ಅಡಿಕೆ ಕ್ಷೇತ್ರದ ಅಭಿವೃದ್ಧಿಗಿಂದು ಏನಾಗಬೇಕು? – ಹೊಸದಿಗಂತ ೧೪೦೫೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ದೇಶದಾದ್ಯಂತ ಕೃಷಿಯುತ್ಪನ್ನಗಳ ಧಾರಣೆ ಕಳೆದೊಂದು ವರ್ಷದಿಂದ ಕುಸಿಯುತ್ತಿದ್ದು ಇದಕ್ಕೆ ಕಾರಣಗಳು ಹಲವು. ಇವುಗಳಲ್ಲಿ ಮುಖ್ಯವಾದವುಗಳೆಂದರೆ: ವ್ಯವಸ್ಥಿತ ಮಾರುಕಟ್ಟೆಯ ಅಭಾವ ಮತ್ತು ಸಂಘಟನಾತ್ಮಕ ಹೋರಾಟದ ಕೊರತೆ. ಬದಲಾಗಿರುವ ವಿಶ್ವ ಮಾರುಕಟ್ಟೆಯಿಂದು ಈಗಿರುವ ಸ್ಥಿತಿಗೆ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದ್ದು, ಈ ನಿಟ್ಟಿನಲ್ಲಿ ನಮ್ಮ ಕೃಷಿ ಕ್ಷೇತ್ರದ ಉಳಿವಿಗಾಗಿ ಹಲವು ರೀತಿಯ ಬದಲಾವಣೆಗಳಾಗಬೇಕಾಗಿದೆ. ಈ ಬದಲಾವಣೆಗಳು ಕೃಷಿಕರಿಂದ, ಕೃಷಿಕರಿಗಾಗಿ ಎಂಬ ರೀತಿಯಲ್ಲಾಗಬೇಕು. ವಿಶ್ವ ವ್ಯಾಪಾರ ಸಂಸ್ಥೆಯ ಒಡಂಬಡಿಕೆಗೆ ಅನುಗುಣವಾಗಿ ಯಾವುದೇ ರಾಷ್ಟ್ರವಿಂದು ತನ್ನ ಎಲ್ಲಾ ಕ್ಷೇತ್ರಗಳ ರಕ್ಷಣೆಯನ್ನು ಮಾಡುವ ಸ್ಥಿತಿಯಲ್ಲಿಲ್ಲ. ಎಲ್ಲಾ ಬೆಳೆಗಳ ರಕ್ಷಣೆ ಇದರಿಂದ ಅಸಾಧ್ಯ. ಸರಕಾರಗಳು ಏನಿದ್ದರೂ ಆಹಾರೋತ್ಪನ್ನ ಮತ್ತು ಮೂಲಭೂತ ಸೌಕರ್ಯಗಳತ್ತ ಗಮನ ಕೊಡಬಹುದೇ ಹೊರತು ಪ್ರತಿಯೊಂದು ಉತ್ಪನ್ನಗಳತ್ತ ಅಲ್ಲ, ಇದು ಅಸಾಧ್ಯ ಕೂಡ. ಆದ್ದರಿಂದ ಅಡಿಕೆ ಕ್ಷೇತ್ರವಿಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಡಿಕೆ ಬೆಳೆಗಾರರೇ ಪರಿಹಾರ ಕಂಡುಕೊಳ್ಳುವ ದಿಟ್ಟಹೆಜ್ಜೆ ಇಡಬೇಕು. ಇದಕ್ಕಾಗಿ ಈ ಕ್ಷೇತ್ರದಲ್ಲೊಂದು ಕ್ರಾಂತಕಾರಿ ಬದಲಾವಣೆಯಾಗಲೇ ಬೇಕು. ಈ ಬದಲಾವಣೆಗಳ ಸ್ವರೂಪ ಮುಖ್ಯವಾಗಿ ಎರಡು ವಿಚಾರಗಳಿಂದೊಡಗೂಡಿರಬೇಕು. ಅವುಗಳೆಂದರೆ:

೧. ಬೆಳೆಗಾರರದ್ದಾದ ಮಾರಾಟ ಸಂಸ್ಥೆಗಳ ಅಭಿವೃದ್ಧಿ ಮತ್ತು ಸ್ಥಾಪನೆ. ೨. ಬೆಳೆಗಾರರ ಸಂಘಟನೆ.

ಬೆಳೆಗಾರರದ್ದಾದ ಮಾರಾಟ ಸಂಸ್ಥೆಗಳ ಅಭಿವೃದ್ಧಿ.

ಅಡಿಕೆ ಮಾರಾಟ ವ್ಯವಸ್ಥೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಖಸಾಗಿ ವಲಯದ ಹತೋಟಿಯಲ್ಲಿದ್ದು, ಇಲ್ಲಿ ಬೆಳೆಗಾರರದ್ದಾದ ಸಂಸ್ಥೆಯ ಪಾಲು ಅತ್ಯಲ್ಪ. ೧೯೭೦ರ ದಶಕದಲ್ಲಿ ಅಡಿಕೆ ಬೆಳೆಗಾರರು ಎದುರಿಸಿದ ಸಮಸ್ಯೆಗೆ ಪರಿಹಾರವಾಗಿ ಸಹಕಾರಿ ಕ್ಷೇತ್ರದ ಮಾರಾಟ ವ್ಯವಸ್ಥೆ ಬಂದು ಇದೀಗ ೨೮ ವರ್ಷಗಳ ಸೇವೆ ಸಲ್ಲಿಸಿದ್ದರೂ ಅದಿಂದು ಬೆಳೆಗಾರರ ರಕ್ಷಣೆಗಾಗಿ ಮಾಡುತ್ತಿರುವ ಕೆಲಸ ಕಾರ್ಯಗಳು, ಈಗ ಕಂಡು ಬಂದಿರುವ ಸ್ಥಿತಿಯಲ್ಲಿ ಅತ್ಯಲ್ಪ. ಆದ್ದರಿಂದ ಅಡಿಕೆ ಬೆಳೆಗಾರರಿಂದು ತಮ್ಮದೇ ಆದ ಈ ಸಂಸ್ಥೆಯನ್ನು ಎಚ್ಚರಿಸಿ ಅದರ ಕಾರ್ಯವಿಧಾನಗಳನ್ನು ಬದಲಾಗುತ್ತಿರುವ ಮಾರುಕಟ್ಟೆಗನುಗುಣವಾಗಿ ಬದಲಿಸಲು ಅಗತ್ಯವಿರುವ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಾರುಕಟ್ಟೆಯ ವ್ಯಾಖ್ಯಾನ ಇಂದು ಬದಲಾಗಿದೆ, ಬದಲಾಗಬೇಕಾಗಿದೆ. ಗ್ರಾಹಕನ ರುಚಿ, ಶುಚಿಗನುಗುಣವಾಗಿ ಉತ್ಪನ್ನದ ಪೂರೈಕೆಯಾಗಬೇಕಾಗಿದೆ. ಸಾಂಪ್ರದಾಯಿಕ ವ್ಯಖ್ಯಾನದ ಪ್ರಕಾರ ಮಾರುಕಟ್ಟೆ ಎಂದರೆ ಕೊಡುವುದು ಮತ್ತು ಕೊಂಡುಕೊಳ್ಳುವುದು. ಇದೀಗ ಕೊಂಡುಕೊಳ್ಳಿಸುವಂತಹ ಪ್ರಯತ್ನವಾದಲ್ಲಿ ಮಾತ್ರ ಮಾರುಕಟ್ಟೆಯುಳಿಯಬಲ್ಲದು. ಆಧುನಿಕ ವಾತಾವರಣದಲ್ಲಿ ವಿವಿಧ ರೀತಿಯ ಆವಿಷ್ಕಾರಗಳೊಂದಿಗೆ ಮಾರುಕಟ್ಟೆಯಲ್ಲಿ ಉಳಿಯಬಹುದು. ಇದಕ್ಕಾಗಿ ನಮ್ಮ ಸಂಸ್ಥೆಯಿಂದು ಒಂದು ಯೋಜನೆಯೊಂದಿಗೆ ಕಾರ್ಯರೂಪಕ್ಕಿಳಿಯಬೇಕು. ಇದರೊಂದಿಗೆ ಸಂಸ್ಥೆಯು ಆರಂಭವಾದಾಗ ಹಾಕಿಕೊಂಡ ಹಲವು ಮೂಲ ಉದ್ದೇಶವು ಯಶಸ್ವಿಯಾಗಿ ಕಾರ್ಯರೂಪಕ್ಕೆ ಇಳಿಯದ ಕಾರಣ ಈ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು. ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ವಿಚಾರಗಳೆಂದರೆ:

ಬೆಳೆಗಾರರ ಉತ್ಪನ್ನಗಳನ್ನು ಶೇಖರಿಸಿ ಸಾಲ ಸೌಲಭ್ಯವನ್ನೊದಗಿಸಿ ಉತ್ತಮ ಧಾರಣೆ ಬಂದಾಗ ಮಾರಾಟ ಮಾಡುವ ವ್ಯವಸ್ಥೆ.
ಅಡಿಕೆ ಸಂಸ್ಕರಣಾ ಉದ್ಧಿಮೆಯ ಸ್ಥಾಪನೆ.
ಅಡಿಕೆಯನ್ನು ರಫ್ತು ಮಾಡಲು ವಿಶೇಷ ಪ್ರಯತ್ನ.
ವಿವಿಧ ರೀತಿಯ ಮೂಲ ಸೌಕರ್ಯಗಳನ್ನು ಬೆಳೆಗಾರರಿಗೆ ಒದಗಿಸುವುದು.
ನೇರ ಮಾರಾಟಕ್ಕಾಗಿ ಅಗತ್ಯ ಕ್ರಮಗಳು.
ಮಾರುಕಟ್ಟೆಯ ಬಗ್ಗೆ ಮಾಹಿತಿ.
ಬೆಳೆಗಾರರಿಗೆ ಅಗತ್ಯವಿರುವ ಶಿಕ್ಷಣ.
ಪ್ರಚಾರ ಮತ್ತು ಸಂಶೋಧನೆಗಳಿಗೆ ಒತ್ತು.

ಸಂಸ್ಥೆಯ ಅಭಿವೃದ್ಧಿಗಾಗಿ ಹಲವು ಪರಿಹಾರಗಳನ್ನು ನಾನು ೧೯೮೬ರಿಂದೀಚೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಿಳಿಸಿದ್ದು, ಅವುಗಳಲ್ಲಿ ಕೆಲವು ಕಾರ್ಯರೂಪಕ್ಕೆ ಬಂದಿದ್ದು, ಇನ್ನು ಹಲವು ಕಾರ್ಯಗತವಾಗಬೇಕಷ್ಟೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ:

() ಅಡಿಕೆ ಬಗ್ಗೆ ಯೋಗ್ಯ ಪ್ರಚಾರ ಮತ್ತು ಆಧುನಿಕ ರೀತಿಯ ಮಾರಾಟ ವ್ಯವಸ್ಥೆ (೧೯೮೬). () ವಿದೇಶಿ ಮಾರುಕಟ್ಟೆಗೆ ಪ್ರವೇಶ, ಶೇಖರಣೆ ಮತ್ತು ಸಾಲದ ಪೂರೈಕೆ, ಮಾರುಕಟ್ಟೆ ಸಮೀಕ್ಷೆ, ಮೌಲ್ಯವರ್ಧಿತ ಉತ್ಪನ್ನದ ತಯಾರಿ. (೧೯೯೦) () ಅಡಿಕೆಯನ್ನು ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಪರಿವರ್ತಿಸಲು ಒಂದು ಉದ್ಧಿಮೆ, ಮಾರುಕಟ್ಟೆ ಸಂಶೋಧನಾ ಪೀಠ, ಗ್ರಂಥಾಲಯ, ಬೆಳೆಗಾರರಿಗೆ ಮಾರುಕಟ್ಟೆಯ ಬಗ್ಗೆ ಮಾಹಿತಿ ಒದಗಿಸಲು ಒಂದು ಪತ್ರಿಕೆ, ಅಡಿಕೆ ಬೆಳೆಯ ವಿವಿಧ ರೀತಿಯ ಮಾಹಿತಿಗಾಗಿ ಬೆಳೆಗಾರರಿಗೆ ಶಿಕ್ಷಣ ತರಬೇತು, ಸಂಸ್ಥೆಯ ಹೆಸರಿನಡಿಯಲ್ಲಿ ಒಂದು ಲಕ್ಷ ಪಾನ್‌ಬೀಡಾ ಅಂಗಡಿಗಳ ಸ್ಥಾಪನೆ. (೧೯೯೧) ತಂಬಾಕುಯುಕ್ತ ಅಡಿಕೆ ಉತ್ಪಾದನೆ (ಗುಟ್ಕಾ) (೧೯೮೯) ಸಂಸ್ಥೆ ಮತ್ತು ಬೆಳೆಗಾರರ ಸಂಘ ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿ (೧೯೯೦) ಹಳ್ಳಿಗಳಲ್ಲಿ ಸಂಚಾರಿ ಮಾರುಕಟ್ಟೆ ವ್ಯವಸ್ಥೆ (೧೯೯೧).

ಈ ಎಲ್ಲಾ ವಿಚಾರಗಳನ್ನು ಸಂಸ್ಥೆ ಮತ್ತು ಸಂಘಗಳು ಒಡಗೂಡಿ ಕಾರ್ಯರೂಪಕ್ಕಿಳಿಸಿದಲ್ಲಿ ಬೆಳೆಗಾರರ ಹಿತಾಸಕ್ತಿ ಕಾಪಾಡಿದಂತಾಗಬಹುದು. ಇದಕ್ಕಾಗಿ ಬೆಳೆಗಾರರಿಂದು ಒಗ್ಗೂಡಿ ತಮ್ಮ ಒತ್ತಡವನ್ನು ಹೇರಲೇಬೇಕು. ಸಂಸ್ಥೆಯ ಖರೀದಿ ಶಾಖೆಗಳ ವಿಸ್ತರಣಾ ಸಮಯದಲ್ಲಿ ಸದ್ರಿ ಪ್ರದೇಶದಲ್ಲಿ ಇತರ ಸಹಕಾರಿ ಸಂಸ್ಥೆ ಇದ್ದಲ್ಲಿ ಅದು ಸಹಕಾರಿ ಕ್ಷೇತ್ರಕ್ಕೆ ತೊಂದರೆ ಕೊಡಬಹುದೆಂಬ ಅಭಿಪ್ರಾಯವನ್ನು ೧೯೯೧ರಲ್ಲಿ ಹೆಸರಿಸದ್ದೆ. ಇದೀಗ ಈ ಸಮಸ್ಯೆ ಉಲ್ಬಣಗೊಂಡಿದ್ದು, ಇದರ ಪರಿಹಾರಕ್ಕಾಗಿ ಪ್ರಯತ್ನವಿಂದಾಗಬೇಕು.

ಪ್ರಕೃತ ಒದಗಿಬಂದಿರುವ ಸಮಸ್ಯೆಯನ್ನು ಸರಿದೂಗಿಸಲು ಈಗಿರುವ ಸಂಸ್ಥೆಯೊಂದರಿಂದ ಅಸಾಧ್ಯವೆಂಬ ವಾತಾವರಣವಿಂದು ಕಂಡು ಬರುತ್ತಿರುವುದರಿಂದ ಬೆಳೆಗಾರರಿಂದ ಎಚ್ಚೆತ್ತು ಈ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ತಮ್ಮದೇ ಆದ ಇನ್ನೊಂದು ಸಂಸ್ಥೆಯ ಸ್ಥಾಪನೆಗೆ ಪ್ರಯತ್ತಿಸಬೇಕು. ಹೊಸದಾಗಿ ಹುಟ್ಟಬೇಕಾಗಿರುವ ಈ ಸಂಸ್ಥೆ ಕೃಷಿಕರು ಬೆಳೆಯುತ್ತಿರುವ ವಿವಿಧ ಕೃಶಿಯುತ್ಪನ್ನಗಳ ವ್ಯವಹಾರ ನಡೆಸುವಂತದ್ದಾಗಿರಬೇಕು. ಅಲ್ಲದೆ ಈ ಉತ್ಪನ್ನಗಳನ್ನು ಬಳಕೆದಾರ ಯಾ ಗ್ರಾಹಕರ ರುಚಿಗನುಗುಣವಾಗಿ ಮೌಲ್ಯವರ್ಧಿತ ರೂಪದಲ್ಲಿ ಪೂರೈಸಲು ಅದರದ್ದೇ ಆದ ಉದ್ದಿಮೆಯೊಂದನ್ನು ಹೊಂದಬೇಕು. ಈ ಸಂಸ್ಥೆ ಆಂತರಿಕ ಮಾರುಕಟ್ಟೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೋಗ್ಯ ಪ್ರಚಾರವನ್ನು ಕೈಗೊಂಡು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿ ಬೆಳೆಗಾರರನ್ನು ರಕ್ಷಿಸಬೇಕು.

ಸಂಘಟನೆ

ಅಡಿಕೆ ಬೆಳೆಗಾರರ ಸಂಘಟನೆ ಅಗತ್ಯದ ಬಗ್ಗೆ ೧೯೮೮ರಿಂದೀಚೆಗೆ ನಾನು ತಿಳಿಸುತ್ತಾ ಬಂದಿದ್ದೆ. ಈ ಸಂಘವು ಅಡಿಕೆ ಮಾರಾಟದತ್ತ ದಿಟ್ಟ ಹೆಜ್ಜೆಯನ್ನಿಡಬೇಕೆಂದು ಈಗಿರುವ ಅಧ್ಯಕ್ಷರಲ್ಲಿ ೧೯೮೯ರಲ್ಲಿ ತಿಳಿಸಿದೆ. ಅದಿನ್ನೂ ಕಾರ್ಯರೂಪಕ್ಕೆ ಬರಲಿಲ್ಲ . ಸಂಘದ ಶಾಖೆಗಳು ಪ್ರತಿಯೊಂದು ಗ್ರಾಮದಲ್ಲಿದ್ದು ಸಂಘಟನೆ ಬಲಪಡಿಸಬೇಕು. (೧೯೯೧) ಎಂಬುದಾಗಿ ತಿಳಿಸಿದ್ದೆ. ಈ ಬಗ್ಗೆ ಚಿಂತನೆ ಅಗತ್ಯ . ಇದರೊಂದಿಗೆ ಈಗಿರುವ ವಾತಾವರಣದಲ್ಲಿ ಈ ಸಂಘವು ಇನ್ನಷ್ಟು ಬಲಿಷ್ಟಾವಾಗಿ ಚುರುಕಾಗಬೇಕಿದೆ. ಸಂಘವು ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಲು ಖಾಯಂ ಆಗಿ ಕಾರ್ಯನಿರ್ವಹಿಸಬಲ್ಲ ಅಧ್ಯಕ್ಷರು ಇದಕ್ಕಿಂದು ಅಗತ್ಯ. ಇದರೊಂದಿಗೆ ಅಡಿಕೆ ಕ್ಷೇತ್ರ್ದ ಬಗ್ಗೆ ವಿವಿಧ ಮಾಹಿತಿಗಳನ್ನು ಸಂಘವಿಂದು ಸಂಗ್ರಹಿಸಿ ತನ್ನದೇ ಆದ ಗ್ರಂಥಾಲಯ ಒಂದನ್ನು ಹೊಂದಲೇ ಬೇಕು. ಅಲ್ಲದೇ ಕಂಪ್ಯೂಟರ್, ಜೆರಾಕ್ಸ್ ಮುಂತಾದ ವ್ಯವಸ್ಥೆಗಳಿರಬೇಕು. ಸಂಘವಿಂದು ಆರ್ಥಿಕವಾಗಿ ಸುದೃಢಗೊಳ್ಳಬೇಕು.

ಆಲೋಚನಾ ಸಮಿತಿ ರಚನೆ

ಸಂಘವು ಇನ್ನಷ್ಟು ಚುರುಕುಗೊಳ್ಳಲು ಇದರಲ್ಲೊಂದು “ಆಲೋಚನಾ ಸಮಿತಿ” ಯ ರಚನೆಯಾಗಬೇಕು. ಈ ಸಮಿತಿಯಲ್ಲಿ ಬೇರೆ ಬೇರೆ ಪ್ರದೇಶಗಳ ಬೆಳೆಗಾರರು, ತಜ್ಞರು ಇರಬೇಕು. ಈ ಸಮಿತಿಯು ಕನಿಷ್ಟ ಪಕ್ಷ ವರ್ಷದಲ್ಲೆರಡು ಬಾರಿ ಒಂದಾಗಿ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಬೆಳೆಗಾರರಿಗೆ ಅಗತ್ಯವಿರುವ ಮಾಹಿತಿಯನ್ನು ತನ್ನದೇ ಆದ ಪತ್ರಿಕೆಯ ಮೂಲಕ ಪೂರೈಸಬೇಕು. ಈ ಸಮಿತಿಯು ಕ್ಷೇತ್ರಕ್ಕೆ ಸಮಸ್ಯೆ ಬಂದಾಗ ಮತ್ತು ಸಾಮಾನ್ಯ ಸ್ಥಿತಿಯಲ್ಲಿ ಕೂಡಾ ಸರಕಾರದೊಂದಿಗೆ, ವ್ಯಾಪಾರಸ್ಥರೊಂದಿಗೆ ಅಗತ್ಯ ಮಾತುಕತೆಗಳನ್ನು ಕೈಗೊಂಡು ಕ್ಷೇತ್ರವು ಸುಲಲಿತವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು.

ಇವೆಲ್ಲದರೊಂದಿಗೆ ಸಂಘವು ದೇಶದಲ್ಲಿಂದು ಇರುವ ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ಟೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಮೀಕ್ಷೆಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಒಂದು ಶಾಶ್ವತ ನಿಧಿಯನ್ನು ಹೊಂದಿಕೊಳ್ಳುವುದು ಉಚಿತ. ಈ ರೀತಿಯ ಸಮೀಕ್ಷೆ ಕ್ಷೇತ್ರಕ್ಕೆ ಯಾವತ್ತೂ ಅಗತ್ಯ. ಇದಾದಲ್ಲಿ ಮಾರುಕಟ್ಟೆಯಲ್ಲಿ ಕಂಡು ಬರಬಹುದಾದ ವಿಲಕ್ಷಣ ಸ್ಥಿಯನ್ನು ಮುಂದಾಗಿ ತಿಳಿದುಕೊಳ್ಳಬಹುದಾಗಿದೆ.

ಸಂಘವು ಅಡಿಕೆ ಬೆಳೆಗಾರ ಸಮೂಹದಲ್ಲಿ ಆಗುತ್ತಿರುವ ಸಂಶೋಧನೆ, ಅಧ್ಯಯನ, ಆವಿಷ್ಕಾರಗಳನ್ನು ಗುರುತಿಸಿ ಅಗತ್ಯ ಪ್ರೇರಣೆಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಅದಕ್ಕಾಗಿ ಒಂದು ಪ್ರತೇಕ ಸಮಿತಿಯನ್ನು ಹೊಂದುವುದು. ವಿಶ್ವ ವ್ಯಾಪಾರ ಸಂಸ್ಥೆಯ ಒಡಂಬಡಿಕೆಗನುಗುಣವಾಗಿ ಬಂದ ಮುಕ್ತ ವಾತಾವರಣವು ಒಂದಲ್ಲ ಒಂದು ದಿನ ನಮ್ಮ ಕೃಷಿಕ್ಷೇತ್ರಕ್ಕೆ ಪ್ರಬಲ ಪೈಪೋಟಿನೀಡಲಿದ್ದು ಈ ನಿಟ್ಟಿನಲ್ಲಿ ನಮ್ಮಲ್ಲಿಂದು ಪ್ರಬಲ ಸಂಘಟನೆಯಾಗಲೇಬೇಕು. ಸಂಘಟನೆ ಮಾರುಕಟ್ಟೆಗೆ ನೇರವಾಗಿ ಇಳಿಯಬೇಕು. ಉತ್ತರದ ರಾಜ್ಯಗಳಲ್ಲಿ ಏಪಲ್, ಮಾವು ಮತ್ತಿತರೆ ಹಣ್ಣು ಮತ್ತು ತರಕಾರಿ ಉತ್ಪಾದಕರು ಅವರದ್ದೇ ಆದ ಸಂಘಟನೆಯನ್ನು ಹೊಂದಿ ಮಾರಾಟ ವ್ಯವಸ್ಥೆಗಿಳಿದು ಯಶಸ್ಸನ್ನು ಸಾಧಿಸಿದ್ದು, ನಾವಿಂದು ಈ ಪ್ರಯತ್ನಕ್ಕಿಳಿಯಬೇಕು. ಅಡಿಕೆ ಬೆಳೆಗಾರರಿಂದು ತಮ್ಮ ಉತ್ಪನ್ನವನ್ನು ತಾವೂ ಬಳಸಿ ಇನ್ನಿತರರಿಗೂ ಅದರ ಮಹತ್ವವನ್ನು ತಿಳಿಹೇಳಿ ಇದಕ್ಕಿರುವ ಮಾರುಕಟ್ಟೆಯನ್ನು ವೃದ್ಧಿಗೊಳಿಸಬೇಕು. ಕೇವಲ ಬೆಲೆ ಇಳಿದಾಗ, ಸಮಸ್ಯೆಗಳು ಬಂದಾಗ ಎಚ್ಚೆತ್ತುಕೊಳ್ಳವ ಬದಲು ಸದಾ ಚುರುಕಾಗಿ ತಮ್ಮದೇ ಆದ ಸಂಘ ಸಂಸ್ಥೆಗಳೊಡಗೂಡಿ ಅಭಿವೃದ್ಧಿಯನ್ನು ಸಾಧಿಸಬೇಕು. ಊಟದ ತಟ್ಟೆಯೆದುರು, ಸಮಾರಂಭಗಳಲ್ಲಿಂದು ಆಗುತ್ತಿರುವ ಚರ್ಚೆ, ಚಿಂತನೆಗಳು ಕಾರ್ಯರೂಪಕ್ಕಿಳಿಯಬೇಕು. ಮನೆಯೊಳಗಿನ ಚಿಂತನೆ ಮಾರುಕಟ್ಟೆಗಿಳಿಯಬೇಕು. ಮನಸ್ಸಿನಲ್ಲಿರುವ ಅವಿಷ್ಕಾರಗಳು ಕಾರ್ಯಗತವಾಗಬೇಕು ಈ ರೀತಿಯ ಪರಿಸರ ನಿರ್ಮಾಣವಾಗಬೇಕಿದ್ದಲ್ಲಿ ಪ್ರಬಲ ಸಂಘಟನೆಯಿಂದಾಗಲೇ ಬೇಕು. ಇದರೊಂದಿಗೆ ಸಂಘ, ಸಂಸ್ಥೆಗಳು, ಬೆಳೆಗಾರ ತನ್ನಲ್ಲಿಗೆ ಬರಲಿ ಎಂಬ ನಿಲುವನ್ನು ಬಿಟ್ಟು ತಾನು ಬೆಳೆಗಾರರ ಕಡೆಗೆ ಚಲಿಸಿ ಎರಡು ಕಡೆಯೂ ಒಗ್ಗಟ್ಟಾಗಿ ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿದಲ್ಲಿ ಕ್ಷೇತ್ರ ಉಳಿದು ಆಭಿವೃದ್ಧಿ, ಬೆಳವಣಿಗೆ ಮತ್ತು ಪ್ರಗತಿಯನ್ನು ಸಾಧಿಸಬಹುದು. ಇವಾವುದೂ ಕಾರ್ಯರೂಪಕ್ಕೆ ಬಾರದಿದ್ದಲ್ಲಿ ಇನ್ನು ಮುಂದೆಯೂ ಕ್ಷೇತ್ರ ಸೋಲುವುದಂತೂ ಖಂಡಿತ.