ಭಾರತದಲ್ಲಿ ಅಡಿಕೆ ಉತ್ಪಾದನೆ ಮತ್ತು ಅದರ ಸಮಸ್ಯೆಗಳುಯೋಜನಾ ಎಪ್ರಿಲ್೧೯೯೧
– ಡಾ. ವಿಘ್ನೇಶ್ವರ ವರ್ಮುಡಿ.

ದೇಶದಲ್ಲೀಗ ಅಡಿಕೆಯ ಉತ್ಪಾದನೆಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ್ದರೂ ಈ ಬೆಳೆಯನ್ನು ಬೆಳೆಸುತ್ತಿರುವ ಕೃಷಿಕರಿಗೆ ಹಲವಾರಿ ತೊಂದರೆ, ಸಮಸ್ಯೆಗಳು ಆಗಾಗ ಕಾಡುತ್ತಿರುತ್ತದೆ. ಈ ಸಮಸ್ಯೆಗಳೆಂದರೆ:

. ನಮ್ಮ ದೇಶದಲ್ಲಿ ಅಡಿಕೆಯನ್ನು ಹೆಚ್ಚಾಗಿ ಸಣ್ಣ ರೈತರು ಅಥವಾ ಸಣ್ಣ ಹಿಡುವಳಿದಾರರು ಬೆಳೆಸುತ್ತಿದ್ದು, ಇವರಲ್ಲಿ ಈ ಬೆಳೆಯನ್ನು ಅಧಿಕವಾಗಿ ಬೆಳೆಯಲು ಬೇಕಾದ ಸಾಮರ್ಥ್ಯವಿಲ್ಲ. ಇದಕ್ಕೆ ಕಾರಣಗಳು ಹಲವು. ಒಂದನೆಯದಾಗಿ, ಈ ಬೆಳೆಯಲ್ಲಿ ಅಧಿಕ ಉತ್ಪಾದನೆಯನ್ನು ಸಾಧಿಸಲು ಅದಕ್ಕೆ ಹೆಚ್ಚಿನ ಬಂಡವಾಳದ ಹೂಡಿಕೆಯ ಅಗತ್ಯವಿದ್ದು, ಇದು ಈ ರೈತರಲ್ಲಿಲ್ಲ. ಎರಡನೆಯದಾಗಿ, ಇಂದಿನ ದಿನಗಳಲ್ಲಿ ಕೂಲಿಗಾರರ ಸಂಬಳ, ರಸಗೊಬ್ಬರದ ಬೆಲೆ ಮತ್ತಿತರೇ ಪೂರಕ ವಸ್ತುಗಳ ಬೆಲೆ ಏರುತ್ತಿದ್ದು, ಈ ಕೃಷಿಕರು ಅದನ್ನು ಭರಿಸಲಾರದ ಸ್ಥಿತಿಯಲ್ಲಿದ್ದಾರೆ.

. ಏರು ಪೇರಾಗುತ್ತಿರುವ ಅಡಿಕೆ ಧಾರಣೆಯಿಂದಾಗಿ ಕೃಷಿಕನಿಗೆ ಯೋಗ್ಯ ಬೆಲೆ ದೊರಕುತ್ತಿಲ್ಲ. ಕೆಲವೊಮ್ಮೆ ಉತ್ಪಾದನಾ ವೆಚ್ಚವೇ ಹೆಚ್ಚಾಗಿ ಇದರ ಬೆಲೆ ಇಳಿಯುತ್ತಿರುವುದು ಸಾಮಾನ್ಯವಾಗಿ ಕಂಡು ಬರಬಹುದಾದಂತಹ ಪರಿಸ್ಥಿತಿಯಾಗಿದೆ.

. ಅಡಿಕೆ ಬೆಳೆಯನ್ನು ಆರಂಭಿಸಲು ಅಧಿಕ ಪ್ರಮಾಣದ ಬಂಡವಾಳವನ್ನು ಹೂಡಬೇಕಾಗಿದ್ದು, ಇದರಿಂದ ಪ್ರತಿಫಲವನ್ನು ಏಳೆಂಟು ವರ್ಷಗಳ ಬಳಿಕವಷ್ಟೇ ನಿರೀಕ್ಷಿಬಹುದಾಗಿದ್ದು, ಇದಕ್ಕಾಗಿ ಕೃಷಿಕರಿಗೆ ಅಧಿಕ ಮಟ್ಟದ, ದೀರ್ಘಕಾಲೀನ ಸಾಲದ ಅವಶ್ಯಕತೆ ಇದ್ದು, ಇದರ ಪೂರೈಕೆ ಈಗ ಸರಿಯಾಗಿ ಆಗುತ್ತಿಲ್ಲ.

. ಅಡಿಕೆಯನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಸ್ಥಳೀಯವಾಗಿ ಇಲ್ಲದಿರುವುದು.

. ಸಾಗಣೆ ಮತ್ತು ಶೇಖರಣಾ ವ್ಯವಸ್ಥೆಗಳ ಕೊರತೆ.

ಬೆಳೆಗಾರರ ದೃಷ್ಟಿಯಿಂದ ಇವೆಲ್ಲಾ ಪ್ರಮುಖ ಸಮಸ್ಯೆಗಳಾಗಿ ಕಂಡು ಬರುತ್ತಿದ್ದು, ಇವುಗಳಲ್ಲದೇ ಒಟ್ಟಾರೆಯಾಗಿ ಅಡಿಕೆ ಬೆಳೆಯನ್ನೇ ಪರಿಗಣನೆಗೆ ತೆಗೆದುಕೊಂಡಲ್ಲಿ ಇದರಲ್ಲಿ ಇನ್ನೂ ಕೆಲವು ಸಮಸ್ಯೆಗಳು ಎದ್ದು ಕಾಣುತ್ತಿವೆ; ಅವುಗಳೆಂದರೆ:

() ಅಡಿಕೆಯ ಆಂತರಿಕ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಮಿಸ್ತರಣೆಯಾಗದಿರುವುದು.

() ಅಡಿಕೆ ಮಾರುಕಟ್ಟೆಯ ಬಗ್ಗೆ ಯಾವುದೇ ರಿತಿಯ ಪರಿಪೂರ್ಣ ಅಧ್ಯಯನವಾಗದಿರುವುದು.

() ಅಡಿಕೆ ಇನ್ನಿತರೇ ಉಪಯೋಗಗಳ ಬಗ್ಗೆ ಹೆಚ್ಚಿನ ಸಂಶೋಧನೆಯಾಗದಿರುವುದು.

() ಬಳಕೆದಾರನ ರುಚಿಗೆ ತಕ್ಕಂತೆ ಅಡಿಕೆಯ ಪೂರೈಕೆಯಾಗದಿರುವುದು.
() ಅಡಿಕೆಯ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಪ್ರಚಾರ ಕೈಗೊಳ್ಳದಿರುವುದು.

() ಅಡಿಕೆಯ ಬೆಳೆಯಲ್ಲಿ ಕಂಡುಬರುತ್ತಿರುವ ರೋಗಗಳನ್ನು ಹೋಗಲಾಡಿಸಲು ಕೈಗೊಂಡ ಕ್ರಮಗಳು ಸಾಲದಾಗಿದ್ದು, ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ಉತ್ಪಾದನೆಯಲ್ಲಿ ಏರು ಪೇರಾಗುತ್ತಿದೆ.

ಮೇಲಿನ ಈ ಸಮಸ್ಯೆಗಳಿಂದಾಗಿ, ನಮ್ಮಲ್ಲಿಂದು ಅಡಿಕೆಯ ಧಾರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಏರುಪೇರು ಕಂಡು ಬರುತ್ತಿದ್ದು, ಇದರ ಪ್ರತಿಫಲವಾಗಿ ಅಡಿಕೆ ಕೃಷಿಕರು ಬಹಳಷ್ಟು ತೊಂದರೆಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮಲ್ಲಿಂದು ಈ ಕೃಷಿಕರ ಹಿತದೃಷ್ಟಿಯಿಂದ, ಬೆಳೆಯ ದೃಷ್ಟಿಯಿಂದ ಮತ್ತು ರಾಜ್ಯಗಳ ಮತ್ತು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸೂಕ್ತ ರೀತಿಯ ಪರಿಹಾರೋಪಾಯಗಳ ಅಗತ್ಯವಿದೆ. ಇದಕ್ಕಾಗಿ ಕೆಳಗೆ ಸೂಚಿಸಿದ ಕೆಲವು ಹರಿಹಾರೋಪಾಯಗಳು ಪ್ರಯೋಜನಕಾರಿಯಾಗಬಲ್ಲವು.

() ದೇಶವೀಗ ಅಡಿಕೆಯ ಉತ್ಪಾದನೆಯಲ್ಲಿ ಸ್ವಾಲಂಬನೆಯನ್ನು ಕಂಡಿದ್ದು, ಇನ್ನು ಮುಂದೆ ಈ ಬೆಳೆಯ ವಿಸ್ತರಣಾ ಕಾರ್ಯವನ್ನು ಸ್ಥಗಿತಗೊಳಿಸಲು ಸರಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ದೇಶದ ಒಟ್ಟಾರೆ ಉತ್ಪಾದನೆ ಇನ್ನಷ್ಟು ಹೆಚ್ಚಾಗಿ ಇದರ ಬೆಲೆ ಇನ್ನಷ್ಟು ತಗ್ಗಬಹುದು.

() ಅಡಿಕೆ ಬೆಳೆಯ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸರಕಾರ ರಿಯಾಯಿತಿ ದರದಲ್ಲಿ ರಸಗೊಬ್ಬರ, ಯಂತ್ರೋಪಕರಣ, ಇನ್ನಿತರೇ ಪೂರಕ ವಸ್ತುಗಳನ್ನು ಸಕಾಲದಲ್ಲಿ ಕೃಷಿಕರಿಗೆ ಪೂರೈಸಬೇಕು.

() ಸಹಕಾರಿ ಸಂಘಗಳು, ವಾಣಿಜ್ಯ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ದೀರ್ಘಕಾಲೀನ ಸಾಲವನ್ನು ಕೃಷಿಕರಿಗೆ ಪೂರೈಸಬೇಕು. ಇದಕ್ಕಾಗಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕು ಸಕಾಲದಲ್ಲಿ ಯೋಗ್ಯ ನೀತಿ ಮತ್ತು ಯೋಜನೆಗಳನ್ನು ಹಾಕಿಕೊಳ್ಳಬೇಕು.

() ಅಡಿಕೆಯನ್ನು ಉತ್ಪಾದಿಸುತ್ತಿರುವ ಎಲ್ಲಾ ಹಳ್ಳಿಗಳಲ್ಲೂ ಅಡಿಕೆಯ ಖರೀದಿಗಾಗಿ ಸಹಕಾರಿ ಸಂಘ ಅಥವಾ ಇನ್ನಿತರೇ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಬೇಕು.

() ಎಲ್ಲಾ ಹಳ್ಳಿಗಳಲ್ಲೂ, ಎಲ್ಲಾ ಕಾಲದಲ್ಲೂ ಬಳಸಬಹುದಾದ ಸಾರಿಗೆ ವ್ಯವಸ್ಥೆಯನ್ನು ಹೊಂದಬೇಕು.

() ಅಡಿಕೆಯ ಇನ್ನಿತರೇ ಉಪಹೋಗಗಳನ್ನು ಹೆಚ್ಚಿಸಲು ಹೆಚ್ಚಿನ ಶ್ರಮದ ಸಂಶೊಧನೆಯನ್ನು ಕೈಗೊಳ್ಳಬೇಕು. ಅಡಿಕೆಯನ್ನು ಪೇಸ್ಟ್‌, ಚೂಯಿಂಗಮ್‌, ಔಷಧಿಗಳ ಉತ್ಪಾದನೆ, ಮತ್ತಿತರೇ ವಸ್ತುಗಳ ಉತ್ಪಾದನೆಯನ್ನು ಮಾಡಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು.

() ಅಡಿಕೆಯನ್ನು ಆಂತರಿಕವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಬಳಸಲು ಹೊಸ ಮಾರುಕಟ್ಟೆಗಳ ಆವಿಷ್ಕಾರ ಮಾಡಬೇಕು ಮತ್ತು ಈ ಮಾರುಕಟ್ಟೆಗಳಲ್ಲಿ ಅಧಿಕ ಮಟ್ಟದ ಪ್ರಚಾರವನ್ನು ಕೈಗೊಳ್ಳಬೇಕು.

() ಬಳಕೆದಾರರ ರುಚಿಗೆ ತಕ್ಕಂತೆ ವಿಧ ವಿಧವಾದ ಅಡಿಕೆಯನ್ನು, ಉದಾಹರಣೆ: ಹಸಿ ಅಡಿಕೆ, ಪುಡಿ ಅಡಿಕೆ, ಹುರಿದ ಅಡಿಕೆ ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು.

() ಅಡಿಕೆ ಧಾರಣೆಯಲ್ಲಿ ಕಂಡು ಬರುತ್ತಿರುವ ಏರುಪೇರನ್ನು ತಪ್ಪಿಸಲು ಸರಕಾರ ವರ್ಷದಿಂದ ವರ್ಷಕ್ಕೆ ಒಟ್ಟಾರೆ ಉತ್ಪಾದನಾ ವೆಚ್ಚ ಮತ್ತು ಉತ್ಪಾದನೆಯನ್ನು ಗಣನೆಗೆ ತೆಗೆದುಕೊಂಡು ಯೋಗ್ಯ ಬೆಂಬಲ ಬೆಲೆಯನ್ನು ನಿರ್ಧರಿಸಬೇಕು. ಈ ನಿಟ್ಟಿನಲ್ಲಿ ಅಡಿಕೆ ಬೆಳೆಯುತ್ತಿರುವ ರಾಜ್ಯಗಳು ಅವುಗಳದ್ದೇ ಆದ ಒಂದು ಸಮಿತಿಯನ್ನು ಹೊಂದಿರಬೇಕು. ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಒಂದು ಸಮಿತಿಯ ರಚನೆಯಾಗಬೇಕು. ಈ ಸಮಿತಿಗಳು ಕಾಲಕಾಲಕ್ಕೆ ಸರಿಯಾದ ಸಮಿಕ್ಷೆಯನ್ನು ನಡೆಸಿ ಸರಕಾರಕ್ಕೆ ಮಾಹಿತಿಯನ್ನೊದಗಿಸಿ ಕೃಷಿಕರಿಗೆ ಯೋಗ್ಯ ಬೆಲೆಯನ್ನು ದೊರಕಿಸಲು ಸಹಾಯಕಾರಿಯಾಗಿರಬೇಕು. ಈ ನಿಟ್ಟಿನಲ್ಲಿ ಈ ಸಮಿತಿಗಳಲ್ಲಿ ಕೃಷಿಕರ, ವ್ಯಾಪಾರಿಗಳ, ಬಳಕೆದಾರರ ಮತ್ತು ಸರಕಾರದ ಪ್ರತಿನಿಧಿಗಳಿರಬೇಕು.

(೧೦) ತಮ್ಮ ಸ್ವಂತ ಹಿತದೃಷ್ಟಿಯಿಂದ ಅಡಿಕೆ ಕೃಷಿಕರು ತಮ್ಮದೇ ಆದೊಂದು ಪ್ರಬಲ ಸಂಘವನ್ನು ಹೊಂದುವ ಅವಶ್ಯಕತೆ ಇದೆ. ಈ ಸಂಘ ಅಡಿಕೆ ಕೃಷಿಕರ ಉದ್ದಾರಕ್ಕಾಗಿ ಶ್ರಮಿಸಬೇಕು.

ಮೇಲೆ ತಿಳಿಸಿದ ಈ ಎಲ್ಲಾ ಪರಿಹಾರೋಪಾಯಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಲ್ಲಿ ಅಡಿಕೆ ಬೆಳೆಗಾರರಿಗೆ, ಬೆಳೆಗೆ, ಧಾರಣೆಗೆ ಇನ್ನು ಮುಂದೆ ಒದಗಬಹುದಾದಂತಹ ಸಮಸ್ಯೆಗಳು ಕಡಿಮೆಯಾಗಬುಹುದು. ಇಲ್ಲವಾದಲ್ಲಿ ಬರಲಿರುವ ದಿನಗಳು ಅಡಿಕೆಯ ಮಟ್ಟಿಗೆ ಕಠಿಣ ದಿನಗಳಾಗಬಹುದು.