ಉಪಸಂಹಾರ

ಅಡಿಕೆ ಕ್ಷೇತ್ರವು ದೇಶದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಗಾಧ ಕೊಡುಗೆಯನ್ನಿಂದು ನೀಡುತ್ತಿದ್ದು, ಇಷ್ಟಿದ್ದರೂ ಕ್ಷೇತ್ರವು ನಿರಂತರ ಗೊಂದಲಕ್ಕೊಳಗಾಗಿದೆ. ಈ ಬೆಳೆಯನ್ನು ನಂಬಿ ಹಲವು ಕೋಟಿಗಳಷ್ಟು ಜನರು ಯಾ  ಕುಟುಂಬಗಳು ಜೀವನ ನಡೆಸುತ್ತಿದ್ದು, ಇಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಿಂದು ಇವರನ್ನು ದಿಕ್ಕೆಡುವಂತೆ ಮಾಡಿದೆ. ಸ್ವಾತಂತ್ರ್ಯ ದೊರೆತ ಬಳಿಕ ಸರಕಾರವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಹಮ್ಮಿಕೊಂಡು ಉತ್ಪಾದನಾ ಕ್ಷೇತ್ರದಲ್ಲಿ ಪ್ರಗತಿಯನ್ನು ಕಂಡುಕೊಂಡರೂ ಮಾರುಕಟ್ಟೆಯಲ್ಲಿರುವ ಲೋಪದೋಷಗಳಿಂದಾಗಿ ಇಲ್ಲಿಂದು ಯಾವುದೇ ನೆಮ್ಮದಿಯಿಲ್ಲ. ಇದಕ್ಕೆ ಮುಖ್ಯ ಕಾರಣ ಸರಕಾರವು ಮಾರುಕಟ್ಟೆ ತಂತ್ರಜ್ಞಾನ ಬಗ್ಗೆ ಗಮನಹರಿಸದೇ ಇರುವುದು ಮಾರುಕಟ್ಟೆಯ ಅಭಿವೃದ್ಧಿಗಾಗಿ ಬೆಳೆಗಾರರೆ ತಮ್ಮ ಸಂಸ್ಥೆಗಳನ್ನು ನಿರ್ಮಿಸಿದ್ದರೂ ಅವುಗಳಿಂದು ನಿರೀಕ್ಷಿತ ಫಲಿತಾಂಶವನ್ನು ಕೊಟ್ಟಿಲ್ಲ. ಅವಕಾಶಗಳೆಷ್ಟೋ ಬಂದು ಹೋದರೂ ಅವಾವುದನ್ನು ಕ್ಷೇತ್ರವಾಗಲಿ, ಸಂಸ್ಥೆಗಳಾಗಲಿ ಉಪಯೋಗಿಸಿದೆ ಕ್ಷೇತ್ರವಿಂದು ಸೊರಗುವಂತಾಗಿದೆ.

ಅಡಿಕೆ ಕ್ಷೇತ್ರಕ್ಕೆ ನಿರಂತರವಾಗಿ ಕಾಡುತ್ತಿರುವ ಸಮಸ್ಯೆ ಕೊಯ್ಲಿನ ನಂತರದ ತಂತ್ರಜ್ಞಾನದ ಬಗ್ಗೆ, ಅದರಲ್ಲೂ ಮುಖ್ಯವಾಗಿ ಧಾರಣೆಯ ಏರಿಳಿತ. ಅಡಿಕೆಯ ಮಾರುಕಟ್ಟೆ ಇಂದು ಖಾಸಗಿ ಹತೋಟಿಗೊಳಪಟ್ಟಿದ್ದು, ಈ ಕಪಿಮುಷ್ಟಿಯಿಂದ ಹೊರಬರಲು ಕ್ಷೇತ್ರವು ನಿರಂತರ ಒದ್ದಾಟ ನಡೆಸಿದರೂ ಫಲವಿನ್ನೂ ದೊರಕಿಲ್ಲ. ಇದೇ ರೀತಿಯ ಪ್ರವೃತ್ತಿ ಇನ್ನೂ ಮುಂದುವರಿದಲ್ಲಿ ಬದಲಾಗಿರುವ, ವಿಶ್ವ ಮಾರುಕಟ್ಟೆ ವಾತಾವರಣದಲ್ಲಿ ಅಡಿಕೆ ಕ್ಷೇತ್ರದ ಭವಿಷ್ಯ ಊಹಿಸಲು ಅಸಾಧ್ಯ. ಇದನ್ನು ತಪ್ಪಿಸಲು ಈ ಕ್ಷೇತ್ರದಲ್ಲಿಂದು ಕ್ರಾಂತಿಕಾರೀ ಬದಲಾವಣೆಗಳಾಗಬೇಕಾಗಿದೆ. ಈ ಬದಲಾವಣೆಗಳು ಮಾರುಕಟ್ಟೆಯ ಅಭಿವೃದ್ಧಿ, ವಿಸ್ತರಣೆ, ಬೆಳವಣಿಗೆ ಮತ್ತು ಪ್ರಗತಿಯ ರೀತಿಯದ್ದಾಗಬೇಕು. ಅಡಿಕೆಯ ಆಂತರಿಕ ಮತ್ತು ಅಂತರಾಷ್ಟೀಯ ಬಳಕೆಯನ್ನು ಹೆಚ್ಚಿಸಲಿಂದು ಪ್ರಚಾರಗಳಿಂದ ಕೂಡಿದ ಶ್ರಮ ಅಗತ್ಯ. ಗ್ರಾಹಕರ ರುಚಿಯಿಂದು ಬದಲಾಗುತ್ತಿರುವ ಕಾರಣ ಅಡಿಕೆಯಿಂದೊಡಗೂಡಿದ ಸಿದ್ಧ ಉತ್ಪನ್ನಗಳ ಯಾ ಮೌಲ್ಯವರ್ದಿತ ಉತ್ಪನ್ನಗಳ ತಯಾರಿಗಿಂದು ಕ್ಷೇತ್ರ ಒತ್ತು ಕೊಡಲೇ ಬೇಕು. ಇದರೊಂದಿಗೆ ಅಡಿಕೆ ಬೇಳೆಯ ವಿಸ್ತರಣೆ ಬಗ್ಗೆ ಕಡಿವಾಣ ಹಾಕಲೇಬೇಕು. ಇಷ್ಟು ಮಾತ್ರವಲ್ಲದೆ ಅಡಿಕೆಯ ಮಾರಾಟ ವ್ಯವಸ್ಥೆಯಲ್ಲಿರುವ ಬೆಳೆಗಾರರದ್ದಾದ ಸಂಸ್ಥೆಗಳಿಂದು ಅಭಿವೃದ್ಧಿ, ಬೆಳೆವಣಿಗೆ ಮತ್ತು ಪ್ರಗತಿಗಳನ್ನು ಸಾಧಿಸಬೇಕು. ಈ ಎಲ್ಲಾ ಸಂಸ್ಥೆಗಳು ಬದಲಾಗುತ್ತಿರುವ ಮಾರುಕಟ್ಟೆಗನುಗುಣವಾಗಿ ತಮ್ಮ ಕಾರ್ಯತಂತ್ರಗಳನ್ನೂ ಬದಲಾಯಿಸಿ ಕ್ಷೇತ್ರದ ರಕ್ಷಣೆಗಾಗಿ ಹೋರಾಡಬೇಕು. ಈ ನಿಟ್ಟಿನಲ್ಲಿ ಬೆಳೆಗಾರ ಸಮೂಹ ಸಂಸ್ಥೆಗಳಿಗೆ ಅಗತ್ಯ ಬೆಂಬಲ ನೀಡಲೇಬೇಕು.

ಕ್ಷೇತ್ರದ ಉಳಿವು ಮತ್ತು ದೇಶದ ಅಭಿವೃದ್ಧಿಗಾಗಿ ಇಲ್ಲಿಂದು ಹಲವು ರೀತಿಯ ಬದಲಾವಣೆಗಳಾಗಲೇಬೇಕು. ಈ ದೃಷ್ಟಿಯಿಂದ ಈ ಹೊತ್ತಗೆಯು ಹಲವು ಮಾರ್ಗಗಳನ್ನು ಸೂಚಿಸಿದ್ದು, ಇವೆಲ್ಲಾ ಕಾರ್ಯರೂಪಕ್ಕಿಳಿಯಬೇಕು. ಈ ಪರಿಹಾರೋಪಾಯಗಳನ್ನು  ಸೂಕ್ಷ್ಮವಾಗಿ ಇನ್ನೊಮ್ಮೆ ಇಲ್ಲಿ ಹೆಸರಿಸಲಾಗಿದ್ದು ಅವುಗಳೆಂದರೆ:

೧. ವಿಸ್ತರಣೆ ಮೇಲೆ ಕಡಿವಾಣ.
೨. ಮಾರುಕಟ್ಟೆ ಸಮೀಕ್ಷೆಯನ್ನು ಕೈಗೊಳ್ಳುವುದು.
೩. ಖಾಸಗಿ ವ್ಯವಹಾರವನ್ನು ಹತೋಟಿಗೊಳಪಡಿಸುವುದು.
೪. ಆಮದಿನ ಮೇಲೆ ಹತೋಟಿ ಸಾಧಿಸುವುದು, ಪರೋಕ್ಷ ಆಮದನ್ನು ತಡೆಗಟ್ಟುವುದು.
೫. ಅಡಿಕೆಯ ಬದಲಿ ಬಳಕೆಯ ಬಗ್ಗೆ ಸಂಶೋಧನೆ.
೬. ವಿವಿಧ ರೀತಿಯ ಮಾಹಿತಿಗಳನ್ನು ಪೂರೈಸುವುದು.
೭. ಅಡಿಕೆಯ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ವಿಸ್ತರಣೆಗಾಗಿ ಪ್ರಚಾರ ಮತ್ತಿತರೆ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
೮. ಅಡಿಕೆಯ ಸಿದ್ಧ ಉತ್ಪನ್ನಗಳನ್ನು ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳವುದು.
೯. ಪಾನ್ ಅಂಗಡಿಗಳ ಸ್ಥಾಪನೆ.
೧೦. ಉಪಬೆಳೆಗಳನ್ನು ಬೆಳೆಸಲು ಪ್ರೋತ್ಸಾಹ.
೧೧. ಬೆಳೆಗಾರರಿಗೆ ಅಗತ್ಯವಿರುವ ಶಿಕ್ಷಣ ಮತ್ತು ತರಬೇತುಗಳ ಪೂರೈಕೆ.
೧೨. ರಫ್ತಿನ ಅಭಿವೃದ್ಧಿಗಾಗಿ ಒಂದು ಪ್ರತ್ಯೇಕ ನಿಗಮದ ಸ್ಥಾಪನೆ.
೧೩. ವಿಸ್ತೀರ್ಣ, ಉತ್ಪಾದನೆ, ಬೇಡಿಕೆ, ಪೂರೈಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಕಾಲಕಾಲಕ್ಕೆ ಸಮೀಕ್ಷೆ ಯಾ ಸಮಿತಿ ಸಂಗ್ರಹಣೆ.
೧೪. ಬೆಳೆಗಾರರದ್ದಾದ ಪ್ರಬಲ ಸಂಘಟನೆ.
೧೫. ರಾಷ್ಟ್ರೀಯ ತೋಟಗಾರಿಕಾ ನಿಗಮ ಮತ್ತು ಎಪೆಡಾಗಳಲ್ಲಿ ಲಭ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕ್ಷೇತ್ರ ತನ್ನದಾಗಿಸಿಕೊಳ್ಳುವುದು.
೧೬. ಅಡಿಕೆಯ ವಿವಿಧ ಉತ್ಪನ್ನಗಳನ್ನು ತಯಾರಿಸಲು ಉತ್ಪಾದನಾ ಕೇಂದ್ರಗಳಲ್ಲೇ ಉದ್ದಿಮೆಗಳ ಸ್ಥಾಪನೆ.
೧೭. ಅಡಿಕೆಯನ್ನು ಒಣಗಿಸಲು, ಅಲ್ಪ ವೆಚ್ಚದ ಯಂತ್ರಗಳ ಆವಿಷ್ಕಾರ.
೧೮. ಅಡಿಕೆಯ ನೇರ ಮಾರಾಟಕ್ಕಾಗಿ ಪ್ರಯತ್ನ.
೧೯. ಅಡಿಕೆಯ ಬಳಕೆಯನ್ನು ಹೆಚ್ಚಿಸಲು ಬೆಳೆಗಾರರ ಸ್ವಯಂ ಗ್ರಾಹಕರಾಗಿ ಇತರರನ್ನೂ ಗ್ರಾಹಕರನ್ನಾಗಿಸುವುದು.
೨೦. ಸರಕಾರವನ್ನು ಸದಾ ಎಚ್ಚರಿಸುವುದು.