ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿರುವ ಸಂಸ್ಥೆಗಳು

ದೇಶದ ಆರ್ಥಿಕತೆಯಲ್ಲಿ ಅಡಿಕೆ ಕ್ಷೇತ್ರದ ಮಹತ್ವನ್ನು ಸಂಶೋಧಕರು ಮತ್ತು ಆಡಳಿತಗಾರರು ಹಲವು ವರ್ಷಗಳ ಹಿಂದೆಯೇ ಮನಗಂಡಿದ್ದರು. ಈ ಕ್ಷೇತ್ರವನ್ನು ಮೇಲೆತ್ತಲು ಮತ್ತು ಇಲ್ಲಿನ ಸಮಸ್ಯೆಗಳನ್ನು ತೊಡೆದು ಹಾಕಲು ಸ್ವಾತಂತ್ರ್ಯ ಪೂರ್ವ ಮತ್ತು ಆ ಬಳಿಕ ಹಲವು ರೀತಿಯ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಕೊಯ್ಲಿನ ಮೊದಲಿನ ಮತ್ತು ಕೊಯ್ಲಿನ ನಂತರದ ತಂತ್ರಜ್ಞಾನದ ಆಭಿವೃದ್ಧಿಗಾಗಿ ಭಾರತೀಯ ಸಂಶೋಧನಾ ಮಂಡಳಿಯು (ಐ.ಸಿ.ಎ.ಅರ್.) ವಿವಿಧ ರೀತಿಯ ಸಂಶೋಧನೆ, ಶಿಕ್ಷಣ ಮತ್ತು ವಿಸ್ತರಣಾ ಸಂಸ್ಥೆಗಳನ್ನು ಹೊಂದಿರುತ್ತದೆ. ಇವುಗಳಲ್ಲದೆ ಸರಕಾರದ ಬೆಂಬಲದಿಂದ ಕೆಲವು ಸಮಿತಿಗಳು ಮತ್ತು ಖಾಸಗಿ ಅಲ್ಲದೆ ಸಹಕಾರಿ ಸಂಸ್ಥೆಗಳೂ ಇಲ್ಲಿ ಕಾರ್ಯನಿರತವಾಗಿವೆ. ಈ ಎಲ್ಲಾ ಸಂಸ್ಥೆಗಳ ಮೂಲ ಉದ್ದೇಶ ಉತ್ಪಾದನೆ, ಉತ್ಪಾದಕತೆ ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸುವುದು ಈ ನಿಟ್ಟಿನಲ್ಲಿ ಇವಿಂದು ಯಾವ ರೀತಿಯಲ್ಲಿ ಕಾರ್ಯನಿರತವಾಗಿವೆ ಎಂಬುದನ್ನು ಸೂಕ್ಷ್ಮವಾಗಿ ಇಲ್ಲಿಡಲಾಗಿದೆ.

() ಗೊತ್ತು ಮಾಡಿದ ಅಡಿಕೆ ಸಮಿತಿ: (ಅಡ್ ಹಾಕ್ ಅರಕನಟ್ ಕಮಿಟಿ)

ಅವಿಭಜಿತ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದ ಅಡಿಕೆಯ ಪ್ರಮಾಣ ಸುಮಾರು ೧,೮೦,೦೦೦ ಟನ್‌ಗಳಷ್ಟು. ಅದರಲ್ಲಿ ಶೇಕಡಾ ೫೦ರಷ್ಟು ಬಂಗಾಳದ ಪೂರ್ವದ ಜಿಲ್ಲೆಗಳಲ್ಲಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಈ ಪ್ರದೇಶವು ಬಾಂಗ್ಲಾ ದೇಶಕ್ಕೆ ದೊರಕಿ, ಭಾರತವು ಅಂತರಿಕ ಕೊರತೆಯನ್ನು ನೀಗಿಸಲು ಆಮದಿಗೆ ಶರಣಾಯಿತು. ಈ ಸಂದರ್ಭದಲ್ಲಿ ಆಗಿನ ಭಾರತ ಸರಕಾರವು ಅಂತರಿಕವಾಗಿ ಅಡಿಕೆಯ ಉತ್ಪಾದನೆಯನ್ನೇರಿಸಲು ೫ಲಕ್ಷ ರೂಪಾಯಿಗಳ ಧನ ಸಹಾಯವನ್ನು ಐಸಿಎಆರ್ಗೆಗೆ ನೀಡಿತ್ತು. ೧೯೪೭ರಲ್ಲಿ ಅಡಿಕೆಯ ಮಾರುಕಟ್ಟೆ ವ್ಯವಸ್ಥೆಯನ್ನು ಸರಿಪಡಿಸಲು, ಕ್ಷೇತ್ರವೆದುರಿಸುತ್ತಿರುವ ಸಮಸ್ಯೆಗಳನ್ನು ನೀಗಿಸಲು ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ವೇಗದ ಬದಲಾವಣೆಗಳನ್ನು  ಕಂಡು ಕೊಳ್ಳಲು ಅಡ್ ಹಾಕ್ ಸಮಿತಿಯನ್ನು ನೇಮಿಸಿತ್ತು. ಅದು ಹಲವು ರೀತಿಯ ತಾತ್ಕಾಲಿಕ ಮತ್ತು ದೂರಗಾಮಿ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿ, ಸಹಕಾರಿ ವ್ಯವಸ್ಥೆಯಡಿ ಅಡಿಕೆಯ ಮಾರಾಟಕ್ಕೆ ವ್ಯವಸ್ಥೆಯನ್ನೂ ಕೈಗೊಂಡು, ಸಣ್ಣ ಬೆಳೆಗಾರರಿಗೆ ಹಣಕಾಸಿನ ಪೂರೈಕೆ, ಅಡಿಕೆಯ ಶೇಖರಣೆ, ವಿವಿಧ ರೀತಿ ಪೂರಕ ಉತ್ಪನ್ನಗಳ ಪೂರೈಕೆ ಎಂಬಿತ್ಯಾದಿ ವೀಚಾರಗಳ ಬಗ್ಗೆ ಗಮನಹರಿಸಿತ್ತು. ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಸಂಶೋಧನಾ ಕೇಂದ್ರದ ಸ್ಥಾಪನೆ, ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ರೆಗ್ಯುಲೇಟೆಡ್ ಮಾರುಕಟ್ಟೆಗಳ ಸ್ಥಾಪನೆ, ವರ್ಗೀಕರಣ ವ್ಯವಸ್ಥೆ, ಬೆಳೆಗಾರರಿಗೆ ಶಿಕ್ಷಣ, ವಿಸ್ತೀರ್ಣದ ಬಗ್ಗೆ ಅಂಕಿ-ಅಂಶಗಳ ಸಂಗ್ರಹ ಎಂಬೆಲ್ಲಾ ವಿಚಾರಗಳ ಬಗ್ಗೆ ಆಸಕ್ತಿ ತೋರಿಸಿ ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಶಾಶ್ವತ ಸಮಿತಿಯನ್ನು ಸ್ಥಾಪಿಸಲು ಸಲಹೆ ನೀಡಿತ್ತು.

() ಭಾರತದ ಕೇಂದ್ರೀಯ ಅಡಿಕೆ ಸಮಿತಿ ೧೯೪೯:

೧೮೬೦ರ ಸಂಘಗಳ ನೇಮಕಕ್ಕೆ ಮುಖ್ಯ ಕಾರಣವೆಂದರೆ ಎರಡನೇ ಮಹಾ ಯುದ್ಧದ ಅಂತಿಮ ಕ್ಷಣದಲ್ಲಿ ದೇಶದ ಅಡಿಕೆ ಬೆಳೆಗಾರರು ಪ್ರಬಲವಾದ ಸಮಸ್ಯೆಯೊಂದನ್ನು ಎದುರಿಸಬೇಕಾಗಿ ಬಂತು, ಅದೆಂದರೆ ಹೆಚ್ಚಿನ ಪ್ರಮಾಣದ ಅಡಿಕೆಯ ಆಮದು. ಇದೇ ಸಮಯದಲ್ಲಿ ಭಾರತ ಸರಕಾರವು (೧೯೪೪) ಒಂದು ಪೌಂಡ್ ಅಡಿಕೆಗೆ (೪೫೩gm.) ಎರಡು ಆಣೆಗಳ ಎಕ್ಸ್ಯೆಸ್  ಸುಂಕವನ್ನು ಆಂತರಿಕವಾಗಿ ಉತ್ಪಾದಿಸಲ್ಪಡುವ ಅಡಿಕೆಯ ಮೇಲೆ ಹಾಕಿತ್ತು. ಇದರಿಂದ  ಕಂಗೆಟ್ಟ ಅಡಿಕೆ ಬೆಳೆಗಾರರು ಒಗ್ಗೂಡಿ ಇದನ್ನು ವಿರೋಧಿಸಿದರು. ಈ ದೃಷ್ಟಿಯಿಂದ ೧೯೪೫ರಲ್ಲಿ ಒಂದು ಸಮ್ಮೇಳನವಾಗಿ ಎಕ್ಸ್ಯೆಸ್ ಸುಂಕವನ್ನು ಕೈಬಿಡುವಂತೆ ಮತ್ತು ಆಮದಾಗುವ ಅಡಿಕೆಯ ಮೇಲೆ ಸುಂಕ ಹೇರುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವಾಯಿತು. ಇಷ್ಟು ಮಾತ್ರವಲ್ಲದೆ ಅದೇ ಸಮ್ಮೇಳನವು ಅಡಿಕೆಗೆ ಬೆಲೆ ನಿರ್ಣಯಿಸಲು, ಆಮದಿಗಾಗಿ ಪರವಾನಗಿ, ಅಡಿಕೆಯ ಬೆಗ್ಗೆ ಸಂಶೋಧನೆ ಮತ್ತು ಉಪ ಉತ್ಪನ್ನಗಳ ತಯಾರಿ ಎಂಬಿತ್ಯಾದಿ ವಿಚಾರಗಳ ಬಗ್ಗೆ ಕಾರ್ಯನಿರ್ವಹಿಸಲು ಅಡಿಕೆ ಮಂಡಳಿಯ ರಚನೆಯಾಗಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡಲು ತೀರ್ಮಾನಿಸಿತು. ಇದೇ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಸಮಿತಿಯ ಸರಕಾರಕ್ಕೆ ಅಡಿಕೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಹಾಯವನ್ನು ನೀಡುವ ವ್ಯವಸ್ಥೆಗೆ ಹೊರಟಿತು. ಈ ಸಮಿತಿಯು ಕೈಗೊಂಡ ಮುಖ್ಯ ಕಾರ್ಯಗಳೆಂದರೆ: ೧. ಉಪಯೋಗವಾಗದೇ ಇದ್ದ ಭೂಮಿಯ ಅಡಿಕೆ ಕೃಷಿ ಕೈಗೊಳ್ಳುವ ಬಗ್ದೆ ಸಮೀಕ್ಷೆ. ೨. ಅಡಿಕೆ ಗಿಡಗಳ ನರ್ಸರಿಗಳ ಸ್ಥಾಪನೆ. ೩. ಅಡಿಕೆ ಸಂಶೋಧನಾ ಕೇಂದ್ರದ ಸ್ಥಾಪನೆ. ೪. ರೋಗಗಳ ಬಗ್ಗೆ ಆಧ್ಯಯನ. ೫. ಬೆಳೆಗಾರರ ಭೂಮಿಯಲ್ಲೇ ಸರಳ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ. ೬. ಅಡಿಕೆ ಬಗ್ಗೆ ತಾಂತ್ರಿಕ ಸಂಶೋಧನೆ. ೭. ಅಡಿಕೆ ಬೆಳೆಯ ಉತ್ಪಾದನಾ ವೆಚ್ಚದ ನಿರ್ಣಯ. ೮. ವಿಸ್ತೀರ್ಣ ಮತ್ತು ಉತ್ಪಾದನೆಗಳ ಸರಿಯಾದ ಮಾಹಿತಿ ಸಂಗ್ರಹಣೆಗಾಗಿ ಸಮೀಕ್ಷೆ. ೯. ಪ್ರಚಾರ ಇತ್ಯಾದಿಗಳು ಇವೆಲ್ಲದರೊಂದಿಗೆ ಅಡಿಕೆಗೆ ತಳಮಟ್ಟದ ಮತ್ತು ಅತ್ಯಧಿಕ ಬೆಲೆಯನ್ನೂ ಸಲಹೆ ಮಾಡಿತ್ತು.

() ಮಾರುಕಟ್ಟೆಯ ಅಭಿವೃದ್ಧಿಗಾಗಿರುವ ಸಂಸ್ಥೆಗಳು:

ಅಡಿಕೆಯ ಮಹತ್ವವನ್ನು ೧೯೨೮ರ ರೋಯಲ್ ಸಮಿತಿಯು ಹೆಸರಿಸಿ ಇದರ ಮಾರುಕಟ್ಟೆಯ ಅಭಿವೃದ್ಧಿಯ ಬಗ್ಗೆ ಹೆಸರಿತ್ತು. ಅಲ್ಲದೆ ಈ ಕ್ಷೇತ್ರದ ಅಭಿವೃದ್ಧಿಗಾಗಿ ಮಾರುಕಟ್ಟೆ ಸಂಸ್ಥೆಯನ್ನು ಹೊಂದಲು ಸಲಹೆ ಮಾಡಿತ್ತು. ಈ ನಿಟ್ಟಿನಲ್ಲಿಂದು ಕೇಂದ್ರದ ಮಾರುಕಟ್ಟೆ ನಿಗಮ, ರಾಜ್ಯ ಮಾರುಕಟ್ಟೆ ನಿಗಮ, ರಾಷ್ಟೀಯ ಸಹಕಾರಿ ಮತ್ತು ಉಗ್ರಾಣ ನಿಗಮ, ರಾಷ್ಟೀಯ ಕೃಷಿಯುತ್ಪನ್ನಗಳ ಸಹಕಾರಿ ಮಾರುಕಟ್ಟೆ ಮಂಡಳಿ ಮುಂತಾದವುಗಳು ಸ್ಥಾಪನೆಗೊಂಡು ಮಾರುಕಟ್ಟೆ ವಿಚಾರಗಳಲ್ಲಿ ಅನೇಕ ರೀತಿಯ ಕಾರ್ಯಗಳನ್ನು ಹಮ್ಮಿಕೊಂಡಿವೆ.

() ಎಪೆಡಾ:

ಕೃಷಿಯುತ್ಪನ್ನಗಳ ಮತ್ತು ಸಂಸ್ಕರಣೆಗೊಂಡ ಆಹಾರ ಉತ್ಪನ್ನಗಳ ರಫ್ತು ನ ಅಭಿವೃದ್ದಿಗಾಗಿ ಅಧಿಕಾರ ಹೊಂದಿರುವ ಸಂಸ್ಥೆ (ಎಪೆಡಾ) ೧೯೮೬ರಲ್ಲಿ ಸ್ಥಾಪನೆಗೊಂಡಿತ್ತು.  ಈ ಎಲ್ಲಾ ಉತ್ಪನ್ನಗಳ ಪರಿಪೂರ್ಣ ಬಳಕೆಗಾಗಿ ವಿದೇಶಗಳಲ್ಲಿ ಇದಕ್ಕೆ ಮಾರುಕಟ್ಟೆಗಳನ್ನು ಗುರುತಿಸಿ ಅದರ ಮಾಹಿತಿ ಈ ಕ್ಷೇತ್ರಕ್ಕೆ ಕೊಟ್ಟು ಈ ವ್ಯವಹಾರಕ್ಕೆ ಪ್ರೇರಣೆಯನ್ನಿಂದು ಇದು ನೀಡುತ್ತಿದೆ.

() ರಾಷ್ಟೀಯ ತೋಟಗಾರಿಕಾ ನಿಗಮ:

ಇದು ೧೯೮೪ರಲ್ಲಿ ಆರಂಭಗೊಂಡು ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿದೆ. ಇದರ ಮೂಲ ಉದ್ದೇಶ ಕೊಯ್ಲಿನ ನಂತರದ ಆಡಳಿತ ಮತ್ತು ಮಾರುಕಟ್ಟೆಯ ಅಭಿವೃದ್ಧಿಗಳಾಗಿವೆ. ಇದು ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡು ಅಗತ್ಯವಿರುವ ಸೇವೆ, ಮಾಹಿತಿ, ತಾಂತ್ರಿಕತೆಯ ಒದಗಿಸುವಿಕೆ, ಅವಿಷ್ಕಾರ ಮುಂತಾದ ವಿಚಾರಗಳಿಗೆ ಮಹತ್ವವನ್ನು ಕೊಡುತ್ತಿದೆ.

ಎಪೆಡಾ ಮತ್ತು ರಾಷ್ಟೀಯ ತೋಟಗಾರಿಕೆ ನಿಗಮಗಳ ಮೂಲಕ ಅಡಿಕೆ ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸಲು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಇವುಗಳಲ್ಲಿರುವ ಯೋಜನೆಗಳನ್ನಿಂದು ಕ್ಷೇತ್ರವು ಬಳಸಿಕೊಳ್ಳಬೇಕು. ಎಪೇಡಾದ ಮೂಲಕ ಅಡಿಕೆಗೆ ವಿದೇಶಿ ಮಾರುಕಟ್ಟೆಗಳನ್ನು ಕಂಡುಕೊಳ್ಳಬಹುದಾಗಿದ್ದು, ಇದಕ್ಕಾಗಿ ಅದರಲ್ಲಿ ಹಲವು ಪೂರಕ ಮತ್ತು ಪ್ರೇರಕ ಕಾರ್ಯಕ್ರಮಗಳಿವೆ. ರಾಷ್ಟೀಯ ತೋಟಗಾರಿಕಾ ನಿಗಮದ ಮೂಲಕ ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ತೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಬಹುದಾಗಿದ್ದು, ಇದರ ಪರಿಪೂರ್ಣ ಲಾಭವನ್ನಿಂದು ಕ್ಷೇತ್ರಪಡೆದುಕೊಳ್ಳಲು ಪ್ರಯತ್ನಿಸಬೇಕು. ಇದಕ್ಕಾಗಿ ಬೆಳೆಗಾರರು, ಸಂಘಗಳು ಮತ್ತು ಸಂಸ್ಥೆಗಳು ಜನ ಪ್ರತಿನಿಧಿಗಳ ಮೂಲಕ ಸರಕಾರಕ್ಕೆ ಒತ್ತಡ ಹೇರಬೇಕು. ಅಡಿಕೆ ಕ್ಷೇತ್ರದ ವಿವಿಧ ವಿಚಾರಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳಲು ಈ ನಿಗಮ ಮತ್ತು ಎಪೆಡಾಗಳಿಂದ ಹಣಕಾಸಿನ ನೆರವನ್ನು ಗಳಿಸಲು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳಿಂದಾಗಬೇಕು. ಎಪೆಡಾವು ವಿದೇಶಿ ಮಾರುಕಟ್ಟೆಗಳಲ್ಲಿ ವ್ಯಾಪಾರಿ ಮೇಳ, ಪ್ರಚಾರ ಇತ್ಯಾದಿಗಳನ್ನು ಕಾಲಕಾಲಕ್ಕೆ ಕೈಗೊಳ್ಳುತ್ತಿದ್ದು, ಇಲ್ಲಿ ಅಡಿಕೆ ಮಾರುಕಟ್ಟೆಯ ವಿಸ್ತರಣೆಗೆ ವಿಪುಲ ಅವಕಾಶಗಳಿವೆ.

ಒಟ್ಟಾರೆಯಾಗಿ ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದಿಂದ ನೇಮಕವಾದ ಹಲವು ಸಂಸ್ಥೆಗಳಿದ್ದರೂ ಇವುಗಳಲ್ಲಿ ಹೆಚ್ಚಿನವು ಉತ್ಪಾದನಾ ತಂತ್ರಜ್ಞಾನದ ಬಗ್ಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉದಾಹರಣೆ ವಿಟ್ಲದಲ್ಲಿರುವ ಕೇಂದೀಯ ಸಂಶೋಧನಾ ಸಂಸ್ಥೆ, ಮಾರುಕಟ್ಟೆ ತಂತ್ರಜ್ಞಾನದ ಬಗ್ಗೆ ಪರಿಪೂರ್ಣವಾದ ದೃಷ್ಟಿಯಿಡಲು ಇಲ್ಲಿ ಯಾವುದೇ ಸಂಸ್ಥೆಗಳಿಲ್ಲ. ಆದ್ದರಿಂದ ಸರಕಾರವಿಂದು ಈ ದಿಶೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲೇ ಬೇಕು. ಹೀಗಾದಲ್ಲಿ ಮಾತ್ರ ಅಡಿಕೆ ಬೆಳೆಗಾರರು ನೆಮ್ಮದಿಯಿಂದ ಜೀವನ ನಡೆಸಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬಹುದು.

ಅಡಿಕೆಯ ಉತ್ಪಾದನೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿಗಳನ್ನೊದಗಿಸುವ ಮಾಧ್ಯಮಗಳು:

ಆಂಗ್ಲ ಭಾಷೆಯಲ್ಲಿ :

೧. ಎಗ್ರಿಕಲ್ಚರ್ ಸಿಟಿವೇಷನ್ ಇನ್ ಇಂಡಿಯಾ
೨. ಪ್ರೊಡಕ್ಟಿವಿಟಿ
೩. ಎಗ್ರಿಕಲ್ಕರ್ ಎಂಡ್ ಇಂಡಸ್ಟ್ರಿ ಸರ್ವೆ
೪. ಎಗ್ರಿಕಲ್ಚರಲ್ ಮಾರ್ಕೆಟಿಂಗ್
೫. ಇಂಡಿಯನ್ ಹಾರ್ಟಿಕಲ್ಚರ್
೬. ಇಂಡಿಯನ್ ಫಾರ್ ಮಿಂಗ್
೭. ಅಗ್ರಿ ನ್ಯೂಸ್
೮. ಆಗ್ರೋ ಇಂಡಿಯಾ
೯. ಕಮೋಡಿಟಿ ಸರ್ವೆ ರಿಪೋರ್ಟ್
೧೦. ದ ಹಿಂದೂ ಸರ್ವೆ ಆಫ್ ಇಂಡಿಯನ್ ಅಗ್ರೀಕಲ್ಚರ್
೧೧. ಇಂಡಿಯನ್ ಕೊಕೋ, ಅರಕನಟ್ ಎಂಡ್ ಸ್ಟೈಸ್ ಜರ್ನ್‌ಲ್.

ಕನ್ನಡದಲ್ಲಿ;

೧. ಅಡಿಕೆ ಪತ್ರಿಕೆ
೨. ಸುಜಾತ
೩. ಕೃಷಿ ಮಾರುಕಟ್ಟೆ ಇತ್ಯಾದಿಗಳು

() ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ:

೧೯೪೫ರಲ್ಲಿ ಸ್ಥಾಪನೆಗೊಂಡ ಈ ಸಂಘವು ಅಡಿಕೆ ಬೆಳೆಗಾರರ ಹಿತಕ್ಕಾಗಿ ಅವಿರತ ಪ್ರಯತ್ನಗಳನ್ನು ಮಾಡುತ್ತಲಿದೆ. ಈ ಸಂಘವು ಅಡಿಕೆ ಬೆಳೆಗಾರರಿಗೆ ಯಾ ಕ್ಷೇತ್ರಕ್ಕೆ ಯಾವುದೇ ಸಮಸ್ಯೆಗಳೊದಗಿ ಬಂದಾಗ ಅವುಗಳ ಪರಿಹಾರಕ್ಕಾಗಿ, ಶ್ರಮಿಸಿ ಸದಾ ಯಶಸ್ಸನ್ನು ಕಂಡಿದೆ. ಕ್ಯಾಂಪ್ಕೋ ಚಾಕೋಲೇಟ್ ಉದ್ದಿಮೆ ಮತ್ತು ಸಂಶೋಧನಾ ಕೇಂದ್ರದ ಸ್ಥಾಪನೆಯಲ್ಲಿ ಇದು ಮಹತ್ತರ ಪಾತ್ರ ನಿರ್ವಹಿಸಿದೆ. ಈ ಸಂಘವು ಅಡಿಕೆ ಭಾರತವೆಂಬ ಮಾಸಿಕ ವಾರ್ತಾ ಪತ್ರಿಕೆ ಮೂಲಕ ಬೆಳೆಗಾರರಿಗೆ ಉತ್ತಮ ಮಾಹಿತಿಯನ್ನೊದಗಿಸುತ್ತಿದ್ದು, ೨೦೦೦ದಲ್ಲಿ ಅಡಿಕೆ ಧಾರಣೆ ಕುಸಿದಾಗ ಸಂಘದ ಆಧ್ಯಕ್ಷರಾದ ಡಾ.ಪಿ. ಕೆ. ಯಸ್ . ಭಟ್ಟರ ನೇತ್ರತ್ವದಲ್ಲಿ ಉತ್ತರ ಭಾರತದ ಅಡಿಕೆ ಬಳಕೆ ಕೇಂದ್ರಗಳ ಸಮೀಕ್ಷೆಯೊಂದನ್ನು ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕ್ಷೇತ್ರದ ಅಭಿವೃದ್ಧಿಗಾಗಿ, ಸಮಸ್ಯೆಗಳ ನಿವಾರಣೆಗಾಗಿ ಹಲವು ಪರಿಹಾರಗಳನ್ನು ಸೂಚಿಸಿದೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಈ ಸಂಘವನ್ನಿಂದು ಆರ್ಥಿಕವಾಗಿ ಬಲಪಡಿಸಿ ಸದಾ ಚಟುವಟಿಕೆಯಿಂದ ಇರುವಂತೆ ಮಾಡಬೇಕಾಗಿದೆ. ಈ ಸಂಘವು ಅಡಿಕೆ ಬೆಳೆಗಾರರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಕಾಲಕಾಲಕ್ಕೆ ಒದಗಿಸುವಂತಾಗಲು ಇಲ್ಲಿಂದು ಗ್ರಂಥಾಲಯ, ಕಂಪ್ಯೂಟರೀಕರಣ ಮುಂತಾದವುಗಳಾಗಬೇಕು. ಅಡಿಕೆ ಕ್ಷೇತ್ರಕ್ಕೆ ಸದಾ ಸಮಸ್ಯೆಗಳು ಬರುತ್ತಿದ್ದು, ಇವುಗಳ ನಿವಾರಣೆಗಾಗಿ ಈ ಸಂಘಟನೆಯ ಬಲವೃದ್ಧಿಸಬೇಕಾಗಿದೆ. ಈ ಸಂಘವು  ಬಲಗೊಂಡಲ್ಲಿ ಕ್ಷೇತ್ರದ ಬೆಳವಣಿಗೆ ಸಾಧ್ಯ. ರಾಜಕೀಯ ರಹಿತವಾದ ಈ ಸಂಘವನ್ನಿಂದು ದೇಶದೆಲ್ಲೆಡೆ ಕೊಂಡಾಡುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಸಂಘದಲ್ಲಿಂದು ಅಧ್ಯಕ್ಷರಾಗಿರುವ ಡಾ| ಪಿ.ಕೆ ಯಸ್.  ಭಟ್ಟರ ನಿರಂತರ ಹೋರಾಟ ಮತ್ತು ಅವಿರತ ಶ್ರಮ. ಇತ್ತಿಚಿಗೆ ಅಡಿಕೆಯ ಧಾರಣೆ ಕುಸಿದಾಗ ಸಂಘವು ಕೈಗೊಂಡ ಕಾರ್ಯಗಳು ನಿಜಕ್ಕೂ ಕ್ಷೇತ್ರವನ್ನು ಎಚ್ಚರಿಸಿದ್ದು, ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಿದಲ್ಲಿ ಕ್ಷೇತ್ರ ಮುನ್ನಡೆಯಬಹುದು. ಇದಕ್ಕಾಗಿ ಬೆಳೆಗಾರರೆಲ್ಲಾ ತಮ್ಮದಾದ ಈ ಸಂಗಟನೆಯ ಅಭಿವೃದ್ಧಿಗಾಗಿ ಶ್ರಮಿಸಲೇಬೇಕು.

() ಇತರೇ ಸಂಗಗಳು:

ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ ಕೆ. ರಾಮ ಭಟ್ಟರ ಅಧ್ಯಕ್ಷತೆಯಲ್ಲಿ ಮಂಗಳೂರಿನ ವಾರಣಾಸಿ ಟವರ್ಸನಲ್ಲಿ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು “ಅರೆಕನಟ್ ಗ್ರೋವರ್ಸ್ ಪಾರ್ಮ್” ಕಾರ್ಯನಿರ್ವಹಿಸುತ್ತಿದ್ದು, ಈ ಸಂಘವು ಕ್ಷೇತ್ರಕ್ಕ ಸಮಸ್ಯೆಗಳು ಬಂದಾಗ ಬೆಳೆಗಾರರು ತೊಂದರೆಗೀಡಾದಾಗ ಮತ್ತು ಇಲ್ಲಿನ ಅಭಿವೃದ್ಧಿಯ ದೃಷ್ಟ್ಟಿಯಿಂದ ಚಟುವಟಿಕೆಗಳನ್ನಿಂದು ಕೈಗೊಳ್ಳುತ್ತಿದೆ.

೨೦೦೦ನೇ ಇಸವಿಯಲ್ಲಿ ಅಡಿಕೆ ಧಾರಣೆಯ ಕುಸಿತಕ್ಕೊಳಗಾದಾಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಶ್ರೀ ಎಂ. ಬಿ. ಸದಾಶಿವ, ವಿಶ್ವನಾಥ ರಾವ್ ಮುಂತಾದವರ ಒಡಗೂಡಿ ಅಡಿಕೆ ಬೆಳೆಗಾರರ ಸಂಘವೊಂದನ್ನು ಸ್ಥಾಪಿಸಿ, ಅಡಿಕೆ ಕ್ಷೇತ್ರದ ವಿವಿಧ ವಿಚಾರಗಳ ಬಗ್ಗೆ ಅಧ್ಯಯನವನ್ನು ಕೈಗೊಂಡು ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ಇವುಗಳೊಂದಿಗೆ ತಾಲ್ಲೂಕು ಮಟ್ಟದ ಕೃಷಿಕ ಸಮಾಜಗಳು ಮತ್ತು ಜಿಲ್ಲಾ ಮಟ್ಟದ ಕೃಷಿಕ ಸಮಾಜಗಳೂ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಯನಿರತವಾಗಿವೆ.

೨೦೦೦ದಲ್ಲಿ ಧಾರಣೆ ಕುಸಿದಾಗ ಅಡಿಕೆಯ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತಮಪಡಿಸಲು ಮತ್ತು ಬೆಳೆಗಾರರಿಗೆ ಅಡಿಕೆಯ ಮಾರಾಟಕ್ಕಾಗಿ ಯೋಗ್ಯ ವ್ಯವಸ್ಥೆ ಮತ್ತು ಮಾಹಿತಿಯನ್ನೊದಗಿಸಲು “ಸಮಾಗಮ” ಎಂಬ ಸಮಿತಿಯೊಂದು ಕಾರ್ಯರೂಪಕ್ಕಿಳಿದು, ಈ ಉದ್ದೇಶಗಳನ್ನಿಡೇರಿಸಲು ಅದಿಂದು ಶ್ರಮಿಸುತ್ತಿದೆ.