆಯಲು ಬಿಟ್ಟಲ್ಲಿ ಎಲೆಗಳ ಬೆಳವಣಿಗೆ ಮತ್ತು ಗುಣಮಟ್ಟಗಳು ಕುಸಿಯುತ್ತವೆ. ಇದರ ಉದ್ದೇಶ ಹೂವು ಬಳಸಿಕೊಳ್ಳುವ ತೇವ, ಪೋಷಕಾಂಶಗಳು ಎಲೆಗಳಿಗೇ ಸಿಗುವಂತೆ ಮಾಡುವುದು.

ಕೊಯ್ಲು ಮತ್ತು ಇಳುವರಿ ಬಿತ್ತನೆ ಮಾಡಿದ ಸುಮಾರು ೧೨ ರಿಂದ ೧೫ ವಾರಗಳ ನಂತರ ಸೊಪ್ಪನ್ನು ಹಂತ ಹಂತವಾಗಿ ಕೊಯ್ಲು ಮಾಡಬಹುದು. ಬೆಳೆ ಚೆನ್ನಾಗಿ ಫಲಿಸಿದಲ್ಲಿ ಹೆಕ್ಟೇರಿಗೆ ೨೦-೨೫ ಟನ್ ಸೊಪ್ಪು ಸಿಗುತ್ತದೆ.

ಕೀಟ ಮತ್ತು ರೋಗಗಳು : ಈ ಬೆಳೆಯನ್ನು ಪೀಡಿಸುವ ಕೀಟ ಮತ್ತು ರೋಗಗಳು ಕಡಿಮೆ.

ಬೀಜೋತ್ಪಾದನೆ : ಇದರಲ್ಲಿ ಅನ್ಯ-ಪರಾಗಸ್ಪರ್ಶ ಜಾಸ್ತಿ. ಹೆಕ್ಟೇರಿಗೆ ಸುಮಾರು ೬೦೦ ಕಿ.ಗ್ರಾಂ ಬೀಜ ಸಾಧ್ಯ.

* * *