ಅಡಿಕೆ ಬೆಲೆಯಿಳಿಕೆ ಇತಿಹಾಸದ ಪುನರಾವರ್ತನೆಯೇ? – ಹೊಸದಿಗಂತ ೨೩೦೨೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ದೇಶದಾದ್ಯಂತ ವಿವಿಧ ರೀತಿಯ ಕೃಷಿಯುತ್ಪನ್ನಗಳ ಬೆಳೆಯು ನಿರಂತರವಾಗಿ ಕುಸಿಯುತ್ತಿದ್ದು, ಕೃಷಿಕ ಸಮುದಾಯವಿಂದು ದಿಕ್ಕೆಟ್ಟಿದೆ. ಈ ರೀತಿಯ ಪರಿಸ್ಥಿತಿ ಅಡಿಕೆ ಬೆಳೆಗಾರರಿಗೂ ಬಂದಿದ್ದು ಪ್ರಕೃತ ಒಂದೆಡೆ ಧಾರಣೆ ಇಳಿಕೆ, ಇನ್ನೊಂದೆಡೆ ವಿದ್ಯುತ್‌ನ ಅಡಚಣೆ, ನೀರಿನ ಆಭಾವ ಇತ್ಯಾದಿಗಳಿಂದ ಸೊರಗಿ ಹೋಗಿದ್ದಾರೆ. ಬೆಲೆಯೇರಿಕೆಯೆಂಬ ಆಶಾಕಿರಣ ಅವರದ್ದಿನ್ನೂ ಆಗಿಲ್ಲ. ನಿಯೋಗ, ಸಮಾವೇಶ ಮುಂತಾದವುಗಳು ಪರಿಣಾಮಕಾರಿಯಾಗಲಿಲ್ಲ. ಮುಂದೇನು ಎಂಬ ಬಗ್ಗೆ ಚಿಂತಿಸಲು ಅಶಕ್ತರಾದ ಪರಿಸ್ಥಿತಿ. ಆದರೆ ಈ ರೀತಿಯ ಪರಿಸ್ಥಿತಿ ಈ ಕ್ಷೇತ್ರಕ್ಕೆ ಹೊಸತೇನೂ ಅಲ್ಲ. ಇತಿಹಾಸದ ಪುಟಗಳನ್ನು ತಿರುಗಿಸಿದಾಗ ಇದೇ ತೆರನಾದ ಸ್ಥಿತಿ ಹಿಂದೊಮ್ಮೆ ಬಂದಿತ್ತು ಎಂಬುದನ್ನು ನಾವು ಕಂಡುಕೊಳ್ಳಬಹುದು.

ಇತಿಹಾಸದ ಮತ್ತು ಈಗಿನ ಸ್ಥಿತಿಯ ಬಗ್ಗೆ ತುಲನಾತ್ಮಕ ಅಧ್ಯಯನ

. ಧಾರಣೆ ಏರಿಳಿತ:
೧೯೭೧ರ ಮಾರ್ಚ್ ತಿಂಗಳಲ್ಲಿ ಮಂಗಳೂರು ಮಾರುಕಟ್ಟೆಯಲಿ ಚಾಲಿ ಅಡಿಕೆಗಿದ್ದ ಸರಾಸರಿ ಬೆಲೆ ಕ್ವಿಂಟಾಲ್ ಒಂದರ ರೂಪಾಯಿ ೬೮೪, ಆ ಬೆಲೆಯು ಆ ಕಾಲದಲ್ಲಿ ಕಂಡುಬಂದ ಅತ್ಯಧಿಕ ಬೆಲೆಯಾಗಿದ್ದು ಕ್ರಮೇಣ ಅದು ಇಳಿಮುಖವಾಗುತ್ತಾ ಹೋಗಿ ೧೯೭೨ರ ದಶಂಬರಕ್ಕಾಗುವಾಗ ರೂಪಾಯಿ ೨೫೮ಕ್ಕಿಳಿಯಿತು, ಕ್ರಮೇಣ ಏರಿಕೆ ಪ್ರವೃತ್ತಿಯನ್ನು ತೋರಿಸಿದ್ದರೂ, ಮೊದಲಿನ ಸ್ಥಿತಿಗೆ ಬರಲು ಹೆಚ್ಚು ಕಡಿಮೆ ಎರಡು ವರ್ಷಗಳೇ ತಗಲಿತ್ತು. ಮತ್ತು ೧೯೭೩ರ ಮೇ ಗಾಗುವಾಗ ಅದು ರೂಪಾಯಿ ೭೩೮ರ ಮಟ್ಟಕ್ಕೇರಿತು. ಇದೇ ರೀತಿಯ ಪರಿಸ್ಥಿಯು ೧೯೯೯ರ ಮಾರ್ಚ್‌ನಲ್ಲೂ ಕಂಡು ಬಂದಿತ್ತು. ಆಗ ಧಾರಣೆಯು ಕ್ವಿಂಟಾಲ್ ಒಂದರ ಸರಾಸರಿ ರೂಪಾಯಿ ೧೫,೫೦೦ಕ್ಕೇರಿ ಕ್ರಮೇಣ ಅಕ್ಬೋಬರ್ ೧೯೯೯ಕ್ಕಾಗುವಾಗ ಸರಾಸರಿ ರೂಪಾಯಿ ೧೭,೧೬೦ಕ್ಕೆ ತಲಪಿತ್ತು. ಬಳಿಕ ಇಳಿಮುಖವಾಗುತ್ತಾ ಹೋಗಿ ಒಕ್ಬೋಬರ್ ೨೦೦೦ದಲ್ಲಿ ಸರಾಸರಿ ರೂಪಾಯಿ ೬೭೬೦ ಆಯಿತು. ಮತ್ತು ಜನವರಿ ೨೦೦೧ರಲ್ಲಿ ಸರಾಸರಿ ರೂಪಾಯಿ ೫೮೦೨ರ ಮಟ್ಟಕಿಳಿಯಿತು. ಒಟ್ಟಾರೆಯಾಗಿ ಈ ಎರಡೂ ಅವಧಿಯಲ್ಲಿ ಏರು ಪ್ರವೃತ್ತಿಯ ಸಮಯ ಹೆಚ್ಚು ಕಡಿಮೆ ೧೨ರಿಂದ ೧೪ ತಿಂಗಳುಗಳು ಮತ್ತು ೧೯೭೧–೧೯೭೨ರಲ್ಲಿ ಕಂಡ ಇಳಿಕೆಯ ಪ್ರವೃತ್ತಿ ಹೆಚ್ಚು ಕಡಿಮೆ ೧೦ರಿಂದ ೧೨ ತಿಂಗಳಿಗಳು. ಪ್ರಕೃತ ಈ ಪ್ರವೃತ್ತಿ ಈಗಾಗಲೇ ಆರು ತಿಂಗಳುಗಳನ್ನು ಪೂರೈಸಿದ್ದು, ಇದಿನ್ನೆಷ್ಟು ಸಮಯವಿರಬಹುದು ಎಂಬುದನ್ನು ಕಾಲವೇ ನಿರ್ಧರಿಸಬಲ್ಲುದು.

() ಆಧ್ಯಯನ ಸಮಿತಿಯ ವರದಿಯ ಮುಖ್ಯಾಂಶಗಳು:
೧೯೭೧–೭೨ರಲ್ಲಿ ಅಡಿಕೆ ಧಾರಣೆಯು ಕುಸಿತಕ್ಕೊಳಗಾದಗ ಆಗಿನ ಮೈಸೂರು ಸರಕಾರವು ಕ್ಷೇತ್ರದ ಅಧ್ಯಯನಕ್ಕಾಗಿ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಟಿ. ಟಿ. ಪೌಲೋಸ್ ನೇತೃತ್ವದ ಒಂದು ಸಮಿತಿಯನ್ನು ರಚಿಸಿತ್ತು. ಆ ಸಮಿತಿಯ ಧಾರಣೆ ಕುಸಿತಕ್ಕೆ ಕಾರಣಗಳನ್ನು ಕಂಡುಕೊಳ್ಳಲು, ಉತ್ಪಾದಾನಾ ವೆಚ್ಚ ಮತ್ತು ಬೆಳೆಗಾರರಿಗೆ ಲಾಭವಾಗಬಲ್ಲ ಮಾರಾಟ ಬೆಲೆಯನ್ನು ನಿರ್ಧರಿಸಲು ಅಧ್ಯಯನವನ್ನು ಕೈಗೊಂಡಿತ್ತು. ಪ್ರಕೃತ ಒದಗಿ ಬಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳಲು ಸರಕಾರವಿನ್ನೂ ಕ್ರಮಕೈಗೊಳ್ಳದಿದ್ದು, ಹೀಗಿದ್ದರೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಡಾ. ಪಿ. ಕೆ. ಯಸ್ ಭಟ್ಟರ ನೇತೃತ್ವದಲ್ಲಿ ಬಳಕೆದಾರ ಕೇಂದ್ರಗಳ ಅಧ್ಯಯನವನ್ನು ಕೈಗೊಂಡು ಧಾರಣೆ ಕುಸಿತಕ್ಕೆ ಹಲವು ಕಾರಣಗಳನ್ನು ಸೂಚಿಸಿ ಪರಿಹಾರೋಪಾಯಗಳನ್ನು ಹೆಸರಿಸಿತ್ತು. ಈ ಎರಡು ಅಧ್ಯಯನ ತಂಡಗಳು ಧಾರಣೆ ಕುಸಿತಕ್ಕೊಳಪಟ್ಟಾಗ ಬೆಳೆಗಾರ ಪ್ರದೇಶ ಮತ್ತು ಬಳಕೆದಾರ ಪ್ರದೇಶಗಳ ಅಧ್ಯಯನವನ್ನು ಕೈಗೊಂಡವು.

ಎರಡೂ ಅಧ್ಯಯನ ತಂಡಗಳು ತಮ್ಮ ವರದಿಗಳಲ್ಲಿ ಧಾರಣೆ ಕುಸಿತಕ್ಕೆ ಕಾರಣವಾಗಬಲ್ಲ ವಿಚಾರಗಳನ್ನು ವಿಮರ್ಶಿಸಿದ್ದು ಅವುಗಳು ಹೆಚ್ಚು ಕಡಿಮೆ ಒಂದೆ ರೀತಿಯದ್ದಾಗಿವೆ. ಅವುಗಳೆಂದರೆ:

() ಹೆಚ್ಚುತ್ತಿರುವ ಉತ್ಪಾದನೆ:
ಪೌಲೋಸ್ ಸಮಿತಿಯು ಆಂತರಿಕವಾಗಿ ಅಡಿಕೆಯ ಉತ್ಪಾದನೆಯು ಹೆಚ್ಚುತ್ತಿದೆಯೆಂದು ಹೆಸರಿಸಿದ್ದರೂ, ವ್ಯಾಪಾರಿಗಳಾರೂ ಅಡಿಕೆಯ ಶೇಖರಣೆ ಮಾಡದೆ ಇರುವುದರಿಂದ ಮತ್ತು ಪೂರೈಕೆಗೆ ಸರಿಯಾದ ಬೇಡಿಕೆಯೂ ಇದ್ದುದರಿಂದ ಹೆಚ್ಚುತ್ತಿರುವ ಉತ್ಪಾದನೆ ಬೆಲೆಯಿಳಿಕೆಗೆ ಕಾರಣವಾಗಲಾರದೆಂಬ ಆಭಿಪ್ರಾಯ ವ್ಯಕ್ತಪಡಿಸಿ ದೇಶವು ಅಡಿಕೆಯ ಉತ್ಪಾದನೆಯಲ್ಲಿ ಸ್ವಾವಲಂಬಿಯಾದ್ದರಿಂದ, ಇನ್ನಷ್ಟು ವಿಸ್ತರಣೆಗೆ ಕಡಿವಾಣ ಹಾಕಬೇಕೆಂದು ಹೇಳಿತ್ತು. ಇದೇ ರೀತಿಯ ಅಭಿಪ್ರಯವನ್ನು ಡಾ. ಪಿ. ಕೆ ಯಸ್. ಭಟ್ಟರ ಅಧ್ಯಯನ ತಂಡವೂ ತಿಳಿಸಿದೆ.

() ಆಮದಿನ ಪ್ರಭಾವ:
೧೯೭೧–೭೨ರಲ್ಲಿ ಆಗಿನ ಕೇಂದ್ರ ಸರಕಾರವು ಸಣ್ಣ ಪ್ರಮಾಣದ ಅಡಿಕೆ ಆಮದಿಗಾಗಿ ರಾಜ್ಯ ವ್ಯಾಪಾರಿ ನಿಗಮಕ್ಕೆ ಪರವಾನಗಿಯನ್ನು ನೀಡಿದ್ದ ಕಾರಣ ಅಡಿಕೆ ಧಾರಣೆ ಕುಸಿತಕ್ಕೊಳಗಾಯಿತು ಎಂಬ ವದಂತಿ ಹಬ್ಬಿ, ಈ ಬಗ್ಗೆ ಪೌಲೋಸ್ ಸಮಿತಿಯು ಅಧ್ಯಯನ ನಡೆಸಿದಾಗ ಕಂಡುಕೊಂಡ ವಿಚಾರವೆಂದರೆ ಕೆಲವೇ ನೂರು ಟನ್ ಗಳಷ್ಟು ಅಡಿಕೆಯ ಆಮದಾಗಿದ್ದು, ಅದರೊಂದಿಗೆ ಸಣ್ಣ ಪ್ರಮಾಣದ ಪರೋಕ್ಷ ಒಳಹರಿವೂ ಆಗಿತ್ತೆಂದು, ಇದರಿಂದಾಗಿ ಆಂತರಿಕವಾಗಿ ಧಾರಣೆ ಕುಸಿಯಲಾರದೆಂಬುದನ್ನು ತಿಳಿ ಹೇಳಿತು. ಸಮಿತಿಯು ಹೆಸರಿಸಿದಂತೆ ಆಮದಿನ ನಿಜ ಪ್ರಮಾಣದ ಬಗ್ಗೆ ಬೆಳೆಗಾರರಿಗಾಗಲಿ, ವ್ಯಾಪಾರಿಗಳಿಗಾಗಲಿ ಮಾಹಿತಿ ಅಭಾವವಿದ್ದುದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿತ್ತು. ಇದೀಗ W.T.O. ಮತ್ತು SAARC ಒಪ್ಪಂದಗಳಿಗನುಗುಣವಾಗಿ ಅಡಿಕೆಯನ್ನು ಮಾರ್ಚ್ ೨೦೦೧ರ ತನಕ ನಿರ್ದಿಷ್ಟ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬಹುದಾಗಿದ್ದು, ಸರಕಾರದ ಅಂಕಿ-ಅಂಶಗಳ ಪ್ರಕಾರ ಈ ಪ್ರಮಾಣವು ಸುಮಾರು ಹತ್ತರಿಂದ ಇಪ್ಪತ್ತು ಸಾವಿರ ಟನ್‌ಗಳಷ್ಟು ಈಗಿರುವ ಅಂತರಿಕ ಬಳಕೆಯ ಪ್ರಮಾಣಕ್ಕೆ ಆಮದಿನ ಪ್ರಮಾಣವನ್ನು ಹೋಲಿಸಿದಾಗ ಇದೀಗ ಕಂಡು ಬಂದ ಬೆಲೆಯಿಳಿಕೆಗೆ ಇದು ಕಾರಣವಾಗಲಾರದು.

() ರಫ್ತಿನ ಬಗ್ಗೆ ಆಸಕ್ತಿ ತೋರಿಸದೆ ಇದ್ದುದು:
ಪೌಲೋಸ್ ಸಮಿತಿಯ ವರದಿಯ ಪ್ರಕಾರ ಆ ಕಾಲದಲ್ಲಿ ಆಗುತ್ತಿದ್ದ ರಫ್ತಿನ ಪ್ರಮಾಣ ಸರಾಸರಿ ೨೫೦ಟನ್‌ಗಳು ಮತ್ತು ಅದು ಹೆಚ್ಚು ಕಡಿಮೆ ಸ್ಥಿರವಾಗಿಯೇ ಇತ್ತು. ಪ್ರಕೃತ ಆಗುತ್ತಿರುವ ರಪ್ತು ಸುಮಾರು ೩೦೦ರಿಂದ ೩೫೦ಟನ್ ಗಳಷ್ಟು, ಇದು ಕೂಡ ಹೆಚ್ಚು ಕಡಿಮೆ ಸ್ಥಿರವಾಗಿಯೇ ಇದ್ದು, ಆಂತರಿಕವಾಗಿ ಕಂಡು ಬಂದ ಉತ್ಪಾದನಾ ಹೆಚ್ಚಳಕ್ಕೆ ಹೋಲಿಸಿದಾಗ ಇದು ಅತ್ಯಲ್ಪ. ಆದ್ದರಿಂದ ರಪ್ತು ಆಂತರಿಕ ಬೆಲೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದ ಸ್ಥಿತಿಯದ್ದಾಗಿದೆ.

() ಬಳಕೆಯ ಪ್ರಮಾಣದ ಕುಸಿತ:
ಪೌಲೋಸ್ ವರದಿಯ ಪ್ರಕಾರ ಮಧ್ಯ ಮತ್ತು ಉತ್ತರ ಭಾರತದಲ್ಲಿ ಕಂಡು ಬಂದ ಬರ, ಕೊಂಡುಕೊಳ್ಳುವ ಶಕ್ತಿಯ ಕುಸಿತ ಅಡಿಕೆಯ ಧಾರಣೆಯಿಳಿಕೆಗೆ ಒಂದೆಡೆ ಕಾರಣವಾದರೆ, ಇನ್ನೊಂದೆಡೆಯಲ್ಲಿ ಆಗಿನ ಮದ್ರಾಸು ಸರಕಾರವು ಶೇಂದಿ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕಿದ್ದರಿಂದ ಅಡಿಕೆಯ ಬಳಕೆ ಕುಸಿತಕ್ಕೊಳಗಾಗಿತ್ತು ಎಂಬುದು, ಹೀಗಿದ್ದರು ಆಗ ಕಂಡು ಬಂದ ಬೆಲೆಯಿಳಿಕೆ ಇವು ಕಾರಣವಲ್ಲ ಎಂದು ಹೆಸರಿಸಿತ್ತು. ಪ್ರಕೃತ ಗುಟ್ಕಾ ಮತ್ತಿತರೆ ಮೌಲ್ಯವರ್ದಿತ ಉತ್ಪನ್ನಗಳ ಬಳಕೆ ಉತ್ತರದ ರಾಜ್ಯದಲ್ಲಿ ಹೆಚ್ಚಿದ್ದರೂ ಬೇರೆ ಬೇರೆ ರಾಜ್ಯಗಳಲಿ ಬರ ಭೂಕಂಪವಾಗಿದ್ದರೂ, ಈಗ ಕಂಡು ಬಂದ ಏರಿಳಿತಕ್ಕೆ ಇವು ಕಾರಣವಾಗಲಾರದು.

() ಬದಲಿ ಬಳಕೆಯ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು:
ಪೌಲೋಸ್ ಸಮಿತಿಯ ವರದಿಯು ಹೆಸರಿಸಿದ ಪ್ರಕಾರ ಅಡಿಕೆಯ ಇನ್ನಿತರ ಉಪಯೋಗಗಳ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಏರಿಳಿಕೆಗೆ ಸಹಾಯವಾಗಬಹುದಾದರೂ ದಿಢೀರನೆ ಕುಸಿಯಲು ಇದು ಕಾರಣವಲ್ಲ. ಇದೇ ಸ್ಥಿತಿ ಈಗಲೂ ಇದ್ದು, ಅಡಿಕೆಯ ಇನ್ನಿತರ ಬಳಕೆಯಿನ್ನೂ ಪರಿಪೂರ್ಣವಾಗಿ ಆಗಿಲ್ಲ.

() ಮಾರುಕಟ್ಟೆಯಲ್ಲಿನ ಊಹಾಪೋಹಗಳು:
೧೯೭೦ರ ಬೀಸಿದ ಚಳಿಗಾಳಿಯಿಂದ ಮೈಸೂರು ರಾಜ್ಯದ ಅಡಿಕೆ ತೋಟಗಳಿಗೆ ಹಾನಿಯಾಗಿ, ಉತ್ಪಾದನಾ ಪ್ರಮಾಣವು ಕೆಳಕ್ಕೆ ಹೋಗಬಹುದೆಂಬ ಆತಂಕದಿಂದ ಅಡಿಕೆ ವ್ಯಾಪಾರಸ್ಥರು ಮುಂದಿನ ಸಾಲಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದೆಂಬ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದ ಅಡಿಕೆಯನ್ನು ಶೇಖರಿಸಿಟ್ಟಿದ್ದರು. ಆದರೆ ಅವರೆಣಸಿದ ಮಟ್ಟಕ್ಕೆ ಉತ್ಪಾದನೆಯು ಕುಸಿಯದೆ ಹೋಗಿ, ಶೇಖರಣೆ ಹೆಚ್ಚಾಗಿ, ಅದರೊಂದಿಗೆ ಬೆಳೆಗಾರರಿಂದ ನಿರಂತರವಾಗಿ ಅಡಿಕೆಯು ಮಾರುಕಟ್ಟೆಗೆ ಬಂದದ್ದರಿಂದ, ತಮ್ಮಲಿದ್ದ  ಮಾಲನ್ನು ಮಾರಾಟ ಮಾಡಲು ಹೆಣಗಾಡುವ ಪರಿಸ್ಥಿಯೊದಗಿ ಬಂದಿತ್ತೆಂದು ಪೌಲೋಸ್ ವರದಿಯು ತಿಳಿಸುತ್ತದೆ. ಇದೇ ಕಾರಣದಿಂದ ನಷ್ಟಕ್ಕೊಳಗಾದ ವ್ಯಾಪಾರಸ್ಥರು ಅಡಿಕೆ ಧಾರಣೆಯನ್ನಿಳಿಸತೊಡಗಿದ್ದರು ಎಂಬುದೂ ತಿಳಿದು ಬಂತು.

ಇದೇ ರೀತಿಯ ಪರಿಸ್ಥಿತಿ ೧೯೯೮–೯೯ರಲ್ಲೂ ಕಂಡುಬಂತು. ಅಡಿಕೆ ಬೆಲೆಗೆ ಕಂಡು ಬಂದ ಕಜ್ಜಿ ಕೀಟದ ಹಾವಳಿಯಿಂದಾಗಿ ಸುಮಾರು ೩೦ರಿಂದ ೪೦ಸಾವಿರ ಟನ್‌ಗಳಷ್ಟು ಅಡಿಕೆ ಫಸಲು ಕೊರತೆಯಾಗಬಹುದೆಂಬ ಊಹಾಪೋಹದಿಂದಾಗಿ ಅಡಿಕೆ ವ್ಯಾಪಾರಸ್ಥರು ಹೆಚ್ಚಿನ ಬೆಲೆಕೊಟ್ಟು ಮಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಟ್ಟು ಕ್ರಮೇಣ ಅಡಿಕೆಯ ಮಾರುಕಟ್ಟೆ ಒಳಹರಿವು ಸರಾಗವಾಗಿದ್ದರಿಂದ ಹೆಚ್ಚಿನ ವ್ಯಾಪಾರಸ್ಥರು ನಷ್ಟಕ್ಕೊಳಪಟ್ಟರು. ಈ ರೀತಿಯ ಪರಿಸ್ಥಿ ಬೆಳೆಗಾರ ಪ್ರದೇಶ ಮತ್ತು ಬಳಕೆದಾರ ಪ್ರದೇಶಗಳಲ್ಲೂ ಕಂಡು ಬಂತು. ಈ ಎರಡು ಸಮಯದಲ್ಲಿ ದೊಡ್ಡ ದೊಡ್ಡ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದ ನಷ್ಟಕ್ಕೊಳಪಟ್ಟರು. ಇದರಿಂದಾಗಿ ಇದೀಗ ಧಾರಣೆಯಿಳಿಕೆ ಅವಕಾಶ ಸೃಷ್ಟಿಯಾಯಿತು.

() ಹಣಕಾಸಿನ ಅಭಾವ:
ಪೌಲೋಸ್ ವರದಿಯ ಪ್ರಕಾರ ಆ ಕಾಲದಲ್ಲಿ ಹಣಕಾಸಿನ ಸಂಸ್ಥೆಗಳು ಒಟ್ಟು ವ್ಯಾಪಾರದ ಶೇಕಡಾ ೭೦ರಷ್ಟು ಸಾಲವನ್ನು ವ್ಯಾಪಾರಸ್ಥರಿಗೆ ಕೊಡುತ್ತಿದ್ದು, ಆದರೆ ಧಾರಣೆ ಕುಸಿದಾಗ ಈ ಪಾಲು ಶೇಕಡಾ ೫೦ಕ್ಕೆ ಇಳಿದಿತ್ತು. ಇದೀಗ ಉತ್ತರದ ವ್ಯಾಪಾರಸ್ಥರ ಕೊರಗು ನಮ್ಮ ಸಹಾಕಾರಿ ಸಂಸ್ಥೆಗಳು ವ್ಯಾಪಾರಸ್ಥರ ಮೇಲೆ ವಿಧಿಸುವ ಬಡ್ಡಿ ದರ ಅಧಿಕವೆಂಬುದು.

() ಬೆಳೆಗಾರರಲ್ಲಿ ಅಡಿಕೆಯನ್ನು ಶೇಖರಿಸಿಡಲು ಸಾಮರ್ಥ್ಯವಿಲ್ಲದಿರುವುದು:
ಉತ್ತಮ ಧಾರಣೆ ಬರುವ ತನಕ ಅಡಿಕೆಯನ್ನು ಶೇಖರಿಸಿಡಲು ಬೆಳೆಗಾರರಿಗೆ ಅಸಾಧ್ಯವಾಗಿದ್ದರಿಂದ ಅಡಿಕೆ ಧಾರಣೆ ಏರಿಳಿತಕ್ಕೊಳಪಡುತ್ತಿದೆ ಎಂಬುದನ್ನು ಪೌಲೋಸ್ ವರದಿ ತಿಳಿಸುವುದರೊಂದಿಗೆ ಹೆಚ್ಚಿನ ಬೆಳೆಗಾರರು ಹಣಕಾಸಿನ ದೃಷ್ಟಿಯಿಂದ ವ್ಯಾಪಾರಸ್ಥರ ಯಾ ಮಧ್ಯವರ್ತಿಗಳ ಹಿಡಿತಕ್ಕೊಳಪಡುತ್ತಿದ್ದಾರೆ ಎಂದಿತ್ತು. ಪ್ರಕೃತ ಕಳೆದ ಸಾಲಿನಲ್ಲಿ ಧಾರಣೆಯ ಏರು ಪ್ರವೃತ್ತಿಯನ್ನು ತೋರಿಸಿದ್ದರಿಂದ ಇದೀಗ ಹೆಚ್ಚಿನ ದೊಡ್ಡ ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ಅಡಿಕೆಯನ್ನು ಶೇಖರಿಸಿಟ್ಟಿದ್ದಾರೆಂಬ ನಂಬಿಕೆ ಮತ್ತು ಊಹೆ ವ್ಯಾಪಾರಸ್ಥರಲ್ಲಿರುವದರಿಂದ ಧಾರಣೆಯಿಂದು ಇಳಿಯಲು ಸಹಾಯವಾಗಿದೆ ಎಂದರೆ ತಪ್ಪಗಲಾರದು.

() ಮಾರುಕಟ್ಟೆಯಲ್ಲಿರುವ ಮಧ್ಯವರ್ತಿಗಳು:
ಪೌಲೋಸ್ ವರದಿಯ ಪ್ರಕಾರ ಹೊರಗಿನ ರಾಜ್ಯಗಳ ಅಡಿಕೆ ವ್ಯಾಪಾರಸ್ಥರ ಹತೋಟಿ ಮತ್ತು ಸ್ಥಳೀಯ ವ್ಯಾಪಾರಸ್ಥರ ಕೊರತೆ, ಉತ್ಪಾದಕ ಮತ್ತು ಬಳಕೆದಾರರ ನಡುವಿದ್ದ ಮಧ್ಯವರ್ತಿ ಸಮೂಹಗಳಿಂದಾಗಿ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಇದೇ ರೀತಿಯ ಪರಿಸ್ಥಿಯನ್ನು ನಮ್ಮ ಅಡಿಕೆ ಮಾರುಕಟ್ಟೆಯಲ್ಲಿ ಇದ್ದು, ಇದಿಂದು ಧಾರಣೆಯ ಏರು ಪೇರಿಗೆ ಸಹಾಯವಾಗಿದೆ. ಈಗಲೂ ಉತ್ಪಾದನಿಗೆ ದೊರಕುತ್ತಿರುವ ಬೆಲೆ ಮತ್ತು ಬಳಕೆದಾರ ಕೊಡುತ್ತಿರುವ ಬೆಲೆಗಳ ನಡುವೆ ಅಗಾಧ ಅಂತರವಿದೆ.

ಪರಿಹಾರೋಪಾಯಗಳು:

೧೯೭೦ರ ದಶಕದ ಆರಂಭದಲ್ಲಿ ಅಡಿಕೆ ಧಾರಣೆ ಇಳಿದಾಗ ಪೌಲೋಸ್ ಸಮಿತಿಯು ತನ್ನ ಅಂತಿಮ ವರದಿಯಲ್ಲಿ ಹಲವು ಪರಿಹಾರೋಪಾಯಗಳನ್ನು ಹೆಸರಿಸಿದ್ದು, ಆ ಎಲ್ಲಾ ಪರಿಹಾರಗಳು ಈಗಿನ ಪರಿಸ್ಥಿಯಲ್ಲೂ ಮಹತ್ವವನ್ನು ಹೊಂದಿದೆ ಎಂಬುದನ್ನು ಕೆಳಗೆ ಸೂಚುಸಿದ ವಿಚಾರಗಳಿಂದ ನಾವು ತಿಳಿದುಕೊಳ್ಳಬಹುದು.

() ಮಧ್ಯವರ್ತಿಗಳ ಶೋಷಣೆಯಿಂದ ವಿಮುಕ್ತರಾಗಲು ಪೌಲೋಸ್ ವರದಿಯೂ ಒಂದು ಕೇಂದ್ರೀಯ ಕಾರ್ಯಶಾಲೆ ಇಲ್ಲವೆ ಸಹಕಾರಿ ವ್ಯವಸ್ಥೆಯ ಮೂಲಕ ನೇರ ಮಾರಾಟಕ್ಕೆ ಇಳಿಯಬೇಕೆಂಬುದು, ಅದರ ಪ್ರಕಾರ ಕ್ಯಾಂಪ್ಕೋ ಆರಂಭವಾದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ನೇರ ಮಾರಾಟಕ್ಕೆ ಇಳಿಯದೆ ಇರುವುದರಿಂದ ಈಗಿನ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ತಪ್ಪಾಗಲಾರದು.
() ಪರೋಕ್ಷವಾಗಿ ಬೇರೆ ರಾಷ್ಟ್ರಗಳಿಂದ ಒಳಬರುತ್ತಿರುವ ಅಡಿಕೆಯ ಮೇಲೆ ತೀವ್ರ ನಿಗಾವಿಡಬೇಕೆಂಬುದನ್ನು ಪೌಲೋಸ್ ವರದಿ ಹೇಳಿದ್ದು, ಈಗಿನ ಪರಿಸ್ಥಿಯಲ್ಲಿ ಇದೇ ಅಗಬೇಕಾದ್ದು.
() ವಿಸ್ತರಣೆಯನ್ನು ಮೊಟಕುಗೊಳಿಸಬೇಕೆಂಬ ವಿಚಾರ ಪೌಲೋಸ್ ವರದಿ ಹೆಸರಿಸಿದ್ದು, ಈಗಿನ ವಾತಾವರಣವು ಇದನ್ನೇ ಸೂಚಿಸುತ್ತದೆ.
() ಉಪಬೆಳೆ ಯಾ ಮಿಶ್ರ ಬೆಳೆಗಳ ಬೇಸಾಯದತ್ತ ಗಮನ ಹರಿಸಲು ಪೌಲೋಸ್ ವರದಿ ಹೇಳಿದ್ದರೂ ಅದಿನ್ನೂ ಸರಿಯಾದ ದಿಕ್ಕಿನಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ.
() ರಫ್ತುನ ಬಗ್ಗೆ ಹೆಚ್ಚಿನ ಗಮನ ಕೊಡಲು ಪೌಲೋಸ್ ವರದಿ ಸೂಚಿಸಿದ್ದರೂ ಆ ದಿಕ್ಕಿನಲ್ಲಿ ದೇಶವಿಂದು ಯಶ್ವಸ್ವಿಯಾಗಿಲ್ಲ. ಮುಂದಿನ ದಿನಗಳಲ್ಲಾದರು ಈ ಬಗ್ಗೆ ದಿಟ್ಟ ಹೆಜ್ಜೆಯಿಡಲೇಬೇಕಾಗಿದೆ.
() ಬದಲಿ ಬಳಕೆಯ ಬಗ್ಗೆ ಆ ಕಾಲದಲ್ಲೆ ಸೂಚನೆ ಬಂದಿದ್ದರೂ ಇನ್ನೂ ಇವ್ಯಾವುದೂ ಯಶಸ್ವಿಯಾಗದ ಕಾರಣ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
() ಯೋಗ್ಯ ಬೆಲೆಗಾಗಿ ಬೆಳೆಗಾರರು ಅಡಿಕೆಯನ್ನು ಶೇಖರಿಸಿಡಬೇಕೆಂದು ಪೌಲೋಸ್ ಸಮಿತಿ ಹೇಳಿದ್ದು, ಬೆಳೆಗಾರರ ಅಗತ್ಯಕ್ಕನುಗುಣವಾಗಿ ಸಾಲ ಸೌಲಭ್ಯ ದೊರಕಬೇಕೆಂದು ತಿಳಿಸಿತ್ತು. ಆದರೆ ಈಗಿರುವ ಪರಿಸ್ಥಿಯಲ್ಲಿ ಇಲ್ಲೊಂದು ಅಪವಾದವಿದೆ. ಪ್ರಕೃತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಡಿಕೆ ವ್ಯವಸಾಯವಾಗುತ್ತಿದ್ದು, ಇದರೊಂದಿಗೆ ಬೇರೆ ರಾಷ್ಟ್ರಗಳಿಂದ ಅಡಿಕೆಯ ಒಳಹರಿವಿರುವುದರಿಂದ ಮತ್ತು ಪೂರೈಕೆ ನಿರಂತರವಾಗಿ ಕಂಡು ಬರುತ್ತಿರುವುದರಿಂದ ಈಗಿನ ಪರಿಸ್ಥಿಯಲ್ಲಿ ಅಡಿಕೆಯ ಶೇಖರಣೆ ಒಂದು ಅಪಾಯಕಾರಿ ವ್ಯವಸ್ಥೆಯಾಗಬಹುದು. ಆದ್ದರಿಂದ ಏರುತ್ತಿರುವ ಉತ್ಪಾದನೆಗನುಗುಣವಾಗಿ ಶೇಖರಣೆಯ ಬದಲು ನಿರಂತರ ಪೂರೈಕೆ ಮಾರುಕಟ್ಟೆಗಾದರೆ ಅಡಿಕೆಯ ಧಾರಣೆಯಲ್ಲಿನ ಏರುಪೇರು ಕಡಿಮೆಯಾಗಿ ಸ್ಥಿರತೆಯನ್ನು ಕಂಡುಕೊಳ್ಳಬಹುದು.

ಒಟ್ಟಾರೆಯಾಗಿ ೧೯೭೦ರ ದಶಕದಲ್ಲಿ ಕಂಡು ಬಂದು ಸ್ಥಿತಿ ಮತ್ತು ಈಗಿರುವ ಸ್ಥಿತಿಗಳ ನಡುವೆ ಸ್ವಾಮ್ಯವಿದ್ದು, ಈ ದೃಷ್ಟಿಯಿಂದ ಕ್ಷೇತ್ರವಿಂದು ಮೇಲೆ ತಿಳಿಸಿದ ಪರಿಹಾರಗಳಿಗನುಗುಣವಾಗಿ ಮುಂದವರಿದಲ್ಲಿ ನೆಮ್ಮದಿ ಮುಂದಿನ ದಿನಗಳಲ್ಲಾದರೂ ಕಂಡು ಬರಬಹುದು. ಎಲ್ಲದಕ್ಕೂ ತಾಳ್ಮೆ ಮತ್ತು ದೂರದೃಷ್ಟಿ ಅಗತ್ಯ.