ಅಡಿಕೆ ಕ್ಷೇತ್ರದ ಭವಿಷ್ಯ

ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಾತಾವರಣದಲ್ಲಿ ಯಾವುದೇ ಕ್ಷೇತ್ರದ ಭವಿಷ್ಯವನ್ನು ಊಹಿಸಲು ಅಸಾಧ್ಯ. ಇದು ಅಡಿಕೆ ಕ್ಷೇತ್ರಕ್ಕೂ ಅನ್ವಯವಾಗುವುದು. ಹೀಗಿದ್ದರೂ ಅಡಿಕೆ ಕ್ಷೇತ್ರ ಈ ತನಕ ನಡೆದು ಬಂದ ದಾರಿ ಮತ್ತು ಈಗಾಗುತ್ತಿರುವ ಬದಲಾವಣೆಗಳಿಗನುಗುಣವಾಗಿ ಈ ಕ್ಷೇತ್ರ ಮುಂದೆ ಯಾವ ರೀತಿಯಲ್ಲಿ ಮುಂದುವರಿಯಬೇಕು ಎಂಬುದನ್ನು ಕ್ಷೇತ್ರವಿಂದು ನಿರ್ಧರಿಸಲೇ ಬೇಕು. ಅನಾದಿ ಕಾಲದಿಂದಲೂ ಈ ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆ ಮಾರುಕಟ್ಟೆ ತಂತ್ರಜ್ಞಾನದ್ದಾಗಿದ್ದು. ಇದಕ್ಕಾಗಿ ಇಲ್ಲಿಂದು ಬದಲಾವಣೆಗಳಾಗಬೇಕು. ವಿಶ್ವದ ಮಾರುಕಟ್ಟೆ ವ್ಯವಸ್ಥೆಯಿಂದು ಬದಲಾವಣೆಗೊಳಪಡುತ್ತಿದೆ, ಸಾಂಪ್ರದಾಯಿಕ ಮಾರುಕಟ್ಟೆಗಿಂದು ಮೌಲ್ಯವಿಲ್ಲ, ಇಲ್ಲಿಂದು ಏನಿದ್ದರೂ ಆಧುನಿಕತೆಗೆ ಪ್ರಾಶಸ್ತ್ಯ. ಈ ನಿಟ್ಟಿನಲ್ಲಿ ಅಡಿಕೆ ಕ್ಷೇತ್ರವಿಂದು ತನ್ನ ಮಾರುಕಟ್ಟೆ ವ್ಯವಸ್ಥೆಗೆ ಹೊಸ ಹುರುಪುಕೊಡಬೇಕಾಗಿದೆ ಮತ್ತು ಚಿಂತನ ಮಂಥನಗಳಾಗ ಬೇಕಾಗಿದೆ. ಈ ದೃಷ್ಟಿಯಿಂದ ಇಲ್ಲಿಗಿಂದು ಒಂದು ದೂರದೃಷ್ಟಿಯ ಯೋಜನೆಯನ್ನು ಹಮ್ಮಿಕೊಂಡು ಅದನ್ನು ಯಶಸ್ವಿಯಾಗಿ ಕಾರ್ಯಕ್ಕಿಳಿಸಲೇಬೇಕು. ಈ ಯೋಜನೆಯು ಕೆಳಗೆ ತಿಳಿಸಿದ ವಿಚಾರಗಳನ್ನು ಗಣನೆಗೆ ತೆಗೆದು ಕೊಳ್ಳವುದು ಉಚಿತ.

() ವಿಸ್ತರಣಾ ಕಾರ್ಯಕ್ಕೆ ಕಡಿವಾಣ : ಕಳೆದೊಂದು ದಶಕದಿಂದೀಚೆಗೆ ದೊರೆತ ಆಕರ್ಷಣಾ ಬೆಲೆ ಅಡಿಕೆ ವ್ಯವಸಾಯದ ವಿಸ್ತೀರ್ಣದ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಉತ್ಪಾದನೆ ಅಧಿಕಗೊಳ್ಳುವುದರೊಂದಿಗೆ. ಮುಕ್ತ ಆರ್ಥಿಕ ನೀತಿಯಿಂದ ಆಮದಾಗುವ ಪ್ರಮಾಣವು ಹೆಚ್ಚಾದಲ್ಲಿ ಧಾರಣೆಯ ಕುಸಿತಕ್ಕೆ ಇದು ದಾರಿ ಮಾಡಿಕೊಡಬಲ್ಲದು. ಇದಕ್ಕಾಗಿ ವಿಸ್ತರಣಾ ಕಾರ್ಯಕ್ಕಿಂದು ತಡೆಯೊಡ್ಡಲೇ ಬೇಕು.

() ಉಪಬೆಳೆಗಳತ್ತ ಗಮನ : ಉಪಬೆಳೆಗಳ ಉಪಯುಕ್ತತೆ ಬೆಳೆಗಾರರಿಂದು ತಿಳಿದಿದ್ದರೂ, ಈ ಬಗ್ಗೆ ಅಡಿಕೆ ವ್ಯವಸಾಯಕ್ಕೆ ಕೊಟ್ಟಷ್ಟು ಮಹತ್ವ ಈ ತನಕ ದೊರಕಿಲ್ಲ. ವಿವಿಧ ರೀತಿಯ ಸಂಬಾರ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ನಿರಂತರವಾಗಿ ಬೇಡಿಕೆಯಿದ್ದು ಈ ನಿಟ್ಟಿನಲ್ಲಿ ಇವುಗಳತ್ತ ಬೆಳೆಗಾರರ ಗಮನ ಹರಿಯಬೇಕು. ದೇಶವಿಂದು ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ ವಿಶ್ವದಲ್ಲಿ  ಎರಡನೇ ಸ್ಥಾನದಲ್ಲಿದ್ದರೂ ಅಂತರಿಕ ಬೇಡಿಕೆಯನ್ನಿನ್ನೂ ಪೂರೈಸಲಾರದ ಸ್ಥಿಯಲ್ಲಿದೆ. ವಿಶ್ವ ಮಾರುಕಟ್ಟೆಯಿಂದು ಪೌಷ್ಟಿಕಾಂಶಗಳನ್ನು ಹೊಂದಿರುವ ಆರೋಗ್ಯಕ್ಕೆ ಹಾನಿಕಾರಕವಲ್ಲದ ಸಂಬಾರ ಪದಾರ್ಥ, ಹಣ್ಣು ಮತ್ತು ತರಕಾರಿಗಳನ್ನು ಮೂಲ ರೂಪ ಮತ್ತು ಮೌಲ್ಯವರ್ಧಿತ ರೂಪದಲ್ಲಿ ಬಯಸುತ್ತಿದ್ದು, ಇದರಿಂದಾಗಿ ಇವಕ್ಕೆ ಶಾಶ್ವತ ಬೇಡಿಕೆಯಿದೆಯೆಂಬುದು ಖಚಿತ. ಅಡಿಕೆಯ ಗುಣದೋಷಗಳ ಬಗ್ಗೆ ಈಗಾಗಲೇ ಅಪಸ್ವರಗಳು ಬರುತ್ತಿದ್ದು, ಈ ವಿಚಾರವನ್ನು ಕ್ಷೇತ್ರವಿಂದು ಗಣನೆಗೆ ತೆಗೆದುಕೊಂಡು ಬದಲಿ ಉತ್ಪನ್ನಗಳ ಯಾ ಉಪಬೆಳೆಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ. ಅದರೆ ಈ ಬಗ್ಗೆ ಬೆಳೆಗಾರ ಸಮೂಹದಲ್ಲಿ ಅಗತ್ಯ ಆಸಕ್ತಿಯಿನ್ನೂ ಕಂಡು ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಬಗ್ಗೆ ಶಿಕ್ಷಣ, ಮಾಹಿತಿ, ತರಬೇತು ಇತ್ಯಾದಿಗಳ ಕೊರತೆ ಮತ್ತು ಯೋಗ್ಯರೀತಿಯ ಮಾರುಕಟ್ಟೆ ವ್ಯವಸ್ಥೆಯ ಅಭಾವ, ಈ ನಿಟ್ಟಿನಲ್ಲಿ ಬೆಳೆಗಾರ ಸಮೂಹವಿಂದು ಈ ಎಲ್ಲಾ ಉತ್ಪನ್ನಗಳ ಉತ್ಪಾದನೆಗೆ ಆಸಕ್ತಿ ತೋರಿಸಿ, ಅದಕ್ಕೆ ಅಗತ್ಯವಿರುವ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲೇಬೇಕು. ಬದಲಾಗುತ್ತಿರುವ ವಿಶ್ವ ಆರ್ಥಿಕ ಸ್ಥಿತಿಯಲ್ಲಿ ಸರಕಾರಗಳಿಂದು ಪೂರಕ ವ್ಯವಸ್ಥೆಗಳನ್ನು ಸೃಷ್ಟಿಸಬಹುದೇ ಹೊರತು ಅದು ಯಾವ ಕ್ಷೇತ್ರದ ಬೆಂಬಲಕ್ಕೂ ಬರಲಾರದು ಎಂಬುದನ್ನು ಇಂದು ಪ್ರತಿಯೊಂದು ಕ್ಷೇತ್ರವೂ ಅರಿತು ತನ್ನ ಆಭಿವೃದ್ಧಿ ತನ್ನಿಂದಲೇ ಎಂದುದನ್ನು ತಿಳಿದುಕೊಳ್ಳಲೇ ಬೇಕು. ಗ್ರಾಹಕರಿಂದು ಕೂಡಲೇ ಸಂತೋಷಕೊಡಬಲ್ಲ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಯಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬೇಡಿಕೆ ಇನ್ನಷ್ಟು ಏರಬಹುದು. ಇದಕ್ಕಾಗಿ ವಿವಿಧ ಉಪಬೆಳೆಗಳನ್ನು ಬೆಳೆಸುವತ್ತ ಅಡಿಕೆ ಬೆಳೆಗಾರರು ಗಮನಹರಿಸುವುದರೊಂದಿಗೆ ಅವುಗಳ ಮೌಲ್ಯವರ್ಧನೆಗೆ ಉದ್ದಿಮೆಗಳನ್ನು ಸ್ಥಾಪಿಸಿ ತಮ್ಮದೇ ಆದ ಮಾರುಕಟ್ಟೆ ವ್ಯವಸ್ಥೆಗಳನ್ನು ಹೊಂದಲೇ ಬೇಕು. ಹೀಗಾದಲ್ಲಿ ಮಾತ್ರ ಕ್ಷೇತ್ರವುಳಿಯಬಹುದು.

() ಮಾರುಕಟ್ಟೆ ಸಮೀಕ್ಷೆ : ಅಡಿಕೆಯಿಂದೇನಾಗುತ್ತಿದೆ, ಅಡಿಕೆಗಿರುವ ಒಟ್ಟು ಬೇಡಿಕೆಯೆಷ್ಟು, ಆಂತರಿಕ ಮತ್ತು ಅಂತರಾಷ್ಟ್ರೀಯ ಬೇಡಿಕೆಯೇನು, ಯಾವ್ಯಾವ ವಿಧದ ಅಡಿಕೆ ಎಲ್ಲೆಲ್ಲಿ ಎಷ್ಟೆಷ್ಟು ಬೇಡಿಕೆಯಿದೆ, ಯಾವ ಸಮಯದಲ್ಲಿ ಎಷ್ಟು ಪೂರೈಕೆಯಾಗಬೇಕು. ಬಳಕೆದಾರರ ಯಾ ಗ್ರಾಹಕರ ರುಚಿಯೇನು, ಗ್ರಾಹಕರಿಂದು ಕೊಡುತ್ತಿರುವ ಬೆಲೆಯೇನು, ಬಳಕೆದಾರ ಪ್ರದೇಶದಲ್ಲಿನ ಬೆಲೆಯ ಸ್ಥಿತಿಯೇನು, ಗ್ರಾಹಕ ವಲಯ ನಮ್ಮಿಂದ ಯಾ ನಮ್ಮ ಸಂಸ್ಥೆಗಳ ಮೂಲಕ ಅಡಿಕೆಯನ್ನು ನೇರವಾಗಿ ಖರೀದಿಸಲು ಆಸಕ್ತಿಯನ್ನು ಹೊಂದಿದೆಯೇ, ಅಡಿಕೆ ವ್ಯವಹಾರದಲ್ಲಿಂದು ಕಾರ್ಯನಿರ್ವಹಿಸುತ್ತಿರುವ ಮಧ್ಯವರ್ತಿಗಳೆಷ್ಟು, ಈ ಸಂಖ್ಯೆಯನ್ನು ಕಡಿತಗೊಳಿಸಬಹುದೇ, ದೇಶದಲ್ಲಿಂದು ಕಾರ್ಯನಿರ್ವಹಿಸುತ್ತಿರುವ ಪಾನ್ ಅಂಗಡಿಗಳೆಷ್ಟು, ಅವುಗಳಲ್ಲಿಂದು ಖರ್ಚಾಗುತ್ತಿರುವ ಸರಾಸರಿ ಅಡಿಕೆ ಪ್ರಮಾಣವೆಷ್ಟು, ಅಡಿಕೆಯ ಮೌಲ್ಯವರ್ಧನೆಯಿಂದು ಹೇಗಾಗುತ್ತಿದೆ, ಮೌಲ್ಯವರ್ಧಿತ ಉತ್ಪನ್ನಗಳಿಗಿರುವ ಬೇಡಿಕೆಯೇನು ಎಂಬಿತ್ಯಾದಿ ವಿಚಾರಗಳು ಪ್ರತಿಯೊಬ್ಬ ಬೆಳೆಗಾರನಿಗೆ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ತಿಳಿಯಲೇಬೇಕು. ಈ ವಿಚಾರಗಳ ಬಗ್ಗೆ ಪರಿಪೂರ್ಣ ಮಾಹಿತಿ ದೊರೆತಲ್ಲಿ ಧಾರಣೆಯ ಏರಿಳಿತಕ್ಕೆ ಅವಕಾಶ ಕಡಿಮೆ. ಆದರೆ ಈ ರೀತಿಯ ಸಮೀಕ್ಷೆ ಬೆಳೆಗಾರ ವಲಯದಿಂದ ಯಾ ಬೆಳೆಗಾರರ ಸಂಸ್ಥೆಗಳಿಂದ ಪರಿಪೂರ್ಣ ರೀತಿಯಲ್ಲಿ ಈ ತನಕ ಆಗಿಲ್ಲ. ಇದಕ್ಕಾಗಿ ಈ ರೀತಿಯ ಸಮೀಕ್ಷೆಗಳು ಇಲ್ಲಿ ಕಾಲಕಾಲಕ್ಕೆ ಆಗಲೇ ಬೇಕು. ಈ ನಿಟ್ಟಿನಲ್ಲಿ ಅಡಿಕೆ ಕ್ಷೇತ್ರವಿಂದು ಇದಕ್ಕಾಗಿಯೇ ಒಂದು ಆಧ್ಯಯನ ಪೀಠವನ್ನು ಹೊಂದಲೇಬೇಕು, ಮತ್ತು ಈ ಪೀಠಕ್ಕೆ ಬೆಳೆಗಾರರೆಲ್ಲಾ ಒಗ್ಗೂಡಿ ಅಗತ್ಯವುಳ್ಳ ಬಂಡವಾಳವನ್ನು ಕೊಡಬೇಕು.

() ಬದಲಾಗಬೇಕಾಗಿರುವ ಮಾರುಕಟ್ಟೆ ಜಾಲ : ಅಡಿಕೆ ಮಾರಾಟ ವ್ಯವಸ್ಥೆಯಿಂದು ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿದ್ದು ಇದರಿಂದಾಗಿ ಗ್ರಾಹಕರಿಂದು ಕೊಡುತ್ತಿರುವ ಬೆಲೆಯ ಬಹುಪಾಲು ಅವರದ್ದಾಗಿ ಬೆಳೆಗಾರನಿಗೆ ದೊರಕುವ ಬೆಲೆ ಅತ್ಯಲ್ಪ. ಈ ರೀತಿಯ ಪರಿಸ್ಥಿತ ಎಲ್ಲಾ ಕೃಷಿ ಉತ್ಪನ್ನಗಳಿಗೂ ಅನ್ವಯ. ಇದಕ್ಕಾಗಿ ಅಡಿಕೆಯ ಮಾರುಕಟ್ಟೆ ವ್ಯವಸ್ಥೆಯನ್ನಿಂದು ಬದಲಿಸಲೇಬೇಕು. ಅಡಿಕೆಯನ್ನಿಂದು ಬಳಕೆದಾರ ಪ್ರದೇಶಗಳಿಗೆ, ಗ್ರಾಹಕರ ಸನಿಹಕ್ಕೆ ಕೊಂಡೊಯ್ದು ಮಾರಾಟ ಮಾಡುವ ವ್ಯವಸ್ಥೆಯಾಗಬೇಕು, ಇದನ್ನೇ ನೇರ ಮಾರಾಟ ವ್ಯವಸ್ಥೆಯೆನ್ನುವುದು. ನೇರ ಮಾರಾಟವೆಂದರೆ ಗ್ರಾಹಕನ ಬಾಯಿಗೆ ಕೊಂಡೊಯ್ಯುವುದು ಎಂದರ್ಥವಲ್ಲ, ನಾವು ಅನ್ನ ತಿನ್ನಬೇಕಿದ್ದರೂ ಹಲವು ಮಧ್ಯವರ್ತಿಗಳ ಸಹಾಯಬೇಕು. ಆಧುನಿಕ ಪದ್ಧತಿಯ ಅನುಕರಣೆಯಿಂದಾಗಿ ಚಮಚ ಮತ್ತಿತರೇ ಮಧ್ಯವರ್ತಿಗಳ ಸಂಖ್ಯೆಯನ್ನು ನಾವು ಹೆಚ್ಚಸಿದ್ದೇವೆಯೇ ಹೊರತು ಅದರ ಸಂಖ್ಯೆಯನ್ನಿನ್ನೂ ಕಡಿಮೆ ಗೊಳಿಸಿಲ್ಲ, ಇದೇ ರೀತಿಯ ವ್ಯವಸ್ಥೆ ಅಡಿಕೆ ಮಾರುಕಟ್ಟೆಯಲ್ಲೂ ಇಂದು ಕಂಡು ಬರುತ್ತಿದೆ. ಅಡಿಕೆ ಬೆಳೆಗಾರರದ್ದಾದ ಸಂಸ್ಥೆಗಳು ಈ ರೀತಿಯ ನೇರ ಮಾರಾಟ ವ್ಯವಸ್ಥೆಯಲ್ಲಿ ವಿಫಲಗೊಂಡ ಕಾರಣವೇ ಇಂದು ದೂರದ ಗ್ರಾಹಕ ಪ್ರದೇಶದ ಮಧ್ಯವರ್ತಿಗಳಿಂದು ನಮ್ಮಲ್ಲಿ ತುಂಬಿರುವುದು. ಇದಕ್ಕಾಗಿ ನಮ್ಮ ಸಂಸ್ಥೆಗಳಿಂದು ಈ ವ್ಯವಸ್ಥೆಗಿಳಿಯಬೇಕು. ಇತ್ತೀಚಿನ ದಿನಗಳಲ್ಲಿ ಕ್ಯಾಂಪ್ಕೋ ಸಂಸ್ಥೆಯು ಅಮುಲ್‌ನ ಸಹಯೋಗದೊಂದಿಗೆ ಮತ್ತು ಗ್ರಾಹಕ ಪ್ರದೇಶಗಳಲ್ಲಿ ತನ್ನ ಮಾರಾಟ ಶಾಖೆಗಳನ್ನು ತೆರೆದು ಬದಲಿ ಮಾರಾಟ ವ್ಯವಸ್ಥೆಗಿಳಿದಿರುವುದು ಈ ಕ್ಷೇತ್ರದ ದೃಷ್ಟಿಯಿಂದ ಒಂದು ಯೋಗ್ಯ ಬದಲಾವಣೆ. ಆದರೆ ಈ ರೀತಿಯ ವ್ಯವಸ್ಥೆ ಆರಂಭದಲ್ಲಿ ಪ್ರಯೋಜನಕಾರಿಯಲ್ಲವೆಂಬ ವಾತಾವರಣ ಬರಲೂ ಬಹುದು, ಇದಕ್ಕಾಗಿ ಹಿಂಜರಿದಲ್ಲಿ ಈ ಕ್ಷೇತ್ರಕ್ಕೆ ಭವಿಷ್ಯವೇ ಇಲ್ಲವೆನ್ನಬಹುದು.

ನೇರ ಮಾರಾಟಕ್ಕೆ ಹಲವು ದಾರಿಗಳನ್ನಿಂದು ಕಂಡು ಕೊಳ್ಳಬಹುದು. ಇದರಲ್ಲಿ ಮುಖ್ಯವಾದವುಗಳೆಂದರೆ, ಪಾನ್ ಅಂಗಡಿಗಳ ಸ್ಥಾಪನೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪೂರೈಕೆ. ಉತ್ಪಾದನಾ ಕೇಂದ್ರದ ಉತ್ತಮ ಗುಣಮಟ್ಟದ ಅಡಿಕೆಯನ್ನು ಗ್ರಾಹಕರಿಗೆ ನೇರವಾಗಿ ಪೂರೈಸಲು ಒಂದು ಮಾರ್ಗ ಪಾನ್ ಅಂಗಡಿಗಳ ಸ್ಥಾಪನೆ. ಈ ಬಗ್ಗೆ ೧೯೮೦ರ ದಶಕದ ಅಂತ್ಯದಲ್ಲೇ ನಮ್ಮ ಸಂಸ್ಥೆಗಳಿಗೆ ನಾನು ನನ್ನ ಲೇಖನಗಳ ಮೂಲಕ ತಿಳಿಸಿದ್ದೆ, ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಅಸಾಧ್ಯವೆನ್ನುವ ಮಾತೂ ಕೇಳಿ ಬಂತು. ನಮ್ಮ ಉತ್ಪನ್ನದ ಪ್ರಮುಖ ಗ್ರಾಹಕ ಪಾನ್ ವಾಲಗಳು. ಈ ರೀತಿಯ ವ್ಯವಸ್ಥೆಗೆ ನಾವಿಳಿಯದಿದ್ದಲ್ಲಿ ಬೆಳೆಗಾರರಿಗೆ ಯೋಗ್ಯ ಪ್ರತಿಫಲ ಬೆಲೆ ದೊರೆಯಲು ಅಸಾಧ್ಯ. ಉತ್ಪಾದನಾ ಕೇಂದ್ರದ ಯಾ ಸಂಸ್ಥೆಯ ಹೆಸರಿನಲ್ಲಿ ಈ ರೀತಿಯ ಅಂಗಡಿಗಳ ಸ್ಥಾಪನೆಯಾದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದರೊಂದಿಗೆ ಗ್ರಾಹಕನೂ ತೃಪ್ತಿಗೊಳ್ಳಬಹುದು. ಆರಂಭದಲ್ಲಿ ಎಲ್ಲವೂ ಊಹಿಸಲು ಅಸಾಧ್ಯ ಮತ್ತು ಕಠಿಣ, ಆದರೆ ಈ ರೀತಿಯ ವ್ಯವಸ್ಥೆಗೆ ಇಳಿದಲ್ಲಿ ಯಶಸ್ಸಂತೂ ನಿಶ್ಚಿತ.

ಅಡಿಕೆಯ ನೇರ ಮಾರಾಟಕ್ಕಿಂತ ಇನ್ನೊಂದು ದಾರಿ ಮೌಲ್ಯವರ್ಧನೆ. ಅಡಿಕೆಯಿಂದ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದೆಂಬ ಬಗ್ಗೆ ಕಳೆದ ಎರಡು ದಶಕಗಳಿಂದ ನಾನು ಹೇಳುತ್ತಾ ಬಂದೆ. ಉದಾಹರಣೆಗೆ ೧೯೯೮ರಲ್ಲಿ ಬೆಂಗಳೂರಿನ ಮತ್ತು ದೇಶದ ಇತರೇ ಭಾಗಗಳಲ್ಲಿ ಪಾನ್‌ಅಂಗಡಿಗಳ ಸಮೀಕ್ಷೆಯನ್ನು ನಡೆಸಿದ್ದ ನಾನು ತಂಬಾಕು ಮಿಶ್ರಿತ ಅಡಿಕೆ ಉತ್ಪನ್ನಗಳ ತಯಾರಿಯಾದಲ್ಲಿ ಅಡಿಕೆಗೆ ಭವಿಷ್ಯವಿದೆ ಎಂದಿದ್ದೆ, ಇದರ ಪ್ರತಿಫಲವೋ ಎನ್ನುವಂತೆ ೧೯೯೦ರ ಬಳಿಕ ಗುಟ್ಕಾಗಳು ಬಂದವು. ಯಾವುದೇ ಒಂದು ಉತ್ಪನ್ನದ ಮಾರಾಟಗಾರ ಯಾವತ್ತು ಲಾಭದ ದೃಷ್ಟಿ ಯಾ ಯೋಗ್ಯ ಪ್ರತಿಫಲ ಬೆಲೆ ನಿರೀಕ್ಷಿಸುತ್ತಾನೋ ಅಂದು ಆತ ಸಾಂಪ್ರದಾಯಿಕತೆಗೆ ತಿಲಾಂಜಲಿಯನ್ನಿಡಲೇಬೇಕು. ಇದರೊಂದಿಗೆ ಅಡಿಕೆಯ ಹೋಳು, ಹುಡಿ, ಹುರಿದಡಿಕೆ ಇತ್ಯಾದಿಗಳನ್ನು ಉತ್ಪಾದನಾ ಕೇಂದ್ರಗಳಲ್ಲೇ ತಯಾರಿಸಿ ಗ್ರಾಹಕ ಪ್ರದೇಶಗಳಿಗೆ ಪೂರೈಸಿದಲ್ಲಿ ಯೋಗ್ಯ ಧಾರಣೆ ದೊರಕಬಹುದೆಂಬುದನ್ನೂ ತಿಳಿಸಿದ್ದೆ, ಆದರೆ ಇವಾವುದೂ ನಮ್ಮಲ್ಲಿ ಆಗಿಲ್ಲ. ಇತ್ತೀಚೆಗೆ ಧಾರಣೆ ಕುಸಿದಾಗ ಸಂಬಾರ ಪದಾರ್ಥಗಳಿಂದ ಕೂಡಿದ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನವನ್ನು ತಯಾರಿಸಿದಲ್ಲಿ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದೆಂಬ ಬಗ್ಗೆ ತಿಳಿಸಿದ್ದೆ. ಇದಕ್ಕಿಂದು ಪ್ರತಿಕ್ರಿಯೆಯೂ ಬರಲಾರಂಬಿಸಿದೆ. ನಾನು ಇತ್ತೀಚೆಗೆ ನಡೆಸಿದ ಪ್ರಯತ್ನದ ಫಲವಾಗಿ ಅಡಿಕೆಯ ಚೋಕಲೇಟನ್ನು ಮಾಡಬಹುದೆಂಬ ವಿಚಾರವನ್ನು ಅರಿತು, ಈ ನಿಟ್ಟಿನಲ್ಲಿ ಪ್ರಯತ್ನಸಾಗುತ್ತಿದೆ. ಇದೇ ರೀತಿಯಲ್ಲಿ ಅಡಿಕೆಯಿಂದ ವಿಧವಿಧದ ಉತ್ಪನ್ನಗಳನ್ನು ಮಾಡಲು ಎಷ್ಟೋ ಅವಕಾಶಗಳಿವೆ. ಇದಕ್ಕಾಗಿ ದಕ್ಷ ರೀತಿಯ ಪ್ರಯತ್ನಗಳಿಂದಾಗಬೇಕು.

ಅಡಿಕೆಯ ವಿವಿಧ ಸಿದ್ಧ ಉತ್ಪನ್ನ ಯಾ ಮೌಲ್ಯವರ್ಧಿತ ಉತ್ಪನ್ನಗಳನ್ನು ಬದಲಾಗುತ್ತಿರುವ ಮಾರುಕಟ್ಟೆಗನುಗುಣವಾಗಿ ಮಾಡಬೇಕೇ ಹೊರತು ಮೂಲ ಉತ್ಪನ್ನದ ರೂಪದಲ್ಲಲ್ಲ. ಚಾಲಿ ಅಡಿಕೆಯಿಂದ ತಯಾರಿಸಲಾಗುವ ಬೀಡಾಗಳ ದರ ಏರುತ್ತಿದ್ದಂತೆ ಬೇಡಿಕೆ ಕುಸಿಯಲೂ ಬಹುದು. ಆದ್ದರಿಂದ ಹಣ್ಣಡಿಕೆಯಿಂದ ತಯಾರಿಸಿದ ಬೀಡಾದ ಮಾರಟಕ್ಕಿಂದು ದೇಶದ ನಾನಾ ಭಾಗಗಳಲ್ಲಿ ಪ್ರಯತ್ನವಾಗಬೇಕು. ಇದಕ್ಕಾಗಿ ಶೀತಲೀಕರಣ ಮತ್ತು ಶೇಖರಣೆ ಅಲ್ಲದೆ ಉತ್ತಮ ಸಾಗಣೆ ವ್ಯವಸ್ಥೆಗಿಳಿಯಬೇಕು. ಅಡಿಕೆಗಿಂದು ಬೇಡಿಕೆಯಿರಲು ಮುಖ್ಯ ಕಾರಣ ತಂಬಾಕಿಕನೊಂದಿಗೆ ಇದರ ಸೇವನೆ. ಈ ನಿಟ್ಟಿನಲ್ಲಿ ತಂಬಾಕು ಸಹಿತ ಮತ್ತು ತಂಬಾಕು ರಹಿತವಾದ ಎರಡೂ ರೀತಿಯ ಸಿದ್ಧ ಉತ್ಪನ್ನಗಳನ್ನು ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ತಯಾರಿಸಿ ಮಾರಾಟ ಮಾಡಿದಲ್ಲಿ ಕ್ಷೇತ್ರಕ್ಕೆ ಭವಿಷ್ಯವಿದೆ. ಅಡಿಕೆಯಿಂದ ಇಂದು ತಯಾರಿಸಲಾಗುತ್ತಿರುವ ಪಾನ್‌ಮಸಾಲ, ಗುಟ್ಕಾ ಇತ್ಯಾದಿಗಳಿಗೆ ಬೇಡಿಕೆಯೇರಲು ಮುಖ್ಯ ಕಾರಣ ಅವುಗಳಿಂದು ಗ್ರಾಹಕರನ್ನು ಶೀಘ್ರವಾಗಿ ತೃಪ್ತಿಗೊಳಿಸುತ್ತಿರುವುದು. ಸೋತಾಗ ಪ್ರಯತ್ಯಗಳಾಗುವ ಬದಲು ನಿರಂತರ ಪ್ರಯತ್ನಗಳಾದಲ್ಲಿ ಕ್ಷೇತ್ರ ಉಳಿಯಬಹುದು.

() ಪ್ರಚಾರ : ಅಡಿಕೆಯ ಮಾರುಕಟ್ಟೆಯ ವಿಸ್ತರಣೆಗಾಗಿ ಪ್ರದೇಶಕ್ಕನುಗುಣವಾದ ಪ್ರಚಾರಗಳಾಗಲೇಬೇಕು. ದೇಶದ ಮೂಲೆ ಮೂಲೆಗಳಲ್ಲಿ, ವಿದೇಶಗಳ ಮಾರುಕಟ್ಟೆಗಳಲ್ಲಿ ಅಡಿಕೆಯಲ್ಲಿರುವ ಔಷಧೀಯ ಗುಣಗಳು ಮತ್ತು ಅದರ ಉಪಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿ, ಹೆಚ್ಚಿನ ಪ್ರಚಾರವನ್ನಿನ್ನಾದರೂ ಕೈಗೊಳ್ಳಲೇಬೇಕು. ಉಚಿತಗಳಿಂದ ಆಕರ್ಷಣೆಗೊಳಗಾಗುತ್ತಿರುವ ಈಗಿನ ಮಾರುಕಟ್ಟೆ ವಾತಾವರಣದಲ್ಲಿ ಅಡಿಕೆಯ ಸಣ್ಣ ಸಣ್ಣ ಪ್ಯಾಕೇಟುಗಳನ್ನು ಇತರೇ ಉತ್ಪನ್ನಗಳೊಂದಿಗೆ ಉಚಿತವಾಗಿ ನೀಡಿ ಗ್ರಾಹಕರನ್ನಿಂದು ಸೆಳೆಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬೆಳೆಗಾರನು ಒಂದು ನಿರ್ದಿಷ್ಟ ಪ್ರಮಾಣವನ್ನು ಮಾರಾಟ ವ್ಯವಸ್ಥೆಯಲ್ಲಿರುವ ಸಂಸ್ಥೆಗಳಿಗೆ ಉಚಿತವಾಗಿ ನೀಡಿ ಪ್ರಚಾರ ಆಂದೋಲನಕ್ಕೆ ಬೆಂಬಲ ನೀಡಬೇಕು.

() ಬೆಳಗಾರರದ್ದಾದ ಸಂಸ್ಥೆಗಳ ಅಭಿವೃದ್ದಿ ಮತ್ತು ನೂತನ ಸಂಸ್ಥೆಗಳ ಸ್ಥಾಪನೆ :  ಪ್ರಕೃತ ಅಡಿಕೆ ಮಾರುಕಟ್ಟೆಯಲ್ಲಿ ಬೆಳೆಗಾರರ ಹಿತವನ್ನು ಕಾಪಾಡಲು ಕ್ಯಾಂಪ್ಕೋ ಸಂಸ್ಥೆಯೊಂದೇ ಶ್ರಮಿಸುತ್ತಿದ್ದು, ಹೀಗಿದ್ದರೂ ಇದಿಂದು ಖರೀದಿಸುತ್ತಿರುವ ಅಡಿಕೆ ಪ್ರಮಾಣ ದೇಶದ ಒಟ್ಟಾರೆ ಉತ್ಪಾದನೆಗೆ ಹೋಲಿಸಿದಾಗ ಅತ್ಯಲ್ಪ. ಇದಕ್ಕಾಗಿ ಸಂಸ್ಥೆಯನ್ನಿಂದು ಇನ್ನಷ್ಟು ಪ್ರಮಾಣದ ಖರೀದಿಗಿಳಿಯಲು ಆರ್ಥಿಕವಾಗಿ ಬೆಂಬಲಿಸಬೇಕು. ಇದರೊಂದಿಗೆ ದ.ಕ. ಕೃಷಿಕರ ಸಹಕಾರಿ ಮಾರಾಟ ಸಂಘ, ಟಿ.ಎಸ್‌.ಎಸ್‌. ಮತ್ತು ಮ್ಯಾಮ್ಕೋ ಸಂಸ್ಥೆಗಳು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ಕ್ಯಾಂಪ್ಕೋದ ರೀತಿಯಲ್ಲೇ ಮಾರುಕಟ್ಟೆಗಿಳಿಯಬೇಕು. ಇದರೊಂದಿಗೆ ದೇಶದ ಅಡಿಕೆಯ ಉತ್ಪಾದನೆಯ ಬಹುಪಾಲನ್ನು ಬೆಳೆಗಾರರದ್ದಾದ ಸಂಸ್ಥೆಗಳೇ ಖರೀದಿಸಲು ಇಲ್ಲಿ ಇನ್ನಷ್ಟು ಸಂಸ್ಥೆಗಳು ಹುಟ್ಟಬೇಕು. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ ಕೃಷಿಕರು ಮಂಗಳೂರು ಕೃಷಿಕರ ಸೌಹಾರ್ದ ಸಹಕಾರಿ ಸಂಘ ಒಂದನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿಸಿ ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದು, ಇದಿಂದು ಈ ಕ್ಷೇತ್ರದ ಅಭಿವೃದ್ಧಿ ಮತ್ತು ರಕ್ಷಣೆಯ ದೃಷ್ಟಿಯಿಂದ ಒಂದು ಉತ್ತಮ ಕಾರ್ಯವಾಗಿದೆ. ಈ ಎಲ್ಲಾ ಸಂಸ್ಥೆಗಳು ಒಗ್ಗೂಡಿ ಅಡಿಕೆಯ ಮಾರಾಟ ವ್ಯವಸ್ಥೆಗಿಳಿದಲ್ಲಿ ಇವಕ್ಕಿಂದು ಕೊನೆಪಕ್ಷ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಡಿಕೆಯ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಬಹುದು.

ಅಡಿಕೆಯ ಸಿದ್ಧ ಉತ್ಪನ್ನಗಳಿಂದು ಬೇಡಿಕೆಯೇರುತ್ತಿದ್ದು, ಈ ನಿಟ್ಟಿನಲ್ಲಿ ಬೆಳೆಗಾರರದ್ದಾದ ಇಲ್ಲವೇ ಸಾರ್ವಜನಿಕರ ಬೆಂಬಲದಿಂದೊಡಗೂಡಿದ ಒಂದು ಸಾರ್ವಜನಿಕ ಉದ್ದಿಮೆಯ ಸ್ಥಾಪನೆಯಾಗಿ ಅಲ್ಲಿಂದು ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಯಾ ಸಿದ್ಧ ಉತ್ಪನ್ನಗಳ ತಯಾರಿಯಾಗಬೇಕು. ಈ ಸಂಸ್ಥೆಯು ಬೆಳೆಗಾರ ಪ್ರದೇಶದಲ್ಲೇ ಸ್ಥಾಪನೆಗೊಂಡು, ತನ್ನ ಮಾರಾಟ ಜಾಲವನ್ನು ದೇಶ, ವಿದೇಶಗಳಲ್ಲಿ ಹೊಂದಬೇಕು.

() ರಫ್ತಿನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದು : ಅಡಿಕೆಯ ವಿವಿಧ ರೂಪಗಳಿಗೆ ಮತ್ತು ಸಿದ್ಧ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿಂದು ಬೇಡಿಕೆ ಏರುತ್ತಿದ್ದರೂ, ವರ್ಷದಿಂದ ವರ್ಷಕ್ಕೆ ಇದಕ್ಕಿರುವ ಮಾರುಕಟ್ಟೆಗಳಲ್ಲಿನ ಬೇಡಿಕೆ ಏರುಪೇರಾಗುತ್ತಿದೆ. ಇದಕ್ಕಾಗಿ ಗ್ರಾಹಕರ ರುಚಿಯನ್ನು ತಿಳಿದು, ಅಗತ್ಯ ಸಮೀಕ್ಷೆಗಳನ್ನು ನಡೆಸಿ ರಫ್ತಿನ ಹೆಚ್ಚಳಕ್ಕಾಗಿ ಶ್ರಮಿಸಬೇಕು.

() ಪ್ರಬಲ ಸಂಘಟನೆ : ಅಡಿಕೆ ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ಸಮಸ್ಯೆಗಳ ಮಹಾಪೂರವಾಗುತ್ತಿದ್ದು, ಈ ಸಮಸ್ಯೆಗಳ ನಿವಾರಣೆಗಾಗಿ ಸಂಘಟಿತ ಹೋರಾಟವಾಗಲೇ ಬೇಕು. ಪ್ರಕೃತ ಈ ದಿಶೆಯಲ್ಲಿ ಅಖಿಲ ಭಾರತ ಬೆಳೆಗಾರರ ಸಂಘವೊಂದೇ ಹೋರಾಟ ಮಾಡುತ್ತಿದ್ದರೂ, ಇದಕ್ಕಿಂದು ಬೆಳೆಗಾರ ಸಮೂಹದಿಂದ ದೊರಕುತ್ತಿರುವ ಬೆಂಬಲ ಅತ್ಯಲ್ಪ. ಇದಕ್ಕಾಗಿ ಬೆಳೆಗಾರರಿಂದು ಒಗ್ಗೂಡಿ ತಮ್ಮದೇ ಆದ ಈ ಸಂಘವನ್ನು ಆರ್ಥಿಕವಾಗಿ ಸದೃಡಗೊಳಿಸಿ, ತಮ್ಮದೇ ಆದ ಸಂಶೋಧನಾ ಮತ್ತು ಅಧ್ಯಯನ ಪೀಠವನ್ನು ಇದರಲ್ಲಿ ಹೊಂದಬೇಕು. ಅಡಿಕೆ ಕ್ಷೇತ್ರಕ್ಕೆ ದೀರ್ಘ ಇತಿಹಾಸವಿದ್ದರೂ, ಇಲ್ಲೊಂದು ಪ್ರಭಲ ಸಂಘಟನೆಯ ಕೊರತೆಯಿದ್ದು, ಇದನ್ನಿಂದು ನೀಗಿಸಬೇಕು. ಸಂಘಟನೆಯಿಲ್ಲದಿದ್ದಲ್ಲಿ ಪ್ರತಿಭಟನೆ ಅಸಾಧ್ಯ. ಇದಾಗದಿದ್ದಲ್ಲಿ ಪ್ರತಿಫಲ ದೊರಕಲಾರದು ಮತ್ತು ಸಂಸ್ಥೆಗಳದ್ದಾಗಲಿ ಸರಕಾರಗಳದ್ದಾಗಲಿ ಯಾವುದೇ ಬೆಂಬಲ ಈ ಕ್ಷೇತ್ರಕ್ಕಾಗದು.

() ಏಕರೂಪದ ತೆರಿಗೆ ಪದ್ಧತಿ : ಅಡಿಕೆಯ ಒಂದು ಮೂಲ ಕೃಷಿಯುತ್ಪನ್ನವಾಗಿದ್ದು, ಇದನ್ನು ನಂಬಿ ಹಲವು ಕೋಟಿ ಕೃಷಿಕರು ಮತ್ತು ಕಾರ್ಮಿಕರು ಅಲ್ಲದೆ ಹಲವು ರೀತಿಯ ವ್ಯವಹಾರಗಳಿಂದು ದೇಶದಾದ್ಯಂತ ನಡೆಯುತ್ತಿದ್ದು, ಇದರ ಮಾರಾಟ ವ್ಯವಸ್ಥೆಗಿಂದು ದೇಶದ ನಾನಾ ರಾಜ್ಯಗಳಲ್ಲಿ ವಿಧಿಸಲ್ಪಡುವ ವಿಧವಿಧದ ತೆರಿಗೆಗಳಿಂದ ತೊಂದರೆಗಳಾಗುತ್ತಿವೆ. ಇದನ್ನಿಂದು ತಪ್ಪಿಸಲೇಬೇಕು. ಕೇಂದ್ರ ಸರಕಾರವು ಏಕರೂಪದ ತೆರಿಗೆ ಪದ್ಧತಿಯನ್ನು ಜ್ಯಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದರೂ ಅದಿನ್ನೂ ಕಾರ್ಯಕ್ಕಿಳಿಯಲಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳ, ಜನ ಪ್ರತಿನಿಧಿಗಳ ಪ್ರಯತ್ನಗಳಾಗಲೇಬೇಕು.

(೧೦) ಸಂಚಾರೀ ಮಾರುಕಟ್ಟೆ ವ್ಯವಸ್ಥೆ : ಪ್ರಕೃತ ಅಡಿಕೆ ಮಾರಾಟ ವ್ಯಸ್ಥೆಯಲ್ಲಿ ಮಧ್ಯವರ್ತಿಗಳ ಸಂಖ್ಯೆ ಅಧಿಕವಾಗಿದ್ದು, ಇವರ ಕಾರ್ಯಕ್ಷೇತ್ರ ಹಳ್ಳಿಹಳ್ಳಿಗಳಿಗೂ ವಿಸ್ತಾರವಾಗಿದೆ. ಪರಿಣಾಮವಾಗಿ ಬೆಳೆಗಾರರಿಗಿಂದು ಯೋಗ್ಯ ಧಾರಣೆಯು ದೊರಕದೆ ಸೋಲನ್ನು ಅನುಭವಿಸುತ್ತಿದ್ದು, ಇದನ್ನು ತಪ್ಪಿಸಲು ಅಡಿಕೆ ಮಾರಾಟ ವ್ಯಸ್ಥೆಯಲ್ಲಿರುವ ಸಹಕಾರಿ ಸಂಸ್ಥೆಗಳಿಂದು ತಮ್ಮದೇ ಆದ ಸಂಚಾರಿ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿ ಬೆಳೆಗಾರರ ಮನೆಬಾಗಿಲಿಗೆ ಹೋಗಿ ಅಡಿಕೆಯನ್ನು ಖರೀದಿಸುವ ವ್ಯಸ್ಥೆಯಾದಲ್ಲಿ ಈಗಿರುವ ಮಧ್ಯವರ್ತಿಗಳ ಸಂಖ್ಯೆಯನ್ನಿಳಿಸಬಹುದು.

(೧೧) ಪ್ರತಯಕ್ಷ ಮತ್ತು ಪರೋಕ್ಷ ಆಮದುಗಳ ಮೇಲೆ ಹತೋಟಿ : ವಿಶ್ವ ವ್ಯಾಪಾರಿ ಸಂಸ್ಥೆಯ ಒಪ್ಪಂದ, ಅಡಿಕೆ ಬೆಳೆಯುವ ಇತರೇ ರಾಷ್ಟ್ರಗಳೊಂದಿಗೆ ಆಗಿರುವ ವಾಣಿಜ್ಯ ಒಪ್ಪಂದಗಳಿಂದಾಗಿ ಮುಂದಿನ ದಿನಗಳಲ್ಲಿ ಅಡಿಕೆಯ ಆಮದಿನ ಪ್ರಮಾಣ ಹೆಚ್ಚಲು ಅವಕಾಶವಿದ್ದು, ಇದರೊಂದಿಗೆ ಚೀನಾದಂತಹ ರಾಷ್ಟ್ರದಲ್ಲಿ ಉತ್ಪಾದನಾ ಪ್ರಮಾಣವು ಗಣನೀಯವಾಗಿ ವೃದ್ಧಿಸುತ್ತಿದ್ದು, ಮುಂದೆ ಈ ರಾಷ್ಟ್ರವು ಡಬ್ಲ್ಯೂಟಿಓ ದ ಸದಸ್ಯನಾಗಲ್ಲಿದ್ದು, ಪರಿಣಾಮವಾಗಿ ಅಲ್ಲಿಂದಲೂ ನಮ್ಮಲ್ಲಿಗೆ ಅಡಿಕೆಯ ಒಳಹರಿವಾಗಬಹುದು. ಇದಕ್ಕಾಗಿ ಬೆಳೆಗಾರರಿಂದು ಒಗ್ಗೂಡಿ ತಮ್ಮ ಸಂಸ್ಥೆಗಳ ನೆರವಿನಿಂದ ಪರೋಕ್ಷ ಆಮದನ್ನು ತಡೆಗಟ್ಟಲು ಸರಕಾರವನ್ನು ಎಚ್ಚರಿಸಬೇಕು. ವಿದೇಶಿ ಅಡಿಕೆಗಿಂದು ಉತ್ತರ ಭಾರತದ ಅಡಿಕೆಯ ವ್ಯವಹಾರಸ್ಥರು ತೋರಿಸುತ್ತಿರುವ ಆಸಕ್ತಿಯನ್ನು ಕುಗ್ಗಿಸಲು ಅವರೊಂದಿಗೆ ಕಾಲಕಾಲಕ್ಕೆ ಉತ್ತಮ ಬಾಂಧವ್ಯವನ್ನು ಹೊಂದಿ ವಿದೇಶಿ ವ್ಯಾಮೋಹವನ್ನು ತಗ್ಗಿಸಬೇಕು. ಅಡಿಕೆಯ ಆಮದಿನ ಮೇಲೆ ವಿಧಿಸಬಹುದಾದ ಗರಿಷ್ಟ ಸುಂಕವನ್ನು ವಿಧಿಸಲು ಸರಕಾರಕ್ಕೆ ಒತ್ತಡ ತರಲೇಬೇಕು.

ಈ ಎಲ್ಲಾ ವಿಚಾರಗಳನ್ನು ಅಡಿಕೆ ಕ್ಷೇತ್ರಕ್ಕಿಂದು ಅಗತ್ಯವಿರುವ ದೂರದೃಷ್ಟಿಯ ಯೋಜನೆಯಲ್ಲಿ ಅಳವಡಿಸಿ ಅವನ್ನು ದಕ್ಷ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು. ಇವುಗಳೊಂದಿಗೆ ಅನುಬಂಧಗಳಲ್ಲಿ ಹೆಸರಿಸಿದ ಇನ್ನಿತರೇ ಪರಿಹಾರೋಪಾಯಗಳನ್ನೂ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಬೆಳೆಗಾರರು, ಬೆಳೆಗಾರರದ್ದಾದ ಸಂಘಟನೆ, ಸಂಸ್ಥೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಹೀಗಾದಲ್ಲಿ ಮಾತ್ರ ಅಡಿಕೆ ಕ್ಷೇತ್ರ ಕಾಲಕಾಲಕ್ಕೆ ಒದಗಿ ಬರುತ್ತಿರುವ ಕಷ್ಟನಷ್ಟಗಳನ್ನು ಹೊಡೆದೋಡಿಬಹುದು. ಇವೆಲ್ಲದರೊಂದಿಗೆ ಅಡಿಕೆ ಕ್ಷೇತ್ರವು ಸೋಲನ್ನು ಅನುಭವಿಸುತ್ತಿರುವಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು ಸದಾ ಎಚ್ಚರದಿಂದರಬೇಕು, ಅಲ್ಲದೇ ಬೆಳೆಗಾರರು ತಮ್ಮ ಉತ್ಪನ್ನದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ತಾನೂ ಅದರ ಬಳಕೆದಾರರಾಗಿ ಇನ್ನುಳಿದವರನ್ನೂ ಇದರ ಗ್ರಾಹಕರನ್ನಾಗಿಸಬೇಕು. ಅಡಿಕೆಯಿಂದು ಜೀವನಾವಶ್ಯಕ ಉತ್ಪನ್ನವಲ್ಲದೆ ಇರುವುದರಿಂದ, ಇದಿಂದು ಒಂದು ರೀತಿಯ ಚಟವಾಗಿ ಹೊರಹೊಮ್ಮಿರುವುದರಿಂದ ಇದಕ್ಕಿರುವ ಧಾರಣೆ ಬಗ್ಗೆ ಗ್ರಾಹಕನ ಚಿಂತೆ ಅತ್ಯಲ್ಪ. ಆದ್ಧರಿಂದ ಮಾರುಕಟ್ಟೆ ವ್ಯವಸ್ಥೆಯನ್ನಿಂದು ಸರಿಪಡಿಸಿದಲ್ಲಿ, ವ್ಯವಹಾರಸ್ಥರ ಮತ್ತು ಗ್ರಾಹಕರ ಒಲವನ್ನು ಗಳಿಸಿದಲ್ಲಿ ಮತ್ತು ಪರಸ್ಪರ ಭಾಂದವ್ಯವನ್ನು ಹೊಂದಿದಲ್ಲಿ ಅಡಿಕೆ ಧಾರಣೆ ಹಿಂಜರಿಕೆಯನ್ನು ತೋರದೆ ಸ್ಥಿರವಾಗಿ ಇಲ್ಲವೇ ಏರುಪ್ರವೃತ್ತಿಯನ್ನು ತೋರಿಸಬಹುದಾಗಿದೆ. ಆದ್ದರಿಂದ ಇಲ್ಲಿಂದು ಆಗ ಬೇಕಾದ್ದು ಮಾರುಕಟ್ಟೆಯ ಸುಧಾರಣೆ ಮತ್ತು ಬೆಳೆಗಾರರದ್ದಾದ ಮಾರಾಟ ವ್ಯವಸ್ಥೆ ಅಲ್ಲದೆ ಮಾರುಕಟ್ಟೆಯ ಮೇಲೆ ಇವುಗಳ ಹಿಡಿತ. ಒಟ್ಟಾರೆಯಾಗಿ ಅಡಿಕೆ ಕ್ಷೇತ್ರವಿಂದು ಕ್ರಾಂತಿಕಾರಿ ಬದಲಾವಣೆಯನ್ನು ತೋರಿಸಲೇಬೇಕು. ಈ ಬದಲಾವಣೆಯು ಮಾರುಕಟ್ಟೆ ತಂತ್ರಜ್ಞಾನದ್ದಾಗಿರಬೇಕು. ಈ ರೀತಿಯ ವ್ಯವಸ್ಥೆಯು ಅಡಿಕೆ ಕ್ಷೇತ್ರವನ್ನು ಸುಸ್ಥಿತಿಯಲ್ಲಿಟ್ಟು ಇಲ್ಲಿಗೆ ಉತ್ತಮ ಭವಿಷ್ಯವನ್ನು ತಂದುಕೊಡಬಲ್ಲದು.

ಭಾರತದಲ್ಲಿಂದು ಬಳಕೆಯಾಗುತ್ತಿರುವ ಅಡಿಕೆ ಪ್ರಮಾಣದ ವಾರ್ಷಿಕ ಬೆಳವಣಿಗೆಗನುಗುಣವಾಗಿ ೨೦೨೦ ರ ವೇಳೆಗೆ ಬೇಕಾಗಿ ಬರಬಹುದಾದ ಅಡಿಕೆಯ ಪೂರೈಕೆ ಡಾ. ರತಿನಂ ವರದಿ ಪ್ರಕಾರ ಸುಮಾರು ೬,೧೭,೦೦೦ ಟನ್‌ಗಳು. ಸರಕಾರ ಈಗ ದೊರಕಿಸುತ್ತಿರುವ ಉತ್ಪಾದನಾ ಅಂಕಿ-ಅಂಶಗಳ ಪ್ರಕಾರ ಈ ಪ್ರಮಾಣವನ್ನು ಅದಕ್ಕಿಂತ ಮೊದಲೇ ತಲಪುವ ಸಾಧ್ಯತೆ ಇದ್ದು, ಈ ದೃಷ್ಟಿಯಿಂದ ಕ್ಷೇತ್ರ ಈಗಿಂದೀಗಲೇ ಮಾರುಕಟ್ಟೆ ತಂತ್ರಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಭಾರತದಲ್ಲಿ ತಂಬಾಕಿನ ಕೃಷಿಯಿರುವ ತನಕ ಅಡಿಕೆಗೆ ಅಧಿಕ ಮಟ್ಟದ ಬೇಡಿಕೆಯಿರಬಹುದಾಗಿದ್ದು, ಇದರಿಂದಾಗಿ ಅಡಿಕೆಗೆ ಬಹುದೊಡ್ಡ ಹೊಡೆತ ಯಾವತ್ತೂ ಬರಲಾರದು. ಆದ್ದರಿಂದ ಕ್ಷೇತ್ರವಿಂದು ಮಾರುಕಟ್ಟೆ ವಿಸ್ತರಣೆ, ಬದಲಾವಣೆ ಎಂಬಿತ್ಯಾದಿ ವಿಚಾರಗಳಿಗೆ ಅಗತ್ಯ ಗಮನ ಹರಿಸಿದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು.