ಕ್ಯಾಂಪ್ಕೋದ ಮುಂದಿರುವ ಅವಕಾಶಗಳು ಹೊಸದಿಗಂತ ೧೭೦೧೧೯೯೧.
– ಡಾ. ವಿಘ್ನೇಶ್ವರ ವರ್ಮುಡಿ.

ಸಹಕಾರಿ ಸಂಘ ಯಾ ಸಂಸ್ಥೆಗಲು ಯಶಸ್ಸನ್ನು ಸಾಧಿಸುವುದೆಂದರೆ ನಮ್ಮಲ್ಲಿ ಅದೊಂದ ದೊಡ್ಡ ಸಂಗತಿ. ಕಾರಣ ನಮ್ಮಲ್ಲಿಂದು ನಾನಾ ರೀತಿಯ ಸಹಕಾರಿ ಸಂಸ್ಥೆಗಳು ಇದ್ದು, ಇವುಗಳಲ್ಲಿ ಹೆಚ್ಚಿನವು ವರ್ಷಗಳಲ್ಲಿ ನಷ್ಟವನ್ನು ಅನುಭವಿಸಲಾರಂಭಿಸಿ ಈಗೀಗ ಮುಚ್ಚಿಹೋಗುವ ಪರಿಸ್ಥಿತಿಯಲ್ಲಿವೆ. ಭಾರತದಲ್ಲಿಂದು ಈ ರಂಗದಲ್ಲಿ ಕೇವಲ ಬೆರಳೆಣೆಕೆಯಷ್ಟು ಸಂಸ್ಥೆಗಳು ಯಶಸ್ಸು ಯಾ ಅಭಿವೃದ್ಧಿಯನ್ನು ಕಂಡು ಕೊಂಡಿವೆ. ಇದಕ್ಕೊಂದು ಉತ್ತಮ ನಿದರ್ಶನ ನಮ್ಮ ಜಿಲ್ಲೆಯಲ್ಲೇ ಸ್ಥಾಪಿತವಾಗಿ ಯಶಸ್ಸಿನ ಹಾದಿ ಹಿಡಿದಿರುವ ಕ್ಯಾಂಪ್ಕೋ ಸಂಸ್ಥೆ.

ನಮ್ಮಲ್ಲಿ ಪ್ರತಿಯೊಬ್ಬನಿಗೂ ತಿಳಿದಿರುವಂತೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯಾಗಿದ್ದು, ಈ ಬೆಳೆಯಲ್ಲಾಗುವ ಆಗುಹೋಗುಗಳು ಈ ಜಿಲ್ಲೆಗಳ ಆರ್ಥಿಕ, ಸಾಮಾಜಿಕ ಮತ್ತು ಇನ್ನಿತರ ಅಭಿವೃದ್ಧಿ ಮತ್ತು ಬೆಳವಣಿಗೆಯ ಮೇಲೆ ನಿರ್ದಿಷ್ಠವಾದ ಪರಿಣಾಮವನ್ನು ಬೀರುತ್ತಿದೆ. ಅಡಿಕೆಯ ಉತ್ಪಾದನೆ ಅಥವಾ ಬೆಲೆಯಲ್ಲಾಗುವ ಏರುಪೇರುಗಳು ಈ ಜಿಲ್ಲೆಗಳ ಪ್ರಮುಖ ಕೇಂದ್ರಗಳಲ್ಲಿನ ವೈವಿಧ್ಯಮಯ ವ್ಯಾಪಾರ, ವಹಿವಾಟುಗಳ ಮೇಲೆ ಖಚಿತವಾದ ಪ್ರಭಾವನ್ನು ಹೊಂದಿದೆ.

೧೯೭೦ರ ದಶಕದ ಆದಿಯಲ್ಲಿ ಈ ಜಿಲ್ಲೆಗಳ ಅಡಿಕೆ ಬೆಳೆಗಾರರ ಮೇಲೊಂದು ಪ್ರಹಾರ ಬಿತ್ತು. ಆ ಸಮಯದಲ್ಲಿ ಅಡಿಕೆಯ ಬೆಲೆಯು ಗಮನಾರ್ಹವಾಗಿ ಕೆಳಗಿಳಿಯಿತು. ಆಗಿದ್ದ ಬೆಲೆಯು ೭೦ಕ್ಕೆ ಮೊದಲು ಸಿಗುತ್ತಿದ್ದ ಬೆಲೆಯ ಅರ್ಧದಷ್ಟಾಗಿ ಅದು ಕ್ವಿಂಟಾಲೊಂದರ ಕೇವಲ ರೂಪಾಯಿ ೩೦೦ಕ್ಕೆ ಇಳಿದಿತ್ತು. ಇದರಿಂದಾಗಿ ಈ ಜಿಲ್ಲೆಗಳ ಮತ್ತು ಇತರ ಅಡಿಕೆ ಬೆಳೆಯುವ ಜಿಲ್ಲೆಗಳ ಅಡಿಕೆ ಬೆಳೆಗಾರರು ಮಾತ್ರವಲ್ಲದೆ, ಜನ ಸಾಮಾನ್ಯರು ವ್ಯಾಪಾರಸ್ಥರು ಕಂಗಾಲಾದರು. ಬೆಳೆಗಾರನ ಜೀವನ ಮಟ್ಟವು ಕುಸಿಯಲಾರಂಭಿಸಿತು. ಇಷ್ಟಕ್ಕೆಲ್ಲಾ ಪ್ರಮುಖ ಕಾರಣ ನಮ್ಮಲ್ಲಾಗ ಸರಿಯಾದ ಮಾರುಕಟ್ಟೆ ಕೊರತೆಯೇ ಆಗಿತ್ತು. ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ತಕ್ಷಣ ಕಂಡು ಹಿಡಿಯಲು ಆಗಿನ ಕರ್ನಾಟಕ ಸರಕಾರವು ವಿಶೇಷ ಸಮಿತಿಯೊಂದನ್ನು ರಚಿಸಿ ಅಡಿಕೆ ಬೆಳೆಗಾರರ ಮತ್ತು ಮಾರುಕಟ್ಟೆಯ ಪರಿಸ್ಥಿತಿಯ ಬಗ್ಗೆ ಅಧ್ಯಯನವನ್ನು ನಡೆಸುವಂತೆ ಕೇಳಿಕೊಂಡಿತು. ಈ ಸಮಿತಿಯ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಬೆಳೆಗಾರರ ಮತ್ತು ಮಾರುಕಟ್ಟೆಗಳ ಸಮೀಕ್ಷೆ ನಡೆಸಿ ತಾನು ಸಲ್ಲಿಸಿದ ವರದಿಯಲ್ಲಿ ಒಂದು ಬಲವಾದ ಕೇಂದ್ರೀಯ ಕಾರ್ಯಶಾಲೆಯನ್ನು ಸಾರ್ವಜನಿಕ ಸ್ವಾಮ್ಯದಲ್ಲಿ ಅಥವಾ ಸಹಕಾರಿ ಕ್ಷೇತ್ರದಲ್ಲಿ ಅಡಿಕೆ ಬೆಳೆಗಾರರ ಮತ್ತು ಮಾರುಕಟ್ಟೆಯ ಹಿತದೃಷ್ಟಿಯಿಂದ ಸ್ಥಾಪಿಸುವಂತೆ ಸರಕಾರಕ್ಕೆ ಸಲಹೆ ನೀಡಿತು. ಇದಕ್ಕೆ ಪೂರಕವೋ ಎಂಬಂತೆ ಅಧಿಕ ಸಂಖ್ಯೆಯ ಬೆಳೆಗಾರರು ಮತ್ತು ಸಹಕಾರಿ ಧುರೀಣರು ಈ ದಿಕ್ಕಿನತ್ತ ತಮ್ಮ ಒಲವನ್ನೂ ತೋರಿಸಿದರು. ಈ ಎಲ್ಲಾ ಪ್ರಯತ್ನಗಳಾಗಿ ಫಲವಾಗಿ ಕೇರಳ ಮತ್ತು ಕರ್ನಾಟಕ ಸರಕಾರಗಳ ಜಂಟಿ ಆಶ್ರಯದಲ್ಲಿ ೧೯೭೩ರಲ್ಲಿ ಕ್ಯಾಂಪ್ಕೋ ಸಂಸ್ಥೆಯು ಉದಯವಾಗಯಿತು.

೧೯೭೩ರಿಂದೀಚೆಗೆ ಈ ಸಂಸ್ಥೆಯು ಅಡಿಕೆ ಬೆಳೆಗಾರರ ಹಿತದೃಷ್ಟಿಯನ್ನೇ ತನ್ನ ಮೂಲೋದ್ದೇಶವನ್ನಾಗಿರಿಸಿಕೊಂಡು ಕಾರ್ಯಾಚರಿಸುತ್ತಿದ್ದು, ಈ ೧೭ ವರ್ಷಗಳಲ್ಲಿ ಹಲವಾರು ಎಡರು ತೊಡರುಗಳನ್ನು ಅನುಭವಿಸಿತು. ಇದೀಗ ಈ ಸಹಕಾರಿ ಸಂಸ್ಥೆಯು ೪೨ ಸಾವಿರಕ್ಕೂ ಮಿಕ್ಕಿ ಪಾಲು ಬಂಡವಾಳದಾರರನ್ನು ಹೊಂದಿದು, ಇದರ ಒಟ್ಟು ಮೊತ್ತ ಸುಮಾರು ರೂ. ೧,೧೩೭.೪೦ ಲಕ್ಷದಷ್ಟಾಗಿದೆ. ಪ್ರಕೃತ ಈ ಸಂಸ್ಥೆಯು ನೂರಕ್ಕಿಂತಲೂ ಹೆಚ್ಚು ಶಾಖೆ, ಖರೀದಿ ಕೇಂದ್ರ ಮತ್ತು ಮಾರಾಟ ಕೇಂದ್ರಗಳನ್ನು ಸುಮಾರು ೭೫ಕ್ಕೂ ಮಿಕ್ಕಿದ ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಹೊಂದಿದ್ದು, ಇದರ ವಾರ್ಷಿಕ ವಹಿವಾಟಿನ ಮೊತ್ತ ಸುಮಾರು ೮೦ ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ.

೧೯೮೦–೮೧ರ ಬಳಿಕ ಈ ಸಂಸ್ಥೆಯು ಕೊಕ್ಕೋ ಉತ್ಪನ್ನದ ಖರೀದಿಯನ್ನು ಆರಂಭಿಸಿ, ತನ್ನದೇ ಆದ ಚಾಕುಲೇಟು ಉತ್ಪಾದನಾ ಕೇಂದ್ರ ಸ್ಥಾಪಿಸಿ ಈ ಉತ್ಪನ್ನದ ಬೆಳೆಗಾರರ ಕ್ಷೇಮದ ಕಡೆಗೂ ಗಮನವೀಯುತ್ತಿದೆ. ಏಶ್ಯಾದಲ್ಲೇ ಅತೀ ದೊಡ್ಡದಾದ ಈ ಚಾಕುಲೇಟು ಕಾರ್ಖಾನೆಯಲ್ಲಿ ವಿವಿಧ ರೀತಿಯ ಚಾಕುಲೇಟು ಪಾನೀಯ ಇತ್ಯಾದಿಗಳ ಉತ್ಪಾದನೆಯೂ ಈಗ ಆಗುತ್ತಲಿದ್ದು, ಈ ಉತ್ಪನ್ನಗಳಿಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ಇದು ಹೊಂದಿದೆ. ಇದರಿಂದಾಗಿ ಈ ಸಂಸ್ಥೆಯು ಗಳಿಸುತ್ತಿರುವ ಲಾಭಾಂಶವೂ ಗಣನೀಯವಾಗಿ ಏರುತ್ತಲಿದ್ದೆ. ಇದು ಈ ಸಂಸ್ಥೆಯ ಅಭಿವೃದ್ಧಿ ಪಥವನ್ನು ಎತ್ತಿ ತೋರಿಸುತ್ತಿದೆ.

ಈ ರೀತಿಯಾಗಿ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಸತತವಾಗಿ ಶ್ರಮಿಸುತ್ತಿದ್ದರೂ, ಇದಕ್ಕೆ ಇನ್ನಷ್ಟು ಮೇಲೇರಲು ವಿಫುಲ ಅವಕಾಶಗಳಿವೆ. ಈ ಅವಕಾಶಗಳನ್ನು ಈ ಕೆಳಗೆ ಕಾಣಿಸಲಾಗಿದೆ.

. ಕ್ಯಾಂಪ್ಕೋ ಸಂಸ್ಥೆಯು ತನ್ನ ವ್ಯವಹಾರಿಕ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಬೇಕು. ಅಡಿಕೆ ಬೆಳೆಯುವ ಪ್ರತಿಯೊಂದು ಹಳ್ಳಿಗಳಲ್ಲೂ ಇದರ ವಹಿವಾಟು ಇರುವಂತಾಗಬೇಕು. ಇದರಿಂದಾಗಿ ಈಗಿರುವ ಮಧ್ಯವರ್ತಿಗಳ ಅನಾವಶ್ಯಕ ತೊಂದರೆಗಳನ್ನು ಹೋಗಲಾಗಿಸಬಹುದು. ಈ ರೀತಿಯಾಗಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವಾಗ ಸಂಬಂಧಪಟ್ಟ ಕ್ಷೇತ್ರಗಳಲ್ಲಿರುವ ಯಾವುದೇ ಸಹಕಾರಿ ಸಂಸ್ಥೆಯ ಅಭಿವೃದ್ಧಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಯಾವತ್ತೂ ಒಂದೇ ರೀತಿಯ ಉತ್ಪನ್ನವನ್ನೂ ಕೊಂಡು ಕೊಳ್ಳುವ ಅಥವಾ ವ್ಯಾಪಾರ ಮಾಡುವ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಸಹಕಾರಿ ಸಂಸ್ಥೆಯು ಇದ್ದಲ್ಲಿ ಇದು ಖಂಡಿತವಾಗಿ ಬೆಳೆಗಾರನಿಗೆ ಮತ್ತು ಸಂಸ್ಥೆಗೆ ಹಾನಿಕರ. ಉದಾ: ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಹಳ್ಳಿ ಪ್ರದೇಶಗಳಿಗೆ ಕ್ಯಾಂಪ್ಕೋ ಸಂಸ್ಥೆಯು ಖರೀದಿ ಕೇಂದ್ರಗಳು ಪಸರಿಸಿದಲ್ಲಿ ಆಯಾ ಪ್ರದೇಶದಗಳಲ್ಲಿ ಈಗ ಅಸ್ತಿತ್ವದಲ್ಲಿರುವ ಸಹಕಾರಿ ಸಂಘ ಸಂಸ್ಥೆಗಳ ವಹಿವಾಟುಗಳಿಗೆ ಇದು ಪೂರಕವಾಗಲಾರದು ಮತ್ತು ಅವುಗಳ ಪ್ರಗತಿಯಾಗಲಾರದು. ಈ ನಿಟ್ಟಿನಲ್ಲಿ ಇದಕ್ಕಿರುವ ಪರಿಹಾರವೆಂದರೆ (ಅ) ಕ್ಯಾಂಪ್ಕೋ ಸಂಸ್ಥೆಯು ಖರೀದಿ ಕೇಂದ್ರಗಳನ್ನು ಇನ್ನಿತರ ಸಹಕಾರಿ ಕೇಂದ್ರಗಳು ಯಾ ಸಂಸ್ಥೆಗಳಿಲ್ಲದಲ್ಲಿ ವಿಸ್ತರಿಸುವುದು ಅಥವಾ (ಆ) ಇನ್ನಿತರ ಸಹಕಾರಿ ಸಂಸ್ಥೆಯೊಡಗೂಡಿ ವ್ಯವಹಾರವನ್ನು ಮಾಡುವುದು ಇಲ್ಲವೇ ಈ ಸಂಸ್ಥೆಗಳನ್ನು  ಕ್ಯಾಂಪ್ಕೋದೊಂದಿಗೆ ಐಕ್ಯಗೊಳಿಸುವುದು. ಇದರಿಂದಾಗಿ ಸ್ಥಳೀಯ ಕೃಷಿಕನಿಗೂ, ಸಂಸ್ಥೆಗೂ ಯಾವುದೇ ರೀತಿಯ ಸಮಸ್ಯೆ ಉಂಟಾಗಲಾರದು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯು ಬೆಳೆಗಾರರಿಗೆ ಬೇಕಾಗಿ ಬರುವ ಯಾವುದೇ ರೀತಿಯ ಸಾಲ ಸೌಲಭ್ಯ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲು ಮುಂದೆ ಬರಬೇಕು.

ಈ ನಿಟ್ಟಿನಲ್ಲಿ ಕ್ಯಾಂಪ್ಕೋ ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವುದು ಉಚಿತ.

. ಈಗಿರುವ ಮತ್ತು ಇನ್ನು ಬರುವ ಖರೀದಿಕೇಂದ್ರಗಳು ಬರೇ ಅಡಿಕೆ ಯಾ ಕೊಕ್ಕೋ ಖರೀದಿ ಕೇಂದ್ರಗಳಾಗಿರದೆ, ಅವುಗಳು ಕೃಷಿಕರಿಗೆ ಬೇಕಾಗುವ ಇನ್ನಿತರ ಸೌಲಭ್ಯಗಳಾದ ರಸಗೊಬ್ಬರ ಇತ್ಯಾದಿಗಳನ್ನು ಪೂರೈಸುವ ಕೇಂದ್ರಗಳಾಗಬೇಕು.

. ಕ್ಯಾಂಪ್ಕೋ ಸಂಸ್ಥೆಯು ಪ್ರಸ್ತುತ ಅಡಿಕೆ ಮತ್ತು ಕೊಕ್ಕೋ ಖರೀದಿಯಲ್ಲಿ ಗಣನೀಯ ಯಶಸ್ಸನ್ನೂ ಸಾಧಿಸಿದ್ದರೂ, ಇದು ಕೃಷಿಕನ ಅಭಿವೃದ್ಧಿಗೆ ಸಾಲದು. ಈ ಸಂಸ್ಥೆಯ ಕಾರ್ಯವೈಖರಿಯಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಬೇಕು. ಇದಕ್ಕಾಗಿ ಈ ಸಂಸ್ಥೆಯು ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಬೇಡಿಕೆ, ಪೂರೈಕೆ, ಉತ್ಪಾದನಾ ಪ್ರವೃತ್ತಿ, ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಈ ಉತ್ಪನ್ನಗಳ ಬೆಲೆ, ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಈ ಸಂಸ್ಥೆಯು ಒಂದು ಸಂಶೋಧನಾ ಪೀಠವನ್ನು ಹೊಂದುವುದು ಉಚಿತ. ಈ ಪೀಠವು ವರ್ಷದಿಂದ ವರ್ಷಕ್ಕೆ ಆಗುವ ಬೇಡಿಕೆ, ಪೂರೈಕೆ, ಬಲೆಯ ಬದಲಾವಣೆ ಈ ವಿಚಾರಗಳ ಬಗ್ಗೆ ಅಧ್ಯಯನವನ್ನು ನಡೆಸಿ ಕೃಷಿಕರ ಉನ್ನತಿಗಾಗಿ ಶ್ರಮಿಸಬೇಕು. ಇದಕ್ಕೆ ಪೂರಕವಾಗುವಂತೆ ಸಂಸ್ಥೆಯು ತನ್ನದೇ ಆದ ಪ್ರಚಾರ ಮಾಧ್ಯಮವನ್ನು ಆರಂಭಿಸುವುದು ಒಳಿತು. ಈ ತರದ ಮಾರ್ಪಾಟಿನಿಂದ ಕೃಷಿಕನ ಮತ್ತು ಸಮಸ್ಥೆಯು ಅಭಿವೃದ್ಧಿ ಖಚಿತವಾಗಿ ಆಗಬಹುದು.

. ಪ್ರತಿಯೊಂದು ಖರೀದಿ ಕೇಂದ್ರಗಳೂ ಅದರದ್ದೇ ಆದ ಸಾಗಣೆ ವ್ಯವಸ್ಥೆಯನ್ನು ಹೊಂದುವುದು ಉಚಿತ. ಈ ರೀತಿಯಾದ ವ್ಯವಸ್ಥೆಯಿದ್ದಲ್ಲಿ ಕೃಷಿಕನಿಗೆ ತನ್ನ ಉತ್ಪನ್ನವನ್ನು ಖರೀದಿ ಕೇಂದ್ರಕ್ಕೆ ನೇರವಾಗಿ ಸಾಗಿಸಲು ವ್ಯವಸ್ಥೆ ದೊರಿಯುವುದಲ್ಲದೆ ಸಂಸ್ಥೆಗೂ ಇದು ಲಾಭದಾಯಕ, ಇಷ್ಟಲ್ಲದೆ ಇದು ಮಧ್ಯವರ್ತಿಗಳ ಯಾ ದಲ್ಲಾಳಿಗಳ ಅನುಚಿತ ಕಾರ್ಯಕ್ಕೆ ತಡೆಯನ್ನುಂಟುಮಾಡಬಲ್ಲದು.

. ಪ್ರಕೃತ ಒಂದು ಅಂದಾಜಿನಂತೆ ನಮ್ಮಲ್ಲೀಗ ಅಡಿಕೆ ಉತ್ಪಾದನೆಯು ಗಣನೀಯವಾಗಿ ಏರುತ್ತಲ್ಲಿದ್ದು, ಇದರ ಬಳಕೆ ಆ ಮಟ್ಟಕ್ಕೆ ಏರುತ್ತಿಲ್ಲ.

ಆದುದರಿಂದ ಅಡಿಕೆ ಬಳಕೆಯನ್ನು ಹೆಚ್ಚಿಸುವತ್ತ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮಲ್ಲೀಗ ಅಡಿಕೆ ಉತ್ಪಾದನೆ ಮತ್ತು ಇದಕ್ಕೆ ಪೂರಕವಾಗಬಲ್ಲಂತಹ ವಿಚಾರಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳಾಗಿವೆ. ಆದರೆ ಇದರ ಮಾರಾಟದ ಬಗ್ಗೆ ಅದನ್ನು ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಿಸುವ ಬಗ್ಗೆ ಬಳಕೆದಾರನ ರುಚಿಗೆ ತಕ್ಕಂತೆ ಉತ್ಪನ್ನವನ್ನೂ ಪೂರೈಸುವ ಬಗ್ಗೆ ತೆಗೆದುಕೊಂಡ ಕಾರ್ಯಕ್ರಮಗಳು ಏನೇನೂ ಸಾಲದು. ಇಂದು ಭಾರತದಲ್ಲಿ ಅಡಿಕೆಯನ್ನು ಬಳಸುತ್ತಿರುವ ಹೆಚ್ಚಿನ ಪ್ರದೇಶಗಳಲ್ಲಿ ವಿಧ ವಿಧದ ಅಡಿಕೆ ಸಿಗುತ್ತಿಲ್ಲ. ಉದಾ: ಒಣ ಅಡಿಕೆ, ಹಸಿ ಅಡಿಕೆ, ಹುರಿದ ಅಡಿಕೆ, ಪುಡಿಯಡಿಕೆ ಇತ್ಯಾದಿಗಳು. ದಿನಗಳು ಉರುಳಿದಂತೆ ಬಳಕೆದಾರನು ತಕ್ಷಣ ದೊರೆಯಬಲ್ಲ ಮತ್ತು ಸ್ವಾದಿಸಬಲ್ಲ ವಸ್ತುಗಳತ್ತ ತನ್ನ ಒಲವನ್ನು ತೋರಿಸುತ್ತಿದ್ದಾನೆ. ಆದ್ದರಿಂದ ಕ್ಯಾಂಪ್ಕೋ ಸಂಸ್ಥೆಯು ಈ ವಿಚಾರಗಳ ಬಗ್ಗ ಗಮನಹರಿಸಬೇಕು. ಇದೀಗ ಯಾವ ರೀತಿಯಾಗಿ ಕೊಕ್ಕೋದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವುದೋ ಅದೇ ರೀತಿಯಲ್ಲಿ ಅಡಿಕೆಯ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕು. ಇದಕ್ಕಾಗಿ ಚಾಕುಲೇಟು ಕಾರ್ಖಾನೆಯ ಮಾದರಿಯಲ್ಲೇ ಅಡಕೆಗೆಂದೇ ಒಂದು ಕಾರ್ಖಾನೆಯನ್ನು ಸ್ಥಾಪಿಸಬೇಕು.

. ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಹಿತದೃಷ್ಟಿಗಾಗಿಯೇ ಇರುವುದರಿಂದ ಮತ್ತು ಈ ಸಂಸ್ಥೆಯ ಯಾವುದೇ ತರನಾದ ಅಭಿವೃದ್ಧಿ ಯಾ ಬೆಳವಣಿಗೆ ಈ ಬೆಳೆಗಾರರನ್ನೇ ಅವಲಂಬಿಸಿರುವುದರಿಂದ, ಈ ಸಂಸ್ಥೆಯು ತನ್ನ ಈಗಿನ ಕಾರ್ಯವಿಧಾನಗಳನ್ನು ಇನ್ನಷ್ಟು ಚುರುಕುಗೊಳಿಸಬೇಕು. ಬೆಳೆಗಾರರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಖರೀದಿ ಕೇಂದ್ರಗಳಲ್ಲಿ ಪೂರಕ ವ್ಯವಸ್ಥೆಗಳಾದ ಸ್ಥಳಾವಕಾಶ, ನೀರಿನ ವ್ಯವಸ್ಥೆ, ಶೌಚಾಲಯ, ತಂಗುದಾಣ ಇತ್ಯಾದಿಗಳನ್ನು ಪೂರೈಸಬೇಕು.

. ಅಡಿಕೆಯ ಮತ್ತು ಕೊಕ್ಕೋ ಮಾರುಕಟ್ಟೆಯನ್ನು ಮತ್ತು ವ್ಯವಹಾರವನ್ನು ಹೆಚ್ಚಿಸಲು ಹೊಸ ಹೊಸ ಕೇಂದ್ರಗಳನ್ನು ಗುರುತಿಸಿ ಕಾರ್ಯಪ್ರವೃತ್ತವಾಗಲು ಕ್ಯಾಂಪ್ಕೋ ಇನ್ನಷ್ಟು ಶ್ರಮಿಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ವ್ಯಾಪಾರವನ್ನು ಪಸರಿಸಲು ಕ್ರಮಗೈಗೊಳ್ಳಬೇಕು. ಈ ಉತ್ಪನ್ನಗಳ ನಿರ್ಯಾತಕ್ಕಾಗಿ ಏರ್ಪಾಡುಗಳನ್ನು ಮಾಡಬೇಕು. ಇದಕ್ಕಾಗಿ ಶೋಧನಾ ಕಾರ್ಯವನ್ನು ಈಗಿಂದೀಗಲೇ ಆರಂಭಿಸಬೇಕು.

ಕ್ಯಾಂಪ್ಕೋ ಸಂಸ್ಥೆಯು ಮೇಲೆ ಸೂಚಿಸಿದ ಈ ಕೆಲವು ಅವಕಾಶಗಳನ್ನು ತನ್ನದಾಗಿಸಿ ಅದರ ಪೂರ್ಣ ಪ್ರಯೋಜನವನ್ನು ಪಡೆದಲ್ಲಿ, ಇದು ಬೆಳೆಗಾರರ ಮತ್ತು ತನ್ನ ಅಭಿವೃದ್ಧಿಯನ್ನು ಇನ್ನಷ್ಟು ಉತ್ತಮಪಡಿಸಬಹುದು. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಅಥವಾ ಅವಕಾಶಗಳನ್ನು ಕೈಗೂಡಿಸಿಕೊಳ್ಳಲು ಈ ಸಂಸ್ಥೆಯು ಒಂದು ದೂರದೃಷ್ಟಿಯ ನೀತಿ ಅಥವಾ ಯೋಜನೆಯನ್ನು ಹಾಕಿಕೊಳ್ಳಬೇಕು. ಇದರಿಂದಾಗಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈ ಹದಿನೇಳು ವರ್ಷಗಳಲ್ಲಿ ಈ ಸಹಕಾರಿ ಸಂಸ್ಥೆ ಅದೆಷ್ಟೋ ಸಾಧಿಸಿದೆ. ಆದರೆ ಈ ಸಾಧನೆ ಇಷ್ಟಕ್ಕೆ ನಿಲ್ಲದೆ ಇನ್ನೂ ಚುರುಕುಗೊಂಡು ಬೆಳೆಯಬೇಕು. ಇದಕ್ಕೆಲ್ಲಾ ನಿರಂತರ ಶ್ರಮ, ಸಾಧನೆ ಅಗತ್ಯ. ಇವೆಲ್ಲಾ ಕೈಗೂಡಿದಲ್ಲಿ ಇನ್ನು ಮುಂದಿನ ದಿನಗಳು ಅಡಿಕೆ ಮತ್ತು ಕೊಕ್ಕೋ ಕೃಷಿಕರಿಗೆ ಹರ್ಷದಾಯಕವಾಗಬಲ್ಲದು. ಅಲ್ಲದೆ  ಕ್ಯಾಂಪ್ಕೋ ಸಂಸ್ಥೆಯು ದೇಶದಲ್ಲೇ ಒಂದು ಮಾದರಿ ಸಹಕಾರಿ ಸಂಸ್ಥೆಯಾಗಬಹುದು ಮತ್ತು ಈ ಜಿಲ್ಲೆಗಳ ಆರ್ಥಿಕ, ಸಾಮಾಜಿಕ ಮತ್ತಿತರ ವ್ಯವಸ್ಥೆಗಳ ಮಟ್ಟ ಗಣನೀಯವಾಗಿ ಸುಧಾರಿಸಬಹುದು. ಇಲ್ಲವಾದಲ್ಲಿ ಬರುವ ದಿನಗಳು ನಮ್ಮೆಲ್ಲರಿಗೂ ಕಠಿಣವಾಗಬಹುದು.