ಇಂದು ಯಾವದೋ ಪ್ರದೇಶದ ಸಸ್ಯ ತಂದು  ದುಬಾರಿ ವೆಚ್ಚದಲ್ಲಿ  ಕೃಷಿಯ ಸರ್ಕಸ್ ಮಾಡುವ ಬದಲು ಸುಲಭದ ಕಾಡು ಗಿಡಗಳ ಕೃಯಲ್ಲಿ  ಮಾರುಕಟ್ಟೆ ಸಾಧ್ಯತೆ ಹುಡುಕುವದು ನಮ್ಮ ಭವಿಷ್ಯದ  ಹೆಜ್ಜೆಯಾಗಬೇಕಿದೆ. ಹಳ್ಳಿಗಾಡಿನ ಗಿಡ ಬಳಕೆಯ ಜ್ಞಾನದಲ್ಲಿ  ಕೃಷಿ ವಿಜ್ಞಾನ ಕಲಿಯುವದು  ಸಾಕಷ್ಟಿದೆ. ಮಲೆನಾಡಿನ ಅಡವಿ ಆಹಾರದಲ್ಲಿ ನಿಜವಾದ ಕೃಷಿ ಭವಿಷ್ಯದ ಸೂತ್ರಗಳಿವೆ.

ಅಡುಗೆಗೆ ಹುಡುಕೋದು ” ಇದು ಮಲೆನಾಡು, ಕರಾವಳಿ ಸೀಮೆಗಳಲ್ಲಿ ಹಳ್ಳಿಗಾಡಿನ ಮಹಿಳೆಯರು ಮಾಮೂಲಿಯಾಗಿ ಬಳಸುವ ಮಾತು ಇದು. ಬೆಳಗಿನ ಉಪಹಾರ ಮುಗಿಸಿ, ಪಾತ್ರೆ ತೊಳೆದು ಪುನಃ ಅಡುಗೆ ಮನೆ ಸೇರಿಸಿದ ಬಳಿಕ ಮಧ್ಯಾನ್ಹದ ಅಡುಗೆ ತಯಾರಿ ಶುರು. ಕೈಯಲ್ಲಿ ಮೋಟು ಕತ್ತಿ ಹಿಡಿದು ತೋಟ, ಭತ್ತದ ಗದ್ದೆ, ಹತ್ತಿರದ ಕಾಡು, ಹಿತ್ತಲುಗಳಲ್ಲಿ  ಓಡಾಟ. ಬಾಳೆ ಮರದ ದಿಂಡು ( ತಿರುಳು), ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ,ಮುಟ್ಟಿದರೆ ಮುನಿಯ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ,ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ  ಯಾವುದಾದರೂ ಸಸ್ಯ  ಸಂಗ್ರಹ.  ಇದು   ಇವರ ಸಾಂಪ್ರದಾಯಿಕ ಅಡವಿ ಆಹಾರ, ತರಕಾರಿ! ಕೃಷಿ ನೆಲದಲ್ಲಿ  ಓಡಾಡಿ ಮನೆಗೆ ಮರಳುವಾಗ ಅನಾಯಾಸವಾಗಿ  ಈ ಅಡುಗೆ ಪರಿಕರಗಳ ಸಂಗ್ರಹ. ಒಂದು ದಿನ ತಂದದ್ದು ಮರುದಿನ ಮತ್ತೆ  ತರುವದು  ತೀರ ಅಪುರೂಪ. ರಭಸದ ಮಳೆ ಸುರಿದರೆ  ಥಂಡಿ ಹವೆಗೆ  ಕನ್ನೆಕುಡಿ ಗೊಜ್ಜು, ಕೆಸವಿನ ಸೊಪ್ಪಿನ ಗೊಜ್ಜು  ತಯಾರಿಗೆ ಆದ್ಯತೆ. ಬೇಸಿಗೆ ಉರಿ ಬಿಸಿಲಲ್ಲಿ  ದೇಹ ತಂಪಾಗಿಸುವ  ಒಂದೆಲಗ ಸಂಗ್ರಹ. ಸುತ್ತಲಿನ ನೆಲದ ನೂರಾರು ಸಸ್ಯಗಳು  ಆರೋಗ್ಯದ ಅಡುಗೆ  ಆಧಾರವಾಗಿ  ಇವರ ಕಣ್ಣಿಗೆ ಢಾಳಾಗಿ ಕಾಣುತ್ತದೆ.

ಬಟಾಟೆ, ಮೂಲಂಗಿ, ಟೊಮೆಟೋದ ಮಾಮೂಲಿ ತರಕಾರಿ  ಬಳಕೆ ಎಲ್ಲಡೆಯಿದೆ.  ಇವುಗಳ ವಿಪರೀತ ಬೇಡಿಕೆಗೆ ತಕ್ಕಂತೆ ಕೃಷಿ ಕ್ಷೇತ್ರಗಳಲ್ಲಿ  ಇದೇ  ಬೆಳೆಯ ಎಕತಾನತೆ ಕಾಣುತ್ತದೆ. ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂದು ಅದೇ ಹತ್ತಿಪ್ಪತ್ತು ತರಕಾರಿಗಳನ್ನು ಹೊಟ್ಟೆ ತುಂಬಿಸುವ ಸರಕಾಗಿ ಕಂಡಿದ್ದೇವೆ.  ಇದನ್ನು ಬಳಸಿ ತಯಾರಿಸುವ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳು  ರಾರಾಜಿಸುತ್ತವೆ. ನಮ್ಮ ಅರಣ್ಯ ಜೀವನದಲ್ಲಿ  ಸುತ್ತಲಿನ ನೂರಾರು ಸಸ್ಯಗಳ ತೊಗಟೆ, ಬೇರು, ಚಿಗುರು, ಹೂವು, ಕಾಯಿ, ಹಣ್ಣು, ಬೀಜಗಳು ಬಳಕೆಯಲ್ಲಿ ಬೆಳೆದು  ಬಂದಿವೆ. ಸಸ್ಯಗಳ ಬಳಕೆ ವಿಶೇಷ ಗಮನಿಸಿದಾಗ ಇದು ವನವಾಸಿ ಬದುಕು ಕಲಿಸಿದ ಪಾಠ ಎಂಬುದು ಅರಿವಿಗೆ ಬರುತ್ತದೆ. ನಿರಂತರ ಒಡನಾಟದಲ್ಲಿ ಕಾಡು ಸಸ್ಯಗಳ ಪರಿಚಯ ಕ್ರಮೇಣ ಆಹಾರ, ಅರೋಗ್ಯದ ಸುಲಭ, ಸುಸ್ಥಿರ ಅಸ್ತ್ರವಾಗಿದೆ.

ವಾರದ ಹಿಂದೆ  ಉತ್ತರ ಕನ್ನಡದ ಶಿರಸಿಯ ನಮ್ಮ ಮನೆಯ ಸನಿಹದ ಕಾಡಲ್ಲಿ  ಒಂದು ಕಾರ್ಯಕ್ರಮ ಸಂಘಟಿಸಿದ್ದೆ. ಅಡವಿ ಸಸ್ಯಗಳ ಮೂಲಕ ಅಡುಗೆ ಪಾಠ ಹೇಳುವದು ಕಾರ್ಯಕ್ರಮದ ಮುಖ್ಯ ಉದ್ದೇಶ.ಕೇರಳದ  ಪಾಣಾಜೆ ವೈದ್ಯ ಮನೆತನದ ಮೂಲಿಕಾ ವೈದ್ಯ  ವೆಂಕಟ್ರಾಮ ದೈತೋಟ ಹಾಗೂ ಇವರ ಪತ್ನಿ  ಜಯಲಕ್ಷ್ಮಿ ದೈತೋಟ ಇಲ್ಲಿ  ಅಡವಿ ಆಹಾರದ ಆರೋಗ್ಯ ಪಾಠ  ಹೇಳಿದರು. ನೂರಾರು ಅಡುಗೆ ವಿವರಗಳ ವಿನಿಮಯ, ಸಸ್ಯ ಪರಿಚಯ ನಡೆಯಿತು. ಪ್ರತಿ ದಿನದ ಪಾನೀಯ, ತಿಂಡಿ, ಊಟಗಳಲ್ಲಿ ಕೇವಲ ಅಡವಿ ಸಸ್ಯಗಳ ಬಳಕೆಗೆ ಮಾತ್ರ  ಆದ್ಯತೆ!. ಬಿದಿರಕ್ಕಿ ಊಟ, ಮಸೆಸೊಪ್ಪಿನ ಪಾನಕ, ದಾಲ್ಚಿನ್ನಿ ಎಲೆಯ ಇಡ್ಲಿ, ಬಿಳಿ ಹಾಲವಾಣ ಚಕ್ಕೆ ಕಷಾಯ ಸೇರಿದಂತೆ ಒಟ್ಟೂ ೬೦ಕ್ಕೂ ಹೆಚ್ಚು ಅಡುಗೆ ವಿಶೇಷಗಳು  ಸಿದ್ದಗೊಂಡವು. ಕೀಟನಾಶಕ ಸಿಂಪರಣೆಯಿಲ್ಲದೇ  ಬೆಳೆದ ನೈಸರ್ಗಿಕ  ಉತ್ಪನ್ನಗಳ ಸೇವನೆ ಎಲ್ಲರಿಗೂ ಏನೋ  ವಿಶೇಷ  ಅನುಭವ ! ಹಸಿ ಸೊಪ್ಪುಗಳು ನೇರ ಚಟ್ನಿ, ತಂಬುಳಿಗಳ ತಯಾರಿಗೆ ಬಂದವು. ಇವು ನಮ್ಮ ಆರೋಗ್ಯದ ಹಸುರು ಮಾತ್ರೆಗಳೆಂಬುದು  ಅರ್ಥವಾುತು. ಯಾವ ಹಣ ಖರ್ಚು ಮಾಡದೇ ಮಲೆನಾಡಿನ ಅಡುಗೆಗೆ ರುಚಿ ಹೆಚ್ಚಿಸಿದ  ಇವು  ಲಾಗಾಯ್ತಿನಿಂದ ಆರೋಗ್ಯದ ಸೂತ್ರಗಳಾಗಿದ್ದವು.

ನಮ್ಮ ಹಿರಿಯಜ್ಜಿಯರು ನಿತ್ಯ ಅಡುಗೆ ತಯಾರಿಗೆ ಯಾವತ್ತೂ ಪೇಟೆ ತರಕಾರಿ ನಂಬಿದವರಲ್ಲ. ಚೀಲ ಹಿಡಿದು ಮಾರುಕಟ್ಟೆಗೆ ಓಡಿದವರಲ್ಲ.  ಮನೆಯ ಸುತ್ತಲಿನ ಸಸ್ಯಗಳ ಒಂದಿಲ್ಲೊಂದು ಭಾಗ ಸಂಗ್ರಹಿಸಿ ಅಡುಗೆಗಳಲ್ಲಿ ಬಳಸುವ ಪ್ರಾವೀಣ್ಯ ಅವರಿಗೆ ಸಿದ್ದಿಸಿದೆ. ಆಹಾರ ಸ್ವಾವಲಂಬನೆಗಳಲ್ಲಿ  ಈ ಕ್ರಮ ಅತ್ಯಂತ ಮಹತ್ವವಾದವು. 

ಇಂದು ನಾವು ಪೇಟೆಯಿುಂದ ಹಣ ತೆತ್ತು ಖರೀದಿಸುವ ತರಕಾರಿಗಳಲ್ಲಿ ಹಲವು ಕೊಳಚೆ ನೀರಿನಲ್ಲಿ ಬೆಳೆದವು. ಬೆಂಗಳೂರಿನ ಉದಾಹರಣೆ ಗಮನಿಸಿದರೆ ಇಲ್ಲಿನ  ವೃಷಭಾವತಿಯ ನೀರು ದೊಡ್ಡ ಪ್ರಮಾಣದಲ್ಲಿ ತರಕಾರಿ ಕೃಗೆ ಬಳಕೆಯಾಗುತ್ತದೆ. ಅಪಾಯಕಾರಿ ಮಾಲಿನ್ಯಯುಕ್ತ ನೀರಿನಲ್ಲಿ ಬೆಳೆದ ಬೆಳೆ ತನ್ನ ಸಸ್ಯ ಗುಣದಲ್ಲಿ  ಒಂದಿಷ್ಟು ವಿಷಗಳನ್ನು ಸಹಜವಾಗಿ ಸೇರಿಸಿಕೊಳ್ಳುತ್ತದೆ. ಇನ್ನು ರೋಗ, ಕೀಟ ನಿಯಂತ್ರಣಕ್ಕೆ ಬಳಸುವ ಕೀಟನಾಶಕಗಳಂತೂ  ನಮ್ಮನ್ನು  ಅಡುಗೆ ಮನೆಯಿಂದ ನೇರ ಆಸ್ಪತ್ರೆಗೆ ಸಾಗಿಸುವ ತಾಕತ್ತು ಹೊಂದಿವೆ ! ತರಕಾರಿಯನ್ನು ಕೃಷಿ ಮೂಲದಿಂದ ಪಡೆಯುವ  ಪ್ರಮಾಣ ಹೆಚ್ಚಿದಂತೆ  ಒಂದೇ ಜಾತಿಯ ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳುತ್ತಿದೆ. ರೋಗನಿಯಂತ್ರಣಕ್ಕೆ ವಿಷ ಸಿಂಪಡಿಸುವ ವರ್ತುಲದಲ್ಲಿ  ಕೃಷಿ ವಲಯ ನಿಂತಿದೆ. ಆಹಾರದಿಂದ ಆರೋಗ್ಯ ಎಂಬ ಅರಿವು ಮರೆತು ನಿತ್ಯ ಹೊಟ್ಟೆ ತುಂಬಿಸುವ ಕೆಲಸಕ್ಕೆ ನಾವು ಊಟ ಮಾಡುವಂತಾಗಿದೆ. ಬದುಕಿದ್ದಕ್ಕೆ  ಏನೋ ತಿಂದು ಚರ್ಮದ ಚೀಲ ಭರ್ತಿ ಮಾಡುವ  ಚಾಳಿ ನಮ್ಮದಾಗಿದೆ. ಸಂತೆಗೆ ಹೋಗಿ ತರಕಾರಿ ಖರೀದಿಸುವ ಪರಿಪಾಠ ಜಾಸ್ತಿಯಾದಂತೆ  ಆಸ್ಪತ್ರೆಗೆ ಹೋಗಿ ಮಾತ್ರೆ ಸೇವಿಸುವ ಪ್ರಮೇಯಗಳೂ ನಮಗರಿವಿಲ್ಲದಂತೆ ಹೆಚ್ಚಿವೆ.

ನಮ್ಮ ಆಹಾರ ಪರಂಪರೆಯ ದಾರಿಯಲ್ಲಿ ಮಲೆನಾಡಿನ ಮಹಿಳೆಯರ ಅಡುಗೆಗೆ ಹುಡುಕುವ ಜ್ಞಾನ ಇಂದಿನ ಆಧುನಿಕ ಯುಗದಲ್ಲಿ ಕಲ್ಪಿಸಲೂ ಅಸಾಧ್ಯವಾಗಿ ಕಾಣುತ್ತಿದೆ. ಪೇಟೆ ತರಕಾರಿ ಖರೀದಿಸದೆ  ಅಡವಿ ಆಹಾರದಲ್ಲಿ ಅಡುಗೆ ಸಾಧ್ಯತೆಯ ಮಹಾವಿದ್ಯೆಯಲ್ಲಿ ನುರಿತವರು  ಈಗ ನೇಪಥ್ಯಕ್ಕೆ ಸರಿದಿದ್ದಾರೆ!  ಇನ್ನೊಂದೆಡೆ ಈಗ ಮಲೆನಾಡು ಬದಲಾಗಿದೆ. ಕೃಷಿ ಕಾಡಿಗಿಂತ ಪೇಟೆ ತರಕಾರಿ ಹತ್ತಿರ ಎಂಬ ಸ್ಥಿತಿಯಿದೆ. ಸಾವಿರಾರು ಸಸ್ಯ  ವಿಶೇಷಗಳ ನೆಲೆ ಕಳೆದ ಮೂರು ದಶಕಗಳ ಈಚೆಗೆ ಎಕಜಾತಿ ಸಸ್ಯಗಳ ನೆಡುತೋಪಾಗಿ ರೂಪಾಂತರವಾಗಿದೆ. ಅನಾಯಾಸವಾಗಿ ಅಡುಗೆ ಮನೆ ಸೇರಿ ಇಲ್ಲಿನ ಅಡುಗೆಗೆ ಅನನ್ಯತೆ ತಂದ ಸಸ್ಯ ಸಂಕುಲಗಳು ಕ್ರಮೇಣ ಮಾಯವಾಗುತ್ತಿವೆ. ಸಸ್ಯ ನಾಶದ ಜತೆಗೆ ಇದನ್ನು ಅಡುಗೆಗೆ ಬಳಸಿಬಲ್ಲ ಜ್ಞಾನ ಕೂಡಾ ಕೈಜಾರುತ್ತಿದೆ.

ಉರುವಲು, ಉದ್ಯಮ, ಮನೆ ನಿರ್ಮಾಣಗಳಿಗಾಗಿ ಅರಣ್ಯ ಬಳಕೆಯ ಒತ್ತಡ ಸಾಕ್ಟದೆ. ಈಗ ಪುನಃ ಪರಂಪರೆಯ ಪ್ರೀತಿಯೆಂದು ಅಡವಿ ಅಹಾರಕ್ಕೆ ಆದ್ಯತೆ ನೀಡಿದರೆ  ನಮ್ಮ ಅಳಿದುಳಿದ ಅರಣ್ಯ ಉಳಿಸುವದು  ಹೇಗೆ ? ಸಹಜ ಪ್ರಶ್ನೆ ಏಳಬಹುದು. ನಮ್ಮ ನೆಲದ ಸಸ್ಯಗಳ ನಿಜವಾದ ಅರಿವು ನಮಗೆ ಇಂತಹ ಅಹಾರ ಬಳಕೆಯಿಂದ ದೊರಕಿದೆ.  ಕೃಷಿಯಲ್ಲಿ ಕಾಡು ಮೂಲದ ಸಸ್ಯಗಳು ಗೆದ್ದ ಉದಾಹರಣೆಯಿದೆ. ನಮ್ಮ ಅಡವಿ ಅಹಾರ ಬಳಕೆಯ ಪ್ರೀತಿಯಲ್ಲಿ ನೆಲದ ನೈಸರ್ಗಿಕ ಕಾಡಿನ ಸಂರಕ್ಷಣೆಯ ಸತ್ವವಿದೆ. ನಮಗೆ ಬೇಕಾದುದನ್ನು  ಉಳಿಸಿ ಬೆಳೆಸಿಕೊಳ್ಳಬೇಕು ಎಂಬ ಅರಿವು ಕೃಷಿ ಭೂಮಿಯಲ್ಲಿ ಗಿಡ ಬೆಳೆಸುವ ಸಾಧ್ಯತೆಯಾಗುತ್ತದೆ. ಇಂದು ಮುರುಗಲು, ಉಪ್ಪಾಗೆ, ರಾಮಪತ್ರೆ, ಕಾಳು ಮೆಣಸು, ಮಾಡಹಾಗಲು, ದಾಲ್ಚಿನ್ನಿ  ಹೀಗೆ  ಹಲವು ಸಸ್ಯಗಳು ಕೃಷಿ ಸಾಧ್ಯತೆ ತೋರಿಸಿವೆ. ಇನ್ನೂ  ಹಲವು ಸಸ್ಯ ಬೆಳೆಸಿ ಬಳಸಲು ಅವಕಾಶವಿರುವಾಗ  ಜನಸಾಮಾನ್ಯರ ಅಕ್ಕರೆಯ ಗಿಡ ಗುರುತಿಸಿ  ಬೆಳೆಸುವ ಕಾರ್ಯ ಜರೂರಿದೆ.

ಇಂದು ಹಳ್ಳಿಗಾಡಿನ ಕೆಲವೇ ಕೆಲವು ಮನೆಗಳಲ್ಲಿ ಬಳಕೆಯಲ್ಲಿರುವ ಸಸ್ಯಗಳು ಸುತ್ತಲಿನ ಪ್ರದೇಶದಲ್ಲಿ ಜನಪ್ರೀಯತೆ ಪಡೆದಾಗ ಅದನ್ನು ಬೆಳೆಸುವದಕ್ಕೂ ಚಾಲನೆ ದೊರೆಯಬೇಕು. ಆಗ ನಮ್ಮ ಹಾಗೂ ಕಾಡಿನ ಆರೋಗ್ಯ ವೃದ್ಧಿಯಾಗುತ್ತದೆ. ಕೃಷಿಗೆ ನೆರೆಯ ಕಾಡು ಮೂಲದಿಂದ ಹೊಸ ಬೆಳೆ ನೀಡುವ ಸಾಧ್ಯತೆ  ಪರಿಸರ ಸ್ನೇಹಿ ಕೃಷಿಯ  ಅತ್ಯುತ್ತಮ ಉದಾಹರಣೆಯಾಗುತ್ತದೆ. ಇಂದು ಯಾವದೋ ಪ್ರದೇಶದ ಸಸ್ಯ ತಂದು  ದುಬಾರಿ ವೆಚ್ಚದಲ್ಲಿ  ಕೃಷಿಯ ಸರ್ಕಸ್ ಮಾಡುವ ಬದಲು ಸುಲಭದ ಕಾಡು ಗಿಡಗಳ ಕೃಯಲ್ಲಿ ಮಾರುಕಟ್ಟೆ ಸಾಧ್ಯತೆ ಹುಡುಕುವದು ನಮ್ಮ ಭವಿಷ್ಯದ  ಹೆಜ್ಜೆಯಾಗಬೇಕಿದೆ. ಹಳ್ಳಿಗಾಡಿನ ಗಿಡ ಬಳಕೆಯ ಜ್ಞಾನದಲ್ಲಿ  ಕೃಷಿ ವಿಜ್ಞಾನ ಕಲಿಯುವದು  ಸಾಷ್ಟಿದೆ.