ಅಡಿಕೆ ಕ್ಷೇತ್ರದ ಅಭಿವೃದ್ಧಿ ಯಾರಿಂದ ಸಾಧ್ಯ? – ಹೊಸದಿಗಂತ ೧೯೦೧೨೦೦೧
– ಡಾ. ವಿಘ್ನೇಶ್ವರ ವರ್ಮುಡಿ.

ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದಲೆ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರಗಳ ಬೆಂಬಲದೊಂದಿಗೆ ಬೆಳೆಗಾರರೊಡಗೂಡಿ ಸ್ಥಾಪಿಸಲ್ಪಟ್ಟ ಕ್ಯಾಂಪ್ಕೋ ಸಂಸ್ಥೆ ಕಳೆದ ೨೭ವರ್ಷಗಳ ಕಾರ್ಯಪ್ರವೃತ್ತಿಯಲ್ಲಿ ಅದೆಷ್ಟೋ ಏಳು ಬೀಳುಗಳನ್ನು ಕಂಡಿದ್ದರೂ , ಅವುಗಳನ್ನು ಲೆಕ್ಕಿಸದೆ ಬೆಳೆಗಾರರ ಅಭಿವೃದ್ಧಿಗಾಗಿ ಶ್ರಮಿಸುತಿದೆ. ಈ ನಿಟ್ಟಿನಲ್ಲಿ ತನ್ನ ಖರೀದಿ ಕೇಂದ್ರಗಳ ಸಂಖ್ಯೆಯನ್ನು ವೃದ್ಧಿಸಿ ಅಧಿಕ ಪ್ರಮಾಣದ ಖರೀದಿಯನ್ನು ಮತ್ತು ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಇದಿಂದು ಅಡಿಕೆ ಮಾರುಕಟ್ಟೆಯನ್ನು ಹತೋಟಿಯಲ್ಲಿಡಲು ಏಕಾಂಗಿಯಾಗಿ ಹೋರಾಡುತ್ತಿದೆ. ಕಳೆದ ಸಾಲಿನಲ್ಲಿ ಅಡಿಕೆ ಧಾರಣೆಯಲ್ಲಾದ ಏರಿಕೆ ಮತ್ತು ಆ ಬಳಿಕ ಕಂಡು ಬಂದ ದಿಢೀರ್ ಕಸಿತ ಅಡಿಕೆ ಸಮುದಾಯವನ್ನಲ್ಲದೆ ಕ್ಯಾಂಪ್ಕೋವನ್ನು ಕಂಗಾಲಾಗಿಸಿದೆ. ಇಷ್ಟಕ್ಕೆಲ್ಲ ಮುಖ್ಯ ಕಾರಣ ಆಡಿಕೆ ಮಾರುಕಟ್ಟೆಯಿಂದು ಖಾಸಗಿ ವ್ಯಾಪಾರಸ್ಥರ ಹತೋಟಿಗೊಳಪಟ್ಟಿರುವುದು. ಈ ರೀತಿಯ ಪರಿಸ್ಥಿತಿ ಇನ್ನಷ್ಟು ಹೊಡೆತವನ್ನು ನೀಡಬಹಿದಾಗಿದ್ದು, ಈ ನಿಟ್ಟಿನಲ್ಲಿ, ಅಡಿಕೆ ಬೇಳೆಗಾರ ಸಮೂಹ ಮತ್ತು ಕ್ಯಾಂಪ್ಕೋ ಅಗತ್ಯ ಕ್ರಮಗಳನ್ನು ಈಗಿಂದೀಗಲೇ ಕೈಗೊಳ್ಳಬೇಕಾದ ಅನಿವಾರ್ಯತೆಯಿಂದು ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ  ಬೆಳೆಗಾರರು ಮತ್ತು ಸಂಸ್ಥೆಯಿಂದು ಏನು ಮಾಡಬೇಂದು ಚಿಂತಿಸಿ ಮುಂದಿನ ಹೆಜ್ಜೆಯನ್ನಿಡಬೇಕಾಗಿದೆ.

ಬೆಳೆಗಾರರ ಪಾತ್ರವೇನು?

೭೦ರ ದಶಕದ ಆರಂಭದಲ್ಲಿ ಅಡಿಕೆ ಧಾರಣೆ ನೆಲಕಚ್ಚಿದಾಗ ದೃತಿಗೆಟ್ಟ ಬೆಳೆಗಾರರು ಒಗ್ಗೂಡಿ ತಮ್ಮ ಹಿತ ರಕ್ಷಣೆಗಾಗಿ ಕ್ಯಾಂಪ್ಕೋವನ್ನು ಸ್ಥಾಪಿಸಿ ಮುಂದಿನ ಕಲವು ವರ್ಷಗಳಲ್ಲಿ ಅದರ ಅಭಿವೃದ್ಧಿಗಾಗಿ ಶ್ರಮಿಸಿದ್ದರೂ, ೧೯೯೦ರ ದಶಕದಿಂದೀಚೆಗೆ ಸಂಸ್ಥೆಯತ್ತ ತಮ್ಮ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳತ್ತಿರುವ ಪ್ರಮಾಣ ಖಾಸಗಿ ವ್ಯಾಪಾರಸ್ಥರೊಂದಿಗೆ ಆಗುತ್ತಿರುವ ವ್ಯವಹಾರಕ್ಕೆ ಹೋಲಿಸಿದಾಗ ಗಣನೀಯವಾಗಿ ಕುಸಿಯುತ್ತಿದ್ದು, ಇದರ ಒಳಗುಟ್ಟನ್ನು ಅರಿಯ ತೊಡಗಿದ ವ್ಯಾಪಾರಸ್ಥರೀಗ ಬೆಳೆಗಾರರನ್ನು ತಮ್ಮೆಡೆಗೆ ಇನ್ನಷ್ಟು ಆಕರ್ಷಿಸಲು ಬೆಲೆಯನ್ನಿಂದು ಅವರ ಹಿತಕ್ಕನುಗುಣವಾಗಿ ಏರುಪೇರು ಮಾಡುತ್ತಿದ್ದು ಇದರಿಂದಾಗಿ ಒಂದೆಡೆ ಬೆಳೆಗಾರರ ಸೋಲು ಮತ್ತೊಂದೆಡೆಯಲ್ಲಿ ತಾವೇ ಕಟ್ಟಿದ ಸಂಸ್ಥೆಯ ಸೋಲಿಗೂ ದಾರಿಯಾಗುತ್ತದೆ. ಈ ರೀತಿಯದ್ದಾದ ಪರಿಸ್ಥಿತಿ ಇನ್ನು ಮುಂದುವರಿದಲ್ಲಿ ಬೆಳೆಗಾರರ ಸಮೂಹಕ್ಕೆ ಮುಂದೆ ಬರಲಿರುವ ದಿನಗಳು ಇನ್ನಷ್ಟು ಕಠಿಣವಾಗಬಹುದಲ್ಲದೆ, ತಾವೇ ಕಟ್ಟಿದ ಮನೆ ತಮ್ಮ ವಾಸಕ್ಕೆ ಯಾ ವ್ಯವಹಾರಕ್ಕೆ ಇಲ್ಲದಾಗಬಹುದು. ಈ ರೀತಿಯ ಪರಿಸ್ಥಿತಿ ಆಗಬಾರದು, ಇದು ಅಡಿಕೆ ಕ್ಷೇತ್ರದ ಹಿತದೃಷ್ಟಿಯಿಂದ, ಅದರ ಬೆಳೆವಣಿಗೆ ದೃಷ್ಟಿಯಿಂದ ಖಂಡಿತವಾಗಿಯೂ ಮಾರಕವಾಗಿ ಪರಿಣಮಿಸಬಲ್ಲದು.

ಇದಕ್ಕಾಗಿ ಅಡಿಕೆ ಬೆಳೆಗಾರರಿಂದು ತಾವೇ  ಕಟ್ಟಿ ಬೆಳೆಸಿದ, ಬೆಳೆಸುತ್ತಿರುವ ಕ್ಯಾಂಪ್ಕೋ ಸಂಸ್ಥೆಯನ್ನು ಆರ್ಥಿಕವಾಗಿ ಇನ್ನಷ್ಟು ಬಲಪಡಿಸಬೇಕು. ಕ್ಯಾಂಪ್ಕೋ ಸಂಸ್ಥೆಯು ಕೊನೆಪಕ್ಷ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡಪಿ ಜಿಲ್ಲೆಗಳಲ್ಲಿ ಉತ್ಪಾದಿಸಲ್ಪಡುವ ಅಡಿಕೆ ಪ್ರಮಾಣವನ್ನಾದರೂ ಈಗಿಂದೀಗಲೇ ಖರೀದಿಸಲು ಅಗತ್ಯವಿರುವ ವಾತಾವರಣವನ್ನು ಬೆಳೆಗಾರ ಸಮೂಹವಿಂದು ಸೃಷ್ಟಿಸಬೇಕು. ಅಲ್ಲದೆ ಮುಂದೆ ಈ ಸಂಸ್ಥೆಯು ರಾಷ್ಟ್ರದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣದ ಶೇಕಡಾ ೪೦ ರಿಂದ ೫೦ರಷ್ಟಾದರೂ ಖರೀದಿಸುವ ಮಟ್ಟಕ್ಕೆ ಏರುವಂತಾಗಲು ಪೂರಕ ವ್ಯವಸ್ಥೆಯನ್ನು ಕೈಗೂಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಡಿಕೆ ಬೆಳೆಗಾರನು ತನ್ನಿಂದ ಸಾಧ್ಯವಿರುವ ಮಟ್ಟಿಗೆ ಗರಿಷ್ಟ ಪ್ರಮಾಣದ ಶೇರು ಬಂಡವಾಳವನ್ನು ಖರೀದಿಸಿ ಸಂಸ್ಥೆಯನ್ನು ಸುದೃಢಗೊಳಿಸಬೇಕು. ಇದರೊಂದಿಗೆ ನಮ್ಮ ಅಡಿಕೆ ಬೆಳೆಗಾರರು ಇನ್ನು ಮುಂದೆಯಾದರೂ ತಮ್ಮ ವ್ಯವಹಾರಗಳನ್ನು ತಮ್ಮದೇ ಸಂಸ್ಥೆಯಲ್ಲಿ ಎಂಬ ದೃಢ ನಿಲುವನ್ನು ಹೊಂದಬೇಕು.

ಸಂಸ್ಥೆಯಿಂದೇನಾಗಬೇಕು?

ಬೆಳೆಗಾರರ ವ್ಯವಹಾಗಳನ್ನೆ ನಂಬಿರುವ ಬೆಳೆಗಾರರದ್ದಾದ ಕ್ಯಾಂಪ್ಕೋವಿಂದು ತನ್ನ ಅರ್ಥಿಕ ಸ್ತಿತಿಯನ್ನು ಇನ್ನಷ್ಟು ದೃಢಗೊಳಿಸಲು ಅಗತ್ಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಇದರೊಂದಿಗೆ ಬೆಳೆಗಾರರನ್ನು ತನ್ನಡೆಗೆ ಆಕರ್ಷಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತರಲು ಹಿಂಜರಿಯಬಾರದು.ಅಲ್ಲದೆ ಪ್ರಕೃತ ತನ್ನ ಕಾರ್ಯವಿಧಾನದಲ್ಲಿರುವ ಲೋಪದೋಷಗಳನ್ನು ದಕ್ಷ ರೀತಿಯಲ್ಲಿ ನಿವಾರಿಸಬೇಕು. ಇದರೊಂದಿಗೆ ತನ್ನ ಕಾರ್ಯಪಟ್ಟಿಯಲ್ಲಿರುವ ಉದ್ದೇಶಗಳ ಈಡೇರುವಿಕೆಗಿರುವ ಎಡರು ತೊಡರುಗಳನ್ನು ತನ್ನ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು, ಇವುಗಳ ಕಾರ್ಯವಿಧಾನಗಳಿಗೆ ಮತ್ತು ಅನುಷ್ಠಾನಕ್ಕೆ ಬೆಳೆಗಾರರಿಂದೇನಾಗಬೇಕು ಎಂಬ ಬಗ್ಗೆ ತಿಳಿವಳಿಕೆಯನ್ನಿತ್ತು ಅವರ ಮನ ಒಲಿಸಬೇಕಾದಿದೆ. ಪ್ರಕೃತ ಅಡಿಕೆ ಕ್ಷೇತ್ರವು ದೃತಿಗೆಟ್ಟಿರುವ ಹಿನ್ನಲೆಯಲ್ಲಿ ಇದರ ಪರಿಹಾರಕ್ಕಾಗಿ ಸಂಸ್ಥೆಯು ಬೆಳೆಗಾರರನ್ನು ತನ್ನಡೆಗೆ ಸೆಳೆಯಬಲ್ಲ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಬೇಕು. ಇಲ್ಲವಾದಲ್ಲಿ ಖಾಸಗೀ ವ್ಯಾಪಾರಸ್ಥರು ಒಮ್ಮಿಂದೊಮ್ಮೆಗೆ ಕ್ಷಣಿಕ ಸುಖವನ್ನು ಅಡಿಕೆ ಬೆಳೆಗಾರರಿಗಿತ್ತು, ಅವರನ್ನು ತಮ್ಮೆಡೆಗೆ ಇನ್ನಷ್ಟು ಸೆಳೆದುಕೊಳ್ಳಬಹುದಾಗಿದೆ. ಇದರೊಂದಿಗೆ ಪ್ರಕೃತ ಒದಗಿಬಂದ ಸಮಸ್ಯೆಯ ಬಗ್ಗೆ ಪರಿಪೂರ್ಣ ರೀತಿಯ ಮಾಹಿತಿಯನ್ನು ಬೆಳೆಗಾರರಿಗೆ ಒದಗಿಸಲು ಸಂಸ್ಥೆಯ ನಿರ್ದೇಶಕರುಗಳು ತಮ್ಮ ಖರೀದಿ ಕೇಂದಗಳಿರುವಲ್ಲೆಲ್ಲ ಸಮಾವೇಶಗಳನ್ನೇರ್ಪಡಿಸಬೇಕಾಗಿದೆ. ಈ ರೀತಿಯ ವ್ಯವಸ್ಥೆಗಳು ಆಗಿಂದ್ದಾಗೆ ಜರಗಿ ಬೆಳೆಗಾರರನ್ನು ತನ್ನೆಡೆಗೆ ಸೆಳೆದುಕೊಂಡು ತನ್ನ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕಾಗಿದೆ.

ಬದಲಾಗುತ್ತಿರುವ ಮಾರುಕಟ್ಟೆಯ ವಾತಾವರಣಕ್ಕನುಗುಣವಾಗಿ ಸಂಸ್ಥೆಯು ಬದಲಾಗಬೇಕು. ಇಂದಿನ ದಿನಗಳಲ್ಲಿ ಬಳಕೆದಾರರು ಬಯಸುವುದು ಮೌಲ್ಯವರ್ಧಿತ ಉತ್ಪನ್ನಗಳನ್ನೇ ಹೊರತು ಮೂಲ ಉತ್ಪನ್ನಗಳನ್ನಲ್ಲ. ಆದ್ದರಿಂದ ಸಂಸ್ಥೆಯೂ ಅಡಿಕೆಯ ವಿವಿಧ ರೀತಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಅಗತ್ಯ ಪ್ರಚಾರಗಳೊಂದಿಗೆ ಮಾರುಕಟ್ಟೆಯನ್ನು ಪರಿಪೂರ್ಣ ರೀತಿಯಲ್ಲಿ ಪ್ರವೇಶಿಸಬೇಕು. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಲೋಚನೆಗಳನ್ನು ಕೈಬಿಟ್ಟು ಆಧುನಿಕ ಮಾರುಕಟ್ಟೆಗಳ, ಬೆಳೆಗಾರರ, ಬಳಕೆದಾರರ ರುಚಿಗನುಗುಣವಾಗಿ ತನ್ನ ಕಾರ್ಯವಿಧಾನಗಳನ್ನು ಹೊಂದಿಕೊಳ್ಳಬೇಕು. ಈ ರೀತಿಯದ್ದಾದ ಪರಿಣಾಮಕಾರಿ ಹೆಜ್ಚೆ ಇಟ್ಟಲ್ಲಿ ಸಂಸ್ಥೆಯ ಅಭಿವೃದ್ಧಿ ಮತ್ತು ಬೆಳವಣಿಗೆಯೊಂದಿಗೆ ಬೆಳೆಗಾರ ಸಮೂಹವು ಉದ್ದಾರವಾಗಬಹುದು. ಇವೆಲ್ಲದರೊಂದಿಗೆ ಪ್ರಕೃತ ಖಾಸಗೀ ವ್ಯಪಾರಸ್ಥರು ಕೈಗೊಳ್ಳುತ್ತಿರುವ ಭವಿಷ್ಯದ ಮಾರುಕಟ್ಟೆಯ ಯಾ ಮುಂದಿನ ಮಾರುಕಟ್ಟೆ ವ್ಯವಸ್ಥೆಯಂತೆ ಸಂಸ್ಥೆಯು ಇನ್ನು ಮುಂದೆಯಾದರೂ ಇದೇ ರೀತಿಯ ವ್ಯವಸ್ಥೆಗಿಳಿಯುವ ಸಿದ್ಧತೆಯನ್ನು ಮಾಡಿಕೊಂಡಲ್ಲಿ ಅಡಕೆಗೆ ದೊರಕಬಹುದಾದ ಧಾರಣೆ ಯೋಗ್ಯಮಟ್ಟದ್ದಾಗಿ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಬಹುದು.