ಉಪಬೆಳೆಗಳಿಗಿರುವ ಮಾರುಕಟ್ಟೆ
– ಡಾ. ವಿಘ್ನೇಶ್ವರ ವರ್ಮುಡಿ.

ಅಡಿಕೆ ತೋಟಗಳಲ್ಲಿ ಹಲವು ಉಪಬೆಳೆಗಳನ್ನಿಂದು ಬೆಳಸಿ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಕರಿಮೆಣಸು,ಬಾಳೆ, ಕೊಕ್ಕೊ, ಅನನಾಸು ಇತ್ಯಾದಿಗಳನ್ನಿಂದು ಈ ಕ್ಷೇತ್ರದಲ್ಲಿ ಬೆಳೆಸಲಾಗುತಿದ್ದು ಇವಕ್ಕಿರುವ ಬೇಡಿಕೆ ಇಲ್ಲವೇ ಮಾರುಕಟ್ಟೆ ಬಗ್ಗೆ ಬೆಳೆಗಾರರಿಗಿಂದು ಸರಿಯಾದ ಮಾಹಿತಿ ದೊರಕೆದೇ ಇರುವುದರಿಂದ ಇವುಗಳ ಬಗ್ಗೆ ಹೆಚ್ಚಿನ ಆಸಕ್ತಿಯಲ್ಲಿಂದು ಕಂಡುಬರುತ್ತಿಲ್ಲ. ಈ ಬೆಳೆಗಳೊಂದಿಗೆ ಕಾಫಿ, ಏಲಕ್ಕಿ, ಲವಂಗ, ಜಾಯಿಕಾಯಿ, ವೆನಿಲ್ಲಾ, ವೀಳ್ಯದೆಲೆ ಮುಂತಾದವುಗಳನ್ನು ಬೆಳೆಸಲವಕಾಶವಿದ್ದು, ಹೀಗಿದ್ದರೂ ಈ ತನಕ ಇವುಗಳ ಬಗ್ಗೆ ಅಡಿಕೆ ಕ್ಷೇತ್ರದಲ್ಲಿ ನಿರೀಕ್ಷಿತ ಆಸಕ್ತಿ ಕಂಡುಬಾರದೇ ಇದ್ದು, ಇದರಿಂದಾಗಿ ಅಡಿಕೆಯ ಧಾರಣೆ ಕುಸಿತಕ್ಕೊಳಗಾದಾಗ ಇಲ್ಲಿ ಗೊಂದಲಗಳುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಉತ್ಪನ್ನಗಳ ಪೂರೈಕೆ ಮತ್ತು ಬೇಡಿಕೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯಲ್ಲಿ ನೀಡಲಾಗಿದೆ.

) ಕರಿಮೆಣಸು
ಸಂಬಾರ ಪದಾರ್ಥಗಳ ರಾಜನೆಂದು ಕರೆಯಲ್ಪಡುವ ಕರಿಮೆಣಸಿಗಿಂದು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಗಾಧ ಬೇಡಿಕೆಯಿದೆ. ಹೀಗಿದ್ದರೂ ಭಾರತವಿಂದು ಉತ್ಪಾದಿಸುತ್ತಿರುವ ಕರಿಮೆಣಸಿನ ಪ್ರಮಾಣ ಸುಮಾರು ೬೦ ಸಾವಿರ ಟನ್‌ಗಳಷ್ಟು, ಭಾರತದಲ್ಲಿಂದು ಉತ್ಪಾದಿಸಲ್ಪಡುವ ಒಟ್ಟು ಉತ್ಪಾದನೆಯ ಶೇಕಡಾ ೬೨ರಷ್ಟು ವಿದೇಶಿ ಮಾರುಕಟ್ಟೆಗೆ ಚಲಿಸುತ್ತಿದ್ದು, ಇದಕ್ಕಿರುವ ಬೇಡಿಕೆ ನಿರಂತರವಾಗಿ ಏರುತ್ತಿದೆ. ೧೯೪೭–೪೮ರಲ್ಲಿ ಭಾರತವು ವಿಶ್ವದ ಒಟ್ಟು ಬೇಡಿಕೆಯ ಸುಮಾರು ಶೇಕಡಾ ೭೫ರಷ್ಟು ಪೂರೈಸುತ್ತಿದ್ದು, ಇದಿಂದು ಶೇಕಡಾ ೨೫ಕ್ಕಿಳಿದಿದೆ, ಈ ರೀತಿಯ ಇಳಿಕೆಗೆ ಮುಖ್ಯ ಕಾರಣಗಳೆಂದರೆ ಆಂತರಿಕವಾಗಿ ಉತ್ಪಾದಿಸಲ್ಪಡುವ ಉತ್ಪನ್ನದಲ್ಲಾಗುತ್ತಿರುವ ಏರು ಪೇರು, ಬ್ರೇಜಿಲ್, ಇಂಡೋನೇಷಿಯಾ, ಮಲೇಶಿಯಾ ಮತ್ತು ವಿಯೆಟ್ನಾಂಗಳಿಂದ ಪೈಪೋಟಿ ಮತ್ತು ಗುಣಮಟ್ಟದ ಆಭಾವ. ಈ ನಿಟ್ಟಿನಲ್ಲಿ ಸಾವಯವ ಕೃಷಿಯ ಮೂಲಕ ಉತ್ಪಾದಿಸಲ್ಪಡುವ ಕರಿಮೆಣಸಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯು ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಬರಬಹುದಾಗಿದ್ದು ಇದಕ್ಕಾಗಿ ಅಡಿಕೆ ಬೆಳೆಗಾರರಿಂದು ಶ್ರಮಿಸಬೇಕಾಗಿದೆ.

) ಯಾಲಕ್ಕಿ
ಸಂಬಾರ ಪದಾರ್ಥಗಳ ರಾಣಿ ಯಾಲಕ್ಕಿ. ಭಾರತವಿಂದು ಉತ್ಪಾದಿಸುತ್ತಿರುವ ಯಾಲಕ್ಕಿಯ ಪ್ರಮಾಣ ಸುಮಾರು ೮೦೦೦ ಟನ್‌ಗಳು. ೧೯೮೫–೮೬ರ ತನಕ ಬಾರತವು ವಿಶ್ವದ ಯಾಲಕ್ಕಿ ಉತ್ಪಾದನೆಯಲ್ಲಿ ಆಗ್ರಸ್ಥಾನವನ್ನು ಹೊಂದಿತ್ತು. ಆದರೆ ಕ್ರಮೇಣ ಗ್ವಾಟೆಮಾಲದಂತಹ ರಾಷ್ಟ್ರಗಳಿಂದ ಪೈಪೋಟಿ ಬಂದು ಬಾರತದ ಪಾಲು ಶೇಕಡಾ ೩೦ಕ್ಕೆ ಕುಸಿದಿದೆ. ಇದಕ್ಕೆ ಮುಖ್ಯವಾಗಿ ಕಾರಣ ಈ ಬೆಳೆಯ ಬಗ್ಗೆ ಕಂಡು ಬಂದ ಅನಾಸಕ್ತಿ. ವಿಶ್ವ ಮಾರ್ಕಟ್ಟೆಯಲ್ಲಿ ಬಾರತದ ಸಣ್ಣ ಯಾಲಕ್ಕಿಗೆ ಅಗಾಧ ಬೇಡಿಕೆಯಿದ್ದರೂ, ಅದಕ್ಕನುಗುಣವಾದ ಪೂರೈಕೆ ನಮ್ಮಲ್ಲಿಂದಾಗುತ್ತಿಲ್ಲ.  ಈ ನಿಟ್ಟಿನಲ್ಲಿ ಯಾಲಕ್ಕಿಯ ವ್ಯವಸಾಯ ಅಡಿಕೆ ಕ್ಷೇತ್ರಕ್ಕೆ ಪೂರಕವಾಗಬಲ್ಲದು.

() ಲವಂಗ:
ಲವಂಗದ ವ್ಯವಸಸಾಯವನ್ನು ಅಡಿಕೆಯೊಂದಿಗೆ ಕೈಗೊಳ್ಳಲು ಉತ್ತಮ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ನಮ್ಮಲ್ಲಿ ಪ್ರಯತ್ನಗಳಾಗಿವೆ. ಭಾರತವಿಂದು ತನ್ನ ಬಳಕಗೆ ಅಗತ್ಯವಿರುವ ಲವಂಗ, ಲವಂಗದಣ್ಣೆ ಇತ್ಯಾದಿಗಳನ್ನು ಹರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಈ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೂ ಇರುವುದರಿಂದ ಅಡಿಕೆ ಕ್ಷೇತ್ರಕ್ಕೆ ಇದೊಂದು ಯೋಗ್ಯ ಉಪಬೆಳೆಯಾಗಬಲ್ಲದು.

() ವೆನಿಲ್ಲಾ:
ಪ್ರಕೃತ ವೆನಿಲ್ಲಾವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ರಾಷ್ಟ್ರಗಳೆಂದರೆ ಮೆಡಗಾಸ್ಕರ್, ಮೆಕ್ಷಿಕೊ, ಕ್ಯಾಮರೆ, ಕುಕ್‌ದ್ವೀಪ ಸಮೂಹ, ಫ್ರಾನ್ಸ ಇಂಡೋನೇಷಿಯಾ ಇತ್ಯಾದಿಗಳು. ವಿಶ್ವದಲ್ಲಿಂದು ವೆನಿಲ್ಲಾವನ್ನು ಸುಮಾರು ೩೭,೫೨೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದು ಇದರ ಉತ್ಪಾದನೆಯು ೧೯೯೯–೨೦೦೦ದಲ್ಲಿ ಸಮಾರು ೪,೪೦೩ ಟನ್‌ಗಳು. ಭಾರತದಲ್ಲಿಂದು ಇದರ ವ್ಯವಸಾಯವನ್ನು ಸಮಾರು ೧೦೦೦ ಹೆಕ್ಟೇರ್ ಪ್ರದೇಶಗಳಲ್ಲಿ ಕೈಗೊಳ್ಳಲಾಗಿ ಇದರಿಂದ ಲಭ್ಯವಾಗುವ ಉತ್ಪಾದನೆ ಸುಮಾರು ೩೦೦ ರಿಂದ ೩೫೦ ಟನ್‌ಗಳು. ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿಂದು ಇದಕ್ಕಿರುವ ಬೇಡಿಕೆಯ ಪ್ರಮಾಣ ಸುಮಾರು ೭೧,೪೦೦ ಟನ್‌ಗಳಿಗೆ ಏರಿಸಬೇಕಾಗಿದೆ. ಈ ಪ್ರಮಾಣದ ಉತ್ಪಾದನೆಯನ್ನು ಸಾಧಿಸಲು ಇದರ ಕೃಷಿಯನ್ನು ಸುಮಾರು ೨,೩೮೦ ಲಕ್ಷ ಹೆಕ್ಟೇರ್ಗಳಿಗೆ ಏರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ವೆನಿಲ್ಲಾವನ್ನು ಒಂದು ಉತ್ತಮ ಉಪಬೆಳೆಯನ್ನಾಗಿ ಆರಿಸಿಕೊಳ್ಳಬಹುದಾಗಿದೆ. ಭಾರತದಲ್ಲಿ ಈ ವ್ಯವಸಾಯವನ್ನು ಸುಮಾರು ೩,೫೦೦ ಹೆಕ್ಟೇರ್ಗಳಿಗೆ ವಿಸ್ತರಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳಿಂದಾಗಬೇಕಾಗಿದೆ. ಇದಕ್ಕಾಗಿ ಹೆಚ್ಚಿನ ಮಾಹಿತಿಯನ್ನು ನೀಲಗಿರಿಯಲ್ಲಿರುವ ಕೊಲ್ಲಾರ ಸಂಶೋಧನಾ ಕೇಂದ್ರದಿಂದ ಪಡೆಯಬಹುದು.

() ಬಾಳೆ:
ಬಾಳೆಯ ಕೃಷಿಯಲ್ಲಿ ಭಾರತವು ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿದ್ದರೂ ಇದರ ರಫ್ತಿನ ಪ್ರಮಾಣ ವಿಶ್ವದ ಬೇಡಿಕೆಯ ಒಟ್ಟು ಪ್ರಮಾಣದ ಶೇಕಡಾ ಒಂದಕ್ಕಿಂತಲೂ ಕಡಿಮೆ.

() ವೀಳ್ಯದೆಲೆ:
ವೀಳ್ಯದೆಲೆಗೆ ಸ್ಥಳೀಯವಾಗಿ ಮತ್ತು ವಿದೇಶಗಳಲ್ಲಿ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಅಡಿಕೆ ಕ್ಷೇತ್ರಕ್ಕೆ ಇದೊಂದು ಉತ್ತಮ ಉಪಬೆಳೆಯಾಗಬಹುದು. ಭಾರತವು ವಾರ್ಷಿಕ ಸರಾಸರಿ ೩ ಸಾವಿರ ಟನ್‌ಗಳಷ್ಟು ವೀಳ್ಯದೆಲೆಯನ್ನು ರಫ್ತು ಮಾಡುತ್ತಿದ್ದು, ಇದು ವಿಶ್ವದ ಬೇಡಿಕೆಯಲ್ಲಿ ಅಲ್ಪ ಪ್ರಮಾಣದ್ದಾಗಿದೆ.

() ಹಣ್ಣುಹಂಪಲುಗಳು:
ಭಾರತವು ಮಾವು, ಪಪ್ಪಾಯಿ, ಅನನಾಸು, ಮುಂತಾದ ಹಣ್ಣುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನಗಳನ್ನು ಹೊಂದಿದ್ದರೂ, ಇವ್ಯಾವುದೂ ವಿದೇಶಿ ಮಾರುಕಟ್ಟೆಯನ್ನಿಂದು ಪರಿಪೂರ್ಣವಾಗಿ ಪ್ರವೇಶಿಸಿಲ್ಲ. ಇವುಗಳೊಂದಿಗೆ ಅಡಿಕೆ ತೋಟಗಳಲ್ಲಿಂದು ಕಂಡು ಬರುತ್ತಿರುವ ಹಲಸು, ನೇರಳೆ ಇತ್ಯಾದಿಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೂ ಈ ಬಗ್ಗೆ ಇಲ್ಲಿ ಆಸಕ್ತಿಯಿನ್ನೂ ಕಂಡುಬಂದಿಲ್ಲ.

(೮) ಕೊಕ್ಕೋ:
ಕೊಕ್ಕೋ ಕೃಷಿಯ ಬಗ್ಗೆ ೧೯೬೫ ರಿಂದೀಚೆಗೆ ನಮ್ಮಲ್ಲಿ ಆಸಕ್ತಿ ಕಂಡು ಬರುತ್ತಿದ್ದರೂ, ಇದರ ಧಾರಣೆಯ ಏರು ಪೇರಿನಿಂದಾಗಿ ೧೯೮೦ರ ದಶಕದಿಂದೀಚೆಗೆ ಇದಕ್ಕಿದ್ದ ವ್ಯಾವಸಾಯಿಕ ಮೌಲ್ಯ ಕುಸಿಯಿತು. ದೇಶದಲ್ಲಿಂದು ಈ ಕೃಷಿಯನ್ನು ಸುಮಾರು ೧೮,೨೧೮ ಹೆಕ್ಟೇರುಗಳಲ್ಲಿ ಕೈಗೊಂಡು ಸುಮಾರು ೬,೦೦೦ ಟನ್‌ಗಳಷ್ಟು ಉತ್ಪಾದನೆಯಾಗುತ್ತಿದ್ದು, ಒಂದು ಅಂದಾಜಿನ ಪ್ರಕಾರ ೨೦೦೫ಕ್ಕಾಗುವಾಗ ದೇಶದ ಚಾಕಲೇಟು ಮತ್ತಿತರೇ ಉತ್ಪನ್ನಗಳಿಗೆ ಬರಬಹುದಾದ ಬೇಡಿಕೆಗೆ ಅನುಗುಣವಾಗಿ ಸುಮಾರು ೩೧,೪೫೦ ಟನ್‌ಗಳಷ್ಟು ಕೊಕ್ಕೋ ಬೀಜದ ಅಗತ್ಯ ಬರಬಹುದು. ಪ್ರಕೃತ ದೇಶದ ಆಂತರಿಕ ಬೇಡಿಕೆಯನ್ನು ಆಮದಿನಿಂದ ಸರಿಹೊಂದಿಸುತ್ತಿರುವುದರಿಂದ ಅಡಿಕೆ ಕೃಷಿಯೊಂದಿಗೆ ಕೊಕ್ಕೋ ಕೃಷಿಯ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ.