ಅಡಿಕೆ ಬೆಳೆ : ಚಿಂತನೆ ಅಗತ್ಯಹೊಸದಿಗಂತ ೨೧೧೯೯೧
– ಡಾ. ವಿಘ್ನೇಶ್ವರ ವರ್ಮುಡಿ.

ವಿಶ್ವದಲ್ಲಿ ಅಡಿಕೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಸುತ್ತಿರುವ ರಾಷ್ಟ್ರ ಭಾರತ. ಭಾರತದಲ್ಲಿ ಈ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಪ್ರಥಮ ಸ್ಥಾನವನ್ನು ಕರ್ನಾಟಕ ರಾಜ್ಯವು ಹೊಂದಿದ್ದು, ಈ ದೃಷ್ಟಿಯಲ್ಲಿ ಈ ಬೆಳೆಗೆ ರಾಜ್ಯದಲ್ಲಿ ಒಂದು ಪ್ರಮುಖ ಸ್ಥಾನವಿದೆ. ಈ ರೀತಿಯಾಗಿ ಪ್ರಮುಖ ಸ್ಥಾನವನ್ನು ಹೊಂದಿರುವ ಬೆಳೆಯ ಬಗ್ಗೆ ರಾಜ್ಯ ಸರಕಾರವು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ರಾಜ್ಯದಲ್ಲಿ ಬೆಳೆಸಲಾಗುತ್ತಿರುವ ಇನ್ನಿತರೇ ವಾಣಿಜ್ಯ ಬೆಳೆಗಳಿಗಾಗಿ ಹಾಕಿಕೊಂಡ ಪ್ರಗತಿಪರ ಕಾರ್ಯಕ್ರಮಗಳಿಗೆ ಹೋಲಿಸದಾಗ ಏನೇನೂ ಸಾಲದಾಗಿದೆ. ಇದಕ್ಕೆ ನಾವು ಅನೇಕ ಉದಾಹರಣೆಗಳನ್ನು ಹೆಸರಿಸಬಹುದಾಗಿದೆ. ೧. ರಾಜ್ಯ ಸರಕಾರದ ಯಾ ಅದರ ಸಂಸ್ಥೆಗಳ ಮುಖಾಂತರ ಪ್ರಕಟಿಸಲ್ಪಟ್ಟ ಅಥವಾ ಪ್ರಕಟವಾಗುತ್ತಿರುವ ವಾರ್ಷಿಕ ಪುಸ್ತಕ ಮತ್ತಿತರೇ ಪ್ರಕಟಣೆಗಳಲ್ಲಿ ಅಡಿಕೆ ಬೆಳೆಯ ಬಗ್ಗೆ ಯಾವುದೇ ಮಹಿತಿಯಿಲ್ಲ. ಉದಾ: ಕರ್ನಾಟಕ ವಾರ್ಷಿಕ ಪುಸ್ತಕ ೧೯೮೭–೮೮ ವಿಸ್ತೀರ್ಣದಲ್ಲಾಗಲಿ, ಉತ್ಪಾದನೆಯಲ್ಲಾಗಲಿ ಈ ಬೆಳೆಗಿಂತ ಕೆಳ ಸ್ಥಾನದಲ್ಲಿರುವ ಇತರೇ ವಾಣಿಜ್ಯ ಬೆಳೆಗಳ ಬಗ್ಗೆ ಇದರಲ್ಲಿ ಮಾಹಿತಿಯು ಲಭ್ಯವಿದ್ದು, ಅಡಿಕೆಯ ಬಗ್ಗೆ ಇಲ್ಲಿ ತಾತ್ಸಾರವನ್ನು ತಳೆದಂತೆ ಕಂಡು ಬರುತ್ತಿದೆ. ಇಷ್ಟು ಮಾತ್ರವಲ್ಲದೆ ನಮ್ಮ ವಿಧಾನಸಭೆಯಲ್ಲೂ ಅಡಿಕೆ ಬೆಳೆಗಾರರ ಯಾ ಬೆಳೆಯ ಬಗ್ಗೆ ಮತ್ತು ಈ ಕ್ಷೇತ್ರದ ಅಭಿವೃದ್ಧಿ ಈ ವಿಚಾರಗಳ ಬಗ್ಗೆ ಯಾವೊಂದು ಚರ್ಚೆಯೂ ಕೇಳಿಬಾರದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಈ ಬೆಳೆಯು ರಾಜ್ಯದ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳ ಅಭಿವೃದ್ಧಿ ದೃಷ್ಟಿಯಿಂದ ಒಂದು ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದ್ದರೂ, ಈ ಕ್ಷೇತ್ರದ ಪರಿಪೂರ್ಣತೆಗಾಗಿ ಇಲ್ಲವೆ ಇದರಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಯಾವೊಂದು ಕಾರ್ಯಕ್ರಮಗಳು ಈ ತನಕ ಆದಂತೆ ಕಂಡು ಬರುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯೊಂದನ್ನೇ ನಾವು ಗಣನೆಗೆ ತೆಗೆದುಕೊಂಡಲ್ಲಿ ಈ ಬೆಳೆಯ ಪ್ರಾಮುಖ್ಯತೆಯನ್ನು ನಾವು ಇಲ್ಲಿ ಅರಿತುಕೊಳ್ಳಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಮುಖ್ಯವಾಗಿ ಅಡಿಕೆ ಬೆಳೆಯ, ಬೆಳೆಗಾರರ ಮತ್ತು ಇದರ ವ್ಯವಹಾರಗಳನ್ನೇ ಅವಲಂಬಿಸಿದ್ದು, ಈ ಕ್ಷೇತ್ರಕ್ಕೆ ಯಾವೊಂದು ಸಮಸ್ಯೆಯು ಬಂದಲ್ಲಿ ಅದು ಇಡೀ ಜಿಲ್ಲೆಯ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದಾಗಿದ್ದು ಈ ನಿಟ್ಟಿನಲ್ಲಿ ಈ ಕ್ಷೇತ್ರದ ಹಿತರಕ್ಷಣೆಗೆ ನಮ್ಮಲ್ಲಿ ಈ ತನಕ ಆದ ಅಭಿವೃದ್ಧಿ ಕಾರ್ಯಕ್ರಮಗಳೇನೂ ಸಾಲದು. ಈ ಸಾಲಿನಲ್ಲಿ ಸುರಿದ ಸತತ ಮಳೆಯ ಪರಿಣಾಮವಾಗಿ ಜಿಲ್ಲೆಯ ಅಡಿಕೆ ತೊಟಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೊಳೆರೋಗ ಬಂದಿದ್ದು, ಇದರಿಂದಾಗಿ ಉಂಟಾದ ನಷ್ಟವನ್ನು ಅಂದಾಜಿಸಲು ಅಸಾಧ್ಯವಾಗಿದ್ದು, ಇದರೊಂದಿಗೆ ವಿಪರೀತ ಗಾಳಿಯಿಂದಾಗಿ ಅಡಿಕೆ ಮರಗಳನೇಕ ಬಿದ್ದೂ ಹೋಗಿದ್ದು, ಇದೀಗ ಜಿಲ್ಲೆಯ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಹೀಗಿದ್ದರೂ ಅಡಿಕೆ ಬೆಳೆಯುವ ಪ್ರಮುಖ ಜಿಲ್ಲೆಯ ಮುಖ್ಯಮಂತ್ರಿಗಳು, ಶಾಸಕರು, ಅಧಿಕಾರಿಗಳು ರಾಜ್ಯದ ಆಡಳಿತದ ಹೊಣೆಯನ್ನು ಅಲಂಕರಿಸುವ ಇವುರುಗಳು ಈ ಬಗ್ಗೆ ಯಾವೊಂದು ಪರಿಹಾರ ಕ್ರಮಗಳನ್ನು ಈ ತನಕ ತೆಗೆದುಕೊಳ್ಳದಿರುವುದು ಈ ಬೆಳೆಯ, ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಇದರೊಂದಿಗೆ ಸಾಲ ಮನ್ನವಾಗದಿರುವುದು, ರೂಪಾಯಿಯ ಅಪಮೌಲ್ಯ, ರಸಗೊಬ್ಬರ ಮತ್ತಿತರ ಪೂರಕ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ದಿಕ್ಕೆಟ್ಟಿರುವ ಕೃಷಿಕರಿಗೆ ಇದೊಂದು ಗಾಯಕ್ಕೆಳೆದ ಬರಿಯಂತಾಗಿದೆ.

.. ಜಿಲ್ಲೆಯ ಆಭಿವೃದ್ದಿ ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಯ ಪಾತ್ರ:

ಈ ಮೊದಲೇ ತಿಳಿಸಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಈ ಬೆಳೆಯ ಪಾತ್ರ ಮಹತ್ತರವಾದದ್ದು. ಈ ಬಗ್ಗೆ ಹಲವು ಉದಾಹರಣೆಗಳನ್ನು ನಾವಿಲ್ಲಿ ಕಂಡುಕೊಳ್ಳಬಹುದು.

ವಿಸ್ತೀರ್ಣ ಮತ್ತು ಉತ್ಪಾದನೆ:

ಕರ್ನಾಟಕ ರಾಜ್ಯದಲ್ಲಿ ಅಡಿಕೆಯನ್ನು ಬೆಳೆಸಲಾಗುತ್ತಿರುವ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಇವುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯೊಂದೇ ರಾಜ್ಯದ ಒಟ್ಟಾರೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಶೇಕಡಾ ೩೫ನ್ನು ಹೊಂದಿರುತ್ತದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವನ್ನು ಬೆಳ್ತಂಗಡಿ ತಾಲೂಕುಗಳು ಈ ಬೆಳೆಯನ್ನು ಹೆಚ್ಚಿನ ಪ್ರದೇಶಗಲಲ್ಲಿ ಬೆಳೆಸುತ್ತಿದ್ದು ಈ ಎಲ್ಲಾ ದೃಷ್ಟಿಯಲ್ಲಿ ಈ ತಾಲೂಕುಗಳ ಮತ್ತು ಜಿಲ್ಲೆಯ ಅಭಿವೃದ್ದಿ ವಿಚಾರಗಳಲ್ಲಿ ಈ ಬೆಳೆಯ ಪಾತ್ರ ಹಿರಿದಾಗಿದೆ.

ವ್ಯವಸಾಯೋತ್ಪನ್ನ ಮಾರುಕಟ್ಟೆಯ ವಹಿವಾಟಿನಲ್ಲಿ ಅಡಿಕೆಯ ಪಾತ್ರ:

ಈ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬರುವ ವಹಿವಾಟುಗಳಲ್ಲಿ ಅಡಿಕೆಯ ಪಾತ್ರ ಮಹತ್ತರವಾದದ್ದು. ಅಂಕಿ ಅಂಶದ ಆಧಾರವನ್ನು ನಾವಿಲ್ಲಿ ಗಣನೆಗೆ ತೆಗೆದುಕೊಂಡಲ್ಲಿ, ಈ ವಹಿವಾಟುಗಳಲ್ಲಿ ಅಡಿಕೆಯ ಪಾಲು ಶೇಕಡಾ ೮೦ಕ್ಕಿಂತಲೂ ಮೇಲಾಗಿದೆ. ಅಂದರೆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ನಡೆಸುತ್ತಿರುವ ಒಟ್ಟಾರೆ ವಹಿವಾಟುಗಳ ಶೇಕಡಾ ೮೦ ಕೂಡಾ ಅಡಿಕೆಯ ವಹಿವಾಟಿನಿಂದಲೇ ಕೂಡಿದ್ದು, ಈ ಒಂದು ವಿಚಾರವು ಸ್ಪಷ್ಟವಾಗಿ ತಿಳಿಸುವುದೇನೆಂದರೆ ಜಿಲ್ಲೆಯ ಆರ್ಥಿಕಾಭಿವೃದ್ಧಿಯಲ್ಲಿ ಅಡಿಕೆಯ ಪಾತ್ರ ಹಿರಿದಾಗಿದೆ ಎಂಬುದು.

ಶಿಕ್ಷಣ ಕ್ಷೇತ್ರದ ಅಭಿವೃದ್ದಿ :

ಜಿಲ್ಲೆಯಲ್ಲಿರುವ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಅಡಿಕೆ ಬೆಳೆಗಾರರ ಕೊಡುಗೆ ಅಪಾರ. ಈ ಸಂಸ್ಥೆಗಳಲ್ಲಿರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಾಗಲಿ, ಅಧ್ಯಾಪಕರಾಗಲಿ ಒಂದಲ್ಲ ಒಂದು ರೀತಿಯಿಂದ ಅಡಿಕೆ ಬೆಳೆಯಮೂಲದವರಾಗಿದ್ದು ಈ ನಿಟ್ಟಿನಲ್ಲಿ ಈ ಬೆಳೆಗೆ ಬರುವ ಯಾವುದೇ ಸಮಸ್ಯೆಗಳು ಈ ಸಂಸ್ಥೆಗಳ ಅಭಿವೃದ್ಧಿ ಯಾ ಬೆಳವಣಿಗೆಯನ್ನು ಏರುಪೇರು ಮಾಡಬಲ್ಲದಾಗಿದೆ.

ಉದ್ಯೋಗ ಕ್ಷೇತ್ರ :

ಅಡಿಕೆ ಬೆಳೆಯಿಂದಾಗಿ ಇಂದು ನಮ್ಮ ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಉದ್ಯೋಗಾವಕಾಶಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿರ್ಮಾಣಗೊಂಡಿದ್ದು ಈ ಬೆಳೆಗೆ ಯಾವುದೇ ತೊಂದರೆ ಬಂದಲ್ಲಿ ಅದು ಉದ್ಯೋಗ ಕ್ಷೇತ್ರಕ್ಕೆ ಕೊಡಲಿಯೇಟನ್ನು ಕೊಡಬಹುದಾಗಿದೆ.

ಈ ಎಲ್ಲಾ ವಿಚಾರಗಳಲ್ಲದೆ ಜಿಲ್ಲೆಯ ಇತರೇ ವ್ಯಾಪಾರಗಳು, ಸಾರಿಗೆ ಇತ್ಯಾದಿ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಈ ಬೆಳೆಯ ಪಾತ್ರ ಎಷ್ಟೆಂದರೂ ಸಾಲದು. ಈ ದೃಷ್ಟಿಯಿಂದ ಈ ಬೆಳೆಯ, ಬೆಳೆಗಾರರ ಬಗ್ಗೆ ನಮ್ಮಲ್ಲೀಗ ಒಂದು ದೂರ ದೃಷ್ಟಿಯ ಯೋಜನೆಯ ತಯಾರಿಕೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೆಳಗೆ ಸೂಚಿಸಿದ ಪರಿಹಾರೋಪಾಯಗಳನ್ನು ಸರಕಾರ ಈಗಿಂದಿಗಲೇ ಕಾರ್ಯರೂಪಕ್ಕೆ ತರಬೇಕಾದ ಅಗತ್ಯವಿದೆ. ಅವುಗಳೆಂದರೆ:

() ಪ್ರಕೃತ ಸಂಭವಿಸಿರುವ ಕೊಳೆ ರೋಗದಿಂದಾದ ನಷ್ಟವನ್ನು ಸರಕಾರವು ಸಂಬಂಧಪಟ್ಟ ವಿಭಾಗಗಳ ಅಧಿಕಾರಗಳ ಮೂಲಕ ಸರಿಯಾಗಿ ಅಂದಾಜಿಸಿ, ತಕ್ಷಣ ಪರಿಹಾರಕ್ರಮಗಳನ್ನು ಕೈಗೊಳ್ಳಲೇ ಬೇಕು. ಈ ಬೆಳೆಯನ್ನು ಬೆಳೆಸುತ್ತಿರುವವರು ಹೆಚ್ಚಿನವರು ಸಣ್ಣ ರೈತರೇ ಆಗಿರುವುದರಿಂದ ಅವರ ಜೀವನ ಮಟ್ಟ ಕುಸಿಯದಂತೆ ನೋಡಿಕೊಳ್ಳಲು ಈ ಕ್ರಮವನ್ನು ಈಗಿಂದೀಗಲೇ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರವು ದೀರ್ಘಕಾಲಿನ ಬಡ್ಡಿ ರಹಿತ ಸಾಲ, ಕಡಿಮೆ ಬೆಲೆಗೆ ರಸಗೊಬ್ಬರದ ಪೂರೈಕೆ ಇತ್ಯಾದಿಗಳನ್ನು ರೈತರಿಗೆ ಒದಗಿಸಬೇಕು.
() ಅಡಿಕೆ ಬೆಳೆಗೆ ವಿಮಾ ಯೋಜನೆಯನ್ನು ಒದಗಿಸುವುದು.
() ಈಗಿರುವ ಅಡಿಕೆ ಬೆಳೆಗಾರರ ಸಂಘವನ್ನು ಇನ್ನಷ್ಟು ಪ್ರಬಲಗೊಳಿಸುವುದು. ಈ ನಿಟ್ಟಿನಲ್ಲಿ ಈ ಸಂಘವು ಪ್ರತಿಯೊಂದು ಗ್ರಾಮದಿಂದಲೂ ಒಬ್ಬ ಪ್ರತಿನಿಧಿಯನ್ನು ಆರಿಸಿ ಕಾಲಕ್ಕೆ ಆಯಾಯ ಗ್ರಾಮದ ಕುಂದು ಕೊರತೆಗಳನ್ನು (ಅಡಿಕೆ ಬೆಳೆಯ, ಬೆಳೆಗಾರರ) ನೀಗಿಸಲು ಶ್ರಮಿಸಬೇಕು. ಇದರೊಂದಿಗೆ ಈ ಸಂಘ ತನ್ನ ಆರ್ಥಿಕ ಬಲವನ್ನು ವೃದ್ಧಿಸಬೇಕು, ಈ ನಿಟ್ಟಿನಲ್ಲಿ ಅದು ಪ್ರತಿಯೊಬ್ಬ ಬೆಳೆಗಾರನಿಂದಲೂ ಆತನ ಆರ್ಥಿಕತೆಗೆ ಅನುಗುಣವಾಗಿ ಒಂದು ನಿರ್ದಿಷ್ಟ ಬಂಡವಾಳವನ್ನು ಸಂಗ್ರಹಿಸಿ ಅದನ್ನು ಆಪತ್ಕಾಲೀನ ಬಂಡವಾಳವೆಂದು ತನ್ನಲ್ಲಿಟ್ಟುಕೊಂಡು, ಸಮಯವೊದಗಿ ಬಂದಾಗ ಉಪಯೋಗವು ಅದರ ವಿನಿಯೋಗ ಮಾಡಬೇಕು. ಈ ವಿನಿಯೋಗವು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಸರಕಾರದ ಮುಂದೆ ಪ್ರತಿನಿಧಿಸಲು, ಅಡಿಕೆಯ ಮಾರುಕಟ್ಟೆಯ ಅಭಿವೃದ್ಧಿ ಇತ್ಯಾದಿ ಕಾರ್ಯಕ್ರಮಗಳಾಗಿರಬೇಕು. ಅಲ್ಲದೆ ಈ ಬಂಡವಾಳವನ್ನು ಕಷ್ಟಕ್ಕೊಳಗಾಗಿರುವ ಕೃಷಿಕರಿಗೆ ಸಾಲವನ್ನೊದಗಿಸಲು ಉಪಯೋಗಿಸಬಹುದಾಗಿದೆ.
() ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದಲೇ ಸ್ಥಾಪಿಸಿ ಕಾರ್ಯನಿಭಾಯಿಸುತ್ತಿರುವ ಕ್ಯಾಂಪ್ಕೋ ಸಂಸ್ಥೆಯು ಈ ಅಡಿಕೆ ಬೆಳೆಗಾರರಿಂದ ಸಂಗ್ರಹಿಸಿರುವ ಶೇರು ಬಂಡವಾಳದ ಆಧಾರದ ಮೇಲೆ ಯಾ ಅವರ ವಹಿವಾಟುಗಳ ಆಧಾರದ ಮೇಲೆ ಕಾಲಕ್ಕೆ ತಕ್ಕಂತೆ ರೈತರ ಸಮಸ್ಯೆಗಳಿಗನುಗುಣವಾಗಿ ಸಹಾಯ ಹಸ್ತವನ್ನು ಚಾಚಬೇಕು.
() ಅಡಿಕೆಯನ್ನು ಬೆಳೆಸುತ್ತಿರುವ ಪ್ರತಿ ಗ್ರಾಮ ಗ್ರಾಮಗಳಲ್ಲೂ ಈ ಬೆಳೆಗಾರರ ಪ್ರಬಲ ಸಂಘಟನೆ ನಮ್ಮಲ್ಲೀಗ ಆಗಬೇಕಾದ ಅಗತ್ಯವಿದೆ. ಈ ರೀತಿಯಾದಲ್ಲಿ ಈ ಸಂಘಟನಾ ಶಕ್ತಿಯು ಬೆಳೆಗಾರರ ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.

ಅಡಿಕೆ ಬೆಳೆಯ ಕ್ಷೇತ್ರದಲ್ಲಿ ಈ ತನಕ ಕಂಡು ಬಂದ ಸಂಗತಿಯೆಂದರೆ “ಸಂಕಟ ಬಂದಾಗ ವೆಂಕಟರಮಣ” ಉದಾ: ೧೯೭೦ರ ದಶಕದಲ್ಲಿ ಅಡಿಕೆ ಧಾರಣೆ ಕೆಳಬಂದಾಗ ಕಂಗಾಲಾದ ರೈತರು ಹಾಗೂ ಹೀಗೂ ಮಾಡಿ ಕ್ಯಾಂಪ್ಕೋ ಸಂಸ್ಥೆಯನ್ನು ರಚಿಸಿದರು. ಇದೀಗ ಕೊಳೆ ರೋಗವು ಉಲ್ಪಣಿಸಿರುವುದರಿಂದ ಇನ್ನೇನು ಎಂಬಂತಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮಲ್ಲಿ ಶಾಶ್ವತ ಪರಿಹಾರ ಈ ಬೆಳೆಯ ಬಗ್ಗೆ ಕಂಡುಕೊಳ್ಳದಿರುವುದು ಅಡಿಕೆ ಬೆಳೆಯ ಹಿತದೃಷ್ಟಿಯಿಂದಲೇ ನಮ್ಮಲ್ಲಿಂದು ಅವೆಷ್ಟೋ ಸಂಶೋಧನೆಗಳು ಆಗಿದ್ದರೂ ಈ ತನಕವೂ ಅವಾವುದೂ ಶಾಶ್ವತ ಪರಿಹಾರ ಒದಗಿಸದೇ ಇರುವುದು. ಈ ಬೆಳೆಯ ಬೆಳೆಗಾರರ ದುರದೃಷ್ಟ; ಅಡಿಕೆ ಬೆಳೆಗಾರನಿಗಿಂದು ರೋಗಗಳನ್ನು ಎದುರಿಸಬಲ್ಲ, ಮಳೆಗಾಲದಲ್ಲಿ ಮರಕ್ಕೆ ಏರದೆ ಕೆಳಗಿನಿಂದಲೇ ಔಷಧಿ ಸಿಂಪಡಿಸಬಲ್ಲ ವ್ಯವಸ್ಥೆಗಳಾಗಬೇಕು. ಹೀಗಾದಲ್ಲಿ ಮಾತ್ರ ಅಡಿಕೆ ಬೆಳೆಯುಳಿಯಬಲ್ಲದು. ಇಲ್ಲವಾದಲ್ಲಿ ಆಫ್ರೀಕಾ ದೇಶಗಳಲ್ಲಿ ಇಂದು ಕಂಡು ಬರುತ್ತಿರುವಂತೆ ನಮ್ಮಲ್ಲಿ ವಾಣಿಜ್ಯ ಬೆಳೆಗಳ ನಾಶವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಯೇ ಆಗದಿರಬಹುದು. ಮುಂದೊಂದು ದಿನ ಈ ಬೆಳೆಯು ನಮ್ಮಲ್ಲಿ ನಶಿಸಬಹುದು ಮತ್ತು ಈಗ ಈ ಉತ್ಪನ್ನವನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ಇಂಡೋನೇಶಿಯಾ, ಶ್ರೀಲಂಕಾ, ಬರ್ಮಾ ಮತ್ತಿತರು ರಾಷ್ಟ್ರಗಳು ತಮ್ಮ ಸಾರ್ವಭೌಮತ್ವವನ್ನು ಮೆರೆಸಬಹುದು. ಆದ್ದರಿಂದ ರಾಷ್ಟ್ರದ, ರಾಜ್ಯದ ಆರ್ಥಿಕಾಭಿವೃದ್ಧಿ ಮತ್ತು ಅದರಲ್ಲೂ ಮುಖ್ಯವಾಗಿ ಜಿಲ್ಲೆಯ ಅಭಿವೃದ್ಧಿ ಮತ್ತು ಬೆಳೆವಣಿಗೆಯ ದೃಷ್ಟಿಯಿಂದ ಈ ಬೆಳೆಯ ಸಮಸ್ಯೆಗಳ ಬಗ್ಗೆ ಈಗಿಂದೀಗಲೇ ಚರ್ಚಿಸಿ ಅದಕ್ಕೊಂದು ಯೋಗ್ಯ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯ ನಮಗೀಗ ಇದೆ.