ಕರ್ನಾಟಕ ರಾಜ್ಯ ಕೃಷಿಯುತ್ಪನ್ನ ಸಚಿವರಾದ ಶ್ರೀ ತಿಮ್ಮಾಪುರ ಇವರಿಗೆ ೨೦೦೧ ಮಾರ್ಚ್ತಿಂಗಳ ಕೊನೆಯಲ್ಲಿ, ಅಡಿಕೆ ಮಾರುಕಟ್ಟೆಯ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲ್ಲಿಸಿದ ವರದಿ (ಆಹ್ವಾನದ ಮೇರೆಗೆ).
– ಡಾ. ವಿಘ್ನೇಶ್ವರ ವರ್ಮುಡಿ.

() ಸಹಕಾರಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು: ಪ್ರಕೃತ ಅಡಿಕೆಯ ಮಾರುಕಟ್ಟೆಯು ಖಾಸಗಿ ವ್ಯವಹಾರಸ್ಥರ ಹತೋಟಿಯಲ್ಲಿರುವುದರಿಂದ ಕ್ಯಾಂಪ್ಕೋ ಮತ್ತಿತರೇ ಸಹಕಾರಿ ಮಾರಾಟ ವ್ಯವಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಶೇಕಡಾ ೫೦ರಷ್ಟು ಅಡಿಕೆಯ ಖರೀದಿಗೆ ಸಹಕಾರಿ ಸಂಸ್ಥೆಗಳು ಇಳಿಯುವಂತೆ ಮಾಡಲು ಅಗತ್ಯವಿರುವ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಸರಕಾರವು ಒದಗಿಸಬೇಕು.

() ಮಾರುಕಟ್ಟೆಯ ಕಾನೂನುಗಳನ್ನು ದಕ್ಷ ರೀತಿಯಲ್ಲಿ ಕಾರ್ಯರೂಪಕ್ಕಿಳಿಸುವುದು: ಇಂದಿನ ಮಾರುಕಟ್ಟೆ ಯ ಮಾರಾಟ ವ್ಯವಸ್ಥೆಯಲ್ಲಿ ಉತ್ಪಾದಕನ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದು, ಇಲ್ಲಿ ಏನಿದ್ದರೂ ಮಧ್ಯವರ್ತಿಗಳದ್ದೇ ಸಿಂಹಪಾಲು. ಈ ದೃಷ್ಟಿಯಿಂದ ಅಡಿಕೆ ಮಾರಾಟ ವ್ಯವಸ್ಥೆಯಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ಮಾರಾಟ ಕಾನೂನುಗಳನ್ನು ದಕ್ಷ ರೀತಿಯಲ್ಲಿ ಚಲಾವಣೆಗೆ ತರಲೇ ಬೇಕು. ಅಡಿಕೆ ಮಾರಾಟ ವ್ಯವಸ್ಥೆಯನ್ನು ಮಾರುಕಟ್ಟೆ ಸಮಿತಿಯಿರುವ ಪ್ರದೇಶಗಳಲ್ಲೇ ಕೈಗೊಳ್ಳುವಂತಾಗಬೇಕು.

() ಉದ್ದೇಶಗಳಿಂದ ಕೂಡಿದ ಯೋಜನೆಗಳನ್ನಿಂದು ಮಾರುಕಟ್ಟೆಯ ಅಭಿವೃದ್ಧಿಗಾಗಿ ಹೊಂದಬೇಕು: ಡಬ್ಲ್ಯು.ಟಿ.ಓ.ದ ಒಪ್ಪಂದಕ್ಕನುಗುಣವಾಗಿ ಮುಕ್ತ ಮಾರುಕಟ್ಟೆಯ ವಾತಾವರಣವಿಂದು ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಅಡಿಕೆಯ ಮಾರುಕಟ್ಟೆಯ ಬಗೆಗಿನ ವಿಚಾರಗಳು ಪುನರ್ ಪರಿಶೀಲನೆ, ಮತ್ತು ಬದಲಾಗುತ್ತಿರುವ ವಾತಾವರಣಕ್ಕನುಗುಣವಾದ ಮಾರುಕಟ್ಟೆ ಯೋಜನೆಗಳಿಂದು ಇಲ್ಲಾಗಬೇಕು. ಇದರೊಂದಿಗೆ ಮಾರುಕಟ್ಟೆಯ ತಕ್ಷಣ ಸುಧಾರಣೆಗಾಗಿ ಯೋಜನೆಯೊಂದು ಕಾರ್ಯರೂಪಕ್ಕಿಳಿಯಬೇಕು.

() ಅಡವು ಸಾಲ ವ್ಯವಸ್ಥೆಯ ಜ್ಯಾರಿಗೊಳಿಸುವುದು: ಹತಾಶ ಮಾರಾಟವನ್ನು ತಪ್ಪಿಸಲು, ಸಣ್ಣ ಮತ್ತು ಮಧ್ಯಮ ಬೆಳೆಗಾರರನ್ನು ರಕ್ಷಿಸಲು ಅಲ್ಲದೆ ಯೋಗ್ಯ ಧಾರಣೆಯು ಬರುವಲ್ಲಿವರೆಗೆ ಕಾಯಲು ಮಾರುಕಟ್ಟೆ ಸಮಿತಿಗಳ ಮೂಲಕ ಅಡವು ಸಾಲದ ವ್ಯವಸ್ಥೆ ತಕ್ಷಣವಾಗಬೇಕು. ಇದರೊಂದಿಗೆ ಮಾರುಕಟ್ಟೆ ಸಮಿತಿಯ ಯೋಗ್ಯ ಶೇಖರಣಾ ವ್ಯವಸ್ಥೆಗಳನ್ನು ಬೆಳೆಗಾರರಿಗೆ ಒದಗಿಸಬೇಕು.

() ಅಡಿಕೆಯ ನೇರ ಮಾರಾಟಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು: ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಅಂತರ್ ರಾಜ್ಯ ಸಹಕಾರಿ ಸಂಘಗಳೊಂದಿಗೆ ನೇರ ಸಂಪರ್ಕವನ್ನು ಸಾಧಿಸಿ ಕ್ಯಾಂಪ್ಕೋ ಮತ್ತಿತರೇ ಸಹಕಾರಿ ಸಂಸ್ಥೆಗಳ ಮೂಲಕ ಅಡಿಕೆಯ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವುದು.

() ಗ್ರಾಮೀಣ ಮಟ್ಟದಲ್ಲಿ ವರ್ಗಿಕರಣ ವ್ಯವಸ್ಥೆ: ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಅಡಿಕೆಯ ವರ್ಗೀಕರಣವನ್ನು ಕೈಗೊಳ್ಳಲು ಬೆಳೆಗಾರರಿಗೆ ಶಿಕ್ಷಣ ಮತ್ತು ತರಬೇತನ್ನು ಕೊಡುವುದು.

() ಒಣಗಿಸುವ ವ್ಯವಸ್ಥೆ: ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಅಡಿಕೆಯನ್ನು ಒಣಗಿಸಲು ಕಡಿಮೆ ವೆಚ್ಚದ ಒಣಗಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು, ಈ ರೀತಿಯ ವ್ಯವಸ್ಥೆ ಪಂಚಾಯತ್‌ ಮಟ್ಟದಲ್ಲೂ ಆಗಲೇಬೇಕು. ಇದರಿಂದಾಗಿ ನಿರ್ವಹಣಾ ವೆಚ್ಚವು ತಗ್ಗಿ ಪೂರೈಕೆಯಲ್ಲೂ ಹತೋಟಿಯನ್ನು ಸಾಧಿಸಬಹುದು.

() ಪೂರಕ ವ್ವವಸ್ಥೆಗಳನ್ನು ಅಭಿವೃದ್ಧಿಪಡಿಸುವುದು: ಅಡಿಕೆಯ ಮಾರಾಟದಲ್ಲಿ ಅಗತ್ಯವಿರುವ ಎಲ್ಲಾ ಪೂರಕ ವ್ಯವಸ್ಥೆಗಳು ಉತ್ಪಾದನಾ ಪ್ರದೇಶದಲ್ಲಿ ಒದಗಿಸುವುದು.

() ಕೃಷಿಯುತ್ಪನ್ನ ಮಾರುಕಟ್ಟೆ ವಿಸ್ಥರಣಾ ಸೇವೆ: ಕೃಷಿಯುತ್ಪನ್ನ ಮಾರುಕಟ್ಟೆಯಲ್ಲಿಂದಾಗುತ್ತಿರುವ ಬದಲಾವಣೆಗಳು, ನೀತಿಗಳು, ಹತೋಟಿಕ್ರಮಗಳು ಮತ್ತು ಆವಿಷ್ಕಾರಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ಒದಗಿಸುವುದು. ಅದಕ್ಕಾಗಿ ಒಂದು ಕೃಷಿಯುತ್ಪನ್ನ ಮಾರುಕಟ್ಟೆ ನಿಗಮವನ್ನು ಸ್ಥಾಪಿಸುವುದು.

(೧೦) ಶೀತಲೀಕರಣ ವ್ಯವಸ್ಥೆ: ಕಡಿಮೆ ವೆಚ್ಚದ ಶೀತಲೀಕರಣ ವ್ಯವಸ್ಥೆಯನ್ನು ಮಾರುಕಟ್ಟೆ ಕೇಂದ್ರಗಳಲ್ಲಿ, ಬೆಳೆಗಾರ ಪ್ರದೇಶಗಳಲ್ಲಿ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಾಪಿಸಬೇಕು. ಇದಕ್ಕಾಗಿ ಒಂದು ಅಧಿಕಾರಯುತ ಯೋಜನೆಯನ್ನು ಹಮ್ಮಿಕೊಳ್ಳಬೇಕು.

(೧೧) ಮಾರುಕಟ್ಟೆ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ: ಮಾರುಕಟ್ಟೆಯ ಬಗ್ಗೆ ಯೋಗ್ಯ ಮಾಹಿತಿಯನ್ನು ಬೆಳೆಗಾರರಿಗೆ ಒದಗಿಸಲು ಮಾಹಿತಿ ಪೂರೈಕೆಯಾಗಬೇಕು. ಈ ಮಾಹಿತಿಯು ದೇಶದ ಎಲ್ಲಾ ಮಾರುಕಟ್ಟೆ ಕೇಂದ್ರಗಳಿಂದ ಪೂರೈಕೆಯಾಗಬೇಕು.  ಇದಕ್ಕಾಗಿ ಕಂಪ್ಯೂಟರ್ ತಂತ್ರಜ್ಞಾನದ ಬಳಕೆಯಾಗಿ ಇವನ್ನಿಂದು ಕೃಷಿಕರಿಗೆ ಉಚಿತವಾಗಿ ಒದಗಿಸಬೇಕು.

(೧೨) ಗ್ರಾಮೀಣ ಮಾರುಕಟ್ಟೆಗಳ ಅಭಿವೃದ್ಧಿ: ಈ ಮಾರುಕಟ್ಟೆಗಳ ಅಭಿವೃದ್ಧಿಯಿಂದ ಮಧ್ಯವರ್ತಿಗಳ ಹತೋಟಿ ತಪ್ಪಿಸಬಹುದಾಗಿದ್ದು, ಇವನ್ನೆಲ್ಲಾ ಯೋಗ್ಯ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲೇಬೇಕು.

(೧೩) ಮೌಲ್ಯವರ್ಧನೆ: ಅಡಿಕೆಯ ಮೌಲ್ಯವರ್ಧನೆಯನ್ನು ಕೈಗೊಳ್ಳಲು ಅಗತ್ಯವಿರುವ ಉದ್ದಿಮೆಗಳ ಸ್ಥಾಪನೆ, ಶಿಕ್ಷಣ ತರಬೇತನ್ನು ಉದಗಿಸುವುದು. ಇದರಿಂದಾಗಿ ಹೆಚ್ಚುವರಿ ಉದ್ಯೋಗ ನಿರ್ಮಾಣವಾಗಬಹುದು.

(೧೪) ವಿದೇಶಿ ಮಾರುಕಟ್ಟೆಗಳ ಸಮೀಕ್ಷೆ: ಎಪೆಡಾದ ನೆರವಿನಿಂದ ವಿದೇಶಿ ಮಾರುಕಟ್ಟೆಗಳಲ್ಲಿ ಅಡಿಕೆಗಿಂದಿರುವ ಬೇಡಿಕೆ, ಇನ್ನಷ್ಟು ಮಾರುಕಟ್ಟೆಗಳ ಗುರುತಿಸುವಿಕೆ ಇತ್ಯಾದಿಗಳಾಗಬೇಕು.

(೧೫) ಉತ್ಪಾದಕ ಮತ್ತು ಗ್ರಾಹಕ ಮೇಳಗಳನ್ನು ದೇಶದ್ಯಾಂತ ಹಮ್ಮಿಕೊಳ್ಳುವುದು.

(೧೬) ಜಿಲ್ಲಾ ಕೇಂದ್ರಗಳಲ್ಲಿ ಬೆಳೆಗಾರ, ಸಂಸ್ಥೆ ಮತ್ತು ಬಳಕೆದಾರ ಪ್ರದೇಶದ ಮಾರಾಟಗಾರ, ಗ್ರಾಹಕರ ಮುಖಾಮುಖಿಯನ್ನು ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ನಡೆಸುವುದು.

(೧೭) ಕೊಯ್ಲಿನ ನಂತರ ತಾಂತ್ರಿಕತೆಯ ಬಗ್ಗೆ ಸದಾ ಮಾಹಿತಿಯನ್ನೊದಗಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಆಲೋಚನಾ ಸಮಿತಿ ಯಾ ಸಲಹಾ ಸಮಿತಿಯನ್ನು ರಚಿಸುವುದು.

(೧೮) ಆಂತರಿಕ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ಟೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಮೀಕ್ಷೆ.

(೧೯) ಮಾರುಕಟ್ಟೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸ್ಥಾಪನೆ ಮತ್ತು ಕಾಲಕಾಲಕ್ಕೆ ಸಮಾವೇಶಗಳನ್ನು ಮತ್ತು ಕಾರ್ಯಗಾರಗಳನ್ನು ನಡೆಸುವುದು.

(೨೦) ಗ್ರಾಮೀಣ ರಸ್ತೆಗಳ ಸುಧಾರಣೆ.