ಅಡಿಕೆ ಕ್ಷೇತ್ರದ ಸುಧಾರಣೆ: ಡಾ|| ರತಿನಂ ಸಮಿತಿಯ ಶಿಫಾರಸುಗಳುಹೊಸದಿಗಂತ ೨೨೦೬೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ಅಡಿಕೆ ಧಾರಣೆಯ ಕುಸಿತದಿಂದ ತೀವ್ರ ಸಂಕಷ್ಟಕ್ಕೊಳಗಾದ ಕರ್ನಾಟಕ ಮತ್ತು ಕೇರಳದ ಕೃಷಿಕರ ಬವಣೆಯನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲು ಕಳೆದ ನವಂಬರ್ ನಲ್ಲಿ ನಿಯೋಗವೊಂದು ಕೇಂದ್ರ ಸರಕಾರದ ಕೃಷಿ ಸಚಿವರನ್ನು ಬೇಟಿ ಮಾಡಿ ಪರಿಹಾರಗಳಿಗಾಗಿ ಮನವಿ ಸಲ್ಲಿಸಿತ್ತು. ಅಕ್ಕನುಗುಣವಾಗಿ ಕೇಂದ್ರ ಸರಕಾರವು ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರಾದ ಡಾ. ಪಿ. ರತಿನಂ ನೇತ್ರತ್ವದ ಸಮಿತಿಯೊಂದನ್ನು ರಚಿಸಿತ್ತು. ಈ ತಜ್ಞರ ಸಮಿತಿಯಲ್ಲಿ ಕ್ಯಾಂಪ್ಕೋದ ಮಾಜಿ ಅಧ್ಯಕ್ಷರಾದ ಶ್ರೀ ಎಸ್‌. ಅರ್. ರಂಗಮೂರ್ತಿ, ಶ್ರೀ ಕೆ. ರಾಮ ಭಟ್‌, ಗೋವಾದ ಶ್ರೀ ಕಾಳಿದಾಸ ಎ. ಥಮರನ್‌, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ. ಪಿ. ಕೆ. ಎಸ್‌. ಭಟ್‌, ಗೋವಾದ ಶ್ರೀ ರಘುನಥ ಜೋಶಿ ಇವುರುಗಳು ಸದಸ್ಯರಾಗಿದ್ದು, ವಿಟ್ಲದ ಸಿ.ಪಿ.ಸಿ.ಆರ್.ಐನ ಡಾ. ಡಿ. ಬಾಲಸಿಂಹ, ಕರ್ನಾಟಕ ಸರಕಾರದ ತೊಟಗಾರಿಕಾ ಇಲಾಖೆಯ ನಿರ್ದೇಶಕರಾದ ಶ್ರೀ ರಾಮಮೂರ್ತಿ, ಡಾ. ಜಯರಾಮ್‌, ಡಾ. ವಸಂತಕುಮಾರ್ ಇವರುಗಳು ಆಹ್ವಾನಿತ ಸದಸ್ಯರಾಗಿ ಮತ್ತು ಕೇಂದ್ರ ಸರಕಾರದ ಅಡಿಕೆ ಮತ್ತು ಸಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಕೆ. ಶಿವರಾಮನ್‌ಸದಸ್ಯ, ಕಾರ್ಯದರ್ಶಿಗಳಾಗಿದ್ದರು. ಈ ಸಮಿತಿಯು ಫೆಬ್ರವರಿ ೧೫, ೨೦೦೧, ಮಾರ್ಚ್ ೩, ೨೦೦೧ ಮತ್ತು ಮಾರ್ಚ್ ೨೬, ೨೦೦೧ ರಂದು ಮಂಗಳೂರು, ಬೆಂಗಳೂರು ಮತ್ತು ಕೊಚ್ಚಿಗಳಲ್ಲಿ ಸಭೆ ಸೇರಿ ವಿವಿಧ ವಿಚಾರಗಳ ಬಗ್ಗೆ ಮಿವರ್ಶೆಗಳನ್ನು ಕೈಗೊಂಡು ತನ್ನ ಅಂತಿಮ ವರದಿಯನ್ನು ಏಪ್ರಿಲ್‌೨೦೦೧ರಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು.

ಸಮಿತಿಯ ಮೂಲ ಉದ್ದೇಶಗಳು:

() ಅಡಿಕೆಯ ಉತ್ಪಾದನೆ ಮತ್ತು ಬಳಕೆ ಎಂಬ ವಿಚಾರಗಳ ಬಗ್ಗೆ ಅಧ್ಯಯನ ಮತ್ತು ಪ್ರತಿ ಹೆಕ್ಟೇರ್‌ಗೆ ಸಿಗಬಲ್ಲ ಆದಾಯವನ್ನು ಹೆಚ್ಚಿಸುವ ಬಗ್ಗೆ ಪರಿಹಾರಗಳನ್ನು ಸೂಚಿಸುವುದು.
() ಪ್ರಕೃತ ಅಡಿಕೆ ಯಾವ ರೀತಿ ಬಳಕೆಯಾಗುತ್ತಿದೆ ಮತ್ತು ಬದಲಿ ಬಳಕೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು.
() ಪ್ರಕೃತ ಅಡಿಕೆ ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಆಮದಿನ ಪರಿಣಾಮವೇನು, ಅಲ್ಲದೆ ಬೆಳೆಗಾರರಿಗೆ ಹೆಚ್ಚಿನ ಧಾರಣೆಯನ್ನೊದಗಿಸಲು ಮಾರುಕಟ್ಟೆಯ ಅಭಿವೃದ್ಧಿ ಯಾವ ರೀತಿಯಲ್ಲಾಗಬೇಕು.

ಈ ಮೂರು ಉದ್ದೇಶಗಳನ್ನು ಇಟ್ಟುಕೊಂಡು ಸಮಿತಿಯ ಅಧ್ಯಯನವನ್ನು ಕೈಗೊಂಡು ಸಲ್ಲಿಸಿದ ವರದಿಯಲ್ಲಿರುವ ಮುಖ್ಯಾಂಶಗಳು.

() ದೇಶದಲ್ಲಿಂದು ಅಡಿಕೆಯನ್ನು ಹೆಚ್ಚಾಗಿ ಜಗಿಯಲು ಮಾತ್ರ ಉಪಯೋಗಿಸುತ್ತಿದ್ದು, ಇದರಲ್ಲಿರುವ ಮಾದಕತೆ ಇದಕ್ಕೆ ಪ್ರೇರಣೆಯಗಿದೆ. ಅಡಿಕೆ ಒಂದು ಬೆಳೆಯಾಗಿ ಆಹಾರದ ರೂಪದಲ್ಲಾಗಿ ಪೌಷ್ಟಿಕಾಂಶದ ದೃಷ್ಟಿಯಿಂದಾಗಲಿ ಯಾ ವಿದೇಶಿ ಗಳಿಕೆಯಲ್ಲಾಗಲಿ ಯಾವುದೇ ಕೊಡುಗೆಯನ್ನಿಂದು ನೀಡುತ್ತಿಲ್ಲ. ಆದರೂ ಅಡಿಕೆ ಬೆಳೆಯನ್ನೇ ನಂಬಿರುವ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆಯಲ್ಲಿರುವ ಔಷಧೀಯ ಮೌಲ್ಯವನ್ನು ಮತ್ತು ಬದಲಿ ಬಳಕೆಯ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಆಸಕ್ತಿಯನ್ನಿಂದು ತೋರಿಸಲೇಬೇಕಾಗಿದೆ. ಇದರೊಂದಿಗೆ ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅಗತ್ಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕಾಗಿದೆ.
() ವಿದೇಶಿ ರಾಷ್ಟ್ರಗಳಲ್ಲಿ ಉತ್ಪಾದಿಸಲಾಗುತ್ತಿರುವ ಅಡಿಕೆಯ ಬೆಲೆ ಆಂತರಿಕ ಬೆಲೆಗೆ ಹೋಲಿಸಿದಾಗ ಶೇಕಡಾ ೫೫ರಿಂದ ೭೮ರಷ್ಟು ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಅಡಿಕೆಯ ರಫ್ತಿಗಿರುವ ಅವಕಾಶ ಕಡಿಮೆ, ಮುಕ್ತ ಆಮದಿಗಿರುವ ಅವಕಾಶ, ಪ್ರಮಾಣಾತ್ಮಕ ನಿರ್ಬಂಧವಿಲ್ಲದೆ ಇರುವುದು ಇವೆಲ್ಲಾ ಅಡಿಕೆಯ ಆಮದಿಗೆ ಅವಕಾಶ ಕಲ್ಪಿಸುತ್ತಿರುವುದರಿಂದ ದೇಶವಿಂದು ಅಡಿಕೆಯ ಉತ್ಪಾದನೆ ಯಾ ಇಳುವರಿಯನ್ನು ಹೆಚ್ಚಿಸಲು ಶ್ರಮಿಸಬೇಕು. ಅಲ್ಲದೆ ಉತ್ಪಾದನಾ ವೆಚ್ಚವನ್ನು ಇಳಿಸಬೇಕು. ಹೀಗಾದಲ್ಲಿ ಮಾತ್ರ ವಿಶ್ವಮಾರುಕಟ್ಟೆಯಲ್ಲಿ ನಾವು ಸ್ಪರ್ಧಿಸಬಹುದು.

ಸಧ್ಯಕ್ಕೆ ಲಭ್ಯವಿರುವ ಅಂಕಿ-ಅಂಶಗಳ ಅಧಾರದಲ್ಲಿ ಭಾರತದಲ್ಲಿ ಬಳಕೆಯಾಗುತ್ತಿರುವ ಅಡಿಕೆಯ ಪ್ರಮಾಣ ವಾರ್ಷಿಕವಾಗಿ ಶೇಕಡಾ ೩ರ ಪ್ರಮಾಣದಲ್ಲಿ ಏರುತ್ತಿದ್ದು, ಇದರ ಪ್ರಕಾರ ೨೦೨೦ಕ್ಕಾಗುವಾಗ ಅಗತ್ಯವಿರುವ ಅಡಿಕೆಯ ಪ್ರಮಾಣ ಸುಮಾರು ೬,೧೭,೦೦೦ ಟನ್‌ಗಳು. ಈ ನಿಟ್ಟಿನಲ್ಲಿ ಈಗಿರುವ ಇಳುವರಿಯನ್ನು ದ್ವಿಗುಣಗೊಳಿಸಬೇಕು ಮತ್ತು ಇಲ್ಲಿ ಯಾವುದೇ ರೀತಿಯ ವಿಸ್ತರಣೆಯಾಗಬಾರದು. ಈಗ ಒದಗಿರುವ ಬಿಕ್ಕಟ್ಟಿನಿಂದಾಗಿ ಅಡಿಕೆ ಬೆಳೆಗಾರರು ತೊಟದ ವಿಸ್ತರಣೆಯನ್ನು ಕೈ ಬಿಡಲೇಬಾಕಾಗಿದೆ.

ಅಡಿಕೆಯನ್ನು ಜಗಿಯಲು ಮಾತ್ರ ಉಪಹೋಗಿಸುತ್ತಿದ್ದು, ಇದರಲ್ಲಿ ಔಷಧೀಯ ಕಾಂತಿವರ್ಧಕ ಮತ್ತು ಕೈಗಾರಿಕಾ ಮೌಲ್ಯಗಳಿದ್ದು, ಈ ನಿಟ್ಟಿನಲ್ಲಿ ಬಳಕೆಗೆ ಇಷ್ಟರತನಕ ಯಾವುದೇ ಪ್ರಯತ್ನಗಳಾದಂತಿಲ್ಲ. ಆದ್ದರಿಂದ ICARನ ಸಂಸ್ಥೆಗಳು ಮತ್ತು ರಾಜ್ಯದಲ್ಲಿರುವ ಇದೇ ರೀತಿಯ ಸಂಸ್ಥೆಗಳು ಅಡಿಕೆಯ ಇನ್ನಿತರೇ ಉಪಯೋಗಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಂಡು ವಿವಿಧ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನಿಸಬೇಕು.

() ಅಡಿಕೆ ವ್ಯವಸಾಯದ ವಿಸ್ತರಣೆಯನ್ನು ತಡೆಗಟ್ಟಲು ಸಮಿತಿಯ ಒಂದು ಕಾರ್ಯ ಯೋಜನೆಯನ್ನು ಹೆಸರಿಸಿದ್ದು ಇದನ್ನು ತಕ್ಷಣ ಜಾರಿಗೊಳಿಸಲೇಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಯೋಜೆನೆಯಲ್ಲಿ ಹೆಸರಿಸಿದ ಅಂಶಗಳೆಂದರೆ:

() ಆಹಾರೋತ್ಪನ್ನಗಳಿಗಾಗಿ ಮೀಸಲಾಗಿರುವ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಭೂ ಪ್ರದೇಶಗಳಲ್ಲಿ ಇದೀಗ ಈ ಬೆಳೆಗಳ ಬದಲಾಗಿ ಅಡಿಕೆ ವ್ಯವಸಾಯಕ್ಕೆ ಆಸಕ್ತಿ ಕಂಡುಬರುತ್ತಿದ್ದು, ಈ ರೀತಿಯ ಕ್ರಮಗಳಿಗೆ ಯಾವುದೇ ಬೆಂಬಲವನ್ನು ಕೊಡಬಾರದು.
() ಅಡಿಕೆ ಬೀಜ ಮತ್ತು ಗಿಡಗಳನ್ನು ಯಾ ತಳಿಗಳನ್ನು ಸರಕಾರದ ನರ್ಸರಿಗಳಾಗಲಿ, ಸಂಶೋಧನಾ ಕೇಂದ್ರಗಳಾಗಲಿ ಯಾ ಇನ್ನಿತರೇ ಆಧಿಕೃತ ಪೂರೈಕೆದಾರರು ಇದನ್ನು ಈಗಿರುವ ಬೆಳೆಗಾರರಿಗೆ ಪೂರೈಸಬೇಕೆ ಹೊರತು ಹೊಸದಾಗಿ ವ್ಯವಸಾಯನ್ನು ಕೈಗೊಳ್ಳುವವರಿಗಲ್ಲ. ಈ ರೀತಿಯ ಪೂರೈಕೆಯನ್ನು ಮಾಡುವಾಗ ಹೆಚ್ಚು ಇಳುವರಿ ಕೊಡಬಲ್ಲ ತಳಿಗಳನ್ನೇ ಪೂರೈಸಬೇಕು.
() ವಿಸ್ತೀರ್ಣದ ಹೆಚ್ಚಳದಿಂದ ಬೆಳೆಗಾರರಿಗೆ ಮುಂದೆ ಒದಗಬಹುದಾದ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರಗಳು ಬೆಳೆಗಾರರಿಗೆ ಮಾಹಿತಿ ಒದಗಿಸಿ ಮನವರಿಕೆ ಮಾಡಬೇಕು.
() ಈಗಿರುವ ಅಡಿಕೆ ತೋಟಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ಹನಿ ನೀರಾವರಿಗಾಗಿ ಈಗ ಕೊಡುತ್ತಿರುವ ಬೆಂಬಲವನ್ನು ಮುಂದುವರಿಸಬಹುದಾಗಿದೆ.
() ಹೊಸ ಪ್ರದೇಶಗಳಲ್ಲಿ ಅಡಿಕೆ ಬೆಳೆಯನ್ನು ಕೈಗೊಳ್ಳುವುದನ್ನು ತಡೆಯಲು ನಬಾರ್ಡ್, ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ ಇತ್ಯಾದಿಗಳಿಂದ ಈಗ ಲಭ್ಯವಾಗುತ್ತಿರುವ ಹಣಕಾಸಿನ ಬೆಂಬಲವನ್ನು ನಿಲ್ಲಿಸಬಹುದು.

() ವಿವಿಧ ರೀತಿಯ ಮಿಶ್ರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ಅಗತ್ಯ. ಅಡಿಕೆಯೊಂದಿಗೆ ಕೊಕ್ಕೋ, ಕಾಳುಮೆಣಸು, ಬಾಳೆ, ಲವಂಗ, ಜಾಯಿಕಾಯಿ ಇತ್ಯಾದಿಗಳನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬರಲಿರುವ ಪಂಚ ವಾರ್ಷಿಕ ಯೋಜನೆಯಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ.
() ಆರ್ಥಿಕ ಮತ್ತು ಸಂಖ್ಯಾ ವಿಭಾಗವು ಕೊಡುತ್ತಿರುವ ಅಂಕಿ-ಅಂಶ ಮತ್ತು ವ್ಯವಹಾರದಲ್ಲಿ ಕಂಡು ಬರುತ್ತಿರುವ ಅಂಕಿ-ಅಂಶಗಳು ಒಂದಕ್ಕೊಂದು ಸರಿಹೊಂದದೇ ಇದ್ದು, ಇದರಿಂದಾಗಿ ಯೋಜನಾ ವಿಚಾರಗಳು ಸರಿಯಾಗಿ ಹೊರಹೊಮ್ಮುತ್ತಿಲ್ಲ. ಆದ್ಧರಿಂದ ಈ ಬಗ್ಗೆ ಚಿಂತನೆ ಅಗತ್ಯ.
() ಅಡಿಕೆ ಕೊಯ್ಲು, ಅಡಿಕೆ ಒಣಗಿಸಲು ಸಣ್ಣ ರೀತಿಯ ಡ್ರೆಯರ್‌ ಮತ್ತು ವರ್ಗಿಕರಣ ಯಂತ್ರ ಇತ್ಯಾದಿಗಳನ್ನು ಸಂಶೋಧನಾ ಕೇಂದ್ರಗಳು ಅಭಿವೃದ್ಧಿಪಡಿಸಬೇಕು ಇದರಿಂದಾಗಿ ವೆಚ್ಚವನ್ನು ತಗ್ಗಿಸಬಹುದಾಗಿದೆ.
() ಅಡಿಕೆ ಮರ, ಸಿಪ್ಪೆ ಇತ್ಯಾದಿಗಳಿಂದ ವಿವಿಧ ರೀತಿಯ ಉಪ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಿರುವ ತಾಂತ್ರಿಕ ಮತ್ತು ಹಣಕಾಸಿನ ನೆರವನ್ನೊದಗಿಸಿ ಪ್ರೇರಣೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ನಿಗಮವು ಅಗತ್ಯ ನೆರವನ್ನು ನೀಡಬಹುದು.
() ಅಡಿಕೆ ದಾರಣೆಯು ನಿರಂತರವಾಗಿ ಏರಿಳಿತಕ್ಕೊಳಗಾಗುತ್ತಿರುವುದರಿಂದ ಬೆಳೆಗಾರರ ರಕ್ಷಣೆಯ ದೃಷ್ಟಿಯಿಂದ ಬೆಂಬಲ ಬೆಲೆಯನ್ನು ನಿರ್ಧರಿಸಲು ಒಂದು ಉಪಾಯವನ್ನು ಕಂಡುಕೊಳ್ಳಬೇಕು. ಅಡಿಕೆ ಮಾರುಕಟ್ಟೆಯಿಂದು ಒಂದು ಜಟಿಲ ಸಮಸ್ಯೆಯಾಗಿದ್ದು, ಇಲ್ಲಿ ಅಧಿಕ ಸಂಖ್ಯೆಯ ಮಧ್ಯವರ್ತಿಗಳು ಮತ್ತು ಕೆಲವೇ ಸಹಕಾರಿ ಸಂಸ್ಥೆಗಳಿವೆ.
() ಅಡಿಕೆ ಬೆಳೆಗಾರರಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅಡಿಕೆ ಶೇಖರಣೆಗೆ ಅಗತ್ಯವುಳ್ಳ ಗೋದಾಮುಗಳ ಕೊರತೆಯಿರುವುದರಿಂದ, ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ೫ ಕೋಟಿ ರೂಪಾಯಿ ಸಹಾಯವನ್ನು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರರಿಗೆ ನೀಡುವಂತೆ ಸಲಹೆ ಮಾಡಿದೆ. ಪ್ರಕೃತ ರಾಷ್ಟ್ರೀಯ ತೋಟಗಾರಿಕಾ ನಿಗಮದಲ್ಲಿ ಈ ರೀತಿಯ ವ್ಯವಸ್ಥೆ ತೋಟಗಾರಿಕಾ ಬೆಳೆಗಳಿಗಾಗಿ ಇದ್ದು, ಇದನ್ನು ಅಡಿಕೆಗೂ ವಿಸ್ತರಿಸುವಂತೆ ಕೇಳಿಕೊಂಡಿದೆ.
(೧೦) ಅಡಿಕೆ ಮಾರಾಟ ವ್ಯವಸ್ಥೆಯಲ್ಲಿ ಕ್ಯಾಂಪ್ಕೋ ಅಗಾಧ ಅನುಭವವಿದ್ದು, ಇದೊಂದು ಸಂಘಟಿತ ಸಹಕಾರಿಯಾಗಿರುವುದರಿಂದ, ಈ ಸಂಸ್ಥೆ ಇನ್ನು ಮುಂದೆ ಮಾರುಕಟ್ಟೆ ಅಭಿವೃದ್ಧಿಗಾಗಿ ಬೇರೆ ಬೇರೆ ರಾಜ್ಯಗಳಲ್ಲಿ ತನ್ನ ವ್ಯವಹಾರಗಳನ್ನು ವಿಸ್ತರಿಸಬೇಕಾದ ಅಗತ್ಯವಿರುತ್ತದೆ.
(೧೧) ಅಡಿಕೆಯು ಒಂದು ಮೂಲ ಯಾ ಪ್ರಾಥಮಿಕ ಕೃಷಿಯುತ್ಪನ್ನ, ಆದ್ದರಿಂದ ಇದಕ್ಕೆ ಯಾವುದೇ ತೆರಿಗೆಯನ್ನು ಹಾಕಬಾರದು. ಸಮಿತಿಯ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ತೆರಿಗೆಗಳ ಬಗ್ಗೆ ವಿಮರ್ಶಿಸಿದ್ದು, ಈ ಎಲ್ಲಾ ತೆರಿಗೆಗಳನ್ನು ಸರಕಾರಗಳು ಕೈಬಿಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
(೧೨) ಕ್ಯಾಂಪ್ಕೋ ಅಡಿಕೆಯ ಮಾರುಕಟ್ಟೆ ವಿಚಾರದಲ್ಲಿ ಒಂದು ಅಗ್ರ ಸಂಸ್ಥೆಯಾದ್ದರಿಂದ, ಅದಿಂದು ಅಡಿಕೆಯ ಕೈಗಾರಿಕಾ ಮತ್ತಿತರೇ ಬಳಕೆಗಳ ಬಗ್ಗೆ ಅಗತ್ಯ ಸಮೀಕ್ಷೆಗಳನ್ನು ಕೈಗೊಳ್ಳಬೇಕು.
(೧೩) ಅಡಿಕೆ ಬೆಳೆಗಾರರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಆಮದಾಗುತ್ತಿರುವ ಅಡಿಕೆಯ ಮೇಲಿನ ಸುಂಕವನ್ನು ಶೇಕಡಾ ೩೫ರಿಂದ ಶೇಕಡಾ ೧೦೦ಕ್ಕೆ ಏರಿಸಿದ್ದರೂ, ಅಡಿಕೆಯಿಂದು ಒಣಹಣ್ಣಿನ ವರ್ಗದಡಿ ಒಳಬರುತ್ತಿವೆಯೆಂಬ ವಿಚಾರಗಳು ಕಂಡು ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲೇಬೇಕು.

ಡಾ. ರತಿನಂ ಸಮಿತಿಯ ವರದಿಯು ಅಡಿಕೆಯ ಧಾರಣೆ ಏರಿಳಿತಕ್ಕೆ ಈಗಿರುವ ಮಾರುಕಟ್ಟೆ ವ್ಯವಸ್ಥೆಯಲ್ಲಿರುವ ಲೋಪದೋಷಗಳೇ ಕಾರಣ ಹೊರತು, ಆಮದಾಗಲಿ, ಮುಕ್ತವಾತವರಣವಾಗಲೀ ಕಾರಣವಲ್ಲವೆಂಬುದನ್ನು ಅಂಕಿ-ಅಂಶಗಳ ಆಧಾರದಲ್ಲಿ ತಿಳಿಸಿದ್ದು, ಈ ನಿಟ್ಟಿನಲ್ಲಿ ಈಗಿರುವ ಅಧಿಕೃತ ಮಾರುಕಟ್ಟೆ ವ್ಯವಸ್ತೆಯನ್ನು ಬಲಪಡಿಸಬೇಕೆಂದು ಹೆಸರಿಸಿದೆ, ತನ್ನ ವರದಿಯಲ್ಲಿ ಸದಸ್ಯರುಗಳು ಮಂಡಿಸಿದ್ದ ಅಭಿಪ್ರಾಯಗಳನ್ನೆಲ್ಲಾ ಉಲ್ಲೇಖಿಸಿದ್ದು, ಇದರೊಂದಿಗೆ ಪ್ರಕೃತ ಈ ಕ್ಷೇತ್ರದಲ್ಲೇನಾಗುತ್ತಿದೆ ಎಂಬ ಬಗ್ಗೆ ಮಾಹಿತಿಗಳನ್ನು ಒದಗಿಸಿದೆ. ಆದರೆ ಈ ವರದಿಯಲ್ಲಿ ಹೆಸರಿಸಲ್ಪಟ್ಟ ಹಲವು ಪರಿಹಾರೋಪಾಯಗಳನ್ನು ಯಾವ ರಿತಿ ಕಾರ್ಯರೂಪಕ್ಕೆ ಇಳಿಸಬೇಕು, ಇದಕ್ಕೆ ಅಗತ್ಯವಿರುವ ಹಣಕಾಸಿನ ನೆರವು ಎಲ್ಲಿಂದ, ಯಾರಿಂದ ಎಂಬ ಬಗ್ಗೆ ಸಮಿತಿಯ ವರದಿಯು ಮಾಹಿತಿಗಳನ್ನು ಸ್ಪಷ್ಟಪಡಿಸಿಲ್ಲ. ಅಲ್ಲದೆ ಪ್ರಕೃತ ಅಡಿಕೆ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರವೇನೆಂಬುದನ್ನು ಇಲ್ಲಿ ನಮೂದಿಸಿಲ್ಲ.

ಅಡಿಕೆ ಮಾರುಕಟ್ಟೆ ವಿಚಾರದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಕೈಗೊಂಡ ಸಮೀಕ್ಷಾ ವರದಿಯಲ್ಲಿ ಹೆಸರಿಸಲ್ಪಟ್ಟ ಪರಿಹಾರೋಪಾಯಗಳಲ್ಲಿ ಹೆಚ್ಚಿನವು ಡಾ. ರತಿನಂ ವರದಿಯಲ್ಲೂ ಇದ್ದು, ಈ ನಿಟ್ಟಿನಲ್ಲಿ ಬೆಲೆಗಾರರ ಸಂಘದ ಪ್ರಯತ್ನಕ್ಕೆ ಇಂಬು ದೊರೆತಂತಾಗಿದೆ.

ಅಡಿಕೆ ಬೆಳೆಗಾರರಿನ್ನೂ ಸಂಕಷ್ಟದಿಂದ ಪಾರಾಗಿಲ್ಲ. ಈ ಸಮಯದಲ್ಲಿ ಬಂದ ಡಾ. ರತಿನಂ ವರದಿಯು ಹಲವು ಪರಿಹಾರಗಳನ್ನು ಸೂಚಿಸಿದ್ದರೂ, ಇವೆಲ್ಲಾ ಕಾರ್ಯ ರೂಪಕ್ಕಿಳಿಯುವುದು ಯಾವಾಗ ಎಂಬ ಯಕ್ಷಪ್ರಶ್ನೆ ನಮ್ಮೆದುರಿಗೆ ಇದೆ. ಇದಕ್ಕೆ ಕಾರಣ ಈ ಮೊದಲು ಎಪ್ಪತ್ತರ ದಶಕದಲ್ಲಿ ಅಡಿಕೆ ಬೆಳೆಗಾರರ ರಕ್ಷಣೆಗಾಗಿ ಪರಿಹಾರಗಳನ್ನು ಪೌಲೋಸ್‌ ಸಮಿತಿಯು ಸೂಚಿಸಿದ್ದರೂ, ಅವುಗಳ ಬಹುಪಾಲು ಇನ್ನೂ ರಾರ್ಯರೂಪಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಕ್ಷಣ ಸ್ಪಂದಿಸಬೇಕಾದ ಅಗತ್ಯವಿದೆ. ಹೀಗಾದಲ್ಲಿ ಮಾತ್ರ ಅಡಿಕೆ ಕ್ಷೇತ್ರ ನಿಟ್ಟುಸಿರನ್ನು ಬಿಡಬಹುದು. ಅದಕ್ಕಾಗಿ ಬೆಳೆಗಾರರ ಒತ್ತಡ, ಜನಪ್ರತಿನಿಧಿಗಳ ಪ್ರಯತ್ನ ಮತ್ತು ಮಾಧ್ಯಮಗಳ ಬೆಂಬಲ ಅತ್ಯಗತ್ಯ.

ಬೆಲೆಗಾರರಿಗೆ ಎಚ್ಚರಿಕೆಯ ಕರೆ ಘಂಟೆ:

ಒಟ್ಟಾರೆಯಾಗಿ ಡಾ. ರತಿನಂ ಸಮಿತಿಯು ಅಡಿಕೆ ಕ್ಷೇತ್ರಕ್ಕೊಂದು ಎಚ್ಚರಿಕೆಯನ್ನು ನೀಡಿದ್ದು ಇದು ಈ ಬೆಳೆಯ ವಿಸ್ತರಣೆಯ ವಿಚಾರದಲ್ಲಾಗಿದೆ. ಇದರೊಂದಿಗೆ ವರದಿಯು ಅಡಿಕೆಯ ಬಳಕೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ಈ ಮೊದಲು ನಡೆದ ಅಧ್ಯಯನಗಳ ಬಗ್ಗೆ ವಿಫುಲ ಮಾಹಿತಿ ಒದಗಿಸಿದ್ದು, ಇದು ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಬಹುದಾಗಿದೆ. ಸಮಿತಿಯು ಇಟ್ಟುಕೊಂಡಿದ್ದ ಮೂಲ ಉದ್ದೇಶಗಳಾದ ಉತ್ಪಾದನೆ, ಬಳಕೆ, ಬದಲಿ ಬಳಕೆಗಳ ವಿಚಾರ ಮತ್ತು ಈಗ ಚಾಲ್ತಿಯಲ್ಲಿರುವ ಮರುಕಟ್ಟೆಯ ರೀತಿ ನೀತಿ ಎಂಬಿತ್ಯಾದಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನೂ ತಿಳಿಸದೇ ಇರುವುದು ನಿಜಕ್ಕೂ ಆಘಾತಕಾರಿ ವಿಚಾರ. ಅಡಿಕೆಯ ಬಳಕೆಯಿಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪ್ರಕಟಗೊಂಡ ಮಾಹಿತಿಗಳನ್ನು ವಿವರವಾಗಿ ನೀಡಿದ ವರದಿಯು ಅಡಿಕೆಯ ಉತ್ಪಾದನಾ ಕ್ಷೇತ್ರದ ಮತ್ತು ಮಾರುಕಟ್ಟೆಯ ವಿಚಾರಗಳ ಬಗ್ಗೆ ಪ್ರಕಟಗೊಂಡ ಮಾಹಿತಿಗಳನ್ನೇನೂ ನೀಡದೆ ಇರುವುದರಿಂದ ಇದೊಂದು ಅಪರಿಪೂರ್ಣ ಮಾಹಿತಿಯೆನ್ನಲೂಬಹುದು.

ಅಡಿಕೆ ಕ್ಷೇತ್ರಕ್ಕಿಂದು ಅಗತ್ಯವಿರುವುದು ಮಾರುಕಟ್ಟೆಯ ಸುಧಾರಣೆ. ಈ ನಿಟ್ಟಿನಲ್ಲಿ ನಮ್ಮ ಸರಕಾರವಿಂದು ಈ ವರದಿಯಲ್ಲಿ ಹೆಸರಿಸಿದ ಪರಿಹಾರೋಪಾಯಗಳಿಂದ ಯಾವ ರೀತಿಯಲ್ಲಿ ವ್ಯವಸ್ಥೆಯನ್ನು ಬಲಪಡಿಸಬಹುದು ಮತ್ತು ಬೆಳೆಗಾರರನ್ನು ರಕ್ಷಿಸಬಹುದು ಎಂಬುದನ್ನು ಕಾದು ನೋಡಬೇಕಷ್ಟೇ. ಏನಿದ್ದರೂ ಅಡಿಕೆ ಕ್ಷೇತ್ರವಿಂದು ತನ್ನ ಅಭಿವೃದ್ಧಿ ತನ್ನಿಂದಲೇ ಎಂದು ಅರಿತು ಮುಂದುವರಿಯುವುದು ಉತ್ತಮ ಮತ್ತು ಆರೋಗ್ಯಕರ.