ಅಡಿಕೆ ಮತ್ತು ತೆಂಗುಗಳ ಮೌಲ್ಯವರ್ಧನೆ ಹೇಗೆ?
– ಡಾ. ವಿಘ್ನೇಶ್ವರ ವರ್ಮುಡಿ.

ಕಾಲವಿಂದು ಬದಲಾಗುತ್ತಿದೆ. ಪ್ರತಿಯೊಬ್ಬನಿಗೂ ತಿನ್ನಲು, ಉಣ್ಣಲು ಸಮಯವಿಲ್ಲ. ತನ್ನಿಂದ ಹೊರಲಾರದಷ್ಟು ವ್ಯವಹಾರವನ್ನು ಕೈಗೊಳ್ಳುವ ಆಕಾಂಕ್ಷೆಯನ್ನು ಹೊಂದಿರುವ ನಮಗಿಂದು ಅನ್ನ ಬೇಯಿಸಲು ಮತ್ತು ಪಾನಿಯಗಳನ್ನು ಮಾಡಲು ಸಮಯವಿಲ್ಲ. ಕುಳಿತು ತಿನ್ನುವಷ್ಟು ತಾಳ್ಮೆಯಿಲ್ಲ. ಎಲ್ಲವೂ ಕ್ಷಣ ಮಾತ್ರದಲ್ಲಿ ಸಿಗಬೇಕು ಮತ್ತು ಬಳಸುವಂತಿರಬೇಕು. ಇದಕ್ಕಾಗಿ ಎಷ್ಟೇ ವ್ಯಯಿಸಲು ಸಿದ್ಧ. ಆದ್ದರಿಂದಲೇ ನಮ್ಮ ಮಾರುಕಟ್ಟೆಗಳಲ್ಲಿಂದು ವಿಧವಿಧದ ಪಾನೀಯಗಳು, ಎರಡೆ ನಿಮಿಷದಲ್ಲಿ ತಯಾರಾಗುವ ತಿಂಡಿಗಳು, ಬೇಕರಿ ಉತ್ಪನ್ನಗಳು, ಬೇಯಿಸಿ ಬಳಕೆಗೆ ತಯಾರಿರುವ ಪದಾರ್ಥಗಳು ರಾರಾಜಿಸುತ್ತಿರುವುದು. ಈ ಗುಟ್ಟನ್ನು ಅರಿತ ಉದ್ಯಮಿಗಳು ಅದರಲ್ಲೂ ಮುಖ್ಯವಾಗಿ ಬಹುರಾಷ್ಟ್ರೀಯ ಕಂಪೆನಿಗಳು ಭಾರತದಂತಹ ಬೃಹತ್‌ ಮಾರುಕಟ್ಟೆಯಲ್ಲಿ ಅಗಾಧ ಪ್ರಮಾಣದ ಬಂಡವಾಳವನ್ನು ಹೂಡುತ್ತಿರುವುದು. ದಿನಗಳು ಕಳೆದಂತೆಯೇ ಮನುಷ್ಯನ ರುಚಿ, ಬಳಕೆಯಲ್ಲಿ ಬದಲಾವಣೆಗಳಾಗುತ್ತಿದ್ದು, ಪ್ರತಿಯೊಬ್ಬನಿಗೂ ಇಂದು ಕೂಡಲೇ ಸಂತೋಷಗಳಿಸುವ ಆಸೆ. ಆದ್ದರಿಂದ ನಮ್ಮ ಕೃಷಿಕರಿಂದು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಅದರ ಲಾಭವನ್ನು ಪಡೆದುಕೊಳ್ಳಬೇಕಾಗಿದೆ. ಹೀಗಾದಲ್ಲಿ ಮಾತ್ರ ಕುಸಿದಿರುವ ಧಾರಣೆಯನ್ನು ಮೇಲಕ್ಕೆತ್ತಿ ನೆಮ್ಮದಿಯ ಉಸಿರನ್ನು ಬಿಡಬಹುದು. ಈ ನಿಟ್ಟಿನಲ್ಲಿ ಅಡಿಕೆ, ತೆಂಗು, ಕೃಷಿಕರು ಏನು ಮಾಡಬಹುದು ಎಂಬುದನ್ನು ತಿಳಿಯೋಣ.

ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು:

ಅಡಿಕೆಯನ್ನಿಂದು ತಿಂದು ಉಗುಳುವ ಉತ್ಪನ್ನವಾಗಿ ನಮ್ಮಲ್ಲಿಂದು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದ್ದು, ಇದರ ಮೌಲ್ಯವರ್ಧಿತ ಉತ್ಪನ್ನಗಳು ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ಬಂದವು. ಈಗ ಚಲಾವಣೆಯಲ್ಲಿರುವ ಮೌಲ್ಯವರ್ಧಿತ ಉತ್ಪನ್ನಗಳೆಂದರೆ ಪಾನ್‌ಮಸಾಲ, ಪರಿಮಳಯುಕ್ತ ಅಡಿಕೆ, ತಂಬಾಕಿನಿಂದೊಡಗೂಡಿದ ಗುಟ್ಕಾಗಳು. ಈ ರೀತಿಯ ಉತ್ಪನ್ನಗಳೊಂದಿಗೆ ವಿವಿಧ ರೀತಿಯ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತಿರುವ ಬೀಡಾಗಳು. ಈ ಎಲ್ಲಾ ಉತ್ಪನ್ನಗಳ ಪರಿಚಯ ಇವುಗಳ ಗ್ರಾಹಕರಿಗೆ ಈಗಾಗಲೇ ಆಗಿದ್ದು, ಇದೀಗ ಈ ವರ್ಗದ ಜನರು ಬದಲಾವಣೆಗಳನ್ನು ಬಯಸುತ್ತಿದ್ದಾರೆ. ಆದ್ದರಿಂದ ಬಳಕೆದಾರರ ರುಚಿಗನುಗುಣವಾಗಿ ಅಡಿಕೆ ಬೆಳೆಗಾರರಿಂದು ಉದ್ದಿಮೆದಾರರೊಡಗೂಡಿ ಇಲ್ಲವೇ ತಾವೇ ಉದ್ದಿಮೆಗಳನ್ನು ಸ್ಥಾಪಿಸಿ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಡಿಕೆಯಲ್ಲಿರುವ ಗುಣಗಳನ್ನು ಮೊತ್ತ ಮೊದಲು ಕಂಡುಕೊಂಡು ಬಳಿಕ ಉತ್ಪನ್ನಗಳ ತಯಾರಿಯಾಗಬೇಕು.

ಪ್ರಾಚೀನ ಗ್ರಂಥಗಳಲ್ಲಿ ಅಡಿಕೆಯ ವಿವಿಧ ರೀತಿಯ ವರ್ಣನೆಗಳಿದ್ದು, ಉದಾಹರಣೆಗೆ ನಾಲ್ಕನೆಯ ಶತಮಾನದಲ್ಲಿದ್ದ ವಾಗ್ಭಟನು ತನ್ನ ‘ಅಷ್ಟಾಂಗ ಹೃದಯ’ವೆಂಬ ಗ್ರಂಥದಲ್ಲಿ ಅಡಿಕೆಯ ಔಷಧೀಯ ಗುಣಗಣನ್ನು ಹೆಸರಿಸುತ್ತಾ, ಅದು ಬಿಳಿತೊನ್ನು, ಕುಷ್ಟ, ಕೆಮ್ಮು, ಮೂರ್ಛಾ ರೋಗಗಳು, ಹುಳುಗಳು, ರಕ್ತಹೀನತೆ ಮತ್ತು ಬೊಜ್ಜುಗಳ ವಿರುದ್ಧ ಮಾಡುವ ಕಾರ್ಯಗಳನ್ನು ಹೆಸರಿಸಿದ್ದಾನೆ. ಅಲ್ಲದೆ ಅಡಿಕೆಯ ವಿರೇಚಕವಾಗಿ ಹಾಗೂ ಇತರ ಕೆಲವು ವಸ್ತುಗಳೊಡನೆ ಸೇರಿಸಿ ಮಾಡಿದ ಇದರ ಮಿಶ್ರಣದ ಮುಲಾಮು ಮೂಗಿನ ವೃಣಗಳನ್ನು ಗುಣಪಡಿಸಲು ಉಪಯೋಗವಾಗಿರುವುದಾಗಿ ತಿಳಿಸಿದ್ದಾನೆ. ಹದಿಮೂರನೆಯ ಶತಮಾನದಲ್ಲಿದ್ದ ಭಾವಮಿಶ್ರನು ತನ್ನ “ಭಾವಪ್ರಕಾಶ”ವೆಂಬ ಗ್ರಂಥದಲ್ಲಿ ಅಡಿಕೆಯು ಒಂದು ಉತ್ತೇಜಕ ಮತ್ತು ಹಸಿವನ್ನುಂಟುಮಾಡುವ ಜೀರ್ಣಕಾರಿ ವಸ್ತುವೆಂದಿದ್ದಾನೆ. ವಿಷ್ಣು ಶರ್ಮನ ‘ಹಿತೋಪದೇಶ’ದಲ್ಲಿ ಅಡಿಕೆಯ ಶರೀರದ ವಾಯುವನ್ನು ಹೊರದೂಡಬಲ್ಲದು. ಅಲ್ಲದೆ ಕಫ ಹಾಗೂ ಬಾಯಿಯ ಕೆಟ್ಟ ವಾಸನೆಯನ್ನು ಹೋಗಲಾಗಿಸಬಹುದು, ಉದರ ಭಾದಿಸುವ ಕ್ರಿಮಿಗಳನ್ನು ಕೊಲ್ಲುವುದು ಎಂಬಿತ್ಯಾದಿಯಾಗಿ ವರ್ಣಿಸಿದ್ದಾನೆ. ನಮ್ಮಲಿಂದು ಅಡಿಕೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಆ ಮಾಹಿತಿಗಳು ಧಾರಾಳ ಸಾಕು. ಈ ನಿಟ್ಟಿನಲ್ಲಿ ಅಗತ್ಯ ಸಂಶೋಧನೆಗಳಿಗಾಗಿ ಅದರ ಪ್ರಯೋಜನವಿಂದು ಈ ಕ್ಷೇತ್ರಕ್ಕೆ ತಲುಪಬೇಕಾಗಿದೆ.

ನನ್ನ ಸ್ವ ಅನುಭವದ ಪ್ರಕಾರ ಬಿಳಿ ಅಡಿಕೆಯನ್ನು ತುಪ್ಪ ಯಾ ತುಪ್ಪವಿಲ್ಲದೆ ಸಣ್ಣ ಉರಿಯಲ್ಲಿ ಹುರಿದು ಅದಕ್ಕೆ ವಿವಿಧ ರೀತಿಯ ಸಂಬಾರ ಪದಾರ್ಥಗಳಾದ ಕರಿಮೆಣಸಿನ ಪುಡಿ, ಏಲಕ್ಕಿ ಪುಡಿ, ಲವಂಗದ ಪುಡಿ, ದಾಲ್ಚಿನಿ ಪುಡಿ, ಜಾಯಿಕಾಯಿ ಪುಡಿ, ಇತ್ಯಾದಿಗಳನ್ನು ಬೆರೆಸಿದಲ್ಲಿ ಅದು ಈಗಿಂದು ಮಾರುಕಟ್ಟೆಯಲ್ಲಿರುವ ಗುಟ್ಕಾಕ್ಕೆ ಯೋಗ್ಯ ಬದಲಿ ಉತ್ಪನ್ನವಾಗಬಹುದು. ಇದರಿಂದಾಗಿ ತಂಬಾಕು ರಹಿತ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನವಾಗಿ ಅದಕ್ಕೆ ಬೇಡಿಕೆಯೇರಬಹುದು. ಇದರ ಬಳಕೆಯಿಂದ ಕಫ, ವಾಯು ರಕ್ತಹೀನತೆ ಇತ್ಯಾದಿಗಳನ್ನು ದೂರವಿರಿಸಬಹುದು. ಅಡಿಕೆ ಹಳತಾದಷ್ಟು ಅದರ ರುಚಿಯೂ ಹೆಚ್ಚು. ಔಷಧೀಯ ಗುಣವೂ ಅಧಿಕ. ಈ ಅಡಿಕೆಯನ್ನು ಕಡಿಮೆ ಮಟ್ಟದ ರಕ್ತದೊತ್ತಡ ಇರುವ ರೋಗಿಗಳಿಗೆ ಕೊಟ್ಟಲ್ಲಿ ಅವರ ಸಮಸ್ಯೆಗಳು ಪರಿಹಾರವಾಗಬಹುದು. ಅಡಿಕೆ ಪುಡಿಯೊಂದಿಗೆ ಶುಂಟಿ ಪುಡಿಯನ್ನು ಸೇರಿಸಿದ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿದಲ್ಲಿ ಅದೊಂದು ಅತ್ಯುತ್ತಮ ಔಷಧೀಯಾಗಬಹುದು. ಈ ರೀತಿಯಾಗಿ ಹಲವು ತರದ ಮೌಲ್ಯವರ್ಧಿತ ಉತ್ಪನ್ನಗಳಿಂದು ಅಡಿಕೆಯಿಂದಾದಲ್ಲಿ ಮತ್ರ ಬೆಳೆಗಾರ ಸಮೂಹ ನಿಟ್ಟುಸಿರುಬಿಡಬಹುದು. ಇಷ್ಟು ಮಾತ್ರವಲ್ಲದೆ ಅಡಿಕೆಯ ಪುಡಿಯ ಪಾನೀಯಗಳು ಕಾಫಿ, ಚಹಾಗಳಷ್ಟೆ ಸ್ವಾದವನ್ನು ಕೊಡುವುದರಿಂದ ಈ ನಿಟ್ಟಿನಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇನ್ನೊಂದಡೆಯಲ್ಲಿ ಅಡಿಕೆಯ ಹಾಳೆಯ ತಟ್ಟೆಗಳು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದ್ದರೂ ಅದರ ಪರಿಪೂರ್ಣ ಬಳಕೆಯಾಗಿಲ್ಲ.

ಆದ್ದರಿಂದ ಈ ದಿಶೆಯಲ್ಲಿ ಕ್ರಮ ಅಗತ್ಯ. ಅಡಿಕೆಯ ಹಿಂಗಾರದಿಂದ ಪರಿಮಳ ದ್ರವ್ಯವನ್ನು ತಯಾರಿಸಲು ಅಗತ್ಯ ಕ್ರಮ ಕೈಗೊಂಡಲ್ಲಿ ಅಡಿಕೆ ಬೆಳೆಗಾರರಿಗೆ ಶಾಶ್ವತ ಪರಿಹಾರ ದೊರಕಿದಂತೆ. ಈ ಎಲ್ಲಾ ವಿಚಾರಗಳನ್ನಿಂದು ಗಂಭೀರವಾಗಿ ಪರಿಗಣಿಸಿ, ಮೌಲ್ಯವಧಿತ ಉತ್ಪನ್ನಗಳ ತಯಾರಿಕೆಗಳಿಂದು ನಮ್ಮಲ್ಲಾಗಬೇಕು.

ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು ತೆಂಗಿನ ಪ್ರತಿಯೊಂದು ಉತ್ಪನ್ನಕ್ಕೂ ಧಾರಾಳ ಬೇಡಿಕೆಯಿದ್ದು, ಇದರಿಂದ ದೊರಕುವ ಎಳನೀರು, ತೆಂಗಿನಕಾಯಿ, ಗರಿ ಸಿಪ್ಪೆ, ಗೆರಟ, ಮರ ಇವುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ನಾವಿಂದು ಬಳಸುತ್ತಿದ್ದೇವೆ. ಆದರೆ ಇವುಗಳ ಮೌಲ್ಯವರ್ಧಿತ ಉತ್ಪನ್ನಗಳಿಂದು ಮಾರುಕಟ್ಟೆಯತ್ತ ಚಲಿಸದ ಪ್ರಮಾಣ ಅತ್ಯಲ್ಪ. ತೆಂಗಿನ ಕಾಯಿ, ಎಳನೀರು, ಗೆರಟೆ ಇತ್ಯಾದಿಗಳಿಗೆ ಔಷಧೀಯ ಗುಣಗಳಿದ್ದು, ಅವನ್ನು ಅನಾದಿಕಾಲದಿಂದಲೂ ಈ ದೃಷ್ಟಿಯಲ್ಲಿ ಬಳಸುತ್ತಿದ್ದು, ಇದರೊಂದಿಗೆ ತೆಂಗಿನೆಣ್ಣೆ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ತಡೆಗಟ್ಟುವ ಶಕ್ತಿಯಿದೆಯೆಂಬುದೀಗ ರುಜುವಾತಾಗಿರುವುದರಿಂದ ಇದರ ಮಹತ್ವವನ್ನು ನಾವು ಅರಿತುಕೊಳ್ಳಬಹುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ತೆಂಗಿನೆಣ್ಣೆಯಿಂದಾಗಿ ಏಡ್ಸ್‌ನಂತಹ ಭಯಂಕರ ಕಾಯಿಲೆಗಳನ್ನು ತಡೆಯಲು ಇದು ಪರಿಣಾಮಕಾರಿ ಔಷಧಿಯಾಗಬಹುದೆಂದು ಅಭಿಪ್ರಾಯ ಹೊರಬಂದಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳಾಗುತ್ತಿವೆ, ಇಷ್ಟು ಮಾತ್ರವಲ್ಲದೆ ಎಳನೀರಿನ ಮಹತ್ವ ಅರಿಯದವರಾರು. ನಮ್ಮ ದೈನಂದಿನ ಚಟುಚಟಿಕೆಗಳಲ್ಲಿ ಉತ್ಸಾಹ, ಆರೋಗ್ಯ ಕಾಪಾಡುವಿಕೆ, ರಕ್ತ ಚಾಲನೆ ಮತ್ತಿತರ ವಿಚಾರದಲ್ಲಿ ಎಳನೀರು ಅತ್ಯಗತ್ಯ. ಈ ರೀತಿಯಾಗಿ ತೆಂಗಿನಿಂದಾಗಿ ನಮಗಿಂದು ಹಲವು ಪ್ರಯೋಜನಗಳು ಇದ್ದರೂ ನಾವಿಂದು ಗಣನೆಗೆ ತೆಗೆದುಕೊಳ್ಳದೇ ಇದ್ದು,ಈ ನಿಟ್ಟಿನಲ್ಲಿ ಇದರ ಪರಿಪೂರ್ಣ ಉಪಯೋಗವಾಗಬೇಕಾಗಿದೆ. ನಮ್ಮಲ್ಲಿಂದು ಉತ್ಪಾದಿಸಲ್ಪಡಿತ್ತಿರುವ ತೆಂಗಿನ ಬಹುಪಾಲು ಅಡುಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿದ್ದು, ಉಳಿದ ಪ್ರಮಾಣ ಎಣ್ಣೆ, ಕೊಬ್ಬರಿ ಮತ್ತು ಬೇಕರಿ ಉತ್ಪನ್ನಗಳ ತಯಾರಿಗಾಗಿ ಬಳಸಲ್ಪಡುತ್ತಿದೆ. ಎಳನೀರಿನ ರೂಪದಲ್ಲಿ ಬಳಕೆಯಾಗುತ್ತಿರುವ ಪ್ರಮಾಣ ಸುಮಾರು ೨೦೦ರಿಂದ ೨೫೦ ಮಿಲಿಯ ಕಾಯಿಗಳು ಮಾತ್ರ . ಆದ್ದರಿಂದ ಈ ಕ್ಷೇತ್ರವಿಂದು ತೆಂಗಿನ ಇತರೇ ಮೌಲ್ಯವರ್ಧಿತ ಉತ್ಪನ್ನಗಳಾದ ತೆಂಗಿನ ಕಾಯಿಯ ಹಾಲು, ಪುಡಿ, ಆಹಾರಕ್ಕೆ ಬಳಸಲಾಗುವ ವಿನಿಗರ್, ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತಿರುವ ಮಸಿ ಇತ್ಯಾದಿಗಳನ್ನು ತಯಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳವುದರೊಂದಿಗೆ ಎಳನೀರಿನ ಬಳಕೆಯನ್ನು ಹೆಚಿಸಬೇಕು. ಈ ರೀತಿಯದ್ದಾದ ಕ್ರಮಗಳನ್ನು ಕೈಗೊಂಡಲ್ಲಿ ಕುಸಿದಿರುವ ಧಾರಣೆಯನ್ನು ಮೇಲಕ್ಕೆತ್ತಬಹುದಾಗಿದೆ. ಇವುಗಳೊಂದಿಗೆ ತೇವಾಂಶ ತೆಗೆದ ಯಾ ತೆಂಗಿನ ಬಿಳಿ ತಿರುಳಿಗೆ ವಿಶ್ವದಾದ್ಯಂತ ಹೆಚ್ಚಿನ ಬೇಡಿಕೆಯಿದ್ದು, ಈ ರೀತಿಯ ಉತ್ಪನ್ನವನ್ನಿಂದು ಶ್ರೀಲಂಕಾ ಮತ್ತು ಫಿಲಿಪೈನ್ಸ್ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಅಧಿಕ ಮಟ್ಟದ ವಿದೇಶಿ ವಿನಿಮಯವನ್ನು ಗಳಿಸುತ್ತಿದ್ದು, ಭಾರತವಿಂದು ಉತ್ಪಾದಿಸುತ್ತಿರುವ ಪ್ರಮಾಣ ಕೇವಲ ೧೦ ಸಾವಿರ ಟನ್‌ಗಳು ಮಾತ್ರ. ಆದ್ದರಿಂದ ನಾವಿಂದು ಈ ದಿಶೆಯಲ್ಲು ಹೆಜ್ಜೆಯಿಡಬೇಕು. ತೆಂಗಿನ ಸಿಪ್ಪೆಯಿಂದ ತಯಾರಿಸಬಹುದಾದ ಚಾಪೆ, ಹಗ್ಗ, ಜಮಖಾನೆ ಇತ್ಯಾದಿಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಅಗಾಧ ಬೇಡಿಕೆಯಿದ್ದು, ಇವುಗಳ ಉತ್ಪಾದನೆಯಿಂದು ನಿರೀಕ್ಷಿತ ಮಟ್ಟದಲ್ಲಿ ನಮ್ಮಲ್ಲಾಗುತ್ತಿಲ್ಲ. ಕರ್ನಾಟಕದಲ್ಲಿ ಈ ಬಗ್ಗೆ ಕೈಗೊಂಡ ಕ್ರಮಗಳೇನೂ ಸಾಲದು.

ಫಿಲಿಪೈನ್ಸ್ ನಂತಹ ರಾಷ್ಟ್ರವಿಂದು ತೆಂಗಿನ ಕಾಯಿಯ ಧಾರಣೆಯ ಕುಸಿತವನ್ನು ತಡೆಗಟ್ಟಲು ಹಲವು ರೀತಿಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಮುಖ್ಯವಾದದ್ದೆಂದರೆ ತೆಂಗಿನೆಣ್ಣೆಯನ್ನು ವಾಹನಗಳಿಗೆ ಇಂಧನ ರೂಪದಲ್ಲಿ ಬಳಸುವತ್ತ ಹೆಜ್ಜೆಯಿಟ್ಟಿರುವುದು. ಈ ರೀತಿಯ ಹೆಜ್ಜೆಯನ್ನಿಂದು ನಮ್ಮಲೂ ಅಳವಡಿಸಲು ಅಗತ್ಯ ಸಂಶೋಧನೆಗಳಾಗಿ ಕಾರ್ಯರೂಪಕ್ಕೆ ಬಂದಲ್ಲಿ ದೇಶವಿಂದು ವಾಹನಗಳ ಇಂಧನದ ಆಮದಿಂದಾಗಿ ವ್ಯಯಿಸುತ್ತಿರುವ ಮೊತ್ತವನ್ನು ಕುಗ್ಗಿಸಿ ಆಂತರಿಕ  ಅಭಿವೃದ್ಧಿಯನ್ನು ಸಾಧಿಸಬಹುದಲ್ಲದೆ ತೆಂಗಿನ ಬೆಳೆಗಾರರ ಸಮಸ್ಯಗಳಿಗೆ ಸ್ಪಂದಿಸಿದಂತಾಗಬಹುದು.