ಅಡಿಕೆ ಕೊಯ್ಲಿಗೆ ಕರಾವಳಿಯ ಹೊನ್ನಾವರದ ಕೊನೆಗೌಡರು ಘಟ್ಟ ಹತ್ತಿ ಮೇಲೆ ಬಂದೇಬಿಟ್ಟಿದ್ದಾರೆ. ಮಂಡೆ ತುರಿಸಲೂ ಪುರುಸೊತ್ತಿಲ್ಲ ಮಾರಾಯ್ತೆ ಎನ್ನುತ್ತಾ ಅಡಿಕೆ ಬೆಳೆಗಾರರು ಇನ್ನು ನಾಲ್ಕೈದು ತಿಂಗಳು ಕೊಯ್ಲಿನ ಕೆಲಸದಲ್ಲೇ ಮುಳುಗುತ್ತಾರೆ. ಕೊಯ್ಲಿನ ತಯಾರಿ, ಕೊಯ್ಲು ಸಂಸ್ಕರಣೆ ಹೀಗೆ ಮೂರು ಹಂತದ ಕೆಲಸಗಳು ನಡೆಯುತ್ತವೆ.
ಕೊಯ್ಲಿನ ತಯಾರಿ-ಕೊಯ್ಲು
ಅಡಿಕೆಯಲ್ಲಿ ಅನೇಕ ವಿಧಗಳಿವೆ. ಹಸ, ಆಪಿ, ಚಿಕಣಿ, ಬೆಟ್ಟೆ, ರಾಶಿ ಇಡಿ, ಗೊರಬಲು ಸರಕು, ಗೋಟು, ಕರಿಗಾಯಿ, ಲಡ್ಡು ಇತ್ಯಾದಿ. ಇವು ಕೆಂಪು ಅಡಿಕೆಯ ಮಾದರಿಗಳು. ಬಿಳಿ ಅಡಿಕೆಯಲ್ಲೂ ರಾಶಿ ಇಡಿ, ಬೆಟ್ಟೆ, ಗೋಟು, ಕಲ್ವಾರ್, ಲಡ್ಡು ಇತ್ಯಾದಿ ವಿಧಗಳಿವೆ. ಕೊಯ್ಲಿನ ಮೊದಲೇ ಯಾವ ವಿಧದ ಅಡಿಕೆ ತಯಾರಿಕೆ ಮಾಡಬೇಕೆನ್ನುವ ನಿರ್ಧಾರ ಮಾಡುತ್ತಾರೆ. ಕೆಲವು ಕೃಷಿಕರು ಆ ವರ್ಷದ ಹಕ್ಕೊತ್ತಾಯವನ್ನು ಆಧರಿಸಿ ಕೊಯ್ಲಿನ ರೀತಿಯನ್ನು ತೀರ್ಮಾನಿಸುತ್ತಾರೆ.
ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಸಾಗರ, ಸಿದ್ದಾಪುರ, ಶಿರಸಿ, ಯಲ್ಲಾಪುರಗಳಲ್ಲಿ ತಯಾರಿಸುವ ಅಡಿಕೆಗಳು ಒಂದಕ್ಕಿಂತ ಒಂದು ವಿಭಿನ್ನ; ಕೊಯ್ಲಿನ ರೀತಿಯೂ ವಿಭಿನ್ನ
ಸರಕು, ಹಸ ಮಾಡುವುದಾದರೆ ಚಿಗುರು ಅಡಿಕೆಯನ್ನು ಕೊಯ್ಯಿಸಬೇಕು. ಆಪಿ, ಚಿಕಣೆ ಮಾಡುವುದಾದರೆ ಎಳೆಯ ಅಡಿಕೆಗಳನ್ನು, ರಾಶಿ ಇಡಿ ಮಾಡಲು ಸ್ವಲ್ಪ ಬೆಳೆದ ಅಡಿಕೆಗಳನ್ನು, ಕರಿಗಾಯಿ, ಬೆಟ್ಟೆಗಳಿಗಾಗಿ ಪೂರ್ತಿ ಬೆಳೆದ ಅಡಿಕೆಗಳನ್ನು ಕೊಯ್ಯಿಸುತ್ತಾರೆ.
ಬಿಳಿ ಅಡಿಕೆ ಮಾಡುವುದಾದರೆ ಅಡಿಕೆ ಮೇಲಿನ ಸಿಪ್ಪೆ ಕೆಂಪಾಗುವವರೆಗೆ ಅಡಿಕೆ ಗೊನೆಯನ್ನು ಮರದಲ್ಲಿಯೇ ಬಿಡಬೇಕಾಗುತ್ತದೆ. ಇದರಲ್ಲೂ ಸಹ ವಿವಿಧ ಬಗೆ ತಯಾರಿಸಲು, ಅಡಿಕೆಯ ಮೇಲಿನ ಹಸಿರಿನಿಂದ ಕೆಂಬಣ್ಣಕ್ಕೆ ತಿರುಗುವ ಹಂತ, ಕೆಂಪಾದ ಮೇಲೆ ಕೆಂಪಾಗಿ ಅಡಿಕೆ ಗೊನೆಯಿಂದ ಉದುರುವ ವಿಭಿನ್ನ ಹಂತಗಳಲ್ಲಿ ಕೊಯ್ಲು ಮಾಡುತ್ತಾರೆ.
ಇಷ್ಟೆಲ್ಲಾ ಬಗೆಯ ಕೊಯ್ಲಿಗೆ ಅನೇಕ ವರ್ಷಗಳ ಅನುಭವ, ಸಂಶೋಧನೆಗಳ ಹಿನ್ನೆಲೆ ಇದೆ. ಆದರೂ ಅಡಿಕೆ ತಳಿಗುಣಗಳಿಂದಾಗಿ ಗುಣಮಟ್ಟದಲ್ಲಿ ಏರುಪೇರಾಗುವ ಸಾಧ್ಯತೆಗಳ ಬಗ್ಗೆ ಬಿ.ಟಿ. ನರೇಂದ್ರರವರು ವಿವರಣೆ ನೀಡುತ್ತಾರೆ.
ಹೆಚ್ಚಿನ ಕೃಷಿಕರು ಅಡಿಕೆ ಗೊನೆ ಕೊಯ್ಯುವವರ, ಕೂಲಿಯವರ, ಸಂಸ್ಕರಿಸುವವರ ಕೊರತೆಯಿಂದಾಗಿ ಕಟ್ಟುನಿಟ್ಟಾದ ಕೊಯ್ಲು ನಡೆಸುವುದಿಲ್ಲ. ಒಂದಿಷ್ಟು ಮರಗಳಲ್ಲಿ ಅಡಿಕೆ ಸಿಪ್ಪೆ ಕೆಂಪಾಯಿತು ಎನ್ನುವಾಗ ತೋಟದ ಒಂದು ದಿಕ್ಕಿನಿಂದ ಕೊಯ್ಲು ಪ್ರಾರಂಭಿಸುತ್ತಾರೆ. ಅದರಲ್ಲಿ ಚಿಗುರು, ಎಳೆತು, ಬೆಳೆದದ್ದು, ಸಿಪ್ಪೆ ಕೆಂಪಾದ ಹಾಗೂ ಹಣ್ಣಡಿಕೆ ಹೀಗೆ ಎಲ್ಲಾ ವಿಧಗಳೂ ಇರುತ್ತವೆ. ಸಿಪ್ಪೆ ಕೆಂಪಾದ ಮತ್ತು ಹಣ್ಣಡಿಕೆಗಳನ್ನು ಬಿಸಿಲಿಗೆ ಒಣಗಲು ಹಾಕುತ್ತಾರೆ. ಉಳಿದ ಹಸಿರು ಅಡಿಕೆಗಳನ್ನು ಸಿಪ್ಪೆ ಬಿಡಿಸಿ ಕೆಂಪು ಅಡಿಕೆ ಮಾಡುತ್ತಾರೆ.
ಚನ್ನಗಿರಿ, ಕುಂದೂರು, ಹೊನ್ನಾಳಿ, ಭೀಮಸಮುದ್ರ, ಭದ್ರಾವತಿ, ತರೀಕೆರೆ ಮೊದಲಾದ ಅರೆಮಲೆನಾಡು ಪ್ರದೇಶಗಳಲ್ಲಿ ಆಗಸ್ಟ್ನಿಂದ ನವೆಂಬರ್ವರೆಗೆ ಕೊಯ್ಲು ಸುಗ್ಗಿ. ಇದನ್ನು ಮುಗಿಸಿದ ಗುತ್ತಿಗೆದಾರರು, ಸಂಸ್ಕರಿಸುವವರು ಇಬ್ಬರೂ ಮಲೆನಾಡಿಗೆ ಬರುತ್ತಾರೆ. ಈ ಐದು ತಿಂಗಳು ಅವರಿಗೆ ಅಡಿಕೆ ಕೊಯ್ಲು ಒಂದು ಉಪಕಸುಬು.
ಗುತ್ತಿಗೆದಾರರು ಫಲಗುತ್ತಿಗೆ, ಚೇಣಿ, ಹಸಿರು ಅಡಿಕೆ ಗುತ್ತಿಗೆ, ತೂಕದ ಲೆಕ್ಕ, ಅಡಿಕೆಲೆಕ್ಕ, ಗೊನೆ ಲೆಕ್ಕ ಹೀಗೆ ಎಲ್ಲಾ ರೀತಿಯ ಒಪ್ಪಂದ-ವ್ಯವಹಾರ ನಡೆಸುತ್ತಾರೆ.
ಫಲಗುತ್ತಿಗೆ
ತೋಟದ ವೀಕ್ಷಣೆ, ಆ ವರ್ಷದ ಫಸಲಿನ ಅಂದಾಜು. ನಂತರ ಅದಕ್ಕೆ ತಕ್ಕ ಬೆಲೆ ನಿರ್ಧರಿಸುತ್ತಾರೆ. ಕೃಷಿಕನೇ ಅಡಿಕೆ ಕೊಯ್ಲು ಮಾಡಿಸಿಕೊಡಬೇಕು. ಅಂದಾಜಿಗಿಂತ ಹೆಚ್ಚಿರಲಿ, ಕಮ್ಮಿಯಿರಲಿ, ಕೊಯ್ಲಿನ ಪ್ರಾರಂಭದಲ್ಲಿ, ಮಧ್ಯೆ ಹಾಗೂ ಅಂತಿಮ ಕೊಯ್ಲಿನ ಸಮಯಕ್ಕೆ ಹಣ ಸಂದಾಯ ಮಾಡುತ್ತಾರೆ. ಹಣವನ್ನು ಮೂರು ಕಂತಿನಲ್ಲಿ ಕೊಟ್ಟರೂ ಒಪ್ಪಂದ ಮೊದಲೇ ಗಟ್ಟಿಯಾಗಿರುತ್ತದೆ.
ಚೇಣಿ
ಫಲಗುತ್ತಿಗೆ ಮಾದರಿಯಲ್ಲೇ ಆದರೂ ಕೊಯ್ಲು ಮಾತ್ರ ಗುತ್ತಿಗೆದಾರನೇ ಮಾಡಿಸಬೇಕು. ನಿರ್ದಿಷ್ಟ ಸಮಯದೊಳಗೆ ಸಂಪೂರ್ಣ ಕೊಯ್ಲಾಗಬೇಕು, ಹಣಸಂದಾಯ ಮಾಡಬೇಕು. ವ್ಯವಹಾರ ಚುಕ್ತಾಗಬೇಕು ಎನ್ನುವುದು ಕಡ್ಡಾಯ.
ಹಸಿರು ಅಡಿಕೆ ಗುತ್ತಿಗೆ
ಮಲೆನಾಡಿನ ಕೆಂಪು ಅಡಿಕೆಗೆ ಬೆಲೆ ಜಾಸ್ತಿ. ಅದಕ್ಕಾಗಿ ಅಡಿಕೆ ಸಿಪ್ಪೆ ಹಸಿರು ಇರುವಾಗಲೇ ಕೊಯ್ಯಿಸಿ, ಸಿಪ್ಪೆ ಬಿಡಿಸಿ, ಕೆಂಪು ಚೊಗರಿನಲ್ಲಿ ಬೇಯಿಸಿ, ಒಣಗಿಸಿ ಕೆಂಪು ಅಡಿಕೆ ತಯಾರಿಸುತ್ತಾರೆ. ಆದರೆ ಕೆಂಪು ಸಿಪ್ಪೆಯ, ಹಣ್ಣಾದ ಅಡಿಕೆಗೆ ಬೆಲೆ ಜಾಸ್ತಿ, ಬಿಳಿ ಅಡಿಕೆಗೆ ಬೆಲೆ ಕಡಿಮೆ. ಅದಕ್ಕಾಗಿ ಗುತ್ತಿಗೆದಾರರು ಕೇವಲ ಹಸಿರು ಸಿಪ್ಪೆಯ ಅಡಿಕೆಯನ್ನು ಮಾತ್ರ ಕೊಳ್ಳುತ್ತಾರೆ. ಕೃಷಿಕನು ಅಡಿಕೆ ಗೊನೆಗಳನ್ನು ಕೊಯ್ಯಿಸಿ ಅದರಲ್ಲಿ ಹಸಿರುಸಿಪ್ಪೆ, ಕೆಂಪುಸಿಪ್ಪೆ ಅಡಿಕೆಗಳನ್ನು ಬೇರ್ಪಡಿಸಿ ಕೊಡಬೇಕು.
ತೂಕದ ಲೆಕ್ಕ
ಕೃಷಿಕನು ಅಡಿಕೆ ಗೊನೆಗಳನ್ನು ಕೊಯ್ಯಿಸಿ ಎಲ್ಲಾ ಅಡಿಕೆಗಳನ್ನೂ ಗೊನೆಯಿಂದ ಬಿಡಿಸಬೇಕು. ಅದನ್ನು ತೂಕದ ಲೆಕ್ಕದಲ್ಲಿ ಗುತ್ತಿಗೆದಾರರು ಕೊಳ್ಳುತ್ತಾರೆ.
ಸುಗ್ಗಿಯ ಸಮಯದಲ್ಲಿ ಬೆಲೆ ಏರಿಳಿತವಿರುತ್ತದೆ. ತೂಕದ ಲೆಕ್ಕದಲ್ಲಿ ಕೊಡುವವರು ಒಮ್ಮೆಲೇ ಅಡಿಕೆಗೊನೆಗಳನ್ನು ಕೊಯ್ಯಿಸದೇ ಬೇರೆ ಬೇರೆ ಸಮಯದಲ್ಲಿ ಕೊಯ್ಯಿಸುತ್ತಾರೆ. ಚಿಗುರು ಹಾಗೂ ಹಣ್ಣಡಿಕೆಗಳ ತೂಕ ಕಡಿಮೆ. ಹದವಾಗಿ ಬೆಳೆದ ಅಡಿಕೆಗಳ ತೂಕ ಹೆಚ್ಚು. ಹೀಗಾಗಿ ಒಟ್ಟಿಗೆ ನೀಡದೆ ಅಂತರವಿಟ್ಟು ಕೊಡುವುದು ಒಳ್ಳೆಯದು.
ಅಡಿಕೆಗೊನೆ ಲೆಕ್ಕ
ಉತ್ತಮ ಫಸಲಿನ ತೋಟದಲ್ಲಿ ಅಡಿಕೆ ಗೊನೆಗಳ ಲೆಕ್ಕದಲ್ಲಿಯೂ ವ್ಯಾಪಾರ ಮಾಡುತ್ತಾರೆ. ೨೦ ಅಡಿಕೆಯಿರಲಿ, ೮೦೦ ಅಡಿಕೆಯಿರಲಿ, ಎಲ್ಲಾ ಗೊನೆಗಳಿಗೂ ಒಂದೇ ಲೆಕ್ಕ. ಇದು ಕೃಷಿಕ-ಗುತ್ತಿಗೆದಾರರ ಗಾಢ ಅನುಭವ ಆಧರಿಸಿದೆ.
ಕೊಯ್ಲಿನ ಖರ್ಚು ವೆಚ್ಚ
ಅಡಿಕೆ ಗೊನೆಗಳನ್ನು ಕೊಯ್ಯಲು ಹಗ್ಗ, ದೋಟಿ, ಕತ್ತಿಗಳನ್ನು ಕೊನೆಗೌಡನೇ ತರುತ್ತಾನೆ. ಬುಟ್ಟಿ-ಕಲ್ಲಿಗಳನ್ನು ಕೃಷಿಕ ಒದಗಿಸಿದರಾಯಿತು. ಕೊಯ್ಲು ಗುತ್ತಿಗೆ ಅಥವಾ ದಿನಗೂಲಿ ಆಧಾರದಲ್ಲಿ ನಡೆಯುತ್ತದೆ. ಗುತ್ತಿಗೆಯಲ್ಲಿ ಎಕರೆವಾರು ಲೆಕ್ಕ ಅಥವಾ ಗೊನೆ ಲೆಕ್ಕ ಆಧರಿಸಿ ಒಪ್ಪಂದವಾಗುತ್ತದೆ. ಅಡಿಕೆಗೊನೆ ಕೊಯ್ಲು, ತೋಟದಿಂದ ಮನೆಗೆ ತರುವುದು, ಸಂಸ್ಕರಣೆಯವರೆಗೂ ಏನೆಲ್ಲಾ ಕೆಲಸಗಳು ಸೇರಿರುತ್ತವೆ.
ದಿನಗೂಲಿಯಾದರೆ ಕೊನೆಗೌಡ, ಹಗ್ಗದಿಂದ ಜಾರಿ ಬರುವ ಗೊನೆಗಳನ್ನು ಹಿಡಿಯುವವ, ಅಡಿಕೆ ಹೊರುವವರು, ಆರಿಸುವವರು ಹೀಗೆ ಎಲ್ಲರಿಗೂ ಪ್ರತ್ಯೇಕ ಕೂಲಿ ತೆರಬೇಕಾಗುತ್ತದೆ.
ಹೆಚ್ಚು ಕೂಲಿಗಳು ಸಿಗುವ ಕಡೆ ಕೂಲಿ ಕೆಲಸ. ಕೂಲಿಗಳು ಸಿಗದೆಡೆ, ದುಬಾರಿ ಖರ್ಚುವೆಚ್ಚಗಳಾದರೂ ಕೂಡ ಗುತ್ತಿಗೆ ಒಪ್ಪಂದವಾಗುತ್ತದೆ. ಖರ್ಚು ಎರಡು ರೀತಿಯ ಕೆಲಸಗಳಲ್ಲೂ ಸರಾಸರಿ ಸಮಯವಾಗಿರುತ್ತದೆ. ಒಂದು ಎಕರೆ ತೋಟಕ್ಕೆ ಸುಮಾರು ೮೦೦೦ ರೂಪಾಯಿಗಳು ಕೇವಲ ಕೊಯ್ಲಿನ ಖರ್ಚು ಆಗುತ್ತದೆ.
ಕೊಯ್ಯುವಿಕೆ
ಕೊನೆಗೌಡ ಎದೆ, ಸೊಂಟಗಳಿಗೆ ವಿಶೇಷ ದಟ್ಟಿ ಬಿಗಿದುಕೊಂಡು ಮರವೇರಲು ಸಿದ್ಧನಾಗುತ್ತಾನೆ. ಉದ್ದನೆಯ ಬಿದಿರಿನ ದೋಟಿ ಹಾಗೂ ದಪ್ಪದಾದ ಬಾವಿ ಹಗ್ಗಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಮರವೇರುತ್ತಾನೆ. ಸೊಂಟಕ್ಕೆ ಕಟ್ಟಿಕೊಂಡ ಹಗ್ಗಕ್ಕೆ ಉದ್ದನೆಯ ಬಾವಿಹಗ್ಗವನ್ನು ಕಟ್ಟಿ ಇಳಿಬಿಡುತ್ತಾನೆ. ಕಾಲಿಗೆ ಸಿಕ್ಕಿಸಿಕೊಂಡ ಕಾಲೆಳೆಯ ಮೂಲಕ ಮೇಲೇರಿದಂತೆ ಸೊಂಟಕ್ಕೆ ಕಟ್ಟಿಕೊಂಡು ಬಾವಿಹಗ್ಗ ಮೇಲಿನಿಂದ ನೆಲದವರೆಗೆ ಇಳಿಯುತ್ತದೆ.
ದೋಟಿಯಿಂದ ಮರ ಬಗ್ಗಿಸಿಕೊಂಡು, ತಾನು ಹತ್ತಿದ ಮರಕ್ಕೆ, ಬಗ್ಗಿಸಿದಮರ ಸೇರಿಸಿ ದೋಟಿಯೊಂದಿಗೆ ಕಟ್ಟುತ್ತಾನೆ. ಮರದ ತುದಿಯಲ್ಲಿರುವ ಅಡಿಕೆ ಗೊನೆಯನ್ನು ತನ್ನ ಹರಿತ ಕತ್ತಿಯಿಂದ ಕತ್ತರಿಸಿ ಕೈಗೆ ತೆಗೆದುಕೊಳ್ಳುತ್ತಾನೆ. ಸೊಂಟದಿಂದ ನೆಲದವರೆಗೆ ಇಳಿದ ಬಾವಿಹಗ್ಗಕ್ಕೆ ಸರಿಯಾಗಿ ಸಿಕ್ಕಿಸಿಬಿಡುತ್ತಾನೆ. ಆ ಅಡಿಕೆಗೊನೆಯು ಝೊಯ್… ಎನ್ನುತ್ತಾ ಕೆಳಗೆ ಹಗ್ಗದ ಮತ್ತೊಂದು ತುದಿ ಹಿಡಿದು ನಿಂತ ಕೆಲಸಗಾರನ ಕೈಗೆ ಬರುತ್ತದೆ. ಹೀಗೆ ವೇಗದಿಂದ ಬಂದು ಅಪ್ಪಳಿಸುವ ಅಡಿಕೆಗೊನೆ ನೆಲಕ್ಕೆ ತಾಗದಂತೆ, ಹಗ್ಗ ಎಳೆಯದಂತೆ ಮೇಲಿದ್ದ ಕೊನೆಗೌಡನಿಗೆ ಅಪಾಯವಾಗದಂತೆ ಹಾಗೂ ಹಿಡಿಯುವ ಆತುರದಲ್ಲಿ ಸಮತೋಲನ ತಪ್ಪಿ ನೆಲಕ್ಕೆ ಬೀಳದಂತೆ ಅದನ್ನು ಹಿಡಿಯಬೇಕು. ಇದಕ್ಕೂ ಅನುಭವ ಹಾಗೂ ಶ್ರಮ ಎರಡೂ ಬೇಕು. ಜೊತೆಗೆ ಚುರುಕುತನ, ಸಮಯದ ನಿರ್ವಹಣೆ ಈ ಎಲ್ಲಾ ಲೆಕ್ಕಾಚಾರ ತಿಳಿದ ಬುದ್ಧಿವಂತನಾಗಿರಬೇಕು.
ಹೀಗೆ ಅಡಿಕೆ ಗೊನೆಯೊಂದು ಮರದ ತುದಿಯಿಂದ ಕೆಳಕ್ಕಿಳಿಯುತ್ತದೆ.
ಗೋಣಿ ಹಾರಿಸಿ ಕೊಯ್ಯುವಿಕೆ
ಕೊನೆಗೌಡನು ಅಡಿಕೆ ಮರದ ಅರ್ಧಕ್ಕೆ ಹತ್ತುತ್ತಾನೆ. ಗೊನೆಯು ದೋಟಿಗೆ ಸಿಕ್ಕುವಂತಾದಾಗ ಅಲ್ಲಿ ಮರಕ್ಕೆ ಕಡಿಕೆಮಣೆ ಬಿಗಿದು ಗಟ್ಟಿಯಾಗಿಸುತ್ತಾನೆ. ಅದರ ಮೇಲೆ ಕುಳಿತು ಅಡಿಕೆ ಗೊನೆಯನ್ನು ಹಿಡಿದು ಎಳೆಯುತ್ತಾನೆ. ಹೀಗೆ ಉದುರುವ ಅಡಿಕೆಗಳೊಂದಿಗೆ ಗೊನೆಯು ಕತ್ತರಿಸಿ ಕೆಳಕ್ಕೆ ಬೀಳತೊಡಗುತ್ತದೆ. ಕೆಳಗೆ ಒಬ್ಬರು ದೊಡ್ಡ ಗೋಣಿಚೀಲವನ್ನು ಮಡಿಕೆ ಮಾಡಿಕೊಂಡು ಹಿಡಿದು ನಿಂತಿರುತ್ತಾರೆ. ಗೊನೆಯು ಸುಮಾರು ಎಂಟು ಅಡಿ ಎತ್ತರಕ್ಕೆ ಬರುತ್ತಿದ್ದಂತೆ ಗೋಣಿಚೀಲದ ಬುಡವನ್ನು ಕೈಯಲ್ಲಿ ಹಿಡಿದುಕೊಂಡು ಬಲೆ ಬೀಸಿದಂತೆ ಬೀಸುತ್ತಾರೆ. ಗೊನೆ ಹಾಗೂ ಗೊನೆಯೊಂದಿಗೆ ಉದುರಿದ ಅಡಿಕೆಗಳೆಲ್ಲಾ ಗೋಣಿಚೀಲದೊಳಗೆ ಬಂಧಿಯಾಗುತ್ತವೆ. ಅದನ್ನು ಬುಟ್ಟಿಯಲ್ಲಿ ಸುರುವುತ್ತಾರೆ. ಇದಕ್ಕೆ ಕೌಶಲ್ಯ ಹಾಗೂ ಅನುಭವ, ಚುರುಕುತನ, ತರ್ಕ ಇವೆಲ್ಲಾ ಬೇಕು.
ಗಮನಿಸುವ ಕೆಲಸಗಳು
ಅಡಿಕೆಗೊನೆ ಕೊಯ್ಯುವಾಗ ಮುಂದಿನ ಫಸಲಿನ ಅಡಿಕೆ ಹಿಂಗಾರ ಹಾಳಾಗದ ರೀತಿ ಕೊಯ್ಯಬೇಕು.
ನಿರ್ದಿಷ್ಟವಾಗಿ ಬೆಳೆದ ಅಡಿಕೆಗೊನೆಗಳನ್ನು ಮಾತ್ರ ಕೊಯ್ಯಬೇಕು.
ರೋಗ ಬಂದ, ಹಾಳಾದ, ಫಸಲು ಕಡಿಮೆ ಬರುತ್ತಿರುವ ಹಳೆಯಮರಗಳನ್ನು ತಲೆಚಂಡೆ ಕಡಿಸಬೇಕು. ಅಲ್ಲಿ ಬದಲಿ ಸಸಿ ನೆಡಬೇಕು.
ಹೆಚ್ಚು ಫಸಲು, ಕಡಿಮೆ ಫಸಲು ಬಂದ ಮರಗಳನ್ನು ಗುರುತಿಸಬೇಕು. ಮುಂದೆ ಸೂಕ್ತ ಗೊಬ್ಬರ ಹಾಗೂ ಬೇಕಾಗುವಷ್ಟು ನೀರು ಪೂರೈಸಬೇಕು.
ಮರ ಹತ್ತಿ ಕೊಯ್ಯುವ ಕೊನೆಗೌಡನ ಸ್ಥಿತಿ-ಗತಿ ಆರೋಗ್ಯವನ್ನು ಗಮನಿಸುತ್ತಿರಬೇಕು. ಇಲ್ಲದಿದ್ದರೆ ಆತ ಮರದಿಂದ ಬೀಳುವ ಸಾಧ್ಯತೆಯಿದೆ.
Leave A Comment