ಮಂಗಳೂರು ಕೃಷಿಕರ ಸೌಹಾರ್ದ ಸಹಕಾರಿ (ನಿ.)

ಅಡಿಕೆ ಮತ್ತಿತರೇ ಕೃಷಿಯುತ್ಪನ್ನಗಳ ಬೆಲೆಯು ೨೦೦೦ನೇ ಇಸವಿಯ ಮಧ್ಯಬಾಗದಿಂದ ನಿರಂತರವಾಗಿ ಕುಸಿತಕ್ಕೊಳಗಾದಾಗ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಮತ್ತು ಉಡಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಮುನಿರಾಜ ಬಲ್ಲಾಳ, ದ. ಕ. ಮತ್ತು ಉಡಪಿ ಜಿಲ್ಲೆಗಳ ಕೃಷಿಕರು, ಸಹಕಾರಿಗಳು ಮತ್ತು ತಜ್ಞರುಗಳು ಈ ಜಿಲ್ಲೆಗಳ ಬೇರೆ ಬೇರೆ ಪ್ರದೇಶಗಳಲ್ಲಿ ರೈತರುಗಳ ಸಮಾವೇಶಗಳನ್ನು ಹಮ್ಮಿಕೊಂಡು ಧಾರಣೆಯ ಕುಸಿತವನ್ನು ತಡೆಗಟ್ಟಲು ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅನಿವಾರ್ಯತೆಯನ್ನು ಕಂಡು ಕೊಂಡರು. ಈ ನಿಟ್ಟಿನಲ್ಲಿ ಶ್ರೀ ಮುನಿರಾಜ ಬಲ್ಲಾಳ ಮತ್ತು ದ. ಕ. ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ಗೋಖಲೆಯವರು, ಶ್ರೀ ವಾರಣಾಸಿ ಸುಬ್ರಾಯ ಭಟ್ಟರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನಕ್ಕನುಗುಣವಾಗಿ ಕೃಷಿಯುತ್ಪನ್ನಗಳ ಮಾರಾಟ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದರು. ಇದಕ್ಕನುಗುಣವಾಗಿ ೧೪-೫-೨೦೦೧ ರಂದು ಮಂಗಳೂರಿನ ಜಿಲ್ಲಾ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ಈ ಎರಡೂ ಜಿಲ್ಲೆಗಳ ಸಹಕಾರಿಗಳು, ಕೃಷಿಕರು ಮತ್ತು ತಜ್ಞರುಗಳ ಸಮಾವೇಶವೊಂದು ಜರಗಿ ಸಹಕಾರಿ ಸಂಸ್ಥೆಯೊಂದರ ಸ್ಥಾಪನೆಯ ಬಗ್ಗೆ ಒತ್ತು ನೀಡಲಾಯಿತು.

ಈ ಸಮಾವೇಶದ ಶಿಫಾರಸಿನಂತೆ ೧೧-೬-೨೦೦೧ರಂದು ಕರ್ನಾಟಕ ಸೌಹಾರ್ದ ಸಹಕಾರಿ ಕಾಯಿದೆಯಡಿ ಹೊಸದಾಗಿ ಸಹಕಾರಿ ಸಂಸ್ಥೆಯೆಂದನ್ನು ಹುಟ್ಟು ಹಾಕುವ ನಿರ್ಧಾರಕ್ಕೆ ಬರಲಾಯಿತು. ಈ ಸಂಸ್ಥೆಯ ವಿಧಿವಿಧಾನಗಳ ಬಗ್ಗೆ ಹಿರಿಯ ಸಹಕಾರಿ ಮುಂದಾಳು ಕ್ಯಾಂಪ್ಕೋದ ಸ್ಥಾಪಕಾಧ್ಯಕ್ಷ ಶ್ರೀ ವಾರಣಾಸಿ ಸುಬ್ರಾಯ ಭಟ್ಟರೊಂದಿಗೆ ಚರ್ಚಿಸಿದ ಕೃಷಿಕರು ಮತ್ತು ಸಂಘ ಸಂಸ್ಥೆಗಳ ಮುಂದಾಳುಗಳು ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಾಪನೆಗಾಗಿ ದೃಢ ನಿರ್ಧಾರವನ್ನು ತೆಗೆದುಕೊಂಡು ಅಂದೇ ಮುಂದಿನ ಹೆಜ್ಜೆಯಿಟ್ಟರು. ಇದರಂತೆ ಮಂಗಳೂರು ಕೃಷಿಕರ ಸೌಹಾರ್ದ ಸಹಕಾರಿ (ನಿ.) ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ದಕ್ಷಿಣ ಕನ್ನಡ ಮತ್ತು ಉಡಪಿ ಜಿಲ್ಲೆಗಳ ಕೃಶಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ , ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು, ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಅಖಿಲ ಬಾರತ ಅಡಿಕೆ ಬೆಳೆಗಾರರ ಸಂಘ ಮುಂತಾದ ಸಂಸ್ಥೆಗಳ ಬೆಂಬಲದೊಂದಿಗೆ ಆರಂಭವಾಗಲಿರುವ ಈ ಸಹಕಾರಿ ಸಂಸ್ಥೆಯ ಮುಖ್ಯ ಪ್ರವರ್ತಕರನ್ನಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಟಿ. ಜಿ. ರಾಜಾರಾಮ ಭಟ್ಟರನ್ನು ಆರಿಸಿ ಮುಂದಿನ ಕಾರ್ಯಾಚರಣೆಗೆ ಇದಿಂದಿಳಿದಿದೆ.

ಈ ಸಹಕಾರಿ ಸಂಸ್ಥೆಯ ಸದಸ್ಯರ ಪರವಾಗಿ ಅವರ ವಿವಿಧ ಕೃಷಿಯುತ್ಪನ್ನಗಳನ್ನು ಬಳಕೆದಾರ ಪ್ರದೇಶಗಳಿಗೆ ತಲಪಿಸಿ, ಬಳಕೆದಾರರಿಗೆ ಅತ್ಯಂತ ಸಮೀಪದಲ್ಲಿ ಇವನ್ನು ಮಾರಾಟ ಮಾಡುವ ವ್ಯವಸ್ಥೆಗೆ ಇಳಿಯಲಿದ್ದು, ಇದರೊಂದಿಗೆ ಸಂಸ್ಥೆಯು ಖರೀದಿಸುವ ಉತ್ಪನ್ನಗಳನ್ನು ಸಂಸ್ಕರಿಸಿ ವಿವಿಧ ರೀತಿಯ ಸಿದ್ಧ ಉತ್ಪನ್ನಗಳನ್ನಾಗಿ ಮಾರಾಟ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆ. ಈ ಸಂಸ್ಥೆಯು ಹಾಕಿಕೊಂಡಿರುವ ಇತರೇ ಉದ್ದೇಶಗಳೆಂದರೆ, ವ್ಯವಸಾಯೋತ್ಪನ್ನಗಳಿಗೆ  ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ಕಂಡುಕೊಳ್ಳವುದು, ಕೃಷಿಕರು ಬೆಳೆಯುವ ವಿವಿಧ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ಟೆ ಮತ್ತವುಗಳಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅಧ್ಯಯನ, ಸಮೀಕ್ಷೆಗಳನ್ನು ಕೈಗೊಂಡು ಕ್ಷೇತ್ರಕ್ಕೆ ಮಾಹಿತಿಯನ್ನೊದಗಿಸುವುದು ಅಲ್ಲದೆ ಕೃಷಿಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವುದು ಇತ್ಯಾದಿಗಳು.

ಮಂಗಳೂರು ಕೃಷಿಕರ ಸೌಹಾರ್ದ ಸಹಕಾರಿ (ನಿ. ) (MASS LTD.,) ಯು ೫ ಕೋಟಿ ಅಧಿಕೃತ ಪಾಲು ಬಂಡಾವಾಳದಿಂದ ಕಾರ್ಯನಿರ್ವಹಿಸಲು ನಿರ್ಧರಿಸಿದ್ದು, ಈ ದಿಕ್ಕಿನಲ್ಲಿ ಇದರ ಮುಖ್ಯ ಪ್ರವರ್ತಕರಾದ ಶ್ರೀ ಟಿ. ಜಿ. ರಾಜಾರಾಮ ಭಟ್ , ಪ್ರವರ್ತಕರುಗಳಾದ ಶ್ರೀ ಎಂ .ಎನ್. ರಾಜೇಂದ್ರ ಕುಮಾರ್, ಶ್ರೀ ವಾರಣಾಸಿ ಸುಬ್ರಾಯ ಭಟ್, ಶ್ರೀ ಕೆ. ಸೀತಾರಾಮ ರೈ. ಶ್ರೀ ಕೆ. ಬಿ. ಮುನಿರಾಜ ಬಲ್ಲಾಳ್, ಶ್ರೀ ಎನ್. ಎಸ್. ಗೋಖಲೆ, ಡಾ. ಪಿ. ಕೆ. ಎಸ್. ಗೋಖಲೆ, ಡಾ ಪಿ.ಕೆ. ಎಸ್. ಭಟ್, ಶ್ರೀ ನಿರಂಜನ, ಡಾ. ವಿಘ್ನೇಶ್ವರ ವರ್ಮುಡಿ, ಶ್ರೀ ಜಯಂತ ಶೆಟ್ಟಿ, ಶ್ರೀ ಜೀವಂಧರ ಕುಮಾರ್, ಶ್ರೀ ಯಂ. ಬಿ. ಸದಾಶಿವ, ಶ್ರೀ ಶ್ರೀಧರ ಜಿ. ಭಿಡೆ, ಶ್ರೀ ಸುದರ್ಶನ ಜೈನ್, ಶ್ರೀ ಭಾಸ್ಕರ ಕೋಟ್ಯಾನ್, ಶ್ರೀ ಮಾನಂಜೆ ರಾಘವೇಂದ ರಾವ್, ಶ್ರೀ ತಿಲಕ ಉರ್ವಾಲು, ಶ್ರೀ ಜಯಕುಮಾರ್, ಶ್ರೀ ವಿಶ್ವನಾಧ ರಾವ್, ಶ್ರೀ ವಾರಣಾಸಿ ಗೋಪಾಲಕೃಷ್ಣ ಮತ್ತು ಈ ಎರಡು ಜಿಲ್ಲೆಗಳ ಸಹಕಾರಿಗಳು ಮತ್ತು ಕೃಷಿಕರಿಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಸಂಸ್ಥೆಯ ಆರಂಭವು ಅತೀ ಶೀಘ್ರದಲ್ಲಾಗಲಿದೆ. ಇದರಿಂದಾಗಿ ಬೆಳೆಗಾರರಲ್ಲಾದ ಮಾರುಕಟ್ಟೆ ವ್ಯವಸ್ಥೆಯು ಇನ್ನಷ್ಟು ಬಲಗೊಳ್ಳಬಹುದಾಗಿದೆ.