ಅಡಿಕೆ ಬೆಳೆಗಾರ್ತಿಯೊಬ್ಬರು ಈ ಭಾಗದ ಮೊತ್ತಮೊದಲ ನೈಜ ಚಾಕೋಲೇಟ್ ಉದ್ದಿಮೆಗೆ ಏರಿದ್ದಾರೆ. ಈ ಸಾಹಸಕ್ಕೆ ಅವರಿಗೆ ಆತ್ಮವಿಶ್ವಾಸ ಕೊಟ್ಟದ್ದು ಮೂರು ವರುಷಗಳ ಛಲದ ಕಲಿಕೆ. ಪಾಶ್ಚಿಮಾತ್ಯ ದೇಶಗಳಲ್ಲಿ ಒಳ್ಳೆಯ ಬೇಡಿಕೆ ಇರುವ ಕರಕುಶಲ ಚಾಕೋಲೇಟ್ ನಗರಗಳನ್ನು ಗೆಲ್ಲಲು ಈಗ ಹಳ್ಳಿಯಿಂದ ಯಾತ್ರೆ ಆರಂಭಿಸಿದೆ. |
ಹೇಳಿಕೊಳ್ಳುವ ಪೂರ್ವಾನುಭವ ಇಲ್ಲದ ಗ್ರಾಮೀಣ ಗೃಹಿಣಿ ಮಹತ್ವಾಕಾಂಕ್ಷಿ ಚಾಕೊಲೇಟ್ ಉದ್ದಿಮೆ ಆರಂಭಿಸಲು ಸಾಧ್ಯವೇ?
ದಕ್ಷಿಣ ಕನ್ನಡ ಕೃಷಿಕುಟುಂಬದ ಹೆಣ್ಮಗಳೊಬ್ಬರು ‘ಸಾಧ್ಯ’ ಅಂತ ಮಾಡಿತೋರಿಸಹೊರಟಿದ್ದಾರೆ. ಅವರೇ ಸುಳ್ಯ ಬೀರಮಂಗಲದ ರಾಜಿ.ಆರ್.ಕೆ.ಭಟ್. ಇವರ ಸಾಧನೆಗೆ ಗರಿಗಟ್ಟಿರುವುದು ಈ ಭಾಗದಲ್ಲಿ ಬೇರೆಲ್ಲೂ ತಯಾರಿಸದ ವಿಶಿಷ್ಟ ಉತ್ಪನ್ನ ಎಂಬ ಅಂಶ.
‘ನಾನು ಚಾಕೊಲೇಟ್ ತಿಂದೇ ಬೆಳೆದವಳು’ ಎನ್ನುವಾಗ ಅವರ ಮುಖ ಅರಳುತ್ತದೆ. ಚಾಕೊಲೇಟ್ ತಯಾರಿ ಬಹುಕಾಲದ ಅಮೂರ್ತ ಕನಸು. ಮೂರು ವರುಷಗಳಿಂದ ಅದು ಮೂರ್ತ ರೂಪ ಪಡೆಯುತ್ತಿದ್ದು, ಈಗ ಮಾರುಕಟ್ಟೆಗೆ ಇಳಿದಿದೆ!
ಕನಸು ನನಸಾಗಿಸಲು ಅವರು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ. ಎಲ್ಲಿಂದ ಶಿಕ್ಷಣ ಸಿಕ್ಕೀತು ಎಂಬ ಮಾಹಿತಿಯ ಜಾಲಾಟ, ಅಮೆರಿಕನ್ನರ ಸಂಪರ್ಕ, ವಿದೇಶ ಪ್ರಯಾಣದ ಅನುಭವ ಇಲ್ಲದೆಯೂ ಲಕ್ಷಾಂತರ ರೂ ವೆಚ್ಚ ಮಾಡಿ ಒಬ್ಬಂಟಿಯಾಗಿ ಹಾರಿದ್ದು, ಚಾಕೊಲೆಟ್ ತಯಾರಿ ಕಲಿಯಲೆಂದೇ ಆರು ವಾರ ಅಮೆರಿಕದಲ್ಲುಳಿದದ್ದು. ಸಿದ್ಧತೆಯ ಈ ಸಾಹಸಗಳೇ ಅವರ ಚಾಕೊಲೇಟಿನ ಪರಿಮಳ ಹೆಚ್ಚಿಸುತ್ತದೆ.
ಮಾಹಿತಿ ಜಾಲಾಟ
ರಾಜಿಯವರಿಗೆ ಚಾಕೊಲೇಟ್ ತಿಂದೇನೋ ಗೊತ್ತಿತ್ತು, ಮಾಡುವ ಬಗೆ ಎಂತು? ನಿತ್ಯ ಜಾಲತಾಣ ಜಾಲಾಟ. ಪುಸ್ತಕ ಸಂಗ್ರಹ. ಅಧ್ಯಯನ. ಆದರೆ ಸಿಕ್ಕಿದ ಮಾಹಿತಿ ಅತೃಪ್ತಿಕರ. ಛಲ ಬಿಡದೆ ಹುಡುಕಾಟ. ಕೊನೆಗೊಮ್ಮೆ ಅಮೆರಿಕಾದ ಪ್ರತಿಷ್ಠಿತ ಚಾಕೊಲೇಟ್ ಮೇಕರ್ಸ್ ಕ್ಲಬ್ ಪತ್ತೆ. ಅವರೊಂದಿಗೆ ಸಂಪರ್ಕ. ಆ ಕ್ಲಬ್ಬಿನ ಸದಸ್ಯತ್ವ. ಅಲ್ಲಿಂದ ಶುರುವಾಯಿತು ಚಾಕೊಲೇಟ್ ಚಾಟ್. ತಯಾರಿಯ ಕುರಿತು ಕ್ಲಬ್ನಿಂದ ಮಾಹಿತಿ. ಕೊಕ್ಕೋ ಆಯ್ದು ಅದು ಚಾಕೊಲೇಟ್ ಆಗುವ ತನಕದ ಎಲ್ಲಾ ಹಂತಗಳು ಅಕ್ಷರ ರೂಪದಲ್ಲಿ ಕಂಪ್ಯೂಟರ್ ಸೇರುತ್ತಿತ್ತು. ಉದಾ: ಕೊಕ್ಕೋ ಆಯುವುದು, ಸಿಪ್ಪೆ ತೆಗೆಯುವುದು, ಅರೆಯುವುದು…. ಜೊತೆಗೆ ತಯಾರಿಸುವ ರೀತಿ, ಪಾಕ, ತಾಂತ್ರಿಕ ವಿಚಾರಗಳು.
‘ಮಾಹಿತಿ ಬಂದಾಕ್ಷಣ ನಾನಿಲ್ಲಿ ಬ್ಯುಸಿ. ತಕ್ಷಣ ಪ್ರಯೋಗ. ಮನೆಯಲ್ಲಿದ್ದ ಸಲಕರಣೆಗಳನ್ನು ಬಳಸಿ ಚಾಕೋಲೇಟ್ ಮಾಡುತ್ತಲೇ ಇದ್ದೆ. ಅದರ ವಿವರಗಳನ್ನು ಪುನಃ ಅವರಿಗೆ ಕಳುಹಿಸಿ ತಪ್ಪು-ಒಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದ್ದೆ.’
ಕ್ರಿಯಲ್ಲೋದ ಬೆನ್ನ ಹಿಂದೆ…ರಾಜಿ ಅವರ ಮಾವ ಕೈಂತಜೆ ವಿಷ್ಣುಭಟ್ಟರಿಗೆ ಕ್ರಿಯಲ್ಲೋದ ಸುದ್ದಿಯಿಂದ ಉತ್ಸಾಹ ಇಮ್ಮಡಿಸಿದೆ. ‘೧೯೬೧ರ ಸುಮಾರಿಗೆ ಕ್ರಿಯಲ್ಲೋ ತಳಿ ಪ್ರಚಲಿತದಲ್ಲಿತ್ತು. ಬಹುಶಃ ಇಳುವರಿ ಕಡಿಮೆ ಎಂಬುದರಿಂದಲೋ ಏನೋ ಕ್ರಿಯಲ್ಲೋ ಮರೆತುಹೋಗುವಷ್ಟು ಹಿಂದೆ ಬಿದ್ದಿದೆ.’ಪತಿ ಆರ್.ಕೆ. ಭಟ್ ಈ ಉದ್ಯಮವನ್ನು ಮುನ್ನಡೆಸುತ್ತಾರೆ. ಬೆಂಗಳೂರಿನಲ್ಲಿದ್ದು ಮಾರುಕಟ್ಟೆಯ ಜವಾಬ್ದಾರಿಗೆ ಹೆಗಲು ಕೊಡುವುದು ಮಗ ಅವ್ಯಕ್ತ. ಇವರದೇ ‘ಬಿಗ್ರೋ ಆಗ್ರೋ ಟೆಕ್ (ಪ್ರೈ) ಲಿ.,’ ಸಂಸ್ಥೆಯ ಮೂಲಕ ಚಾಕೋಲೇಟ್ ಮಾರುಕಟ್ಟೆ ಸೇರಿದೆ. ಸದ್ಯ ಮೈಸೂರು, ಬೆಂಗಳೂರಿತ್ತ ಲಕ್ಷ್ಯ. ಮಂಗಳೂರಿನಲ್ಲಿ ಕೆಲವು ಮಳಿಗೆಗಳಲ್ಲಿವೆ.
‘ನಾವು ಕ್ರಿಯಲ್ಲೋ ತಳಿ ಬೆಳೆಸಬೇಕು ಎಂದಾಗ ತಕ್ಷಣ ಮಾವ ಕೈಂತಜೆ ವಿಷ್ಣು ಭಟ್ ಮತ್ತು ಅತ್ತೆ ಲಕ್ಷ್ಮೀ ಭಟ್ ‘ಅಸ್ತು’ ಎಂದರಂತೆ. ‘ಇದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ ಹೇಳಿ?’ ಅಲ್ಲ, ಈ ಕ್ರಿಯಲ್ಲೋ ತಳಿ ಹುಡುಕಿ, ಬೆಳೆಸಿ ಚಾಕೊಲೇಟ್ ಮಾಡುವಷ್ಟು ಶ್ರಮ ತೆಗೆದುಕೊಳ್ಳುವಷ್ಟು ಅದರ ಚಾಕೊಲೇಟ್ನಲ್ಲಿ ಏನು ವಿಶೇಷ? ‘ಆ ಪರಿಮಳವೇ ಬೇರೆ. ಕ್ರಿಯಲ್ಲೋ ಚಾಕಲೇಟ್ ಸಿದ್ಧವಾದ ಕಾಲಕ್ಕೆ ಸ್ಯಾಂಪಲ್ ಕೊಡುತ್ತೇನೆ, ಆಗಷ್ಟೇ ನಿಮಗೂ ಸರಿಯಾದ ಉತ್ತರ ಸಿಗಬಹುದು’, ನಿಗೂಢ ನಗೆ ನಗುತ್ತಾ ಪ್ರತಿಕ್ರಿಯಿಸುತ್ತಾರೆ ರಾಜಿ. ಕ್ರಿಯಲ್ಲೋ ಕೊಕ್ಕೋ ಕೋಡಿನ ತುದಿ ಚೂಪು. ಬಣ್ಣ ನೇರಳೆಗೆಂಪು. ದದ್ದು ಎದ್ದಂತಹ ಹೊರಮೈ. ನಸುನೇರಳೆ ಅಥವಾ ಬಿಳಿ ಬಣ್ಣದ ಬೀಜಗಳು. ೨೦ ರಿಂದ ೩೦ ಬೀಜ ಅಷ್ಟೇ. ಇವು ತುಂಬಿಕೊಂಡು ಉರುಟಾಗಿರುತ್ತವೆ. ಕ್ರಿಯಲ್ಲೋ ಮತ್ತು ಫೊರೆಸ್ಟಿರೋ ಸೇರಿ ಆದ ಟ್ರಿನಿಟಾರಿಯೋ ಎಂಬ ಮೂರನೆಯ ತಳಿಯ ಕೊಕ್ಕೋವೂ ಇದೆ. ಇದರ ಕೋಡಿನ ಬಣ್ಣ ನೇರಳೆಗೆಂಪು ಅಥವಾ ಲಿಂಬೆ ಹಳದಿ. ಹೊರಮೈ ನುಣುಪು. ಬೆಳ್ಳಗಿನ ಬೀಜಗಳು. ಬೀಜ ಸಂಖ್ಯೆ ೩೦ ರಿಂದ ಹೆಚ್ಚು. ನಸು ಕಹಿ. |
ಈ ಮಧ್ಯೆ ಚಾಕೊಲೇಟ್ ತಯಾರಿಯನ್ನು ‘ಪ್ರೊಫೆಶನ್’ ಆಗಿ ಮಾಡುವ ಬಗೆಗೆ ಶಿಕ್ಷಣ ನೀಡುವ ಕೆನಡಾ ಶಾಲೆಯೊಂದು ನೆಟ್ನಲ್ಲಿ ಪತ್ತೆ. ಅದರ ಮುಖ್ಯಸ್ಥೆ ಶ್ರೀಮತಿ ಪಾಂ ವಿಲಿಯಮ್ಸ್ (Pam Viliams) ಅವರೊಂದಿಗೆ ಸಂಪರ್ಕ. ‘ಥಿಯರಿ ಅಲ್ಲದೆ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ನಾನು ಇಲ್ಲಿಂದ ಚಾಕೋಲೇಟ್ ಮಾಡಿ ಕೆನಡಾಕ್ಕೆ ಕಳುಹಿಸಬೇಕಿತ್ತು. ಗುಣಮಟ್ಟದ ಆಧಾರದಲ್ಲಿ ಅಂಕಗಳ ನಿರ್ಧಾರ.
ನಾನು ಶೇ.೮೯ ಅಂಕಗಳಲ್ಲಿ ಉತ್ತೀರ್ಣಳಾಗಿದ್ದೆ’ ಎನ್ನುತ್ತಾರೆ ರಾಜಿ.
ಕ್ಲಬ್ ನೀಡಿದ ಮಾಹಿತಿಯಂತೆ ಕೊಕ್ಕೋ ಬೀಜ ಅರೆಯುವುದು ತಲೆನೋವಿನ ಕೆಲಸ. ‘ಗ್ರೈಂಡರ್ನಲ್ಲಿ ಎಷ್ಟು ಹೊತ್ತು ಆದರೂ ನಯವಾಗುವುದಿಲ್ಲ. ಗಂಟೆಗಟ್ಟಲೆ ಗ್ರೈಂಡರ್ ಚಾಲೂ ಆದರೆ ಬಿಸಿಯಾಗುತ್ತದೆ. ಸ್ವಲ್ಪ ಹೊತ್ತು ಆಫ್ ಮಾಡಿ ಪುನಃ ಚಾಲೂ. ಹೀಗೇ ರಾತ್ರಿಯಿಡೀ ಒದ್ದಾಟ. ನಯ ಅಂದರೆ ಅದನ್ನು ನಾಲಗೆಗೆ ಹಾಕಿದರೆ ಗೊತ್ತಾಗದಷ್ಟೂ ನಯವಾಗಬೇಕು’ ನೆನಪಿಸುತ್ತಾರೆ ರಾಜಿ. ಇದೇ ಗುಂಗಿನಲ್ಲಿ ನಿದ್ದೆಗೂ ವಿದಾಯ! ಇವರ ಅವಸ್ಥೆ ನೋಡಿ ಪತಿ ಆರ್.ಕೆ. ‘ಯು.ಎಸ್.ಎ.ಯಲ್ಲಿ ನೇರ ಶಿಕ್ಷಣ ಪಡೆದರೆ ಒಳಿತಲ್ಲವೆ?’ ಎಂಬ ಪ್ರಸ್ತಾವ ಮುಂದಿಟ್ಟರು. ‘ನನಗಾಗ ‘ಸ್ವರ್ಗಕ್ಕೆ ಮೂರೇ ಗೇಣು!’ ಮನದಲ್ಲಿ ಯು.ಎಸ್.ಎ. ರಿಂಗಣಿಸುತ್ತಿತ್ತು. ಊರು ಹೊಸತು. ಜನರ ಪರಿಚಯವಿಲ್ಲ. ಪ್ರಯಾಣ ದುಬಾರಿಯಾದುದರಿಂದ ಒಬ್ಬಳೇ ಹೋಗಬೇಕು. ಕುಟುಂಬ ಸದಸ್ಯರೆಲ್ಲರ ಅನುಮತಿ. ‘ಗಂಡ, ಮಗ, ಅತ್ತೆ, ಮಾವ ಇವರೆಲ್ಲರನ್ನೂ ಬಿಟ್ಟು ಒಬ್ಬಳೇ ಹೋಗುವುದಕ್ಕೆ ಅಳುಕಾಯಿತು.’ ಈ ಕುರಿತು ತಾನು
ಕಲಿತ ಕೆನಡಾ ಶಾಲೆಯ ಸಂಪರ್ಕ. ಪಡೆದ ಅಂಕ ಮತ್ತು ಇವರ ಉತ್ಸಾಹವನ್ನು ಅರಿತ ಪಾಮ್ ವಿಲಿಯಮ್ಸ್ ತಮ್ಮ ಪರಿಚಯದ ಅಮೆರಿಕಾದ ಚಾಕೋಲೇಟಿಯರ್ ಜಿಸ್ಲೈನ್ ಮೋರೆ (Ghyslain murrey)ಯವರ ‘Ghyslain chololatier’ ಫ್ಯಾಕ್ಟರಿಯಲ್ಲಿ ತರಬೇತಿ ಪಡೆಯಲು ‘ಲಿಂಕ್’ ಮಾಡಿಕೊಟ್ಟರು.
ನೌಕರಳಾಗಿ ದುಡಿಮೆ
‘ಫ್ಯಾಕ್ಟರಿಗೆ ಸೇರಿದಾಗ ಎಲ್ಲವೂ ಮಾಯ’. ಎನ್ನುವ ರಾಜಿ, ಫ್ಯಾಕ್ಟರಿ ಬದುಕನ್ನು ವಿವರಿಸಿದ್ದು ಹೀಗೆ – ‘‘ಒಂದೂವರೆ ತಿಂಗಳ ಶಿಕ್ಷಣ. ಅಷ್ಟೂ ದಿವಸ ಫ್ಯಾಕ್ಟರಿಯಲ್ಲಿ ನೌಕರಳಂತೆ ಇರಬೇಕಿತ್ತು. ಉಳಿದ ನೌಕರರಿಗೂ ನನಗೂ ಇರುವ ವ್ಯತ್ಯಾಸವೆಂದರೆ – ಅವರಿಗೆಲ್ಲಾ ಸಂಬಳವಿತ್ತು. ನಾನು ಮಾತ್ರ ಸಂಬಳರಹಿತಳು! ಕೆಲಸ, ಶಿಸ್ತು ಎಲ್ಲವೂ ಒಂದೇ. ಫ್ಯಾಕ್ಟರಿಯ ಯಜಮಾನ ಅತಿ ದೊಡ್ಡ ಶ್ರೀಮಂತ. ಸಹೃದಯಿ. ಭಾರತೀಯಳಾಗಿ ನಾನೊಬ್ಬಳೇ ಅಲ್ಲಿದ್ದುದರಿಂದ ನನ್ನ ಬಗ್ಗೆ ಅತೀವ ಗೌರವವಿತ್ತು. ನಾನು ಸಸ್ಯಾಹಾರಿಯಾಗಿರುವುದರಿಂದ, ಹೆಚ್ಚಿನ ಸಂದರ್ಭದಲ್ಲಿ ಅವರೇ ನನಗೆ ಅಡುಗೆ ಮಾಡಿ ಬಡಿಸುತ್ತಿದ್ದರು! ಕೊಕ್ಕೋ ಅರೆಯುವಲ್ಲಿಂದ ಚಾಕೊಲೇಟ್ ತಯಾರಾಗುವ ತನಕದ ಎಲ್ಲಾ ಶಿಕ್ಷಣ ನನಗೆ ಒಂದೂವರೆ ತಿಂಗಳಲ್ಲಿ ರೂಢಿಯಾಯಿತು’’.
ಫ್ಯಾಕ್ಟರಿ ಶಿಕ್ಷಣದ ನಂತರ ಮಾರುಕಟ್ಟೆ ಆಧ್ಯಯನ ಮಾಡಲು ಮಳಿಗೆಗಳ ಭೇಟಿ. ಒಂದಷ್ಟು ಚಾಕೋಲೇಟ್ ಖರೀದಿ. ಕನಿಷ್ಠ ಐದುಸಾವಿರ ರೂಪಾಯಿಯ ಚಾಕೋಲೇಟ್ ಖರೀದಿಸಿರಬಹುದು. ಇದರಿಂದ ‘ಹೇಗಿರಬೇಕು-ಹೇಗಿರಬಾರದು’ ಎಂಬುದರ ಬಗ್ಗೆ ನೇರ ಅರಿವು. ‘ಶಿಕ್ಷಣದ ಅವಧಿಯಲ್ಲಿ ವಸತಿಯನ್ನು ನಾನೇ ಮಾಡಿಕೊಂಡಿದ್ದೆ. ದುಬಾರಿ ಬಾಡಿಗೆ. ಆದರೆ ಅನಿವಾರ್ಯ. ನನಗೆ ಅಲ್ಲಿ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ.
‘ಯು.ಎಸ್.ಎ. ಚಾಕೊಲೇಟ್ಗಿಂತ ನನಗೆ ಯುರೋಪಿಯನ್ ಸ್ಟೈಲ್ನದರಲ್ಲಿ ಆಸಕ್ತಿ. ಯು.ಎಸ್.ಎ.ಯದ್ದು ಗಾತ್ರದಲ್ಲಿ ದೊಡ್ಡದು, ಗಾಢ ಬಣ್ಣ. ರುಚಿಯಲ್ಲೂ ಅಷ್ಟೇ. ಯುರೋಪಿಯನ್ ಚಾಕೋಲೇಟ್ ರುಚಿ ಅನುಭವಿಸಿ ಸುಖಿಸಬೇಕು! ಹೇಳಲು ಕಷ್ಟ.’
ಕಳೆದೈದು ತಿಂಗಳಿನಿಂದ ಕಲಿತ ವಿದ್ಯೆಯ ಅನುಷ್ಠಾನ. ಮನೆಯೇ ಫ್ಯಾಕ್ಟರಿ. ‘‘ಮೊದಲೇ ತಯಾರಿ ಬಗ್ಗೆ ಗೊತ್ತಿದ್ದುದರಿಂದ, ನನಗೆ ಪ್ರಯೋಗ (ಟ್ರಯಲ್) ಮಾಡುವ ಆವಶ್ಯಕತೆ ಇರಲಿಲ್ಲ. ಯು.ಎಸ್.ಎ.ನಿಂದ ಹಿಂತಿರುಗಿದಾಗ ನಾನು ಫೈನಲ್ ಪ್ರಾಡಕ್ಟ್ ಮಾಡುತ್ತಲೇ ಇದ್ದೇನೆ. ಅಪ್ಪ, ಅಮ್ಮ, ಗಂಡ, ಮಗ, ತಂದೆ, ತಾಯಿ ಮತ್ತು ಆಪ್ತರು ನನ್ನ ಚಾಕೋಲೇಟಿನ ಪ್ರಥಮ ಗಿರಾಕಿಗಳು.’’ ಈ ಬಾರಿಯ ಗಣೇಶ ಹಬ್ಬದಂದು ‘ಬಿಗ್ರೋಸ್ ಎಕ್ಸಾಟಿಕ್
ಚಾಕೊಲೇಟ್’ ಮಾರುಕಟ್ಟೆಗೆ ಬಿಡುಗಡೆ ಆಗಿದೆ.
‘ಅಂಗಡಿಯಿಂದ ಖರೀದಿಸಿ ಚಾಕೋಲೇಟ್ ಅಂತ ಏನು ತಿನ್ತೀರೋ, ಅದು ಚಾಕೋಲೇಟಲ್ಲ. ಅದು ಕ್ಯಾಂಡಿ ಎನ್ನುತ್ತಾ ‘ಚಿಕ್ಕ ಪಾತ್ರೆಯಲ್ಲಿ ಇನ್ನೂ ಪ್ಯಾಕ್ ಆಗದೇ ಇದ್ದ ದುಂಡಗಿನಾಕಾರದ ತಿಂಡಿಯಂತಹುದನ್ನು ಕೈಗಿತ್ತು ‘ತಿನ್ನಿ, ಇದು ಚಾಕೋಲೇಟ್’ ಅಂದರು.
ಬಾಯಿಗಿಟ್ಟಾಗ ‘ಆಹಾ’ ಮಧುರ ಸ್ವಾದ!
ನಾಲ್ಕು ವಿಧ
ಸದ್ಯಕ್ಕೆ ನಾಲ್ಕು ವಿಧದ ಚಾಕೋಲೇಟ್ ತಯಾರಿ. ದಪ್ಪ ಹೂರಣ (solid centre) ವಿರುವುದನ್ನು ‘ಗಣಾಶ್’ (Ganache centre) ಅಂತ ಕರೀತಾರೆ. ಉಳಿದ ಮೂರರ ಹೂರಣ ತೆಳು. (liquid centre) ದ್ರಾಕ್ಷಿ, ಕ್ಯಾಶ್ಯೂ ಬಟರ್ ಮತ್ತು ಪೀನಟ್ ಬಟರ್ ಸ್ವಾದದವು. ಜತೆಗೆ ಬೆಣ್ಣೆ, ಕೆನೆ, ಪರಿಮಳ ವಸ್ತುಗಳು. ಇವುಗಳ ಸಮನ್ವಯತೆ ತರಬೇತಿ-ಅನುಭವದಿಂದ ಬರಬೇಕು. ಶುಂಠಿ, ತುಳಸಿ, ಲಾವಂಚ, ಬಾಳೆಹಣ್ಣು,, ರಂಬುಟಾನ್, ಹಲಸಿನ ಹಣ್ಣುಗಳ ಸ್ವಾದಗಳನ್ನು ಹೂರಣಕ್ಕೆ ಬಳಸಬಹುದು. ಬೇಡಿಕೆ ಬರಬೇಕಲ್ವಾ. ರುಚಿಪ್ರಿಯರು ಹೆಚ್ಚಾದಷ್ಟೂ ಬೇಡಿಕೆ!
ದ.ಕ. ಜಿಲ್ಲೆ ಬಿಸಿ ಹವಾಮಾನದ ಪ್ರದೇಶ. ಚಾಕೋಲೇಟ್ ತಯಾರಿಗೆ ಬೇಕಾಗುವುದು ೧೨ ರಿಂದ ೧೯ ಸೆಂಟಿಗ್ರೇಡ್ ಉಷ್ಣತೆ. ಹಗಲು ತಯಾರಿಸುವಂತಿಲ್ಲ. ‘ಸುಮಾರು ಮಧ್ಯರಾತ್ರಿ ಹೊತ್ತಿಗೆ ಉಷ್ಣತೆ ಸ್ವಲ್ಪ ತಂಪಿರುತ್ತದೆ. ಆ ಹೊತ್ತಲ್ಲಿ ಸದ್ಯ ತಯಾರು ಮಾಡುತ್ತೇವೆ. ಎ.ಸಿ.ಕೋಣೆ ಇದ್ದರೆ ಸಮಸ್ಯೆ ಇಲ್ಲ. ಒಂದು ಡಿಗ್ರಿ ಉಷ್ಣತೆ ವ್ಯತ್ಯಾಸವಾದರೂ ಚಾಕೋಲೇಟ್ ಕೆಡುತ್ತದೆ. ಒಳಗೆ ಹೂರಣ ಇಟ್ಟು, ಹೊರಗಿನ ಲೇಯರನ್ನು ಫಿನಿಷ್ ಮಾಡುವುದು ಇದೆಯಲ್ಲಾ ಬಹಳ ನಾಜೂಕಿನ ಕೆಲಸ. ಹೆಚ್ಚು ತಾಳ್ಮೆ ಬೇಡುವ ಕೆಲಸ’ ಎನ್ನುತ್ತಾರೆ.
ಎಷ್ಟು ವಿಧದ ಚಾಕೋಲೇಟ್ ತಯಾರಿಸಬಹುದು? ರಾಜಿಯವರದು ಒಂದು ವಾಕ್ಯದ ಉತ್ತರ – Sky is the limit!
ಸೂಕ್ಷ್ಮತೆಯ ಕೆಲಸ
ಸಕ್ಕರೆ ಮತ್ತು ಕೊಕ್ಕೋ ಯಾವ ಉಷ್ಣತೆಯಲ್ಲಿ ಏನಾಗುತ್ತದೆ – ಎಂಬ ಅರಿವೇ ಇದರ ಗುಟ್ಟು. ‘ಅದೊಂದು ವಿಜ್ಞಾನ. ಇದರೊಂದಿಗೆ ಕಲೆ ಮೇಳೈಸಿದ ಪಾಕವೇ ‘ಆರ್ಟಿಸನ್ ಚಾಕೋಲೇಟ್’ (Artisan Chocolate) ಎಂದು ಸುಲಭದಲ್ಲಿ ಹೇಳಬಹುದು.
ಕೆಲವೊಂದು ಸಲ ಉಷ್ಣತೆಯ ವ್ಯತ್ಯಾಸದಿಂದಾಗ ಕೊಕ್ಕೋ ಬಟರ್ ಗಟ್ಟಿಯಾಗುವುದಿಲ್ಲ. ಚಾಕೊಲೇಟ್ನ ಕೊನೆ ಉತ್ಪನ್ನ ಸಿದ್ಧವಾದ ಮೇಲೆ ಹೇಗೂ ತಂಪುಪೆಟ್ಟಿಗೆಯಲ್ಲಿಡಲೇ ಬೇಕು. ‘‘ಹಾಗೆ ಇಟ್ಟ ಚಾಕೊಲೇಟ್ ಹಲ್ಲಲ್ಲಿ ಕಡಿದಾಗ ‘ಟಕ್’ ಅಂತ
ಸಣ್ಣ ಶಬ್ದ ಕೇಳಿದರೆ ಚಾಕೋಲೇಟ್ ತಯಾರಿ ಚೆನ್ನಾಗಿದೆ. ಶಬ್ದ ಮೂಡದಿದ್ದರೆ ಗುಣಮಟ್ಟ ಸಾಲದು ಎಂದರ್ಥ’’ ಎನ್ನುತ್ತಾರೆ ರಾಜಿ. ‘ಟಕ್’ ಎನ್ನದಿದ್ದರದು ವ್ಯರ್ಥ. ತಿಂದೇ ಮುಗಿಸಬೇಕು. ಆದರೆ ಎಷ್ಟೂಂತ ತಿನ್ನಬಹುದು?
ತಯಾರಿಗೆ ಬೇಕಾಗುವ ಉಪಕರಣ, ಯಂತ್ರಗಳು ಭಾರತದಲ್ಲಿ ಸಿಗುತ್ತಿಲ್ಲ. ಎಲ್ಲವೂ ಹೊರಗಿನಿಂದ ತರಬೇಕು. ದುಬಾರಿ.
ಈ ಚಾಕೊಲೇಟ್ ತುಂಡು ಮಾಡಿ ಬಾಯಿಗಿಟ್ಟು ‘ಕಟಕಟ’ ಅಂತ ತಿನ್ನುವಂತಹುದಲ್ಲ, ಜಗಿಯುವಂತಹುದಲ್ಲ. ಸಾಮಾನ್ಯ ಬನಾರಸಿ ನೆಲ್ಲಿಕಾಯಿ ಗಾತ್ರ. ಬಾಯಿ ದೊಡ್ಡದಾಗಿ ತೆರೆದು ಹಾಕಿಕೊಂಡರೆ ಆಯ್ತು. ಸ್ವಲ್ಪ ಹೊತ್ತಲ್ಲಿ ಬಾಯಿಯಿಡೀ ಸ್ವಾದ ಹರಡಿಕೊಳ್ಳುತ್ತದೆ. ಇದು ಈ ತರಹದ ಚಾಕೊಲೇಟಿನ ಗುಣ. ಒಮ್ಮೆಗೆ ಬಾಯಿಗೆ ಹಾಕುವಷ್ಟು ಗಾತ್ರದ ಚಾಕೊಲೇಟಿಗೆ ‘ಬೈಟ್ ಸೈಜ್’ ಅನ್ನುತ್ತಾರೆ.
ನೋಟ, ಒಳಸುರಿಗಳ ಗುಣಮಟ್ಟ, ಪರಿಮಳ, ರುಚಿ, ಇವಿಷ್ಟು ಸಮನ್ವಯಗೊಂಡು ಪಾಕ ಕೈವಶವಾದರೆ ಮಾರುಕಟ್ಟೆ ಕಷ್ಟವಿಲ್ಲ.’ ಮುಂದೆ ತಮ್ಮ ತೋಟದ ಉತ್ಪನ್ನಗಳನ್ನು ಅದರಲ್ಲೂ ಸಾವಯವ
ಉತ್ಪನ್ನಗಳನ್ನು ಒಳಸುರಿಗಳನ್ನಾಗಿ ಬಳಸುವ ಯೋಜನೆ ಮನದಲ್ಲಿದೆ. ಉದಾ : ಗೇರುಬೀಜ, ದ್ರಾಕ್ಷಿ, ನಮ್ಮೂರ ಇತರ ಹಣ್ಣುಗಳು.
‘ಬ್ಲೈಂಡ್ ಟೆಸ್ಟಿಂಗ್’
ಅರೆಸಿದ್ಧ ವಸ್ತುಗಳು ನಮ್ಮ ಫ್ಯಾಕ್ಟರಿಗಳಲ್ಲಿ ‘ಇಂಡಸ್ಟ್ರಿಯಲ್ ಚಾಕೊಲೇಟ್’ ಎಂಬ ಹೆಸರಿನಲ್ಲಿ ಸಿಗುತ್ತದೆ. ಒಂದೊಂದು ದೇಶದ್ದು ಒಂದೊಂದು ರುಚಿ. ರುಚಿ ಮತ್ತು ಗುಣಮಟ್ಟ ಪರೀಕ್ಷೆಗಾಗಿ ಮನೆಯಲ್ಲೇ ಚಿಕ್ಕ ಪರೀಕ್ಷಾ ಶಿಬಿರ ಮಾಡಿದ್ದರು ರಾಜಿ. ಅವರಲ್ಲಿ ಚಾಕೊಲೇಟ್ ತಿಂದು ರುಚಿ ಗೊತ್ತಿದ್ದವರೂ, ಗೊತ್ತಿಲ್ಲದವರೂ ಶಿಬಿರಾರ್ಥಿಗಳು. ಆರು ಬೇರೆ ಬೇರೆ ಕಂಪೆನಿಗಳ ಇಂಡಸ್ಟ್ರಿಯಲ್ ಚಾಕೋಲೇಟ್ ತರಿಸಿದ್ದರು. ಭಾರತದ್ದಕ್ಕೆ ಯುರೋಪ್, ಅಮೆರಿಕಾದಕ್ಕೆ ಭಾರತ…ಹೀಗೆ ಅದಲು ಬದಲು ಹೆಸರನ್ನಿರಿಸಿ ತಿನ್ನಲು ಕೊಟ್ಟರಂತೆ. ಎಲ್ಲರ ಕಣ್ಣೂ ಕಟ್ಟಿದರು. ಅದರಲ್ಲಿ ಗುಣಮಟ್ಟ ಮತ್ತು ಪರಿಮಳದಲ್ಲಿ ಕೊನೆಯ ಸ್ಥಾನ ಭಾರತದ ಇಂಡಸ್ಟ್ರಿಯಲ್ ಚಾಕೊಲೇಟ್ಗೆ! ಪ್ರಥಮ ಸ್ಥಾನ ಯುರೋಪ್. ದರದಲ್ಲೂ ಅಷ್ಟೇ. ಯುರೋಪಿನದಕ್ಕೆ ಕಿಲೋಗೆ ಎಂಟು ನೂರು ರೂಪಾಯಿ. ‘ಹಾಗಾಗಿ ಹೊರದೇಶದಿಂದಲೇ ಇದನ್ನು ತರಿಸುವ ನಿರ್ಧಾರ ಮಾಡಿದೆ’ ಎನ್ನುತ್ತಾರೆ. ಅಲ್ಲಿ ಒಂದು ಕಿಲೋ ಹಸಿ ಕೊಕ್ಕೋ ಬೀಜಕ್ಕೆ ನೂರಮೂವತ್ತು ರೂಪಾಯಿ!
ಹಿಂಬಾಗಿಲಲ್ಲಿ ಹೊಕ್ಕ ಕೊಕ್ಕೋ ಬೀಜ. . .ಕಂಪೆನಿ ಚಾಕೊಲೇಟ್ ಎಂದು ಬಣ್ಣಿಸುವ ಕ್ಯಾಂಡಿಗಳು ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಸಿದ್ಧವಾಗುತ್ತವೆ. ಇವಕ್ಕೆ ಮಾನವ ಶ್ರಮ ಕಡಿಮೆ. ಯಂತ್ರದ್ದೇ ಕೆಲಸ! ಆದರೆ ಚಾಕೊಲೇಟ್ ತಯಾರಿ ಹೆಚ್ಚಾಗಿ ಬೇಡುವುದು ಕೈ ಮತ್ತು ಜಾಣ್ಮೆಯ ಕೆಲಸ.ಚಾಕೊಲೇಟ್ನ ಹೊರಪದರವನ್ನು ಅರೆಸಿದ್ಧ ವಸ್ತುಗಳಿಂದ ತಯಾರಿಸುತ್ತಾರೆ. ಅರೆಸಿದ್ಧ ವಸ್ತುಗಳನ್ನು ಕೊಂಡು ಚಾಕೊಲೇಟ್ ತಯಾರಿಸುವವರಿಗೆ ‘ಚಾಕೊಲೇಟಿಯರ್’ ಅಂತ ಹೆಸರು. ಒಳಗಿನ ಹೂರಣ ಮತ್ತು ಸ್ವಾದ ಮಾಡುವವರ ಕಲ್ಪನೆಗೆ ಸಂಬಂಧಪಟ್ಟ ವಿಚಾರ. ಇವುಗಳಲ್ಲಿ ಪಕ್ವತೆ ಹೆಚ್ಚಾದಷ್ಟು ಅವು ಕೈವಶವಾಗುತ್ತವೆ. ಕೊಕ್ಕೋ ಬೀಜದಿಂದಲೇ ತೊಡಗಿ ಅರೆಸಿದ್ಧವಸ್ತು ಮತ್ತು ಕೊನೆಗೆ ಚಾಕೊಲೇಟ್ ತಯಾರಿಸುವವರು ‘ಚಾಕೊಲೇಟ್ ಮೇಕರ್ಸ್’.‘ನನ್ನಾಸೆ ಚಾಕೊಲೇಟ್ ಮೇಕರ್ ಆಗುವುದು,’ ಎನ್ನುತ್ತಾರೆ ರಾಜಿ. ಮುಂದೆ-ತಮ್ಮ ತೋಟದ ಕೊಕ್ಕೋ ಬೀಜ ಚಾಕೊಲೇಟ್ ಆಗಿ ರೂಪಾಂತರಗೊಂಡು ಮಾರುಕಟ್ಟೆಗೆ ಹೋಗಬೇಕು – ಎಂಬ ಮಹತ್ವಾಕಾಂಕ್ಷೆ ಹೊಂದಿದೆ ಈ ಕುಟುಂಬ. |
ಒಂದು ಚಾಕೊಲೇಟ್ಗೆ ಹದಿನೈದು ರೂಪಾಯಿ. ಪ್ರತಿಯೊಂದು ಸರಿಸುಮಾರು ಹತ್ತು ಗ್ರಾಂ ತೂಕ. ಐವತ್ತು ಗ್ರಾಂ ಅಂದರೆ ಆರು ಚಾಕೊಲೇಟ್. ನೂರು ಗ್ರಾಂಗೆ ಹನ್ನೆರಡು. ಆರಾರು ಚಾಕೊಲೇಟ್ ಹಿಡಿವ ಗುಳಿ ಇರುವ ಪ್ಲಾಸ್ಟಿಕ್ ಟ್ರೇ. ರಂಗುರಂಗಿನ ಪ್ಯಾಕಿಂಗ್. ಇದರಲ್ಲೂ ಎರಡು ವಿಧ. ಬೇಗಡೆ ಸುತ್ತಿದ ಚಾಕೊಲೇಟ್ ಮತ್ತು ಸುತ್ತದ ಚಾಕೊಲೇಟ್. ‘ಬೇಗಡೆ ಸುತ್ತಿದರೆ ಚಾಕೊಲೇಟ್ ನೋಟ ಗೊತ್ತಾಗುವುದಿಲ್ಲ. ಸುತ್ತದ್ದರಲ್ಲಿ ನೋಟ, ಆಕಾರ, ಅಲಂಕಾರ ಗೊತ್ತಾಗುತ್ತದೆ’ ಎನ್ನುತ್ತಾರೆ.
ನಾಲ್ಕು ವಾರ ತಾಳಿಕೆ. ‘ಸಂರಕ್ಷಕ ವಸ್ತುಗಳನ್ನು ಹಾಕಿದರೆ ಆರು ತಿಂಗಳು ಇಡಬಹುದು. ಈ ವಿಧಾನ ಗೊತ್ತು. ಆದರೆ ನನ್ನ ಚಾಕೊಲೇಟ್ ಸಹಜವಾಗಿರಬೇಕು.’ ವಾತಾವರಣದ ಉಷ್ಣತೆಯನ್ನು ಚಾಕೊಲೇಟ್ ತಾಳಿಕೊಳ್ಳಲು ಕಷ್ಟ. ಕರಗುತ್ತದೆ. ಹಾಗಾಗಿ ತಂಪುಪೆಟ್ಟಿಗೆಯಲ್ಲಿಟ್ಟೇ ತಿನ್ನುವಂತಾದ್ದು.
ಬಳಸುವ ಸಿದ್ಧವಸ್ತು ಯಾವುವು? ಮೂಲವಸ್ತು ಕೊಕ್ಕೊ. ಚಾಕೊಲೇಟ್ ತಯಾರಿಗಾಗಿಯೇ ಕಂಪೆನಿಗಳಲ್ಲಿ ಲಭ್ಯ. ದೇಶವನ್ನು ಹೊಂದಿಕೊಂಡು ಗುಣಮಟ್ಟದಲ್ಲಿ ವ್ಯತ್ಯಾಸ. ಕೊಕ್ಕೊ ಬೆಳೆಯಲ್ಲಿ ಮುಖ್ಯವಾಗಿ ಎರಡು ತಳಿಗಳಿವೆ. ಕ್ರಿಯಲ್ಲೋ ಮತ್ತು
ಫಾರೆಸ್ಟಿರೋ. ಈಗ ಕ್ರಿಯಲ್ಲೋ ಬಹುತೇಕ ಕಣ್ಮರೆಯಾಗಿದೆ. ಉಳಿದಿರುವುದು ಫಾರೆಸ್ಟಿರೋ. ‘ಚಾಕೊಲೇಟ್ಗೆ ಕ್ರಿಯಲ್ಲೋ ಅತ್ಯುತ್ತಮ. ಯಾಕೆಂದರೆ ಇದರ ಪರಿಮಳ ಚಾಕೊಲೇಟ್ನ ಗುಣಮಟ್ಟವನ್ನು ವೃದ್ಧಿಸುತ್ತದೆ. ಇಡೀ ವಿಶ್ವದಲ್ಲಿ ಕ್ರಿಯಲ್ಲೋ ಕೊಕ್ಕೋ ತಳಿಯಿಂದ ಮಾಡುವ ಚಾಕೋಲೇಟ್ ಕೇವಲ ಹತ್ತು ಶೇಕಡಾ.’
‘ರುಚಿ ಹಿಡಿಸುವ’ ಸವಾಲು
ಆರ್.ಕೆ. ತಮ್ಮ ಸ್ನೇಹಿತರಿಗೆ ಈ ಮನೆ ತಯಾರಿಯ ಚಾಕೊಲೇಟ್ ಕೊಟ್ಟರಂತೆ. ‘ಒಮ್ಮೆ ರುಚಿ ಗೊತ್ತಾದವರು ಈಗ ಬೆನ್ನು ಬಿಡುವುದಿಲ್ಲ’ ಎನ್ನುತ್ತಾರೆ. ಇದು ಒಂದು ರೀತಿಯ ಟ್ರಯಲ್ ಮಾರ್ಕೆಟಿಂಗ್.’
‘‘ನಮ್ಮಲ್ಲಿ ಮೊದಲಿನಿಂದಲೂ ರೂಪಾಯಿ
ಗೊಂದೋ, ಹತ್ತು ರೂಪಾಯಿಗೊಂದೋ ಸಿಗುವ ಕ್ಯಾಂಡಿಯನ್ನು ‘ಚಾಕೊಲೇಟ್’ ಅಂತ ಬಿಂಬಿಸಿದ್ದಾರೆ. ‘ನಿಜವಾದ ಚಾಕೊಲೇಟ್’ ಅಂತ ಖಚಿತಪಡಿಸುವ ಕೆಲಸ ಮೊದಲು ಆಗಬೇಕಿದೆ. ಜತೆಗೆ ರುಚಿ ಹಿಡಿಸುವ ಕೆಲಸ ಕೂಡಾ. ದರ ಸ್ವಲ್ಪ ದುಬಾರಿ. ರುಚಿ ಬೇಕಾದ್ರೆ ದರ ಕೊಡಬೇಕು ತಾನೆ! ನಮ್ಮ ಮಕ್ಕಳಿಗೆ ಇಂತಹವನ್ನು ಖರೀದಿಸುವ ಸಾಮರ್ಥ್ಯ ಇರುವುದಿಲ್ಲ. ನಗರದಲ್ಲಿ ಸ್ವಲ್ಪ ಮಟ್ಟಿಗೆ ಇದೆ. ಹಳ್ಳಿಯಲ್ಲಿ ಇನ್ನೂ ಆ ಬಗೆಗಿನ ಅರಿವು ಮೂಡಿಸಬೇಕಾಗಿದೆ. ವಿದೇಶದಲ್ಲಾದರೆ ಆಹಾರವೆಂಬಂತೆ ಇದನ್ನೇ ತಿನ್ನುತ್ತಾರೆ.’’
ಬೆಲ್ಜಿಯಂ ಜನರು ಚಾಕೊಲೇಟ್ ಹೆಚ್ಚು ತಿನ್ನುತ್ತಾರೆ. ಅಲ್ಲಿ ಇದು ಒಂದು ಫ್ಯಾಶನ್. ಚಾಕೊಲೇಟ್ ತಿಂದಷ್ಟೂ ಸ್ಥಾನಮಾನ ಹೆಚ್ಚು! ಊಟದೊಂದಿಗೂ ಬಳಕೆ. ಅಮೆರಿಕಾದಲ್ಲಿ ಈಗೀಗ ಚಾಕೊಲೇಟ್ ಜನಪ್ರಿಯವಾಗುತ್ತಿದೆಯಂತೆ. ಪರಿಮಳ ಮತ್ತು ರುಚಿ ಅಲ್ಲಿಯವರಿಗೆ ಇಷ್ಟ. ಊಟದ ಮೊದಲು ತಿನ್ನುತ್ತಾರಂತೆ. ಮದಿರೆಪ್ರಿಯರಿಗೆ
ಇಂತಿಂತಹ ಮದಿರೆಗೆ ಇಂತಿಂತಹ ರುಚಿಯ ಚಾಕೊಲೇಟ್ ಅಂತ ಬೇಕೇಬೇಕಂತೆ!
ಅಲ್ಲಿ ಒಂದೊಂದು ಸಮಯದಲ್ಲಿ ಒಂದೊಂದು ಉತ್ಪನ್ನದ ಕಾಲ. ಕೆಲವು ಸಲ ಮದಿರೆ ಅಂದರೆ ಎಲ್ಲೆಲ್ಲೂ ಅದೇ. ಈಗ ಚಾಕೊಲೇಟ್ ಪರ್ವ ಶುರುವಾಗಿದೆ. ದೊಡ್ಡ ದೊಡ್ಡ ಮಳಿಗೆಗಳಲ್ಲಿ ಲಭ್ಯ.
ಗುಳಿ ಪೆಟ್ಟಿಗೆಯೊಳಗೆ
ಈ ರೀತಿಯ ಚಾಕೊಲೇಟ್ಗೆ ಪ್ಯಾಕಿಂಗ್ ಆಕರ್ಷಕವಾಗಿದ್ದಷ್ಟೂ, ಗಿರಾಕಿ ಹೆಚ್ಚು. ಮಳಿಗೆಯವರೂ ಅದನ್ನೇ ಬಯಸುತ್ತಾರೆ. ಟ್ರೇಯಲ್ಲಿ ಚಾಕೊಲೇಟ್ನ್ನು ಪೇರಿಸಿಟ್ಟರೆ ಯಾರೂ ಕೇಳುವವರಿಲ್ಲ! ‘ಎರಡು ತಿಂಗಳು ಬೇಕಾಯಿತು, ಪ್ಯಾಕಿಂಗ್ ವಿನ್ಯಾಸಕ್ಕಾಗಿ’ ಆರ್.ಕೆ. ಹೇಳುತ್ತಾರೆ.
ಈ ಗುಳಿ ಪೆಟ್ಟಿಗೆಯೊಳಗೆ ಬಣ್ಣಬಣ್ಣ, ವಿನ್ಯಾಸಗಳ ಚಾಕೊಲೇಟ್ ವೈವಿಧ್ಯ. ಮೃದಂಗ, ಕ್ರಿಕೆಟ್ ಚೆಂಡು, ಹೃದಯ, ನಕ್ಷತ್ರ ಮೀನು, ಶಂಖು – ಹೀಗೆ ಆಕಾರವೈವಿಧ್ಯ. ‘ನಿಜವಾದ ಬಳಕೆದಾರ ನಾವು-ನೀವಲ್ಲ. ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಉತ್ತಮ ಬೇಡಿಕೆಯಿದೆ. ಇದು ಭಾರತದ ತಯಾರಿ ಅಂತ ತಲಪಿಸುವುದು ಮುಖ್ಯ.’ ಇದು ಮಾರುಕಟ್ಟೆ ಗುಟ್ಟು. ಆ ದಿಸೆಯಲ್ಲಿ ಪ್ರಯತ್ನ. ‘ಫೀಲ್ಡ್ಗೆ ಇಳಿದಾಗ ಹೊಸ ಹೊಸ ಸಮಸ್ಯೆ ಮುಂದಾಗಬಹುದು’. ಬಾರ್ ಕೋಡಿಂಗ್ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ದೇಶದುದ್ದಕ್ಕೂ ಮಾರುಕಟ್ಟೆ ಜಾಲ ವಿಸ್ತರಿಸಬಹುದು. ‘ಚಾಕೊಲೇಟ್ನಲ್ಲಿ ಕೋಕೋ ಬಟರ್ ಇರುವುದರಿಂದ ಉತ್ತಮ ಮಾರುಕಟ್ಟೆ ಅವಕಾಶವಿದೆ’ ಎನ್ನುವ ವಿಶ್ವಾಸ ಆರ್.ಕೆ.ಭಟ್ ಅವರದು. ‘ಭಾರತದಲ್ಲಿ ಬೇರೆಲ್ಲೂ ಈ ರೀತಿಯ ಚಾಕೊಲೇಟ್ ಮಾಡುವ ಕುರಿತು ನನಗಿನ್ನೂ ತಿಳಿದಿಲ್ಲ. ಜಾಲತಾಣದಲ್ಲಿ ಮಾಹಿತಿ ಸಿಗುತ್ತಿಲ್ಲ’, ರಾಜಿ ದನಿಗೂಡಿಸುತ್ತಾರೆ.
‘ನಮ್ಮೂರಲ್ಲಿ ಇನ್ನಷ್ಟೇ ಅರಿವು ಮೂಡಬೇಕಾಗಿದೆ. ರುಚಿ ಹಿಡಿಸುವ ಕೆಲಸ ಮೊದಲಿನದು.’, ಆರ್. ಕೆ. ಹೇಳುತ್ತಾರೆ, ‘ಬೇಕರಿ ತಿಂಡಿಯಂತೆ ಇದನ್ನು ಒಯ್ಯುವವರಿಲ್ಲ. ಪೇಟೆಗಳಲ್ಲಿ ಕೆಲವು ಮುಖ್ಯ ಮಳಿಗೆಯಲ್ಲಿಡಬೇಕು. ಜತೆಗೆ ಪ್ರಚಾರ ಕೂಡಾ’ ‘ರಾಜಿ ತಯಾರಿಸುವ ಚಾಕೊಲೇಟ್ ತಿಂದರೆ ಹಸಿವೇ ಆಗುವುದಿಲ್ಲ’ ಮಾವ ವಿಷ್ಣು ಭಟ್ ಕೆಣಕುತ್ತಾರೆ. ‘ನಾನು ಅಮೆರಿಕಾಕ್ಕೆ ಹೋಗಿರುವಾಗ ಮಳಿಗೆಗಳಲ್ಲಿ ನೋಡಿದ್ದೆ. ತಿಂದದ್ದು ಮಾತ್ರ ಇಲ್ಲೇ’ ಅತ್ತೆ ಲಕ್ಷ್ಮೀ ಭಟ್.
‘‘ನಮ್ಮಲ್ಲಿ ಚಾಕೊಲೇಟ್ ಅಂದರೆ ‘ಮಕ್ಕಳು ತಿನ್ನುವಂತಾದ್ದು’ ಎಂಬ ಅನಿಸಿಕೆ ಬೇರೂರಿದೆ. ಇದು ದೂರವಾಗಬೇಕು. ದೊಡ್ಡವರೂ ತಿನ್ನುವಂತಾದರೆ ಮಾರುಕಟ್ಟೆ ಕಷ್ಟವಲ್ಲ’’ ಎನ್ನುವುದು ಆರ್.ಕೆ. ಹಾರೈಕೆ.
ಮನೆಕೆಲಸ, ಅತ್ತೆ-ಮಾವ, ಅಮ್ಮ-ಅಪ್ಪಂದಿರ ಕಾಳಜಿ ಮತ್ತಿತರ ಜವಾಬ್ದಾರಿಗಳೊಂದಿಗೆ ಈ ಉಪವೃತ್ತಿಯನ್ನು ರಾಜಿ ಹೇಗೆ ಹೊಂದಿಸಿ ಕೊಳ್ಳಲಿದ್ದಾರೆ? ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಮೂಡಿಬಂದದ್ದು ಬಾಯ್ತುಂಬಾ ನಗು. ಕೊನೆಗೆ ಮೆಲ್ಲನೆ ಉಸುರಿದರು, ‘ಅದು ಸಾಮರ್ಥ್ಯದ ಪ್ರಶ್ನೆ. ಅರೋಗ್ಯವಾಗಿದ್ದೇನೆ. ಏನೂ ಸಮಸ್ಯೆಯಿಲ್ಲ.’
‘ಬಿಗ್ರೋಸ್ ಆಗ್ರೋ ಟೆಕ್ (ಪ್ರೈ) ಲಿ., ‘ಹಾಲಿಡೇ ಹೌಸ್’, ಕುಂಬ್ರ – ೫೭೪ ೨೫೮, ಪುತ್ತೂರು ತಾಲೂಕು ದ.ಕ. ೯೪೪೮೧ ೬೭೪೧೬ (ಆರ್.ಕೆ.ಭಟ್) rajisullia@yahoo.co.in
ಬೆಂಗಳೂರು ವಿಳಾಸ :
‘ಬಿಗ್ರೋಸ್ ಆಗ್ರೋ ಟೆಕ್ (ಪ್ರೈ) ಲಿ., #೨೮, ಎರಡನೇ ಮಹಡಿ, ಮೊದಲನೇ ತಿರುವು, ರಾಮಕೃಷ್ಣ ನಗರ, ಜೆ.ಪಿ.ನಗರ, ೬ನೇ ಫೇಸ್, ಕನಕಪುರ ರಸ್ತೆ, ಬೆಂಗಳೂರು – ೫೬೦ ೦೭೮, ) ೦೮೦-೨೨೭೨ ೨೧೮೧, bgrow@rediffmail.com
Leave A Comment