ಕರ್ನಾಟಕ ರಾಜ್ಯ ಕೃಷಿಯುತ್ಪನ್ನ ಮಾರುಕಟ್ಟೆ ಸಚಿವರಾದ ಶ್ರೀ ತಿಮ್ಮಾಪುರ ಇವರಿಗೆ ಫೆಬ್ರವರಿ ೨೦೦೧ರಲ್ಲಿ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ಅಡಿಕೆ ಮಾರುಕಟ್ಟೆ ಬಗ್ಗೆ ನಡೆದ ಸಮಾಲೋಚನ ಸಬೆಯಲ್ಲಿ ಆಹ್ವಾನದ ಮೇರೆಗೆ ಸಲ್ಲಿಸಿದ ವರದಿ.
– ಡಾ. ವಿಘ್ನೇಶ್ವರ ವರ್ಮುಡಿ.

ಅಡಿಕೆಬೆಳೆಗಾರರಸಮಸ್ಯೆಗಳುಮತ್ತುಪರಿಹಾರೋಪಾಯಗಳು

ಕೊಯ್ಲಿನ ಮೊದಲಿನ ಸಮಸ್ಯೆಗಳು:

೧. ಅಡಿಕೆ ಮರಕ್ಕೆ ತಗಲುತ್ತಿರುವ ವಿವಿಧ ರೋಗಗಳು, ಉದಾಹರಣೆಗೆ ಹಳದಿ ರೋಗ, ಕಜ್ಜಿಕೀಟ, ಮಹಾಳಿ ಇವಾವುದಕ್ಕೂ ಶಾಶ್ವತ ಪರಿಹಾರವಿಲ್ಲ.

೨. ಮಳೆಗಾಲದಲ್ಲಿ ಅಡಿಕೆ ಮರಕ್ಕೆ ತಳದಿಂದಲೇ ಔಷಧಿ ಸಿಂಪಡಿಸುವ ವ್ಯವಸ್ಥೆಯಾಗಿಲ್ಲ. ಮಳೆಗಾಲದಲ್ಲಿ ಅಡಿಕೆ ಮರವೇರಿ ಸಿಂಪಡಿಸಲು ಅಸಾಧ್ಯವಾದುದರಿಂದ ಈ ಸಮಸ್ಯೆ ಮಹಾಳಿ ರೋಗಕ್ಕೆ ದಾರಿ ಮಾಡಿಕೊಡುತ್ತಿದೆ.

೩. ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವೆಚ್ಚ ನಿರಂತರವಾಗಿ ಏರುತ್ತಿದ್ದು, ಈಗ ದೊರಕುತ್ತಿರುವ ಅಲ್ಪ ಪ್ರಮಾಣದ ಧಾರಣೆ ಈ ಕೃಷಿಯ ನಿರ್ವಹಣೆಗೆ ಸಾಲದಾಗಿದೆ. ಉದಾಹರಣೆಗೆ ಕೂಲಿಕಾರರ ಸಂಬಳ, ಗಂಡೊಂದರ ಸರಾಸರಿ ರೂ. ೭೦ರಿಂದ ೧೨೦ ಹೆಣ್ಣೊಂದರ ರೂ. ೫೦ರಿಂದ ೬೦ ಆಗಿದ್ದು, ಇದರೊಂದಿಗೆ ವಿದ್ಯುತ್‌, ರಸಗೊಬ್ಬರ ಇತ್ಯಾದಿಗಳ ವೆಚ್ಚ ಇತ್ಯಾದಿಗಳು ಹೆಚ್ಚಿ ರೈತರಿಂದು ಕಂಗಾಲಾಗಿದ್ದಾರೆ.

೪. ಗಿಡ್ಡ ತಳಿಗಳ ಅಭಾವ.

ಕೊಯ್ಲಿನ ನಂತರದ ಸಮಸ್ಯೆಗಳು:

೧. ಉತ್ಪಾದನಾ ಕೇಂದ್ರಗಳ ಬಳಿಯಲ್ಲೇ ಸರಿಯಾದ ಮಾರುಕಟ್ಟೆ ವ್ಯವಸ್ಥೆಗಳ ಅಭಾವ ಪರಿಣಾಮವಾಗಿ ಮಧ್ಯವರ್ತಿಗಳ ಶೋಷಣೆಗೆ ವಿಫುಲ ಅವಕಾಶಗಳು.

೨. ಯೋಗ್ಯ ರಸ್ತೆಗಳ ಆಭಾವ.

೩. ಮಾರುಕಟ್ಟೆಯಲ್ಲಿರುವ ಬೆಲೆಯ ಬಗ್ಗೆ ಮಾಹಿತಿಯ ಅಭಾವ.

೪. ಅಡಿಕೆ ವರ್ಗೀಕರಣಕ್ಕೆ ಅಗತ್ಯವಿರುವ ತರಬೇತಿ, ಮಾಹಿತಿ ಇತ್ಯಾದಿಗಳ ಬೆಳೆಗಾರರಿಗೆ ಲಭ್ಯವಾಗದಿರುವುದು.

೫. ಸಾಲ ಸೌಲಭ್ಯಗಳ ಅಭಾವ.

ಈಗಿರುವ ಪರಿಸ್ಥಿತಿಗೆ ಕಾರಣಗಳು:

೧. ಸರಿಯಾದ ಮಾರುಕಟ್ಟೆಯ ಅಭಾವ, ಸಹಕಾರಿ ವ್ಯವಸ್ಥೆಯಲ್ಲಿರುವ ಲೋಪದೋಷಗಳು.

೨. ಉತ್ಪಾದನೆ ಮತ್ತು ಮಾರುಕಟ್ಟೆಯ ನಿಜ ಚಿತ್ರಣದೊರಕದೇ ಇರುವುದು.

೩. ಪ್ರತಯಕ್ಷ ಮತ್ತು ಪರೋಕ್ಷವಾಗಿ ಅಡಿಕೆ ವಿದೇಶಗಳಿಂದ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು.

೪. ಅಡಿಕೆ ವಿವಿಧ ಬಳಕೆಗಳ ಬಗ್ಗೆ ಸಂಶೋಧನೆಗಳಾಗದೆ ಇರುವುದು.

೫. ಅಡಿಕೆಯ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸದೇ ಇರುವುದು.

೬. ವಿದೇಶಿ ಮಾರುಕಟ್ಟೆಗೆ ಅಡಿಕೆಯನ್ನು ರಫ್ತು ಮಾಡಲು ಕೈಗೊಂಡ ಕ್ರಮಗಳು ಸಾಲದೇ ಇರುವುದು.

ತಕ್ಷಣ ಪರಿಹಾರಗಳು:

೧. ಪ್ರಕೃತ ದೊರಕುತ್ತಿರುವ ಧಾರಣೆಯು, ನಿರ್ವಹಣಾ ವೆಚ್ಚಕ್ಕೆ ಸಾಲದಾಗಿರುವುದರಿಂದ, ಅಡಿಕೆ ಮಾರಾಟ ವ್ಯವಸ್ಥೆಗೆ ಸರಕಾರವು ಮಧ್ಯಪ್ರವೇಶಿಸಬೇಕು ಮತ್ತು ಕನಿಷ್ಠ ರೂಪಾಯಿ ೯೦ನ್ನಾದರೂ ಬೆಂಬಲ ಬೆಲೆಯಾಗಿ ಘೋಷಿಸಿ, ಖರೀದಿಯನ್ನು ಕೈಗೊಳ್ಳಬೇಕು.

೨. ರೈತರು ಪಡಕೊಂಡ ಸಾಲಗಳನ್ನು ದೀರ್ಘಾವಧಿಗೆ ಪರಿವರ್ತಿಸಬೇಕು.

೩. ಈಗಿರುವ ಸಹಕಾರಿ ವ್ಯವಸ್ಥೆಯನ್ನು ಆರ್ಥಿಕವಾಗಿ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆ ಹೆಚ್ಚುವರಿ ಖರೀದಿಯನ್ನು ಮಾಡಲು ಅಗತ್ಯವಿರುವ ಹಣಕಾಸಿನ ನೆರವನ್ನು ಸಾಲರೂಪದಲ್ಲಿ ಒದಗಿಸಬೇಕು.

೪. ಕೃಷಿಯುತ್ಪನ್ನ ಮಾರುಕಟ್ಟೆಯ ಸಮಿತಿಯು, ಪ್ರಕೃತ ರೈತರಲ್ಲಿರುವ ಅಡಿಕೆಯನ್ನು ತನ್ನ ದಾಸ್ತಾನು ಕೇಂದ್ರಗಳಲ್ಲಿರಿಸಿ, ಅಡಿಕೆಯ ಬಳಕೆದಾರ ಕೇಂದ್ರಗಳ ಮಾರುಕಟ್ಟೆ ಸಮಿತಿಗಳೊಂದಿಗೆ ಮಾರಾಟ ಕೈಗೊಳ್ಳಲು ಅಗತ್ಯಕ್ರಮ ಕೈಗೊಳ್ಳಬೇಕು. ಇಲ್ಲವೇ ತಾತ್ಕಾಲಿಕವಾಗಿ ಬಳಕೆದಾರ ಕೇಂದ್ರಗಳ ರಖಂ ವ್ಯಾಪಾರಿಗಳನ್ನು ಇಲ್ಲಿಗೆ ಆಹ್ವಾನಿಸಿ ಅಡಿಕೆಯ ಖರೀದಿಯನ್ನು ಕೈಗೊಳ್ಳಲು ಅಗತ್ಯವಾತಾವರಣವನ್ನು ಸೃಷ್ಟಿಸಬೇಕು.

೫. ಘನ ಸರಕಾರವು ತಾತ್ಕಾಲಿಕವಾಗಿ ಅಡಿಕೆ ಮೇಲೆ ಹೇರುತ್ತಿರುವ ತೆರಿಗೆಯನ್ನು ಮನ್ನಾ ಮಾಡಬೇಕು.

ಶಾಶ್ವತ ಪರಿಹಾರಗಳು:

೧. ಈಗಿರುವ ಸಹಕಾರಿ ವ್ಯವಸ್ಥೆಗಳನ್ನು ಬದಲಾಗುತ್ತಿರುವ ವಾತಾವರಣಕ್ಕನುಗುಣವಾಗಿ ಕಾರ್ಯಕೈಗೊಳ್ಳಲು ಅಗತ್ಯಕ್ರಮ ಕೈಗೊಳ್ಳಬೇಕು.

೨. ಅಡಿಕೆಯನ್ನು ಬಳಕೆದಾರ ಕೇಂದ್ರಗಳಿಗೆ ಸಹಕಾರಿ ವ್ಯವಸ್ಥೆಯ ಮುಖಾಂತರ ನೇರ ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಇದಕ್ಕಾಗಿ ಬಳಕೆದಾರ ಕೇಂದ್ರಗಳಲ್ಲಿರುವ ಸಹಕಾರಿ ವ್ಯವಸ್ಥೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವುದು.

೩. ದೇಶದಲಿಂದು ಇರುವ ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ ಇತ್ಯಾದಿ ಮಾಹಿತಿಗಳನ್ನು ಯೋಗ್ಯ ರೀತಿಯ ಸಮೀಕ್ಷೆಗಳ ಮೂಲಕ ಕೈಗೊಂಡು, ಅಡಿಕೆಯ ಭವಿಷ್ಯದ ಬಗ್ಗೆ ಬೆಳೆಗಾರರಿಗೆ ಮಾಹಿತಿ ಕೊಡುವುದು.

೪. ಆಹಾರೋತ್ಪನ್ನಗಳನ್ನು ಈ ತನಕ ಬೆಳೆಸುತ್ತಿದ್ದ, ಅಣೆಕಟ್ಟು ನೀರಾವರಿ ವ್ಯವಸ್ಥೆಗಳಿರುವ ಪ್ರದೇಶಗಳಲ್ಲಿ ಅಡಿಕೆ ವ್ಯವಸಾಯವನ್ನು ಕೈಗೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

೫. ಅಡಿಕೆಯ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಮಾರುಕಟ್ಟೆ ಸಮೀಕ್ಷೆಗಳನ್ನು ಕೈಗೊಳ್ಳುವುದು.

೬. ಅಡಿಕೆ ಮಾರುಕಟ್ಟೆ ಬಗ್ಗೆ ಒಂದು ಪ್ರತ್ಯೇಕ ಸಂಶೋಧನಾ ಕೇಂದ್ರವನ್ನು ಹೊಂದುವುದು.

೭. ಅಡಿಕೆಯ ವಿವಿಧ ರೀತಿಯ ಬದಲಿ ಬಳಕೆಗಳ ಬಗ್ಗೆ ಅಧ್ಯಯನವನ್ನು ಕೈಗೊಳ್ಳಲು ಒಂದು ಪ್ರತ್ಯೇಕ ಕೇಂದ್ರವನ್ನು ತೆರೆಯುವುದು.

೮. ಅಡಿಕೆ ಮಾರಾಟ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಅಡಿಕೆ ಮಂಡಳಿಯನ್ನು ಸ್ಥಾಪಿಸುವುದು.

೯. ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಅಗತ್ಯವಿರುವ ಪ್ರೋತ್ಸಾಹವನ್ನು ಕೊಡುವುದು.

೧೦. ಅಡಿಕೆ ಮತ್ತು ಅದರ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನೇರಿಸಲು ಅಗತ್ಯ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

೧೧. ಏಕ ರೂಪದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುವುದು.

೧೨. ವಿದೇಶದಿಂದ ಪರೋಕ್ಷವಾಗಿ ಒಳಬರುತ್ತಿರುವ ಅಡಿಕೆಯನ್ನು ತಡೆಯಲು ಕಸ್ಟಮ್ಸ್‌ವಿಭಾಗಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಡ ಹೇರುವುದು.

೧೩. ಆಮದಾಗುತ್ತಿರುವ ಅಡಿಕೆಯ ಗುಣಮಟ್ಟದ ಬಗ್ಗೆ ಸ್ಥಳೀಯವಾಗಿ ಅಧ್ಯಯನ ಕೈಗೊಂಡು, ಕಳಪೆ ಗುಣಮಟ್ಟದ್ದೆಂದು ಖಚಿತವಾದಲ್ಲಿ ಆಮದಿನ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರವನ್ನು ಒತ್ತಾಯಿಸುವುದು.