ಕೃಷಿಕರ ನಿರೀಕ್ಷೆಗಳೇನು? – ಜನಾಂತರಂಗ ೨೪೦೧೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ಆಂತರಿಕ ವ್ಯವಸ್ಥೆಗಳ ಕೊರತೆ ಮತ್ತು ಬಾಹ್ಯ ಒತ್ತಡಗಳ ಪರಿಣಾಮವಾಗಿ ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಿರುವ ನಮ್ಮ ಕೃಷಿ ಕ್ಷೇತ್ರದ ಪುನರುತ್ಥಾನಕ್ಕಾಗಿ ನಮ್ಮ ಸರ್ಕಾರಗಳಿಂದು ಹಲವು ರೀತಿಯ ಅಭಿವೃಧ್ಧಿ ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನು ದಕ್ಷ ರೀತಿಯಲ್ಲಿ ಕಾರ್ಯರೂಪಕ್ಕೆ ತರುವ ಮೂಲಕ ಈ ಕ್ಷೇತ್ರವನ್ನಿಂದು ರಕ್ಷಿಸಬೇಕಾಗಿದೆ. ಈ ಯೋಜನೆಯಲ್ಲಿ ಕೊಯ್ಲಿನ ನಂತರದ ತಾಂತ್ರಿಕತೆಗೆ ಮಹತ್ವನ್ನು ನೀಡಬೇಕಾಗಿದೆ.

ಇಲ್ಲಿ ಮುಖ್ಯವಾಗಿ ಪರಿಗಣಿಸಬೇಕಾದ ವಿಚಾರಗಳೆಂದರೆ:

ಕೃಷಿ ಉತ್ಪನ್ನಗಳ ಬೆಲೆಗಳನ್ನು ಮುಂಚಿತವಾಗಿ ಅಂದಾಜಿಸುವ ವ್ಯವಸ್ಥೆ.
ಕೃಷಿ ಉತ್ಪನ್ನಗಳ ಬೆಲೆಯನ್ನು ಮುಂಚಿತವಾಗಿ ತಿಳಿದುಕೊಳ್ಳುವ ವ್ಯವಸ್ಥೆಯಿನ್ನಿಂದು ಮಾಡಿಕೊಂಡಲ್ಲಿ ನಮ್ಮ ಕೃಷಿಕರು ತಮ್ಮ ಉತ್ಪಾದನಾ ಕಾರ್ಯಗಳು ಮತ್ತು ಮಾರಾಟ ವ್ಯವಸ್ಥೆಗಳನ್ನು ಒಂದು ಯೊಜಿತ ರೀತಿಯಲ್ಲಿ ಕೈಗೊಂಡು ಮುಂದೆ ಬರಬಹುದಾದ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಅಗತ್ಯವಿರುವ ಹವಾಗುಣ, ಉತ್ಪಾದನೆ, ಪೂರೈಕೆ, ಶೇಖರಣೆ, ಸರಕಾರದ ನೀತಿಗಳು, ಬೇಡಿಕೆ, ರಫ್ತು, ಆಮದು ಇತ್ಯಾದಿ ಮಾಹಿತಿಗಳನ್ನು ಒಂದು ಯೋಗ್ಯ ರೀತಿಯ ಆದರ್ಶ ತಂತ್ರ ಜ್ಞಾನವನ್ನೊಳಗೊಂಡ ಕಾರ್ಯಕ್ರಮಗದೊಂದಿಗೆ ಗಳಿಸಿಕೊಳ್ಳಬೇಕು. ಕಂಪ್ಯೂಟರ್ ತಂತ್ರಜ್ಞಾನದಲ್ಲಿಂದು ದೇಶವು ಪ್ರಗತಿ ಸಾಧಿಸುತ್ತಿರುವ ಹಿನ್ನಲೆಯಲ್ಲಿ ಈ ವ್ಯವಸ್ಥೆಯ ಅಳವಡಿಕೆಯಿಂದ ಈ ಮಾಹಿತಿಗಳನ್ನು ಗಳಿಸಿಕೊಳ್ಳುವತ್ತ ಹೆಜ್ಜೆಯಿಡಬೇಕು. ಪ್ರಕೃತ ಅಮೇರಿಕಾದಲ್ಲಿ ವಾರ್ಷಿಕವಾಗಿ ಈ ರೀತಿಯ ಸಮೀಕ್ಷೆಗಳನ್ನು ಕೈಗೊಂಡು ‘ಭವಿಷ್ಯದ ವರದಿ’ಯನ್ನು ತಯಾರಿಸಿ ಕೃಷಿಕರಿಗೆ ಒದಗಿಸಲಾಗುತ್ತಿದ್ದು, ಈ ರೀತಿಯ ವ್ಯವಸ್ಥೆ ನಮ್ಮಲ್ಲೂ ಕೂಡ ಜಾರಿಗೆ ಬಂದರೆ ಕೃಷಿಕ್ಷೇತ್ರ ಮೇಲಕ್ಕೇಳಬಹುದು.

ತರಬೇತಿ ಮತ್ತು ಶಿಕ್ಷಣ
ನಮ್ಮ ಕೃಷಿಕರಿಗಿಂದು ಕೊಯ್ಲಿನ ನಂತರದ ತಾಂತ್ರಿಕತೆಯ ಬಗ್ಗೆ ಅಗತ್ಯ ಶಿಕ್ಷಣ ಮತ್ತು ತರಬೇತಿಗಳ ಅಭಾವವಿದ್ದು, ಅವರಿಂದು ಗಳಿಸುತ್ತಿರುವ ಆದಾಯ ಕಡಿಮೆಯಾಗುವಂತಾಗಲು ಇದೇ ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಇವರಿಗೆ ಕೊಯ್ಲಿನ ಬಗ್ಗೆ, ಮಾರಾಟಕ್ಕಾಗಿ ಉತ್ಪನ್ನಗಳನ್ನು ತಯಾರಿಸುವುದು, ಶುಚಿಗೊಳಿಸುವುದು, ಒಣಗಿಸುವಿಕೆ, ವಿಂಗಡನೆ, ಶೇಖರಣೆ, ಸಾಗಣೆ ಇತ್ಯಾದಿ ವಿಚಾರಗಳ ಬಗ್ಗೆ ಯೋಗ್ಯ ತರಬೇತಿ ಮತ್ತು ಶಿಕ್ಷಣವನ್ನು ಒದಗಿಸಬೇಕಾಗಿದೆ. ಈ ರೀತಿಯ ವ್ಯವಸ್ಥೆಗಳು ಉತ್ಪಾದನಾ ಕೇಂದ್ರಗಳಲ್ಲೇ ಆಗಬೇಕು. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದ ಕೇಂದ್ರಗಳು ಈ ದಿಶೆಯಲ್ಲಿ ದಿಟ್ಟ ಹೆಜ್ಚೆನ್ನಿಡಬೇಕಾದ ಅಗತ್ಯವಿದ್ದು, ಇದಕ್ಕಾಗಿ ಸರಕಾರಗಳೂ ಶ್ರಮಿಸಬೇಕಾಗಿದೆ.

ಅಂತರಾಷ್ಟ್ರೀಯ ಮಟ್ಟಕ್ಕನುಗುಣವಾಗಿ ಉತ್ಪನ್ನಗಳ ಗುಣ ಕಾಪಾಡಲು ಅಗತ್ಯ ಮಾಹಿತಿ
ಉದಾರೀಕರಣದ ವಾತಾವರಣಕ್ಕನುಗುಣವಾಗಿ ನಮ್ಮಲ್ಲಿ ಉತ್ಪಾದಿಸಲ್ಪಡುತ್ತಿರುವ ವಿವಿಧ ಕೃಷಿ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲು ಅವಕಾಶವಿದ್ದು, ಆ ಮಾರುಕಟ್ಟೆಗಳಲ್ಲಿ ಪೈಪೋಟಿಯನ್ನೆದುರಿಸಲು ಮತ್ತು ಹೆಚ್ಚಿನ ಬೇಡಿಕೆಯನ್ನು ಗಳಿಸಿಕೊಳ್ಳಲು ಇವುಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ಅಗತ್ಯವಿರುವ ತರಬೇತು, ಮಾಹಿತಿ ಇತ್ಯಾದಿಗಳನ್ನು ನಮ್ಮ ಸರಕಾರಗಳು ತಮ್ಮ ಸಹ ಸಂಸ್ಥೆಗಳ ಮುಖಾಂತರ ಒದಗಿಸಿ ಕೃಷಿ ಕ್ಷೇತ್ರವನ್ನು ರಕ್ಷಿಸಿ ಅಭಿವೃದ್ಧಿಪಡಿಸಬೇಕಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕಜಾಲ
ಸಮಯಕ್ಕನುಗುಣವಾಗಿ ಸರಿಯಾದ ಮಾರುಕಟ್ಟೆಗಳ ಬಗ್ಗೆ ಮಾಹಿತಿಯನ್ನಿಂದು ನಮ್ಮ ಕೃಷಿಕರಿಗೆ ಪೂರೈಸಿದಲ್ಲಿ ಅವರ ಮರಾಟ ವ್ಯವಸ್ಥಯು ಸುಗಮವಾಗಿ ಅವರ ಉತ್ಪನ್ನಗಳಿಗೆ ಯೋಗ್ಯ ಪ್ರತಿಫಲ ದೊರೆಯಲು ಸಾಧ್ಯ. ಆದ್ದರಿಂದ ಈ ತಂತ್ರಜ್ಞಾನ ಮತ್ತು ಜಾಲಗಳನ್ನು ಮಾರುಕಟ್ಟೆಯ ಮಾಹಿತಿಗಳಾದ ಧಾರಣೆ, ಒಳಹರಿವು, ಪೂರೈಕೆ, ಬೇಡಿಕೆ, ಶೇಖರಣಾ ಪ್ರಮಾಣ, ಆಮದು, ರಫ್ತು ಎಂಬಿತ್ಯಾದಿ ವಿಚಾರಗಳಿಗಾಗಿ ಬಳಸಿಕೊಳ್ಳಬೇಕು. ನಮ್ಮ ರಾಷ್ಟ್ರೀಯ ಮಾಹಿತಿ ಕೇಂದ್ರವಿಂದು ಬೇರೆ ಬೇರೆ ರಾಜ್ಯಗಳ ಮಾರುಕಟ್ಟೆ ಸಮಿತಿಗಳ ಮುಖಾಂತರ ಈ ವಿಚಾರಗಳನ್ನು ಸಂಗ್ರಹಿಸಿ ಮಾಧ್ಯಮಗಳ ಮೂಲ ನಮ್ಮ ಕೃಷಿ ಕ್ಷೇತ್ರಕ್ಕಿಂದು ಇವುಗಳನ್ನು ರವಾನೆ ಮಾಡಬೇಕು. ಈ ರೀತಿಯ ಮಾಹಿತಿಗಳನ್ನು ಅಂತರಾಷ್ಟ್ರೀಯ ಮಾರುಟ್ಟೆಗಳಿಂದಲೂ ಸಂಗ್ರಹಿಸಿ, ಇವುಗಳನ್ನೆಲ್ಲಾ ಪ್ರತಿ ಗ್ರಾಮ ಪಂಚಾಯತ್‌ಗಳ ಮೂಲಕ ಪೂರೈಕೆಯಾಗಬೇಕು.

ಕೃಷಿಕರದ್ದೇ ಆದ ಮಾರುಕಟ್ಟೆಯ ಸೃಷ್ಟಿ
ಮಧ್ಯವರ್ತಿಗಳಿಂದಾಗುತ್ತಿರುವ ಶೋಷಣೆ, ಅನಗತ್ಯ ಹಸ್ತಕ್ಷೇಪಗಳನ್ನು ನಿವಾರಿಸಲು ಮತ್ತು ಬಳಕೆದಾರ ಯಾ ಗ್ರಾಹಕನ ನೇರ ಸಂಪರ್ಕ ಹೊಂದಲು ಕೃಷಿಕರದ್ದೇ ಆದ ಮಾರಾಟ ಜಾಲದ ವ್ಯವಸ್ಥೆಯಿಂದು ನಮ್ಮಲ್ಲಾಗಬೇಕಾಗಿದೆ. ಈ ರೀತಿಯ ವ್ಯವಸ್ಥೆಗಳು ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಆಗಬೇಕು. ಪಂಜಾಬಿನ ಅಪ್ನಿಮಂಡಿ, ಆಂಧ್ರ ಪ್ರದೇಶದ ರೈತ ಬಜಾರ್, ತಮಿಳುನಾಡಿನ ಉಲ್ಲವಾರು ಸಂತ್ಯೆ ಇತ್ಯಾದಿಗಳಿಂದು ನಿಟ್ಟಿನಲ್ಲಿ ಯಶಸ್ಸನ್ನು ಸಾಧಿಸುತ್ತಿದ್ದು, ಇಂತಹ ವ್ಯವಸ್ಥೆಗಳಿಂದು ದೇಶ ವ್ಯಾಪ್ತಿಯಾದಲ್ಲಿ ರೈತ ಸಮುದಾಯ ನೆಮ್ಮದಿಯಿಂದ ಬದುಕಬಹುದು.

ಮಾರುಕಟ್ಟೆ ಅಭಿವೃದ್ಧಿಗಾಗಿ ಸರಕಾರೇತರ ಸಂಸ್ಥೆಗಳ ನೆರವು
ಯುವಕ ಮಂಡಲಗಳು, ಬೆಳೆಗಾರರ ಸಂಘಟನೆಗಳು, ಸ್ವಸಹಾಯ ತಂಡಗಳು, ಮಹಿಳಾ ಮಂಡಳಿಗಳು ಇತ್ಯಾದಿಗಳಿಂದು ರೈತರು ಉತ್ಪಾದಿಸಿದ ಉತ್ಪನ್ನಗಳನ್ನು ಯೋಗ್ಯ ರೀತಿಯಲ್ಲಿ ಮಾರಾಟ ಮಾಡಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮತ್ತು ನೆರವನ್ನು ಕೊಟ್ಟು, ಮಾರಾಟ ವ್ಯವಸ್ಥಯನ್ನು ಅಭಿವೃದ್ಧಿಪಡಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಈ ಸಂಸ್ಥೆಗಳಿಂದು ಕಾರ್ಯರೂಪಕ್ಕಿಳಿಯಬೇಕು ಮತ್ತು ಈ ನಮ್ಮ ಸರಕಾರಗಳಿಂದು ಈ ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟು, ಅವುಗಳಿಂದು ಗ್ರಾಮಗಳ ಮತ್ತು ಕ್ರಷಿಕರ ಅಭಿವೃದ್ಧಿಗಾಗಿ ಶ್ರಮಿಸುವಂತೆ ಮಾಡಬೇಕಾಗಿದೆ.

ಇವೆಲ್ಲದರೊಂದಿಗೆ ಪ್ರಕೃತ ಕಾರ್ಯ ನಿಭಾಯಿಸುತ್ತಿರುವ ಸಗಟು ಮತ್ತು ಚಿಲ್ಲರೆ ಮಾರಾಟ ವ್ಯವಸ್ಥೆಗಳನ್ನು ದಕ್ಷ ರೀತಿಯಲ್ಲಿ ಕೈಗೊಳ್ಳಲು ಅಗತ್ಯವಿರುವ ದಕ್ಷ ಅಧಿಕಾರಿಗಳನ್ನು ನಮ್ಮ ಸರಕಾರಗಳು ನೇಮಿಸಿ, ಈಗಿರುವ ಎಡರು ತೊಡರುಗಳನ್ನು ನಿವಾರಿಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಬದಲಾಗುತ್ತಿರುವ ವಾತಾವರಣಕ್ಕನುಗುಣವಾಗಿ ನಮ್ಮ ಕೃಷಿ ಕ್ಷೇತ್ರವು ಬದಲುಗೊಂಡು ಈಗ ಕಂಡು ಬರುತ್ತಿರುವ, ಮುಂದೆ ಬರಬಹುದಾದ ಸೋಲು ಯಾ ಅಪಾಯಗಳನ್ನು ಎದುರಿಸಬಲ್ಲದು ಮತ್ತು ರಾಷ್ಟ್ರದ ಅಭಿವೃದ್ಧಿಯಾಗಬಹುದು. ಈ ರೀತಿಯ ವ್ಯವಸ್ಥೆಗಳಿಗಿಂದು ಅಗತ್ಯವಿರುವುದು ಯೋಜನೆ, ದಕ್ಷತೆ, ಪ್ರಮಾಣಿಕತೆ ಮತ್ತು ಆಸಕ್ತಿ. ಇವನ್ನೇ ರೈತ ಸಮುದಾಯವಿಂದು ನಮ್ಮ ಸರಕಾರಗಳಿಂದ ನಿರೀಕ್ಷಿಸುತ್ತಿರುವುದ.