ಅಡಿಕೆ ತೋಟದ ಸಾಲುಮರಗಳ ಮಧ್ಯೆ ೩೦ ಮಾರು ಅಂತರದಲ್ಲಿರುವ ಲವಂಗದ ಗಿಡಗಳು ಮೊಗ್ಗು ಬಿಟ್ಟು ತೋಟಕ್ಕೆ ಸುವಾಸನೆ ಹಚ್ಚಿದ್ದವು.  ಎರಡಾಳು ಎತ್ತರದ ಗಿಡಗಳು.  ಗಿಡದ ತುಂಬಾ ತುದಿಯಲ್ಲಿ ಎಲೆ ಕಾಣಿಸದಷ್ಟು ಗೊಂಚಲು ಗೊಂಚಲು ಮೊಗ್ಗುಗಳು.  ಕೃಷಿಕ ಪ್ರಭಾಕರರವರು ಆಚೀಚೆಗೆ ಅಡಿಕೆ ಮರ ಹತ್ತಿ ಕಷ್ಟಪಟ್ಟು ಮೊಗ್ಗುಗಳನ್ನು ಕೊಯ್ಯುತ್ತಿದ್ದರು.  ಗುಲಾಬಿ ತುಟಿಯ ಬಣ್ಣದ ಮೊಗ್ಗುಗಳು, ಗೊಂಚಲುಗಳು. ಎಷ್ಟು ಕೊಯ್ದರೂ ಚೀಲ ತುಂಬುತ್ತಿರಲಿಲ್ಲ.  ಇಡೀ ಮರದಲ್ಲಿ ನಾಲ್ಕೈದು ಕಿಲೋಗ್ರಾಂ ಸಿಗಬಹುದು.

ನಾಲ್ಕು ಬಿಸಿಲು ಒಣಗಿಸುತ್ತಿದ್ದಂತೆ ಕಂದುಬಣ್ಣವಾಗಿ ಕಪ್ಪಾಗಿಬಿಡುತ್ತದೆ.  ಅನಂತರ ಜೋಪಾನವಾಗಿ ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿ ಇಟ್ಟರೆ ಕೆಡುವುದಿಲ್ಲ.

ಮೊಗ್ಗುಗಳು ಅರಳಿದರೆ ಹೂವಾಗುತ್ತದೆ. ಹೂವು ಕಾಯಿಯಾಗಿ ಹಣ್ಣಾಗುತ್ತದೆ.  ಹಣ್ಣಿನ, ಕಾಯಿಯ ಸಿಪ್ಪೆ ಬಿಡಿಸಿ ಬೀಜ ತೆಗೆಯಬೇಕು.  ಅದನ್ನು ನೆರಳಿನಲ್ಲಿ ಒಣಗಿಸಿಟ್ಟುಕೊಳ್ಳಬಹುದು.

ಮರಳು, ಗೊಬ್ಬರ, ಮಣ್ಣು ಬೆರೆಸಿದ ಏರುಮಡಿ ಮಾಡಿ ಒಂದು ಇಂಚು ಆಳಕ್ಕೆ ಬೀಜಗಳನ್ನು ನೆಟ್ಟರೆ ಆಯಿತು.  ದಿನಾ ನೀರು ಕೊಡಬೇಕು.  ೨೫ ದಿನಗಳಲ್ಲಿ ಮೊಳಕೆ ಬರುತ್ತದೆ. ಇದೆಲ್ಲಾ ನೆರಳಿನಲ್ಲಾಗಬೇಕು.

ನೀರು ಬಸಿಯುವ ಕೆಂಪು ಮಣ್ಣಿನಲ್ಲಿ ಅಧಿಕ ಇಳುವರಿ.  ಜೌಗಿನಲ್ಲಿ ಬೆಳೆದರೂ ಇಳುವರಿ ಕಡಿಮೆ.  ಸಮುದ್ರದಿಂದ ಬೀಸಿದ ಗಾಳಿ ಗುಡ್ಡ ಬಳಸಿ ಬಂದರೆ ಇದಕ್ಕೆ ಹಿತ.  ಅತಿ ಮಳೆ ಬೇಡ.

ಲವಂಗ ಮೆದು ಮರ.  ಅಡಿಕೆ ಸೋಗೆ ಬಿದ್ದು ಗಿಡ ಮುರಿಯಬಹುದು.  ಆದರೂ ಮತ್ತೊಂದು ಕಡೆ ಚಿಗುರುತ್ತದೆ.  ಇದನ್ನು ಪೊದೆಯಂತೆಯೂ ಮರದಂತೆಯೂ ಬೆಳೆಸಬಹುದು.  ಮರವಾದರೆ ಹತ್ತಿ ಕೊಯ್ಯಲು ಸಾಧ್ಯವಿಲ್ಲ.

ಕಾಂಡಕೊರಕ ಹಾಗೂ ಎಲೆಯುದುರುವ ರೋಗಗಳಿವೆ.  ಸದ್ಯಕ್ಕೆ ಬೋರ್ಡೋ ಮಿಶ್ರಣವೊಂದೇ ಪರಿಹಾರ.  ಅಡಿಕೆ ಕೊಯ್ಲಿನ ನಂತರ ಲವಂಗದ ಕೊಯ್ಲು ಬರುತ್ತದೆ.  ಅದಕ್ಕಾಗಿ ಅಡಿಕೆಯೊಂದಿಗೆ ಪೈಪೋಟಿ ಇಲ್ಲ.

ಎರಡು ವರ್ಷವಾದ ಸಸಿಯನ್ನು ಎರಡು ಚದುರ ಒಂದು ಅಡಿ ಆಳದ ಗುಂಡಿ ತೆಗೆದು ಗೊಬ್ಬರ ತುಂಬಿ ನೆಟ್ಟರಾಯಿತು.  ಅಡಿಕೆಗೆ ಹಾಕಿದ ಗೊಬ್ಬರ, ನೀರೇ ಇದಕ್ಕೂ ಉಪಯುಕ್ತ.  ಹಾಗಂತ ಅದರಿಂದ ಕಸಿಯುವುದಿಲ್ಲ.

ಸಾಗರ ತಾಲ್ಲೂಕು ಹೊಸಳ್ಳಿಯ ಪ್ರಭಾಕರರವರು ಅಡಿಕೆ ತೋಟದ ಮಧ್ಯೆ ಬೆಳೆದಿದ್ದಾರೆ.  ನೆಟ್ಟ ಮೇಲೆ ಗಿಡ ಬದುಕಿಸಿ ಎತ್ತರ ಮಾಡಿದ್ದು ಬಿಟ್ಟರೆ ಬೇರೆ ಉಪಚಾರ ಮಾಡಿಲ್ಲ ಎನ್ನುತ್ತಾರೆ.  ಬಿಸಿಲು ನೆರಳಿನಲ್ಲಿ ಬೆಳೆದ ಗಿಡಗಳಿಗೆ ೨೦ ವರ್ಷ ದಾಟಿದೆ.  ವರ್ಷ ಬಿಟ್ಟು ವರ್ಷ ಫಸಲು ಬರುತ್ತಲೇ ಇದೆ.

ಗಿಡವೊಂದರಿಂದ ಒಂದು ಸಾವಿರ ರೂಪಾಯಿಗಳ ಆದಾಯ ನಿಶ್ಚಿತ.  ಕೊಯ್ಲು ಮಾತ್ರ ಹೆಚ್ಚು ಶ್ರಮ, ಸಮಯ ಬಯಸುತ್ತದೆ.

ಲವಂಗ ಗಿಡ ನೆಟ್ಟು ನಾಲ್ಕನೇ ವರ್ಷಕ್ಕೆ ಫಲ ಕೊಡುತ್ತದೆ.  ಆದರೆ ಒಂದೇ ಸಮನೆ ಬೆಳೆಯುತ್ತಾ ಮೇಲೇರುವ ಮಧ್ಯದ ಕಾಂಡವನ್ನು ಬಗ್ಗಿಸಿದರೆ ಅದೇ ವರ್ಷ ಸುತ್ತಲಿನ ಕೊಂಬೆಗಳಲ್ಲೆಲ್ಲಾ ಮೊಗ್ಗುಗಳು ಬಿಟ್ಟಿರುತ್ತವೆ.  ಲವಂಗ ಮೊಗ್ಗು ಬಿಡದಿದ್ದಾಗಲೂ ಈ ರೀತಿ ಮಾಡಬಹುದು.

ಲವಂಗವು ವಿದೇಶಗಳಿಗೆ ರಫ್ತಾಗುವ ಬಹು ಬೇಡಿಕೆಯ ಸಾಂಬಾರ ಬೆಳೆ.