ಕೃಷಿಕರ ಸಂಘಟನೆ ಶೀಘ್ರವೇ ನಡೆಯಲು ೧೯೭೦ರ ದಶಕದ ಆರಂಭದಲ್ಲಿ ಶ್ರೀ ಶಂಕರನಾರಾಯಣ ಭಟ್ವರ್ಮುಡಿಯವರು ಕೃಷಿಕರ ಸಂಘಟನೆಗಾಗಿ ನಡೆಸಿದ ಪ್ರಯತ್ನದ ತುಣುಕು.

. ಪ್ರಿಯ ಮಹನೀಯರೇ, ಆತ್ಮೀಯ ಬಂಧುಗಳೇ, ದೇಶ ಬಾಂಧವರೇ, ಕೃಷಿಕ ಬಂಧುಗಳೇ, ಜನ ಹಿತೈಷಿಗಳೇ, ನೆಚ್ಚಿನ ಮುಂದಾಳುಗಳೇ –

ನನ್ನ ಮತ್ತು ನನ್ನಂತಹ ಕೃಷಿಕರ ಮನಮರುಕವನ್ನೂ, ವಸ್ತುಶಃ ಅನುಭವಿಸುತ್ತಿರುವ ಸಂಕಷ್ಟಗಳನ್ನೂ, ಆ ಬಗೆಗೆ ನನ್ನ ವಿಚಾರವನ್ನೂ ಸಹೃದಯರ ಮುಂದೆ ನಿವೇದಿಸಬಯಸುತ್ತೇನೆ.

. ಮುಖ್ಯವಾಗಿ ಕೃಷಿಕರ ಒಂದು ಸಂಘ ಸ್ಥಾಪಿತವಾಗಬೇಕು. ಮುಖ್ಯವಾಗಿ ಯೂನಿಯನ್‌ ರಚಿಸಲ್ಪಡಬೇಕು. ‘ಉದ್ದರೇದಾತ್ಮ ನಾತ್ಮಾನಂ’ ಎಂಬ ಸೂಕ್ತಿಯಂತೆ ನಮ್ಮನ್ನು ನಾವೇ ಉದ್ಧರಿಸಬೇಕು. ಭಕ್ಷಕರೇ ಆಗಿರುವರಲ್ಲದೆ ನಮ್ಮ ರಕ್ಷಕರು ಯಾರೂ ಇಲ್ಲ. ಇದೇ ಸ್ಥಿತಿ ಮುಂದುವರಿದರೆ ಕೃಷಿಕರಿಗೆ ಉಳಿಗಾಲವಿಲ್ಲ. ಕೃಷಿಕರ ನಾಶದಿಂದ ದೇಶದ ಸರ್ವನಾಶವೂ ಖಂಡಿತ. ಇಂದಿನ ಸ್ವಾರ್ಥಿಗಳಾದ ರಾಜಕೀಯ ಮುಖಂಡರು, ಸ್ವಾಧಿಕಾರಕ್ಕಾಗಿ ಎಸಗುವ ಹೇಯ ಕೃತ್ಯಗಳೆಷ್ಟು ಕರಾಳವಾವುಗಳೆಂಬುದನ್ನು ಸರ್ವವೇದ್ಯ ವಿಚಾರ. ಅಧಿಕಾರದ ಮದದಿಂದ ಅಂಧರಾಗಿ ಜನ್ಮ ಭೂಮಿಯ ನಾಶವನ್ನು ಅದರೊಂದಿಗೆ ತಮ್ಮ ವಿನಾಶವನ್ನು, ಮಹಾನ್‌ ಸನಾತನ ಸಂಸ್ಕೃತಿಯ ಸರ್ವನಾಶವನ್ನು ಸಾಧಿಸುವುದು ಖಂಡಿತ.

. ಕೃಷಿಕನು ಭೂಮಿಯನ್ನು ಹಸನುಗೊಳಿಸಿ ಅದರಲ್ಲಿ ಅಡಿಕೆ, ತೆಂಗು, ಬಾಳೆ, ಭತ್ತ, ರಾಗಿ, ಜೋಳ, ಗೋಧಿ, ಕಾಳುಮೆಣಸು, ಕಾಫಿ, ಏಲಕ್ಕಿ ಮೊದಲಾದ ವಿವಿಧ ಬೆಳೆಗಳನ್ನು ಬೆಳೆಸುತ್ತಾನೆ. ಅದಕ್ಕಾಗಿ ಸಾವಿರಗಟ್ಟಲೆ ಹಣ ವ್ಯಯಿಸುತ್ತಾನೆ. ಎಷ್ಟೋ ಬೆಳೆಗಳು ಹುಲುಸಾಗಿ ಬೆಳೆದು ಸಮೃದ್ಧವಾಗಿ ಫಲವನ್ನೀಯಬೇಕಾದರೆ ಎಂಟೋ ಹತ್ತೋ ವರ್ಷಗಳ ತನಕವೂ ಹೇರಳ ಹಣ ಸುರಿಸಬೇಕಾಗುತ್ತದೆ; ತುಂಬಾ ಕಷ್ಟ ನಷ್ಟಗಳನ್ನನುಭಿಸಬೇಕಾಗುತ್ತದೆ.

. ಕೆಲವೊಮ್ಮೆ ಬಿರುಗಾಳಿಯಿಂದೊದಗುವ ಹಾನಿ, ಬಿಸಿಲಿನಿಂದ ಒಣಗಿ ಹೋಗುವುದು, ಅತಿವೃಷ್ಟಿ, ಅನಾವೃಷ್ಟಿಗಳಿಂದಾಗುವ ಕೆಡುಕು ಪ್ರಕೃತ ಕೃಷಿಗೆ ಬೇಕಾಗುವ ಯಂತ್ರೋಪಕರಣಗಳ ದುಬಾರಿ ಬೆಲೆ, ಯಂತ್ರ ಚಾಲನೆಗೆ ಬೇಕಾಗುವ ತೈಲದ ಅಭಾವ, ದುಬಾರಿ ಬೆಲೆ, ಕ್ರಿಮಿಕೀಟಗಳ ಹಾವಳಿ, ಕೋತಿ, ಇಲಿ, ಅಳಿಲು, ಬಾವಲಿಗಳೇ ಮೊದಲಾದವುಗಳ ಕಾಟ, ಕಳ್ಳಕಾಕರ ಪೀಡೆ, ಕೂಲಿಯಾಳುಗಳೊದಗದೆ ಉಂಟಾಗುವ ತ್ರಾಸ, ಸೊಪ್ಪು, ಗೊಬ್ಬರ ನೀರು ಇವುಗಳ ಅಭಾವ, ಕೃತಕಗೊಬ್ಬರಗಳ ಅಭಾವ, ಹಾರೆ, ಪಿಕ್ಕಾಸು, ಪಂಪ್‌ಸೆಟ್ಟು, ಕ್ರಿಮಿನಾಶಕ ಔಷಧ ಮೊದಲಾದವುಗಳು ಸಕಾಲದಲ್ಲಿ ದುರ್ಲಭವಾಗುವುದು, ಹಾಗೂ ಸಿಕ್ಕಿದರೆ ದುಬಾರಿ ಬೆಲೆ.

. ಕೃಷಿಕರ ಪರಿಸ್ಥಿತಿ ಹೀಗಿದ್ದರೂ ನಮ್ಮದೇ ಆದ ಸರಕಾರ ನಮಗೆ ಒಂದು ಪೈಸೆಯಷ್ಟು ಕೂಡ ಧನ ಸಹಾಯವನ್ನು ಈ ಸಮಸ್ಯಾ ಪರಿಹಾರಕ್ಕಾಗಿ ಕೊಡಲು ಮುಂದಾಗಲಿಲ್ಲ. ಬದಲಾಗಿ ಹೊರಲಾರದಂತಹ ತೆರಿಗೆಯ ಹೊರೆಯನ್ನು ನಮ್ಮ ಮೇಲೆ ಕಡ್ಡಾಯವಾಗಿ ಹೇರಿದೆ. ಒಬ್ಬ ಕೃಷಿಕನ ಮೇಲೆ ಹಲವು ತರದ ತೆರಿಗೆಗಳ ಹೊರೆ! ಉದಾ: ಎಗ್ರಿಕಲ್ಚರ್ ಟೇಕ್ಸ್‌ ಒಂದೇ ಎಕ್ರೆ ಕೃಷಿ ಭೂಮಿಯನ್ನು ನಾಲ್ಕೆಕ್ರೆಯೆಂದು ಪರಿಗಣಿಸುವ ಒಂದು ಜಾಣ್ಮೆ. ಅಡಿಕೆ ತೋಟದಲ್ಲಿ ಬದಿ ಬದಿಗಳಲ್ಲಿ ತೆಂಗಿನ ಮರಗಳಿರುವುದರಿಂದ ಅಲ್ಲಲ್ಲಿ ಕೆಲವು ಕಾಳುಮೆಣಸಿನ ಬಳ್ಳಿಗಳೂ ಎಡೆಯೆಡೆಯಲ್ಲಿ ಕೆಲವು ಬಾಳೆಗಳೋ ಇರುವುದರಿಂದ ಈ ಒಂದೊಂದರ ಹೆಸರನಿಂದ ಆ ಒಂದು ಎಕ್ರೆ ವಿಸ್ತೀರ್ಣವುಳ್ಳ ಜಮೀನು ನಾಲ್ಕಡಿಯಾಗಿ ಪರಿಗಣಿಸಲ್ಪಡುವುದು. ತೆರಿಗೆಯ ಭಾರ ಸಾಲದುದಕ್ಕೆ ಸರ್ಚಾರ್ಜು, ಸೂಪರ್ಟ್ಯಾಕ್ಷ್‌, ಪ್ಲೇಂಟೇಶನ್ನ್ ಟ್ಯಾಕ್ಸ್‌, ವೃತ್ತಿತೆರಿಗೆ, ಮನೆತೆರೆಗೆ, ಸಂಪತ್ತು ತೆರಿಗೆ, ನೀರಿನ ತೆರಿಗೆ, ಲೇಂಡ್‌ ಸೆಸ್ಸು, ಕಂದಾಯ ಹೀಗೆ ಹಲವು ಬಗೆಯ ತೆರಿಗೆಗಳು. ಇನ್ನಾವ ಹೆಸರಿನ ತೆರಿಗೆ ರಂಗಕ್ಕಿಳಿಯಲು ತೆರೆಯಮರೆಯಲ್ಲಿ ಸಿದ್ಧವಾಗಿದೆಯೋ?

. ಹೀಗೆ ತೆರೆಗೆಯೆಂಬ ಹೆಸರಿನಿಂದ ಕೃಷಿಕರನ್ನು ಹಿಂಡಿ ಒಟ್ಟುಗೂಡಿಸಿದ ಮೊತ್ತವಾದರೂ ಜನಹಿತಕ್ಕಾಗಿ ಉಪಯೋಗವಾಗುತ್ತಿದ್ದರೆ ತುಸು ಸಮಾಧಾನವಾಗುತ್ತಿತ್ತು. ಅದರ ವಿನಿಯೋಗ ದುರ್ವ್ಯಯ. ಸಂಬಳ, ಗಿಂಬಳ, ದುಂದುಗಾರಿಕೆಗಾಗಿಯೇ ಅದು ಮುಗಿಯುತ್ತದೆ. ಕೆಲವೇ ಮಂದಿ ಸರಕಾರಿ ನೌಕರ ಸುಖಭೋಗವಿಲಾಸಗಳಿಗಾಗಿ, ಕೋಟಿಗಟ್ಟಲೆ ಜನರ ದುಡಿಮೆಯ ವ್ಯಯ! ಯೋಜನಾ ಸಚಿವರಾದ ಶ್ರೀಮಾನ್‌ ಡಿ.ಪಿ. ಧರ್ ಹೇಳಿದಂತೆ ಸರಕಾರವು ಸಂಗ್ರಹಿಸಿದ ತೆರಿಗೆಯ ಹಣದ ಮೊತ್ತದ ಶೇಕಡ ೮೦ ನೌಕರ ಸಂಬಳಕ್ಕಾಗಿ ವ್ಯಯವಾಗುತ್ತದೆ. ಬಾಕಿ ಭ್ರಷ್ಟಾಚಾರಗಳೆಲ್ಲಾ ಕಳೆದರೆ ಜನತೆಗೆ ಎಷ್ಟು ಪರ್ಸೆಂಟು ಸಿಗುತ್ತದೋ ದೇವರೇ ಬಲ್ಲ.

. ಒಂದು ಕಡೆ ಏನೂ ಮಾಡದೆ ಫೈಲುಗಳನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಎಸೆಯುತ್ತಾ ಕಾಲಹರಣ ಮಾಡುವ ನೌಕರರಿಗೆ ಸಂಬಳ ಭತ್ತೆಗಾಗಿ ಸಾವಿರಗಟ್ಟಲೆ ಹಣ ವ್ಯಯ ಮಾಡುವುದು. ಇನ್ನೊಂದು ಕಡೆ ಕೃಷಿಕನ ರಕ್ತ ಹೀರುವುದು. ದೇಶದ ಬೆನ್ನೆಲಬು ಕೃಷಿಕನೆಂದು ಹೇಳಿ ಬೆನ್ನಲುಬನ್ನೇ ಮುರಿಯುವ ಚೇಷ್ಟೆಯಲ್ಲವೆ ಇಂದು! ಬೇರೆ ನೌಕರ ವರ್ಗದವರ ಸಂಘಗಳಿವೆ. ಅವರಲ್ಲಿ ಸಂಘಟನೆಯ ಶಕ್ತಿ ಇದೆ. ಅವರ ಯೂನಿಯನ್‌ಗಳಿವೆ. ಅವರೆಲ್ಲ ಒಂದಾಗಿ ಮಿಂಚಿನ ಮುಷ್ಕರ ಹೂಡಿ ತಮಗೆ ಬೇಕಾದಂತೆಲ್ಲಾ ಮಾಡಿಕೊಳ್ಳುತ್ತಾರೆ. ಇತ್ತ ಬಟ್ಟೆಬರೆಗೆ ಗತಿ ಇಲ್ಲದ ಕೃಷಿಕ ವಿಲವಿಲನೆ ಒದ್ದಾಡುತ್ತಾ ಇದ್ದಾನೆ. ಕೃಷಿಕನು ತನ್ನ ಕುಟುಂಬವನ್ನು ಪೋಷಿಸಬೇಕು. ತನ್ನ ಕೂಲಿಯಾಳುಗಳ ಕುಟುಂಬವನ್ನು ಪೋಷಿಸಬೇಕು. ತನ್ನ ಜಾನುವಾರುಗಳನ್ನು ಪೋಷಿಸಬೇಕು, ಕೃಷಿಗೆ ಬೇಕಾದ ಗೊಬ್ಬರ, ನೀರು ವಗೈರೆ ಪೂರೈಸಬೇಕು. ತೆರಿಗೆಗಳನ್ನು ಸಲಾಯಿಸಬೇಕು. ತನಗೆ ಅಗತ್ಯವಾದ ರಸ್ತೆ, ಶಾಲೆ, ಕಾಲೇಜು, ವಾಹನ ಸೌಕರ್ಯ ಮಾರ್ಕೆಟುಗಳ ಸೌಲಭ್ಯ ಕೃಷಿಕನಿಗಿಲ್ಲ. ತಾನು ಬೆಳೆಸಿದ ವಸ್ತುವಿಗೆ ಯೋಗ್ಯ ಬೆಲೆ ಅವನಿಗೆ ಸಿಗುವಂತಿಲ್ಲ. ಬೆಳೆಸಿದ ವಸ್ತುವನ್ನು ಸಾಗಿಸಲು ಪರ್ಮಿಟುಗಳನ್ನು ಮಾಡಿ ಮಾರ್ಕೆಟಿಗೆ ತಲುಪಿಸಿ ಅಲ್ಲಿ ಅದು ಮಾರಾಟವಾಗಿ ಅವನ ಕೈಗೆ ಸಿಕ್ಕಿದ ಪುಡಿಕಾಸು ಮನೆಗೆ ತಲುಪುವಾಗ ಒಂದು ಪೈಸೆಯೂ ಉಳಿಯುವುದು ದುರ್ಲಭ. ಅವೆಲ್ಲಾ ಹೇಳಿ ತೀರದ ಸತ್ಯಸಂಗತಿಗಳು. ಕೃಷಿಕನು ಇಂತಹ ಸಂಕಷ್ಟಗಳೆಗೆ ಕಾರಣ – ಕೃಷಿಕರಲ್ಲಿ ಒಗ್ಗಟ್ಟಿಲ್ಲ. ಸಂಘಟನೆ ಇಲ್ಲ. ಯೂನಿಯನ್‌ ಇಲ್ಲ. ನಾವು ಮುಷ್ಕರ ಹೂಡುವುದಿಲ್ಲ.

. ಇತರ ಹಲವಾರು ವರ್ಗದವರು ಸಂಘಟಿತರಾಗಿ ಮುಷ್ಕರ ಹೂಡಿ ತಮಗೆ ಬೇಕಾದುದನ್ನು ಒದಗಿಸಿಕೊಂಡರು. ಕೃಷಿಕರಾದ ನಾವು ಈಗಲಾದರೂ ಎಚ್ಚರಗೊಳ್ಳದಿದ್ದರೆ ಕಾಲಮಿಂಚಿ ಹೋದೀತು. ಈಗಲೇ ಸಮಯ ದಾಟಿದೆ. ಇನ್ನು ವಿಳಂಬ ಮಾಡಿದರೆ ನಮಗೆ ಒಂದುಗೂಡುವ ಅವಕಾಶವನ್ನೆ ಇಲ್ಲದಂತಾಗಿಸುವರು. ಆಗ ನಮಗೆ ನಿರ್ಗತಿ. ಕೃಷಿಕರಾದ ನಾವು ನಿರ್ಗತಿಕರಾದರೆ, ದೇಶಕ್ಕೆ ಅಧೋಗತಿ.

. ಕೃಷಿಕರಾದ ನಾವೆಲ್ಲ ಒಂದಾಗಬೇಕು. ಒಕ್ಕಲು, ಧನಿ, ಬಡವ, ಬಲ್ಲಿದ, ವಿದ್ಯಾವಂತ, ಅವಿದ್ಯಾವಂತರೆಂಬ ಭೇದ ಭಾವವನ್ನು ಮರೆತು, ಜಾತಿ, ಮತ, ಪಂಥ ಭೇದಗಳನ್ನು ತೊರೆದು ಸಕಲ ಕಷ್ಟಗಳನ್ನು ಎದುರಿಸಿ ಒಂದುಗೂಡಲೇ ಬೇಕು. ಪ್ರತಿ ವಾರ್ಡುಗಳಲ್ಲಿಯೂ ಮನೆ ಮನೆಗಳಿಗೆ ಕಾಲ್ನಡೆಗೆಯಿಂದ ಸಾಮೂಹಿಕವಾಗಿ ಹೋಗಿ ಜನರನ್ನು ಜಾಗ್ರತಗೊಳಿಸಬೇಕು.

೧೦. ಕೇವಲ ಶೇಕಡಾ ೨೫ರಷ್ಟು ಇರುವ ಜನರ ಮಾಯಾ ಮೋಸದ ಬಲೆಯಲ್ಲಿ ಶೇಕಡಾ ೭೫ರಷ್ಟಿರುವ ಕೃಷಿಕರಾದ ನಾವು ವಿಚಾರಹೀನರಾಗಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದೇವೆ. ಆದರೂ ಆ ಮೋಸದ ಬಲೆಯನ್ನು ಹರಿದು ಹೊರಗೆ ಬಾರದೆ ಅಲ್ಲೆ ನಾವು ನಾವೇ ಕಚ್ಚಾಡಿ, ಹೊಡೆದಾಡಿ ಸಾಯುತ್ತಿದ್ದೇವೆ. ನಾವು ರಾಜಕಾರಣಿಗಳ ಆಶೆ ಅಮಿಷಗಳಿಗೆ ಮಾರುಹೋಗಿ ನಮ್ಮ ಸರ್ವಸ್ವವನ್ನು ಕಳಕೊಳ್ಳುತ್ತಿದ್ದೇವೆ. ನಾವು ಪ್ರಯತ್ನಪಟ್ಟರೆ ಬಲೆಯನ್ನು ಹರಿದೊಗೆದು ಹೊರಗೆ ಬರಬಹುದು. ಅದಕ್ಕಾಗಿ ಒಗ್ಗಟ್ಟಾಗಿ ಸರ್ವಶಕ್ತಿಯನ್ನುಪಯೋಗಿಸಿ ಬಂಧನದಿಂದ ಮುಕ್ತಗಾಗಲು ಶ್ರಮಿಸೋಣವೇ?

೧೧. ಒಕ್ಕಲು, ಧನಿ, ಬಡವ, ಬಲ್ಲಿದರೆಂಬ ಭೇದಭಾವನ್ನೆಲ್ಲಾ ಈಗ ಸರಿಮಾಡಿಯಾಗಿದೆ. ಬುದ್ದಿವಂತರನ್ನು ಬುದ್ದಿಹೀನರನ್ನು ಸರಿಮಾಡಿ ಆಗಿದೆ. ಸಾಮಾಜಿಕ, ನೈತಿಕ, ದೈವಿಕ, ಆರ್ಥಿಕವೇ ಮೊದಲಾದವೆಲ್ಲವನ್ನೂ ಗುದ್ದಿ ಪುಡಿಮಾಡಿ ಕಾಯಿಸಿ ಎರಕ ಹೊಯ್ದು ರಾಜಕೀಯವಾಗಿ ಮಾರ್ಪಡಿಸಲಾಗಿದೆ. ಅದಕ್ಕಾಗಿ ನಾವು ಇನ್ನು ಹೊಡೆದಾಡಿ ಪ್ರಯೋಜನವಿಲ್ಲವೆಂದೆ ನನ್ನ ಅಭಿಪ್ರಾಯ. ಸಾಧ್ಯವಿದ್ದರೆ ನಮ್ಮೊಳಗಿನ ಎಲ್ಲಾ ವಿವಾದಗಳನ್ನು ನಾವೇ ಸಹೃದಯತೆಯಿಂದ ಮುಗಿಸಿಕೊಳ್ಳಬಹುದು. ಇಲ್ಲವಾದರೆ ಕೋರ್ಟಿನಲ್ಲಿ ಇತ್ಯರ್ಥವಾಗುತ್ತಿದೆಯಷ್ಟೆ? ಅದಕ್ಕಾಗಿ ನಾವು ತಲೆಕೆಡಿಸಿ ಪ್ರಯೋಜನವೇನು? ಕೃಷಿಯಲ್ಲಿ ದಿನೇ ದಿನೇ ಆಗುವ ಮಾರ್ಪಾಡುಗಳು ಕಾನೂನಿಂದಾಗುವ ಮಾರ್ಪಾಟುಗಳು ಅದನ್ನೆಲ್ಲಾ ತಿಳಿದೇ ಯುವಕರೇ ಮೊದಲಾದ ಹೆಚ್ಚಿನ ಜನರು ಹಳ್ಳಿಯ ಕೃಷಿ ಜೀವನವನ್ನು ಬಿಟ್ಟು ಬೇರೆ ಬೇರೆ ಯದ್ಯೋಗ ಹುಡುಕಿಕೊಂಡು ಪೇಟೆ ಪಟ್ಟಣಗಳತ್ತ ಹೋಗುತ್ತಾರೆ. ಕೆಲವೇ ಜನ ಪ್ರಾಯಸ್ಥರು ಮಾತ್ರ ಹಳ್ಳಿಯಲ್ಲಿ ಈಗ ಇದ್ದಾರಷ್ಟೆ? ಅಲ್ಲದೇ ನಮ್ಮ ಹಳ್ಳಿಯನ್ನು ಇಲ್ಲೆ ಇರುವ ನಾವು ರೂಪಿಸುವುದಲ್ಲ. ಢಿಲ್ಲಿಯಲ್ಲೋ, ತಿರುವನಂತಪುರದಲ್ಲೋ ಕೂತಿರುವವರು ರೂಪಿಸುವುದಷ್ಟೆ? ಇದು ಸರಿಯೇ? ಪೇಟೆಯ ಸುಖ ಜೀವನಕ್ಕೂ ಮಾರುಹೋತ್ತಾರೆ. ಏನೂ ಕೆಲಸ ಮಾಡದೆ ತುಂಬಾ ಸಂಬಳ ಪಡೆದು ಸುಖ ಜೀವನ ಪಡೆಯಲು ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಕಾರಣ – ಹಳ್ಳಿಯಲ್ಲಿ ಕೃಷಿಯಿಂದ ಜೀವನ ನಡೆಸುವುದು ಮಹಾ ಕಠಿಣವಾದ ಕೆಲಸ. ಇದರಿಂದ ದೇಶಕ್ಕೆ ದೊಡ್ಡ ಅಪಾಯವಿದೆ.

೧೨. ಆದರೆ ಕೃಷಿಕರಿಗಾಗಿ, ಕೃಷಿಕರ ಅಭಿವೃದ್ಧಿಗಾಗಿ, ಅವರ ಸಂಘಟನೆಗಾಗಿ ತನ್ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮಾತ್ರ ನಾನು ಹೇಳುವುದಷ್ಟೆ. ಅನ್ನವಿಲ್ಲದೆ ಯಾರೂ ಬದುಕಲಾರರಷ್ಟೆ? ಅಲ್ಲದೆ ಯಾರನ್ನು ಹೊಗಳಲು ತೆಗಳಲು ನಾನು ಈ ಮಾತುತಳನ್ನು ಹೇಳುತ್ತಿಲ್ಲ. ಅಂತಹ ಭಾವನೆಯನ್ನು ಯಾರೂ ಕಟ್ಟಿ ಕೊಳ್ಳುವುದು ಬೇಡವೆಂದು ಅಂಥವರೊಡನೆ ನಾನು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ. ಇದು ಕೇವಲ ಕೃಷಿಕರ ಸಂಘಟನೆಗಾಗಿ, ಸತ್ಯ ಸಂಗತಿಯನ್ನು ತಿಳಿಯಪಡಿಸಲಿಕ್ಕೋಸ್ಕರ ಇದೆಲ್ಲವನ್ನು ಹೇಳಿದ್ದೇನಷ್ಟೆ?

೧೩. ಕೃಷಿಕ ತರುಣರೇ! ಡಾಕ್ತರುಗಳೇ! ನ್ಯಾಯವಾದಿಗಳೇ! ಪದವೀಧರರೇ! ಅಥವಾ ಇನ್ನಾವುದೇ ಡಿಗ್ರಿ ಹೋಳ್ಡರುಗಳೇ! ಅಥವಾ ಇನ್ನಾವುದೇ ವಿದ್ಯಾಭಿಮಾನಿಗಳೇ! ಕೃಷಿಕ ಬಂಧುಗಳನ್ನು ಮರೆಯಬೇಡಿರಿ. ಅವರಿಂದ ಉಂಡು ತಿಂದು ಬಾಳಿ ಬದುಕಿದವರು. ನೀವು ಹೆತ್ತ ತಾಯಿಯಂತೆ ತಂದೆಯಂತೆ ಇಡೀ ದೇಶವನ್ನು ಸಾಕಿ ಸಲಹುವವರು ಕೃಷಿಕರು. ನೀವೊಮ್ಮೆ ಅವರತ್ತ ನೋಡಿರಿ, ಕೃಷಿಕನ ದೋಣಿ ನಡು ನೀರಿಲ್ಲಿದೆ, ದೋಣಿ ಬಿರುಕು ಬಿಟ್ಟಿದೆ. ಜನರು ತುಂಬಾ ಇದ್ದಾರೆ. ಮುಳುಗುವುದರಲ್ಲಿದೆ. ರಕ್ಷಿಸಲಾರಿರಾ! ದೇಶವನ್ನು ಈ ಮಹಾ ಸಂಕಟದಿಂದ ಪಾರು ಮಾಡಲಾರಿರಾ! ಹಳ್ಳಿಯ ಕೃಷಿಕನ ಗೋಳನ್ನು ಕೇಳಲಾರಿರಾ! ಹಳ್ಳಿಯ ಕೃಷಿಕನ ನಿಕೃಷ್ಠಾವಸ್ಥೆ ಮತ್ತು ಕೃಷಿಕನ ಮೇಲಿನ ತಾತ್ಸಾರವನ್ನು ನೀಗಲಾರಿರಾ!

೧೪. ನಾವು ಒಂದಾಗುವುದು ಯಾರಿಗೂ ತೊಂದರೆ ಕೊಡಲಿಕ್ಕಲ್ಲ. ನಮ್ಮ ಮೇಲಾಗುವ ಅನ್ಯಾಯವನ್ನು ಎದುರಿಸಲಿಕ್ಕೆ. ನಮ್ಮ ನ್ಯಾಯವಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ದೇಶದ ಉನ್ನತಿಗಾಗಿ ಶ್ರಮಿಸಲಿಕ್ಕಾಗಿ ಅಷ್ಟೆ! ನಮಗೆ ಯಾರ ಮೇಲೂ ದ್ವೇಷವಿಲ್ಲ… ನಮಗೆ ಎಲ್ಲರೂ ಆತ್ಮೀಯ ಬಂಧುಗಳೇ, ಆದರೆ ನಮ್ಮ ಸರ್ವನಾಶದಿಂದ ದೇಶದ ಸರ್ವನಾಶವಾದೀತು. ಅದನ್ನು ನಾವು ಒಂದಾಗಿ ಸರಕಾರಕ್ಕೆ ಹೇಳಬೇಕು. ಅದಾಗದಿದ್ದರೆ ಮತಪ್ರದರ್ಶನದ ಮೂಲಕ, ಅಲ್ಲದಿದ್ದರೆ ಕರನಿರಾಕರಣೆ, ಅದಕ್ಕಾಗಿ ನಿರಂತರ ಹೋರಾಟ. ಕಾರಣ ಇದೆಲ್ಲಾ ನಾವು ಮಾಡಿದ್ದು, ಸರಕಾರದವರು ಮಾಡಿದ್ದು ಇಲ್ಲ. ಮಾಡಿಸಿದ್ದೂ ಇಲ್ಲ. ನಮಗೆ ಒಂದು ಪೈಸೆಯನ್ನು ಕೊಟ್ಟದ್ದೂ ಇಲ್ಲ. ಅದೂ ಅಲ್ಲದಿದ್ದರೆ ನಮಗೆ ಪ್ರತಿಫಲ ಕೊಟ್ಟು ಆಸ್ತಿಯನ್ನು ಪಡಕೊಳ್ಳಲಿ. ನಮಗೆ ಉದ್ಯೋಗವನ್ನು ಕೊಟ್ಟು ಇತರ ಸರಕಾರಿ ನೌಕರರಂತೆ ನೋಡಿಕೊಳ್ಳಲಿ. ಇದರಲ್ಲಿ ತಪ್ಪೇನಿದೆ. ಆದ್ದರಿಂದ ಆತ್ಮೀಯ ಬಂಧುಗಳೇ ದೇಶದ ಹಿತೈಶಿಗಳೇ, ಈ ಒಂದು ಮಹಾ ಸಂಘಟನೆಗಾಗಿ ಒಂದಾಗಿ ದುಡಿಯಬಲ್ಲಿರಾ! ಇದು ಕೃಷಿಕರ ಅಂತರಾಳದ ಕೂಗು. ಇದು ಪ್ರತಿಯೊಬ್ಬ ಕೃಷಿಕನ ಗೋಳು. ಶೇಕಡಾ ೭೫ರಷ್ಟು ಇರುವ ಜನರ ನರಳಾಟ! ಈಚೆಗೆ ದೃಷ್ಟಿ ಹರಿಸುವಿರಾ?

೧೫. ಪ್ರಥಮತಃ ವಾರ್ಡು, ಆ ಮೇಲೆ ಪಂಚಾಯತು, ಗ್ರಾಮ, ತಾಲೂಕು, ಜಿಲ್ಲೆ ಸ್ಟೇಟುಗಳಿಂದ ತೊಡಗಿ ಸಮಗ್ರ ಭಾರತದಲ್ಲೇ ಇಂಥಾ ಸಂಘಟನೆ ನಡೆಯಬೇಕು. ನಮಗೆ ಯಾವೊಂದು ರಾಜಕೀಯವೂ ಬೇಡ. ಒಂದೊಮ್ಮೆಗೆ ಬೇಕಿದ್ದರೆ ಆ ಮೇಲೆ ಕೃಷಿಕರ ಪಾರ್ಟಿ ಇಲೆಕ್ಷನ್ನಿಗೆ ನಿತ್ತು ದೇಶದ ಅಧಿಕಾರವನ್ನು ಹಿಡಿದರೂ ತಪ್ಪಾಗಲಾರದಷ್ಟೆ?

೧೬. ಇದಕ್ಕಾಗಿ ನಾವು ಅನವರತ ದುಡಿಯಬೇಕು, ಹಿಂಜರಿಯಬಾರದು. “ನಡೆ ಮುಂದೆ ನಡೆ ಮುಂದೆ ಹಿಗ್ಗಿ ನಡೆ ಮುಂದೆ”. ಎಷ್ಟು ಅಡೆತಡೆ ಬಂದರೂ ಲೆಕ್ಕಿಸದೆ ಮುಂದುವರಿಯಬೇಕು. “ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಕೈಗೂಡುವುದು” “ಉತ್ತಿಷ್ಠತ, ಜಾಗ್ರತ, ಪ್ರಾಪ್ಯವರಾನ್ನಿ ಬೋಧತ” ಎಂಬಂತೆ ಮುಂದುವರಿಯೋಣ. ಆಗ ಭಾರತ ದೇಶ ಸುಖಸಂಮೃದ್ಧಿಯಿಂದ ತುಂಬಿ ತುಳುಕೀತು.

“ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬ ಮಾತು ಸತ್ಯವಾದೀತು. ದೇಶವೆಲ್ಲ ಸಂತೋಷದಿಂದ ನಕ್ಕುನಲಿಯುವಂತಾದೀತು. ಶಾಂತಿ ಮಂತ್ರದ ಸಫಲತೆಯಾಗಲಿ. ಗಾಂಧಿಯವರ ಕನಸುಗಳಾದ ಗ್ರಾಮ ರಾಜ್ಯ, ಸ್ವರಾಜ್ಯ, ರಾಮರಾಜ್ಯ, ಸುರಾಜ್ಯವಾಗಲಿ. ಕನಸು ನನಸಾಗಲಿ. ದೇಶಕ್ಕೆಲ್ಲ ಸುಭಿಕ್ಷೆಯಾಗಲಿ. ಗಾಂಧಿಪಿತನ ದಿವ್ಯಾತ್ಮ ಹರ್ಷಿತವಾಗಲಿ. ಶುಭವಾಗಲಿ.

ಚೌಪದಿ
(ಅರ್ಧ ಸಮ)

ತುರು ಕರುವ ಕರೆದುಂಡು ಕೊಬ್ಬಿರುವ ಈ ಲೋಕ
ತುರು ಕರುವ ಮರೆತಂತೆ ಕಾಣುತಿದೆ ಜೋಕೆ!
ಕರ್ಷಕರ ನೆತ್ತರನು ಕುಡಿಕುಡಿದು ಕೊಬ್ಬಿದರು
ಕರ್ಷಕರ ಮರೆತಂತೆ ಕಾಣುತಿದೆ ಜೋಕೆ! ||||

ಎದ್ದೇಳು, ಎದ್ದೇಳು ಕರ್ಷಕನೆ ಬಾ ಬಂಧು,
ಕ್ರಾಂತಿ ಮಂತ್ರದ ಕಹಳೆ ಮೊಳಗುತಿದೆ ಕೇಳು,
ನಿದ್ದೆ ಬಿಟ್ಟಿದ್ದೇಳು ಕುಂಭಕರ್ಣನೆ ನೀನು?
ಶಾಂತಿ ಸಮರವ ನಡೆಸಿ ಜಯವ ನೀ ಗಳಿಸು ||||

ಬಲ್ಲಿದರು ಬೆನ್ನೆಲುಬ ಮುರಿದು ಹುಡಿಗುಟ್ಟಿದರು
ಎಲ್ಲರಿಗು ಬಲಿಪಶುವು ನೀನಾದೆ ಗೆಳೆಯ,
ಸೋಲ್ಲಿಲ್ಲದೆಯೆ ಯೇಕೆ ಕಲ್ಲಾಗಿ ಕುಳಿತಿರುವೆ?
ನಿಲ್ಲು ನೀ ನರ್ತನಕೆ ನಿನ್ನವರ ತಣಿಸು ||||

ನಿನ್ನ ಸಂಘವ ಬಲಿಸು ಪ್ರಲಯ ತಾಂಡವ ನಡೆಸು
ರಕ್ತಕ್ರಾಂತಿಯ ನಿಲಿಸು ಜಗವ ನೀ ನುಣಿಸು
ಪರಮಾತ್ಮ ಮಳೆ ಬೆಳೆಗಳನ್ನಿತ್ತು ರಕ್ಷಿಸುಗೆ
ಭಾರತದಿ ಹಸಿರು ಕ್ರಾಂತಿಯ ದೀಪ ಬೆಳಗೆ ||||

“ಭದ್ರಂ ಶುಭಂ ಮಂಗಲಂ”