ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಕೈಗೊಂಡ ಉತ್ತರ ಭಾರತದ ಅಡಿಕೆ ಬಳಕೆದಾರ ಕೇಂದ್ರಗಳ ಮಾರುಕಟ್ಟೆ ಸಮೀಕ್ಷೆಯ ಮದ್ಯಂತರ ವರದಿ
– ಡಾ. ವಿಘ್ನೇಶ್ವರ ವರ್ಮುಡಿ.

ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ತೋಟಗಾರಿಕಾ ಬೆಳೆ ಅಡಿಕೆ. ಈ ಬೆಳೇಯನ್ನು ನಂಬಿ ಹಲವು ಲಕ್ಷ ಕೃಷಿಕರು, ಕೃಷಿ ಕಾರ್ಮಿಕರು ಮತ್ತು ಇತರೆ ವ್ಯವಸ್ಥೆಗಳಲ್ಲಿರುವ ಜನರಿಂದು ಜೀವನ ನಡೆಸುತ್ತಿದ್ದು, ಕಳೆದ ಸಾಲಿನಿಂದೀಚೆಗೆ ಅಡಕೆಯ ಧಾರಣೆಯು ಒಮ್ಮಿಂದೊಮ್ಮೆಲೆ ಕುಸಿಯಲಾರಂಭಿಸಿ, ಈ ಕ್ಷೇತ್ರವು ಸೋಲಿನಿಂದ ಕಂಗೆಟ್ಟಿತ್ತು. ಪರಿಣಾಮವಾಗಿ ಅಡಿಕೆ ಬೆಳೆಗಾರ ಸಮೂಹ ಸಂಘ ಮತ್ತು ಸಂಸ್ಥೆಗಳು ಮುಂದೇನ ಎಂಬ ಬಗ್ಗೆ ಚಿಂತನೆಗೊಳಪಟ್ಟವು. ಈ ಸಮಯದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳೊಡಗೂಡಿ ಅಡಕೆ ಬೆಳೆಗಾರರ ಸಮಾವೇಶಗಳನ್ನು ಹಮ್ಮಿಕೊಂಡಿತ್ತು. ಅದೇ ಸಮಯದಲ್ಲಿ ಬೆಳೆಗಾರ ಪ್ರದೇಶಗಳಲ್ಲಿ ದೊರಕುತ್ತಿದ್ದ ಧಾರಣೆ ಮತ್ತು ಬಳಕೆದಾರ ಕೇಂದ್ರಗಳಲ್ಲಿದ್ದ ಧಾರಣೆಗಳ ನಡುವೆ ಅಗಾಧ ಅಂತರವಿದೆಯೆಂಬ ಕೂಗು ಇಲ್ಲೆಲ್ಲಾ ಕೇಳಿ ಬಂತು. ಈ ನಿಟ್ಟಿನಲ್ಲಿ ನಿಜ ಸಂಗತಿಯನ್ನರಿಯಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಉತ್ತರ ಭಾರತದ ಅಡಿಕೆ ಬಳಕೆದಾರ ಕೇಂದ್ರಗಳ ಮಾರುಕಟ್ಟೆಯ ಸಮೀಕ್ಷೆಯನ್ನು ಕೈಯಗೊಳ್ಳಲು ನಿರ್ಧರಿಸಿತು. ಇದರಂತೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ. ಪಿ.ಕೆ.ಯಸ್‌. ಭಟ್ಟರ ನೇತೃತ್ವದ ತಜ್ಞರ ಸಮೀಕ್ಷಾ ತಂಡ ಒಂದನ್ನು ರಚಿಸಿ, ಜನವರಿ ೧೧, ೨೦೦೧ರಂದು ಸಮೀಕ್ಷೆಗಾಗಿ ಹೊರಟು ಜನವರಿ ೨೮ರಂದು ಮರಳಿ ಬಂದ ಕೆಳಗೆ ಸೂಚಿಸಿದ ವಿಚಾರಗಳನ್ನು ಹೆಸರಿಸಿತು. ಕೆಂಪಡಿಕೆಗೆ ಉತ್ತಮ ಬೆಲೆಯಿದ್ದು ಬಿಳಿಅಡಿಕೆಯ ಕ್ರಯ ಮಾತ್ರ ಕುಸಿದಿರುವುದರಿಂದ ಈ ಸಮೀಕ್ಷೆ ಬಿಳಿಯಡಿಕೆ ಮಾತ್ರ ಸೀಮಿತ.

ಸಮೀಕ್ಷೆಯ ಉದ್ದೇಶ:

) ಉತ್ತರ ಭಾರತದ ಅಡಿಕೆ ಬಳಕೆದಾರ ಕೇಂದ್ರಗಳಲ್ಲಿ ಚಾಲ್ತಿಯಲ್ಲಿರುವ ಧಾರಣೆಯನ್ನು ತಿಳಿಯುವುದು.
) ಈ ಪ್ರದೇಶಗಳಲ್ಲಿರುವ ಅಡಿಕೆ ಮಾರಾಟ ವ್ಯವಸ್ಥೆ ಬಗ್ಗೆ ಅಧ್ಯಯನ.
) ಅಡಿಕೆಯ ಬಳಕೆ ಯಾವ ರೀತಿ.
) ಈ ಕೇಂದ್ರಗಳಲ್ಲಿ ವಿದೇಶಿ ಅಡಿಕೆಯ ಪಾತ್ರ.
) ಪ್ರಕೃತ ಮಾರಾಟ ವ್ಯವಸ್ಥೆಯಲ್ಲಿರುವ ನ್ಯೂನತೆಗಳು.
) ಸಹಕಾರಿ ವ್ಯವಸ್ಥೆಯ ಬಗ್ಗೆ ಅಲ್ಲಿರುವ ಅಭಿಪ್ರಾಯ.
) ಅಗತ್ಯ ಪರಿಹಾರಗಳನ್ನು ಕಂಡುಕೊಳ್ಳವುದು.

ಸಮೀಕ್ಷೆ ನಡೆದ ಸಮಯದಲ್ಲಿ ಕ್ರಯ: ಬಿಳಿ ಅಡಿಕೆ ಹಳತ್ತು -ರೂ.೬೦–೬೫/ಕೆ.ಜಿ. ಹೊಸತ್ತು -ರೂ. ೪೫–೫೦ಕೆ.ಜಿ.

ಪ್ರದೇಶಗಳ ಆಯ್ಕೆ: ದೇಶದ ಪ್ರಮುಖ ಅಡಿಕೆ ಬಳಕೆ ಕೇಂದ್ರಗಳಾದ ದೆಹಲಿ, ಆಗ್ರಾ, ಗುರಗಾಂ, ಕಾನ್ಪರು, ಅಹಮದಾಬಾದ್, ಜಾಂನಗರ, ಬೊಂಬಾಯಿ, ನಾಗ್ಪುರ ಮತ್ತು ಪೂನಾಗಳನ್ನು ಆಯ್ದುಕೊಂಡರೂ ಗುಜರಾತ್ ನಲ್ಲಿ ಸಂಭವಿಸಿದ ಭೂಕಂಪದಂದು ಜಾಂನಗರದಲ್ಲಿದ್ದ ತಂಡ ಹಲವು ಸಮಸ್ಯೆಗಳನ್ನೆದುರಿಸಿದ ಕಾರಣ ಬೊಂಬಾಯಿ ನಾಗ್ಪುರ ಮತ್ತು ಪೂನಾ ಕೇಂದ್ರಗಳನ್ನು ಕೈಗೊಳ್ಳಲಾಗದೆ ಹಿಂದಿರುಗಿದರೂ ಅಗತ್ಯ ಮಾಹಿತಿಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಅಧ್ಯಯನದಲ್ಲಿ ಕಂಡು ಬಂದ ಪ್ರಮುಖ ವಿಚಾರಗಳು:

) ಧಾರಣೆ:
ಸಮೀಕ್ಷೆಯನ್ನು ಕೈಗೊಂದ ಎಲ್ಲಾ ಕೇಂದ್ರಗಳಲ್ಲೂ ಅಡಿಕೆಯ ರಖಂ (Wholesale) ಧಾರಣೆಯನ್ನು ಹೇಳಲು ವ್ಯಾಪಾರಸ್ಥರು ಹಿಂಜರಿಯುತ್ತಿದ್ದರೂ, ಸಮೀಕ್ಷಾ ತಂಡ ಗುರುತಿಸಿದಂತೆ ಅದು ರೂಪಾಯಿ ೯೦ರಿಂದ ೯೫ರ ತನಕವಿತ್ತು. ಚಿಲ್ಲರೆ ವ್ಯಾಪಾರಿಗಳಲ್ಲಿ ಗ್ರಾಹಕನಿಗೆ ಕೆ.ಜಿ. ೧ರ ಬೆಲೆ ರೂ. ೧೧೦-೦೦ಇತ್ತು. ಅದೇ ಸಮಯದಲ್ಲಿ ಮಂಗಳೂರಿನ ಧಾರಣೆಯು ರೂಪಾಯಿ ೫೫/-ರಿಂದ ೬೦/-ರ ತನಕವಿತ್ತು.

ಆದರೆ ರಖಂ ವ್ಯಾಪಾರಿಗಳಿಂದ ಅಡಿಕೆಯ ಮುಖ್ಯ ಬಳಕೆದಾರರಾದ ಪಾನ್‌ವಾಲಾಗಳಿಗೆ ಅದು ತಲುಪಿದಾಗ ಈ ಬೆಲೆಯು ರೂಪಾಯಿ ೧೩೦ರಿಂದ ೧೬೦ರ ತನಕವಿತ್ತೆಂಬುದನ್ನು ಸಮೀಕ್ಷಾ ತಂಡವು ಗುರುತಿಸಿತು.

) ಬಳಕೆದಾರ ಕೇಂದ್ರಗಳಲ್ಲಿನ ಮಾರಾಟ ವ್ಯವಸ್ಥೆ:
ಬಳಕೆದಾರ ಪಾನ್‌ವಾಲಗಳಿಗೆ, ರಖಂ ವ್ಯಾಪಾರಿಗಳಿಂದ ಅಡಿಕೆಯು ತುಂಡುಗಳಾಗಿ ಪೂರೈಕೆಯಾಗುತ್ತಿದ್ದು, ಇಲ್ಲಿ ಅಡಿಕೆಯನ್ನು ವಿವಿಧ ತೂಕದ ಪೊಟ್ಟಣಗಳಲ್ಲಿ ಪೂರೈಸಲಾಗುತ್ತಿದೆ. ಈ ಪ್ರದೇಶಗಳಲ್ಲಿರುವ ರಖಂ ವ್ಯಾಪಾರಿಗಳಿಂದ ಅಡಿಕೆಯನ್ನು ತುಂಡರಿಸುವ ಗುಡಿಕೈಗಾರಿಕಾ ಕೇಂದ್ರಗಳ ಉದ್ದಿಮೆದಾರರು ಖರೀದಿಸಿ, ಅದು ಅಲ್ಲಿಂದ ಮಧ್ಯವರ್ತಿಗಳ ಮೂಲಕ ಬಳಕೆದಾರ ಪಾನ್‌ವಾಲಗಳಿಗೆ ಪೂರೈಕೆಯಾಗುತ್ತಿರುವುದನ್ನು ಸಮೀಕ್ಷಾ ತಂಡ ಗುರುತಿಸಿದೆ.

) ಬಿಳಿಅಡಿಕೆ ಬಳಕೆ:
ಬಿಳಿ ಅಡಿಕೆ ಯಾ ಮಂಗಳೂರು ಚಾಲಿ ಎಂದೇ ಪ್ರಸಿದ್ಧವಾಗಿರುವ ಅಡಿಕೆಯನ್ನಿಂದು ಪಾನ್‌ವಾಲಾ ಅಂಗಡಿಗಳು ಬೀಡಾವನ್ನು ತಯಾರಿಸಲು ಉಪಯೋಗಿಸುತ್ತಿದ್ದು, ಉತ್ತರದ ದೆಹಲಿ, ಹರ್ಯಾನ ಕಾನ್ಪುರಗಳಲ್ಲಿ ಈ ರೀತಿಯ ಬೀಡಾಕ್ಕಿರುವ ಬೇಡಿಕೆ, ಗುಟ್ಕಾದಿಂದಾಗಿ ಕುಸಿಯತೊಡಗಿದೆ. ದೆಹಲಿಯೊಂದರಲ್ಲೇ ಸುಮಾರು ೨೦ ಸಾವಿರಕ್ಕಿಂತಲೂ ಹೆಚ್ಚು ಪಾನ್‌ವಾಲಾಗಳಿದ್ದು, ಇಲ್ಲೆಲ್ಲಾ ದಿನವೊಂದರ ಸುಮಾರು ೫೦೦ರಷ್ಟು ಬೀಡಾಗಳು ಬಿಕರಿಯಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗುಟ್ಕಾಕ್ಕಿರುವ ಬೇಡಿಕೆ ಹೆಚ್ಚಾಗಿದ್ದು, ಪ್ರಕೃತ ಈ ಅಂಗಡಿಗಳಲ್ಲಿ ದಿನವೊಂದರ ಸರಾಸರಿ ೩ ಸಾವಿರಕ್ಕಿಂತಲೂ ಹೆಚ್ಚು ಗುಟ್ಕಾಗಳು ಮಾರಾಟವಾಗುತ್ತಿದೆ.

ಆದರೆ ಗುಜರಾತ್ ರಾಜ್ಯದ ಪರಿಸ್ಥಿಯೆ ಬೇರೆ. ಇಲ್ಲಿ ಬಿಳಿ ಅಡಿಕೆಯಿಂದ ತಯಾರಿಸಲ್ಪಡುವ ಬೀಡಾಕ್ಕೆ ಬೇಡಿಕೆ ಹೆಚ್ಚು. ಇಲ್ಲಿ ನಡೆಯುವ ವ್ಯಾಪಾರಗಳಲ್ಲಿ ಶೇಕಡಾ ೭೦ರಿಂದ ೮೦ ಬೀಡಾಕ್ಕೆ ಮೀಸಲು ಮತ್ತು ಬೀಡಾದಲ್ಲಿ ಬಳಸುವ ಅಡಿಕೆಯ ಪ್ರಮಾಣವು ಇತರೇ ಕೇಂದ್ರಗಳಿಗೆ ಹೋಲಿಸಿದಾಗ ಅಧಿಕ.

) ವಿದೇಶಿ ಅಡಿಕೆಯ ಪಾತ್ರ:
ವಿದೇಶಿಗಳಿಂದ ಬಂದ ಅಡಿಕೆಯಿಂದ ದೆಹಲಿ, ಕಾನ್ಪುರ ಮಾರುಕಟ್ಟೆಗಳಲ್ಲಿ ಕಾಣಬಹುದಾಗಿದ್ದು, ಇವುಗಳ ಗುಣಮಟ್ಟ ಉತ್ತಮವಾಗಿಲ್ಲ. ಇವಿಂದು ನಮ್ಮಲ್ಲಿರುವ ನಾಲ್ಕನೇ ದರ್ಜೆಯ ಅಡಿಕೆಯ ರೀತಿಯದ್ದಾಗಿದ್ದು ಇದನ್ನು ಈ ರಖಂ ವ್ಯಾಪಾರಸ್ಥರು ಕೆಂಪಡೆಕೆ ಮಿಶ್ರಮಾಡಿ ಗುಟ್ಕಾ ಕಂಪೆನಿಗಳಿಗೆ ಮತ್ತು ಪಾನ್‌ವಾಲಾಗಳಿಗೆ ಹೆಚ್ಚಿನ ಬೆಲೆಗೆ ಪೂರೈಸುತ್ತಿದ್ದಾರೆ. ಇವುಗಳ ಬೆಲೆ ಅತ್ಯಂತ ಕಡಿಮೆ. ಉದಾಹರಣೆಗೆ: ಇಂಡೋನೆಷಿಯಾದಿಂದ ಬಂದ ಅಡಿಕೆ ಕಿಲೋ ಒಂದರ ರೂಪಾಯಿ ೧೯ರಿಂದ ೨೮ಆಗಿತ್ತು. ಈ ರೀತಿಯದ್ದಾದ ಅಡಿಕೆ ಹಲವು ರಾಷ್ಟ್ರಗಳಿಂದ ಈ ಕೇಂದ್ರಗಳಿಗೆ ರವಾನೆಯಾಗುತ್ತಿದೆ ಎಂದುದನ್ನು ಸಮೀಕ್ಷಾ ತಂಡವು ಗುರುತಿಸಿತ್ತು. ಈ ಬಗ್ಗೆ ರಖಂ ವ್ಯಾಪಾರಸ್ಥರನ್ನು ಕೇಳಿದಾಗ ಅವರಿಂದು ವಿದೇಶಿ ಅಡಿಕೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಮತ್ತು ಅದರಿಂದ ಮಂಗಳೂರು ಚಾಲಿ ಯಾ ಬಿಳಿಅಡಿಕೆಯ ಧರಣೆ ಮೇಲೆ ಹೆಚ್ಚಿನ ಪರಿಣಾಮವಿಲ್ಲವೆಂದು ವ್ಯಾಪಾರಿ ಸಮೂಹವೇ ತಿಳಿಸಿತ್ತು.

) ಧಾರಣೆಯ ಏರಿಳಿತಕ್ಕೆ ಕಾರಾಣಗಳು:

(a) ಮಾಹಿತಿಯ ಅಬಾವ:
ಅಡಿಕೆ ಬಳಕೆದಾರ ಕೇಂದ್ರಗಳ ರಖಂ ವ್ಯಾಪಾರಸ್ಥರ ಪ್ರಕಾರ ಧಾರಣೆ ಮೇಲೇರಲು ನಮ್ಮಲ್ಲಿರುವ ಮಾಹಿತಿಯ ಅಭಾವ, ಬೆಳೆಗಾರ ಮತ್ತು ವ್ಯಾಪಾರಸ್ಥರ ಮಧ್ಯೆ ಉತ್ಪಾದನೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ, ಬೆಳೆ ಕಡಿಮೆಯೆಂಬ ಮಾಹಿತಿ ದೊರಕಿ ಕಳೆದ ಸಾಲಿನಲ್ಲಿ ಬೆಲೆಯೇರಿದ್ದು, ಈ ಸಾಲಿನಲ್ಲಿ ಬೆಳೆ ಹೆಚ್ಚೆಂಬ ಮಾಹಿತಿ ದೊರಕಿ ಬೆಲೆಯಿಳಿಕೆಗೆ ದಾರಿಯಾಯಿತು. ಆದರೆ ಇಲ್ಲೆಲ್ಲಾ ಕಂಡುಬರುತ್ತಿರುವ ಮುಖ್ಯ ಅಂಶ ಅಗತ್ಯ ಮಾಹಿತಿಯ ಅಭಾವವೇ ಧಾರಣೆಯ ಏರಿಳೆಕೆಗೆ ಕಾರಾಣವೆಂಬುದು.

(b) ಪ್ರಕೃತ ಧಾರಣೆಯ ಇಳಿತಕ್ಕೆ ಕಾರಣಗಳು:
ರಖಂ ವ್ಯಾಪಾರಸ್ಥರ ಪ್ರಕಾರ ಕಳೆದ ಸಾಲಿನಲ್ಲಿ ಧಾರಣೆ ಏರಿದಾಗ ಅವರ ಕ್ರೋಢೀಕರಿಸಿಟ್ಟ ಅಡಿಕೆ ಬಳಕೆದಾರರ ಪ್ರತಿರೋಧ (Market Resistance) ಇನ್ನು ಬಿಕರಿಯಾಗಿದ್ದು ವ್ಯವಹಾರದಲ್ಲಿ ನಷ್ಟ ಉಂಟಾಗುದ್ದು ಇದರೊಂದಿಗೆ ಅವರಿಂದು ಒಗ್ಗೂಡಿ ಧಾರಣೆಯನ್ನು ಏರಿಸದಿರಲು ನಿರ್ಧರಿಸಿದ್ದು, ಪರಿಣಾಮವಾಗಿ ಇಂದೀಗ ಧಾರಣೆ ಕುಸಿಯುತ್ತಿದೆ.

) ಪ್ರಕೃತ ಮಾರಾಟವ್ಯವಸ್ಥೆಯಲ್ಲಿರುವ ನ್ಯೂನತೆಗಳು:
(a)
ಪ್ರಕೃತ ಅಡಿಕೆ ಮಾರಾಟ ವ್ಯವಸ್ಥೆಯು ಹೆಚ್ಚು ಕಡಿಮೆ ಖಾಸಗಿಯವರ ಹತೋಟಿಯಲ್ಲಿದ್ದು ಇವರ ಪಾಲು ಶೇಕಡಾ ೯೦ರಷ್ಟಾಗಿದೆ. ಈ ರೀತಿಯದ್ದಾದ ಹಿಡಿತದಿಂದಾಗಿ ಕಾಲಕಾಲಕ್ಕೆ ಧಾರಣೆಯ ಏರಿಳಿತವುಂಟಾಗುತ್ತಿದೆ.

(b) ಅಡಿಕೆ ಮಾರಾಟ ವ್ಯವಸ್ಥೆಗಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸಹಕಾರದಿಂದ ಬೆಳೆಗಾರರ ಹಿತದೃಷ್ಟಿಯಿಂದ ಬೆಳೆಗಾರರದ್ದೇ ಆದ ಕ್ಯಾಂಪ್ಕೋವಿದ್ದರೂ ಅಗತ್ಯ ಹಣಕಾಸಿನ ಅಭಾವದಿಂದಾಗಿ ಮತ್ತು ತೆರಿಗೆಗಳ ಸಮಸ್ಯೆ ಅದಿಂದು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲಾರದ ಸ್ಥಿತಿಯಲ್ಲಿದೆ, ಅಲ್ಲದೆ ಪೂರ್ಣ ಪ್ರಮಾಣದ ಅಡಿಕೆಯನ್ನು ಖರೀದಿಸುವ ಸ್ಥಿತಿಯಲ್ಲಿಲ್ಲ. ಕೇವಲ ೧೦ಶೇಕಡಾ ಅಡಿಕೆ ಮಾತ್ರ ವ್ಯವಹರಿಸುತ್ತದೆ.

(c) ಅಡಿಕೆ ಮಾರಾಟ ವ್ಯವಸ್ಥೆಯಲ್ಲಿಂದು ಹಲವು ಮಧ್ಯರ್ತಿಗಳಿದ್ದು ಪರಿಣಾಮವಾಗಿ ಧಾರಣೆ ಏರಿಳಿತಕ್ಕೊಳಪಡುತ್ತಿದೆ. ಬೆಳೆಗಾರನಿಂದ ಅಡಿಕೆ ಬಳಕೆದಾರನಿಗೆ ತಲುಪುವಾಗ ಸುಮಾರು ೭–೯ ಹಂತಗಳನ್ನು ದಾಟುತ್ತಿದೆಯೆಂಬುದು ಸಮೀಕ್ಷೆಯಿಂದ ತಿಳಿದು ಬಂದ ಪ್ರಮುಖ ವಿಚಾರವಾಗಿದೆ. ಇದರಿಂದಾಗಿ ದಲ್ಲಾಳಿ ಯಾ ಮಧ್ಯರ್ತಿಗಳ ಹೆಚ್ಚಿನ ಪ್ರಮಾಣದ ಲಾಭಾಂಶವನ್ನು ಗಳಿಸುತ್ತಿದ್ದಾರೆ.

) ಹಳ್ಳಿಯ ವ್ಯಾಪಾರಿ/ ಸಹಕಾರಿ ಸಂಘ/ ಕ್ಯಾಂಪ್ಕೋ ಶಾಖೆ
) ಉತ್ಪಾದನಾ ಕೇಂದ್ರದ ರಖಂ ವ್ಯಾಪಾರಿ/ ಕ್ಯಾಂಪ್ಕೋ
) ಕ್ಯಾಂಪ್ಕೋ ಮಾರಾಟ ಪ್ರತಿನಿಧಿಗಳು / ಬಳಕೆದಾರ ಕೇಂದ್ರದ ದಲ್ಲಾಳಿಗಳು
) ಬಳಕೆದಾರ ಕೇಂದ್ರದ ರಖಂ ವ್ಯಾಪಾರಸ್ಥರು /(ಕ್ಯಾಂಪ್ಕೋ ಶಾಖೆಗಳು ಇದ್ದರೂ ವಿಶೇಷ ಪರಿಣಾಮಕಾರಿಗಳಾಗಿಲ್ಲ.)
) ಚಿಲ್ಲರೆ ವ್ಯಾಪಾರಿ /ಗುಡಿಕೈಗಾರಿಕೆದಾರರು (ಕಟ್ಟಿಂಗ್ ಮಾಡಿಸುವವರು)
) ಲೈನ್ ಸೇಲಿನವರು
) ಪಾನ್ ವಾಲಾರು
) ತಿನ್ನುವವರು

(d) ಉತ್ಪಾದನೆ ಮತ್ತು ಗ್ರಾಹಕರಿಗೆ ಮಾಹಿತಿಯ ಅಭಾವ:
ಅಡಿಕೆಯನ್ನು ಬೆಳೆಸುತ್ತಿರುವ ಉತ್ಪಾದಕನಿಗೆ ಅಡಿಕೆಯಿಂದೇನಾಗುತ್ತಿದೆ, ಬಳಕೆದಾರ ಕೇಂದ್ರಗಳಲ್ಲಿರುವ ಬೆಲೆಯೆಷ್ಟು, ದೇಶದಲ್ಲಿಂದು ಉತ್ಪಾದಿಸಲ್ಪಡುವ ಅಡಿಕೆಯ ಪ್ರಮಾಣವೆಷ್ಟು ಬಳಕೆದಾರರ ರುಚಿಯೇನು ಎಂಬಿತ್ಯಾದಿ ಮಾಹಿತಿಗಳಿಲ್ಲ. ಇನ್ನೊಂದೆಡೆಯಲ್ಲಿ ಗ್ರಾಹಕರಾದ ಪಾನ್ ವಾಲಾಗಳಿಗೆ ಅಡಿಕೆಯ ರಖಂ ಬೆಲೆಯೆಷ್ಟು ಎಂಬುದು ತಿಳಿದಿಲ್ಲ. ಅಲ್ಲದೆ ಬಳಕೆದಾರ ಕೇಂದ್ರಗಳಲ್ಲಿ ರಖಂ ವ್ಯಾಪಾರಿಗಳಿಗೂ ಅಡಿಕೆಯ ವ್ಯವಸಾಯಕ್ಕೆ ತಗಲುವ ವೆಚ್ಚವೆಷ್ಟು ಅಡಿಕೆಗೆಷ್ಟು ಧಾರಣೆಯಿರಬೇಕು,ಒಟ್ಟು ಉತ್ಪಾದನೆಯೆಷ್ಟು ಎಂಬಿತ್ಯಾದಿ ಮಾಹಿತಿಗಳು ಪರಿಪೂರ್ಣವಾಗಿ ಸಿಗದೆ ಅವರೂ ದಲ್ಲಾಳಿಗಳ ಹತೋಟಿಗೊಳಪಟ್ಟು ಸೋಲುತ್ತಿದ್ದಾರೆ.

(e) ಸಹಕಾರಿ ವ್ಯವಸ್ಥೆಯಲ್ಲಿರುವ ತೊಡಕುಗಳು:
ಅಡಿಕೆ ಬೆಳೆಗಾರರದ್ದಾದ ಸಹಕಾರಿ ವ್ಯವಸ್ಥೆಯ ಬಗ್ಗೆ ಬಳಕೆದಾರ ಕೇಂದ್ರಗಳಲ್ಲಿ ಯೋಗ್ಯ ಪ್ರತಿಕ್ರಿಯೆ ಇದ್ದರೂ, ರಖಂ ವ್ಯಾಪಾರಸ್ಥರ ಪ್ರಕಾರ ಪ್ರಕೃತ ಬಲಾಗುತ್ತಿರುವ ವಿಶ್ವ ಮಾರುಕಟ್ಟಡಗನುಗುಣವಾಗಿ ಇದರ ನೀತಿ ನಿಯಾಮಾವಳಿಗಳೂ ಬದಲಾಗಬೇಕು. ಈಗೀರುವ ಮಾರುಕಟ್ಟೆ ತಂತ್ರಗಳು ಮಾರುಕಟ್ಟೆಗನುಗುಣವಾಗಿಲ್ಲ. ಬಳಕೆದಾರ ಕೇಂದ್ರಗಳ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನೀತಿ ನಿಯಾಮಾವಳಿಗಳಿರಬೇಕು. ಆಗಿಂದಾಗ ಬಳಕೆದಾರ ಕೇಂದ್ರದ ರಖಂ ವರ್ತಕರು ಮಾರಾಟ ಸಹಕಾರಿ ಸಂಸ್ಥೆಗಳು ಜೊತೆಗೂಡಿ ವಿಚಾರ ವಿಮರ್ಶೆ ನಡೆಸಬೇಕು.

(f) ವಿಪರೀತ ತೆರಿಗೆ, ಮಾರಾಟ ತೆರಿಗೆ, ಪ್ರವೇಶ ತೆರಿಗೆ, ಎ. ಪಿ. ಎಂ. ಸಿ. ಡ್ಯೂಟಿ ಇತ್ಯಾದಿ.

ಪರಿಹಾರಗಳು:

() ವ್ಯವಸ್ಥಿತ ರೀತಿಯ ಸಮೀಕ್ಷೆಗಳು:
) ನಮ್ಮ ಸರಕಾರಗಳಿಂದು ದೇಶದ ವಿವಿಧ ರಾಜ್ಯಗಳಲ್ಲಿ ಅಡಿಕೆ ವ್ಯವಸಾಯವನ್ನು ಕೈಗೊಳ್ಳುತ್ತಿರುವ ವಿಸ್ತೀರ್ಣ, ಉತ್ಪಾದನೆಗಳ ಬಗ್ಗೆ ತಕ್ಷಣ ಸಮೀಕ್ಷೆಯನ್ನು ಕೈಗೊಂಡು ಮಾಹಿತಿಯನ್ನೊದಗಿಸಬೇಕು. ಇದಕ್ಕಾಗಿ ಒಂದು ಪ್ರತ್ಯೇಕ ಸಮೀಕ್ಷಾ ಕೇಂದ್ರವನ್ನು ಹೊಂದಿಕೊಂಡು, ಕಾಲಕಾಲಕ್ಕೆ ಈ ಸಮೀಕ್ಷೆಗಳನ್ನು ಕೈಗೊಳ್ಳಬೇಕು. ಈ ಸಮೀಕ್ಷೆಗಳನ್ನು ಕೈಗೊಳ್ಳವಾಗ ಅದರಲ್ಲಿ ಬೆಳೆಗಾರ ಪ್ರತಿನಿಧಿಗಳಿರಬೇಕು.ಈ ನಿಟ್ಟಿನಲ್ಲಿ ನಮ್ಮ ಸರಕಾರವು ಅಖಿಲ ಬಾರತ ಅಡಿಕೆ ಬೆಳೆಗಾರರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

) ಪ್ರಕೃತ ದೇಶದ ನಾನಾ ಭಾಗಗಳಲ್ಲಿ ಅಡಿಕೆಯ ಬಳಕೆ ಯಾವ್ಯಾವ ರೀತಿಯಲ್ಲಾಗುತ್ತಿದೆ, ಇದನ್ನು ಬಳಸುವ ಪಾನ್ ಬೀಡಾ ಅಂಗಡಿಗಳ ಸಂಖ್ಯೆಯೆಷ್ಟು, ಈಗಿರುವ ಮಾರಾಟ ವ್ಯವಸ್ಥೆಯೇನು ಎಂಬಿತ್ಯಾದಿ ವಿಚಾರಗಳನ್ನು ಪರಿಪೂರ್ಣವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಒಂದು ಮಾರುಕಾಟ್ಟೆ ಸಮೀಕ್ಷೆಯನ್ನು ತಕ್ಷಣ ಕೈಗೊಳ್ಳಬೇಕು. ಈ ಸಮೀಕ್ಷಾ ತಂಡದಲ್ಲಿ ಸಹಕಾರಿ ಪ್ರತಿನಿಧಿಗಳು, ಬೆಳೆಗಾರ ಸಂಘದ ಪ್ರತಿನಿಧಿಗಳು ಮತ್ತು ಬೆಳೆಗಾರ ಸಮೂಹದಲ್ಲಿರುವ ತರುಣರನ್ನು ಸೇರಿಸಿಕೊಳ್ಳಬೇಕು. ಈ ರೀತಿಯ ಸಮೀಕ್ಷೆಗಳು ಕಾಲಕಾಲಕ್ಕೆ ವ್ಯವಸ್ಥಿತ ರೀತಿಯಲ್ಲಾಗಲು ಒಂದು ಪ್ರತ್ಯೇಕ ಮಾರುಕಟ್ಟೆ ಸಂಶೋಧನಾ ಪೀಠವನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಲ್ಲೇ ಇಲ್ಲವೆ ಸರಕಾರದಡಿಯಲ್ಲಿ ಬೆಳೆಗಾರ ಪ್ರದೇಶದಲ್ಲೆ ಹೊಂದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಈ ರೀತಿಯದ್ದಾದ ಉತ್ಪಾದನಾ ಮತ್ತು ಮಾರುಕಟ್ಟೆ ಸಮೀಕ್ಷೆಗಳನ್ನು ಕಾಲಕಾಲಕ್ಕೆ ಕೈಗೊಳ್ಳಲು ಅಗತ್ಯವಿರುವ ಸಮೀಕ್ಷಾ ನಿಧಿ (ಹಣಕಾಸಿನ ವ್ಯವಸ್ಥೆಯನ್ನು) ಪ್ರತೇಕವಾಗಿ ತೆಗೆದಿರಿಸಿ ಅದನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೊದಗಿಸಬೇಕು.

ಪ್ರಕೃತ ಧಾರಣೆ ಕುಸಿತದಿಂದಾಗಿ ರೈತರು ಹತಾಶರಾಗಿದ್ದು, ಈ ರೀತಿಯ ಪರಿಸ್ಥಿಯಿಂದ ರೈತರನ್ನು ರಕ್ಷಿಸಲು ಸರಕಾರವು ರೈತರು ಪಡಕೊಂಡಿರುವ ವಿವಿಧ ರೀತಿಯ ಸಾಲಗಳನ್ನು ಮಧ್ಯಮಾವಧಿ ಇಲ್ಲವೆ ದೀರ್ಘಕಾಲೀನವಾಗಿ ಪರಿವರ್ತಿಸಬೇಕು. ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು.

) ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಬೆಳೆಗಾರ ಪ್ರದೇಶಗಳಲ್ಲಿ ಕೈಗೊಂಡ ಸಮೀಕ್ಷೇಗಳಿಗನುಗುಣವಾಗಿ ನಿರ್ಧರಿಸಲ್ಪಟ್ಟ ಅಡಿಕೆ ಬೆಲೆ ಕಿಲೋವೊಂದರ ರೂ. ೧೧೦/-ನ್ನು ಬೆಳೆಗಾರರಿಗೊದಗಿಸಲು ನಮ್ಮ ಸರಕಾರವು ಮಾರುಕಟ್ಟೆಗೆ ಮಧ್ಯಪ್ರವೇಶಿಸಿ ಕನಿಷ್ಠ ರೂ. ೧೧೦/-ರ ಬೆಂಬಲ ಬೆಲೆಯನ್ನು ಘೋಷಿಸಿ ಖರೀದಿಗಿಳಿಯಬೇಕು.

) ಸಹಕಾರಿ ವ್ಯವಸ್ಥೆಯ ಸುಧಾರಣೆಗಾಗಿ ಅಗತ್ಯವಿರುವ ಹಣಕಾಸಿನ ಪೂರೈಕೆಯನ್ನು ಸರಕಾರವು ತಕ್ಷಣ ಒದಗಿಸಿ ಸಂಸ್ಥೆಯನ್ನು ಮತ್ತು ಬೆಳೆಗಾರರನ್ನು ರಕ್ಷಿಸಬೇಕು.

) ವಿದೇಶದಿಂದ ಬರುತ್ತಿರುವ ಅಡಿಕೆಯಿಂದ ಸ್ಥಳಿಯ ಬೆಳೆಗಾರರಿಗಾಗುತ್ತಿರುವ ಹಾನಿಯನ್ನು ಕೇಂದ್ರ ಸರಕಾರಕ್ಕೆ, ರಾಜ್ಯ ಸರಕಾರವು ಮನದಟ್ಟು ಮಾಡಿ, ಅದರ ಪ್ರತ್ಯಕ್ಷ ಹಾಗೂ ಪರೋಕ್ಷ ಒಳಹರಿವನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು.

) ಆಮದಾಗುತ್ತಿರುವ ಅಡಿಕೆಯ ಗುಣಮಟ್ಟವನ್ನು ತಿಳಿಯಲು ಅಡಿಕೆ ಬೆಳೆಗಾರ ಪ್ರದೇಶದಲ್ಲಿರುವ ಸಂಶೋಧನಾ ಕೇಂದ್ರಗಳಿಗೆ ಅಧಿಕಾರವನ್ನೊದಗಿಸಲು ಕೇಂದ್ರಕ್ಕೆ ಒತ್ತಡ ಹೇರಬೇಕು.

) ಒಪ್ಪಂದಗಳ ಪ್ರಕಾರ ಆಮದಾಗುತ್ತಿರುವ ಇಲ್ಲವೆ ರಾಶಿ ಹಾಕಲಾಗುತ್ತಿರುವ (Dumping) ಅಡಿಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅದರ ಮೇಲೆ ಹಾಕಬಹುದಾದ ಗರಿಷ್ಠ ಪ್ರಮಾಣದ ಸುಂಕವನ್ನು ಹೇರಲು ನಮ್ಮ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಅಗತ್ಯ ಒತ್ತಡ ಹೇರಬೇಕು.

) ಅಡಿಕೆಯ ಮಾರಾಟ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಬೆಳೆಗಾರ ಮತ್ತು ಬಳಕೆದಾರರ ನೇರ ಸಂಪರ್ಕವನ್ನು ಹೊಂದಲು ಈಗಿರುವ ಸಹಕಾರಿ ವ್ಯವಸ್ಥೆಯನ್ನು ಸುಧಾರಿಸುವುದರೊಂದಿಗೆ, ಇನ್ನಿತರೆ ಸಹಕಾರಿ ಸಂಘಗಳನ್ನು ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡಲು ಅಗತ್ಯವಿರುವ ವಾತಾವರಣವನ್ನು ರಾಜ್ಯ ಸರಕಾರವು ಸೃಷ್ಟಿ ಮಾಡಿ ಕಾರ್ಯರೂಪಕ್ಕೆ ತರಬೇಕು.

) ಈಗಿರುವ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತಂದು ರಾಷ್ಟ್ರದಾದ್ಯಂತ ಏಕರೂಪದ ತೆರಿಗೆ ಪದ್ಧತಿಯನ್ನು ಹೊಂದಲು ಅಗತ್ಯ ಕ್ರಮ ಕೈಗೊಳ್ಳಬೇಕು.

೧೦) ಅಡಿಕೆ ವ್ಯಾಪಾರದಲ್ಲಿರುವ ಪ್ರಾಮಾಣಿಕ ವ್ಯಾಪಾರಸ್ಥರಿಗೆ ಆಗುತ್ತಿರುವ ಆನಗತ್ಯ ಕಿರುಕುಳ, ತೊಂದರೆಗಳನ್ನು ನಿವಾರಿಸಬೇಕು.

೧೧) ಖಾಸಗಿ ವ್ಯಾಪಾರ ವ್ಯವಸ್ಥೆಯನ್ನು ಸುವ್ಯವಸ್ಥಿತ ರೀತಿಯಲ್ಲಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು.

೧೨) ಅಡಿಕೆಯ ವಿವಿಧ ರೀತಿಯ ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಬೆಳೆಗಾರರನ್ನು ಪ್ರೇರೇಪಿಸಲು ಸರಕಾರವು ಯೋಗ್ಯ ಯೋಜನಾ ಬದ್ಧವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಅಗತ್ಯವಿರುವ ಸಾಲ ಸೌಲಭ್ಯವನ್ನು ಸರಕಾರವೊದಗಿಸಿ ರೈತರನ್ನು ರಕ್ಷಿಸಬೇಕು.

೧೩) ಅಡಿಕೆಯ ವಿವಿಧ ರೀತಿಯ ಬದಲಿ ಉತ್ಪನ್ನಗಳನ್ನು ತಯಾರಿಸಲು ವಿವಿಧ ಸಂಶೋಧನಾ ಕೇಂದ್ರಗಳಿಗೆ ನೆರವನ್ನೊದಗಿಸಲು ಸರಕಾರವು ಕ್ರಮಕೈಗೊಳ್ಳಬೇಕು. ಅಡಿಕೆಯಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬ ಬಗ್ಗೆ ಪುರಾಣಗಳೆ ತಿಳಿಸುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಂಶೋಧನೆಗಳನ್ನು ಸರಕಾರವು ಕೈಗೊಂಡು ಅವನ್ನು ಕಾರ್ಯರೂಪಕ್ಕೆ ತರಬೇಕು.

೧೪) ಈ ಮೊದಲು ಆಹಾರೋತ್ಪನ್ನಗಳನ್ನು ಬೆಳೆಸುತ್ತಿದ್ದ ಪ್ರದೇಶಗಳಲ್ಲಿ ಇದೀಗ ಅಡಿಕೆ ವ್ಯವಸಾಯಕ್ಕೆ ಹೊರಟಿರುವ ಕಾರಣ ಈ ರೀತಿಯ ವ್ಯವಸ್ಥೆಯ ತಡೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.

೧೫) ಅಡಿಕೆಯ ಬೆಳೆಗಾರ ಪ್ರದೇಶದ ಸಹಕಾರಿ ಸಂಸ್ಥೆಗಳು ಮತ್ತು ಬಳಕೆದಾರ ಕೇಂದ್ರಗಳ ಸಹಕಾರಿ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಲು ಅಗತ್ಯವಿರುವ ಕ್ರಮಗಳನ್ನು ಸರಕಾರವು ಕೈಗೊಂಡು ಅಡಿಕೆಯ ಮಾರಾಟವನ್ನು ಸಹಕಾರಿ ವ್ಯವಸ್ಥೆಯಡಿಯಲ್ಲೇ ಕೈಗೊಳ್ಳುವಂತೆ ಮಾಡಬೇಕು. ಹೀಗಾದಲ್ಲಿ ಬೆಳೆಗಾರರಿಗೆ ಯೋಗ್ಯ ಪ್ರತಿಫಲ ಬೆಲೆ ದೊರಕಲವಕಾಶವಾದಂತಾಗಬಹುದು.

೧೬) ವಿದೇಶಗಳಲ್ಲಿರುವ ಅಡಿಕೆ ಬೆಳೆಯ ವಿಸ್ಥೀರ್ಣ, ಉತ್ಪಾದನೆ ಅಲ್ಲಿ ಆಗುತ್ತಿರುವ ಬಳಕೆಯ ರೀತಿ, ಪ್ರಮಾಣ, ಬೆಲೆ ಎಂಬಿತ್ಯಾದಿ ವಿಚಾರಗಳನ್ನು ತಿಳಿಯಲು ರಾಜ್ಯ ಸಕರಾರವು ಒಂದು ತಜ್ಞ ಸಮೀಕ್ಷಾ ತಂಡವನ್ನು ರಚಿಸಿ ಸಮೀಕ್ಷೆನ್ನು ಕೈಗೊಳ್ಳಬೇಕು. ಈ ತಂಡದಲ್ಲಿ ಬೆಳೆಗಾರ ಪ್ರತಿನಿಧಿಗಳಿರಬೇಕು.

೧೭) ವಿದೇಶಿ ಮಾರುಕಟ್ಟೆಗಳಲ್ಲಿ ಅಡಿಕೆಗಿಂದು ಇರುವ ಬೇಡಿಕೆ, ಮುಂದೆ ಬರಬಹುದಾದ ಬೇಡಿಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಗತ್ಯ ಸಮೀಕ್ಷೆಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಕೇಂದ್ರ ಸರಕಾರದ NHB, APEDAಗಳ ಮುಖಾಂತರ ಸಮೀಕ್ಷೆಗಳನ್ನು ಕೈಗೊಳ್ಳಲು ರಾಜ್ಯ ಸರಕಾರವು ಒತ್ತಡ ಹೇರಬೇಕು, ಇಲ್ಲವೇ ರಾಜ್ಯ ಸರಕಾರವೇ ಈ ಸಮೀಕ್ಷೆಗಳನ್ನು ಕೈಗೊಳ್ಳಬೇಕು.

ರಾಷ್ಟ್ರದಲ್ಲಿಂದು ಆಗುತ್ತಿರುವ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಪ್ರಥಮ ಸ್ಥಾನದಲ್ಲಿದ್ದು, ಈ ಬೆಳೆಯಿಂದಾಗಿ ಸರಕಾರಕ್ಕೆ ಅಗಾಧ ಪ್ರಮಾಣದ ಆದಾಯವೂ ಲಭಿಸುತ್ತಿದ್ದು, ಅಡಿಕೆ ವ್ಯವಸಾಯವನ್ನೇ ನಂಬಿ ಅದೆಷ್ಟೋ ಸಣ್ಣ ಮತ್ತು ಮಧ್ಯಮ ರೈತರಿದ್ದು, ಇವರೊಂದಿಗೆ ಹಲವು ಲಕ್ಷ ಬಡ ಕಾರ್ಮಿಕರೂ ಜೀವನ ನಡೆಸುತ್ತಿದ್ದು, ಪ್ರಕೃತ ಈ ಕ್ಷೇತ್ರವೆದುರಿಸುತ್ತಿರುವ ಭೀಕರ ಸಮಸ್ಯೆಗಳಿಂದಾಗಿ ಈ ವರ್ಗದವರು ಸೋಲುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನಗಳು ಕಠಿಣವಾಗಬುದಾಗಿದೆ. ಇಷ್ಟು ಮಾತ್ರವಲ್ಲದೆ ಈ ಕ್ಷೇತ್ರದ ವ್ಯವಹಾರವನ್ನೇ ನಂಬಿ ವಿವಿಧ ರೀತಿಯ ಉದ್ದಿಮೆಗಳು, ಸೇವೆಗಳು ಮತ್ತಿತರ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕ್ಷೇತ್ರದ ಸೋಲಿನಿಂದಾಗಿ ಇವೆಲ್ಲಾ ಇದೀಗ ಕಂಗೆಟ್ಟು, ಇದರಿಂದಾಗಿ ಸರಕಾರಕ್ಕೆ ದೊರಕುತ್ತಿರುವ, ದೊರಕಬಹುದಾದ ಆದಾಯದ ಪ್ರಮಾಣವೂ ಗಣನೀಯವಾಗಿ ಕುಸಿಯಬಹುದಾಗಿದೆ.

ಅಡಿಕೆ ಕ್ಷೇತ್ರದಿಂದಾಗಿ ರಾಜ್ಯವು ಶಿಕ್ಷಣ, ಬ್ಯಾಂಕಿಂಗ್‌ ಮತ್ತಿತರೆ ಅಗತ್ಯ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಈ ತನಕ ಸಾಧಿಸಿದ್ದು, ವಿಶ್ವದಲ್ಲೇ ಇದರಿಂದಾಗಿ ಹೆಸರುಗಳಿಸಿಕೊಳ್ಳವಂತಾಗಿದೆ. ಆದ್ದರಿಂದ ನಮ್ಮ ಘನ ಸರಕಾರವಿಂದು ಈ ಎಲ್ಲಾ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಕೃತ ಈ ಕ್ಷೇತ್ರವೆದುರಿಸುತ್ತಿರುವ ಧಾರಣೆ ಕುಸಿತವೆಂಬ ಸಮಸ್ಯೆಯನ್ನು ತಕ್ಷಣ ಯೊಗ್ಯ ಪರಿಹಾರಗಳೊಂದಿಗೆ ನೀಗಿಸಿ ಮುಂದೆ ಒಂದು ಯೋಜನಾಬದ್ಧವಾದ ವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆಯನ್ನು ಈ ಕ್ಷೇತ್ರಕ್ಕೊದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮೀಕ್ಷಾ ತಂಡವು ಹೆಸರಿಸಿದ ಪರಿಹಾರೋಪಾಯಗಳನ್ನು ಸರಕಾರವು ಪರಿಗಣಿಸಿ ಕಾರ್ಯರೂಪಕ್ಕೆ ಇಳಿಯಬೇಕಾಗಿದೆ.

೧೮) ಅಡಿಕೆ ಬೆಳೆ ಸಾಲಕ್ಕೆ ಮಿಮಾ ಯೋಜನೆ ಅತ್ಯಗತ್ಯ. ಅಡಿಕೆಯ ಉತ್ಪಾದನಾ ವೆಚ್ಚದ ಅಧ್ಯಯನ ನಡೆಸಿ ಕನಿಷ್ಠ ಉತ್ಪಾದಕನಿಗೆ ಸಿಗಬೇಕಾದ ಬೆಲೆಯನ್ನು ಸರಕಾರ ಘೋಷಿಸಿ, ಸಾಲ ಪಡೆದು ಮಾರಾಟ ಬೆಲೆ ಕುಸಿದಾಗ ಬೆಳೆಗಾರನಿಗೆ ಕನಿಷ್ಟ ಬೆಲೆ ಆದಾರದಲ್ಲಿ ಸಾಲಕ್ಕೆ ವಿಮೆ ಸಿಗುವಂತಹ ಒಂದು ವ್ಯವಸ್ಥೆಬೇಕು.

ಸಮೀಕ್ಷಾ ತಂಡದ ಮಾರ್ಗದರ್ಶಕರು:
ಡಾ. ವಿಘ್ನೇಶ್ವರ ವರ್ಮುಡಿ.

ತಂಡದ ಸದಸ್ಯರು:
ಶ್ರೀ ರವೀಂದ್ರ ಬೈಪದವು, ಅಡಿಕೆ ಮಾರುಕಟ್ಟೆ ಸಂಶೋಧಕ, ವಿವೇಕಾನಂದ ಕಾಲೇಜು, ಪುತ್ತೂರು.
ಶ್ರೀ ರಮೇಶ ಪಾಂಡೇಲು, ಕೃಷಿಕ, ಕಬಕ, ಪುತ್ತೂರು.